ಐಸ್.. ಐಸ್..



ನಮ್ಮದು ವಲಸೆ ಮತ್ತು ತಿಮ್ಮಣ್ಣನಹಳ್ಳಿಗಳ ಮದ್ಯದಲ್ಲಿ ಇರುವ ತೋಟದ ಮನೆ.ಎರಡೂ ಹಳ್ಳಿಗಳೂ ಸಮ ಸಮಾನ ಅಂತರ  ಯಾವುದು ಹೆಚ್ಚು ಇಲ್ಲ ಕಡಿಮೆಯೂ ಇರಲಿಲ್ಲ. ಅದು ಗ್ರಾಮೀಣ ರಸ್ತೆ ನನಗೆ ಬುದ್ದಿ ಬರುವುದಕ್ಕೆ ಮುಂಚಿನಿಂದಲೂ ಅದು ಡಾಂಬರ್ ರಸ್ತೆಯೇ ಆಗಿತ್ತು. ಆಗೊಂದು ಈಗೊಂದು ಬಸ್ ಗಳೂ ಓಡಾಡುತ್ತಿದ್ದವು.

ನನ್ನದೂ  ರಜೆಯ ದಿನಗಳು ಅನಿವಾರ್ಯವಾದರೆ ಇತರೆ ದಿನಗಳಲ್ಲೂ ದನಗಳು/ಎತ್ತುಗಳನ್ನು ಮೇಯಿಸುವುದು ಸಾಮಾನ್ಯವಾಗಿತ್ತು. ಹೀಗೆ ದನಗಳ ಹಿಡಿದು ಮೇಯಿಸುವಾಗ ಎರಡೂ ಹಳ್ಳಿಗಳ  ಪೈಕಿ ಯಾವುದೇ ಒಂದು ಹಳ್ಳಿಯಿಂದ 'ಪೊಂ..' ಎಂಬ ಶಬ್ಧ ಕೇಳಿದ ತಕ್ಷಣ ನಾನು ರಸ್ತೆಯಿಂದ  ಎಷ್ಟೇ ದೂರ ಇದ್ದರೂ,  ನಮ್ಮ ದನಗಳು ಮೆಯ್ಯದೇ ಇದ್ದರೂ ನಾನು ಮಾತ್ರ ರಸ್ತೆಯ ಪಕ್ಕಕ್ಕೆ ಹಾಜರ್! ದನಗಳು ಪರ ಪರ ಎಂದು ಹುಲ್ಲು ಕಿತ್ತು ತಿನ್ನುವ ಶಬ್ಧದ ನಡುವೆ ನಮ್ಮ ಪುಲ್ ಕಾನ್ಸನ್ಟ್ರೇಟಿಂಗ್ ಇದ್ದದ್ದು ಆ "ಪೋಂ" ಎಂಬ ಶಬ್ದದ ಮೇಲೆ. ಅವನೋ ಊರೆಲ್ಲಾ ಸುತ್ತಾಡಿಕೊಂಡು ಗ್ರಾಮದ ಅಂಚಿಗೆ ಬಂದಾಗ ಐಸ್ ಗಿರಾಕಿಗಳಿಗೆ ಒಂದೆರಡು ಬಾರಿ ಜೋರಾಗಿಯೇ ಪೊಂ ಎಂದು  ಕೂಗಿ ಯಾರಾದರೂ ಹುಡುಗರು ಏನಾದರೂ ಹಿಡಿದು ತರುವರೇನೋ ಎಂದು ಹಿಂದೆ ತಿರುಗಿ ನೋಡಿ ನೋಡಿ ಬರುತ್ತಿದ್ದ. ಆ ತರ ಕೂಗುವ ದ್ವನಿ ಬಂದರೆ ಇನ್ನೂ ಕೆಲವೇ ನಿಮಿಷಗಳಲ್ಲಿ ಅವನು ಬರುವವನಿದ್ದರಿಂದ ಅವನು ರಸ್ತೆಯಲ್ಲಿ ಹಾದು ಹೋಗುವಾಗ ಯಾವುದೇ  ರೀತಿಯಿಂದಲೂ ತಪ್ಪಿಸಿಕೊಂಡು ಹೋಗದಂತೆ ಹದ್ದಿನಕಣ್ದಿಟ್ಟು ಕಾಯುತಲಿದ್ದೆವು.ಕೆಲವೊಮ್ಮೆ ಕೂಗುತ್ತಾ ಬೆನ್ನತ್ತಿ ಓಡುತ್ತಾ ಹಿಂಬಾಲಿಸಿ ಹೋಗಿ ಐಸ್ ಪಡೆದು ಬರುತ್ತಿದ್ದೆ.ಆ ಐಸ್ ಮಾರುವವರು ನಮ್ಮ ಊರಿನವರೇ ಆಗಿದ್ದರಿಂದ ವಾರದಲ್ಲಿ ಕನಿಷ್ಟ ಎರಡು ಬಾರಿಯಾದರೂ ಆ ಲೈನ್ಗೆ ಬಂದೇ ಬರುತ್ತಿದ್ದರು.ಅದಕ್ಕಾಗಿ ಯಾರೋ  ಕ್ವಾರ್ಟರ್ ಎಣ್ಣೆ ಹೊಡೆದು ಕಿಕ್ ತಗಂಡು ಎಸೆದ ಖಾಲಿ ಕ್ವಾರ್ಟರ್ ಬಾಟಲ್ ಕೊಟ್ಟು   ತಣ್ಣನೆಯ ಬಾರ್ ಐಸ್ ತಿಂದು ನಾವೂ ಕಿಕ್ ತೆಗೆದುಕೊಳ್ಳುತ್ತಿದ್ದೆವು.ಪುಲ್ ಬಾಟಲ್ಗಾಗಿ ಕುಡುಕರು ಎಷ್ಟು ಹಾತೊರೆದು ಗಿಟ್ಟಿಸಿಕೊಳ್ಳುತ್ತಿದ್ದರೋ ನಮಗೂ ಖಾಲಿ ಬಾಟಲ್ ಪಡೆಯಲು ಅಷ್ಟೇ ಪ್ರಯಾಸದಾಯಕವಾಗಿತ್ತು.ಖಾಲಿ ಬಾಟಲ್ ಅಷ್ಟೇ ಅಲ್ಲ ಏನಾದರೂ ಕೊಟ್ಟು ಐಸ್ ಪಡೆಯಬಹುದಾದ ಗುಜ್ರಿ ವಸ್ತುಗಳು ಎಲ್ಲಿಯಾದರೂ ಅವಿತಿಟ್ಟು ಐಸ್ಗೆರೆ ಬರುವುದನ್ನು ಕಾಯುತ್ತಲೇ ಇದ್ದೆವು. ಐಸ್ ತಿನ್ನುವುದು ಒಂದು ಚಪಲವೇ ಅಗಿತ್ತು

ಊರೊಳಗೆ ಯಾರಾದರೂ ಲೋಕಲ್ ಲಿಕ್ಕರ್ ಶಾಪ್ ಇಂದ ನಮ್ಮ ಕೈಯಲ್ಲಿ ಕೆಲವರು ಕ್ವಾರ್ಟರ್ ಬಾಟಲ್ ತರಿಸುತ್ತಿದ್ದರು. ಅಂತಹವರೊಂದಿಗೆ  ಬಹಳಷ್ಟು ಬಾರಿ ನಾನು ಖಾಲಿ ಬಾಟಲ್ ನನ್ದು ಎಂಬ ಒಪ್ಪಂದಕ್ಕೆ ಒಪ್ಪಿದ ಮೇಲೆಯೇ ಅವರಿಗೆ 'ಗಡಂಗ್' ತಂದುಕೊಟ್ಟು ಆಮೇಲೆ ಅವರು ಕುಡಿದು ತೂರಾಡುತ್ತಿರುವಾಗ ನನ್ನ ಗಮನ ಖಾಲಿ ಬಾಟಲ್ ಪಡೆಯುವುದಾಗಿತ್ತು. ನಾನು ಎರಡೋ ಮೂರನೇ ತರಗತಿಯೋ ಇದ್ದೆ. ಒಂದು ದಿನ ನಮ್ಮ ಸಂಬಂಧಿಕರ ಮನೆಗೆ ಯಾರೋ ಒಬ್ಬ ಗೆಸ್ಟ್ ಬಂದಿದ್ದರು. ಅವರು ಯಾರು ಅಂತ ನನಗೆ ಇಂದಿಗೂ ಗೊತ್ತಾಗಿಲ್ಲ. ಆದರೆ ಅವರು ನನ್ನನ್ನು ಕರೆದು  ಇಲ್ಲಿ ಎಲ್ಲಿ ಸಿಗತ್ತೆ ಅಂತ ಕೇಳಿದರು ನನಗೆ ಗೊತ್ತಿದ್ದರಿಂದ ಅಡ್ರೆಸ್ ಹೇಳಿದೆ. ನನಗೆ ಅಡ್ರೆಸ್ ಗೊತ್ತಾಗಲ್ಲ ನಿಮ್ ಊರಿಗೆ ಹೊಸಬ ನಾನು ಒಂದು ಕೆಲಸ ಮಾಡು ದುಡ್ಡು ಕೊಡುತ್ತೀನಿ ತಗಂಡು ಬರುತ್ತೀಯಾ ಅಂದರು. ಹ್ಞು ಆದರೆ ಖಾಲಿ ಬಾಟಲ್ ನನಗೆ ಕೊಡಬೇಕು ಎಂದೆ ಅದಕ್ಕೊಪ್ಪಿದ ಅವರು ಪರಸ್ಪರ ಒಪ್ಪಂದ ಆದಮೇಲೆ ದುಡ್ಡು ಕೊಟ್ಟು  ಓಪನ್ ಆಗಿ ತರದೇ ಮುಚ್ಚಿಕೊಂಡು ತಗಂಡು ಬಾ  ಎಂದೇಳಿದರು. ಶರವೇಗದಲ್ಲಿ ಆ ಅಂಗಡಿಗೆ ಹೋದ ನಾನು ದುಡ್ಡು ಕೊಟ್ಟು ಬಾಟಲ್ ಪಡೆದೆ.ಒಂದು ಕ್ವಾಟರ್ ಬಾಟಲ್ ಹಿಡಿಯುವಷ್ಟು ಜೇಬು ದೊಡ್ಡದಿರಲಿಲ್ಲ ಸೊ ಆ ಬಾಟಲ್ ಅನ್ನು ಹೊಟ್ಟೆಯ ಭಾಗದಲ್ಲಿ ಅಂಗಿಯ ಒಳಗೆ ಹಾಕಿ ಯಾರಿಗೂ ಕಾಣದೇ  ತಗಂಡೋಗುವ ಎಂಬ ಪ್ಲಾನ್ ಮಾಡಿ ಇಡುವಾಗ ಹಿಡಿತ ಸಿಗದೇ ಕೈಜಾರಿ ಕೆಳಗೆ ಬಿದ್ದು ಅವನಿಗೆ ಎಣ್ಣೆ ಹೊಡೆಯುವ ಕನಸು, ನನಗೆ ಐಸ್ ತಿನ್ನುವ ಕನಸು ಎರಡೂ ನುಚ್ಚು ನೂರಾಗಿತ್ತು.

