ಅವರಿಗೆ ಅವಳೊಂದಿಗೆ ಕ್ರಷ್.. ನಾವಿಬ್ಬರೂ ಅವಳಿಗಾಗಿ ಟಾಸ್..
ಅವರಿಗೆ ಕ್ರಷ್ ! ನಾವೂ ಅವಳಿಗೇ ಟಾಸ್!!
ಅದು ಗಣಿಗಾರಿಕೆಯ ಸುವರ್ಣಕಾಲ.ಅಂದು ರಾಜಾಪುರದಲ್ಲಿ ಇದ್ದವರೆಲ್ಲಾ ರಾಜರೇ.ಯಾಕೆ ನಾನು ಈ ಮಾತನೇಳುವೆ ಅಂದ್ರೆ ಕೆರೆಯ ತುಂಬಾ ನೀರಿದ್ದರೂ ಅಂಡು ತೊಳೆಯಲು ಮಿನರಲ್ ವಾಟರ್ ಬಳಸುತ್ತಿದ್ದ ಕಾಲ. ಅಂದಿನ ದಿನಗಳಲ್ಲಿ ಅತ್ಯಂತ ಬಡತನ ರೇಖೆಗಿಂತ ಕೆಳಗಿನವೆರೆಂದರೇ ಅದು ಅಲ್ಲಿದ್ದ ಸರ್ಕಾರಿ ನೌಕರರು.! ಆರೇಳು ವರ್ಷದ ಆಡೋ ಹುಡುಗರ ಕೈಯಲ್ಲಿ ಐದುನೂರು ಸಾವಿರ ಮುಖಬೆಲೆಯ ನೋಟುಗಳು. ಅಂತಹ ಕಾಲದಲ್ಲಿ ನನ್ನ ವೃತ್ತಿ ಆರಂಭದ ದಿನಗಳು ಅಲ್ಲೇ ವಾಸವಾಗಿದ್ದೆವು.ನಮ್ಮ ಶಾಲೆಯೂ ಸಿ ಎ ಇ ಓ ಕೇಂದ್ರವೂ ಆಗಿದ್ದರಿಂದ ಹೊಸದಾಗಿ ನೇಮಕಾತಿಯಾದ ಶಿಕ್ಷಕ/ಕಿ ಯರು ಬಂದು ಡ್ಯೂಟಿಗೆ ಜಾಯಿನ್ ಆಗಿ ಹೋಗುತ್ತಿದ್ದರು. ಒಂದು ದಿನ ಮೂರ್ನಾಲ್ಕು ಜನ ಶಿಕ್ಷಕಿಯರು ಡ್ಯೂಟಿಗೆ ಜಾಯಿನ್ ಆಗಲು ಬಂದರು. ಅಂದು ಸಿ ಎ ಇ ಓ ಅನ್ಯಕಾರ್ಯದ ನಿಮ್ಮಿತ್ತ ಗೈರಾಗಿದ್ದ ಪ್ರಯುಕ್ತ ಪದೇ ಪದೇ ಬರಲು ಸೌಕರ್ಯ ಇಲ್ಲದ ಕಾರಣ ಹಿರಿಯ ಶಿಕ್ಷಕರೊಬ್ಬರಿಗೆ ಎಲ್ಲರ ನಂಬರ್ ಕೊಟ್ಟು ಬಂದಾಗ ತಿಳಿಸಲು ಹೇಳಿಹೋಗಿದ್ದರು. ರಾಜಾಪುರ ಗ್ರಾಮ ಒಂದರಲ್ಲೇ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಶಿಕ್ಷಕರು ವಾಸವಾಗಿದ್ದ ಕಾಲ.ಎಲ್ಲರೂ ಅನ್ಯೊನ್ಯವಾಗಿ ಇದ್ದೆವು.ಆ ಊರು ಬೆಟ್ಟದ ಸುತ್ತಲೂ ಇರುವ ತಗ್ಗುಪ್ರದೇಶದಲ್ಲಿ ಇದ್ದಿದ್ದರಿಂದ ಯಾವ ಜನರೇಶನ್ ನ ನೆಟ್ವರ್ಕ್ ಸಿಗುತ್ತಿರಲಿಲ್ಲ. ಯಾರೊಂದಿಗಾದರೂ ಮೊಬೈಲ್ ನಲ್ಲಿ ಮಾತಾಡಬೇಕಂದರೆ ನೆಟ್ವರ್ಕ್ ಗಾಗಿ ಮೊಬೈಲ್ ಹಿಡಿದು ಅಂತರ್ಜಲ ಸಂಶೋದನೆ ಮಾಡುವ ಹಾಗೆ ನೆಟ್ವರ್ಕನ್ನು ಹುಡುಕುತ್ತಿದ್ದೆವು. ಸಿಗುತ್ತಿದ್ದ ಒಂದೇ ಪಾಯಿಂಟ್ ಅನಿಶ್ಚಿತ ನೆಟ್ವರ್ಕಲ್ಲೇ ಮಾತು ಕತೆ ಮಾಡಿ ಬರುತ್ತಿದ್ದೆವು. ಅದರಲ್ಲೂ ಕೆಲವು ವಿವಾಹಿತರು ತಮ್ಮ ಹೆಂಡತಿಯೊಂದಿಗೆ ಮಾತಾಡುತ್ತಿದ್ದರೆ ಇನ್ನೂ ಕೆಲವರು ಬಾವಿ ಹೆಂಡತಿಯ ಜೊತೆಗೆ ಮಾತಾಡುತ್ತಿದ್ದರು. ನನ್ನದೂ ಹಾಲಿ/ಬಾವಿ ಯಾವ ಸಂಪರ್ಕವೂ ಇಲ್ಲದಿದ್ದರಿಂದ ಸ್ನೇಹಿತರು ಕುಟುಂಬದವರೊಂದಿಗೆ ಮಾತ್ರ ಆಗಾಗ ಮಾತಾಡುತ್ತಿದ್ದೆ.
