ಕಾಯಿನ್ ಪೋನು-ಕಬ್ಬಿಣದ ಬಿಲ್ಲೆಯೂ..
ಕೋಟೆಯ ನಾಡಿನಲ್ಲಿ ಓದಬೇಕು ಅನ್ನೋದು ನಾನು ಚಳ್ಳಕೆರೆಯಲ್ಲಿ ಹೈಸ್ಕೂಲ್ ಓದುತ್ತಿದ್ದಾಗ ಅಂದುಕೊಳ್ಳುತ್ತಿದ್ದೆ. ಪ್ರಾಥಮಿಕ ಶಿಕ್ಷಣವನ್ನು ಗ್ರಾಮಾಂತರ ಪ್ರದೇಶದಲ್ಲಿ ಮುಗಿಸಿದ ನಾನು ಹೈಸ್ಕೂಲಿಗೆ ತಾಲ್ಲೂಕು ಕೇಂದ್ರಕ್ಕೆ ಬಂದೆ. ಪಿ ಯು ಶಿಕ್ಷಣವನ್ನು ಇನ್ನೊಂದು ಮೆಟ್ಟಿಲು ಮೇಲೇರಿ ಜಿಲ್ಲಾ ಕೇಂದ್ರದಲ್ಲಿ ಮುಗಿಸಬೇಕು ಅನ್ನುವುದು ನನ್ನ ಕನಸಾಗಿದ್ದರೂ ಎಸ್ ಎಸ್ ಎಲ್ ಸಿ ಪಾಸ್ ಆದರೆ ನೋಡುವಾ ಎಂದು ಅಂದುಕೊಂಡು ಸುಮ್ಮನಾಗಿದ್ದೆ. ಅದೃಷ್ಟವಶಾತ್ ಹತ್ತನೇ ತರಗತಿಯನ್ನು ಯಾವುದೇ ಹೆಚ್ಚುವರಿ ದಂಡಯಾತ್ರೆ ಇಲ್ಲದೇ ಮೊದಲ ಪ್ರಯತ್ನದಲ್ಲಿ ಯಶಸ್ವಿ ಆದ ಖುಷಿಗೆ ತೆಲುಗು ಜ್ಯೂನಿಯರ್ ಎನ್ ಟಿ ಆರ್ ನ 'ಆದಿ' ಪಿಚ್ಚರ್ ನೋಡಿ ಮನೆ ಮಂದಿಗೆಲ್ಲಾ ಹೇಳಿ ಸಂಭ್ರಮಿಸಿದ್ದೆ.ಮನೆಯಲ್ಲಿ ನಮ್ಮ ಅಣ್ಣ ಹತ್ತು ನಮ್ಮ ಭಾವ ಲ್ಯಾಬ್ ಟೆಕ್ನಿಷಿಯನ್ ಗೆ ಆಡ್ಮಿಷನ್ ಆಗಬೇಕೆಂದು ನಮ್ಮ ಭಾವ ಮತ್ತು ಅವರ ಸಮಕಾಲೀನ ಅವರ ತಮ್ಮ ಶಿವರಾಮನಿಗೂ ನನಗೂ ಸೀಟ್ ವಿಚಾರಿಸಿ ಇಟ್ಟಿದ್ದರು. ನಾನೂ ಬಹುತೇಕ ಲ್ಯಾಬ್ಗೆ ಪಿಕ್ಸ್ ಆಗಿದ್ದೆ. ಆದರೆ ಬದಲಾದ ಸನ್ನಿವೇಶದಲ್ಲಿ ಏನಾಯಿತೋ ಗೊತ್ತಿಲ್ಲ ನಮ್ಮಿಬ್ಬರನ್ನು ಚಿತ್ರದುರ್ಗದ ಚಂದ್ರವಳ್ಳಿಯ 'ಎಸ್ ಜೆ ಎಂ ಕಲಾ ಮತ್ತು ವಾಣಿಜ್ಯ ಕಾಲೇಜಿಗೆ' ಸೇರಿಸಿ ನಮಗೂ ಅಚ್ಚರಿ ಮೂಡಿಸಿದ್ದರು.ನಮ್ಮ ಜೊತೆಗೆ ನನ್ನ ಸೋದರ ಸಂಬಂಧಿಯಾದ ನಾಗರಾಜ ಸೈನ್ಸ್ ಕಾಲೇಜಿಗೆ ಸೇರಿದ್ದ. ಮೂವರದೂ ಒಂದೇ ರೂಮ್. ದೊಡ್ಡಪೇಟೆಯ ಉಯ್ಯಾಲೆ ಕಂಬದ ಬಳಿ ನಾವು ರೂಮ್ ಮಾಡಿದಾಗ ಪಕ್ಕದಲ್ಲೇ ಭಾವಸಾರ ಕಲ್ಯಾಣ ಮಂಟಪದಲ್ಲಿ ನಡೆಯುತಿದ್ದ ಎಲ್ಲಾ ಮದುವೆಯ ಸಮಾರಂಭಗಳಿಗೆ ನಾವು ಮೂವರು ಮಾತ್ರ ಅವರು ಕರೆಯದ ಕಾಯಂ ಅತಿಥಿಗಳು ಆಗಿರುತ್ತಿದ್ದೆವು.
