ಮದುಚಂದ್ರದ ತಾಣ ಊಟಿ..

ಊಟಿಯ ಪಯಣ..

ನಮ್ಮ ಮದುವೆಗೂ ಮುನ್ನಾ ಊಟಿಗೆ ಹೋಗಬೇಕು ಎಂದು ನಾನು ಕುಮುದಾ ರಮ್ಯ ಚೈತ್ರಕಾಲದಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ಆದರೆ ಮದುವೆಯ ನಂತರ ಊಟಿಗೆ ಹೋಗುವ ನಮ್ಮ ಯೋಚನೆ ಮತ್ತು ಯೋಜನೆ ಸಾಕಾರವಾಗಲಿಲ್ಲ. ಊಟಿ ನೋಡುವ ತವಕ ನಮ್ಮನ್ನು ಬಿಟ್ಟೋಗಿರಲಿಲ್ಲ. ಅಂತೂ ಇಂತು ತನೇಹಾ ಹುಟ್ಟಿ ಮೂರು ವರ್ಷದ ನಂತರ
ದಿನಾಂಕ ೧೪-೦೪-೨೦೧೭ ಶಾಲೆಯಲ್ಲಿ ಮಹಾನ್ ಚೇತನ ಅಂಬೇಡ್ಕರ್ ಜಯಂತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮಾಡಿಕೊಂಡು ನನ್ನ ಕರ್ತವ್ಯದ ಸ್ಥಳ ಅಂತಾಪುರದಿಂದ ಸಂಜೆ ಮೂರು ಗಂಟೆ ಸುಮಾರಿಗೆ ಊಟಿಗೆ ಹೋಗಲು ಶುರುವಾಗಿತ್ತು ನಮ್ಮ  ಪಯಣದ ಹಾದಿ. ನಾನು,ಕುಮುದಾ  ಮಗಳು ತನೇಹಾ, ಮುದ್ದಿನ ಶಿಷ್ಯ ಸಿದ್ದೇಶ ಹಾಗೂ ದೇವರಾಜ ಮತ್ತು ಸಣ್ಣ ರುದ್ರ ಎಂಬ ಅತಿಥಿ ಶಿಕ್ಷಕರು ನಮ್ಮ ಜೊತೆಯಲ್ಲಿ ಇದ್ದರು. ಬೇಸಿಗೆಯಾದ್ದರಿಂದ ನಾಲ್ಕೂ ಕಿಟಕಿಗಳು ಓಪನ್ ಇದ್ದವು. ರೋಡ್ ಪ್ರೀ ಇದ್ದರೆ ನನ್ನ ಗಾಡಿಯ ವೇಗ ಕನಿಷ್ಠ  110-120 km/h ಇರುತ್ತದೆ. ಅದರಂತೆ  ಬಳ್ಳಾರಿಯಿಂದ ನಂಜನಗೂಡಿಗೆ ಹೋಗಿ ಅಲ್ಲಿ ರಾತ್ರಿ ಉಳಿದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿದ ಅಲ್ಲಿಂದ ಊಟಿಗೆ ಹೊರಡುವುದು ನಮ್ಮ ಪ್ಲಾನ್ ಆಗಿತ್ತು.  ಅದೆಷ್ಟು ಬಾರಿ ಮೈಸೂರಿಗೆ ನಾವು ಜಾಲಿರೈಡ್ ಹೊಗಿದ್ದೇವೋ ಗೊತ್ತಿಲ್ಲ. ಪ್ರತಿ ಬರಿಯೂ  ವಿಶೇಷ ವಿಭಿನ್ನ.. ಅಂದು ಶ್ರೀರಂಗ ಪಟ್ಟಣ ದ ಬಳಿ ಯಾವುದೂ ಒಂದು ಹೋಟೆಲ್ ಲ್ಲಿ  ವೆಜ್ ಊಟವನ್ನು ಪಾರ್ಸಲ್ ಕಟ್ಟಿಸಿಕೊಂಡು ಮಗಳಿಗೆ ಕಾರಿನಲ್ಲೇ ಊಟ ಮಾಡಿಸುತ್ತಾ ಹೆದ್ದಾರಿಯ ದಾಟಿ ಮೈಸೂರು ನಗರಕ್ಕೆ ಬಂದೆವು.ಕೆಲವೇ ಹೊತ್ತಿನಲ್ಲಿ ಒಂದು ಸುತ್ತು ಮಳೆ ಹನಿ ಬಂದು ಹೋಗಿ ಸುಮಾರಾಗಿ ಸೋನೆ ತರಹದ ಮಳೆ ಇದ್ದುದ್ದರಿಂದ   ಲೊಕೇಶಣ್ಣನ(google location) ಮಾರ್ಗದರ್ಶನದಲ್ಲಿ  ನಂಜನಗೂಡಿಗೆ ಹೋಗಲು ಮುಂದೆ ಸಾಗುತ್ತಾ ಬಂದೆವು.ಮೈಸೂರು ರಿಂಗ್ ರೋಡಲ್ಲಿ ಬರುವಾಗ  ಕತ್ತಲಲ್ಲಿ ಬಲಕ್ಕೆ ಚಾಮುಂಡೇಶ್ವರಿ ಬೆಟ್ಟ ಕಾಣುತ್ತಿದೆ ಬಿಟ್ಟರೆ ಏನು ಗೊತ್ತಾಗುತ್ತಿಲ್ಲ. ಮೊಬೈಲ್ ನೋಡಿದರೆ ಲೋಕೇಶಣ್ಣ ಮೂತಿ ಬೇರೆಕಡೆ ತಿರುಗಿಸಿ ಕೂತಿದ್ದಾನೆ.ಹತ್ತುವರೆ ಹತ್ತು ಮುಕ್ಕಾಲು ಆಗಿತ್ತು. ನಿರ್ಜನ ಪ್ರದೇಶ. ಅಲ್ಲೊಂದು ಇಲ್ಲೊಂದು ವಾಹನಗಳು ವೇಗವಾಗಿ ಪಾಸ್ ಆಗುತ್ತಿದ್ದವು.ದಿಕ್ಕು ತೋಚದೇ ಆ ಸಮಯಕ್ಕೆ ಅಲ್ಲೋಂದು ಯಾವುದೋ ಪ್ಯಾಸೆಂಜರ್ ಆಟೋ ಬಂತು.ಕೈ ಅಡ್ಡ ಹಾಕಿ ನಂಜನಗೂಡು ಅಂತ ಕೇಳಿದರೆ ಈಗ ನೀವು ಮೈಸೂರು ಸಿಟಿಕಡೆ  ಮುಖ ಮಾಡಿದ್ದೀರಾ ಯೂ ಟರ್ನ್ ತಗೊಂಡು  ಸ್ಟ್ರೈಟ್ ಹೋಗಿ  ಹದಿನೈದು ಹದಿನಾರು ಕಿಮೀ ಆದ ಮೇಲೆ ಒಂದು ಕಮಾನು ಬರತ್ತೆ ಅಲ್ಲಿ ಡೈರೆಕ್ಷನ್ ತೋರಿಸಿದ್ದಾರೆ ಹೋಗಿ ಎಂದು ಪಕ್ಕದಲ್ಲೇ ದಾರಿ ತೋರಿಸಿದ. ಅವನ ಮಾತನ್ನು ಕೇಳಿ   ಊಟಿ ಮುಖ್ಯರಸ್ತೆಯಿಂದ ಡೈರೆಕ್ಷನ್ ತೋರಿಸಿದಂತೆ ಎಡಕ್ಕೆ ನಂಜನಗೂಡು ಕಡೆಗೆ ತಿರುಗಿಸಿದೆ. ಯಾವುದೋ ಒಂದು ಸೇತುವೆ. ಆ ಸೇತುವೆಯ ಮೇಲೆ  ಸರಿಯಾಗಿ  ಏಳೆಂಟು ಕೆಜಿಯಷ್ಟು ತೂಕದ ದೊಡ್ಡ ಆಮೆಯೊಂದು ರಸ್ತೆಯಲ್ಲೇ ತೆವಳಿಕೊಂಡು ಹೋಗುತ್ತಿತ್ತು. ವಾಹನಗಳ ಸಂಖ್ಯೆಯು ವಿರಳವಾಗಿತ್ತಾದರೂ  ರಸ್ಗತೆಯಲ್ಲಿ ಗರಿಷ್ಠ  ವೇಗದಿಂದ ಪಾಸ್ ಆಗುತ್ತಿದ್ದವು. ಯಾರಾದರೂ ಸ್ಯಾಡಿಸ್ಟ್ ಡ್ರೈವರ್ ಗಳು ಅದರ ಮೇಲೆ ವಾಹನ ಹೊಡೆದುಕೊಂಡು ಹೋಗಬಹುದೆಂದು ಪಾರ್ಕಿಂಗ್ ಲೈಟ್ ಆನ್ ಮಾಡಿ ಗಾಡಿ ಸೈಡಿಗೆ ಹಾಕಿದೆ. ದೇವರಾಜ  ಬಳ್ಳಾರಿ ಭಾಷೆಯಲ್ಲಿ 'ಲೇ ರುದ್ರ ತಬಾಲಿ ಲೇ... ಎದ್ದೇಳು..' ಎಂದು ತೂಕಡಿಸುತ್ತಿದ್ದ ರುದ್ರೇಶನನ್ನು ಎಬ್ಬಿಸಿ ಕೆಳಗಿಳಿದರು. ಹೆಡ್ಲೈಟ್ ಬೆಳಕಿನಲ್ಲಿ ತೆವಳಿ ತೆವಳಿ ಸಾಗುತ್ತಿದ್ದ ಆಮೆಯ ಮುಂದೆ ನಿಂತರು. ಅದು ಒಂದು ಕ್ಷಣ ತನ್ನ ಕತ್ತು ಕಾಲು ಒಳಗೆ ಹಾಕಿ ನಿಂತಿತು. ಸಾರ್ ದೊಡ್ಡ ತಬಾಲಿ ಸಾರ್ ಎಂದು ದೇವರಾಜ ಕೂಗಿದ. ಆಕಡೆ ಬಗ್ಗಿನೋಡು ಏನಿದೆ ಅಂತ ಹೇಳಿದ್ದಕ್ಕೆ ನೀರಿದೆ ಸಾರ್ ಎಂದು ಹೇಳಿದ ಹಾಗದರೆ ಎತ್ತಿ ನೀರಿಗೆ ಹಾಕು ಎಂದು ಹೇಳಿದ್ದಕ್ಕೇ ಕಚ್ಚುವುದೋ ಪರಚುವುದೋ ಎಂಬ ಭಯದಿಂದಲೇ ಎತ್ತಿ ನೀರಿಗೆ ಎಸೆದರು. ಬಹುಶಃ ಅದು ಆ ನೀರಿನಿಂದಲೇ ಎದ್ದು ಬಂದಿರಬೇಕು ಆದರೆ ರಸ್ತೆಯ ಮೇಲೆ ಅಪಾಯಕಾರಿಯಾದ ಜಾಗದಲ್ಲಿ ಇದ್ದುದ್ದರಿಂದ ಯಾವುದಾದರೂ ವಾಹನಗಳ ಚಕ್ರಕ್ಕೆ ಸಿಲುಕಿಯೋ,ಅಥವಾ ಆಮೆ ತಿನ್ನುವರ ಕೈಗೆ ಸಿಕ್ಕೋ ಬಲಿಯಾಗುವ ಎಲ್ಲಾ ಸಾದ್ಯತೆ ಇದ್ದುದರಿಂದ ನೀರಿಗೆ ಎಸೆಯಿರಿ ಎಂದು ಹೇಳಿ ನೀರಿಗೆ ಹಾಕಿಸಿ ನಂಜುಂಡೇಶ್ವರನ ಸನ್ನಿದಿಗೆ ಮುಟ್ಟಿದೆವು. ಅಲ್ಲಿದ್ದ ವಸತಿಗೃಹಗಳಿಗೆ ರೂಂ ಕೇಳಿದರೆ ಎಲ್ಲವೂ ಪುಲ್ ಆಗಿ ಹಾದಿ ಬಿದೆಯಲೆಲ್ಲಾ ಜನ ಗಾಡಿ ನಿಲ್ಲಿಸಿ ಎಲ್ಲೆಂದರಲ್ಲೇ ಮಲಗಿದ್ದರು. ಆ ರಶ್ ನೋಡಿ ಹಾಗೆ ಹೋಗೋಣ ಅನಿಸಿದರೂ ಅದು ಪಾರೆಸ್ಟ್ ರೋಡ್ ಆದ್ದರಿಂದ ರಾತ್ರಿ ಒಂಭತ್ತು ಗಂಟೆಯ ನಂತರ ಬಂಡೀಪುರ ಅಭಯಾರಣ್ಯದ ರಸ್ತೆ ಬೆಳಿಗ್ಗೆ ಆರು ಗಂಟೆಯವರೆಗೆ ಕ್ಲೋಸ್ ಇರುತ್ತದೆ. ಅಲ್ಲೆಲ್ಲಿ ಹೋಗಿ ನಿಂತುಕೊಳ್ಳುವುದೆಂದು ಅಲ್ಲೇ ಎಲ್ಲೋ ಸೈಡಿಗೆ ಹಾಕಿ ಚಾಪೆ ಹಾಸಿ  ಕಟ್ಟಿಸಿಕೊಂಡು ಬಂದಿದ್ದ ಊಟ ಮಾಡಿ ಮಲಗಿದೆವು. ನಿದ್ರೆ ಬರುತ್ತಿತ್ತಾದರೂ  ಸೊಳ್ಳೆಗಳ ಹಾಡಿಗೆ ನಿದ್ರೆ ಆಗಲಿಲ್ಲ. ಹೆಚ್ಚೆಂದರೆ ಹದಿನೈದು ಇಪ್ಪತ್ತು ನಿಮಿಷಗಳ ಕಾಲ ಮಲಗಿರಬಹುದು. ಹಾಗೆ ತೂಕಡಿಸುತ್ತಾ ಜೋಂಪು ಹತ್ತುವಷ್ಟತ್ತಿಗೆ ಸೊಳ್ಳೆಗಳು ಕಚ್ಚಿ ಎಚ್ಚರವಾಗುತ್ತಿತ್ತು. ಹಂಗೂ ಹಿಂಗೂ ನಾಲ್ಕು ಗಂಟೆ ಆಯಿತು.ಕಾರು ಹತ್ತಿ ಕಪಿಲ ನದಿಕಡೆ ತಿರುಗಿಸಿ  ನೀರೊಳಗೆ ಮಿಂದು ಐದು ಗಂಟೆಯೊಳಗೆ ಸಿದ್ದವಾಗಿ ನಂಜಂಡನ ನೋಡದೇ ಊಟಿಯ ರಸ್ತೆ ಹಿಡಿದೆವು.

