ನಾನು ಮತ್ತು ದೆವ್ವ part-5
*ದೆವ್ವ ಮತ್ತು ನಾನು..*
(Part-5)
*೨೦೧೨ ರಲ್ಲಿ ಆಗ ನಾನು ನನ್ನ ದುಡಿಮೆಯಲ್ಲಿ ಹೊಸ ಟೂ ವೀಲರ್ ಬೈಕ್ ನ್ನು ಕೊಂಡುಕೊಂಡಿದ್ದೆ.ಅದರಲ್ಲೇ ನಾನು ಬಳ್ಳಾರಿ ಸಿಟಿಯಿಂದ ನನ್ನ ಕರ್ತವ್ಯದ ಸ್ಥಳಕ್ಕೆ ಹೋಗಿಬರುತ್ತಿದ್ದೆ. ಹೀಗೆ ಮುಂದುವರೆದಿತ್ತು.ಹಲಕುಂದಿ ಮಠದ ಎದುರುಗಡೆ ಆಗಾಗ ಬೀಕರ ಅಪಘಾತಗಳಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಅಸುನೀಗುತ್ತಿದ್ದರು. ಆದ್ದರಿಂದ ಆ ಮಠದ ಎದುರುಗಡೆ ಮೈನ್ಸ್ ಲಾರಿಗಳು ಹಾಗೂ ಇತರೆ ವಾಹನಗಳ ವೇಗ ತಗ್ಗಿಸಲು ರೋಡ್ ಹಂಪ್ಸ್ ಗಳನ್ನು ಹೆಚ್ಚವರಿಯಾಗಿ ಹಾಕಿದ್ದರು.ನನ್ನ ಅಲೆದಾಟ ಹೀಗೆ ಇದ್ದಾಗ ಒಂದು ದಿನ ಬೆಳಿಗ್ಗೆ ಶಾಲೆಗೆ ಹೋಗುವಾಗ ಒಂದು ತಾಯಿ ಮತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಒಂದೇ ಸಮಯದಲ್ಲಿ ಲಾರಿಗೆ ಸಿಕ್ಕು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇದಾಗಿ ಒಂದುವಾರ ಆಗಿರಬೇಕು ನಾನು ಗಾಡಿಯಲ್ಲಿ ಶಾಲೆಗೆ ಹೋಗುವಾಗ ಆ ಮಠದ ಎದುರು ಹಂಪ್ಸ್ ಮೇಲೆ ಹತ್ತುತ್ತಿದ್ದಂತೆ ಏನಾಯಿತೋ ಗೊತ್ತಿಲ್ಲ ಕ್ಷಣಾರ್ಧದಲ್ಲಿ ಇದ್ದಕ್ಕಿದ್ದಹಾಗೆ ಗಾಡಿಯಿಂದ ಬಿದ್ದೆ. ಬಿದ್ದ ರಭಸಕ್ಕೆ ಎಡ ಕಾಲು ಪಾದ ಹಾಗೂ ಮೊಣಕಾಲು ತರಚಿ ಹೋಯಿತು ಬ್ಯಾಗ್ ನಲ್ಲಿದ್ದ ಲಂಚ್ ಬಾಕ್ಸ್ ಜಸ್ಟ್ ಓಪನ್ ಆಗಿತ್ತು ಆದರೆ ಅಷ್ಟಾಗಿ ಚೆಲ್ಲದ ಸ್ಥಿತಿಯಲ್ಲಿ ಇತ್ತು.