ನಮ್ಮ ವೃತ್ತಿ ಗೆಳೆಯ ರೂಮ್ ಮೇಟ್ ಉಡುಪಿಯ ಸತೀಶನನ್ನು ಒಂದು ಶನಿವಾರ ನಮ್ಮ ಊರಿಗೆ ಕರೆದುಕೊಂಡು ಹೋಗಿದ್ದೆ. ಸಂಡೇ ಬೇಜಾರಿಗೆ ಚಳ್ಳಕೆರೆ ನಗರಕ್ಕೆ ತೆಲುಗು ಸಿನಿಮಾ ಮೊಗದೀರ ಸಿನಿಮಾಕ್ಕೂ ಹೋಗಿದ್ದೆವು. ಸಿನಿಮಾ ಮುಗಿಸಿಕೊಂಡು ಒಂದು ಹೋಟೆಲ್ನಲ್ಲಿ ಊಟಕ್ಕೆ ಕುಳಿತಿದ್ದೆವು. ಸತೀಶನ ಮೊಬೈಲ್ ಗೆ ಅಪರಿಚಿತ ನಂಬರ್ನಿಂದ ಒಂದು ಕರೆ ಬಂತು.ಯಾವುದೋ ಹೆಣ್ಣು ದ್ವನಿ. ಹೊರಗಡೆಗೆ ಎದ್ದು ಹೋದ ಸತೀಶ ಎಂಟತ್ತು ನಿಮಿಷಗಳ ಕಾಲ ಮಾತಾಡಿಕೊಂಡು ಬಂದು ಚಿಂತಾಬ್ರಾಂತಿಯಿಂದ ಕುಳಿತರು. ಯಾಕ್ ಸಾರ್ ಏನಾಯಿತು ಎನಿಥಿಂಗ್ ಪ್ರಾಬಲಮ್? ಅಂದೆ ಇಲ್ಲ ಸಾರ್ ಪ್ರಾಬಲಮ್ಮೇನು ಇಲ್ಲ,ಆದರೆ ಕಾಲ್ ಮಾಡಿದ್ದು ಮನು( ಹೆಸರು ಬದಲಿಸಿದೆ) ಸಾರ್ ಅವರ ಮಿಸೆಸ್.
ಏನಂತೆ ಸಾರ್ ಅಂದೆ.
"ಮನು ಸರ್ ಅವರಿಗೆ ಬೇರೆ ಯಾವುದೋ ನಂಬರ್ ಇಂದ ಯಾರೋ ಲೇಡಿ ಕಾಲ್ ಮೆಸೇಜ್ ಮಾಡುತ್ತಿದ್ದಾರಂತೆ, ಮನು ಕೂಡ ತುಂಬಾ ಬದಲಾಗಿ ಹೆಚ್ಚು ಅವರೊಂದಿಗೆ ಮಾತಾಡುತ್ತಿದ್ದಾರಂತೆ. ಪ್ರಾರಂಭದಲ್ಲಿ ಯಾರೋ colleague ಇರಬಹುದು ಎಂದು ಭಾವಿಸಿದ್ದೆ ಆದರೆ ಇತ್ತೀಚೆಗೆ ಮೂರ್ನಾಲ್ಕು ತಿಂಗಳಿಂದ ಅದು ಅತಿಯಾಗಿ ಅಕ್ಷರಶಃ ಇನ್ನೊಬ್ಬ ಲೈಪ್ ಪಾರ್ಟ್ನರ್ ಸಿಕ್ಕಿದ್ದಾರೆನೋ ಎಂಬಂತೆ ಅವರ ವರ್ತನೆ ಕಾಣುತ್ತಿದೆ. ಒಬ್ಬ ಸಹೋದರನಾಗಿ ನನ್ನ ಸಂಸಾರ ಕಿತ್ತು ಹೋಗುವ ಮುನ್ನ ಉಳಿಸಿಕೊಟ್ಟು ಸಹಾಯ ಮಾಡಿ ಎಂದು ಕೇಳಿಕೊಂಡರು. ಹಾಗೆ ಅವರು ಮಾತಾನಾಡುತ್ತಿರುವ ನಂಬರ್ ತಗೋಳಿ ಎಂದು ಹೇಳಿದ್ದಕ್ಕೆ ಅಂಗೈಯಲ್ಲಿ ಅದನ್ನು ಬರೆದುಕೊಂಡು ಬಂದಿದ್ದರು.
ಸರಿ ಸಾರ್ ಆ ನಂಬರ್ ಹೇಳಿ ಎಂದು ನನ್ನ ಮೊಬೈಲ್ ತೆಗದು ಡಯಲ್ ಮಾಡಿದೆ.ಡಯಲ್ ಮಾಡಿ ನೋಡಿದರೆ ಆ ನಂಬರ್ 'ಮದುಮತಿ'(ಹೆಸರು ಬದಲಾಯಿಸಲಾಗಿದೆ.)
ಎಂಬ ಹೆಸರಿನಲ್ಲಿ ಸೇವ್ ಆಗಿದೆ. ಸಾರ್ ಈ ನಂಬರ್ ಮದುಮತಿ ಅವರದು. ಎಂದೆ. ಮದುಮತಿ ಸುಂದರ ಅವಿವಾಹಿತೆ. ಅವರು ನಮಗೂ ಮುಖ ಪರಿಚಯ ಇದ್ದುದರಿಂದ ಅವರ ಸಂಪರ್ಕ ಸಂಖ್ಯೆ ಯಾವುದೋ ತರಬೇತಿಯಲ್ಲಿ ನನ್ನ ಬಳಿ ಸೇವ್ ಆಗಿತ್ತು. ಇವರು ಇಂತವರಲ್ಲ ಎಂದೇಳಿ ಮನು ಸಾರ್ ಅವರ ಮಿಸೆಸ್ ಗೆ ಮತ್ತೊಮ್ಮೆ ಕರೆ ಮಾಡಿಸಿ ಆ ನಂಬರನ್ನು ಪುನಃ ಹೇಳಿದ್ದನ್ನು ನಾನೇ ನನ್ನ ಪಾಕೆಟ್ ನೋಟ್ಬುಕ್ ಲ್ಲಿ ಬರೆದುಕೊಂಡೆ. ಪುನಃ ಡಯಲ್ ಮಾಡಿ ನೋಡಿದರೆ ಅದೇ ಹೆಸರು!ನಮಗೆ ಒಂದು ಕ್ಷಣ ದಿಗ್ಬ್ರಮೆಯಾಯಿತಾದರೂ ಸಂಪೂರ್ಣವಾಗಿ ಒಪ್ಪಲು ಸಾಧ್ಯ ಆಗಲಿಲ್ಲ. ಆದರೆ ಅವರ ಹೆಂಡತಿ ನಮ್ಮ ಸಂಸಾರ ಮುರಿದು ಹೋಗುವ ಹಂತಕ್ಕೆ ಬಂದಿದೆ. ಬಹಳಷ್ಟು ನೊಂದಿದ್ದೇನೆ ಎಂದು ಕಣ್ಣೀರು ತುಂಬಿ ದಯಮಾಡಿ ನಮ್ಮ ಸಂಸಾರ ಉಳಿಸಿಕೊಡಿ ಎಂದು ಕೇಳಿಕೊಂಡಿದ್ದರಿಂದ ವಿಷಯವನ್ನು ನಾವೂ ಗಂಭೀರವಾಗಿ ತೆಗೆದುಕೊಳ್ಳಲೇಬೇಕಾಯಿತು.
ಮನು ಅತ್ಯಂತ ಪ್ರತಿಭಾನ್ವಿತ.ಹಳೆಗನ್ನಡ ಅನೇಕ ಪ್ರಕಾರಗಳನ್ನು ನೀರು ಕುಡಿಯುವುದಕ್ಕಿಂತಲೂ ಸುಲಭವಾಗಿ ಗಳಗಳನೇ ನಿರರ್ಗಳವಾಗಿ ಗಂಟೆ ಗಟ್ಟಲೇ ಹೇಳುತ್ತಿದ್ದರು.ಬಹಳ ಭಾವನಾ ಜೀವಿ. ಸಣ್ಣ ವಿಷಯಗಳಿಗೂ ಅತಿಯಾಗಿ ಸ್ಪಂದಿಸುವ ಭಾವನೆ. ಸಣ್ಣ ಮಗುವಿಗೂ ಸಂಪೂರ್ಣ ಭಾವನಾತ್ಮಕವಾಗಿ ಸ್ಪಂದಿಸುವ ಜೀವಿ. ಅವರು ನಮಗಿಂತ ಹಿರಿಯರು ವಿಷಯ ಹೇಗೆ ಪ್ರಸ್ತಾಪಿಸಬೇಕು ಎಂದು ಗೊತ್ತಾಗಲಿಲ್ಲ.ಉದ್ಯೋಗ ನಿಮ್ಮಿತ್ತ ಬಹಳ ದಿನಗಳು ದೂರ ಇದ್ದುದರಿಂದ ಮತ್ತು ಆಕ್ಟೀವ್ ವರ್ಲ್ಡ್ ಇಂದ ದೂರವಾಗಿ ಮನರಂಜನಾ ಜಗತ್ತಿನಿಂದ ದೂರ ಇದ್ದುದ್ದರಿಂದಲೋ ಅಥವಾ ಈ ಪ್ರೀತಿ/ಆಕರ್ಷಣೆ ಯಾವಾಗ ಹೇಗೆ ಯಾರ ಮೇಲೆ ಉಂಟಾಗತ್ತೆ ಎಂದು ನಿಖರವಾಗಿ ಹೇಳಲು ಕಷ್ಟವಾಗಬಹುದಾದರೂ ಆಕಸ್ಮಿಕವಾಗಿ ಇಬ್ಬರಲ್ಲೂ ಆಕರ್ಷಣೆಯುಂಟಾಗಿ ನೆಟ್ವರ್ಕ್ ಇಲ್ಲದ ಜಾಗದಲ್ಲಿ ಇವರ ಸ್ನೇಹ ಗಾಢ ಪ್ರೀತಿಯಾಗಿ ಪರಿವರ್ತನೆ ಆಗುವ ಹಂತ ತಲುಪಿತ್ತು.ಒಂದು ಹಂತದಲ್ಲಿ ಅವರ ಸಿಗ್ನೇಚರ್ ಮದುಮತಿಯ ಹೆಸರಿಗೆ ಬದಲಾಗಿತ್ತು!ಒಮ್ಮೆ ಅವರ ಸಹಿ ಗಮನಿಸಿದ ನಾನು ಏನ್ ಸಾರ್ ಸೈನ್ ಚೇಂಜ್ ಮಾಡಿದ್ದೀರಾ ಅಂತ ಕೇಳಿದ್ದಕ್ಕೆ ಏನನ್ನು ಹೇಳದೇ ಹಾಗೇ ಸ್ವಲ್ಪ ಚೇಂಜ್ ಇರಲಿ ಅಂತ ಅಷ್ಟೇ ಹೇಳಿ ನಯವಾಗಿ ಜಾರಿ ಕೊಂಡಿದ್ದರು.
