ಕಾನನ ಸ್ನಾನ...
ಕಾನನ ಸ್ನಾನ..
ಜಪಾನ್ ದೇಶದ ಹೆಸರು ಕೇಳದವರು ಯಾರಿದ್ದಾರೆ??? ಅಂದಾಜು 12 ಕೋಟಿ ಜನಸಂಖ್ಯೆ ಇರುವ ಈ ದೇಶ ಎರಡನೇ ಪ್ರಪಂಚ ಯುದ್ಧದ ನಂತರ ಫಿನಿಕ್ಸ್ ನಂತೆ ಎದ್ದು ಜಾಗತಿಕವಾಗಿ ವಿಶಿಷ್ಟವಾದ ಅಭಿವೃದ್ಧಿ ಆಲೋಚನೆಗಳಿಂದ ತನ್ನ ಅಸ್ತಿತ್ವವನ್ನು ಮಾದರಿಯಾಗಿ ಉಳಿಸಿಕೊಂಡಿದೆ. ಭಾರತೀಯರ ಜೀವಿತಾವಧಿ ಸರಾಸರಿ 65 ರಿಂದ 70 ವರ್ಷವಾದರೆ ಜಪಾನಿಯರ ಜೀವಿತಾವಧಿ ಸರಾಸರಿ 79 ರಿಂದ 90 ವರ್ಷ.! ಅಣು ಬಾಂಬನಿಂದ ನಲುಗಿದ ನಾಡಿನಲ್ಲಿ ಹುಟ್ಟುವ ಜನ ಅದೆಷ್ಟು ವರ್ಷ ಬದುಕಿಯಾರು?? ಜಗತ್ತಿನದ್ಯಂತ ಮಾತಾಡಿದ ಇಂತಹ ಉಡಾಫೆ ಜನಗಳಿಗೆ ಮಾದರಿಯಾಗಿಯೇ ಇದೆ. ಅವರ ಜೀವನಶೈಲಿ, ವೈಜ್ಞಾನಿಕ ಮತ್ತು ಪ್ರಗತಿಪರ ಆಲೋಚನೆ, ಪ್ರಕೃತಿಯೊಂದಿಗಿನ ಸಾಮರಸ್ಯತೆ ಜಪಾನೀಯರನ್ನು ಮತ್ತು ಅವರ ಬದುಕಿನ ಆಯುಷ್ಯವನ್ನು ಭಾರತೀಯರಿಗಿಂತಲೂ, ಇನ್ನಿತರ ದೇಶಗಳಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಸುಧಾರಿಸಿದೆ. ಅಂತದ್ದೊಂದು ಆಚರಣೆಗಳಲ್ಲಿ ಜಪಾನಿಯರು ನಂಬಿರುವಂತಹ ಒಂದು ಪ್ರಕೃತಿ ಚಿಕಿತ್ಸೆ ಎಂದರೆ ಅದು ಅರಣ್ಯ ಸ್ನಾನ. ಅರಣ್ಯ ಸ್ನಾನ ಎಂದರೇ ಪಂಚೇಂದ್ರಿಯಗಳ ಮೂಲಕ ಅರಣ್ಯದ ಆಗುಹೋಗುಗಳನ್ನು ನೈಜವಾಗಿ ಅನುಭವಿಸುವುದು. ಅಂದರೆ ಹಸಿರು ಸಮೃದ್ಧಿಯ ಅಸ್ವಾದನೆ, ಶುದ್ಧ ಆಮ್ಲಜನಕ ಸೇವನೆ, ಪಕ್ಷಿಗಳ ಕಲರವ ಆಲಿಸುವಿಕೆ ಇತ್ಯಾದಿ.