ಅಂದು ವೇಗ ಕನಿಷ್ಠ ಮಟ್ಟದಲ್ಲಿದ್ದದುರಿಂದ ಏನೋ ದೊಡ್ಡ ಮಟ್ಟದ ಪೆಟ್ಟು ಆಗಲಿಲ್ಲ ಅಲ್ಲದೆ ಆ ಕ್ಷಣ ನನ್ನ ಹಿಂದೆ ಮುಂದೆ ಯಾವ ದೊಡ್ಡ ವಾಹನಗಳೂ ಇಲ್ಲದೇ ಇದ್ದುದರಿಂದ ಪ್ರಾಣ ಅಪಾಯದಿಂದ ಪಾರಾಗಿದ್ದೆ. ತಕ್ಷಣ ಒಂದಿಬ್ಬರು ಬೈಕ್ ನಿಲ್ಲಿಸಿ ಓಡಿ ಬಂದು ನನ್ನನ್ನು ಮತ್ತು ಬೈಕ್ ನ್ನು ಮೇಲೆ ಎತ್ತಿ ಯೋಗಕ್ಷೇಮ ವಿಚಾರಿಸಿದ್ದರು.ಆಮೇಲೆ ಲಂಚ್ ಬ್ಯಾಗ್ನಲ್ಲಿದ್ದ ನೀರು ಕುಡಿದು ಗಾಡಿ ಹತ್ತಿ ಶಾಲೆಗೆ ಹೋದೆ. ಆ ಘಟನೆ ನನ್ನ ಬೈಕ್ ಸ್ಪೀಡ್ ಕನಿಷ್ಟ ೯೦-೧೦೦km/h ಇರುತ್ತಿದ್ದ ವೇಗವನ್ನು ತಗ್ಗಿಸಿ ೫೦-೬೦ ಕಿ ಮೀ ವೇಗಕ್ಕೆ ತಂದು ನಿಲಿಸಿತ್ತು.ಶಾಲೆಗೆ ಬರುವ ಹೊತ್ತಿಗೆ ಮೈ ಸುಡುವಂತಹ ಜ್ವರ.. ಮದ್ಯಾಹ್ನದ ಹೊತ್ತಿಗೆ ನಿಂತುಕೊಳ್ಳದಷ್ಟು ಸುಸ್ತಾದೆ. ಮಧ್ಯಾಹ್ನ ಊಟಕ್ಕೆ ಕುಳಿತಾಗ ನನ್ನ ಸಹೋದ್ಯೋಗಿ ಹಾಗೂ ಸ್ನೇಹಿತ ಮುಜಾವರ್ ಸರ್ ಜ್ವರ ಇದೆ ಅಂತೀರಿ ಚಿಕನ್ ತಿನ್ನಬೇಡಿ ಸಾರ್ ಅಂದಿದ್ದರು. ಅದಕ್ಕೆ ತಲೆದೂಗಿ ಒಂದು ಮೊಸರು ತರಿಸಿ ನಾನು ಮೊಸರನ್ನ ಅವರು ಚಿಕನ್ ಊಟ ಮಾಡಿದ್ದೆವು.*
*ಜ್ವರ ಏಳೆಂಟು ದಿನ ಕಡಿಮೆ ಆಗಲಿಲ್ಲ. ಹಾಗೆ ಜ್ವರದಲ್ಲೇ ತುರ್ತ ಕೆಲಸದ ನಿಮಿತ್ತ ಆಂಧ್ರದ ರಾಯದುರ್ಗ ತಾಲ್ಲೂಕಿನ ಯಾಪಲಪರ್ತಿ ಎಂಬ ಊರಿಗೆ ಹಾಗೆ ಜ್ವರದಲ್ಲೇ ಹೋಗಿದ್ದೆ. ಆಗ ನಮ್ಮ ಚಿಕ್ಕಮ್ಮ ಅವರು ನನ್ನ ಮುಖ ನೋಡಿ ಇದೇನಿದು ಮುಖ ರಾವು ರಾವು ತರ ಇದೆ ಏನೋ ಬೇರೆ ವಿಷಯ ಇರಬೇಕು ಎಂದರು ನಾನು ಏನಿಲ್ಲಮ್ಮ ಜ್ವರನೇ ಬಂದಿತ್ತು ಆಸ್ಪತ್ರೆಗೆ ತೋರಿಸಿದ್ದೇನೆ ಎಂದು ಹೇಳಿದರೂ ಬಾ ಇಲ್ಲಿ ಅಲ್ಲಿ ಒಬ್ಬರು ಪೂಜಾರಿ ಇದ್ದಾರೆ ಎಂದು ಒಬ್ಬ ಮಂತ್ರವಾದಿ ಹತ್ತಿರ ಬಲವಂತವಾಗಿ ಕರೆದುಕೊಂಡು ಹೋದರು. ಅವರು ಕಣ್ಣು ಮುಚ್ಚಿಕೊಂಡು ವೀಳ್ಯದೆಲೆ ಎಸೆದು ಅಮ್ಮ ಇವನು ಒಂದು ಜಾಗದಲ್ಲಿ ಬೈಕಲ್ಲಿ ಬಿದ್ದಿದ್ದಾನೆ ಅದು 'ಗಾಳಿ'ಯ ಪ್ರಭಾವದಿಂದ ಅಂದರು!. ಇವರ ಗಾಡಿಯಲ್ಲಿ ಚಿಕನ್ ಇದ್ದುದರಿಂದ ಆ ದೆವ್ವಕ್ಕೆ ಮಾಂಸದ ಆಸೆಯಾಗಿ ಹಿಂದಿನಿಂದ ನನ್ನನ್ನು ಕೆಡವಿ ಆ ಬಾಕ್ಸ್ ಓಪನ್ ಮಾಡಿ ಅದನ್ನು ಅದು ಸ್ವೀಕರಿಸಿದೆ ಅಂತ ಹೇಳಿ ಏನೋ ತಾಯತ ತರಹ ಮಾಡಿ ಕಟ್ಟಿಕೊಳ್ಳಲು ಹೇಳಿದ್ದರು. ನಾನು ಹೇಳಿ ಕೇಳಿ ನಾಸ್ತಿಕ ದೇವರು ದೆವ್ವ ಎರಡನ್ನೂ ನಂಬದವನು ಆದರೆ ನಾನು ಬೈಕಲ್ಲಿ ಬಿದ್ದದ್ದು ನಿಜ ಅವತ್ತು ಲಂಚ್ ಬಾಕ್ಸ್ ಲ್ಲಿ ಚಿಕನ್ ಇದ್ದುದು ನಿಜ ಆದರೆ ಅದು ಆ ಚಿಕನ್ ಹೇಗೆ ಸ್ವೀಕರಿಸಿತೊ ಅರ್ಥ ಆಗಲಿಲ್ಲ. ನಾವು ಏನದರೂ ತಿಂದಾಗ ಭೌತಿಕವಾಗಿ ಆ ಐಟಂ ನ್ನು ಖಾಲಿ ಮಾಡುತ್ತೇವೆ. ನಮ್ಮಲ್ಲಿ ಮಾತಿಗೆ ಹೆಚ್ಚು ಏನದರೂ ತಿಂದರೆ ದೆವ್ವ ತಿಂದ ಹಾಗೆ ತಿಂತೀಯಲ್ಲ ಅಂತ ಕೇಳಿದ್ದೆ.. ಆ ದೆವ್ವಕ್ಕೆ ನನ್ನ ಸಣ್ಣ ಬಾಕ್ಸ್ ನ ಚಿಕನ್ ಯಾವ ಹಲ್ಲಿಗೆ ಆಯಿತೋ ಗೊತ್ತಿಲ್ಲ ಆದರೆ ಅವನ ಪ್ರಕಾರ ದೆವ್ವ ಚಿಕನ್ ತಿಂದಿದೆಯಂತೆ!! ಮಂತ್ರವಾದಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲ. ಅದರೆ ಆ ದೆವ್ವ ನನಗೆ ಕಾಣದೇ ಇದ್ದುದು ಬಿಟ್ಟರೆ ಅವರು ಹೇಳಿದ್ದೆಲ್ಲ ಸತ್ಯವೇ ಆಗಿತ್ತು. ದೆವ್ವ ಭೌತಿಕವಾಗಿ ಆಹಾರ ತಿನ್ನದೇ ಕೇವಲ ವಾಸನೆಯಿಂದ ಅವುಗಳು ಆಹಾರ ಸ್ವೀಕರಿಸುವವೆಂದು ನಾನು ಎಲ್ಲೋ ಇತ್ತೀಚಿಗೆ ಓದಿದ್ದೆ.