ಹಲಸಿನಹಣ್ಣು..
ಹಲಸಿನ ಹಣ್ಣು
ನನಗೆ ಹಲಸಿನ ಹಣ್ಣು ಅಂದರೆ ಬಲು ಇಷ್ಟ.ಬಾಲ್ಯದಲ್ಲಿ ಇದ್ದಾಗ ಸಿಹಿ ಸಿಹಿಯಾದ ಹಲಸಿನ ತೊಳೆಗಳು ತಿನ್ನುತ್ತಿರುವಾಗ ಸಿಹಿಯ ಸವಿಗೆ ತಿಂದದ್ದು ತೃಪ್ತಿ ಆಗದೇ ಇದ್ದದ್ದುರಲ್ಲಿಯೇ ತೃಪ್ತಿ ಪಡಬೇಕಿತ್ತು. ಹಣ್ಣೆಲ್ಲ ತಿಂದ ಮೇಲೆ ಉಳಿದ ಬೀಜಗಳನ್ನು ಒಲೆಗೆ ಹಾಕಿ ಸುಟ್ಟುಕೊಂಡು ತಿನ್ನುತ್ತಿದ್ದೆವು.ಹೇಳಿ ಕೇಳಿ ನಮ್ಮದು ಬರ ಬಯಲು ಸೀಮೆ ಆದ್ದರಿಂದ ಹಲಸು ಮಾವು ಇವೆಲ್ಲವೂ ನಮಗೆ ಅಪರೂಪವೇ ಆಗಿದ್ದವು.ನಮಗೆ ಎರಡೋ ಮೂರನೇ ತರಗತಿಯಲ್ಲೋ 'ವಾಸನೆಯ ಬೆಲೆ' ಎಂಬ ಪಾಠ ಇತ್ತು.ಹಲಸಿನ ಹಣ್ಣು ಕೊಯ್ದನಂತರ ಅದರ ವಾಸನೆಯನ್ನು ಬೇರೆಯವರಿಗೆ ತಾಗದಂತೆ ತಡೆಯಲಾಗದೇ ಅವರೂ ಕೂಡ ಯಾರೋ ಹಲಸಿನ ಹಣ್ಣು ಕೊಯ್ದಿದ್ದಾರೆ ಎಂದು ಹೇಳಿ ಯಾರು ಕೊಯ್ದಿರೋದು ಅಂತ ಪತ್ತೆಹಚ್ಚುವರು ನೋಡಿ ಆಗ ನನಗೆ ಅನಿಸಿದ್ದು ವಾಸನೆಗೂ ಬೆಲೆಯಿದೆ ಅಂತ.ಚಿಕ್ಕವರಿದ್ದಾಗ ಹಲಸಿನ ಸೀಜನ್ ನಲ್ಲಿ ಒಂದು ಹಣ್ಣು ನಮಗೆ ಸಿಗುತ್ತಿತ್ತಾದರೂ ನಾವಿರುವ ಸಂಖ್ಯೆಗೆ ಅದು ಸಾಲುತ್ತಿರಲಿಲ್ಲ. ನಾನು ಪ್ರೌಢಶಾಲಾ ದಿನಗಳಲ್ಲಿ ತಳ್ಳುವ ಗಾಡಿಯಲ್ಲಿ ಕೊಯ್ದ ಮಾರುವವರ ಬಳಿ ರುಪಾಯಿಗೆ ಎರಡೋ ಮೂರೋ ಕೊಂಡು ತಿನ್ನುತ್ತಿದ್ದೆ.*
*ಹಲಸಿನ ಹಣ್ಣು ಹೊಟ್ಟೆ ತುಂಬಾ ತಿಂದದ್ದು ಎಂದರೆ ಮಲೆನಾಡಿನ ಅಳಿಯನಾದ ಮೇಲೆ.ರಜಾ ದಿನಗಳಲ್ಲಿ ಸ್ವಲ್ಪಮಟ್ಟಿಗೆ ತಣ್ಣಗಿರುವ ಎಂದು ಮಲೆನಾಡಿಗೆ ಬರುತ್ತಿದ್ದ ನಾನು ಇರುವಷ್ಟು ದಿನಗಳೂ ಹಲಸು ಮನೆಯಲ್ಲಿ ಕೊಯ್ದ ಸ್ಥಿತಿಯಲ್ಲಿ ಇದ್ದೇ ಇರುತಿತ್ತು.ಆ ದಿನಗಳಲ್ಲಿ 80% ಅದೇ ಬಹುತೇಕ ಮೂರು ಟೈಮ್ ಊಟ ಆಗಿರುತ್ತಿತ್ತು.ಅದರ ಮದ್ಯೆ ಕುಮುದಾಳ ಹಲಸಿನ ಕೊಟ್ಟೆ ಕಡುಬು ಮತ್ತು ತುಪ್ಪ,ಹಲಸಿನ ಚಿಪ್ಸ್,ಹಲಸಿನ ದೋಸೆ, ಹಲವು ಮಲೆನಾಡ ಅಡುಗೆಯ ಅಬ್ಬರ ಬೇರೆ.ಕೆಲವು ದಿನಗಳು ಮನೆ ಮತ್ತು ಅಡುಗೆ ಆಹಾರವು ಹಲಸುಮಯ ಆಗಿರುತ್ತಿತ್ತು.
