ಅನ್ನ ಮತ್ತು ಶ್ರಮದ ಬೆಲೆ..

ಅನ್ನ ಮತ್ತು ಶ್ರಮದ ಬೆಲೆ..

ಅದು ಆಷಾಡ ಮಾಸ ಅಂತ ಗೊತ್ತಿರಲಿಲ್ಲ. ನಾವು ಶಾಲೆಗೆ ನಡೆದುಹೋಗುವಾಗ ಅಲ್ಲೊಂದು ಮರಳಿನ ಹೊಲ ಇತ್ತು.ಆ ಹೊಲದಲ್ಲಿ ಬರೀ ಗಾಲಲ್ಲಿ ನಡೆದು ಹೋಗುವಾಗ ಗಾಳಿಯ ಪೋರ್ಸಿಗೆ ಆ ಮರಳಿನ ಕಣಗಳು ಪಳ ಪಳನೆ ಮೊಣಕಾಲಿನವರೆಗೂ ಹೊಡೆಯುತ್ತಿದ್ದವು. ಅಪ್ಪಿ ತಪ್ಪಿ ಮಳೆಯ ಗಾಳಿ ಏನಾದರೂ ಎದ್ದರೆ ಆ ಹೊಲದಲ್ಲಿ ನಡೆದುಕೊಂಡು ಹೋಗುವುದೇ ದುಸ್ತರವಾಗಿತ್ತು.ಅಷ್ಟು ಮರಳೆದ್ದು ಪಟ ಪಟನೆ ಹೊಡೆಯುವ ರಭಸ ಆ ಪರಿ ಇತ್ತು. ಕಣ್ಣು ಬಿಡಲು ಆಗುತ್ತಿರಲಿಲ್ಲ.ಶಾಲೆಯಲ್ಲಿ ಬಿಸಿಯೂಟ ಇರಲಿಲ್ಲ. ಮನೆಯಿಂದ ತಗೊಂಡು ಹೋದ ತಣ್ಣನೆಯ ಊಟ ನನಗೂ ನನ್ನ ತಮ್ಮನಿಗೂ ಎತ್ತಲೂ ಸಾಲುತ್ತಿರಲಿಲ್ಲ. ಆ  ಗಾಳಿಕಾಲದಲ್ಲಿ ಕೆಲಸ ಮಾಡಿ ಅಲ್ಲ ಗಾಳಿಗೆ ಆಹಾರ ಕರಗಿ ಆಹಾರಕ್ಕಾಗಿ ಹಾತೋರಿಯುತ್ತಿರುತ್ತಾರಂತೆ. ಅದಕ್ಕೂ ಮುಂಚೆಯಾದರೆ ಮನೆಯಲ್ಲಿ ಕಡಲೆಕಾಯಿ ಇರುತ್ತಿತ್ತು. ಈ ಕಾಲದಲ್ಲಿ ಬಿತ್ತನೆ ಮಾಡಿದುದ್ದರಿಂದ ಇದ್ದರೆ ಸೀರಲು ಬೀಜ ಎಂದು ಕರೆಯಲ್ಪಡುವ ಶೇಂಗಾ ಬೀಜ ಇರುತ್ತಿದ್ದವಾದರೂ ಒಂದೋ ಎರಡೋ ವಾರಕ್ಕೆ  ಖಾಲಿಯಾಗಿ ಬಿಡುತ್ತಿದ್ದವು. ಆ ಗಾಳಿಯ ಹೊಡೆತಕ್ಕೆ ತರಗೆಲೆಗಳು ಗಾಳಿಯ ಹಿಂದೆ ನಡೆದು ಹೋದಂತೆ ನಾವೂ ನಡೆದು ಬರುತ್ತಿದ್ದೆವು.  ಆಗ ಮನೆಯಲ್ಲಿ ಇದ್ದ ನವಣೆ ಅಕ್ಕಿಯೇ ಸ್ಮ್ಯಾಕ್ ಆಗಿತ್ತು. 

ಹಾಸ್ಟೆಲ್ ಗೆ ಹೋದ ಮೇಲೆ ನೂರೈವತ್ತು ವಿದ್ಯಾರ್ಥಿಗಳು ನೂರೈವತ್ತು ತೆರನಾಗಿ ವೆರೈಟಿಯಾಗಿಯೇ ಇದ್ದರು. ಒಬ್ಬ ಬರೀ ಅನ್ನವೇ ಬೇಕು ಎಂದು ಬಯಸಿದರೆ ಇನ್ನೂಬ್ಬ   ಮುದ್ದೆಯೇ ಬಯಸುತ್ತಿದ್ದರು. ಇನ್ನೂ ಕೆಲವರು ಎರಡನ್ನೂ ಬಯಸುತ್ತಿದ್ದರು.ಹಾಸ್ಟೆಲ್ ನಲ್ಲಿ ಹುಡುಗರೇ ಮುದ್ದೆ ಮಾಡುತ್ತಿದ್ದರಾದ್ದರಿಂದ ಕೆಲವೊಮ್ಮೆ ಮುದ್ದೆ ಯಲ್ಲಿ ಹಿಟ್ಟಿನ ಗಂಟುಗಳು ಎಥ್ಥೇಚ್ಚವಾಗಿದ್ದು ಹಿಟ್ಟಿನ ಗಂಟುಗಳನ್ನು  ತಟ್ಟೆಯ ಪಕ್ಕ ಕೆಳಗಿಟ್ಟು ಕುಪ್ಪೆ ಮಾಡಿರುತ್ತಿದ್ದೆವು. ಆ ಕುಪ್ಪೆಗೆ ಬಲಿತ  ಕರ್ರಗಾದ ಬದನೆಕಾಯಿ ,ತಿನ್ನಲಾಗದ ಬಲಿತ ತರಕಾರಿಗಳೂ ಸೇರುತ್ತಿದ್ದವು.

ಪ್ರಥಮ ಪಿಯೂಸಿ ಮುಗಿದ  ಮೇಲೆ ರಜಾ ಅವಧಿಯಲ್ಲಿ ಊರಿನ ತೋಟದ ಮನೆಯಲ್ಲಿ ಇರುತ್ತಿದ್ದೆ. ರಜೆಯಲ್ಲಿ ನಮ್ಮದು ಗಟ್ಟಿ ಕೃಷಿ ಕೆಲಸಕ್ಕೆ ಕೂಲಿ ಹೋಗುತ್ತಿದ್ದೆ.ಕೂಲಿ ಕೆಲಸ ಅಂದರೆ ಈಗಿನ ರೀತಿಯ ಸುಲಭದ ಕೆಲಸ ಅಲ್ಲ. ಸೂರ್ಯೋದಯ ಮುಂಚೆ ಕೆರೆಗೆ ಹೋಗಿ ಸೂರ್ಯಾಸ್ತದ ನಂತರ ಹಿಂದಿರುಗಬೇಕಿತ್ತು. ಬೇಸಿಗೆಯ ರಣಬಿಸಿಲಲ್ಲಿ ಸಲಿಕೆಯಲ್ಲಿ  ಪುಟ್ಟಿಗೆ ಮಣ್ಣು ತುಂಬಿ ಎತ್ತಬೇಕಿತ್ತು. ಇಲ್ಲವೇ ಪುಟ್ಟಿಯ ಹೊತ್ತು ಟ್ರಾಕ್ಟರ್ ಗೆ ಹಾಕಬೇಕಿತ್ತು. ಸೂರ್ಯೋದಯ ಮುಂಚೆ ಕಟ್ಟಿ ತಂದಿದ್ದ ಬುತ್ತಿಯ ಮುದ್ದೆಗಳು ಬಿಸಿಲಿಗೆ ಒಣಗಿ ಕಾರಿಕ್ ಬಾಲ್  ಆಗಿರುತ್ತಿದ್ದವು.ಆ ಕೆಲಸಕ್ಕೆ ಕಾರಿಕ್ ಬಾಲ್ ಗಿಂತ ಗಟ್ಟಿಯಾದ ಆಹಾರ ವಸ್ತುಗಳನ್ನು ತಿನ್ನುವಂತಿರುತ್ತಿತ್ತು. ಆದರೆ ಏನಾದರೂ ಸಿಗಬೇಕಿತ್ತು ಅಷ್ಟೇ. ದಿನವಿಡೀ ಮಣ್ಣಿನ ಕೆಲಸ ಮಾಡುತ್ತಿದ್ದ ನಾನು ಮಣ್ಣು ಹೊಡೆಸಿಕೊಳ್ಳುತ್ತಿದ್ದ ರೈತರು ದೊಡ್ಡ ಮನಸುಮಾಡಿ ಒಪ್ಪತ್ತಿನ ಮುದ್ದೆ ಚಟ್ನಿ ಕೊಡಲು ಒಪ್ಪಿದರೆ ಅದೇ ಅಂದು ನಮಗೆ  ಹಬ್ಬದೂಟ.ಇಲ್ಲವಾದರೆ ಮನೆಗೆ ಹೋಗಿ ಊಟಕ್ಕೆ ಕುಳಿತರೆ ಎರಡ್ಮೂರು ಮುದ್ದೆ ನನಗೆ ಏನೇನಕ್ಕೂ ಸಾಲುತ್ತಿರಲಿಲ್ಲ.