ನಾನು ಸತೀಶ ಇಬ್ಬರೂ ರೂಂ ನಲ್ಲಿ ಅವರ ಡೀಪ್ ಇನ್ವಾಲ್ವ್ಮೆಂಟ್ ಬಗ್ಗೆ ಮಾತಾಡುತ್ತಿದ್ದೆವು. ಸರ್ ಹೀಗೆ ಬಿಟ್ಟರೆ ಆಗಲ್ಲ ಮದುಮತಿಯನ್ನು ನೇರವಾಗಿ ಮುಖಾಮುಖಿ ಬೇಟಿಯಾಗಿ ಇರುವ ಪರಿಸ್ಥಿತಿ ಹೇಳಿಬಿಡೋಣ ಅನಿಸಿತು.ಆದರೆ ಅವರನ್ನು ಬೇಟಿಯಾಗಿ ಮಾತಾಡುವುದು ಮತ್ತೊಂದು ಹೊಸ ಗಾಳಿಸುದ್ದಿ ಹರಡಬಹುದು ಎಂಬ ಸೂಕ್ಷ್ಮತೆ ಅರಿತು ಸುಮ್ಮನಾದೆವು. ಒಂದು ದಿನ ಮದ್ಯಾಹ್ನ ಊಟ ಮಾಡುವಾಗ ನಮ್ಮ ಮುಖ್ಯಗುರುಗಳು ಹಿರಿಯರು ರಂಗಪ್ಪ ಅವರು ಎಲ್ಲರೂ ಹೋರಿ ಕರಗಳು ಇದ್ದ ಹಾಗೆ ಇದ್ದೀರಿ ಮದುವೆ ಗಿದುವೆ ಆಗ್ರಪ್ಪ ಅಂದರು.ನೀವೇ ನೋಡಿಕೊಂಡಿದ್ದರೆ ಬೇಡ' ನೋಡಿಕೊಂಡಿಲ್ಲ ಅಂದರೆ ನಾನು ಹುಡುಗಿ ಹುಡುಕುವೆ ಅಂತ ಹೇಳಿದರು. ಆ ಮಾತಿಗೆ ಸತೀಶ ಸಾರ್ ನಾನು ಲೈನ್ ಅಲ್ಲಿ ಇದ್ದೇನೆ ಸಾರ್ ಅಂದರು. ಸಾರ್ ನೀವ್ ಹೇಳ್ತಿರೋದು ಆ ಹುಡುಗಿ ಆಗಿದ್ದರೆ ಅವರು 'ನಮ್ಮವರು'ನೀವು ಬೇರೆ ನೋಡ್ಕಳಿ ಸಾರ್ ಎಂದು ಸತೀಶನಿಗೆ ಹೇಳಿದೆ. ಇದೇ ವಿಷಯವಾಗಿ ಮನು ಸೆರಿದಂತೆ ಎಲ್ಲರ ಎದುರಲ್ಲಿ ನಾಟಕೀಯವಾಗಿ ತಮಾಷೆಯಾಗಿ ಕಿತ್ತಾಡಿಕೊಂಡಿವು. ಇದೇ ಟ್ರಿಕ್ ಬಳಸಿ ಮನುವಿನ ಎದುರೇ ಮಾತಾಡಿ ಕಾಡಿಸೊಣ ಅವರಿಗೆ ಹೊಟ್ಟೆ ಉರಿಸೋಣ ಎಂದು ಹೇಳಿ ಅವರು ಎದುರುಗೊಂಡಾಗಲೆಲ್ಲಾ ಸಾದ್ಯವಾದಗಲೆಲ್ಲಾ ಮದುಮತಿಯು ನನ್ನವಳು, ನನ್ನವಳು ಎಂದು ಪದೇ ಪದೇ ನಾನು ಸತೀಶ ವಾದಮಾಡಿಕೊಳ್ಳುತ್ತಿದ್ದೆವು. ಮನುವಿಗೆ ಇವರು ಮಾತಾಡುತ್ತಿರುವುದು ಮದುಮತಿಯ ಬಗ್ಗೆಯೇ ಎಂಬುದು ಖಾತರಿಯಾಗಿತ್ತು. ನಮ್ಮ ಮಾತುಗಳನ್ನು ಕೇಳಿದ ಮನು ಈ ಚರ್ಚಾ ವಿಷಯವನ್ನು ಮದುಮತಿಗೂ ತಿಳಿಸಿದ್ದಾರೆ. ಈ ವಿಚಾರವಾಗಿ ನಾವು ಹಾಗೆ ಮಾತಾಡಿಕೊಳ್ಳುತ್ತಿದ್ದಾಗ ಅವರಿಗೆ ಬಹಳ ವೇದನೆಯಾಗುತಿತ್ತು. ಆದರೆ ಇರುವ ವಿಷಯ ಹೇಳಿಕೊಳ್ಳೋಣ ಅಂತ ಅವರಿಗೆ ಅನಿಸುತ್ತಿತ್ತಾದರೂ ಹೇಳಿಕೊಳ್ಳಲಾಗದೇ ಅವರು ಕೈ ಕೈ ಹಿಚುಕಿಕೊಳ್ಳುತ್ತಿದ್ದರು. ಕ್ಷಣಕ್ಷಣಕ್ಕೂ ಡಿಸ್ಟರ್ಬ್ ಆಗಿ ಕುಳಿತಲ್ಲಿ ಕೂರಲಾಗದೇ ನಿಂತಲ್ಲಿ ನಿಂತುಕೊಳ್ಳಲಾಗದೇ ವಿಲವಿಲನೆ ಒದ್ದಾಡುತ್ತಿದ್ದರು.ನಮ್ಮ ಬುದ್ದಿಯೂ ಇನ್ನೂ ಪಕ್ವಗೊಂಡಿರಲಿಲ್ಲ. ಏನು ಮಾಡಿದರೆ ಏನು ಆಗಬಹುದು ಎಂಬ ಅಂದಾಜು ಇರಲಿಲ್ಲ. ಆದರೆ ಅವರು ವಿವಾಹಿತರು ಆಕರ್ಷಣೆಯ ಜಾಲಕ್ಕೆ ಬಿದ್ದು ಸಂಸಾರ ಹಾಳಾಗಬಾರದು ಎಂದು ನಮ್ಮ ಇರಾದೆಯಾಗಿತ್ತು. ನೋಡೋಣ ಎಷ್ಟು ಸಾದ್ಯವಾಗತ್ತೋ ಅಷ್ಟು ರೇಗಿಸಿ ಆಕರ್ಷಣೆಯ ಸಂಗಾತಿಯನ್ನು ದೂರಮಾಡಿ ವಿವಾಹವಾದ ಅರ್ದಾಂಗಿಯನ್ನು ಒಂದುಗೂಡಿಸವುದು ನಮ್ಮ ಪರಮ ಗುರಿಯಾಗಿತ್ತು. ಒಂದು ವಾರಗಳ ಕಾಲ ಪ್ರತಿದಿನವೂ ಮದುಮತಿ ನನ್ನವಳು ಅವಳ ಬಗ್ಗೆ ಮಾತಾಡಬೇಡಿ ಸತೀಶ ಎಂದು ನಾನು ಸತೀಶನೂ ಅವಳು ನನ್ನವಳು ನೀವು ಅಷ್ಟೇ ಎಂಬ ನಮ್ಮ ವಾದ ತಾರಕಕ್ಕೇ ಏರಿತು. ಮನು ನಮ್ಮೆದುರಿಗೆ ಕುಳಿತಿದ್ದಾರೆ.ಅವರ ಎದುರಿಗಡೆಯೇ ಎಲ್ಲಾ ರೀತಿಯ ವಾದಮಾಡಿದ ಮೇಲೆ ನಾನು ಒಂದು ನಿರ್ಧಾರಕ್ಕೆ ಬಂದೆ. ಸಾರ್ ಟಾಸ್ ಎತ್ತೋಣ ಟಾಸ್ ಲ್ಲಿ ಯಾರು ವಿನ್ ಆಗುತ್ತಾರೋ ಅವರಿಗೆ ಆ ಮದುಮತಿ ಸಿಗಲಿ ಇದಕ್ಕೆ ನನ್ನ ಒಪ್ಪಿಗೆ ಇದೆ ಎಂದು ಹೇಳಿದೆ. ಇದೆಲ್ಲಾ ಕೇಳುತ್ತಾ ಮೌನವಾಗಿಯೇ ಕುಳಿತಿದ್ದ ನಮ್ಮ ಸಹೋದ್ಯೋಗಿ ಮೌನೇಶ ನಿಮ್ ಜಗಳ ನೋಡಿ ಕೇಳಿ ಸಾಕಾಯಿತು. ಟಾಸ್ ಹಾಕಿಬಿಡಿ ಇವತ್ತು ಕ್ಲಿಯರ್ ಆಗಿಬಿಡಲಿ ಎಂದು ದ್ವನಿಗೂಡಿಸಿದರು. ಇಬ್ಬರೂ ಆಕಾಂಕ್ಷಿಗಳಾಗಿದ್ದರಿಂದ ಟಾಸ್ ನಾವಿಬ್ಬರೂ ಎತ್ತುವುದು ಪರಸ್ಪರ ಇಚ್ಛೆ ಇರಲಿಲ್ಲ. ಆಗ ಟಾಸ್ ಎತ್ತಲು ನಾವು ಆಯ್ಕೆ ಮಾಡಿಕೊಂಡಿದ್ದು ಅದೇ ಮನು ಅವರನ್ನು.
ತಾನು ಪ್ರೀತಿಸುವ ಹುಡುಗಿಗಾಗಿ ಮತ್ತಿಬ್ಬರೂ ಕಚ್ಚಾಡುತ್ತಿರುವುದನ್ನೇ ಸಹಿಸಲು ಅಸಾಧ್ಯ ವಾಗಿತ್ತು.ಆದರೆ ಮನು ಅವರೇ ಟಾಸ್ ಎತ್ತಿ ಅವರೇ ಆ ಮದುಮತಿಯನ್ನು ತಮ್ಮ ಕೈ ಯಿಂದ ಬಿಟ್ಟುಕೊಡುವುದು ಅವರಿಗೆ ನುಂಗಲಾರದ ತುತ್ತಾಗಿತ್ತು. ಕಾಯಿನ್ ಎತ್ತಲು ಕಾಯಿನ್ ಕೈಗಿತ್ತಾಗ ಅವರ ಕೈ ನಡುಗುತಿತ್ತು. ಏನುಮಾಡಬೇಕು ಎಂದು ತೋಚದೆ ಎದ್ದು ನಿಂತು ಭಾರವಾದ ಮನಸ್ಸಿನಿಂದ ಸರ್ ಇದು ಈಗ ಬೇಡ ಸಾರ್ ನಾನ್ ನಿಮ್ಮತ್ರ ಮಾತಾಡಬೇಕು.ಸಂಜೆ ಮಾತಾಡುವೆ ಎಂದು ಭಾವನೆ ತುಂಬಿದ ಮುಖದಲ್ಲಿ ತುಟಿಗಳನ್ನು ನಡುಗಿಸುತ್ತಾ ನುಡಿದರು. ಮಾನಸಿಕವಾಗಿ ಸಿಟ್ಟು ಅಸೊಯೆ ಮಿಶ್ರಣವಾಗಿ ನನ್ನವಳ ಬಗ್ಗೆ ಇವರು ಹೀಗೆ ಮಾಡುವುದು ನಾನು ಸಹಿಸೆನು ಏನಾದರೂ ಆಗಲಿ ನಾನು ಹೇಳಿಯೇ ಬಿಡೋಣ ಎನ್ನುವ ಹಾಗೆ ಅವರ ಮುಖಭಾವ ಇತ್ತು. ನಮಗೂ ಅದೇ ಬೇಕಿತ್ತು. ಯಾಕ್ ಸಾರ್ ಏನಾಯಿತು ಯಾಕೋ ಬಹಳ ಉದ್ವೇಗ ಕ್ಕೆ ಒಳಗಾದ್ರಿ ಸರಿ ಬಿಡಿ ಸಾರ್ ರಿಲ್ಯಾಕ್ಸ್ ಆಗಿ ಸಂಜೆ ಮಾತಾಡುವ ಎಂದು ಹೇಳಿ ನಾವು ನಮ್ಮ ನಮ್ಮ ತರಗತಿಗೆ ಹೋದೆವು.
