ನಾಳೆ ಬಾ..

ನಾಳೆ ಬಾ..

ನಾನು ಅಂದು ಶಾಲೆಗೆ ಒಂಬತ್ತು ಗಂಟೆಯ ಒಳಗೆ ಹೋಗಿದ್ದೆ. ಶಾಲೆಯ ಬಾಗಿಲನ್ನು ತೆರೆದಿರಲಿಲ್ಲ. ಒಬ್ಬನೇ ಏನ್ ಮಾಡವುದೆಂದು  ನಮ್ಮ ದೋಸ್ತಿಗಳು ಇರುವ ಏರಿಯಾಕ್ಕೆ ಹೋದೆ ಅಲ್ಲಿ ಹೋಗಿ ನೋಡಿದರೆ ಜನರೆಲ್ಲಾ ಗುಂಪು ಗುಂಪಾಗಿ ಒಂದು ಮನೆಯ ಬಾಗಿಲಿಂದ ಇನ್ನು ಮನೆಯ ಬಾಗಿಲಿಗೆ ಹೋಗುತ್ತಿದ್ದರು. ಅದನ್ನು ಸ್ವಲ್ಪ ದೂರದಲ್ಲಿ ನೊಡಿದ ನಾನು ಏನೋ ಜಗಳ ಇರಬೇಕು ಎಂದು ಅಂದು ಕೊಂಡು ಹತ್ರ ಹೋದರೆ ಜಗಳ ಅಲ್ಲ ಹಂಗಂತೆ ಹಿಂಗಂತೆ ಎಂದು ಮನೆಯ ಬಾಗಿಲಿಗೆ "ನಾಳೆಬಾ" ಎಂದು ದೇವರಾಜ ಬಾಗಿಲ ಮೇಲೆ ಬರೆಯುತ್ತಿದ್ದ. ರಾತ್ರಿಯ ವೇಳೆ ಯಾರಾದರೂ ಹೊರಗಿನಿಂದ ಮಾತಾಡಿಸಿದರೆ ಬಾಗಿಲು ತೆಗಿಬೇಡಿ ಎಂದು ಹೇಳುತ್ತಿದ್ದರು. ಅವರ ಮಾತಿನ ಮದ್ಯೆ ಅಕ್ಕ ಪಕ್ಕದ ಊರುಗಳ ಹೆಸರುಗಳೂ ತೇಲಿ ಬರತ್ತಿದ್ದವು.ರೆಡ್ಡಿಹಳ್ಳಿಯಾಗೆ  ಹಂಗೆ ಅಂತೆ ಆಗಿದ್ದು..ನನಗೆ ವಿಷಯ ಏನು ಅಂತ  ಅರ್ಥ ಆಗಲಿಲ್ಲ. ನಮ್ಮ ಚಿಕ್ಕಮ್ಮ ಒಬ್ಬರು ಸುಮಂಗಳಮ್ಮ ಅಂತಾ ಇದ್ದರು.ಅವರೂ  ಬಾರಿ ಮಾತನಾಡುತ್ತಿದ್ದರು.ನಾನು ಹತ್ತಿರ ಹೋಗಿ ಏನಾಯಿತು ಚಿಕ್ಕಮ್ಮ ಎಂದೆ. ಅಯ್ಯೋ ನಾಗೇಂದ್ರ ಬಹಳ ದೊಡ್ಡ ಕತೆ ಇದೆಯೆಂದು ಹೇಳಲು ಶುರುಮಾಡಿದರು..

"ದೇವರೆಡ್ಡಿಹಳ್ಳಿಯಲ್ಲಿ  ಅವಿವಾಹಿತ ಕನ್ಯೆಯೋರ್ವಳು ಆಕಸ್ಮಿಕವಾಗಿ ಏನೋ ಆಗಿ ಸತ್ತೋಗಿದ್ದಾಳಂತೆ.ಮದುವೆ ಆಗಿರಲಿಲ್ಲ ಅಲ್ಲಾ ಅದಕ್ಕೆ ಅವಳು ದೆವ್ವ ಆಗಿ ಸುತ್ತಲೂ ಹತ್ತೂರು ತಿರುಗುತ್ತಿದ್ದಾಳಂತೆ" ಅಂದರು.

