ಗುಡ್ಡದ ಭೂತ...
#ಗುಡ್ಡದ_ಭೂತ
ನಾನು ಉದ್ಯೋಗ ಅರಸಿ ಬಳ್ಳಾರಿಗೆ ಬಂದು ಎರಡು ದಶಕಗಳು ಸಮೀಪಿಸಿವೆ. ಬಳ್ಳಾರಿ ಮೋತಿ ಸರ್ಕಲ್ ನ ರೈಲ್ವೆ ಟ್ರ್ಯಾಕ್ ಸಮೀಪ ನೈರುತ್ಯ ದಿಕ್ಕಿಗೆ ನೋಡಿದರೆ ದೂರದಲ್ಲೊಂದು ಬೆಟ್ಟದ ಸಾಲು ಕಾಣಿಸುವುದು. ಗಣಿಗಾರಿಕೆ ಉತ್ತುಂಗದಲ್ಲಿದ್ದಾಗ ಅಲ್ಲಿ ಕೇಳಿಸುತ್ತಿದ್ದು ಡೈನಮೈಟ್ ಸದ್ದು, ಕಾಣಿಸುತ್ತಿದ್ದುದು ಕೆಂಧೂಳು, ರಕ್ಕಸ ಲಾರಿಗಳ ಸಾಲು ಒಮ್ಮೆಯಾದ್ರೂ ಅಲ್ಲಿಗೆ ಹೋಗಬೇಕೆನ್ನುವ ಬಯಕೆ ನನ್ನನ್ನು ಸದಾ ಕಾಡುತ್ತಿತ್ತು. ಹೇಳಿಕೇಳಿ ಸುಮಾರು 15 -16 ವರ್ಷಗಳ ಕಾಲ ಅದೇ ಗುಡ್ಡದ ಸಾಲಿನಲ್ಲಿ ನನ್ನ ಕರ್ಮಸ್ಥಳವು ಆಗಿತ್ತು. ಆದರೆ ಅದು ಯಾಕೋ ಅಲ್ಲಿಯವರೆಗೂ ಹೋಗಿ ತಲುಪಲು ಸಾಧ್ಯ ಆಗಲೇ ಇಲ್ಲ. ನನ್ನ ಮಡದಿ ಕುಮುದಾಳಿಗೆ ಆ ಗುಡ್ಡವನ್ನು ತೋರಿಸಿ ಅಲ್ಲಿ ಬೆಳ್ಳಗೆ ಕಾಣಿಸ್ತಾ ಇದೆಯಲ್ಲ ಅಲ್ಲಿಗೆ ಒಂದು ದಿನ ಹೋಗಬೇಕು ಎಂದು ಸದಾ ಹೇಳುತ್ತಿದ್ದೆ. ಒಂದೆರಡು ಬಾರಿ ಕೇಳಿದ ಅವಳು ಮೂರು ನಾಲ್ಕನೇ ಬಾರಿ ಹೇಳಿದಾಗ 'ನಿಮಗೊಂದು ಗುಡ್ಡದ ಭೂತ ಹಿಡಿದಿದೆ' ಎಂದು ಚೇಡಿಸುತ್ತಿದ್ದಳು. ಹೋಗ್ತೀನಿ ಒಂದಲ್ಲ ಒಂದು ದಿನ ನಾನಲ್ಲಿಗೆ ಹೋಗಿಯೇ ಹೋಗುತ್ತೇನೆ ಎಂದು ಹೇಳುತ್ತಿದ್ದೆ. ಒಂದು ವರ್ಷದಿಂದ ಈಚೆಗೆ ಯಾವುದಾದರೂ ಸರ್ಕಾರಿ ರಜೆ ದಿನಗಳು ಮತ್ತು ಭಾನುವಾರ ಎಲ್ಲಿಯಾದರೂ ಹೀಗೆ ಗುಡ್ಡ ಬೆಟ್ಟ ಇಷ್ಟದ ಸ್ಥಳಗಳನ್ನ ಸುತ್ತುವ ಅಭ್ಯಾಸ ಮಾಡಿಕೊಂಡಿದ್ದೇನೆ. ಜೊತೆಗೆ ಯಾರನ್ನಾದರೂ ಕರೆಯೋಣ ಎಂದರೆ ಬೆಳಿಗ್ಗೆ 4- 5 ಗಂಟೆಗೆ ಎದ್ದು ನನ್ನ ಜೊತೆ ಸದ್ಯಕ್ಕಂತೂ ಯಾರು ಬರುವವರು ಇಲ್ಲ. ಯಾರೂ ಬರಲಿಲ್ಲ ಎಂದರೆ ಏನಂತೆ ? ಇಂದು ಭಾನುವಾರ ಆಗಿದ್ದರಿಂದ 5:30 ಗೆ ಗಾಡಿ ಹತ್ತಿ 5:55 ಕ್ಕೆ ತುಮಟಿ ಬೆಟ್ಟದ ಮೇಲೆ ಇದ್ದೆ. ದಶಕದ ಹಿಂದೆ ಮೈಸ್ ಲಾರಿಗಳು ಓಡಾಡಿದ ಹಾದಿ ಆದರೆ 10 ವರ್ಷಗಳಿಂದೀಚೆಗೆ ವಾಹನಗಳ ಸಂಚಾರವಿಲ್ಲ ಮಳೆಗೆ ರಸ್ತೆಗಳು ಕೊರೆದು ಕೊರಕಲಾಗಿ ಹಾಳಾಗಿವೆ. ಅದರಲ್ಲೇ ಐದಾರು ಕಿಲೋಮೀಟರ್ ಮುಂದೆ ಹೋಗಿ ಪಾಳುಬಿದ್ದ ಮೈನ್ಸ್ನ ದ್ವಾರಬಾಗಿಲು ತಲುಪಿದೆ. ಅಲ್ಲಿಗೆ ನನ್ನ ದ್ವಿಚಕ್ರ ವಾಹನ ತಲುಪಿದ್ದು ತಲುಪುವುದು ಲಾಸ್ಟ್. ಇನ್ನೇನಿದ್ದರೂ ಕಾಲ್ಚಕ್ರದ್ದೆ ಕರಾಮತ್ತು.