ಬೆಳಕು ಹರಿಯುತಲಿತ್ತು.ಬಂಡೀಪುರ ರಸ್ತೆ ಹಿಡಿದ ನಮ್ಮ ಕಾರು ಬಯಲುಪ್ರದೇಶವೇ ಕಾಣಿಸುತ್ತಿದ್ದರಿಂದ ಆನೆ ಇರುವಮತ ಕಾಡು ಇಲ್ಲಿ ಎಲ್ಲಿದೆಯೇ ಎಂದು  ಕುಮುದಾಳನ್ನು ಕೇ ಳುತ್ತಾ, ಆ ಕಾಡಿನ ಸುತ್ತಲೂ  ದೊಡ್ಡದಾಗಿ ಆಳವಾಗಿ ಕಂದಕ ಮಾಡಿದ್ದರು. ನಾನು ದಿನಪತ್ರಿಕೆಗಳಲ್ಲಿ ನೋಡಿದಂತೆ ಆನೆ ಹುಲಿಗಳು ಅರಣ್ಯದಾಟಿ ಹೋಗದಂತೆ ಮಾಡಿರುವ ಕಂದಕ ನೋಡಿ ಅದು ಎಂದು ಹೇಳುತ್ತಾ ಚೆಕ್ ಪೋಸ್ಟ್ ಹತ್ತಿರ ಬಂದಾಗ ಆರು ಗಂಟೆಗೆ ಹತ್ತುನಿಮಿಷ ಬಾಕಿ. ಹತ್ತು ನಿಮಿಷಗಳು ಗೇಟ್ ತೆಗೆಯುವರೆಗೆ ಕಾಯ್ದುನಿಂತೆವು. ನನ್ನ ಮುಂದೆ ಐದಾರು ಗೂಡ್ಸ್ ವಾಹನಗಳು ಐದಾರು ಕಾರುಗಳು ಇದ್ದವು.ಸರಿಯಾಗಿ ಆರು ಗಂಟೆಗೆ ಗೇಟ್ ಓಪನ್ ಆದ ತಕ್ಷಣ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದ ಒಳಗೆ ಅಧಿಕೃತ ಪ್ರವೇಶ ಪಡೆದೆವು.

