ಸಕಲೇಶಪುರ ಪಯಣ..
ಸಕಲೇಶಪುರ ಪಯಣ..
ನಕ್ಷತ್ರ ಆಕಾರದ ಮಂಜ್ರಾಬಾದ್ ಕೋಟೆ ಬಹಳ ದಿನಗಳಿಂದ ಕಣ್ಣುಕುಕ್ಕಿಸಿತ್ತು.ಎರಡ್ಮೂರು ವರ್ಷಗಳು ಹೋಗಬೇಕು ಹೋಗಬೇಕು ಎಂದೆನಿಸಿದರೂ ಅದ್ಯಾಕೋ ಸಮಯ ಮತ್ತು ಹಣದ ಕಾಂಬೀನೇಷನ್ ಆಗದೇ ಹೋಗಲು ಸಾಧ್ಯ ಆಗಿರಲಿಲ್ಲ. ದಿನಾಂಕ: 13-10-2018 ರಂದು ಇದಕ್ಕೆ ಮುಹೂರ್ತ ಪಿಕ್ಸ್ ಮಾಡಿದೆವು.
ಅಂದು ಮಧ್ಯಾಹ್ನ ಮೂರಗಂಟೆಗೆ ತರೀಕೆರೆಯಿಂದ ನಾನು ಕುಮುದಾ,ಮಗಳು ತನೇಹಾ ಮತ್ತು ಶಿವು ಕುಮುದಾಳ ತವರು ನರಸಿಂಹರಾಜಾಪುರಕ್ಕೆ ಹೊರಟೆವು. ನಾಲ್ಕುವರೆ- ಐದಕ್ಕೆ ನರಸಿಂಹ ರಾಜಾಪುರ ತಲುಪಿ ಅಲ್ಲಿಯ ಮನೆಯಲ್ಲಿ ಕೇವಲ ಅರ್ಧ ಗಂಟೆ ಇದ್ದು ಆಮೇಲೆ ಬಾಳೆ ಹೊನ್ನೂರು ತಲುಪಿದೆವು.ಬಾಳೆಹೊನ್ನೂರಿನಲ್ಲಿದ್ದ ನಮ್ಮ ಬಂಧು ಪೂರ್ಣೇಶ್ ಮನೆಗೆ ಹೋದೆವು. ಅವರು ನಾವು ಬರುವೆವು ಎಂದು ಚೌ ಚೌ ಬಾತ್ ಅನ್ನು ಮಾಡಿದ್ದರು.ಅದಕ್ಕೂ ಮುಂಚೆ ಒಂದೆರಡು ಬಾರಿ ಸ್ವೀಟ್ ಮತ್ತು ಕಾಪಿ ಟೀ ಯನ್ನು ಕುಡಿದ್ದರಿಂದ ಸ್ವಲ್ಪವೇ ಕೊಡಿ ಎಂದರೂ ತಿನ್ನಿ ಮಾರ್ರೆ ಎಂದು ಬಹಳಷ್ಟು ಹಾಕಿದ್ದರು. ನನ್ನ ಪಾಲಿನ ಎಲ್ಲಾ ಕೇಸರಿ ಬಾತ್ ನ್ನು ಪಕ್ಕದಲ್ಲಿ ಕುಳಿತಿದ್ದ ಅಳಿಯ ಶಿವುಗೆ ಹಾಕಿದೆ.ಅವನೋ ಅಳುವ ಮುಖ ಮಾಡಿಕೊಂಡು ಗೆಸ್ಟ್ ಮನೆಗೆ ಬಂದೀವೀ ವೇಸ್ಟ್ ಮಾಡಬೇಡ ಎಂದೇಳಿದ್ದಕ್ಕೆ ಒಲ್ಲದ ಮನಸ್ಸಿನಿಂದ ಅಷ್ಟನ್ನೂ ತಿಂದು ಮಂಪರು ಬಂದ ಹಾಗೆ ಮಾಡುತ್ತಿದ್ದ. ಅಂದು ಬಹುಶಃ ಒಂದು ತುತ್ತು ಹೆಚ್ಚಿಗೆ ಹಾಕಿದ್ದರೂ ಅಲ್ಲೇ ಕಕ್ಕಿಬಿಡುತ್ತಿದ್ದೆ ಮಾಮ ಎಂದೇಳಿ ಹೊರಗಡೆ ಬಂದು ಮತಿಭ್ರಮಣೆಯಾದಂತೆ ತಿರುಗುತ್ತಿದ್ದ. ಅಂದಿನಿಂದ ಇಂದಿನವರೆಗೆ ಅವನು ಕೇಸರಿಬಾತ್ ತಿಂದಿಲ್ಲ. ಅವರನ್ನು ಮಾತಾಡಿಸಿಕೊಂಡು ಹೊರಡುವ ವೇಳೆಗೆ ಇಳೆಗೆ ನಿಷಾ ಆವರಿಸುತ್ತಿದ್ದಳು. ತಣ್ಣನೆಯ ಸುಳಿಗಾಳಿಯ ತಂಪನ್ನು ಅನುಭವಿಸುತ್ತಾ ಚಿಕ್ಕಮಗಳೂರು ಸಿಟಿಯ ದಾಟಿ ಮೂಡಿಗೆರೆ ತಲುಪಿದೆವು. ಮೂಡಿಗೆರೆಯಲ್ಲಿ ಕಡಿದಾಡಲು ಕೆಲವೊಂದು ಕುರುಕಲು ತಿನಿಸುಗಳನ್ನು ಕೊಂಡು ಸಕಲೇಶಪುರದ ದಾರಿ ಹಿಡಿದು ಬಿಟ್ಟೆವು.
ಸಕಲೇಶಪುರ ಸರ್ರೌಂಡಿಗ್ಸ್ ಹಸಿರು ಹುಲ್ಲುಹಾಸಿನ greenary ಗಳನ್ನು ಅನೇಕ ಫಿಲಂ ಗಳಲ್ಲಿ ಶೂಟಿಂಗ್ ಮಾಡಿದ್ದಾರೆ. ಅವೆಲ್ಲಿರಬಹುದು ಎಂದು ಮಾತನಾಡುತ್ತಾ, ಕತ್ತಲಾಗಿದ್ದುದರಿಂದ ರಸ್ತೆಯ ಇಕ್ಕೆಲಗಳಲ್ಲಿ ಕಾಫಿಗಿಡಗಳು ಅಲ್ಲಲ್ಲಿ ಎಸ್ಟೇಟ್ ಮನೆಗಳು ಇರುವ ಸೆಮಿ ಘಾಟಿ ರಸ್ತೆಯಲ್ಲಿ ಸುಮಾರು ಹತ್ತುವರೆ-ಹನ್ನೊಂದು ಗಂಟೆಗೆ ಸಕಲೇಶಪುರ ತಲುಪಿದೆವು. ಅಂದು ಅಲ್ಲಿ ಉಳಿದುಕೊಳ್ಳಲು ಒಂದು ಲಾಡ್ಜ್ ಮಾಡಬೇಕಿತ್ತು. ಸಕಲೇಶಪುರ ಲಾಡ್ಜ್ ಗಳು ಬಹಳ ಡಿಮ್ಯಾಂಡ್ ಇದೆ. ಸೊ ತುಂಬಾ ಕಾಸ್ಟ್ಲಿ.ಎಂಟರೆನ್ಸ್ ಲ್ಲಿ ಒಂದು ಲಾಡ್ಜ್ ನ್ನು ವಿಚಾರಿಸಿದಾಗ ಮೂರೆವರೆ ನಾಲ್ಕು ಸಾವಿರ ಹೇಳಿದ್ದರು. ಯಾಕೋ ಬಹಳ ಕಾಸ್ಟ್ಲಿ ಅನಿಸಿ ಮುಂದೆ ಹೋಗೋಣ ಅಂತ ಮುಂದೆ ಬಂದೆ. ಇನ್ನೊಂದು ಲಾಡ್ಜ್ ಕಾಣಿಸಿತು. ಅಲ್ಲಿ ಹೋಗಿ ವಿಚಾರಿಸಿಕೊಂಡು ಬರೋಣ ಎಂದು ರಿಸೆಪ್ಸನ್ ಹತ್ತಿರ ಹೋದರೆ ಮೂರು ನಾಲ್ಕುಜನ ಸೇರಿಕೊಂಡು ಎಣ್ಣೆ ಹೊಡೆಯುತ್ತಿದ್ದರು. ರೂಂ ತೋರಿಸಿ ಎಂದು ಕೇಳಲು ಮನಸಾಗಲಿಲ್ಲ. ಬೇರೆ ನೋಡುವ ಎಂದು ಮುಂದೆ ಬಂದು ಯಾವುದೋ ಒಂದು ರೂಂ ನೋಡಿ ಸೆಟ್ಲ್ ಆದೆವು.