ನನಗೇನು 90 -100 ವರ್ಷ ಬದುಕುವ ಆಸೆ ಇಲ್ಲವಾದರೂ ಹೆಚ್ಚು ನಡೆಯದೆ ಜಡವಾಗಿರುವ ದೇಹಕ್ಕೆ ಒಂದಷ್ಟು ಕೆಲಸ ಕೊಡಲು ಆಗಾಗ ಅರಣ್ಯ ಪ್ರದೇಶಕ್ಕೆ ಹೋಗಿ ನಾಲ್ಕೈದು ಕಿಲೋಮೀಟರ್ ಸುತ್ತಾಡಿಕೊಂಡು ಬರುವೆ. ವೈಯಕ್ತಿಕವಾಗಿ ನನ್ನ ಜನನ ಬಾಲ್ಯ,ಓಡಾಟ-ಸುತ್ತಾಟ ಎಲ್ಲದು ಕೂಡ ಅರಣ್ಯದಲ್ಲಿ ನನ್ನ ಒಡನಾಟ ಹೆಚ್ಚಾಗಿರುವುದರಿಂದ ಅರಣ್ಯ ಎಂದರೇ ನನಗೆ ಅಚ್ಚುಮೆಚ್ಚು. ಅಂದಹಾಗೆ ಅದರ ಭಾಗವಾಗಿ ಇಂದು ನಾನು ಭೇಟಿ ಕೊಟ್ಟದ್ದು ಸಂಡೂರು ತಾಲೂಕಿನ ಉಬ್ಬಲಗಂಡಿಯಿಂದ ಪ್ರಾರಂಭವಾಗುವ ದೋಣಿಮಲೈ ಅರಣ್ಯ ಪ್ರದೇಶ ಅಥವಾ NMDC ಗಣಿ ಪ್ರದೇಶದ ಸುತ್ತಲಿನ ಭಾಗ: 'ಭೈರವತೀರ್ಥ ಟ್ರೆಕ್ಕಿಂಗ್'. ಸುಮಾರು ಎಂಟು ಕಿಲೋಮೀಟರ್ ಅರಣ್ಯ ನಡುಗೆ ಇರುವ ದಾರಿ. ಒಂದು ಕಡೆ ರೆಡ್ ಆಕ್ಸೈಡ್ ಮಣ್ಣಿನ ರಾಶಿ ಮತ್ತೊಂದು ಕಡೆ ಹಸಿರವನ. ಕಬ್ಬಿಣ ಖನಿಜಾಂಶ ಇಲ್ಲದ ವೆಸ್ಟ್ ಮಣ್ಣನ್ನು ಡಂಪ್ ಮಾಡಿ ಒಂದು ಗುಡ್ಡವೇ ನಿರ್ಮಿಸಿದ್ದಾರೆ. ಇತ್ತಬದಿಯಲ್ಲಿ ಮರಗಿಡಗಳ ಮದ್ಯೆ ಹಸಿರ ಹಾಸಿಗೆಯಂತಿರುವ ಬೆಟ್ಟದ ದರ್ಬೆ ಹುಲ್ಲು. ಅಲ್ಲಲ್ಲಿ ಕೂಗುವ ಅನೇಕ ಪಕ್ಷಿಗಳ ಕಲರವ ಮನಸ್ಸಿಗೆ ಇಂಪು, ತಂಪು,ಕಣ್ಣಿಗೆ ಆನಂದ ಉಂಟುಮಾಡುತ್ತವೆ. ರೆಡ್ ಆಕ್ಸೈಡ್ನ ಕೆಂಪು ಮಣ್ಣನ್ನು ನೋಡಿದಾಗ ಮನದಲ್ಲಿ ಕ್ರಾಂತಿ, ಹಸಿರ ವನ ರಾಶಿಯನ್ನು ನೋಡಿದಾಗ ಸಮೃದ್ಧಿ ಮನ ತುಂಬಿ ಬರುತ್ತದೆ. ಕುದುರೆಮುಖ ಕಬ್ಬಿಣ ಗಣಿ ಸ್ಥಗಿತಗೊಂಡ ನಂತರ ಅಲ್ಲಿನ ಎಲ್ಲಾ ಯಂತ್ರಗಳು, ಉದ್ಯೋಗಿಗಳು ಸ್ಥಳಾಂತರಗೊಂಡಿದ್ದು NMDC ಅಧೀನದ DIOC (ದೋಣಿಮಲೈ ಐರನ್ ಓರ್ ಕಂಪನಿ ) ಸದ್ಯ ಇಲ್ಲಿ ಗಣಿಗಾರಿಕೆ ತುಸು ಬಿರಿಸಿನಿಂದಲೇ ಸಾಗುತ್ತಿದೆ. 