 ಬಂಡೀಪುರಅಭಯಾರಣ್ಯ 874ಚದರ ಕಿಲೋಮೀಟರ್ ವಿಸ್ತಾರದ ದಕ್ಷಿಣ ಏಷ್ಯಾದ ಅತಿದೊಡ್ಡ ಆನೆಗಳ ಆವಾಸ ಸ್ಥಾನದ ಅರಣ್ಯಕ್ಕೆ ಪ್ರವೇಶ ಪಡೆದ ಮೇಲೆ ಅಸಲಿ ಮಜಾ ಶುರುವಾಗಿದ್ದು. ದೊಡ್ಡ  ದಟ್ಟವಾದ ಕಗ್ಗತ್ತಲಂತಹ ಕಾಡು ಅಲ್ಲದೇ ಇದ್ದರೂ ಕೆಂಪು ನೆಲದಲ್ಲಿ ಸಾಧಾರಣ ಎತ್ತರ ಬೆಳೆದ  ಸಾಮಾನ್ಯ ಗಿಡಮರಗಳು ಇದ್ದವು.ಪ್ರತಿ ನೂರು ಮೀಟರ್ ಗೆ ಒಂದು ರೋಡ್ ಹಂಪ್ಸ್ ಮತ್ತು ವೇಗಮಿತಿ 20-30 km/h.ನಾನು ಆ ಮಾರ್ಗವಾಗಿ ಮೊದಲ ಬೇಟಿಯಾದ್ದರಿಂದ ಪರಿಚಯ ಇರಲಿಲ್ಲ. ಕುಮುದಾ ಜಿಂಕೆಗಳು ಅನೆಗಳು ಕಾಣಿಸುತ್ತಾವೆ ಎಂದು ಹೇಳುತ್ತಿದ್ದಳು. ಮೂರ್ನಾಲ್ಕು ಕಿ ಮೀ ಏನು ಕಾಣಲಿಲ್ಲ  ಒಂದಷ್ಟು ದೂರದಲ್ಲಿ ಒಂದು ಸಾರಂಗ ಕಾಣಿಸಿತು. ಅದು ಗಾಬರಿಯಾದಂತೆ ಜೋರಾಗಿ ನಡೆದುಕೊಂಡು ಹೋಗುತ್ತಾ ಮರೆ ಆಯಿತು. ಅಬ್ಬಾ..ಅದ್ಬುತ ಎಂದು ಒಂದರ್ಧ ಕಿ ಮೀ ಮುಂದೆ ಬಂದರೆ  ಏನಾಶ್ಚರ್ಯನೂರಾರು ಜಿಂಕೆಗಳು ರಸ್ತೆಯ ಮೇಲೆಲ್ಲಾ ಮಲಗಿವೆ!.ಸುಮಾರು ಜಿಂಕೆಗಳು ರಸ್ತೆಯ ಇಕ್ಕೆಲಗಳಲ್ಲಿ ಡೀರ್ ವಾಲ್ಕ್ ಮಾಡುತ್ತಿವೆ.  ಅವುಗಳ ಅಂದ ಸೊಬಗು ನೋಡಲು ಕಣ್ಣು  ಸಾಲವು. ನಾನು ಈ ಪ್ರಮಾಣದಲ್ಲಿ  ನಮ್ ಏರಿಯಾದಲ್ಲಿ ಕುರಿ ಗಳನ್ನು ನೋಡಿದ್ದೆ. ಆದರೆ ಮೊಟ್ಟಮೊದಲ ಬಾರಿಗೆ ಏಕಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಿಂಕೆಗಳನ್ನು ‌ಓಪನ್ ಪಾರೆಸ್ಟ್ ಲ್ಲಿ ನೋಡಿದ್ದು ಅದೇ ಮೊದಲು. ಮನಸೋ ಇಚ್ಚೆ   ಜಿಂಕೆಗಳ ಸೊಬಗನ್ನು ಕಣ್ತುಂಬಿಕೊಂಡೆವು. ಅಂದು ಕಂಡ ಸೊಬಗು ಮರೆಯಲಾಗದ ಕ್ಷಣ... ನಮ್ ರಸ್ತೆಗಳಲ್ಲಿ ಎಮ್ಮೆಗಳು ಅಡ್ಡ ಬಂದಾಗ ಕೆಲವೊಮ್ಮೆ ಉಜ್ಜಿಕೊಂಡೋ,ಕೈಯಲ್ಲಿ ದೂಕಿಯೋ ಮುಂದೆ ಹೋಗುವಂತೆ ಅಂದು ಜಿಂಕೆಗಳನ್ನು ಕಂಡಂತಾಯಿತು.
   ಹಾಗೆ  ನಿಧಾನವಾಗಿ ಮುಂದೆ ಬರುತ್ತಿರಲು  ಆನೆಯ ಘೀಳಿಡುವ ಶಬ್ದ! ಕುಮುದಾ ಆನೆ ಎಂದೆ ಗ್ಲಾಸ್ ಎತ್ಕೊಳಿ  ಎಂದೆ. ಎಲ್ಲಿದೆ ಎಂದು ಸುತ್ತಮುತ್ತ ನೋಡಲು ಒಂದು ಐದಾರು ವರ್ಷದ ಪಡ್ಡೆಯಾನೆಯೊಂದು ರಸ್ತೆಯ ಪಕ್ಕದ  ಹಳ್ಳದಲ್ಲಿ ಹೆಜ್ಜೆ ಹಾಕುತ್ತಾ  ಘೀಳಿಡುತ್ತಾ ದೊಡ್ಡಹೆಜ್ಜೆಹಾಕುತ್ತಾ ಹೋಗುತ್ತಿತ್ತು.ಒಂದು ಕ್ಷಣ ಭಯವಾದರೂ ಕಂಪನದಲ್ಲೇ ಮುಂದೆ ಸಾಗಿದೆವು.

ನಾಟ್ಯ ಮಯೂರಗಳಂತೂ ನೂರಾರು ಸಂಖ್ಯೆಯಲ್ಲಿ ಇದ್ದವು.  ಹಾಗೆ ಅರಣ್ಯದಲ್ಲಿ  ಮುಂದೆ ಸಾಗುತ್ತಿರುವಾಗ ಮುಂದೆ ಕಂಡಿದ್ದು ರಸ್ತೆಯ ಪಕ್ಕದಲ್ಲಿ ನಿಂತಿರುವ ಗಜರಾಜ.
ಬಂಡೀಪುರ ಅರಣ್ಯದಲ್ಲಿ ಆನೆ.