ಮರುದಿನ ಐದುಗಂಟೆಗೆ ಎದ್ದು ಮಂಜ್ರಾಬಾದ್ ಕೋಟೆಯ ನೋಡಬೇಕು ಎನ್ನುವ ತವಕ. ಚಳಿಯ ಮದ್ಯೆ ಸುತ್ತಲು ಹಿಮದ ರಾಶಿಯಂತೆ ಕಾಣುತ್ತಿರುವ ಮಂಜು. ಮುಂಜಾವಿನ ವೇಳೆ ಯಾವಾಗಲೋ ಒಂದು ಸುತ್ತು ಸೋನೆಯೂ ಬಂದು ಹೋಗಿತ್ತು.ರೆಡಿಯಾಗಿ ರೂಂ ಇಂದ ಹೊರ ಬರುವ ಹೊತ್ತಿಗೆ ಏಳು ಏಳುವರೆ ಆಗಿಯೇ ಬಿಡ್ತು. ಅಷ್ಟೊತ್ತಿಗಾಗಲೇ ಹೊಟ್ಟೆಯೂ ತಾಳ ಹಾಕುತಿತ್ತು. ಯಾವುದೋ ಒಂದು ಹೊಟೆಲ್ ಒಳಗೆ ಹೊಕ್ಕು ನಮಗೆ ಬೇಕಾದ ತಿಂಡಿ ತಿನಿಸು ತಿಂದೆವು. ಸಾಮಾನ್ಯವಾಗಿ ನಾವು ಎಲ್ಲಿಯೇ ಹೋದರೂ ಅಲ್ಲಿಯ ಸ್ಥಳೀಯ ಆಹಾರ ಖಾದ್ಯಗಳಿಗೆ ನಮ್ಮ ಆದ್ಯತೆ.ಅದರಂತೆ ಅಕ್ಕಿರೊಟ್ಟಿಯನ್ನು ಆರ್ಡರ್ ಮಾಡಿ ತಿಂದು ಸಕಲೇಶಪುರದಿಂದ ಹತ್ತು ಕಿ ಮೀ ದೂರದಲ್ಲಿದ್ದ ಮಂಜ್ರಾಬಾದ್ ಕೋಟೆಗೆ ನಮ್ಮ ಪಯಣ ಆರಂಭವಾಯಿತು. ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಕೋಟೆಯ ಸಮೀಪಕ್ಕೆ ಬಂದು ಕಾರು ನಿಲ್ಲಿಸಿದೆ. ಸುಮಾರು ನೂರೈವತ್ತು-ಇನ್ನೂರು ಮೆಟ್ಟಿಲು ಹತ್ತಿ ಮಂಜ್ರಾಬಾದ್ ಕೋಟೆಗೆ ತಲುಪಬೇಕು. ತಣ್ಣನೆಯ ಶೀತಗಾಳಿಯ ನಡುವೆ ಹತ್ತಿಹೋದೆವು.
ಮಂಜ್ರಾಬಾದ್ ಕೋಟೆಯು ಎತ್ತರದ ಗುಡ್ಡ ಪ್ರದೇಶದಲ್ಲಿ ಟಿಪ್ಪುಸುಲ್ತಾನನು ನಿರ್ಮಿಸಿದ ಕೋಟೆ. ನಕ್ಷತ್ರ ಆಕಾರದ ಅಷ್ಟಕೋನಾಕೃತಿಯಲ್ಲಿರುವ ಆಕರ್ಷಣೀಯ ಮತ್ತು ವಿಶೇಷವಾದ ಕೋಟೆ. ಎತ್ತರದ ಗುಡ್ಡ ಪ್ರದೇಶದಲ್ಲಿರುವ ಇದರ ಮೇಲೆ ನಿಂತು ನಿಂತು ನೋಡಿದರೆ ಅರಬ್ಬೀ ನೀಲಿ ಸಾಗರವನ್ನೂ ನೋಡಬಹುದಂತೆ ಆದರೆ ಮಂಜು ಇಲ್ಲದೇ ಆಕಾಶ ಶುಭ್ರವಾಗಿ ಇರಬೇಕು ಅಷ್ಟೇ.ಆದರೆ ಮಂಜ್ರಾಬಾದ್ ಕೋಟೆಯಲ್ಲಿ ನಿಂತು ನೋಡಿದರೆ ಮಂಜು ಇಲ್ಲದೇ ಇರುವುದಿಲ್ಲ. ಮಂಜಿಲ್ಲದೇ ಶುಭ್ರವಾದ ಆಕಾಶ ಕಾಣ ಸಿಗುವುದು ಬಹಳ ಅಪರೂಪ ಅಂತನೇ ಹೇಳಬಹುದು.ಯಾವಾಗಲೂ ದಟ್ಟವಾದ ಮಂಜಿನಿಂದ ಕೂಡಿರುವ ಪ್ರದೇಶ ಆಗಿದ್ದರಿಂದಲೇ ಇದನ್ನು 'ಮಂಜ್ರಾಬಾದ್' ಎಂದು ಹೆಸರಿಟ್ಟಿರಬಹುದು.