ಒಂದು ದಿನ ಮಧ್ಯಾಹ್ನ ಮೂರು ಗಂಟೆಗೆ ನರಸಿಂಹರಾಜಪುರ ದಿಂದ ಉಡುಪಿಯ ಕಡೆ ನಮ್ಮ ಪಯಣ ಆರಂಭ ಆಯಿತು.ಮನೆಯಲ್ಲಿದ್ದ ಒಂದು ಮದ್ಯಮ ಗಾತ್ರದ ಹಲಸಿನ ಹಣ್ಣು ಕಾರೊಳಗೆ ಹಾಕಿಕೊಂಡೆವು. ಇದು ಎರಡು ಹಣ್ಣುಗಳ ಕೊಂಡಿದ್ದ ಕ್ಕೆ ಉಚಿತವಾಗಿ ಸಿಕ್ಕ ಇನಾಮು ಆಗಿತ್ತು.ಮಲೆನಾಡಿನಲ್ಲಿ ನಾನು ಆ ಹಣ್ಣುಗಳ ಎಲ್ಲಿಯಾದರೂ ಹೋಗಿ ಕಿತ್ತುಕೊಂಡು ಕಾರಿಗೆ ಹಾಕಿಕೊಂಡು ಬರುತ್ತಿದ್ದೆ. ಆದರೆ ಎಮರ್ಜೆನ್ಸಿ ಗೆ ಒಂದೋ ಎರಡೋ ಕೊಂಡುಕೊಳ್ಳುತ್ತಿದ್ದೆ. ಅದು ಬೇರೆ ಹಣ್ಣಾಗಿತ್ತು.ಮನೆಯಲ್ಲಿ ಯಾರೂ ಇರದೇ ಇದ್ದುದರಿಂದ ಎಲ್ಲಿಯಾದರೂ ಕೊಯ್ದು ತಿನ್ನುವ ಎಂದು ಕಾರಲ್ಲಿ ಹಾಕಿಕೊಂಡದ್ದು.ಅಂದು ಆಗುಂಬೆಯ ಸೂರ್ಯಾಸ್ತ ನೋಡಿಕೊಂಡು ಘಟ್ಟ ಇಳಿದು ಉಡುಪಿ ಸೇರಬೇಕು ಎನ್ನುವುದು ಅಂದಿನ ದಿನದ ಪ್ಲಾನ್ ಅಗಿತ್ತು. ಮರುದಿನ ಬೀಚ್ಗೆ ಹೋಗಿ ಸಮುದ್ರ ಅಲೆಗಳಿಗೆ ಮೈಯೊಡ್ಡಿ ನಲಿದಾಡುವುದಾಗಿತ್ತು.ಮೇ ತಿಂಗಳಾಗಿದ್ದರಿಂದ ಮೂರ್ ನಾಲ್ಕು ಬಾರಿ ಮಳೆಯೂ ಬಿದ್ದಿತ್ತು.ಕಾಡಿನ ಮರಗಳು ಚಿಗುರಿ ಬಿಸಿಲಿನ ಮದ್ಯದಲ್ಲಿ ತಣ್ಣನೆಯ ತಂಗಾಳಿ ಸುಯ್ ಎಂದು ಬರುತ್ತಿತ್ತು.ಆಗುಂಬೆಯ ತಲುಪುವಷ್ಟತ್ತಿಗೆ ಐದು ವರೆ ಆಯಿತು. ಸೂರ್ಯನು ಹಣ್ಣರೆದು ಸಮುದ್ರದಲ್ಲಿ ಜಾರಲು ಸಿದ್ಧನಾಗಿದ್ದ. ಆಗ ತಾನೆ ಮಳೆ ಬಂದು ನಿಂತಿತ್ತು. ವನ್ಯ ಜೀವಿಗಳ ಕಲರವದ ಮದ್ಯೆ ಆಗುಂಬೆಯ ಪ್ರೇಮ ಸಂಜೆಯ ಹಾಡು ನೆನಪಾಗಿ ಕುಮುದಾಳ ಜೊತೆ ತಣ್ಣನೆಯ ಶೀತ ಗಾಳಿಯಲ್ಲಿ ವ್ಯೂ ಪಾಯಿಂಟ್ ಲ್ಲಿ ನಿಂತುಕೊಂಡೆವು. ಆಗುಂಬೆಯ ನೋಟಕ್ಕೆ ಮನಸೋಲದವರು ಯಾರು ಇಲ್ಲ(ಆಗುಂಬೆಯ ಬಗ್ಗೆ ಪ್ರತ್ಯೇಕ ಲೇಖನ ನಿರೀಕ್ಷಿಸಿ) ಕಡುಗೆಂಪು ಬಣ್ಣದ ಸೂರಪ್ಪ ಮಜ್ಜಿಗೆಯ ನೊರೆಯಂತೆ ಕಾಣುತ್ತಿದ್ದ ಅರಬ್ಬೀ ಸಮುದ್ರದ ಅಲೆಗಳಾಚೆಯಲ್ಲಿ ಮುಳುಗುತ್ತಿರುವ ಸೊಬಗನು ನೋಡಿಯೇ ಆನಂದಿಸಬೇಕು.ಸೂರ್ಯಾಸ್ತದ ಬಳಿಕ ವ್ಯೂ ಪಾಯಿಂಟ್ ಇಂದ ಇಳಿದು ಕಾರಲ್ಲಿದ್ದ ಕೆಲವು ತಿಂಡಿಗಳನ್ನು ನಮ್ಮ ಪೂರ್ವಜರಿಗೆ(ಮಂಗಗಳಿಗೆ) ಕ್ಯಾಚ್ ಎಸೆದು ಏರ್ಪಿನ್ ಮಾದರಿ ಘಾಟಿಯ ಘಟ್ಟ ಇಳಿದು ಸೋಮೇಶ್ವರ ದಾಟಿದ ಮೇಲೆ ಕಾಫಿಯ ಕುಡಿಯೋಣ ಎಂದೆನಿಸಿ ಯಾವುದಾದರೂ ಹೋಟೆಲ್ ಸಿಗುವುದಾ ಎಂದು ನೋಡಿದರೆ ಬಲಕ್ಕೆ ಕಂಡಿದ್ದು ಸೀತಾ ನದಿ. ನದಿಯಲ್ಲವಾದರೂ ಸೀತಾನದಿಯ ತಟದಲ್ಲಿರುವ ಹೋಟೆಲ್ ಹೆಸರು 'ಸೀತಾನದಿ'. ತಡಮಾಡದೇ ಕಾರು ಹೋಟಲ್ ಮುಂದೆ ನಿಲ್ಲಿಸಿ ನಾನು ನಮ್ಮ ಅಳಿಯ ಶಿವ ಸ್ವಲ್ಪ ಹೊರಗೆ ಬಂದೆವು ಹೊರಗೆ ಬಂದದ್ದು ಹೊರಹೋಗಲು ಅಲ್ಲ. ಕಾರು ಸೈಡ್ಗೆ ಹಾಕುವಾಗ ಆ ಹೋಟೆಲ್ ಗೆ ಹೊಂದಿಕೊಂಡ ಕಾಪೌಂಡ್ ಒಳಗೆ ಒಂದು ಹಲಸಿನ ಮರದಲ್ಲಿ ಒಂದೆರಡು ಹಲಸಿನ ಕಾಯಿಗಳು ನನ್ನ ಕಣ್ಣಿಗೆ ಬಿದ್ದಿದ್ದರಿಂದ ಆ ಕಾಯಿ ಹದನಕ್ಕೆ ಬಂದಿದಿಯಾ ಎಂದು ಪರೀಕ್ಷಿಸಲು ಬಂದೆವು. ಶಿವನಿಗೆ ಆ ಕಾಂಪೌಡ್ ಜಂಪ್ ಮಾಡಿ ಹಸ್ತದಿಂದ ಬಡಿಯುವಂತೆ ಹೇಳಿದೆ.