ನಮ್ಮಿಬ್ಬರದೂ ಎಸ್ ಜೆ ಎಂ ಹಾಸ್ಟೆಲ್ ಅವರದು ಊಟ ನಮ್ಮದು ವಸತಿ .ನಾನು ಶಿವರಾಮ ಇಬ್ಬರೂ ಜೊತೆಯಲ್ಲಿ ಹೋಗಿ ಊಟ ಮಾಡಿ ಒಂದು ಸುತ್ತು ವಾಲ್ಕ್ ಮಾಡಿಕೊಂಡು ಬರುತ್ತಿದ್ದೆವು. ನಾಗರಾಜನದು ಸೈನ್ಸ್ ಹಾಸ್ಟೆಲ್. ಅದೋ ಜಿಲ್ಲಾ ಕ್ರೀಡಾಂಗಣದ ಆಚೆ ಇದ್ದದ್ದು.ಈ ಜೂನ್ ಜುಲೈನಲ್ಲಿ ಜಡಿಮಳೆ ಶುರುವಾದಾಗ ಮಾರುದ್ದದ ದೊಡ್ಡ ದೊಡ್ಡ ಹೆಜ್ಜೆಹಾಕುತ್ತಾ ಹೋಗಿಬರುತ್ತಿದ್ದ.ಅವನು ಸೀದಾ ಏಳು ಅಡಿ ಎತ್ತರ ಬಿಲ್ಲಿನಂತೆ ಬಾಗಿದ್ದ ದೇಹ. ನಾವು ಮೂವರೂ ಉಂಡಿದ್ದು ತಿರುಗಿದ್ದು ಹೆಚ್ಚು ಅದರೆ ಓದಿದ್ದು ಬರೆದಿದ್ದು ಕಡಿಮೆಯೇ ಆದರೂ ಹಿಂಗೆ ಸಾಗಿತ್ತು ಜೀವನ.
ಒಂದು ದಿನ ಸಂಜೆ ನಾಗರಾಜ ಹಾಸ್ಟೆಲ್ ಊಟ ಮಾಡಿಕೊಂಡು ಯಾವುದೋ ವೆಲ್ಡಿಂಗ್ ವರ್ಕಶಾಪ್ ಬಳಿ ಬೋಲ್ಟ್ ಗೆ ಹಾಕುವಂತಹ ಹತ್ತು ಹದಿನೈದು ಬಿಲ್ಲೆ(ವಾಷರ್)ಗಳನ್ನು ತಂದು ಹಾಕಿದ್ದ. ಅವನು ಇಲ್ಲದೇ ಇರುವಾಗ ನಾನು ಶಿವರಾಮ ನೋಡಿ ಏನೋ ಮನೆಗೋ ಅಥವಾ ಕೃಷಿ ಕೆಲಸಕ್ಕೋ ಬೇಕಾಗಿರಬಹುದು ತಂದು ಹಾಕಿದ್ದಾನೆ ಊರಿಗೆ ಹೋಗುವಾಗ ತಗೊಂಡು ಹೋಗಬಹುದು ಅಂತ ನಾವಿಬ್ಬರು ಭಾವಿಸಿದ್ದೆವು.