   ಅಷ್ಟು ದೊಡ್ಡ ಆನೆಯನ್ನು ರಸ್ತೆಯ ಪಕ್ಕದಲ್ಲೇ ಕಂಡ ನನಗೆ ಎದೆಯ ಬಡಿತವೇ ಜೋರಾಯಿತು. ನಿಲ್ಲಿಸೋಣ ಎಂದರೆ ಇತರೆ ಗಾಡಿಗಳು ಮುಂದೆ ಹೋಗಿದ್ದನ್ನು ನೋಡಿ ಅದನ್ನು ನೋಡುತ್ತಾ ಮುಂದೆ ಬಂದರೆ ಮತ್ತೊಂದು ನೂರಾರು ಸಂಖ್ಯೆಯ ವಿವಿಧ ವಯೋಮಾನದ ಜಿಂಕೆಗಳ ಹಿಂಡು. ಆಗ ತಾನೆ ಎದ್ದು ಮೈ ಮುರಿಯುತ್ತಿದ್ದ ಜಿಂಕೆಗಳು ದಾರಿಹೋಕರಿಂದ ತಿಂಡಿಯನ್ನು ನೀರೀಕ್ಷೆ ಮಾಡುತ್ತಿದ್ದವು.ಸಫಾರಿ ಹೋಗಲಿಕ್ಕೆ ಅರಣ್ಯ ಇಲಾಖೆಯ ವಾಹನಗಳು ಮತ್ತು ಪಾರ್ಕಿಂಗ್  ನೋಡಿ ನಾವು ಗಾಡಿ ನಿಲ್ಲಿಸಿ ಸಫಾರಿ ಮಾಡಲು ಎಷ್ಟು ಹಣ ವಿಚಾರಿಸಿಕೊಂಡು ಬಾ ಎಂದು ದೇವರಾಜ ರುದ್ರೇಶನನ್ನು ಕಳುಹಿಸಿದರೆ ಹಸುವಿನ ಮೈ ಸವರುವ ಹಾಗೆ ಸವರುತ್ತಾ  ಕೊಡುಗಳನ್ನು ಮುಟ್ಟಿ ತಲೆ  ಅಲ್ಲಾಡಿಸುತ್ತಾ ಹೋಗಿ ಕೇಳಿಕೊಂಡು ಬಂದರು. ಶುಲ್ಕ ತಲಾ ಎಂಟುನೂರು ಒಬ್ಬರಿಗೆ ಇದ್ದುದ್ದರಿಂದ ಅಷ್ಟು ಶುಲ್ಕ ಭರಿಸುವ ಶಕ್ತಿ ಇರಲಿಲ್ಲ ವಾದ್ದರಿಂದ ಉಚಿತವಾಗಿ ಕಾಣುತ್ತಿದ್ದ ಪ್ರಾಣಿಗಳನ್ನೇ  ನೋಡುತ್ತಾ ಮುಂದೆ ಸಾಗಿದೆವು.  ಬಹುಶಃ ರಾತ್ರಿಯವೇಳೆ ಸಾವಿರಾರು ಜಿಂಕೆಗಳು ಡಾಂಬರ್ ರಸ್ತೆಯ ಮೇಲೆಯೇ ಮಲಗಿಕೊಳ್ಳುವವು. ಆ ಉದ್ದೇಶದಿಂದಲೇ ರಾತ್ರಿಯ ವೇಳೆ ವಾಹನ ಸಂಚಾರಕ್ಕೆ ಅನುಮತಿಯನ್ನು ಕೊಟ್ಟಿರುವುದಿಲ್ಲ.ಹಾಗೇ  ಪ್ರಾಣಿಗಳನ್ನೇ  ನೋಡುತ್ತಾ ಮುಂದೆ ಸಾಗಿದರೆ ಒಂದು ಕೆಸರು ಮೆತ್ತಿಕೊಂಡಿದ್ದ ಗಂಡು ಹಂದಿ ರಸ್ತೆಯ ಒಂದಷ್ಟು ದೂರದಲ್ಲಿ   ತನ್ನ ಕೋರೆಹಲ್ನಿಂದ ನೆಲ ಗೂರಿ ಮಣ್ಣು ತೆಗೆಯುತ್ತಿತ್ತು. ಅದು ನೋಡಿದರೆ ಪೇಟೆಯಲ್ಲಿ ಸಾಕಿರುವ ಜಾಡಾಗಿರುವ ಹಂದಿತರನೇ ಕಾಣಿಸುತ್ತಿತ್ತು.  ಅಲ್ಲಿ ಒಂದು ಜನವಸತಿಯೂ ಇದ್ದದ್ದರಿಂದ ಯಾರೊ ಇವುಗಳನ್ನು ಸಾಕಿರಬೇಕು ಎಂದೆನಿಸಿತು.ನೋಡಿದರೆ ಹಂದಿಗಳು ಮತ್ತು ಜಿಂಕೆಗಳು ಜೊತೆಯಲ್ಲಿಯೇ ಮೇಯುತ್ತಿವೆ.!

