ಕೋವಿಡ್ ಲ್ಲಿ ಕೂಲಿಕಾರ್ಮಿಕರು ಮತ್ತು ಆಟೋ,ಟ್ಯಾಕ್ಸಿ ಡ್ರೈವರ್ ಗಳ ಸ್ಥಿತಿ..
ಆಟೋ ಡ್ರೈವರ್ ಹೇಳಿದ ಜೀವನ ಕಥೆ.
ಕಳೆದ ತಿಂಗಳು ನಾನು ನನ್ನ ಕಾರನ್ನು ಸರ್ವಿಸ್ ಗೆ ಬಿಟ್ಟು ಮನೆಗೆ ಹಿಂದಿರುಗಬೇಕಿತ್ತು. ಮನೆ ಅಲ್ಲಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿತ್ತು. ಅಲ್ಲಿಂದ ಮನೆಗೆ ಬರಲು ನೂರು ಮೀಟರ್ ಗಳಷ್ಟು ನಡೆದು ಬರುತ್ತಿದ್ದೆ.ಕೊರೋನಾ ಇತ್ತಾದರೂ ಲಾಕ್ಡೌನ್ ಇರಲಿಲ್ಲ. ಆಗ ಸುಮಾರು ಐವತ್ತು ವರ್ಷದ ವ್ಯಕ್ತಿಯೊಬ್ಬರು ಆಟೋ ಚಲಾಯಿಸಿಕೊಂಡು ಬಂದರು. ನನ್ನ ನೋಡಿ ಸ್ಲೋ ಮಾಡಿ ಎಸ್ ಪಿ ಸರ್ಕಲ್ ಸಾರ್ ಎಂದನು. ನಾನು ಇನ್ನೂ ಸ್ವಲ್ಪ ನಡೆಯುವ ಯೋಚನೆ ಇದ್ದರೂ ಅವರಾಗಿಯೇ ಬಂದು ಕೇಳಿದರು ಅಲ್ಲದೇ ಖಾಲಿ ಬೇರೆ ಹೋಗುತ್ತಿದ್ದ ಎಂದೇಳಿ ಎಷ್ಟು ಕೊಡಲಿ ಅಣ್ಣಯ್ಯ ಎಂದಿದ್ದಕ್ಕೆ "ಹತ್ತು ರುಪಾಯಿ ಕೊಡಿ ಸಾರ್" ಎಂದನು. ಸುಮಾರು ಎರಡು ಕಿಲೋಮೀಟರ್ ಆ ಸ್ಥಳ. ಆ ವ್ಯಕ್ತಿಯ ಯೂನಿಪಾರ್ಮ್ ಅಂಗಿಯ ಕಾಲರ್ ಹರಿದು ಹೋಗಿತ್ತು.ಹಾಗೆ ಮಾತಿಗೆಳೆದೆ.
ದಿನಕ್ಕೆ ಎರಡು ಸಾವಿರ ಆಗತ್ತಾ ?
ನಗುತ್ತಾ ಹಿಂತಿರುಗಿ ನೋಡಿ "ಎಲ್ಲಿ ಸಾರ್ ನಾನ್ನೂರು ಐನೂರು ಆದರೆ ಅದೇ ದೊಡ್ಡದು ಅದರಲ್ಲೂ ನೂರೈವತ್ತು ಇನ್ನೂರುಪಾಯಿ ಗ್ಯಾಸ್ ಗೆ ಹೋಗತ್ತೆ ಸಾರ್. ಒಂದು ಕಾಲ ಇತ್ತು ಎರಡು ಸಾವಿರ ಆಗುತ್ತಿತ್ತು ಈಗ ಅದೆಲ್ಲಾ ಕನಸು ಸಾರ್" ಎಂದು ಬೇಸರದಿ ನುಡಿದನು.