ಮನು ಅವರ ಮನಸ್ಸು ಕೇಂದ್ರಿಕರಿಸಲು ಆಗುತ್ತಿಲ್ಲ. ಅಮೂಲ್ಯವಾದದ್ದು ಏನೋ ಕಳೆದು ಹೋಗುವ ಆತಂಕದಲ್ಲಿ ಶಾಲೆಯ ಬಿಡುವ ಸಮಯವನ್ನೇ ನಿರೀಕ್ಷಿಸುವಂತಿತ್ತು. ಶಾಲೆಯ ಬೆಲ್ ಆದ ತಕ್ಷಣ ದಡಬಡನೇ ಮನೆಗೋಗಿ ಬಟ್ಟೆ ಬದಲಾಯಿಸಿ ನಮ್ಮ ರೂಂ ಗೆ ಮನು ಬಂದು ಬಿಟ್ಟರು. ಮಾತುಕತೆ ಸಿರಿಯಸ್ ಇದ್ದುದರಿಂದ ಸರ್ ಕೆರೆ ಕಡೆಹೋಗಿ ಮಾತಾಡೋಣವೇ ಎಂದು ನಾನು ಸತೀಶ,ಮನು ಮತ್ತು ಮೌನೇಶ ನಾಲ್ಕು ಜನ ಕೆರೆಯ ಏರಿಯ ಮೇಲೆ ಹೆಜ್ಜೆ ಹಾಕಿದೆವು. ಕೆರೆಯ ಸುತ್ತಲೂ ದೊಡ್ಡ ದೊಡ್ಡ ಬಂಡೆಗಲ್ಲುಗಳ ಬೆಟ್ಟಗಳ ರಾಶಿ. ಅಲ್ಲಲ್ಲಿ ಹಸಿರು ಗಿಡಮರಗಳು.ಸುತ್ತಲೂ ಕಳ್ಳೀ ಗಿಡಗಳ ಹಳದಿ ಮಿಶ್ರಿತ ಹಸಿರು ಸಾಲು ಕೆರೆಯ ತಿಳಿನೀರಿನಲ್ಲಿ ಪ್ರತಿಬಿಂಬಿಸಿ ಅದರ ಪ್ರತಿಬಿಂಬ ಕದಡದೇ ಅಚ್ಚ ಕನ್ನಡಿಯಂತೆ ಕಾಣುತಿತ್ತು. ನಾಲ್ಕೂ ಜನ ಕೆರೆಯ ತೂಬು ಎತ್ತುವ ಸ್ಥಳದಲ್ಲಿದ್ದ ಸುಮಾರು ಇಪ್ಪತ್ತು ಅಡಿ ಉದ್ದ ಮತ್ತು ಆರು ಅಡಿ ಅಗಲದ ದಪ್ಪ ಕಬ್ಬಿಣ ಹಾಸಿನ ಮೇಲೆ ಕುಳಿತುಕೊಂಡೆವು. ಸೆಪ್ಟಂಬರ್ ತಿಂಗಳಾಗಿದ್ದರಿಂದ ಕಬ್ಬಿಣಲೋಹ ತಣ್ಣಗೆ ಆಗಿತ್ತು. ಸುಂದರ ಸೀನರಿ ನೋಡುತ್ತಾ ಕೈಯಲ್ಲಿದ್ದ ಹಿಡಿ ಗಾತ್ರದ ಕಲ್ಲನ್ನು ದೂರಕ್ಕೆ ನೀರಿಗೆ ಎಸೆದು ಹ್ಞು ಹೇಳಿಸಾರ್ ಏನೋ ಮಾತಾಡಬೇಕು ಅಂದ್ರಿ ಹೇಳಿ ಗುರುಗಳೇ ಅಂದೆ.ಮನುವಿಗೆ ಮದ್ಯಾಹ್ನದಿಂದಲೇ ಈ ವಿಷಯ ತಲೆಯಲ್ಲಿ ಕದಡಿತ್ತು. ಶಾಂತ ನೀರಿನಲ್ಲಿ ಸ್ವಚ್ಛಂದವಾಗಿ ಕಾಣುತ್ತಿದ್ದ ಬಿಂಬ ನಾನೆಸೆದ ಕಲ್ಲಿಗೆ ಅಲೆಗಳು ರಿಂಗಣಿಸಿ ಪ್ರತಿಬಿಂಬ ಕದಡುವುದನ್ನು ನೋಡುತ್ತಾ ಕೇಳಿದೆ.
"ಸಾರ್ ಒಂದು ವಾರದಿಂದ ನನಗೆ ತುಂಬಾ ಬೇಜಾರಾಗುತ್ತಿದೆ. ನೀವು ನನ್ನವಳು ನನ್ನವಳು ಅಂತಾ ಜಗಳ ಆಡುತ್ತಿದ್ದೀರಲ್ಲಾ ಅವಳು ಈಗಾಗಲೇ ನನ್ನವಳಾಗಿದ್ದಾಳೆ "ಅಂದರು.
ಹೌದಾ ಸಾರ್? ಅಯ್ಯೋ ನಮಗೆ ಗೊತ್ತಿರಲಿಲ್ಲ ಸಾರ್ ಏನೇನೋ ಮಾತಾಡಿಬಿಟ್ಟೀವಿ.. ಆದರೆ ಸರ್ ನಿಮಗೆ ಮದುವೆಯಾಗಿದೆಯಲ್ವೇ ? ಎಂದೆ..
ತಲೆ ತಗ್ಗಿಸಿದರು.
ಏನು ಹೇಳಬೇಕು ಎಂದು ಅವರಿಗೆ ಗೊತ್ತಾಗುತ್ತಿಲ್ಲ.
ಸಾರ್ ನಾವು ನಿಮಗಿಂತ ಚಿಕ್ಕವರೇ ಆದರೆ ನಮಗೆ ಸರಿ ಅನಿಸಿದ್ದು ಹೇಳುತ್ತಿದ್ದೇವೆ. ನೀವು ಮದುವೆ ಆದಮೇಲೂ ಇನ್ನೊಬ್ಬಳೊಂದಿಗೆ ಈ ರೀತಿಯ ವರ್ತನೆ ನಮಗೆ ಸರಿ ಅನಿಸುತ್ತಿಲ್ಲ ಸಾರ್..ಅಂದೆವು.
ಸತೀಶ ನಿಮ್ಮ ಮನೆಯವರಿಗೆ ಮೋಸ ಆಗುವುದಲ್ಲವೇ ಗುರುಗಳೇ ಎಂದರು.
ಹೌದು ಆದರೆ ಏನೋ ಆಗಿಬಿಡ್ತು ಅದಕ್ಕೆ ಉತ್ತರ ಇಲ್ಲ. ಅಂದರು.
ಮುಖವನ್ನು ಕಿವುಚುತ್ತಿದ್ದಾರೆ.
ನೋಡು ನೋಡುತ್ತಲೇ ಅವರ ಕಣ್ಣುಗಳಲ್ಲಿ ನೀರು ಪಳ ಪಳನೇ ಜಾರಿದವು.
ಯಾಕ್ ಸಾರ್ ಸಮಾಧಾನ ಮಾಡ್ಕೊಳಿ ಎಂದೆವು.
ನನ್ನನ್ನು ಸತೀಶನನ್ನು ಇಬ್ಬರನ್ನೂ ತಬ್ಬಿಕೊಂಡು ನಾನು ಮ್ಯಾರಿಡ್ ಆಗಿಯೂ ಇನ್ನೊಬ್ಬಳ ಬಗ್ಗೆ ಆಕರ್ಷಣೆಯ ಪಾಶಕ್ಕೆ ಒಳಗಾಗಿದ್ದು ನನ್ನದು ತಪ್ಪು ಸಾರ್ ಎಂದು ಕಣ್ತುಂಬಿದ ಕಣ್ಗಳಲ್ಲಿ ತೊದಲುತ್ತಾ ಕೈ ಕೈ ಹಿಡಿದು ಪಶ್ಚಾತ್ತಾಪ ಪಡುತ್ತಾ ಹೇಳಿದರು.