ನಮ್ಮದು ಆ ಕಾಡಿನಲ್ಲಿ  ಹುಲಿ ಚಿರತೆಗಳನ್ನು ನೋಡುವುದಾಗಿತ್ತು. ಹುಲಿ ಚಿರತೆಗಳ ತಾಣ ಬೇರೆಕಡೆ ಇರತ್ತೆ ಅದಕ್ಕೇ ಸಫಾರಿ ಹೋಗಬೇಕು. ಈ ಕಡೆಯೆಲ್ಲಾ ಅವು ಬರಲಿಕ್ಕಿಲ್ಲ ಅದಕ್ಕೇ ಇಷ್ಟೊಂದು ಜಿಂಕೆಗಳು ರಸ್ತೆಯ ಪಕ್ಕದಲೆಲ್ಲಾ ಓಡಾಡುತ್ತಿರುವುದು. ಎಂದು ಮಾತನಾಡುತ್ತಾ ಬರುತ್ತಿರುವಾಗ ತಮಿಳುನಾಡಿನ ಬಾರ್ಡರ್ ಎದುರಾಯಿತು. ಮನುಷ್ಯಪ್ರಾಣಿಗಳಿಗೆ ಮಾತ್ರ ಬಾರ್ಡರ್ ಆಗಿ ನಿಜಪ್ರಾಣಿಗಳಿಗೆ ಸೀಮೆಯ ಪರಿವೆ ಇರಲಿಲ್ಲ.ಅದು ತಮಿಳುನಾಡಿನ 'ಮುದುಮಲೈ ಟೈಗರ್ ಪಾರೆಸ್ಟ್' ಯೆಲ್ಲೋ ಬೋರ್ಡಿನ ವಾಹನದವರೆಲ್ಲಾ ಗಾಡಿ ನಿಲ್ಲಿಸಿ ಪರ್ಮಿಟ್ ತೋರಿಸಿ ದಕ್ಷಿಣೆಯ ಹಾಕಿ ಬರುತ್ತಿದ್ದರೆ ವೈಟ್ ಬೋರ್ಡ ವೆಹಿಕಲ್ ಗಳಿಗೆ  ಯಾವುದೇ ನಿರ್ಬಂಧ ಇರಲಿಲ್ಲ. ಅಲ್ಲಿಂದ ಮುಂದೆ ಸಾಗಿಸದರೆ ಊಟಿಯ ರೋಡ್ ಕವಲಾಗುವುದು. ಈ ಅರಣ್ಯಪ್ರದೇಶ ಕರ್ನಾಟಕ,ತಮಿಳುನಾಡು ಮತ್ತು ಕೇರಳ ಮೂರು ರಾಜ್ಯಗಳ ಬಾರ್ಡರ್ ಇರುವ ಸ್ಥಳ.ಊಟಿಗೆ ಹೋಗಲು ಶಾರ್ಪ್ ಏರ್ಪಿನ್  ಘಾಟಿರಸ್ತೆಯ ಮೂಲಕ ಊಟಿ ತಲುಪವ ರಸ್ತೆ. ಇನ್ನೊಂದು ಸಾಧರಣ ಘಾಟಿಯ ವೈನಾಡು ಮೂಲಕ  ಇನ್ನೊಂದು ಮಾರ್ಗ ನನಗೆ ಗೊತ್ತಿರಲಿಲ್ಲವಾದರೂ  ಊಟಿ ಎಂದು ಬೋರ್ಡು ತಿರುಗಿರುವ ಕಡೆ ಹೋದೆ. ಎತ್ತರ ಎತ್ತರವಾದ ರಕ್ಷಿತ ತೇಗದ ಮರಗಳಿರುವ ತಮಿಳುನಾಡಿನ ಅರಣ್ಯಪ್ರದೇಶ. ಅಲ್ಲಿ ಯಾವುದೇ ಪ್ರಾಣಿಗಳು ಕಾಣಲಿಲ್ಲ ವಾದರೂ ಆನೆಗಳು ರಸ್ತೆಯ ಮೇಲೆಲ್ಲಾ ಓಡಾಡಿ  ಲದ್ದಿ ಹಾಕಿರುವ ಗುರುತುಗಳು ಹಸಿಯಾಗಿಯೇ ಇದ್ದವು. ಅಲ್ಲೆಲ್ಲಾ  ಖಾಸಗಿಯವರು ಮಹಿಂದ್ರಾ ಜೀಪ್ ಇಟ್ಕೊಂಡು ಬಂದ ಪ್ರವಾಸಿಗರ ವಾಹನಕ್ಕೆ ಕೈ ಅಡ್ಡ ಹಾಕುತ್ತಾ ಎಲಿಪ್ಯಾಂಟ್ ಸಫಾರಿ ಸಾರ್ ಎಂದು ಕೂಗುತ್ತಿದ್ದರು. ಸಫಾರಿ ಹೋಗುವ ಯೋಚನೆ ಇರಲಿಲ್ಲವಾದರೂ ಮಾಹಿತಿಗಾಗಿ  ಒಂದತ್ರ ನಿಲ್ಲಿಸಿ ಸಫಾರಿಯ ವಿಚಾರಿಸಿದೆ. ಆನೆ ತೋರಿಸುತ್ತೆವೆ ಒಬ್ಬರಿಗೆ ಆರುನೂರು ಎಂದ  ನೋಡಿಕೊಡ್ರಂತೆ  ಬನ್ನಿ ಸಾರ್  ಎಂದನು.  ಒಂದುವರೆ ಎರಡುಸಾವಿರಕ್ಕೆ ಅವನು ಬರುವಂತೆ ಕಾಣಿಸಿದರೂ ರಿಟರ್ನ್ ಆಗುವಾಗ ಬರುತ್ತೀವಿ ಅಂದೆ. ಬರುವಾಗ ಈ ರೋಡಲ್ಲಿ ನೀವು ಬರಲ್ಲ ಸಾರ್ ಎಂದ. ಆ ರಸ್ತೆಯಲ್ಲಿ ವಾಹನಗಳ ಪ್ರಮಾಣ ಕಡಿಮೆಯೇ ಆಗಿತ್ತು. ಒನ್ ಸೈಡ್ ಸಂಚಾರ ಅಷ್ಟೇ ಇದ್ದದ್ದು.ಅಷ್ಟೊತ್ತಿಗೆ ಎಂಟುವರೆ ಒಂಭತ್ತು ಸಮಯ ಆದ್ದರಿಂದ ಹೊಟ್ಟೆಯು ಸಮಾಧಾನ ಕೇಳುತ್ತಿತ್ತು. ಅದು ಕೆರಳ ತಮಿಳುನಾಡು ಕರ್ನಾಟಕ ಹೀಗೆ ಮೂರು ರಾಜ್ಯಗಳ ಬಾರ್ಡರ್ ನ ಬಿಂದು ಅಗಿತ್ತು.  ರಸ್ತೆಯಲ್ಲಿ ಎದುರಾದ ಬೆಟ್ಟದ ತಪ್ಪಲಿನಲ್ಲಿರುವ ಸುತ್ತಲೂ ಆನೆಗಳು ಬಾರದಂತೆ ಎತ್ತರವಾದ ಪೆನ್ಸಿಂಗ್ ಹಾಕಿದ್ದ ಖಾಸಗಿ ಹೋಟೆಲ್/ರೆಸಾರ್ಟ್ ಒಂದು ಕಾಣಿಸಿತು. ಒಳಗೆ  ಹೋಗಿ ಸಿಕ್ಕಿದ್ದೆಲ್ಲವೂ  ತಿಂದು ಸುಮಾರಾಗಿ ಹೊಟ್ಟೆ ತುಂಬಿಸಿದೆವು. ನಮಗೆ ಯಾರಿಗೂ ತಮಿಳು ಬರುತ್ತಿರಲಿಲ್ಲ. ನನಗೆ ನಲ್ಲ ಇರಕ್ಕ,ತೆರಿಯಾದು,ಸಾಪಾಡ್ ಎಂಬ ಮೂರು ಪದ ಬಿಟ್ರೆ ಏನು ಗೊತ್ತಿಲ್ಲ. ಹೊಟೆಲ್ ನವರಿಗೆ ಊಟಿ ಎಷ್ಟು ದೂರ ಇದೆ ಎಂದರೆ ಅರವತ್ತು ಕಿಮಿ ದೂರದಲ್ಲಿದೆ. ಘಾಟಿ ಇದೆಯಾ ಎಂದು ಕೇಳಿದ್ದಕ್ಕೆ ನಲವತ್ತೈದು ಶಾರ್ಪ್  ಏರ್ಪಿನ್ ಕರ್ವ್ ಇದ್ದಾವೆ. ಐದು ಕಿಮೀ ಮುಂದೆ ಹೋದರೆ   ಘಾಟಿ ರಸ್ತೆ ಶುರು ಎಂದೇಳಿದರು. ದೂರದಲ್ಲಿ  ಪರ್ವತದಂತೆ ಎತ್ತರದ  ಹಸಿರಬೆಟ್ಟದ ಸಾಲು  ಕಾಣುತ್ತಿದೆ.  ಮುಳ್ಳುಗಳ ಕೂಡಿದ ಸಾಧಾರಣ ದಟ್ಟವಾದ ಅರಣ್ಯ. ರಸ್ತೆಯಲ್ಲಿ ಹಾದುಹೋಗುವಾಗ ಬಾರೆ ಗಿಡದಲ್ಲಿ ಒಂದು ಜೇನನ್ನು ನೋಡಿದೆ. ಆನೆ ಇರುವ ರಸ್ತೆಯಲ್ಲಿ ಗಾಡಿ ನಿಲ್ಲಿಸುವ ಹಾಗೆ ಇರಲಿಲ್ಲ. ಆನೆಗಳು ವಾಹನಗಳನ್ನು ಹಿಮ್ಮೆಟ್ಟಿಸುವ  ವೀಡಿಯ ಚಿತ್ರಗಳು ನಾನು ನೋಡಿದ್ದರಿಂದ ಸ್ವಲ್ಪ ಭಯವೂ ಇತ್ತು. ಬೆಟ್ಟದ ಏರು ರಸ್ತೆ ಶುರುವದಾಗ ರಸ್ತೆಯ ತುಂಬೆಲ್ಲಾ ಆನೆ ಲದ್ದಿಯೇ ತುಂಬಿತ್ತು.ಬಹುಶಃ ಅಲ್ಲೆಲ್ಲಾ ಓಡಾಡಿ ಆ ರಸ್ತೆ ಹಿಡಿದು ಹತ್ತಲಾಗದೇ ಹಿಂದೆ ಮುಂದೆ ಓಡಾಡಿರಬೇಕು. ಅದಕ್ಕೇ ಅಷ್ಟೊಂದು ಲದ್ದಿ ಬಿದ್ದಿದೆ ಅನಿಸಿತು. ಅಂತೂ ಇಂತೂ ಮೊದಲನೇ ಏರ್ಪಿನ್ ಕರ್ವ್ ಹತ್ತಿದೆವು. ಕುಮುದಾಳಿಗೆ ಘಾಟಿ ರಸ್ತೆ ಬಂದರೆ ವಾತಾವರಣದ ಏರಿಳಿತಕ್ಕೆ ಬಹುಬೇಗ ಕಿವಿ ದಬಾಕಿಕೊಳ್ಳುವವು.ನನಗೂ ಆಗುವುದಾದರೂ ರಸ್ತೆ ಪಾಚಿಗಟ್ಟಿದ  ಸಿ ಸಿ ರಸ್ತೆ, ಪ್ರತಿ ತಿರುವಿನಲ್ಲೂ ಎಚ್ಚರಿಕೆಯ ಸಂದೇಶಗಳು. ದಟ್ಟವಾದ ಪಶ್ಚಿಮ ಘಟ್ಟಗಳಂತೆಯೇ ಕಾಡು. ಜಿರ್ ಎನ್ನುವ  ಶಬ್ದ.ಕೋತಿಗಳು ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ಒಳಗೆ ಬಗ್ಗಿ ಬಗ್ಗಿ ನೋಡುತ್ತಿದ್ದವು.  ಎತ್ತರಕ್ಕೆ ಏರಿದ ನಮಗೆ ಬಲಗಡೆಗೆ ಆಳವಾದ ಬೆಟ್ಟದ ಕಡಿದು.ಎತ್ತರಕ್ಕೆ ಬರುತ್ತಿದ್ದಂತೆ ಬೆಟ್ಟದಲ್ಲಿರುವ ಮರಗಳ ವೈವಿದ್ಯಮಯ ವಾಗಿದ್ದವು. ಇವು  ಪೈನ್ ಮರಗಳು.ಒಂದು ತೆರನಾದ ಕ್ರಿಸ್ಮಾಸ್ ಮರಗಳಂತೆ ಎತ್ತರ ಮತ್ತು ಎಷ್ಟೋ ವರುಷಗಳ ಪುರಾತನವಾದ ಮರದ ಬೊಡ್ಡೆಗಳು. ಸುಮಾರು  ಹತ್ತು ಹನ್ನೆರಡು ಡಿಗ್ರಿಗಳಷ್ಟು ಉಷ್ಣತೆ ಇರಬಹುದು. ಈ ಪ್ರಿಜ್ ತೆಗೆದಾಗ ತಣ್ಣಗೆ ಗಾಳಿ ನಮಗೆ feel ಆಗತ್ತಲ್ಲ ಅದರ ಹತ್ತರಷ್ಟು ತಣ್ಣನೆಯ ಗಾಳಿ.ಏಪ್ರಿಲ್‌ನಲ್ಲಿ ಗದ ಗದನೆ ನಡುಗುವಂತಹ ವಾತಾವರಣ. ಮೊದಲಿಗೆ ಎದುರಾದದ್ದು ಒಂದು ಜಲಪಾತ. ಐದತ್ತು ನಿಮಿಷಗಳ ಕಾಲ ಇಳಿದು ಹಾಗೇ  ನೋಡಿ ಹಾಗೆ ಹಿಂದಿರುಗಿ ಆ ಕ್ರಿಸ್ಮಸ್ ಟ್ರೀಗಳ ಮದ್ಯೆ  ತಣ್ಣನೆಯ ಗಾಳಿಯಲ್ಲಿ  ಸಾಗುತ್ತಿರುವಾಗ ಸುತ್ತಲೂ ಕಾಣುವ ಹಸಿರರಾಶಿಯ ನಡುವೆ ಚಿಕ್ಕ ಚಿಕ್ಕ ಇಡುವಳಿಗಳಲ್ಲಿ ಬೆಳೆಸಿದ ಕ್ಯಾರೆಟ್ ಗದ್ದೆಗಳು ನೋಡಲು ಅಂದ ಹೆಚ್ಚಸಿದ್ದವು. ಹಾಗೆ ಬರುತ್ತಾ ನಾವು ಆಗಿದ್ದು ಊಟಿಯ ಬಟಾನಿಕಲ್ ಗಾರ್ಡನ್ ಗೆ ನಮ್ಮ ಮೊದಲ ಎಂಟ್ರಿ.