 ಒಂದು ದಿನ ನಮ್ಮ ಇನ್ನೊಂದು ಹೊಲದಲ್ಲಿ ಎಡೆಕುಂಟೆಹಾಕುವ ಸಲುವಾಗಿ ಹೋಗಿದ್ದೆ. ಎತ್ತು ಮತ್ತು ಕುಂಟೆಗಳು ನಮ್ಮ ತಮ್ಮ ಬಂಡೀದಾರಿಯಲ್ಲಿ ಹೋಗಿದ್ದ. ನಾನು ಹಾಗೆ ಹೊಲಗಳ ಮಧ್ಯದಲ್ಲಿ ನಡೆದು ಹೋಗುತ್ತಿದ್ದೆ. ಹೋಗುವ ದಾರಿಯ ಮದ್ಯದಲ್ಲಿ  ಗೋವಿಂದಪ್ಪ ಎನ್ನುವವರು ಈರುಳ್ಳಿ ಗೆ ನೀರುಣಿಸುತ್ತಿದ್ದರು.ಅವರ ಪತ್ನಿ ಆಗ ತಾನೆ ಮನೆಯಿಂದ ಹೊತ್ತು ತಂದ ಊಟದ ಬುತ್ತಿಯ ಬಿಚ್ಚಿ ಊಟಕ್ಕೆ ಕುಳಿತಿದ್ದರು. ಆ ಸಮಯಕ್ಕೆ ಅಲ್ಲಿಂದ ಹಾದು ಹೋಗುತ್ತಿದ್ದಾಗ ಗೋವಿಂದಪ್ಪ "ಬಾರೋ ಊಟ ಮಾಡೋಣ "ಎಂದರು 