ಆಗಿನ ದಿನಗಳಲ್ಲಿ ನಾನು ಎಲ್ಲಿಗಾದರೂ ಹೋಗಬೇಕಾದರೆ ನಡೆದುಕೊಂಡು /ಸೈಕಲ್  ಪಯಣವೇ ಹೆಚ್ಚು. ಆಗ ಹಾದಿಯಲ್ಲಿ ಹೋಗುವಾಗ, ದನಗಳನ್ನು ಮೇಯಿಸುವಾಗ ಅಲ್ಲಲ್ಲಿ ಎತ್ತಿನ ಲಾಳಗಳು ಸಿಗುತ್ತಿದ್ದವು. ಅವು ಗಟ್ಟಿ ಮುಟ್ಟಾಗಿದ್ದು ಎಲ್ಲಿಯಾದರೂ ಸಿಕ್ಕರೆ ಜೋಪಾನವಾಗಿ ತಂದು ಯಾವುದಾದರೂ ಒಂದು ಜಾಗದಲ್ಲಿ ಬಚ್ಚಿಡುತ್ತಿದ್ದೆ.ಬರೀ ಇಷ್ಟೇ ಅಲ್ಲ   ಶೇಂಗಾ ಸೀಜನ್ ನಲ್ಲಿ ಶೇಂಗಾ ಕೊಟ್ಟರೂ ಐಸ್ ಸಿಗುತ್ತಿತ್ತು.  ನಂತರದ ದಿನಗಳಲ್ಲಿ ನಾನು ಜೇನು ಹುಡುಕಲು ಹೋಗುತ್ತಿರುವಾಗ ಕಳ್ಳ ಕುಡುಕರು ಎಸೆದ ಖಾಲಿ ಬಾಟಲ್ ನನಗೆ ಅಲ್ಲಲ್ಲಿ ಸಿಗುತ್ತಿದ್ದವು. ಎತ್ತಿಕೊಂಡು ಬಂದು ಮನೆಯ ಸಮೀಪ ಹಾಕುತ್ತಿದ್ದೆ.ಯಾವಾಗಲಾದರೂ ನಮ್ಮ ಮನೆಗೆ ಯಾರಾದರೂ ಎಣ್ಣೆ ಹೊಡೆಯುವ ಗಿರಾಕಿಗಳು ಬಂದರೆ ಅವರಿಂದಲೂ ಒಂದೋ ಎರಡೋ ಖಾಲಿ ಬಾಟಲ್ ನಿರೀಕ್ಷೆ ಇದ್ದೇ ಇರುತ್ತಿತ್ತು

ಮಳೆಗಾಲದ ದಿನಗಳಲ್ಲಿ ಐಸ್ ಮಾರುವವರು ಐಸ್ ಮಾರದೇ ಬಠಾಣಿ ತೆಗೆದುಕೊಂಡು ಬರುತ್ತಿದ್ದರು. ಅವೋ ಎಷ್ಟು ದೊಡ್ಡ ಗುಜರಿ ಐಟಾಂ ಕೊಟ್ಟರೂ ಸಿಗುತ್ತಿದ್ದದು ಕೇವಲ ಒಂದು ಹಿಡಿ  ಬಠಾಣಿ  ಅವನ್ಯಾರೋ ಏನು ಕೊಟ್ಟರೂ ಇಷ್ಟೇ ಇಷ್ಟು ಬಟಾಣಿ ಕೊಡುತ್ತೀಯಲ್ಲಾ ಎಂದು ಕೇಳಿದ್ದಕ್ಕೆ  ಅವನು   "ಈ ಬಟಾಣಿಗೆ ಮೀನಿನ ಎಣ್ಣೆ ಹಾಕಿರುತ್ತಾರೆ ಅದಕ್ಕೆ ಐಸ್ ಗಿಂತಲೂ ರೇಟ್ ಎಂದು ಹೇಳಿದ್ದ.!ನಾನು ಬಹಳ ದಿನಗಳವರೆಗೂ ಆ ಬಟಾಣಿಗೆ ಅರಿಶಿನ ಜೊತೆಗೆ ಮೀನಿನ ಎಣ್ಣೆ ಹಾಕಿ ಹುರಿದಿರುತ್ತಾರೆ ಎಂದೇ ಭಾವಿಸಿ  ಏನಾದರೂ ಗುಜರಿ ಕೊಟ್ಟು ಕೊಂಡು ಕೊಳ್ಳುತ್ತಿದ್ದೆ. ಆದರೆ ಈ ಬಟಾಣಿ ಐಸ್ಗೆರೆಯಷ್ಟು ಕಿಕ್ ಕೊಡುತ್ತಿರಲಿಲ್ಲ. ಕೆಲವೊಮ್ಮೆ ಎರಡೂ ಕೈಯಲ್ಲಿ ಎರಡೂ ಐಸ್ ಹಿಡಿದು ಕರಗಿ ಹನಿಯಾಗಲು ಬಿಡದೆ ತಿನ್ನುತ್ತಿದ್ದೆ.ಐಸ್ ಮುಗಿದ ಮೇಲೆ ಆ ಐಸ್ಗೆರೆಯ  ಬಿದಿರು ಕಡ್ಡಿಯೂ ಅಗಿದರೆ ಸ್ವೀಟ್ ಸ್ವೀಟ್ ಇರುತ್ತಿತ್ತು.