ಏನ್ಮಾಡಕ್ಕಾಗತ್ತೆ ಅಣ್ಣಯ್ಯ ನಿನ್ನದು ಆಟೋ ಆದರೂ ಇದೆ ದಿನಕ್ಕೇ ನೂರೋ ಇನ್ನೂರೋ ದುಡಿತೀಯಾ ಇನ್ನೂ ಕೆಲವರು ಮಾಡಕೆ ಕೆಲಸ ಇಲ್ಲದೇ ಮನ್ಯಾಗ ಆಡ್ಕಂಡ್ ಕುಂತಾರೆ ಖುಷಿ ಪಡು ಅಂದೆ. ಅಷ್ಟೊತ್ತಿಗೆ ನನ್ನ ನಿಲ್ದಾಣ ಬಂದದ್ದರಿಂದ ನಾನು ಇಳಿದುಕೊಂಡು ಬಳ್ಳಾರಿಯ ಎಸ್ ಪಿ ಸರ್ಕಲ್ ನ ಇನ್ಪ್ಯಾಂಟ್ರಿ ರಸ್ತೆಗೆ ಬಂದು ಅಲ್ಲೊಂದು ಪತಂಜಲಿ ಸೂಪರ್ ಶಾಪ್ ಒಳಗೆ ಹೋಗಿ ಅಮ್ಮನಿಗೆ ಬೇಕಾಗಿದ್ದ ಬಿ ಪಿ ಮಾತ್ರೆ ತೆಗೆದುಕೊಂಡು ಹೊರಗೆ ಬಂದು ನಿಂತೆ. ಹತ್ತಾರು ಆಟೋಗಳು ಬಂದವಾದರೂ ನಾನು ಹಾಗೆ ಯೋಚನೆ ಮಾಡುತ್ತಾ ಮನೆಯಲ್ಲೂ ಯಾರೂ ಇಲ್ಲ ಮನೆಗೆ ಹೋಗುವುದೋ ಬಿಡುವುದೋ ಇಲ್ಲೇ ಎಲ್ಲಿಯಾದರೂ ಇದ್ದು ನಾಲ್ಕು ಗಂಟೆಯಷ್ಟೊತ್ತಿಗೆ ಸರ್ವೀಸ್ ಆಗಿ ವೆಹಿಕಲ್ ರೆಡಿಯಾಗತ್ತೆ ಏನು ಮಾಡುವ ಎಂಬ ಜಿಜ್ಞಾಸೆಯಲ್ಲಿ ನಿಂತಿದ್ದಾಗ ಮತ್ತೊಂದು ಆಟೋ ಬಂದು ನಿಂತು ಓ ಪಿ ಡಿ, ಸುಧಾ ಕ್ರಾಸ್ ಸಾರ್ ಎಂದ. ಒಳಗೆ ಒಬ್ಬ ಪ್ರಯಾಣಿಕರಿದ್ದರು.ತಲೆ ಎತ್ತಿ ನೋಡಿದರೆ ಅದಕ್ಕೂ ಮುಂಚೆ ನಾನು ಬಂದ ಆಟೋ. ಅದೇ ಡ್ರೈವರ್! ನಾನು ಏನೂ ಮಾತಾಡದೇ ಹತ್ತಿದೆ.
ಬಾಡಿಗೆ ಸಿಕ್ಕಿತಾ ಅಣ್ಣಯ್ಯ?
ಹ್ಞು ಸಾರ್. ಹೋಡಿ ಬೇಕಲ್ಲ ಜೀವನ ನಡೆಯಂಗಿಲ್ಲ ಇಲ್ಲಂದರೆ ಅಂದ.