ಮಾಡಿ ಮಾಡಿ ನನ್ನದಾಯಿತು ಎಂದು  ಯೋಗಕ್ಷೇಮ ವಿಚಾರಿಸುತ್ತಾ ಒಂದೆರಡು ನಿಮಿಷಗಳ ಕಾಲ ನಿಂತೆ. ಗೋವಿಂದಪ್ಪ ಮುದ್ದೆ ಮುರಿಯುತ್ತಿದ್ದಾರೆ. ಮುದ್ದೆಯ ಮುರಿದು ಮಿದಿಕೆ ಕಟ್ಟಿ ತಿನ್ನುತ್ತಿರುವಾಗ ಮುದ್ದೆಯಲ್ಲಿ ಗಂಟಾಗಿ ಹಿಟ್ಟಿನ ಉಂಡೆ ಕಾಣಿಸಿತು.ಆ ಗೋವಿಂದಪ್ಪ   ಆ ಹಿಟ್ಟಿನ ಉಂಡೆ ಎತ್ತಿಡದೇ  ಅದನ್ನು ಮದ್ದೆಯಲ್ಲಿ ಹೆಬ್ಬೆರಳಿನಿಂದ ಅದುಮಿತ್ತಿದ್ದರು. ಅದನ್ನು ನೋಡಿದ ನಾನು ಆ ಹಿಟ್ಟು ಯಾಕೆ ತಿಂತಿಯಾ ಕೆಳಗಿಟ್ಟು ಉಣ್ಣಪ್ಪ ಎಂದು ಹೇಳಿದೆ. ಅದಕ್ಕವರು  "ಅಲೇಲೇ ನಾಗೇಂದ್ರ  ಎಷ್ಟು ಸುಲಭವಾಗಿ ಹೇಳುತ್ತೀಯೋ ಇಷ್ಟು ಹಿಟ್ಟಿನ ಕಾಳು ಬೆಳಿಯಲು ಎಷ್ಟು ಕಷ್ಟ ಪಟ್ಟೀನಿ ಗೊತ್ತೇನೋ?  ಅದು ಬೆಂದೈತೆ ಆದರೆ ಗಂಟು ಆಗಿದೆ ಅಷ್ಟೇ ಎಂದು ನೋಡು ನೋಡುತ್ತಲೇ  ಮುದ್ದೆಯೊಳಗೆ ಅದುಮಿ ಸಾರು ಅದ್ದಿ ಗುಳುಂ ಎಂದು ನುಂಗಿಬಿಟ್ಟರು.


ಒಂದು ಕ್ಷಣ ಗಂಭೀರವಾಗಿ ಯೋಚನೆ ಮಾಡುತ್ತಾ ನಿಂತೆ.

ಹೌದಲ್ಲವೇ ? ಬೆಳೆದವನಿಗೆ ಗೊತ್ತು ಕಾಳಿನ ಬೆಲೆಯು.ಪ್ರತಿಯೊಂದು ಕಾಳು ಬೆಳೆಯಲು ರೈತ ಎಷ್ಟು ಕಷ್ಟಪಟ್ಟಿರುತ್ತಾನೆ. ಅವರು ಹೇಳಿದ್ದು ಸತ್ಯ ಅನಿಸಿತು. 