ಪ್ರೌಢಶಾಲಾ ವಿದ್ಯಾಭ್ಯಾಸ ಕ್ಕೆ ಚಳ್ಳಕೆರೆಗೆ  ಹೋದಮೇಲೆ ನಮ್ಮ ಶಾಲೆಯ ಪಕ್ಕದಲ್ಲೇ 'ಗೀತಾ ಐಸ್ ಕ್ರೀಂ' ಫ್ಯಾಕ್ಟರಿ ಇತ್ತು. ದುಡ್ಡಿದ್ದಾಗ ಇಬ್ಬರು ಮೂವರು ಸೇರಿ ಒಂದೊಂದು ಹಾಲೈಸ್ ಕೊಂಡುಕೊಂಡು ತಿನ್ನುತ್ತಿದ್ದೆವು. ಕೆಲವೊಮ್ಮೆ ಕಿರಿಕಿರಿ  ಆದರೆ ಸ್ವಲ್ಪವೇ ದೂರದಲ್ಲಿದ್ದ ನಾಗೇಶ ಐಸ್ ಕ್ರೀಂ ಪಾರ್ಲರ್ ಗೆ ಹೋಗುತ್ತಿದ್ದೆವು. ಅಲ್ಲಿ ಮನಸೋ ಇಚ್ಚೆ  ದೊಡ್ಡ ದೊಡ್ಡ ಕುಲ್ಪಿಗಳನ್ನು ತಿಂದು ಬಾಯಿ ತಣ್ಣಗೆ ಮಾಡಿಕೊಂಡು ಬರುತ್ತಿದ್ದೆವು. ನಮ್ಮ ಹಾಸ್ಟೆಲ್ ಪಕ್ಕದಲ್ಲಿ ಬಾರ್ ಇತ್ತು. ಖಾಲಿ ಬಾಟಲ್ ಬೇಕಾದಷ್ಟು ಸಿಗುತ್ತಿತ್ತು.ಆದರೆ ಸಿಟಿಯಲ್ಲಿ ಅವುಗಳನ್ನು ತೆಗೆದುಕೊಂಡು ಐಸ್ ಕೊಡುವವರು ನಮಗೆ ಸಿಗುತ್ತಿರಲಿಲ್ಲ.ಹಳ್ಳಿಯಲ್ಲಿ ಐಸ್ ಸಿಗುತ್ತಿತ್ತು ಖಾಲಿ ಬಾಟಲ್ ಸಿಗುತ್ತಿರಲಿಲ್ಲ. ಸಿಟಿಯೊಳಗೆ ಬಾಟಲ್ ಸಿಗುತ್ತಿವೆ ಆದರೆ ಐಸ್ ಸಿಗುತ್ತಿರಲಿಲ್ಲ. ಜೀವನ ಅಂದರೆ ಹೀಗೆಯೇ ಅಲ್ಲವೇ.? ಆದರೂ ಈ ಮದ್ಯ ಮಾರುವುದು ಒಳ್ಳೆಯದು ಕೆಟ್ಟದ್ದು ಏನೇ ಇದ್ದರೂ ಸಾವಿರಾರು ವರ್ಷಗಳ ಕಾಲ ಪರಿಸರದಲ್ಲಿ ವಿಘಟನೆಯಾಗದೆ ಪರಿಸರಕ್ಕೆ ಮಾರಕವಾದ ಗಾಜಿನ  ಉತ್ಪನ್ನಗಳನ್ನು ಪುನರ್ಬಳಕೆಯನ್ನು ಮಾಡಿಕೊಳ್ಳುವುದು  ಉತ್ತಮ ನಿರ್ಧಾರ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯವರು ಪುನರ್ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