ನಕ್ಷತ್ರಾಕಾರದ ಮನಮೋಹಕ ಕೋಟೆಯನ್ನು ಕಲ್ಲು,ಗಾರೆ ಮತ್ತು ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಿದ್ದಾರೆ. ನೆಲಮಹಡಿಯ ಕೋಣೆಗಳು ಇದ್ದಾವೆ. ಆದರೆ ಇದಕ್ಕೆ ಪ್ರವೇಶವನ್ನು ಅನುವು ಮಾಡಿ ಕೊಟ್ಟಿಲ್ಲ. ಶ್ರೀರಂಗಪಟ್ಟಣದ ವರೆಗೆ ಸುರಂಗ ಮಾರ್ಗವೂ ಇದೆಯೆಂದು ಹೇಳುವರು. ಆದರೆ ಇದು ವಾಸ್ತವವಾಗಿ ನೂರಾರು ಕಿಲೋ ಮೀಟರ್ ಗಳಷ್ಟು ಸುರಂಗಮಾರ್ಗ ನಿರ್ಮಾಣ ಆಗಿನ ಕಾಲದಲ್ಲಿ ಕಷ್ಟಸಾಧ್ಯ.
ಸುಮಾರು ಒಂದೆರಡು ಗಂಟೆಗಳ ಕಾಲ ಮನಸೋ ಇಚ್ಚೆ ಮಂಜ್ರಾಬಾದ್ ಕೋಟೆಯಲ್ಲಿ ನಿಂತ ರಮಣೀಯ ಹಸಿರರಾಶಿಯೋಳು ಬಿಳಿಯ ಬಟ್ಟೆಯಂತಹ ಮಂಜಿನ ಸೊಬಗನ್ನು ಸವಿದು ಮುಂದೆ ಸಾಗಿದ್ದು ಬಿಸಿಲೆ ಘಾಟ್ ಮಾರ್ಗವಾಗಿ ಸುಬ್ರಹ್ಮಣ್ಯ. ಸುಬ್ರಹ್ಮಣ್ಯ ಹೋಗುವ ದಾರಿಯಲ್ಲಿ ಹಸಿರ ಹೊದಿಕೆಯಂತೆ ಕಾಣುತ್ತಿದ್ದ ಹುಲ್ಲಿನ ಹಾಸಿಗೆಯಲ್ಲಿ ಬಿದ್ದು,ಹೊರಳಾಡಿ ಮುಂದೆ ಬಂದಾಗ ಕಂಡಿದ್ದು 'ಮೂಕನ ಮನೆ ಪಾಲ್ಸ್ ' ಎನ್ನುವ ಬೋರ್ಡ್.ಹತ್ತು ಹದಿನೈದು ಕಿಲೋಮೀಟರ್ ದೂರ ಇತ್ತು. ಹೋಗೋಣ ಎಂದೆನಿಸಿ ಕಾರನ್ನು ಅತ್ತ ತಿರುಗಿಸಿದೆ.