ಈ ಎಲ್ಲಾ ರೀತಿಯ ಹಣ್ಣುಗಳನ್ನು ಎರಡೇಟು ಬಡಿದು ಹಣ್ಣು ಆಗಲು ಸನಿಹಕ್ಕೆ ಬಂದಿದೆಯೋ ಇಲ್ಲವೋ ಎಂದು ಹೇಳುವರು.ಯಾವ ಹಣ್ಣಿನ ಶಬ್ದವು "ಟಪ್ ಟಪ್" ಎನ್ನದೇ "ತಪ್ ತಪ್"ಎಂದು ಶಬ್ದವನ್ನು ಮಾಡುವುದೋ ಆ ಕಾಯಿ ಹಣ್ಣಿಗೆ ಬಂದಿದೆ ಎಂದರ್ಥ.ಒಂದು ವೇಳೆ ಟಪ್ ಟಪ್ ಅನ್ನುತ್ತಿದ್ದರೆ ಅದು ಕಾಯಿ ಇದೆ ಎಂದರ್ಥ.ನಾಲ್ಕೈದು ಕಾಯಲ್ಲಿ ಒಂದು ದೊಡ್ಡ ದುಂಡನೆಯ ಕಾಯಿಯೊಂದು ಸಾಧಾರಣ "ತಪ್ ತಪ್ " ಎಂಬ ಶಬ್ದ ಬಂದದ್ದರಿಂದ ಅದನ್ನು ಕಿತ್ತುಬಿಡು ಅಂತ ಹೇಳಿದೆ. ಹೇಳಿದ ಒಂದೆ ಮಾತಿಗೆ ಎರಡೂ ಕೈಯಿಂದ ಜೋತುಬಿದ್ದ ಕಾಯಿಯನ್ನು ಎತ್ತಿ ಮುರಿದು ಹಲಸಿನ ಕಾಯಿ ಮುರಿದಾಗ ಅದರ ಸೊನೆ (ಹಾಲು) ಸುರಿಯುತ್ತಿರಲು ಅಲ್ಲೇ ಸುರಿಯಲು ಬಿಟ್ಟು ಎರಡು ಮೂರು ನಿಮಿಷಗಳ ನಂತರ ಎತ್ತಿಕೊಟ್ಟ.ಅದು ಸುಮಾರು ಎಂಟತ್ತು ಕೆಜಿ ಗಾತ್ರದ ಗೋಳಾಕಾರದ ಹಣ್ಣು.ಅದರ ಮುಳ್ಳುಗಳು ಒತ್ತೊತ್ತಾಗಿ ಇರದೇ ಸ್ವಲ್ಪ ಗ್ಯಾಪ್ ಗ್ಯಾಪ್ ಆಗಿ ಇದ್ದವು.ಹಲಸಿನ ಕಾಯಿಯ ಮುಳ್ಳುಗಳು ಒತ್ತೊತ್ತಾಗಿದ್ದರೆ ಅದರೊಳಗೆ ಸಣ್ಣ ತೊಳೆಗಳು ಇರುತ್ತಾವೆ. ಅದೇ ಮುಳ್ಳುಗಳು ಬಿಡಿ ಬಿಡಿಯಾಗಿದ್ದರೆ ದೊಡ್ಡ ಗಾತ್ರದ ತೊಳೆಗಳು ಇರುತ್ತಾವೆ. ಹಣ್ಣು ಸೊಟ್ಟವಾಗಿದ್ದರೆ ಅದರಲ್ಲಿ ತೊಳೆಗಳ ಪ್ರಮಾಣವು ಕಡಿಮೆ ಇರುತ್ತದೆ ಎಂಬುದು ಸಾಮಾನ್ಯ ಅನುಭವದ ನುಡಿಗಳು. ಇಷ್ಟು ದಿನ ನಾನು ಹೆಚ್ಚು ತಿಂದದ್ದು ಅಂಡಾಕಾರದ ಹಣ್ಣುಗಳು ಆದರೆ ಈ ಆಕಾರದ ಗುಂಡುಗಳನ್ನು ನಮ್ಮ ಕಡೆ ಹಳ್ಳಿಯಲ್ಲಿ ಕಾರದಗುಂಡು ಎಂದು ಕರೆಯುವ ಕಾರ ರುಬ್ಬಲು ಬಳಸುತ್ತೇವೆ. ಇಂತಹದೊಂದು ಹಣ್ಣು ಹಣ್ಣಾದ ನಂತರ ಬಹಳ ಚೆನ್ನಾಗಿರಬಹುದು ಎನ್ನುವ ಆಸೆಯಿಂದ ಡಿಕ್ಕಿ ಕ್ಲೋಸ್ ಮಾಡಿ ಹೋಟಲ್ ಒಳಗೆ ಕೂತು ಹೆಬ್ರಿಯಲ್ಲಿದ್ದ ಗೆಳೆಯ ಸತೀಶನಿಗೆ ಪೋನ್ ಮಾಡಿದೆ.ಕರೆ ಸ್ವೀಕರಿಸಿದ ಸತೀಶ ಉಭಯ ಕುಶಲೋಪರಿಯ ನಂತರ ಎಲ್ಲಿದ್ದೀರಿ ಎಂದಿದ್ದಕ್ಕೆ ನೆಂಟರ ಊರಲ್ಲಿ ಇದ್ದೀನಿ ಎಂದ.ನಾನು ಹೆಬ್ರಿಯ ಬಳಿ ಇದ್ದೇನೆ ಎಂದಿದ್ದಕ್ಕೆ ಎಂತಾ ಮಾರಾಯ್ರೆ ಹೇಳದೇ ಕೇಳದೇ ಬಂದ್ದೀದ್ದೀರಿ ಅರ್ಧ ಗಂಟೆ ಮಾರ್ರೆ ಬಂದೆ ಮನೆಕಡೆ ಹೋಗಿರ್ರಿ ಎಂದನು. ನಾನು ಬೇಡ ಉಡುಪಿಯಿಂದ ನಾಳೆ ಇದೇ ರೋಡಲ್ಲಿ ರಿಟರ್ನ್ ಆದ್ರೆ ಬರುವಾಗ ಸಿಗುವೆ ಎಂದೇಳಿ ಕೂಲ್ ಕೂಲ್ ವಾತಾವರಣಕ್ಕೆ ಬಿಸಿ ಬಿಸಿ ಕಾಫಿಯ ಕುಡಿದು ಕಾರು ಹತ್ತಿದೆವು. ನಾನು ಸಾಮಾನ್ಯವಾಗಿ ಅಲ್ಲಲ್ಲಿ ಇರುವ ನನ್ನ ಗೆಳೆಯರಿಗೆ ನಾನು ಬರುವುದನ್ನು ಮೊದಲೇ ಕರೆ ಮಾಡಿ ತಿಳಿಸುವುದಿಲ್ಲ.ನಿತ್ಯಜೀವನದಲ್ಲಿ ಏನೇನು ಕೆಲಸದಲ್ಲಿ ಎಂಗೇಜ್ ಆಗಿರುತ್ತಾರೋ ನಾವು ಬರವುವೆವು ಎಂದು ಹೇಳಿದರೆ ವೆಜ್ ಇರ್ಲಾ ನಾನ್ ವೆಜ್ ಇರಲಾ ಎಂದು ಅಡುಗೆ ಮಾಡಿಸಿ ಅವರು ನಮಗೋಸ್ಕರ ಕಾಯುವುದು, ಇಂದು