ಮತ್ತೆ ಜೀವನ ಹೆಂಗೆ ಮತ್ತೆ ನಿಮ್ಮದು ಎಷ್ಟು ಜನ ದುಡಿಯಾರು ಮನೇಲಿ? ಅಂದೆ
ನಾನು ಒಬ್ಬನೇ ಸಾರ್. ಮನ್ಯಾಗೆ ಹೆಣ್ಣುಮಕ್ಕಳು ಪಂಕ್ಷನ್ ಹಾಲ್ ಗೆ ಕೆಲಸಕ್ಕೆ ಹೋಗುತ್ತಿದ್ದರು ಈಗ ಎರಡು ವರ್ಷಗಳಾಯಿತು. ಅವರೂ ಹೋಗಂಗಿಲ್ಲ.
ತರಕಾರಿ ರೇಟ್ ಕೇಳಿದ್ರೆ ಎಲ್ಲವೂ ನಲವತ್ತು ಐವತ್ತು ರುಪಾಯಿ ಸಾರ್ ಅದಕ್ಕೆ ಮಧ್ಯಾಹ್ನ ಊಟಕ್ಕೆ ಹೋಗುವಾಗ ಅರ್ಧ ಲೀಟರ್ ಮೊಸರು ತಗೊಂಡೋದ್ರೆ ಸ್ವಲ್ಪ ನೀರು ಹಾಕ್ಯಂಡ್ ಎಲ್ಲರೂ ಅದರಲ್ಲೇ ಉಂಬುತ್ತೀವಿ ಸಾರ್ .ಮತ್ತೆ ಎಣ್ಣೆ ಗಿಣ್ಣೆ ಹೊಡೆಯುವರಾದ್ರೆ ಅದೂ ಇಲ್ಲ. ಹೆಂಡತಿ ಮಕ್ಕಳು ಉಪವಾಸ ಸಾಯಬೇಕು ಅಂದನು.
ಅಷ್ಟೊತ್ತಿಗೆ ಸುಧಾ ಕ್ರಾಸ್ ಬಂದು ಮೊದಲಿದ್ದ ಪ್ರಯಾಣಿಕ ಇಳಿದ ನಾನು ಕುವೆಂಪು ನಗರ ನೆಡಿರಿ ಅಂದೆ.
ಎಷ್ಟು ವರ್ಷದಿಂದ ಓಡಿಸುತ್ತಿದ್ದೀರಿ ಅಂದೆ ಇಪ್ಪತ್ತು ವರ್ಷದಿಂದ ಓಡಿಸುವೆ ಅಂದ
ಇಪ್ಪತ್ತು ವರ್ಷಗಳಿಂದ ಆಟೊ ಓಡಿಸಿ ಹಂಗೇ ಇದ್ದೀರಾ? ಅಂದೆ ಏನ್ಮಾಡೋದು ಸಾರ್ ದೇವರು ನಮ್ಮನ್ನ ಹಿಂಗೆ ಇಟ್ಟುಬಿಟ್ಟ.
ಹೋದ ಬಾರಿ ಲಾಕ್ ಡೌನ್ ಲ್ಲಿ ಸರ್ಕಾರದವರು ಆಟೋ ಡ್ರೈವರ್ ಗಳಿಗೆ ದುಡ್ಡು ಕೊಟ್ರಲ್ಲ ಬಂತಾ?
ನಮ್ಮಂತರ ಕೈಗೆ ಅದೆಲ್ಲಿ ಸಿಗತ್ತೆ ಸಾರ್. ಮೂರು ಸಾವಿರ ತಗಳಾಕೆ ಎರಡುಸಾವಿರ ಖರ್ಚ್ಮಾಡ್ಕಬೇಕು ಅದೂ ಬಂದರೆ ಬಂತು ಇಲ್ಲ ಅಂದರೆ ಅದೂ ಇಲ್ಲ.ಅದ್ಕೆ ಅದರ ಸುದ್ದಿಗೆ ಹೋಗಿಲ್ಲ ಅಂದ.
ಅಲ್ಲಿಗೆ ನನಗೆ ಮಾತು ಬರಲಿಲ್ಲ.