ಮೂಕನ ಮನೆ ಪಾಲ್ಸ್ ಗೆ ಹೋಗುವ ರಸ್ತೆ ಹೆಚ್ಚುಕಡಿಮೆ ಸಮತಟ್ಟಾದ ಭೂ ಪ್ರದೇಶ. ಅಲ್ಲೊಂದು ಇಲ್ಲೊಂದು ದೂರ ದೂರದಲ್ಲಿ ಇರುವ ಒಂಟಿ ಒಂಟಿ ಮನೆಯವರು ಮನೆಯ ಸುತ್ತಲೂ ಹತ್ತು ಹನ್ನೆರಡು ಅಡಿಯಷ್ಟು ಎತ್ತರದ ಪೆನ್ಸಿಂಗ್ ಹಾಕಿಸಿದ್ದಾರೆ. ಆನೆಗಳು ಇರಬೇಕು ಎಂದೆನಿಸುವಾಗಲೇ ಒಂದೆರಡು ದಿನಗಳ ಹಿಂದೆ ಹಾಕಿದ್ದ ಆನೆಯ ಲದ್ದಿ ಗೋಚರಿಸಿತು. ಓ ಆನೆ ಇವೆ ಎಂದು ಕನ್ಪರ್ಮ ಆಗಿ ನಿರ್ಜನ ಪ್ರದೇಶದ ರಸ್ತೆಯಲ್ಲಿ ಒಂಟಿಯಾಗಿ ಬಂದೆವೆನೋ ಎಂದೆನಿಸುವಂತೆ ಭಾಸವಾಯಿತು.ಮಳೆಗೆ ಕೊಚ್ಚಿ ಹೋಗಿ ಕೊರಕಲು ಬಿದ್ದ ರಸ್ತೆ. ಪಾರ್ಕಿಂಗ್ ಎನ್ನುವ ಅಸ್ಪಷ್ಟ ಬೋರ್ಡ್ ನೋಡಿ ಅಲ್ಲೇ ಕಾರು ನಿಲ್ಲಿಸಿ ಸುಮಾರು ಐದುನೂರು ಮೀಟರ್ ನಡೆದುಕೊಂಡು ಹೋದೆವು. ಜನಸಾಂದ್ರತೆ ಕಡಿಮೆ. ಅಲ್ಲೊಬ್ಬರು ಇಲ್ಲೊಬ್ಬರು ಹುಡುಗ ಹುಡುಗಿ ಯರ ಜೋಡಿ.ಕೈಯಲ್ಲಿ ಮದ್ಯದ ಬಾಟಲ್,ಸಿಗರೇಟ್ ಹಿಡಿದು ಆನೆ ಬಂದರೂ ಕಾಣದಂತಹ ಮತ್ತಿನಲ್ಲಿ ಕಾಣಸಿಗುತ್ತಿದ್ದರು.ನಡೆದು ಹೋಗುವಾಗ ನೀರು ಧುಮ್ಮಿಕ್ಕುವ ಶಬ್ದ. ಇಲ್ಲೇ ಎಲ್ಲೋ ಪಾಲ್ಸ್ ಇರಬೇಕು ಎಂದು ಬಗ್ಗಿ ನೋಡಿದರೆ ಗಿಡ ಮರಗಳ ಮದ್ಯೆ ಕಾಣಲಿಲ್ಲ. ಒಂದು ಕಾಲು ದಾರಿಯ ಹಿಡಿದು ಹೋಗಿ ನೋಡಿದರೆ ಪಕ್ಕದಲ್ಲೇ ನೀರು ಧುಮ್ಮಿಕ್ಕುವ ದೃಶ್ಯ ಕಂಡು ಆಯಾಸ ಎಲ್ಲಾ ಮಾಯವಾಯಿತು.
ನೂರಿನ್ನೂರು ಮೀಟರ್ ದೂರದಲ್ಲಿ ಆನೆಗಳು ಘೀಳಿಡುವ ಶಬ್ದ ಕೇಳಿಸುತ್ತಿದೆ. ಇಪ್ಪತ್ತು ಮುವತ್ತು ನಿಮಿಷಗಳ ಕಾಲ ತಣ್ಣನೆಯ ನೀರಲ್ಲಿ ಆಟ ಆಡಿ ಹಿಂತಿರುಗಿದೆವು. ಅಲ್ಲಿಂದ ಎತ್ತಿನ ಬುಜದ ಆಕೃತಿಯ ಬೆಟ್ಟ ಮನಮೋಹಕವಾಗಿ ಕಾಣುತ್ತಿತ್ತು.ಈ ಸ್ಥಳದಲ್ಲಿ ಮಾತನಾಡುವವರು ದಿಕ್ಕಿಲ್ಲದೇ ಇರುವುದರಿಂದ ಇದನ್ನು ಮೂಕನ ಮನೆ ಪಾಲ್ಸ್ ಎಂದು ಕರೆದಿರಬೇಕು. ನಿಜವಾಗಲೂ ಅಲ್ಲಿ ಯಾರೂ ಇಲ್ಲ.ಜೇನುಕಲ್ ಗುಡ್ಡ, ಶಿಶಿಲೆ, ಕುಮಾರ ಪರ್ವತಗಳು ಹೀಗೆ ಟ್ರೆಕ್ಕಿಂಗ್ ಸ್ಥಳಗಳು ಇದ್ದಾವೆ. ಆಸಕ್ತರು ಟ್ರೈ ಮಾಡಬಹುದು.