ಬಳ್ಳಾರಿಯ ಬಿಸಿಲಿಗೆ ಬೆದರಿದ್ದ ನಮಗೆ ಆ ತಣ್ಣನೆಯ ಗಾಳಿಗೆ ಕೈ ಕಟ್ಟಿಕೊಂಡು ನಡೆಯುವಂತಾಗುತ್ತಿದೆ.ಸುಂದರವಾದ ಲಾನ್ ನಲ್ಲಿ ಸುತ್ತಮುತ್ತಲೂ ದಟ್ಟವಾದ ಗಾಡ ಹಸಿರಿನ ಗಿಡಗಳ ಮದ್ಯೆ ನಡೆದು ಹೋಗುವಾಗ ಅಹಾ ಹಾ. ಎನ್ನುವಂತಿತ್ತು. ಆ ನೂರಾರು ಎಕರೆಗಳ ಆ ಉದ್ಯಾನವನದಲ್ಲಿ  ಸುತ್ತಲೂ ಓಡಾಡಿ ನೂರಾರು ಪೋಟೋ ತೆಗಿಸಿಕೊಂಡು ಸಾವಿರಾರು ಜಾತಿಯ ಡಿಸೈನ್ ಡಿಸೈನ್ ಅಲಂಕಾರಿಕ ಷೋ ಗಿಡಗಳನ್ನು ನೋಡಿಕೊಂಡು    ಈ ಹುಡುಗರು ಸುತ್ತಾಡಿಕೊಂಡು  ಬರಲು ಹೇಳಿ ನಾನು ಕುಮುದಾ ವಿಶಾಲಮರದ ನೆರಳಿನಲ್ಲಿ ಕುಳಿತೆವು.  ಬಿಸಿಲು ವಿರಳವಾಗಿ ಇತ್ತಾದರೂ ಶೀತಗಾಳಿಯ ಹೊಡೆತ ಹೆಚ್ಚಿಗೆ ಇದ್ದದ್ದರಿಂದ ತುಂಬಾ ಮಳೆಬಂದು ನಿಂತಾಗ ತಣ್ಣನೆಯ ವಾತಾವರಣ ಇರುತ್ತಲ್ಲ ಅಂತಹ ವಾತಾವರಣದಲ್ಲಿ ಕಳೆಯುವ ಸಮಯ ಹೆಚ್ಚು ಆನಂದ ನೀಡಿತು. ರಾತ್ರಿಯು ನಿದ್ದೆ ಸರಿಯಾಗಿ ಆಗದೇ ಇರುವುದರಿಂದ ನಿದ್ರೆ ಬಂದಂತಾಗಿತ್ತು. ಸಮಾರು ಒಂದುವರೆ ಎರಡು ಗಂಟೆಗಳ ಕಾಲ ಸುತ್ತಾಡಿ ಹೊರಗೆ ಬಂದು ನಾವು ಹೋಗಿದ್ದು ಇನ್ನೊಂದು ಸುಂದರವಾದ ಸ್ಥಳ ರೋಜ್ ಗಾರ್ಡನ್ ನೋಡಲು.
ಬಟಾನಿಕಲ್ ಗಾರ್ಡನ್ ನಲ್ಲಿ ಒಂದು ಪೋಟೋ


ಪ್ರವಾಸಿಗರಿಗಾಗಿಯೇ ಅಲ್ಲಿನ ತೋಟಗಾರಿಕಾ ಇಲಾಖೆ ನಿರ್ಮಿಸಿದ ರೋಸ್ ಗಾರ್ಡನ್ ನೋಡಲು ಅಧ್ಬುತ ಮತ್ತು ಸುಂದರ.ಬಟನ್ ರೋಸ್ ಇಂದ ಹಿಡಿದು ಸೂರ್ಯಕಾಂತಿ ಹೂಗಳ ಷ್ಟು ಅಗಲವಾದ ವರ್ಣ ವರ್ಣದ ಹೂಗಳು. ಕಿಲೋಮೀಟರ್ ಗಳು ತಿರುಗಿದರೂ ಹೂವಿನ ತೋಟ  ನೋಡುವುದು ಮುಗಿಯಲಿಲ್ಲ.ಆ ಪುಷ್ಪ ರಾಶಿಯ ನೋಡಿದ ಕುಮುದಾ ಹೂವಿನ ಸ್ವರ್ಗಕ್ಕೇ ತೇಲಿ ಹೋಗಿದ್ದಳು. ಎಲ್ಲಾ ವೆರೈಟಿಗಿಡಗಳನ್ನು ತಗೊಂಡು ಹೋಗಾಣ ರೀ ಎಂದಳು.ತಂದಿರುವುದು ಲಾರಿಯಲ್ಲ ಸಣ್ಣ ಕಾರು ಅದರಲ್ಲಿ ಆಗಲ್ಲ ಅಲ್ಲೆ ಎಲ್ಲಿಯಾದರೂ ಕೊಡಿಸುವೆ ನೆಡಿ ಎಂದು ಸುಟ್ಟು ಮಾರುತ್ತಿದ್ದ ಎರಡು ಮೆಕ್ಕೆಜೋಳ ತಿನ್ನುತ್ತಾ ರೋಸ್ ಗಾರ್ಡನ್ ನಿಂದ ಹೊರ ಬಂದೆವು.
ರೋಸ್ ಗಾರ್ಡನ್ ನ ಒಂದು ನೋಟ

ಹೊರಬಂದವರು ಯಾವುದೋ ಹೋಟೆಲ್ಗೆ ಹೋಗಿ ಸೌಥ್ ಇಂಡಿಯನ್ ಥಾಲಿತೆಗೆದುಕೊಂಡು ಊಟ ಮಾಡಿ ಹೋದದ್ದು  ಬೋಟ್ ಹೌಸಿಗೆ. ಅಲ್ಲಿಯೂ ಎಲ್ಲರೂ ಬೋಟಲ್ಲಿ ಕುಳಿತು  ಒಂದೆರಡು ಕಿಲೋಮೀಟರ್ ಹೋಗಿ ಎಂಜಾಯ್ ಮಾಡಿ ವಾಪಾಸಾದೆವು.

ಬೋಟ್ ಪಯಣದ ಒಂದು ಪಟ.