ಬೇಸಿಗೆಯ ದಿನಗಳಲ್ಲಿ ನಾವೂ ಕೂಡ ಕರೋನ ಪೂರ್ವ ಆಗಾಗ್ಗ ಐಸ್ ತಿನ್ನುತ್ತಿದ್ದೆವು. ಅದನ್ನೂ ಮನೆಯಲ್ಲೇ ಬಾದಾಮಿ ಗೋಡಂಬಿ ಪೇಸ್ಟ್,ಹಾಲು ಹಾಕಿ ಡೀಪ್ ಪ್ರಿಜ್ಜಲ್ಲಿ ಇಟ್ಟು ಕೊಡುತ್ತಿದ್ದೆವು. ಈ ಕೋವಿದಮ್ಮಳ ಆತಂಕದಿಂದ ಅದೂ ಮಕ್ಕಳಿಗೆ ಈಗ ಎರಡುವರ್ಷದಿಂದ ಸಿಗದಂತಾಗಿದೆ. ಮಗಳು ಆಗಾಗ್ಗೆ ಕೇಳುತಾ ಇರುತ್ತಾಳೆ.ಕೋವಿಡ್ ಹೆಸರಲ್ಲಿ ಅದು ಸಿಗುತ್ತಿಲ್ಲ. ನಮ್ಮ ಕಾಲದ ಐಸ್ ತಿನ್ನುವ ಮಜಾ ಈಗ ಅದೆಷ್ಟು ಹಣ ತೆತ್ತರೂ ಬಾರದು.ಅಂದು ಐಸ್ ಆಗಮನವ ಕಾದು ಕಾದು ಬಂದಮೇಲೆ ಸ್ವಾಧಿಸುವುದರಲ್ಲಿ ಪರಮ ಆನಂದ ಕಾಣುತ್ತಿದ್ದೆವು.ಅದೇ ರೀತಿಯಲ್ಲಿ ಬೊಂಬಾಯಿ ಮಿಠಾಯಿ ಎಂಬುದೊಂದು ಬರುತ್ತಿತ್ತು.ಇವುಗಳ ಮುಂದೆ ಇಂದಿನ ಚಾಟ್ಸ್ ಟೇಸ್ಟ್ ಲೆಸ್. ಆದರೂ ಬಲ್ಲವರೇ ಬಲ್ಲರು ಈ ಐಸ್ ರುಚಿಯ..ಖಾಲಿ ಬಾಟಲ್ ಲ್ಲಿ ಏನಿದೆ ಕಿಕ್ ಪುಲ್ ಬಾಟಲ್ ಖಾಲಿ ಮಾಡಿನೋಡು ಆಗ ಸಿಗತ್ತೆ ಕಿಕ್ ಅಂತ ನೀವ್ಯಾರಾದರೂ ನನಗೆ ಹೇಳಬಹುದು. ಅದರೆ ಆ ತರಹದ ಕಿಕ್ ನನಗೆ ಅವಶ್ಯಕತೆ ಇಲ್ಲವಾದರೂ ಯಾವಾಗಲಾದರೂ ಈ  ಐಸ್ ತಿನ್ನುವ ಅವಕಾಶ ಸಿಕ್ಕರೆ ಬಿಡಬೇಡಿ ಆಯಿತಾ..

(ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ: ಹಲಸಿನ ಹಣ್ಣು)

✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..