ಆ ಮೈನ್ಸ್ನ ಒಳಗೆ ಹೋಗಬಾರದೆಂದು ಒಂದು ಲಾರಿ ಲೋಡ್ ನಷ್ಟು ಗಾತ್ರದ ಕಲ್ಲುಗಳನ್ನ ಅಡ್ಡಲಾಗಿ ನಿಲ್ಲಿಸಿದ್ದಾರೆ. ಆ ಬೃಹತ್ ಕಲ್ಲುಗಳನ್ನೇ ಹತ್ತಿ ಮುಂದೆ ಸಾಗಿದೆ.ನಾನಲ್ಲಿಗೆ ಹೋಗಿ ನೋಡಿದಾಗ ನನಗೆ ಬೇರೆ ಯಾವುದೋ ಗ್ರಹದಲ್ಲಿದ್ದೇನೆ ಎಂಬ ಭಾವ. ಆದರೆ ಇಲ್ಲಿ ಸುತ್ತಲಿನ ಬೆಟ್ಟಗಳು ಹಸಿರಿನಿಂದ ಕಂಗೊಳಿಸುತ್ತ ಗಿಡಮರಗಳು ಕಾಣಿಸುತ್ತಿದ್ದಾವೆ ಅಷ್ಟೇ ವ್ಯತ್ಯಾಸ. ನಿರ್ಜನ ಪ್ರದೇಶ ಏನಾದರೂ ಅಪಾಯಕಾರಿ ಸಂದರ್ಭ ಒದಗಿದರೆ ಅಲ್ಲಿಗೆ ಕನಿಷ್ಠ 3-4 ದಿನ ಬಂದು ತಲುಪುವವರಂತೂ ಇಲ್ಲವೇ ಇಲ್ಲ. ಬೆಟ್ಟದಲ್ಲಿ ಕರಡಿಗಳು, ಚಿರತೆಗಳು, ನವಿಲುಗಳು,ಹಾಗೆ ನರಿಗಳು ಮೊಲಗಳು ಇದ್ದಾವೆ. ನನಗೆ ಅಚ್ಚರಿಯನಿಸಿದ್ದು ಸಾವಿರಾರು ಬೆಳವಗಳು ಒಟ್ಟಿಗೆ ಗುಟರಿಸುವ/ ಕೂಗುವ ಶಬ್ಧ. ಬೆಳವ ಪಾರಿವಾಳಗಳು ಕೂಗುವ ಶಬ್ದ ಕೇಳಿದ್ದೇನೆ ಆದರೆ ಸಾವಿರಾರು ಬೆಳವಗಳು ಬೆಟ್ಟಗಳ ಸಾಲಿನಲ್ಲಿ ಮಾರ್ದನಿಸುವ ಶಬ್ದ ನನಗೆ ಅಚ್ಚರಿ ಎನಿಸಿತು. ಇನ್ನು ಕಬ್ಬಿಣದ ಗಣಿಯಂತೂ ಅದರ ಅಗಾಧತೆಯ ಮುಂದೆ ಮಾನವ ಇತರ ಪ್ರಾಣಿಗಳು ಹುಲ್ಲು ಕಡ್ಡಿಗೆ ಸಮಾನ. ಕೆಲವೊಂದು ಭಾಗದಲ್ಲಿ ಕಬ್ಬಿಣದ ಅದಿರು , ಭೂಮಿಯಿಂದ ಉಬ್ಬರಿಸಿ ರವೆ ಯಂತೆ ಕಾಣಿಸುತ್ತಿದೆ. ಇನ್ನೂ ಕೆಲವು ಕಡೆ ಬೆಲ್ಲದ ಅಚ್ಚುಗಳಂತೆ ಗಟ್ಟಿಯಾಗಿವೆ. ಹಣದ ಹಿಂದೆ ಬಿದ್ದ ಮಾನವ ಭೂಮಿಯ ಒಡಲನ್ನು ಅದೆಷ್ಟು ಬಗೆಯುತ್ತಾನೋ ಎಂದೆನಿಸುತ್ತಿದೆ. ಆದರೂ ಸದ್ಯ ಗಣಿಗಾರಿಕೆ ನಿಂತಿದೆ. ನಿಶ್ಯಬ್ಧ ವಾತಾವರಣ, ಸ್ವಚ್ಛಂದ ಬೀಸುವ ಶುದ್ಧ ಆಮ್ಲಜನಕ, ಗುಡ್ಡ ಎಂಬ ಭೂತದ ಭಯ ಬಿಟ್ಟರೆ ಸ್ವರ್ಗವೇ ನಮ್ಮ ಕಣ್ಮುಂದೆ. ಬೆಟ್ಟದ ಚಂದದ ಸೊಬಗನ್ನು ಕೈಯಲ್ಲಿದ್ದ ಕ್ಯಾಮರದಲ್ಲಿ ನಾಲ್ಕಾರು ಕ್ಲಿಕ್ಕಿಸಿ ಅವುಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಮುಂದಿನ ಬರಹದಲ್ಲಿ ಸಿಗೋಣ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