ಒಂದು ದಿನ ಅವನು ಅಂಗಿ ಬದಲಾಯಿಸುವಾಗ ಒಂದೆರಡು ರುಪಾಯಿ ಕಾಯಿನ್ ಮತ್ತು ಒಂದು ವಾಷರ್ ಬಿಲ್ಲೆಯೂ ಕೆಳಗೆ ಬಿದ್ದಿತ್ತು.ಅಂದು ಕೂಡ ಈ ವಾಷರ್ಗಳು ಇವನು ನಡೆದುಕೊಂಡು ಹೋಗುವ ದಾರಿಯಲ್ಲಿ ಸಿಕ್ಕಿರಬಹುದು. ತಗೊಂಡು ಬಂದಿದ್ದಾನೆ ಅಂತನೇ ನಾನು ಅಂದುಕೊಂಡಿದ್ದೆ. ಈ ನಾಗರಾಜನಿಗೆ ಪಿಚ್ಚರ್ ನೋಡುವ ಹುಚ್ಚು ಬಹುವಾಗಿ ಇತ್ತು. ಉಪೇಂದ್ರನ ಅಭಿಮಾನಿಯಾಗಿ ಉಪೇಂದ್ರ ಅಭಿನಯದ ಎಲ್ಲಾ ಚಿತ್ರಗಳನ್ನು ನೋಡುತ್ತಿದ್ದ. ಬಹಳ ಚಿತ್ರಗಳಿಗೆ ನಾವು ಮೂವರೂ ಹೋಗಿಬರುತ್ತಿದ್ದೆವು. ನಾಗರಾಜನ ವಿಶೇಷ ಅಂದರೆ ಒಂದು ಫಿಲಂ ನೋಡಿದ ನಂತರ ಉಪೇಂದ್ರ ನಂತೆ ಅಭಿನಯ ಮತ್ತು ಡೈಲಾಗ್ ಗಳನ್ನು ರೂಮಿನಲ್ಲಿ ಮಾಡುತ್ತಿದ್ದ. ಅವಕಾಶ ಸಿಕ್ಕಾಗಲೆಲ್ಲಾ ಉಪೇಂದ್ರ ನಂತೆ ನಡೆಯುವುದು. ಮಾತಾನಾಡುವುದು ಇಲ್ಲವಾದರೆ ಹಾಡುಗಳನ್ನು ಗುನುಗುವುದು ಇವನಿಗೆ ಸಾಮಾನ್ಯವಾಗಿತ್ತು. ಇದು ಇನ್ನೋಂದು ಚಿತ್ರ ಬರುವವರೆಗೂ ಇದ್ದು ಉಪೇಂದ್ರ ನ ಮತ್ತೊಂದು ಚಿತ್ರ ಬಂದ ಮೇಲೆ ಆ ಚಿತ್ರದ ಅಭಿನಯ ಮತ್ತು ಡೈಲಾಗ್ ಗಳಿಗೆ ಆಟೋ ಅಪ್ಡೇಟ್ ಆಗುತ್ತಿದ್ದ. ಶಿವರಾಮ ಸೀರಿಯಸ್ ಆಗಿ ಓದುತ್ತಿದ್ದಾಗ ಯಾವ ಯಾವುದೋ ಡೈಲಾಗ್ ಕಾಮಿಡಿ ನೆನೆಸಿಕೊಂಡು ಜೋರಾಗಿ ನಕ್ಕುಬಿಡುತ್ತಿದ್ದ. ಇದರಿಂದ ಶಿವರಾಮನಿಂದ ಬಹಳಷ್ಟು ಬಾರಿ ಬಯಿಸಿಕೊಂಡಿದ್ದಾನೆ.
ಒಂದು ದಿನ ನಾನು ನಮ್ಮ ಅಣ್ಣನಿಗೆ ಪೋನ್ ಮಾಡಬೇಕಿತ್ತು. ನಾನು ರಂಗಯ್ಯನಬಾಗಿಲ ಬಳಿ ಬರಬೇಕಿತ್ತು.ಬಾರ ನಾಗರಾಜ ಹೋಗಿ ಬರೋಣ ಎಂದು ಕರೆದೆ. ಅದಕ್ಕವನು ರೆಡಿಯಾಗಿ ಇಬ್ಬರೂ ರೂಮಿನಿಂದ ಕೆಳಗಿಳಿದು ಬಂದೆವು.
ನಾಗರಾಜ: ನಾಗೇಂದ್ರ ಜೋಗಿಮಟ್ಟಿ ಸರ್ಕಲ್ ಗೆ ಹೋಗೋಣ ಪೋನ್ ಮಾಡಿ ದುಡ್ಡು ಉಳಿದರೆ ಮಿರ್ಚಿ ಕೊಡಿಸಬೇಕು ಎಂದ.
ನಾನು:ದುಡ್ಡಿಲ್ಲಲೇ ಎಲ್ಲೇ ಮಿರ್ಚಿ? ಮಿರ್ಚಿ ಇಲ್ಲ ಗಿರ್ಚಿ ಇಲ್ಲ ಬಾ ಎಂದೆ.