ಆಯಮ್ಮ ತಿರುಗಿದರೆ ತಿರುಗುತ್ತಿರಬಹುದು ಆದರೆ ಪ್ರತಿಯೊಂದು ಮನೆಯ ಬಾಗಿಲಿಗೂ "ನಾಳೆ ಬಾ" ಅಂತ ಯಾಕೆ ಬರೀತೀದ್ದಾರೆ ?

ಸುಮಂಗಳಮ್ಮ: "ಅದೇ ಕಣಪ್ಪ ಬಂದೀರೋದು ರಾತ್ರಿಹೊತ್ತು ಆಕೆ ಯಾರ ಮನೆ ಬಾಗಿಲಿಗಾದರೂ  ಹೋಗಿ   ಆ ಮನೆಯ ಸದಸ್ಯರ ದ್ವನಿಯಲ್ಲಿ  ಕೂಗುವಳಂತೆ ಬಾಗಿಲೇನಾದರೂ ತೆಗೆದರೆ ಅವಳನ್ನು  ನೋಡಿದ ಕೂಡಲೇ ಔಟ್ ಆಗಿಬಿಡುತ್ತಾರೆ ಕಣಲೋ ಅಗೋ ನೋಡು ರಾತ್ರಿ  ಬಸ್ಸ್ಟಾಂಡ್ ಹತ್ತಿರ ಎಷ್ಟಕೊಂದು ಮನೆಯ  ಬಾಗಿಲು ಬಡಿದಿದ್ದಾಳಂತೆ ಅದಕ್ಕೆ ಎಲ್ಲಾರ ಮನೆಯ ಬಾಗಿಲ ಮೇಲೆ ಅವಳಿಗೆ "ನಾಳೆ ಬಾ"  ಎಂದು ಬರೆದರೆ  ಅವಳು ಅದನ್ನು  ನೋಡಿ ಓ ನಾಳೆ ಬರಬೇಕಂತೆ ಅಂತ ವಾಪಾಸ್ ಹೋಗ್ತಾಳಂತೆ  ಅದಕ್ಕೆ ಬರೆದಿರುವುದು. ನೀನು ಅಷ್ಟೇ ಇವತ್ತು‌ ತಪ್ಪದೇ ಮನೆಗೆ ಹೋದ ತಕ್ಷಣವೇ ನಿಮ್ಮ ಮನೆಗೆ  ಬರೆದು ಬಿಡಪ್ಪ  ಅಡವಿಯಾಗಳ‌ ಮನೆ ಅಕ್ಕ ಪಕ್ಕ ದಿಕ್ಕಿಲ್ಲ ದೆಸೆಯಿಲ್ಲ ಎಂದು ಹೇಳಿ ರಂಗಜ್ಜಿ ಮನೆಯ ಕಡೆ ಹೊರಟು ಹೋದರು. ಹ್ಞು ಬರೆಯುವೆ ಎಂದೇಳಿ ನಮ್ಮ ಅಡ್ಡ ಹುಡುಗರ ಜೊತೆಗೆ ಶಾಲೆಗೆ ಬಂದರೆ ಶಾಲೆಯ ಪ್ರತಿಯೊಬ್ಬ ಹುಡುಗರ ಬಾಯಲ್ಲೂ  ಇದೇ ವಿಚಾರವೇ. ಆ ಓಣಿಯಲ್ಲಿ ಅವರ ಮನೆಯ ಬಾಗಿಲು ಬಡಿದಳಂತೆ  ಈ ಬೀದಿಯಲ್ಲಿ  ಇವರ ಮನೆಯ ಬಾಗಿಲ ಬಡಿದಳಂತೆ. ಪಕ್ಕೀರಪ್ಪ ಮನೆಯ ಬಾಗಿಲಿಗೆ "ನಾಳೆ ಬಾ" ಅಂತ ಬರೆದಿದ್ದರಿಂದ ಅವರ ಮನೆಯ ಬಾಗಿಲನ್ನು ಬಡಿಯಲಿಲ್ಲವಂತೆ. ಪರಮೇಶಪ್ಪ ಅವಳ ಕೂದಲು ನೊಡಿ ಹೆದರಿಕ್ಯಂಡಿದ್ದಾನೆ.  ಅದಕ್ಕೆ ಬೆಳಿಗ್ಗೆ ಬಸ್ ಗೆ  ಆಸ್ಪತ್ರೆಗೆ ಹಾಕಿಕೊಂಡು ಹೋಗಿದ್ದಾರಂತೆ.. ಹೀಗೆ ಅಂತೆ ಕಂತೆಗಳ  ಮಾತಿನ ಸುರಿಮಳೆಯೇ ಇತ್ತು.ಅಂದು ಸಂಜೆ ನಾನು ಮನೆಗೆ ಬಂದ ತಕ್ಷಣವೇ ಬಾಗಿಲಿಗೆ "ನಾಳೆ ಬಾ" ಎಂದು ಸೀಮೆಸುಣ್ಣದಿಂದ ಬರೆದೆ.