ನಮ್ಮ ಮುಂದಿನ ಪಯಣ ಶುರುವಾಗಿದ್ದು ದೊಡ್ಡಬೆಟ್ಟ. ಬೆಟ್ಟ ದೊಡ್ಡದು ಅನ್ನುವುದಕ್ಕಿಂತ  ಏರು ದಿಬ್ಬದ ರಸ್ತೆಗಳನ್ನು ಏರಿ ಹೋಗಬೇಕಾಗಿತ್ತು. ಏರಿ ಏರಿ ಅಲ್ಲಿಗೆ ಹೋಗುವಷ್ಟೊತ್ತಿಗೆ ಇಂಜಿನ್ ಹೀಟ್  ಆದ ಮೆಟಲ್  ಮತ್ತು ಟಯರ್ ಸುಟ್ಟಂತಹ ವಾಸನೆ ಎಲ್ಲಕಡೆಯೂ ಹಬ್ಬಿತ್ತು.ಅಲ್ಲಿ ಯಾವಾಗಲೂ ಮಳೆ ಗಾಢವಾದ ಇಬ್ಬನಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ದೊಡ್ಡಬೆಟ್ಟ ಎನ್ನುವುದು ಎತ್ತರದ ಒಂದು ವೀಕ್ಷಣಾ ಗೋಪುರ. ಅರ್ಥಾತ್ ಸುಸೈಡ್ ಪಾಯಿಂಟ್. ಓಡುವ ಮೋಡದ ನೆರಳಲ್ಲಿ ಕಾಣುವ  ಸೊನೆಯಂತಹ ಮಂಜಿನ ನಡುವೆ  ಸುತ್ತಲಿನ  ವಾತವಾರಣ ನೋಡಲು ಒಂಥರಾ ಮಜಾ.ಆ ಚಳಿಗೆ ಅಲ್ಲಿನ ಸ್ಥಳೀಯರು ಮಾರುತ್ತಿದ್ದ snacks ಅಂದರೆ ಕಾರ ಹಚ್ಚಿದ ಶೇಂಗಾ ಕಾಳು,ಉಪ್ಪುಕಾರ ಹಚ್ಚಿದ ಗಿಳಿ ಮೂತಿ ಮಾವಿನ ಕಾಯಿ, ಆಮ್ಲೇಟ್,ಸ್ವೀಟ್ ಕಾರ್ನ ಹೀಗೆ ಅಲ್ಲಿರುವ ಪ್ರತಿಯೊಂದು ತಿನ್ನಬೇಕೆನಿಸಿತಾದರೂ ನಾಳೆ ಇನ್ನೂ ಓಡಾಡಲು ನಮ್ ಬಾಡಿ ಇಂಜಿನ್ ಕಾಪಾಡಿಕೊಳ್ಳುವ ಅನಿವಾರ್ಯ ಇದ್ದುದರಿಂದ ಎಲ್ಲವನ್ನೂ ತಿನ್ನಲಾಗಲಿಲ್ಲ. ಇನ್ನೂ ಪ್ಯಾಮಿಲಿಯಲ್ಲದೇ ಪಡ್ಡೆ ಹುಡುಗರ ಜೊತೆಗೆ ಬಂದವರಿಗೆ ಆ  ವಾತಾವರಣಕ್ಕೆ ಸೂಪರ್ ಕಾಂಬಿನೇಷನ್ . ನನಗೆ ಕಾಡಿದ್ದು ಆ ಸ್ಥಳದ ಹೆಸರು. ತಮಿಳುನಾಡಿನಲ್ಲಿ 'ದೊಡ್ಡಬೆಟ್ಟ'ಎನ್ನುವ ಕನ್ನಡ ಪದ ಹೇಗೆ ಬಂತು ಎನ್ನುವುದು.ಅದರ ಹಿಂದೆ ಬಿದ್ದಾಗ ನನಗೆ ಸಿಕ್ಕ ಮಾಹಿತಿ ಎಂದರೆ ಈಗಿನ ಊಟಿ ಮತ್ತು ಸುತ್ತಮುತ್ತಲಿನ ನಿಸರ್ಗಧಾಮ ಕರ್ನಾಟಕದ್ದೇ ಅಗಿತ್ತು. ಆದರೆ ತಮಿಳುನಾಡಿನ ಸ್ಥಳೀಯ ಸಾಮಂತನೊಬ್ಬ ಮೈಸೂರು ಒಡೆಯರ ಬಳಿ ನಿಮಗೆ ಕರ್ನಾಟಕದಲ್ಲಿ ಎಷ್ಟೊಂದು ನಿಸರ್ಗಧಾಮಗಳಿವೆ  ನಮಗೆ ಇದನ್ನೊಂದು ಬಿಟ್ಡುಕೊಡಿ  ಬೇಕಾದರೆ ನಮ್ಮದು ಮಲೆ ಮಹದೇಶ್ವರ ಬೆಟ್ಟಗಳ ಸುತ್ತಮುತ್ತಲಿನ ಪ್ರದೇಶಗಳು ನೀವು ತಗೋಳಿ ಎಂದಿದ್ದಕ್ಕೆ   ಅದನ್ನ್ನು ಪಡೆದು ಇದನ್ನು ಬಿಟ್ಟುಕೊಟ್ಟಿದ್ದರಂತೆ.ಹಾಗಾಗಿ ಅಲ್ಲಿನ ಬಹುತೇಕ ಹಳ್ಳಿಗಳ ಹೆಸರು ಇಂದಿಗೂ ಕನ್ನಡದ ಅಕ್ಷರಗಳಿಂದ ಕೂಡಿವೆ. ದೊಡ್ಡ ಬೆಟ್ಟದಿಂದ ಕೆಳಗಿಳಿದ ನಾವು ಹೋಗಬೇಕಾಗಿದ್ದು ಕೂನೂರಿಗೆ ಕಾರಿಗೆ ಇಂಧನ ಟ್ಯಾಂಕ್ ಪುಲ್ ಮಾಡಿಕೊಂಡು ಕೂನೂರಿನ ಕಡೆಗೆ. ದಾರಿಯುದ್ದಕ್ಕೂ ಬೆಟ್ಟದ ಮೇಲೇಲ್ಲಾ ಬೆಂಕಿಪೊಟ್ಟಣದಂತಹ ಮನೆಗಳು. ಅದರ ಮೆಲೇಲ್ಲಾ ಜಾಹಿರಾತಿನ ಬರಹಗಳು. ಹಸಿರ ರಾಶಿಯ ಅತ್ಯಂತ ಸುಂದರ  ರೈಲ್ವೇ ನಿಲ್ದಾಣ ಇರುವುದು ಇಲ್ಲಿಯೇ.ಅಲ್ಲಿದ್ದ ಗೆಳೆಯ ನವನೀತನಿಗೆ ಬೆಳಿಗ್ಗೆಯೇ ಎರಡು ರೂಂ ಬೇಕು ಎಂದು ಹೇಳಿದ್ದರಿಂದ ಕೂನೂರಿನ ರೈಲ್ವೆ ಸ್ಟೇಷನ್ ಪಕ್ಕವೇ ರೂಂ ಬುಕ್ ಅಗಿತ್ತು.  ದಣಿದಿದ್ದ ನಾವು ರೂಂ ಗೆ ಹೋಗಿ ಅದಷ್ಟು ಬೇಗ ಮಲಗಬೇಕು ಎಂದು ತೀರ್ಮಾನಿಸಿ ಅಲ್ಲೇ ಯಾವುದೋ ಹೋಟೆಲ್ ಲಿ ಊಟ ಮಾಡಿ ಮಲಗಿದೆವು.

ಊಟಿಯ ಸೌಂದರ್ಯ ಇರುವುದು ಕೂನೂರು ಸುತ್ತಮುತ್ತ. ನಿಜವಾದ ಬ್ಯೂಟಿಫುಲ್ ಸ್ಥಳಗಳು ಇರುವುದು ಇಲ್ಲಿಯೇ.ಸಾಧ್ಯವಾದರೆ ಕೂನೂರಿಗೆ ರೈಲಿನ ಪಯಣ ಅತ್ಯದ್ಭುತ ಅನುಭವವನ್ನು ನೀಡುವುದು. ಸಾದ್ಯವಾದರೆ ಒಮ್ಮೆ ಪ್ರಯತ್ನಿಸಿ.
ಸುಂದರವಾದ ಕಣ್ಣಿಗೆ ಕಾಣುವಷ್ಟು ಉದ್ದಗಲದ  ಹಚ್ಚಹಸುರಿನ ಮನಸ್ಸಿಗೆ ಮುದ ನೀಡುವ ಟೀ ಎಸ್ಟೇಟ್ ಗಳು ಇರುವುದು ಇಲ್ಲೇ.ಡಾಲ್ಫಿನ್ ನೋಸ್ ಎಂಬ ಸ್ಥಳ ಕ್ಕೆ ಹೋಗುವಾಗ ಸುಂದರ ಟೀ ತೋಟಗಳಲ್ಲಿ ಪೊಟೋ ತೆಗೆಸಿಕೊಂಡೆವು.