ನಾನು ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂಡೂರು ತಾಲ್ಲೂಕಿನ ರಾಜಾಪುರ ಗ್ರಾಮದಲ್ಲಿ  ಇಬ್ಬರು ವೃದ್ಧ ದಂಪತಿಗಳು ಪಾತ್ರೆ ಮತ್ತು ಒಂದು ಕ್ಯಾರಿಯರ್ ಹಿಡಿದು  ಮಧ್ಯಾಹ್ನದ ಊಟದ ಹೊತ್ತಿಗೆ ಬಂದು ಕುಳಿತಿರುತ್ತಿದ್ದರು. ನಮ್ಮ ಶಾಲೆಗೆ ಇಸ್ಕಾನ್ ವತಿಯಿಂದ ಊಟ ಪೂರೈಕೆಯಾಗುತ್ತಿತ್ತು. ಪ್ರಭಾರಿ ಮುಖ್ಯಗುರುಗಳಾಗಿದ್ದ ನಾನು ಒಂದೆರಡು ದಿನಗಳು ಮಕ್ಕಳಿಗೆ ಬಡಿಸಿದ ಮೇಲೆ  ಉಳಿದ ಅನ್ನವನ್ನು ಅವರಿಗೆ ಹಾಕಿ ಕಳುಹಿಸುತ್ತಿದ್ದೆ. ಒಂದು ದಿನ ನಮ್ಮ ಅಡುಗೆ ಸಹಾಯಕರನ್ನು ಆ ದಂಪಂತಿಗಳ ಹಿನ್ನೆಲೆ ಕೇಳಿದೆ. ಅವರಿಗೆ ಯಾರೂ ಇಲ್ಲ ಮದ್ಯಾಹ್ನ ಮತ್ತು ಸಂಜೆಗೆ ನಮ್ಮ ಶಾಲೆಯ ಊಟವೇ ಆಧಾರ ಇದನ್ನೇ ಅವರು ರಾತ್ರಿಗೂ ಇದನ್ನೇ ಉಳಿಸಿಕೊಂಡು ಊಟ ಮಾಡುತ್ತಾರೆ ಎಂದು ಹೇಳಿದರು. ನನಗೆ ಕರಳು ಕಿವುಚಿ ಬಂದಂತಾಗಿ ಅಂದಿನಿಂದ ಅವರಿಗೆ ತುಸು ಹೆಚ್ಚಿಗೆ ಹಾಕಿ ಕಳುಹಿಸುತ್ತಿದ್ದೆ. ಕೆಲವೊಮ್ಮೆ ಅನ್ನ ಸಾರು ನಲವತ್ತು ಐವತ್ತು ಹುಡುಗರಿಗೆ ಆಗುವಷ್ಟು ಉಳಿಯುತ್ತಿತ್ತು. ಅದನ್ನು ಓಣಿ ಓಣಿಗೆ ಹೋಗಿ ಅವಶ್ಯಕತೆ ಇರುವವರಿಗೆ ಅನ್ನನೀಡಿ ಬರುತ್ತಿದ್ದೆವು.ಇದು ನೂರಾರು ದಿನಗಳ ಕಾಲ ಮಾಡಿದ್ದೇನೆ,ಮಾಡುತ್ತಿದ್ದೇನೆ.

  ಲೇಖನ ಮುಗಿಸುವ ಮುನ್ನ  ನಾನೂ ಹಾಸ್ಟೆಲ್ನಲ್ಲಿ  ಇರುವಾಗ ಲೆಕ್ಕವಿಲ್ಲದಷ್ಟು ಅನ್ನ ಚೆಲ್ಲುತ್ತಿದ್ದೆ.ಅದರೆ ನಿಜವಾಗಲು ನನಗೆ ಗೋವಿಂದಪ್ಪ ನ ಮಾತಿನಿಂದ ಅನ್ನದ ಬೆಲೆಯ ಅರಿವಾಗಿತ್ತು. ಈ ಹಿಂದೆ ಕೆರೆಯ ಮಣ್ಣು ತುಂಬುತ್ತಿದ್ದಾಗ ಹಸಿವಿನ ಬೆಲೆ ಅರಿವಾಗಿತ್ತು,ಆದರೆ ಅಂದು ಗೋವಿಂದಪ್ಪ  ಹೇಳಿದ ಶ್ರಮದ ಬೆಲೆಯೂ ಅರಿವಾಯಿತು. ಈರುಳ್ಳಿ ಯ ಹೊಲದ ಬದುವಿನ ಮೇಲೆ ಕುಕ್ಕರುಗಾಲಲ್ಲಿ ಕುಳಿತು ಹಿಟ್ಟನ್ನು ಮದ್ದೆಯಲ್ಲಿ ಅದುಮಿಕೊಂಡು ಊಟಮಾಡಿದ್ದು ಸ್ಪಷ್ಟವಾಗಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.ಉಳ್ಳವರು ಲೆಕ್ಕವಿಲ್ಲದಷ್ಟು ವೃಥಾ ಅನ್ನ ವೇಸ್ಟ್ ಮಾಡುತ್ತಿದ್ದರೆ ಅತ್ತ ಬೆವರು ಸುರಿಸಿ ಬೆಳೆದ  ರೈತ   ಒಪ್ಪತ್ತು ಉಂಡು ಲೋಕವನ್ನು ಸಲುಹುತ್ತಿರುವವನು.

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..