ನಾಗರಾಜ: ನಿಂಗೇನಪ್ಪ ದುಡ್ಡು ಉಳಿದರೆ ಸಾಕು ಅಲ್ಲವಾ? ನೆಡಿ ಆ ಮೆಡಿಕಲ್ ಶಾಪ್ ಕಾಯಿನ್ ಪೋನ್ ಹತ್ರ ನೆಡಿ ಎಂದನು. ನನಗೂ ಮಹಾ ಕೆಲಸ ಇಲ್ಲದೇ ಇದ್ದುದ್ರಿಂದ ನೆಡಿ ಹೋಗಾಣ ಎಂದೆ.
ನಾಗರಾಜ ಪ್ರತಿದಿನವೂ ಹಾಸ್ಟೆಲ್ಗೆ ಹೋಗಿ ಊಟ ಮುಗಿಸಿ ಅವರ ಮನೆಗೆ ನಿತ್ಯವೂ ಪೋನ್ ಮಾಡಿ ಕನಿಷ್ಟ ಹತ್ತು ಹದಿನೈದು ನಿಮಿಷಗಳ ಕಾಲ ಮಾತನಾಡುತ್ತಿದ್ದ.ನಾವು ಒಮ್ಮೊಮ್ಮೆ ದಿನಕ್ಕೆ ಹತ್ತು ಹದಿನೈದು ರೂಗಳನ್ನು ಪೋನಿಗೆ ಕಳೆದರೆ ಹೆಂಗಲೇ ನಾಗ ಎಂದು ಬಯ್ದದ್ದು ಉಂಟು.ಅಂದು ಅವನು ನಾನು ಆ ಮೆಡಿಕಲ್ ಶಾಪ್ ಹತ್ತಿರ ಹೋಗಿ ನನ್ನ ಬಳಿ ಎರಡು ಒಂದು ರುಪಾಯಿಯ ಕಾಯಿನ್ ಇದ್ದವು. ಒಂದು ಎರಡು ರೂ ನ ಕಾಯಿನ್ ಗೆ ಒಂದರ ಮುಖ ಬೆಲೆಯ ಎರಡು ಚಿಲ್ಲರೆ ನಾಣ್ಯಗಳು ಪಡೆದೆ.
ಆ ಕಾಯಿನ್ ಬೂತ್ ಮೆಡಿಕಲ್ ಷಾಪ್ ಗೆ ನೇರವಾಗಿಲ್ಲದೆ ಸ್ವಲ್ಪವೇ ಮರೆಯಾಗಿ ಪಕ್ಕದಲ್ಲಿ ಹಾಕಿದ್ದರು. ಅವನು ಕಾಯಿನ್ ಬೂತ್ ನ ರಿಸೀವರ್ ಎತ್ತಿಕೊಂಡು ಅವನ ಬಳಿ ಇದ್ದ ಒಂದು ವಾಷರ್ ಬಿಲ್ಲೆಯ ಹಾಕಿ ನಂಬರ್ ಹೇಳು ಎಂದ. ನನ್ನ ಪಾಕೆಟ್ ಡೈರಿಯಲ್ಲಿ ಬರೆದು ಇಟ್ಟುಕೊಂಡಿದ್ದ ನಂಬರ್ ಹೇಳಿದೆ.ಕೆಲವೇ ಸೆಕೆಂಡ್ಗಳಲ್ಲಿ ರಿಸೀವರ್ ಹೋಲ್ಡರ್ ನ್ನು ಕೆಳಗೆ ಅಂದ ಅವನು ಹಾಕಿದ್ದ ಬಿಲ್ಲೆಯೂ ಕೆಳಗೆ ಬಂದು ಕರೆಯೂ ಕಂಟಿನ್ಯೂ ಆಯಿತು. ಐವತ್ತು ಸೆಕೆಂಡ್ ನಂತರ ಅದೇ ವಾಷರ್ ಬಿಲ್ಲೆಯ ಪುನಃ ಹಾಕಿ ಮತ್ತೊಮ್ಮೆ ರಿಸೀವರ್ ಹೋಲ್ಡರ್ ಪ್ರೆಸ್ ಮಾಡಿದಮೇಲೆ ಅದು ಕೆಳಗೆ ಬರುತ್ತಿತ್ತು. ಹೀಗೆ ಇದೇ ರೀತಿ ನಾಲ್ಕೈದು ಬಾರಿ ಕಾಯಿನ್ ಹಾಕಿ ವಿಥ್ ಡ್ರಾ ಮಾಡಿ ಮಾಡಿ ನಾಲ್ಕೈದು ನಿಮಿಷಗಳ ಕಾಲ ಮಾತಾಡಿದ್ದೆ. ನಾವು ದುಡ್ಡನ್ನು ಪಾವತಿಸದೇ ಮಾತಾಡಿದ್ದರಿಂದ ಅಂಗಡಿಯವರು ಪತ್ತೆಹಚ್ಚಿ ಬಯ್ದಾರು ಎಂಬ ಆತಂಕದಲ್ಲೇ ಅವಸರ ಅವಸರವಾಗಿಯೇ ಮಾತಾಡಿದ್ದೆ. ದುಡ್ಡಿಲ್ಲದೇ ಮಾತಾನಾಡಿ ಬಂದ ನಾವು ಹೋಗಿದ್ದು ನೇರ ಮಿರ್ಚಿ ಅಂಗಡಿಗೆ ಎರಡೆರಡು ಮಿರ್ಚಿ ತೆಗೆದುಕೊಂಡು ಬಿಸಿ ಬಿಸಿ ಮಿರ್ಚಿ ಕಚ್ಚುತ್ತಾ ನಾಗ ಎಷ್ಟುದಿನದಿಂದ ಕಂಡುಕೊಂಡಿಯಲೇ ಇದನ್ನ ?
ನಾಗರಾಜ: ಬಹಳ ದಿನ ಏನಿಲ್ಲ ಸ್ವಲ್ಪ ದಿನ ಆಯಿತು ಕಣೋ..
ನಾನು: ಅಲ್ಲೋ ಆ ಕಾಯಿನ್ ಹೇಗೆ ಕೆಳಗೆ ಬೀಳತ್ತೆ ಅಂತ ಕೇಳಿದ್ದಕ್ಕೆ ಅದೆಂಗೊ ಗೊತ್ತಿಲ್ಲಪ್ಪಆದರೆ ಅದು ಒನ್ ಕ್ಲಿಕ್ಗೆ ಕಾಲ್ ಕಟ್ ಆಗಲ್ಲ ಎರಡನೇ ಬಾರಿ ಅಂದರೆ ಮಾತ್ರ ಕಟ್ ಆಗತ್ತೆ.
ನಾನು: ಮೆಡಿಕಲ್ ಶಾಪ್ ಅವರಿಗೆ ಗೊತ್ತಾದರೆ ಒದಿತಾರಲೇ .
ನಾಗರಾಜ:ಇಲ್ಲ ನಾಗೇಂದ್ರ ನಾನು ಪ್ರತಿದಿನವೂ ಮಾಡಲ್ಲ ಅಕತ್ತು ದುಡ್ಡಿಲ್ಲ ಅಂದ್ರೆ ಅಷ್ಟೆ ನಾನು ಹಾಗೆ ಮಾಡುವುದು.
ನಾನು :ಹುಷಾರ್ ಕಣ್ಲೇ ಮತ್ತೆ ಅವರ ಕೈಗೆ ಸಿಕ್ಕು ಹಾಕಿಕೊಂಡು ಒದೆ ತಿಂದೀಯಾ ಎಂದು ಹೇಳುತ್ತಾ ರೂಮಿಗೆ ಬಂದೆವು.
ಅಂದಿನ ನಮ್ಮ ದಿನಗಳು ಹಾಗೆ ಮಾಡಿದರೆ ಅನ್ಯಾಯ ಅಂತ ಗೊತ್ತಿತ್ತು. ಆದರೆ ಪರಿಸ್ಥಿತಿ ಹಾಗೆ ಇತ್ತು.ತಿಂಗಳಿಗೆ ಇನ್ನೂರು ರುಪಾಯಿ ಜೋಡಿಸಿ ರೂಂ ಬಾಡಿಗೆ ಕಟ್ಟಲೂ ಕಷ್ಟ ಇರುತ್ತಿತ್ತು. ಪಾಪ ಆ ಪೋನ್ ಇಟ್ಟವರು ಅವರೂ ಕೂಡ ಪೋನ್ ಬಿಲ್ ಕಟ್ಟತ್ತಾರೆ ಹಾಗೆ ಮಾಡುವುದು ಒಳ್ಳೆಯದಲ್ಲ ಅದು ಮೋಸ ಅಂತ ಹೇಳಿದೆ. ಆಮೇಲೆ ಅವನೂ ಒಂದು ನಿರ್ಧಾರಕ್ಕೆ ಬಂದ. ಪ್ರತಿದಿನವೂ ಹಾಗೆ ಮಾಡದೇ ಪರಿಸ್ಥಿತಿ ಬಿಗಡಾಯಿಸಿದಾಗ ಯಾವಾಗಲಾದರೂ ದುಡ್ಡು ಪೂರಾ ಇಲ್ಲದಾದಾಗ ಮಾತ್ರ ಒಂದೊ ಎರಡೋ ಕಾಲ್ ಹಾಗೆ ಮಾಡುತ್ತಿದ್ದ.ಅದು ಬಹುಶಃ ಆ ಕಾಯಿನ್ ಬಾಕ್ಸ್ ಒಳಗೆ ಬೀಳುವಾಗ ಒಂದೆರಡು ಸೆಂಕೆಂಡ್ ಒಳಗೆ ರಿಸಿವರ್ ಹೋಲ್ಡರ್ ಅದುಮಿದರೆ ಅದು ನೇರವಾಗಿ ಎಕ್ಜಿಟ್ ಆಗುತ್ತಿತ್ತು.ಅದಕ್ಕೆ ಒಂದೆರಡು ಸೆಕೆಂಡ್ ಒಳಗೆ ಅಂದ್ರೆ ಮಾತ್ರ ನಮ್ಮ ಕೈಗೆ ಸಿಗುತ್ತಿತ್ತು. ಒಂದು ಸೆಕೆಂಡ್ ಲೇಟ್ ಆಗಿ ಅಂದರೂ ಕಾಯಿನ್ ಬಾಕ್ಸ್ಗೆ ಸೇರಿರುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ಪೋನ್ ದುರಸ್ಥಿಯಾಗಿ ಕಾಯಿನ್ ವಿತ್ ಡ್ರಾ ಆಪ್ಸನ್ ರದ್ದಾಗಿತ್ತು.
ಅಂದಹಾಗೆ ಶಿವರಾಮ ಬೆಂಗಳೂರಿನಲ್ಲಿ ಬಿ ಎಂ ಟಿ ಸಿ ಟೆಕ್ನಿಷಿಯನ್ ಆಗಿದ್ದಾನೆ. ಹಾಗೆ ನನ್ನ ಬಾಲ್ಯದ ಗೆಳೆಯ ಸಹೋದರ ನಾಗರಾಜ್ ಯಾವಾಗಲಾದರೂ ನಾವು ಬೆರತಾಗ ಕಾಯಿನ್ ಪೋನಿನಲ್ಲಿ ಕಾಯಿನ್ ಇಲ್ಲದೇ ಮಾತಾಡುತ್ತಿದ್ದ ದಿನಗಳ ನೆನೆದು ತಮಾಷೆ ಮತ್ತು ಭಾವುಕತೆ ಮಿಶ್ರವಾಗಿ ಬಂದು ಹೋಗುತ್ತಾವೆ. ಅವನು ಪ್ರಸ್ತುತ ಇಂಜಿನಿಯರಿಂಗ್ ಮಾಡಿ ಸ್ಯಾಂಡಲ್ ವುಡ್ ಲ್ಲಿ ಸಹಾಯಕ ನಿರ್ಧೇಶಕನಾಗಿ ಕೆಲಸ ಮಾಡುತ್ತಿದ್ದಾನೆ. ದಂಡುಪಾಳ್ಯ, ಮಿಸ್ಟರ್ ಗರಗಸ ಹೀಗೆ ಹತ್ತಾರು ಚಲನಚಿತ್ರಗಳಿಗೆ ಸಹನಿರ್ದೇಶನ ಮಾಡಿದ್ದಾನೆ.ನಿರ್ದೇಶಕ ನಾಗಿ ಸ್ವಂತ ಚಿತ್ರ ನಿರ್ದೇಶನ ಮಾಡಬೇಕೆಂದು ವೇದಿಕೆ ಸಿದ್ದಗೊಂಡ ಹೊತ್ತಿಗೆ ಕೋವಿದಮ್ಮಳ ಕರಿನೆರಳಿಗೆ ಚಿತ್ರೋದ್ಯಮ ನರಳುತ್ತಿದೆ. ಮುಂದಿನದಿನಗಳಲ್ಲಿ ಅವನ ಯಶಸ್ಸು ನೀರಿಕ್ಷಿಸುತ್ತಿರುವೆ.
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