ನಾನು ನಮ್ಮ ಚಿಕ್ಕಮ್ಮನ ಮನೆಯಲ್ಲಿ ಎರಡರಿಂದ ಮೂರು ತಾಸು ಇರಬಹುದೇನೋ ಅಲ್ಲಿ ವರೆಗೆ ಮಾತ್ರ ಆ ತಾಯತ ನನ್ನ ಜೊತೆಗೆ ಇತ್ತು ಹೊರ ಬಂದ ಮೇಲೆ ಅದನ್ನು ಕಿತ್ತು ಎಸೆದೆ..*
*ಊರಿಂದ ವಾಪಾಸು ಬಂದಮೇಲೆ ದಿನಾವೂ ಅದೇ ರಸ್ತೆಯಲ್ಲಿ ಓಡಾಡಬೇಕಾಗಿತ್ತು. ಅಂದು ಶನಿವಾರ ಶಾಲೆ ಮುಗಿಸಿಕೊಂಡು ಹಿಂದಿರುಗುವಾಗ ಮದ್ಯಾಹ್ನ ಆಗಿತ್ತು. ಬಳ್ಳಾರಿ ಎಂದರೆ ಕೇಳಬೇಕೆ?? ಮಾರ್ಚ ತಿಂಗಳಾಗಿದ್ದರಿಂದ ರಣ ಬಿಸಿಲು ಹೆಲ್ಮೆಟ್ ಹಾಕಿದ್ದಕ್ಕೆ ತಲೆಯಲ್ಲೆಲ್ಲಾ ಬೆವರು ಇಳಿದು ಕಿರಿಕಿರಿ ಆಗಿತ್ತು..ಆ ಬೈಕ್ ಬಿದ್ದ ಜಾಗಕ್ಕೆ ಹೋಗಿ ಗಾಡಿನಿಲ್ಲಿಸಿ ಅಂದು ನಾನು ಹೇಗೆ ಬಿದ್ದೆ ಎಂದು ಸ್ಥಳದ ಅವಲೋಕನಕ್ಕೆ ರಸ್ತೆಯನ್ನು ದಾಟಿ ಆ ಕಡೆ ಬದಿಯಲ್ಲಿ ನಿಂತುಕೊಂಡೆ. ನಿಂತು ಒಂದೆರಡು ನಿಮಿಷ ಆಗಿರಬೇಕು. ನಾನು ಯಾವ ಯಾವ ಕಾರಣಕ್ಕೆ ಬಿದ್ದಿರಬಹುದು ಎಂದು ವಿಚಾರ ಮಾಡುತ್ತಿರುವಾಗಲೇ ಎಲ್ಲಿಂದಲೋ ಒಂದು ರಭಸವಾದ ಸುಂಟರಗಾಳಿ ಬಂತು.ನನ್ನ ಗಾಡಿಯ ಮೇಲೆಲ್ಲಾ ಸುತ್ತಾಡಿ ಆ ಮೇಲೆ ನಾನಿರುವ ಜಾಗಕ್ಕೂ ಬಂದು ಆಮೇಲೆ ಸ್ವಲ್ಪ ದೂರ ಹೋಗಿ ಸುಂಟರಗಾಳಿ ಮಾಯ ಆಗಿತ್ತು. ಎಂಥಾ ಸುಂಟರ ಗಾಳಿ ಎಂದರೆ ರಸ್ತೆಯ ಅಕ್ಕ ಪಕ್ಕ ಬಿದ್ದಿರುವ ಕಸ ಕಡ್ಡಿ ಸೇರಿ ಆ ಗಾಳಿ ಹೋಗುವವರೆಗೂ ಕಣ್ಣುಬಿಡಲು ಅಸಾದ್ಯವಾಗಿತ್ತು.ಎಂಥಾ ದೂಳೆಂದು ಕಣ್ತೆಗೆದು ನೋಡುತ್ತಿದ್ದಂತೆ ಒಂದು ಮೈನ್ಸ್ ತುಂಬಿಕೊಂಡ ಲಾರಿ ವೇಗವಾಗಿ ಬಂದು ಆ ಹಂಪ್ಸ್ ಜಾಗದಲ್ಲಿ ಎಡಕ್ಕೆ ಬಹಳವೇಗವಾಗಿ ಒಂದು ಸೈಡ್ ಚಕ್ರಗಳನ್ನು ರೋಡಿಂದ ಕೆಳಗೆ ಇಳಿಸಿದ್ದಕ್ಕೆ ಆ ಲಾರಿಯಲ್ಲಿದ್ದ ಸುಮಾರು ಮೈನ್ಸ್ ಕಲ್ಲುಗಳು ನನ್ನ ಗಾಡಿಯ ಮೇಲೆ ಬಿದ್ದು ರಸ್ತೆಯ ತುಂಬಾ ಚೆಲ್ಲಾಡಿದವು.ಅದಾಗಲೇ ಸುಂಟರಗಾಳಿ ಹವಾ ಏನೂ ಇತಲಿಲ್ಲ.ಅದಾದ ನಂತರ ಒಂದು ಕಂಟೈನರ್ ಲಾರಿ ಒಂದು ಆಟೋ ಅಡ್ಡ ಬಂತೆಂದು ಟೈಯರ್ ಎಲ್ಲಾ ಸುಟ್ಟ ವಾಸನೆ ಬರುವ ಹಾಗೆ ಬಹಳ ದೂರದಿಂದ ರಭಸವಾಗಿ ಬ್ರೇಕ್ ಹಾಕಿ ಪರಸ್ಪರ ಇಬ್ಬರೂ ಬಯ್ದಾಡಿಕೊಂಡು ಹೋದರು..ನಾನು ನನ್ನ ಗಾಡಿ ಹಂಪ್ಸ್ ಹತ್ತಿದ ಕೂಡಲೇ ಡಿಸ್ಕ್ ಬ್ರೇಕ್ ಹಾಕಿದ್ದರಿಂದ ಬಿದ್ದಿರಬಹುದೆಂಬ ನಿರ್ಣಯಕ್ಕೆ ಬಂದು ಪುನಃ ರಸ್ತೆ ದಾಟಿ ಗಾಡಿ ಹತ್ತಿ ಸ್ಟಾರ್ಟ್ ಮಾಡಿ ರೋಡ್ ಹತ್ತಲು ಪ್ರಯತ್ನ ಮಾಡಲು ಒಂದು ಆಂದ್ರ ರಸ್ತೆ ಸಾರಿಗೆ ಬಸ್ಸನ್ನು ಓವರ್ ಟೇಕ್ ಮಾಡಲು ಹೋದ ಐಷರ್ ಗಾಡಿಯೊಂದು ನನ್ನ ಮೇಲೆ ಹಾದು ಹೊಯ್ತೇನೋ ಎನ್ನುವಷ್ಟು ಹತ್ತಿರದಲ್ಲೇ ಹಾದು ಹೋಯಿತು. ಇಷ್ಟೆಲ್ಲಾ ಆಗಿದ್ದು ಐದರಿಂದ ಆರೇಳು ನಿಮಿಷದೊಳಗೆ!ಆಗ ನನಗನಿಸಿದ್ದು ಯಾಕೋ ನಾನು ಪರೀಕ್ಷೆ ಮಾಡಲು ನಿಂತಿದ್ದು ಆ ಅತಿಮಾನುಷ ಶಕ್ತಿಗೆ ತಡೆದುಕೊಳ್ಳಲಾಗದೇ ಇಷ್ಟೇಲ್ಲಾ ಮಾಡಿತಾ ಅಂತಾ....???*
(ಮುಂದುವರೆಯುವುದು)
✍️ ನಾಗೇಂದ್ರ ಬಂಜಗೆರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