ಇರಲಿ ಸರ್ ಬೇಜಾರ್ ಆಗಬೇಡಿ ಒಮ್ಮೊಮ್ಮೆ ಆಗುತ್ತಿರುತ್ತೆ ಯಾರಿಗೂ ಅನ್ಯಾಯ ಆಗದಂತೆ ಸರಿ ಯಾವುದೋ ಅದನ್ನೇ ಮಾಡುವುದು ಒಳಿತು ಅಂತ ಹೇಳಿ ಸುಮ್ಮನಾದೆವು.
ಮನು ಅವರು ತನು ಮನ ಚಡಪಡಿಸುತ್ತಾ ನಾನು ನನ್ನ ಹೆಂಡತಿಗೆ ಮೋಸ ಮಾಡಿದೆ. ಛೇ.. ಥೂ ಎಂದು ತನ್ನನ್ನು ತಾನು ಶಪಿಸಿಕೊಂಡರು. ಬಿಡುತ್ತಿನಿ ಸಾರ್ ಬಿಟ್ಟು ಬಿಡುತ್ತೀನಿ. ನಾನು ಅಷ್ಟೊಂದು ಹಚ್ಚಿಕೊಳ್ಳಬಾರದಾಗಿತ್ತು. ಅದ್ಯಾಕೋ ಬಹಳ ಹಚ್ಚಿಕೊಂಡು ಬಿಟ್ಟೆ ಎಂದು ಪೇಚಾಡುತ್ತಾ ಜೇಬಲ್ಲಿದ್ದ ಮೊಬೈಲ್ ತೆಗೆದು ಮನು ಅವರ ಹೆಂಡತಿಗೆ ಕಾಲ್ ಮಾಡಿ ಬಿಟ್ಟರು. ಸಾರಿ ಸಾರಿ ಕಣೇ ನಾನು ನಿನಗೆ ಮೋಸ ಮಾಡ್ಬಿಟ್ಟೆ ಎಂದು ಹೇಳುತ್ತಿದ್ದರು. ಮಾತು ಆರಂಬಿಸುತ್ತಿದ್ದಂತೆಯೇ ಗಂಡ ಹೆಂಡತಿ ಮಾತುಕತೆಯ ಮುಂದೆ ಕರಡಿಗೆಯಂತೆ ನಾವ್ಯಾಕೆ ಎಂದು ಹಾಗೆ ದೂರ ಸರಿದೆವು.ಆಕರ್ಷಣೆಯ ಅಲೆಯಲ್ಲಿ ತೇಲುತ್ತಾ ವಿವಾಹ ಬಂಧನಕ್ಕೂ ಕುತ್ತು ತಂದುಕೊಳ್ಳುವ ಹಂತಕ್ಕೆ ಇವರ ಬಂಧ ಬಂದು ನಿಂತಿತ್ತು. ಒಂದು ಮಟ್ಟಿಗೆ ತಮ್ಮ ಗುಂಡಿ ತಾವೇ ತೋಡಿಕೊಂಡಿದ್ದು ಇವರಿಗೆ ಕಾಣಲಿಲ್ಲವೇನೋ ಆದರೆ ನಾವು ಮನುವಿನ ಮುಂದೆ ಅವಳ ಬಗ್ಗೆ ಮಾತಾಡುವುದು ಆರಂಭಿಸಿದ ಮೇಲೆ ಇವರಿಗೆ ರಿಯಾಲಿಟಿ ಅರ್ಥ ಆಗಿರಬಹುದು.
ಕೆರೆಯ ಏರಿಯ ಮೇಲೆ ನಾವು ಓಡಾಡುತ್ತಾ ಸರ್ ಮ್ಯಾಟರ್ ಸರಿ ಆದಂಗಾಯಿತು ಅಂತ ಸತೀಶ ಮೌನೇಶ ನಾನು ಮಾತಾಡಿಕೊಳ್ಳುತ್ತಿರುವಾಗಲೇ ಹತ್ತು ಹದಿನೈದು ನಿಮಿಷ ಹೆಂಡತಿಯ ಜೊತೆಗೆ ಮಾತಾಡಿ ಮನದ ಬಾರ ಇಳಿದವರಂತೆ ನಮ್ಮ ಬಳಿ ಬಂದು ನಿಂತರು. ಅವರಿಗೆ ಬುದ್ದಿ ಹೇಳುವಷ್ಟು ನಾವೂ ದೊಡ್ಡವರಲ್ಲದಿದ್ದರೂ ತಪ್ಪು ಮಾಡಿದವರು ಎಷ್ಟೇ ದೊಡ್ಡವರಾದರೂ ಸಣ್ಣ ಸಣ್ಣ ಮಕ್ಕಳು ನ್ಯಾಯ ಬುದ್ದಿವಾದ ಹೇಳುವಂತೆ ನಾವೂ ನಮ್ಮ ನಮ್ಮ ತಲೆಗೆ ತೋಚಿದಂತೆ ಏನೋ ಬ್ಯಾಡ್ ಟೈಮ್ ಆಗಿದೆ ನೀವೇನು ತಪ್ಪು ಮಾಡಿಲ್ಲ. ನೆಮ್ಮದಿಯಾಗಿ ನಿಮ್ ಹೆಂಡತಿ ಜೊತೆ ಸುಖವಾಗಿ ಇರ್ರಿ ಸಾರ್ ಎಂದು ಹೇಳುವ ಹೊತ್ತಿಗೆ ಕಲ್ಲಿನ ಹೊಡೆತಕ್ಕೆ ಅಲೆಗಳ ರಿಂಗಣದಿಂದ ಕೆಟ್ಟುಹೋಗಿದ್ದ ಬಿಂಬ ಪುನಃ ನೀರಿನೊಳು ಸಂಜೆಯ ಹೊಂಬೆಳಕಲ್ಲಿ ಸ್ವಚ್ಚ ಕನ್ನಡಿಯ ಪ್ರತಿಬಿಂಬದಂತೆ ಸ್ಪಷ್ಟವಾಗಿ ಕಾಣುತಿತ್ತು.ಬ್ಯೂಟಿಫುಲ್ ಚಿತ್ರಣದೊಂದಿಗೆ ಸಂಜೆಯ ಸೊಬಗನ್ನು ನೋಡುತ್ತಾ ಮನುವಿನ ಮನದ ಭಾರ ಇಳಿಸಿದವರಂತೆ ಮನೆಗೆ ಹಿಂದಿರುಗಿದೆವು.