ಇಲ್ಲೇ ಉಳಿದುಕೊಳ್ಳಿ ಬಹಳದಿನಕ್ಕೆ ಬಂದಿದ್ದೀರಾ ಎಂದೇಳುವುದು, ಹಾಗಂತ ನಾವು ಹೊಟ್ಟೆತುಂಬಿದ ತಕ್ಷಣವೇ ಮತ್ತೆ ಏನ್ ಸಮಾಚಾರ ನಾವು ಹೊರಡುವುದಾ ಅಂತ ಹೇಳಲು ನನಗೆ ಅಷ್ಟು ಸರಿ ಅನಿಸದಾ ಕಾರಣ ಸನಿಹಕ್ಕೆ ಹೋದಾಗ ಮಾತ್ರ ಸಿಗುತ್ತೀರಾ ಎಂದು ಕೇಳಿ ಸಿಕ್ಕರೆ ಹತ್ತಿಪತ್ತು ನಿಮಿಷ ಯೋಗಕ್ಷೇಮ ವಿಚಾರಿಸಿ ಕಾಫಿ, ಟೀ ಕುಡಿದು ಬರುವ ಯೋಚನೆ ಯಲ್ಲಿ ಮಾತ್ರ ಇರುತ್ತೇನೆ. ಅದರಂತೆ ಕುಮುದಾಳ ವಿದ್ಯಾಬ್ಯಾಸದ ಅವಧಿಯ ಪ್ರಾಕ್ಟೀಸ್ ಟೀಚಿಂಗ್ ಮಾಡಿದ್ದ 'ಹಿರಿಯಡ್ಕ' ಎಂಬ ಊರನ್ನು ಹೊರಗಿನಿಂದಲೇ ನೋಡುತ್ತಾ,ಸಮುದ್ರ ಹತ್ತಿರವಾದಂತೆ ಸೆಕೆಯ ತೀವ್ರತೆಯ ತಾಪ ಹೆಚ್ಚಿ ಸೆಕೆಯಲ್ಲೇ ಸೀದಾ ಉಡುಪಿಯ ಅಷ್ಟಮಠಕ್ಕೆ ಹೋಗಿ ಅಂದು ರಾತ್ರಿ ತಂಗಿದೆವು. ರೂಮ್ಗೆ ಹೋಗುವಾಗ ಹಲಸಿನ ಹಣ್ಣು ಮತ್ತು ಚಾಕು,ಎಣ್ಣೆ ಎತ್ತಿಕೊಂಡು ಹೋಗಿ ಅಂದು ಊಟದ ನಂತರ ಕೊಯ್ದು ಅರ್ಧಭಾಗ ತಿಂದು ಉಳಿದ ಅರ್ಧ ಭಾಗ ಬಿಡಿಸಿದ ತೊಳೆಗಳು ಒಂದು ಕವರಲ್ಲಿ ಹಾಕಿಟ್ಟೆವು.ಮರುದಿನ ಮುರುನಾಲ್ಕು ಗಂಟೆಗೆ ಎದ್ದು ಪ್ರಥಮ ಪೂಜೆಗೆ ಕೃಷ್ಣ ಮಠಕ್ಕೆ ಹಾಜರಾದೆವು. ಏಳುವರೆ ಎಂಟು ಗಂಟೆಗೆ ಮಲ್ಪೆ ಬೀಚ್ಗೆ ಹಾಜರಾದೆವು.ಎರಡು ಮೂರು ಗಂಟೆಗಳ ಕಾಲ ಸಮುದ್ರದ ಅಲೆಗಳಿಗೆ ಮೈಯೊಡ್ಡಿ ನಲಿದಾಡಿ ಸಿಹಿ ನೀರಲ್ಲಿ ಮಿಂದು ಬಂದು ಹೆಬ್ರಿಯ ಮೂಲಕ ಮೂಡುಬಿದ್ರೆ ಕಡೆಗೆ ನಮ್ಮ ಪಯಣ ಸಾಗಿತು.