ಸಾರ್ ಈ ರೈಲ್ವೆ ಸ್ಟೇಷನ್, ಬಸ್ ನಿಲ್ದಾಣದಲ್ಲಿ ಬಡವರಿಗೆ ಅನ್ನ ನೀರು ದಾನ ಮಾಡುತ್ತಿದ್ದಾರಲ್ಲ ಒಳ್ಳೇದೇನು ಸಾರ್ ಅದು ಅಂದ.
ಹ್ಞು ಒಳ್ಳೆಯದಲ್ವ ಮತ್ತೆ?ಹಸಿದುಕೊಂಡು ಇರೋರಿಗೆ ತುತ್ತು ಅನ್ನ ಕೊಟ್ರೆ ಏನು ತಪ್ಪಿಲ್ಲ ಒಳ್ಳೆಯದು ಅಣ್ಣಯ್ಯ ಅಂದೆ.
ಸಾರ್ ನನ್ ಹಿಂದೆ ಬನ್ನಿ ಅವರೆಲ್ಲಾ ಡಬಲ್ 420 ಗಳು ಸಾರ್ ಅಂದ.
ಯಾಕಪ್ಪ ಹಂಗಂತೀಯಾ?
ಅವರೆಲ್ಲಾ ಬಡವರಿಗೆ ದುಡ್ಡುಕೊಟ್ಟು ದಿನಕ್ಕೇ ನೂರಕ್ಕೇ ಐದು ರುಪಾಯಿ ಹತ್ತು ರುಪಾಯಿ ಬಡ್ಡಿ ವಸೂಲಿ ಮಾಡೋರು ಸಾರ್. ಅವರತ್ರ ಸಾಲ ಮಾಡಿದವರು ಮನೆ ಮಠ ಕಳ್ಕಂಡು ಊರೆ ಬಿಟ್ಟೋಗಿ ಬಿಟ್ಟರು. ಬಡವರ ರಕ್ತ ಹೀರಿ ದುಡ್ಡು ಸಂಪಾದಿಸಿ ಈಗ ಊಟ ನೀರು ಕೊಟ್ಟರೆ ಏನು ಒಳ್ಳೆಯದು ಸಾರ್.
ಅಷ್ಟಾದರೂ ಮಾಡುವ ಒಳ್ಳೇತನ ಬಂದೀತಲ್ಲಾ ಹೋಗ್ಲಿಬಿಡಿ ಅಂದೆ.
ಎಲ್ಲಿ ಒಳ್ಳೆತನ ಸಾರ್.?
ಅನಾಥರಿಗೆ ಬಡವರಿಗೆ ಅನ್ನ ಕೊಡುತ್ತೀವಿ ಅಂತ ನಿಮ್ಮಂಥವರತ್ರ ದಾನ ಇಸ್ಕೊಂಡು ಅರ್ಧ ಭಾಗ ಖರ್ಚು ಮಾಡಿ ಬಡವರಿಗೆ ಅನ್ನ ದಾನ ಮಾಡ್ತೀವಿ ಅಂತ ನಾಟಕ ಮಾಡ್ತಾರೆ. ಅಂದ.
ಅಂತವರೂ ಇದ್ದಾರ?ಅವರವರ ಧರ್ಮ ಕರ್ಮ ಅವರನ್ನು ಕಾಯುತ್ತೆ ಬಿಡಿ ಎಂದು ಹೇಳುವ ಹೊತ್ತಿಗೆ ಮನೆ ಬಂತು.