ಮನು ಸಾರ್ ನಮಗೂ ಆತ್ಮೀಯರೇ ಆದರೆ ಈ ಪ್ರೀತಿ/ಆಕರ್ಷಣೆ ಯಾವಾಗಲೂ ಸ್ವಾರ್ಥಪರವಾಗಿದ್ದರಿಂದ ಮತ್ತು ವಿವಾಹಿತರೂ ಆಗಿದ್ದರಿಂದ ಈ ವಿಷಯವನ್ನು ನಮ್ಮಿಂದ ಮುಚ್ಚಿಟ್ಟಿದ್ದರೇನೋ..
ನುಡಿದಂತೆ ನಡೆದ ಮನು ಅಂದಿನಿಂದ ಆಕರ್ಷಣೆ ಹೊಂದಿದ ಮಹಿಳೆಯೊಂದಿಗಿನ ಮಾತುಕತೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯಿತು.ಅಲ್ಲದೇ ತಮ್ಮ ಹೆಂಡತಿಯ ಜೊತೆಗೆ ಸಾದ್ಯವಾದಲೆಲ್ಲಾ ಊಟ ತಿಂಡಿ ಆಯಿತಾ ಮಾತಾಡುತ್ತಿದ್ದರು. ಈ ಕ್ಲಿಷ್ಟ ಸಮಸ್ಯೆ ನಮ್ಮಿಂದ ಇಷ್ಟು ಸುಲಭವಾಗಿ ಪರಿಹಾರ ಆಗುತ್ತದೆ ಅಂತ ನಾವು ಭಾವಿಸಿರಲಿಲ್ಲ. ಆದರೆ ಸುಲಭವಾಗಿ ಬಗೆ ಹರಿದು ಕಡಿತಗೊಂಡಿದ್ದ ಕುಟುಂಬದ ಸಂಪರ್ಕ ಆರೋಗ್ಯಕರವಾಗಿ ಮುಂದುವರೆಯಿತು.ಅಂದಿನಿಂದ ಸತಿ ಪತಿ ಇಬ್ಬರೂ ಸಂತೋಷ ಮತ್ತು ಸುಖವಾಗಿದ್ದಾರೆ. ಅವರು ವರ್ಗಾವಣೆಯಾಗಿ ಒಂದು ದಶಕವಾಯಿತು. ಇಂದಿಗೂ ಸಂಪರ್ಕದಲ್ಲಿ ಇದ್ದಾರೆ.ಚೆನ್ನಾಗಿದ್ದೇವೆ ಎಂದು ಹೇಳುತ್ತಾರೆ. ಬಹಳ ಸಂತೋಷ ಆಗತ್ತೆ ಅವರೊಂದಿಗೆ ಮಾತಾಡುವುದು ನನಗೂ ಖುಷಿ ಕೊಡುತ್ತದೆ. ಯಾವುದೋ ಆಕರ್ಷಣೆಯ ಹಿಂದೆ ಹೋದವರು ಯಾರೂ ಖುಷಿಯಾಗಿಲ್ಲ. ಆದರೆ ಪ್ರೀತಿಯಿಂದ ನಂಬಿ ಜೊತೆಯಾಗಿ ಬಾಳಿ ಬದುಕುತ್ತಿರುವವರಿಗೆ ನಮ್ಮ ಪ್ರೀತಿ ಕಾಳಜಿ ಮತ್ತು ಸಮಯ ಕೊಡುವುದರಿಂದ ಅದಕ್ಕೆ ಪ್ರತಿಯಾಗಿ ನಾವು ಪ್ರೀತಿ ಕಾಳಜಿ ಗೌರವ ಸಂತೋಷವನ್ನೂ ಪಡೆಯುವೆವು ಅಲ್ಲವೇ??
ಲೇಖನ ಮುಗಿಸುವ ಮುನ್ನ ಒಂದು ಹುಡುಗಿಯ ಆಯ್ಕೆಗಾಗಿ ಟಾಸ್ ಎತ್ತುವ ಮೂಲಕ ಆಯ್ಕೆ ಮಾಡಲು ಆಯ್ಕೆ ಮಾಡಿಕೊಂಡಿದ್ದು ಸರಿಯಾದ ಕ್ರಮ ಅಲ್ಲದಿದ್ದರೂ ಅಂದಿನ ಘಟನೆಯಿಂದ ನಾವು ಪ್ರೇಮಿಗಳನ್ನು ಬೇರೆ ಮಾಡಿದ್ದು ಸರಿಯೋ ಅಥವಾ ಗಂಡ ಹೆಂಡತಿಯನ್ನು ಒಂದು ಮಾಡಿದ್ದು ಸರಿಯೋ ಎಂಬ ಜಿಜ್ಞಾಸೆ ಆಗಾಗ ಕಾಡುವುದಾದರೂ ಹುಡುಗಾಟದ ಮೂಲಕವೇ ಗಂಡ ಹೆಂಡತಿಯನ್ನು ಒಂದು ಮಾಡಿದೆವು ಎನ್ನುವ ಹಿರಿಮೆ ನಮ್ಮದಾಗಿದೆ. ಆದರೆ ಮದುಮತಿಯ ದೃಷ್ಟಿಯಲ್ಲಿ ನಾನು ಸತೀಶ ಶಾಶ್ವತವಾಗಿ ವಿಲನ್ ಆಗಿ ಉಳಿದುಕೊಂಡಿದ್ದೇವೆ. ಆದರೆ ಮದುಮತಿಯು ನನ್ನವಳು ನನ್ನವಳು ಎಂದು ಕಿತ್ತಾಡಿದ್ದು ಕೇವಲ ಮನು ಅವರನ್ನು ಸರಿಮಾಡಲು ಮಾಡಿದ ಒಂದು ನಾಟಕ ಅಷ್ಟೆ.
✍️ನಾಗೇಂದ್ರ ಬಂಜಗೆರೆ.
Super
ಪ್ರತ್ಯುತ್ತರಅಳಿಸಿ