ಮೂಡಬಿದ್ರೆ ಕಟೀಲು ನೋಡಿಕೊಂಡು ಅಲ್ಲೇ ಉಳಿದು ಮರುದಿನ* ಎಸ್ ಕೆ ಬಾರ್ಡರ್ ,ಕುದುರೆಮುಖ ಅಭಯಾರಣ್ಯದ ಮೂಲಕ ಕಳಸ ಶೃಂಗೇರಿ ಬರಬೇಕಾಗಿತ್ತು. ಪ್ರಕ್ರತಿಯ ರಮ್ಯತಾಣ,ತುಂಗಾ ಮತ್ತು ಭದ್ರೆಯರ ನದಿಯ ಮೂಲ ಇರುವುದು* ಇಲ್ಲೇ.ನಿಧಾನವಾಗಿ ಹಾದು ಹೋಗುತ್ತಾ ನನಗೆ ಕಂಡಿದ್ದು ಸೀಬೆ ಕಾಯಿ ಗಿಡಗಳ ವನರಾಶಿ. ರಸ್ತೆಯ ಬದಿ ಬೇಕಾದಷ್ಟು ಗಿಡ ಅದರಲ್ಲಿ ಹಣ್ಣಿನ ಗೊಂಚಲುಗಳು ಬೇರೆ.ಹಿಡಿ ಗಾತ್ರದ ಸೀಬೇಕಾಯಿಗಳು ಐದಾರು ಕೆಜಿಯಷ್ಟು ಕಿತ್ತು ತಿನ್ನುವಷ್ಟು ತಿಂದು ಕಳಸ ಸಮೀಪದ ಟೀ ಎಸ್ಟೇಟ್ ಲ್ಲಿ ಸುಮಾರು ಹೊತ್ತು ಕಾಲ ಕಳೆದು ಹೆಂಗೆಗೋ ಪೋಟೋ ತೆಗೆದುಕೊಂಡು ಕಳಸದ ದಾರಿಯಲ್ಲಿ ಕಾಫಿ ಎಸ್ಟೇಟ್ ಲ್ಲಿ ಹಲಸಿನ ಮರಗಳು ಕಂಡು ನಿಲ್ಲಿಸಿದೆ. ಯಾರದ್ದೋ ಕಾಫಿ ಎಸ್ಟೇಟ್ ಲ್ಲಿ ಒಳಗೆ ನುಗ್ಗಿ ಎರಡ್ಮೂರು ದೊಡ್ಡ ದೊಡ್ಡ ಹಣ್ಣುಗಳ ಕಿತ್ತುಕೊಂಡು ಡಿಕ್ಕಿಯಲ್ಲಿ ಹಾಕಿದೆವು. ಡಿಕ್ಕಿಯ ತುಂಬಾ ಹಲಸಿನ ಹಣ್ಣು ತುಂಬಿದ್ದವು. ಉಡುಪಿಯಲ್ಲಿ ಕಿತ್ತು ಇಟ್ಟಿದ್ದ ಗುಂಡು ಹಲಸು ವಾಸನೆ ಬರಲು ಆರಂಭವಾಗಿತ್ತು. ನಾಳೆ ಇದೆ ಹಬ್ಬ ಎಂದೆನಿಸಿ ಕಳಸೇಶ್ವರ ಮತ್ತು ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಮತ್ತು ಪ್ರಸಾದ ಸೇವಿಸಿ ಹೊರಟು ಹನ್ನೆರಡು ಹನ್ನೆರಡುವರೆಗೆ ನರಸಿಂಹರಾಜ ಪುರ ಮನೆ ಸೇರಿದೆವು.