 ತೊಂಭತ್ತರ ದಶಕದಲ್ಲಿ ಬಹುಶಃ ರಾಜ್ಯಾದ್ಯಂತ ಸದ್ದು ಮಾಡಿದ ಶಬ್ಧ ಇದು.ಕೂಗು ಮಾರಿ ಎಂದು ಕರೆಯುವ ಇದರ ಮೂಲ ಸಿಲಿಕಾನ್ ಸಿಟಿ ಬೆಂಗಳೂರಿನಿಂದಲೇ ಇದರ ತವರು ಇರಬೇಕು.ಆಗಿನ ಕಾಲದಲ್ಲಿ ಕಡಿಮೆ ಬೆಲೆಗೆ ಅಲ್ಲಿನ ಜಮೀನುಗಳನ್ನು ಕೊಂಡುಕೊಂಡು,  ಅವರಿಗೆ ಹಣ ಕೊಡದೇ  ಸತಾಯಿಸಿ, ಜನಗಳಿಗೆ ಮೋಸ ಮಾಡಿದವರೇ ಇದರ ಪಿತೃಗಳು.ಅತ್ತ ಇರುವ ಆಸ್ತಿಯನ್ನೂ ಕಳೆದುಕೊಂಡು  ಇತ್ತ ಹಣವೂ ಸಿಗದೇ ಮೋಸಕ್ಕೆ ಒಳಗಾದವರು  ಪ್ರತೀದಿನ ಬಂದು  ಪ್ರೇತಗಳಂತೆ  ಕಾಡುವುದಕ್ಕೆ ಶುರುಮಾಡಿದ ಪರಿಣಾಮವಾಗಿ ಯಾರೋ ಮಹಾ ಮಾಂತ್ರಿಕ, ಆಷಾಢ ಭೂತಿಗಳ ಬೀಜ ಮಂತ್ರವೇ ಈ 'ನಾಳೆಬಾ'  ಎಂಬ ಶಬ್ಧ.ಜನ ಮರಳೋ ಜಾತ್ರೆ ಮರಳೋ ಎನ್ನುವ ಹಾಗೆ ಪ್ರತಿಯೊಂದು ಮನೆಯ ಬಾಗಿಲಿಗೂ "ನಾಳೆ ಬಾ" ಎಂದು ಬರೆದಿರುವುದು ಅಂದಿನ ದಿನಗಳಲ್ಲಿ  ಸಾಮಾನ್ಯವಾಗಿತ್ತು.ಆಗಿನ ಕಾಲದ ಎಷ್ಟೋ ಚಲನ ಚಿತ್ರಗಳ ಚಿತ್ರೀಕರಣದಲ್ಲೂ ನಾಳೆ ಬಾ ಎಂದು ಬರೆದಿರುವುದನ್ನು ನಾನು ನೋಡಿದ್ದೇನೆ. ಆದರೆ ನಮ್ಮ ಕಡೆಗೆ ಈ ಸುದ್ದಿ ಹರಡಲು ತುಸು ತಡವಾಗಿರಬಹುದು. ಇನ್ನೂ ಕೆಲವರು ಯುಗಾದಿಗೆ ಮನೆಗೆ ಬಣ್ಣ ಬಳಿಯುವಾಗ ಬಣ್ಣದಿಂದಲೇ ದಪ್ಪಕ್ಷರಗಳಿಂದ ನಾಳೆ ಬಾ ಎಂದು ಬರೆದಿರುತ್ತಿದ್ದರು.