ಮುಂದೆ ಬರುವಾಗ ಟೀ ಎಸ್ಟೇಟ್ ಮದ್ಯದಲ್ಲಿ  ಯಾವುದೋ ಗಾಡಿಗೆ ಸಿಕ್ಕು ಮುಳ್ಳು ಹಂದಿಯೊಂದು ಸತ್ತೋಗಿತ್ತು.ಆ ಮುಳ್ಳು ಆಯ್ದುಕೊಂಡು ಮತ್ತೆರಡು ಡಾಲ್ಪಿನ್ ನೋಸ್ ಮೌಂಟೆನ್ ವ್ಯೂ...ಎಂಬ ಸುಂದರ ವೀಕ್ಷಣಾ ಗೋಪುರ ಅಲ್ಲ ಅಲ್ಲ ಸುಸೈಡ್ ಪಾಯಿಂಟ್ ನೋಡಿಕೊಂಡು ಊಟಿಯ ದೊಡ್ಡ ದೊಡ್ಡ  ಪೈನ್ ಮರಗಳ ಮದ್ಯೆ ಇರುವ ನಾವು ಹೆಚ್ಚು ಫಿಲಂ ಗಳಲ್ಲಿ ನೋಡುವ ಸರೋವರಕ್ಕೆ ಬಂದೆವು. ಮುಗಿಲೆತ್ತರದ ಮರಗಳು. ಅವುಗಳ ಬುಡ ನಾಲ್ವರು ಒಟ್ಟಿಗೆ ಅಪ್ಪಿಕೊಂಡರೂ ಸಿಗದಷ್ಟು ದಪ್ಪ. ಸುಂದರ ಸರೋವರದ ತಟದಲ್ಲಿ ನಾನು ಮಗಳು ಹಾರ್ಸ್ ರೈಡಿಂಗ್ ಮಾಡಿದೆವು.
 

ಇದೊಂದು ಅದ್ಬುತ ಸ್ಥಳ.. ಹಿಂದಿನ ಚಲನಚಿತ್ರಗಳ ಸಾಮಾನ್ಯ ಸ್ಥಳ. ಕಣ್ಮನ ತೃಪ್ತಗೊಳ್ಳುವ ತಾಣಗಳು.ಹಿಂದಿರುಗವ ಸಮಯ ಆದುದರಿಂದ


   ನೀಲಗಿರಿಯ ದಟ್ಟಕಾಡುಗಳ ಮದ್ಯೆ ಇಳಿದು ಪುನಃ ಕೇರಳದ ಗುಡ್ಲೂರಿನಿಂದ ಬಂಡೀಪುರ ಅಭಯಾರಣ್ಯಕ್ಕೆ  ಅಲ್ಲಿನ ಚೆಕ್ ಪೊಸ್ಟ್ ಬಳಿ ಇದ್ದ ಬಿಸಿ ಬಿಸಿ ಬಾಳೆಕಾಯಿ ಬಜ್ಜಿ ತಿಂದು ಎಂಟ್ರಿ ಕೊಟ್ಟೆವು.ಸಂಜೆ ನಾಲ್ಕರ ಸಮಯ  ನಿಧಾನವಾಗಿ ಬರುವಾಗ ಅಸಂಖ್ಯಾತ ನವಿಲು ಸಾರಂಗಗಳು ಕಂಡವು. ಈಗಲೂ ಬುಡಕಟ್ಟು ಜನಾಂಗದವರು ಅಲ್ಲಿ ವಾಸ ಇದ್ದಾರೆ. ಬರುವಾಗ ದೊಡ್ಡ ಹಸುವಿನಂತಹ  ಸಾಂಬಾರು ಕಡವೆ ನೊಡಿದೆವು. ಕಾಡುಕೋಣಗಳ ನೋಡಿದೆವು. ಆದರೂ ಮೊದಲದಿನ ಕಂಡಷ್ಟು ಜಿಂಕೆಗಳು ಕಾಣಲಿಲ್ಲ . ಬಹುಶಃ ಆಹಾರ ಅರಸಿ ಕಾಡಿನೊಳಗೆ ಹೋಗಿರಬೇಕು.

ಲೇಖನ ಮುಗಿಸುವ ಮುನ್ನ  ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸ್ವತಂತ್ರವಾಗಿ ಸಾವಿರಾರು ನವಿಲು ಸಾರಂಗ,ಆನೆ, ಹುಲಿ ಚಿರತೆಗಳು ಓಡಾಡಿಕೊಂಡಿರುವ ಕಾಡು. ಈ ಪ್ರಾಣಿಗಳು ಅಧುನಿಕ ದುಷ್ಟರ ಕಪಿಮುಷ್ಟಿಗೆ ಸಿಕ್ಕು ಎಷ್ಟು ದಿನ ಇರುತ್ತಾವೋ ಗೊತ್ತಿಲ್ಲ. ದಯಮಾಡಿ ಆದಷ್ಟು ಬೇಗ ಜೀವನದಲ್ಲಿ  ಒಮ್ಮೆಯಾದರೂ ಇದನ್ನು ನೋಡಿ ಕಣ್ತುಂಬಿಕೊಳ್ಳಿ.  ತಮಿಳುನಾಡು ಕಡೆ ಊಟದ ರುಚಿ ಅಷ್ಟಾಗಿ  ನಮಗೆ ರುಚಿಸದು. ಅದು ಒಂಥರಾ ಡ್ನ್ನೈ ಪುಡ್... ರುಚಿನೂ ಅಷ್ಟಕಷ್ಟೇ.ಮನೆಯಿಂದ ಏನಾದರೂ ತಗೊಂಡು ಹೋದರೆ ಉತ್ತಮ.ಹಾಗೆ ಪ್ರಾಣಿಗಳು ಪಕ್ಷಿಗಳು ಗಿಡಮರಗಳನ್ನು ಉಳಿಸುವ ಜವಾಬ್ದಾರಿಯೂ ನಮ್ಮ ಮೇಲೆ ಇದೆ.ಮದುಚಂದ್ರಕ್ಕೆ ಊಟಿ ಹೇಳಿಮಾಡಿಸಿದ ತಾಣ.  ಮದುವೆಯಾಗದವರು ಮದುಚಂದ್ರಕ್ಕೆ ಊಟಿಗೆ ಹೋಗಲು ಪ್ರಯತ್ನಿಸಿ,   ಮದುವೆಯಾದವರೂ ಪತ್ನಿಯೊಂದಿಗೆ,ಮಕ್ಕಳೊಂದಿಗೆ ಒಂದು ಸಲವಾದರೂ ಊಟಿ ನೋಡಲೇಬೇಕು..
ಮತ್ತೊಮ್ಮೆ ಜೇಬು ಭದ್ರಪಡಿಸಿಕೊಂಡು ಮೂರ್ನಾಲ್ಕು ದಿನ ಊಟಿಗೆ ಹೋಗುವ ಯೋಚನೆ ಇದೆ. ಹೋಗ್ತೀವಿ..

✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

  1. ಪ್ರವಾಸ ಕಥನ ಉತ್ತಮವಾಗಿದೆ.. ಲೇಖನ ಓದಿದ ನಂತರ ಒಮ್ಮೆಯಾದರೂ ಹೋಗಿ ಬರಬೇಕು ಅನಿಸ್ತಿದೆ ಗುರುಗಳೆ....😇

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಬಿಡುವು ಮಾಡಿಕೊಂಡು ಬರಹ ಓದಿದ್ದಕ್ಕೆ ಧನ್ಯವಾದಗಳು. ಒಂಟಿಯಾಗಿ ಬೇಡ ಜಂಟಿಯಾಗಿ ಹೋಗಿ ಬನ್ನಿ ..

      ಅಳಿಸಿ
  2. ನಾವು ಡಿಸೆಂಬರ್ ಲಾಸ್ಟ್ ವೀಕ್ ನಲ್ಲಿ ಹನಿಮೂನ್ ಗೆ ಊಟಿ ಗೆ ಹೋಗಿದ್ದೆವು.

    ಪ್ರತ್ಯುತ್ತರಅಳಿಸಿ
  3. ಊಟಿ ತುಂಬಾ ರಮಣೀಯವಾದ ಸ್ಥಳಗಳಲ್ಲಿ ಒಂದು, ನಿಮ್ಮ ಈ ಪ್ರವಾಸ ಕಥನ ಬಟಾನಿಕಲ್ ಗಾರ್ಡನ್ ನಲ್ಲಿ ನಾನು ಈ ಹಿಂದೆ ಸವಿದ ಕ್ಷಣಗಳನ್ನು ಮತ್ತೆ ನನ್ನ ಸ್ಮೃತಿ ಪಟಲದಲ್ಲಿ ರಾರಾಜಿಸುವಂತೆ ಮಾಡಿದೆ ಸರ್

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..