ಸಾಮಾನ್ಯವಾಗಿ ನಮ್ಮ ಏರಿಯಾಗೆ 60-80 ಆಟೋ ಚಾರ್ಜ್ ಇದ್ದದ್ದು ನೂರರ ನೋಟು ಕೊಟ್ಟೆ. ಎಡಗೈಯಲ್ಲಿ ಹಿಡಿದುಕೊಂಡು ಬಲಗೈಯಲ್ಲಿ ಜೇಬಿನಿಂದ ಚಿಲ್ಲರೆ ತೆಗೆಯಲು ಕೈ ಹಾಕಿದ ಇರಲಿ ಇಟ್ಕೊ ಅಣ್ಣಯ್ಯ ಹೋಗ್ ಬಾ ಓಳ್ಳೆಯದಾಗಲಿ ಎಂದೇಳಿ ಕಳಿಸಿ ಗೇಟ್ ಬೀಗ ತೆಗೆದು ಮೇಯಿನ್ ಡೋರ್ ತೆಗೆಯದೆ ಹೊರಗಡೆನೇ ಮೆಟ್ಟಿಲ ಮೇಲೆ ಕುಳಿತೆ.
ಛೀ ಅನ್ನದಾನ ಮಾಡುವೆವು ಎಂದೇಳಿ ಅದರಲ್ಲೂ ದುಡ್ಡು ಉಳಿಸಿಕೊಳ್ಳುವ ಂತಹ ನೀಚರೂ ಇದ್ದಾರ ಎಂದು ಬೇಸರ ಆಯಿತು. ಕೆಲವರು ತಮ್ಮ ಬೆವರಿನ ದುಡ್ಡು ಖರ್ಚು ಮಾಡಿಕೊಂಡು ದಾನ ಧರ್ಮ ಮಾಡುತ್ತಿದ್ದಾರೆ. ಇಂತಹವರ ಮದ್ಯದಲ್ಲಿ ಬಡವರ ಅನ್ನದ ಹೆಸರಲ್ಲೂ ತಮ್ಮ ಹೊಟ್ಟೆಯ ತುಂಬಿಸಿಕೊಳ್ಳುವ ನೀಚರು ಇದ್ದಾರಲ್ಲಾ ನಮ್ಮ ಸಮಾಜದಲ್ಲಿ ಎಂದು ಬೇಸರ ಆಯಿತು. ಕಷ್ಟ ಪಟ್ಟು ನೂರು ರುಪಾಯಿ ದುಡಿಯುವ ಕೂಲಿ ಕಾರ್ಮಿಕನೆಲ್ಲಿ ಈ ಬೆಣ್ಣೆಯ ಮಾತು ಮಾತಾಡಿ ಹಣ ಕಬಳಿಸುವ ದುಷ್ಟರೆಲ್ಲಿ? ಛೇ ಪಾಪಿಗಳು. ಆಗ ನನಗನಿಸಿದ್ದು ದಾನವಾಗಿ ಏನಾದರೂ ಕೊಟ್ಟರೆ ಅದು ಧನರೂಪದಲ್ಲಿ ಕೊಡದೇ ನೇರವಾಗಿ ಇಲ್ಲದವರಿಗೆ ಸದುಪಯೋಗ ವಾಗುವಂತಹ ವಸ್ತವಿನ ರೂಪದಲ್ಲಿ ಕೊಡಬೇಕು ಎಂದೆನಿಸಿ ಮನೆಯ ಒಳಗಡೆ ಬಂದೆ.
ಪ್ರಪಂಚ ತುಂಬಾ ವಿಚಿತ್ರವಾಗಿದೆ. ನಮಗೆ ಅರಿವಿಗೆ ಬಾರದಂತಹ ಅದೆಷ್ಟೋ ಕ್ರೂರ ವಿಷಯಗಳು ಅವ್ಯಾಹತವಾಗಿ ಸಮಾಜದಲ್ಲಿ ನಡೆಯುತ್ತಿವೆ. ಆದರೂ ಬಡವರ್ಗದವರ ಜೀವನ ಇಂದಿಗೂ ಶೋಚನೀಯವಾಗಿದೆ. ಅದ್ಯಾವಾಗ ಸುಧಾರಿಸತ್ತೋ???
✍️ ನಾಗೇಂದ್ರ ಬಂಜಗೆರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