ನಮ್ಮ ಪಯಣ ಸುಬ್ರಹ್ಮಣ್ಯ ರಸ್ತೆಯ ಹಿಡಿದು ಬಿಸಿಲೆ ಘಾಟ್ ನ ವೀಕ್ಷಣಾ ಗೋಪುರದ ಬಳಿ ಬಂದೆವು.ವಿಶಾಲ ಮತ್ತು ಅಗಾಧ ಪ್ರಮಾಣದ ಹಸಿರ ರಾಶಿಯ ಅರಣ್ಯ ನೋಡ ಪುಳಕಿತರಾದೆವು.
ನಿಧಾನವಾಗಿ ಮುಂದೆ ಬಂದರೆ ಬಿಸಿಲೆಘಾಟಿ ರಸ್ತೆಯಲ್ಲಿ ಕಾಣಸಿಗುತ್ತಿದ್ದ ಝರಿ ಗಳನ್ನು ನೋಡುತ್ತಾ ಬರುವಾಗ ನಮಗೆ ಒಂದು ಸೇತುವೆ ಎದರಾಯಿತು. ಹಳೆಯ ಸೇತುವೆ ಸುಮಾರಾಗಿ ನೀರು ಹರಿಯುತಿತ್ತು. ಕಾರು ಸೈಡಿಗೆ ಹಾಕಿ ಹಳ್ಳಕ್ಕೆ ಇಳಿದು ಹತ್ತು ಹದಿನೈದು ನಿಮಿಷಗಳ ಕಾಲ ಆಡಿ ಮುಂದೆ ಬಂದೆವು.
ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಕಿಲೋಮೀಟರ್ ವರೆಗೆ ಗುಡ್ಡ ಕುಸಿದು ಅಪಾರವಾದ ಗಿಡ ಮರಗಳು ಪ್ರಪಾತಕ್ಕೆ ಉರುಳಿ ಹೋಗಿದ್ದವು.ಆ ಗುಡ್ಡ ಕುಸಿತದ ಚಿತ್ರಣವನ್ನು ನೋಡಿದರೆ ಮೈ ಜುಮ್ ಎನ್ನುವ ಹಾಗೆ ಇತ್ತು.
ಇನ್ನೂರು ಮನ್ನೂರು ಮೀಟರ್ ಅಗಲ ಗುಡ್ಡಗಳ ಕುಸಿತ ಆಗಲು ಅದೆಷ್ಟು ಮಳೆ ಅಲ್ಲಿ ಸುರಿದಿತ್ತೋ ನಾ ಕಾಣೆ.ಆದರೆ ಬೆಟ್ಟ ಕುಸಿತದ ಚಿತ್ರಣ ಬಹಳ ಭಯಾನಕವಾಗಿತ್ತು.ರಸ್ತೆಯುದ್ದಕ್ಕೂ ಕಾಣಬರುವ ಎಲ್ಲಾ ಝರಿಗಳ ಅಂದ ಸವೆಯುತಾ ಬರುತ್ತಿರುವಾಗ ಕುಮಾರಧಾರ ನದಿಯ ಯಾವುದೋ ಉಪನದಿಯೊಂದರಲ್ಲಿ ಬಹಳ ನೀರು ಹರಿಯುತ್ತಿತ್ತು. ಇಳಿಯಲು ದಾರಿ ಇದೆಯಾ ಎಂದು ನೋಡಿ ಬರಲು ಅಳಿಯ ಶಿವುಗೆ ಕಳುಹಿಸಿ ಅವನು ಇದೆ ಎಂದು ಕರೆದ ಮೇಲೆ ಗಾಡಿ ಸೈಡ್ ಗೆ ಹಾಕಿ ಹಳ್ಳದ ನೀರಿನಲ್ಲಿ ಇಳಿದೆವು.