100-130 ಟನ್ ಕಬ್ಬಿಣದ ಅದಿರು ಸಾಗಿಸುವ ಡಂಪರ್ ಯಂತ್ರಗಳು ಕೆಲಸ ಮಾಡುತ್ತಿವೆ. ಒಟ್ಟಾರೆ ಗಣಿಗಾರಿಕೆಯು ಬೇಕಾದಂತಹ ಎಲ್ಲಾ ಯಂತ್ರ ಸಾಧನಗಳು ಅಲ್ಲಿ ಸದ್ದು ಮಾಡುತ್ತಿವೆ.
ಈ ಭಾಗದ ಸುತ್ತಲಿನ 36 ಹಳ್ಳಿಗಳು ಶ್ರಾವಣದಲ್ಲಿ ತಮ್ಮ ತಮ್ಮ ಊರಿನ ದೇವರುಗಳನ್ನ ಕರೆತಂದು 'ಡೋಣಿ' ಎಂಬ ಸ್ಥಳದಲ್ಲಿ ಗಂಗೆಯ ಪೂಜೆಯನ್ನು ಮಾಡಿಸುತ್ತಾರೆ. ಈ ಡೋಣಿ ಯೇ ಈ ಬೆಟ್ಟದ ಅರಣ್ಯ ಪ್ರದೇಶಕ್ಕೆ 'ದೋಣಿಮಲೈ' ಎಂದು ಹೆಸರು ಬಂದಿರುವುದು.
ದೋಣಿಯನ್ನ ದಾಟಿ ಮುಂದೆ ಹೋದರೆ ನಮಗೆ ಎದುರಾಗುವುದು ಎನ್ ಎಂ ಡಿ ಸಿ ಗಣಿಗಾರಿಕೆ ಪ್ರದೇಶ. ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ,ನಂದಿ ಬೆಟ್ಟದಂತಹ ವಾತಾವರಣ. ಯಾವಾಗಲೂ ಇಬ್ಬನಿ ಅಥವಾ FOGG ನಿಂದ ಅವೃತ್ತವಾಗಿರುವ ಇದು ಬಳ್ಳಾರಿಯಂತಹ ಬಿಸಿಲ ನಾಡಿಗೆ ಸ್ವರ್ಗ. ಸುಮಾರು 5 ಕಿ.ಮೀ ಗುಡ್ಡ ಹತ್ತಿ, ಐದು ಕಿಲೋಮೀಟರ್ ಗುಡ್ಡ ಇಳಿಯುವುದರಿಂದ ನಡೆದು ಅಭ್ಯಾಸ ಇಲ್ಲದವರಿಗೆ ಕಾಲು ನೋವು ಬರಬಹುದು. ಸಾಧ್ಯ ಆದರೆ ಪರಿಸರ ಮಾಲಿನ್ಯ ಮಾಡುವುದಿಲ್ಲ ಎಂಬ ಕಾಳಜಿಯೊಂದಿಗೆ ನೀವೂ ಹೋಗಿ ಬನ್ನಿ. ಕಾನನ ಸ್ನಾನವ ಮಾಡುತ್ತಾ ಸಂತೋಷವಾಗಿ ನೂರ್ಕಾಲ ಬದುಕಿ...
✍️ ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