ಮರುದಿನ ಏಳೆಂಟು ಗಂಟೆಗೆ ಎದ್ದು ಮೊದಲು ಹೊಟ್ಟೆಗೆ ಹಾಕಿದ್ದೇ ಉಡುಪಿಯ ಗುಂಡಲಸಿನ ಹಣ್ಣನ್ನು. ನಿರೀಕ್ಷೆ ಮಾಡಿದಂತೆ ತೊಳೆಗಳು ದಪ್ಪ ದಪ್ಪವಾದ ತೊಳೆಗಳು ಬಿಳಿಯ ತೊಳೆಗಳು ಅಂದರೆ ಚಂದಿರನ ಬಿಳುಪು ಇದ್ದುದ್ದರಿಂದ ಅದನ್ನು ಚಂದ್ರ ಹಲಸು ಎನ್ನುವರು. ಸಾಧಾರಣ ರುಚಿಯನ್ನು ಹೊಂದಿತ್ತು. ಸಂಜೆಯೊಷ್ಟತ್ತಿಗೆ ಆ ಪೂರಾ ಹಣ್ಣನ್ನು ಮುಗಿಸಿದೆ.
ಯಾವುದಾದರೂ ಹೆಸರುವಾಸಿಯಾಗಬೇಕಾದರೆ ಅದರೊಳಗೆ ಅಡಗಿರಬಹುದಾದ ಸತ್ವ ದಿಂದ. ಹೀಗಾಗಿಯೇ ಹಲಸಿನ ಹಣ್ಣು ಎಲ್ಲರಿಗೂ ಉಪಯುಕ್ತ. ಮಧುಮೇಹ ಇರುವವರೂ ಇದರ ಮೋಹ ಬಿಟ್ಟಿಲ್ಲ. ಹೃದಯ ರೋಗವಿದ್ದವರಿಗೂ ಅಜೀರ್ಣ ಸಮಸ್ಯೆ ಇರುವವರಿಗೂ ವಯಸ್ಸಾಗದೇ ಇರುವಂತೆ ನೋಡಿಕೊಳ್ಳುವ ಅಂಶಗಳೂ ಇದರಲ್ಲಿ ಇವೆ.ಎ ವಿಟಮಿನ್ ಸಿ ವಿಟಮಿನ್ಗಳು ಇದರಲ ಉತ್ಕೃಷ್ಟವಾದ ಖನಿಜಾಂಶಗಳು ಎಥ್ಥೆಚ್ಚವಾಗಿ ಇವೆ. ಇದರಲ್ಲಿ ಅನೇಕ ವೆರೈಟಿ ಇದ್ದಾವೆ.ಅಂಬಲಿ ಹಲಸು ಕೆಂಡಹಲಸು ಹೀಗೆ ಇದರಲ್ಲಿ ಕೆಂಪು ಬಣ್ಣದ ಕೆಂಡಹಲಸು ಅತ್ಯುತ್ತಮ ಶ್ರೇಷ್ಠ ರುಚಿಯಾದ ಹಣ್ಣುಗಳು. ಎರಡು ಕೆಜಿಯಿಂದ ಮೂವತ್ತು ಕೆಜಿಯಷ್ಟು ಗಾತ್ರ ಇರುವ ಇವು ಭಾರತವೇ ಇದರ ಮೂಲ. ಆದರೆ ಉತ್ಪಾದನೆಯಲ್ಲಿ ಎರಡನೇ ಸ್ಥಾನ. ಇಷ್ಟೇ ಅ ಲ್ಲದೇ ಸಖರಾಯಪಟ್ಟಣದ ಸುತ್ತಾ ಮುತ್ತಾ ವಿದೇಶಗಳಿಗೂ ಸಿಹಿ ರುಚಿಯ ಹಣ್ಣುಗಳು ಸಿಗುವವು. ಹೆಸರಿಲ್ಲದ ನೂರಾರು ಸ್ಥಳೀಯ ಜವಾರಿ ತಳಿಯ ಹಣ್ಣುಗಳು ಇದ್ದಾವೆ. ಹಾಸನ ತುಮಕೂರು, ಬೆಂಗಳೂರಿನಲ್ಲಿ ಉತ್ತಮ ಹಣ್ಣುಗಳುಲಭ್ಯ ವರ್ಷವೂ ತನು ಮನ ತೃಪ್ತಿಯಾಗುವಷ್ಟು ತಿನ್ನುವೆ.
(ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ-ನಾಳೆ ಬಾ..)
ನಾಗೇಂದ್ರ ಬಂಜಗೆರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