 ಇದಕ್ಕೆ ಇನ್ನೂ ಒಂದು ಕಾರಣ ಇರಬಹುದು.ಪ್ಲೇಗ್ ಮಹಾ ಮಾರಿಯು ಬಂದು ಇಡೀ ಗ್ರಾಮಕ್ಕೆ ಗ್ರಾಮವೇ ಅಳಿದು ಹೋಗಿರುವ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇವೆ. ಅಂತಹ ದಿನಗಳಲ್ಲಿ ಯಮನು ಪಾಶ ಹಿಡಿದು ಪ್ರಾಣ ಕೊಂಡೊಯ್ಯಲು  ಮನೆಯ ಬಾಗಿಲ ಮುಂದೆ  ಬಂದಾಗ 'ನಾಳೆ ಬಾ' ಎಂಬುದನ್ನು ನೋಡಿ ವಾಪಾಸು ಹೋಗಲಿ ಎಂದು  ಬರೆದಿರಬೇಕು.

ತೊಂಭತ್ತರ ದಶಕದಲ್ಲಿ ಇದ್ದ ಸಾಕ್ಷರತೆಯ ಪ್ರಮಾಣವೇ  40-45%ಅಂತದ್ದರಲ್ಲಿ  ಪ್ರೇತಗಳಿಗೂ,ಯಮನಿಗೂ 'ನಾಳೆ ಬಾ' ಎಂದು ಬಾಗಿಲಿಗೆ ಬರೆದು, ಪ್ರೇತಗಳಿಗೂ,ಯಮನಿಗೂ ಅದನ್ನು  ಓದುವಂತೆ ಬಾಗಿಲಿಗೆ ಬರೆದು, ಅವುಗಳೋ ಪ್ರತೀದಿನವೂ ಬಂದು ಬಂದು ಓದಿ ಇಂದಲ್ಲ ನಾಳೆ ಎಂದು ಅವೇ ಸತ್ತು ಹೋಗುವಂತೆ ಮಾಡಿದ್ದು ನಮ್ಮ ಜನತೆಯ ಮಹಾ ಸಾಧನೆಯೇ ಸರಿ.ಹಾಗೆ ಅಂದು ಪ್ರೇತಗಳು ಯಮನು ಓದು ಕಲಿತಿದ್ದರೂ ಇವೆಲ್ಲವುಗಳ ಸೃಷ್ಠಿಕರ್ತ ಮನುಷ್ಯನ  ಅದರಲ್ಲೂ ಭಾರತೀಯ ಇಂದಿನ ಸಾಕ್ಷರತೆ ೭೫% ಗೂ ಮೀರಿ ಸಾಧಿಸಲು ಇಂದೂ ಶತಗತಾಯ ಸಾದ್ಯವಾಗುತ್ತಿಲ್ಲ.

 ಲೇಖನ ಮುಗಿಸುವ ಮುನ್ನ ಎರಡು ಸಾವಿರದ ಇಪ್ಪತ್ತನೆಯ ದಶಕದಲ್ಲಿ ಪ್ಲೇಗ್ ನಂತೆ ಅಟ್ಟಹಾಸ ಮೆರೆದು ರಾಜ್ಯ ರಾಜ್ಯಗಳು,ದೇಶ ದೇಶಗಳೇ ಕಣ್ಮರೆಯಾಗುವ ಲಕ್ಷಣಗಳು ಇರುವಾಗ ಶಿಕ್ಷಣ ಮತ್ತು ಅಭಿವೃದ್ಧಿ ಹೊಂದಿದ ಸಂಕೇತವಾಗಿ ಬಹುಶಃ ಈ ಕೊರೋನಾ  ಕಾಲದಲ್ಲೂ "ಓ ಕೊರೋನಾ ನಾಳೆ ಬಾ" ಎಂದು ಬರೆಯದಿರುವುದು  ನಮ್ಮ ದೇಶದ ಅದೃಷ್ಟ ಮಾರ್ರೆ.

✍️ನಾಗೇಂದ್ರ  ಬಂಜಗೆರೆ.

ಕಾಮೆಂಟ್‌ಗಳು

  1. ಖಂಡಿತ..‌ ಬಾಲ್ಯದ ಹಳೆಯ ನೆನಪುಗಳನ್ನು ಮರುಕಳಿಸಿತು...
    ಮತ್ತು ನಮ್ಮ ಕಡೆಯು ಇಂತಹ ಘಟನೆಗಳು ಆಗಿದ್ದವು......☺

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..