ಬಿಸಿಲೇ ಘಾಟಿಯಲ್ಲಿರುವ ಇದು ಆ ಪ್ರದೇಶದಲ್ಲಿ ಬೀಳುವ ಮಳೆಯ ನೀರು ಕಲ್ಲಿನ ಎಡಭಾಗಕ್ಕೆ ಬೀಳುವ ಮಳೆಯ ನೀರು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬೀ ಸಮುದ್ರ ಸೇರುತ್ತದೆ. ಬಲಭಾಗಕ್ಕೆ ಬೀಳುವ ನೀರು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುವುದು..
ದಟ್ಟ ಅರಣ್ಯದ ಮಧ್ಯದಲ್ಲಿ ಜುಳು ಜುಳನೇ ಹರಿಯುವ ಕಲರವ. ತಣ್ಣನೆಯ ನೀರು. ಇಪ್ಪತ್ತು ಮೂವತ್ತು ನಿಮಿಷಗಳ ಕಾಲ ನಲಿದಾಡಿ ಮುಖ ತೊಳೆದುಕೊಂಡು ಸುಬ್ರಹ್ಮಣ್ಯ ಕಡೆ ಬಂದೆವು.ನೇರವಾಗಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ ದರ್ಶನ ಮುಗಿಸಿ ಬರುವಷ್ಟರಲ್ಲಿ ದಟ್ಟವಾದ ಕಪ್ಪುಮೋಡ ಆಗಿ ದೊಡ್ಡ ದೊಡ್ಡ ಹನಿಗಳು ಬೀಳತೊಡಗಿದೆವು. ಎಲ್ಲೂ ನಿಲ್ಲಲು ಅವಕಾಶ ಇಲ್ಲದ್ದರಿಂದ ನೇರವಾಗಿ ಕಾರಲ್ಲಿ ಕುಳಿತು ಧರ್ಮಸ್ಥಳ ಕ್ಕೆ ಹೊರಟೆವು. ದಾರಿಯುದ್ದಕ್ಕೂ ರಣಚಂಡಿ ಮಳೆ.ಗುಡುಗು,ಸಿಡಿಲಿನ ಅಬ್ಬರದ ನಡುವೆ ಮೋಡಕ್ಕೆ ತೂತು ಬಿದ್ದಹಾಗೆ ಧಾರಾಕಾರ ಮಳೆಯು ಸುರಿಯುತ್ತಿತ್ತು. ಆ ಘಾಟಿ ರಸ್ತೆಯು ನಾಲ್ಕು ಅಡಿಯೂ ಕಾಣುತ್ತಿಲ್ಲ. ರಸ್ತೆಯ ಮೇಲೆಲ್ಲ ನೀರೋ ನೀರು.ಎಲ್ಲಿಯಾದರೂ ಸೈಡಿಗೆ ನಿಲ್ಲಿಸೋಣ ಎಂದರೂ ಆ ಬಿರುಗಾಳಿಯ ರಭಸಕ್ಕೆ ಎಲ್ಲಿ ಮರಗಳು ಬೀಳುತ್ತಾವೋ ಎಂಬ ಆತಂಕ. ನಿಧಾನವಾಗಿ ಹಾಗೆ ಬರುತ್ತಿರುವಾಗ ಆಂದ್ರಪ್ರದೇಶ ನೊಂದಣಿಯ ಎರಡು ಟೂರಿಸ್ಟ್ ಬಸ್ ನಮ್ಮ ಹಿಂದೆ ಬಂದವು. ಎರಡು ಬಸ್ ಗೆ ಸೈಡ್ ಬಿಟ್ಟೆ. ಐದಾರು ಕಿಮೀ ಮುಂದೆ ಬಂದಾಗ ಯಾರೂ ಇಲ್ಲದ ದಾರಿಯಲ್ಲಿ ನಮ್ಮ ಕಾರಿಗೆ ಅಡ್ಡಹಾಕಿ ಧರ್ಮಸ್ಥಳ ಕ್ಕೇ ಹೇಗೆ ಹೋಗಬೇಕು ಹೇಗೆ ಹೋಗ ಬೇಕು ಎಂದು ತೆಲುಗಿನಲ್ಲಿ ನನಗೆ ಕೇಳಿದರು. ಇದೇ ರೋಡಲ್ಲೇ ನಡೆಯಿರಿ ಎಂದು ಎರಡು ಬಸ್ಗಳ ಮದ್ಯದಲ್ಲಿ ಸೇರಿಕೊಂಡು ಹಾಗೆ ಬಂದೆ. ಧರ್ಮಸ್ಥಳ ಬರುವ ಹೊತ್ತಿಗೆ ಹನ್ನೊಂದು ಹನ್ನೊಂದು ವರೆ ಆಗಿತ್ತು. ಅಂದು ಏನೋ ವಿಶೇಷ ದಿನ ಆಗಿದ್ದರಿಂದ ಧರ್ಮಸ್ಥಳದ ಯಾವ ಲಾಡ್ಜ್ ನೋಡಿದರೂ ಒಂದು ರೂಂ ಸಿಗಲಿಲ್ಲ. ಅನಿವಾರ್ಯವಾಗಿ ಪಾರ್ಕಿಂಗ್ ಸ್ಥಳದಲ್ಲಿಯೇ ಮಲಗಬೇಕಾಯಿತು.ಸೊಳ್ಳೆಗಳ ಕಾಟದ ಮದ್ಯೆ ಒಂದೆರಡು ಗಂಟೆಗಳ ಕಾಲ ಅಷ್ಟೆ ನನಗೆ ನಿದ್ದೆ ಆಗಿದ್ದು. ಮರುದಿನ ಬೇಗ ಸಿದ್ದಗೊಂಡು ಮೊದಲ ಪೂಜೆಗೆ ಹಾಜರಾಗಿ ಅಲ್ಲಿಂದ ಹೊರಟೆವು.ಹಿಂದಿರುಗುವಾಗ ಚಾರ್ಮುಡಿ ಘಾಟ್ ನ ಸವಿಯನ್ನು ಸವಿಯುತ್ತಾ,ನೀರಿನ ಝರಿ ಕಂಡಾಗಲೆಲ್ಲಾ ನಿಲಿಸುತ್ತಾ ಬೇಲೂರಿಗೆ ಬಂದೆವು. ಬೇಲೂರು ನನ್ನ ಹೈಸ್ಕೂಲ್ ದಿನಗಳಲ್ಲಿ ನೋಡಿದ ನೆನಪಿತ್ತು ಮತ್ತೊಮ್ಮೆ ಬೇಲೂರಿನ ಶಿಲಾ ಬಾಲಿಕೆಯರ ಕಣ್ತುಂಬಿಕೊಂಡು ಮುಂದೆ ನಮ್ಮ ಪಯಣ ಸಾಗಿದ್ದು ಹಲ್ಮಿಡಿ ಶಾಸನ ನೋಡಲು ಹಲ್ಮಿಡಿ ಎಂಬ ಗ್ರಾಮಕ್ಕೆ.
ಕನ್ನಡದ ಮೊದಲ ಶಾಸನ ಕಾಪಿಡಲಾಗಿದೆ.ಅದನ್ನು ನೋಡಿಹೆಮ್ಮೆ ಪಡುತ್ತಾ ರಸ್ತೆಯಲ್ಲಿ ಚಿಕ್ಕ ಮಗಳೂರಿಗೆ ಬರುವಾಗ ನಮಗೆ ಕಂಡಿದ್ದು ನೂರಾರು ಎಕರೆಯಲ್ಲಿ ಬೆಳೆದಿದ್ದ ರಂಗು ರಂಗಿನ ಚೆಂಡು ಹೂವಿನ ತೋಟಗಳು.
ಆ ಹೂವಿನ ಅಂದಕ್ಕೆ ಮನ ಸೋತ ನಾವೆಲ್ಲರೂ ಅಲ್ಲೆಲ್ಲಾ ಓಡಾಡಿ ಮುಟ್ಟಿ ಪೋಟೋ ತೆಗೆಸಿಕೊಂಡು ಬಾಬ ಬುಡನ್ ಗಿರಿ ತಪಲಲ್ಲಿರುವ ಸಿರಿ ಹೋಟೆಲ್ ಲ್ಲಿ ಕಾಫಿ ಹೀರಿ ತರೀಕೆರೆ ಬಂದು ಸೇರಿದೆವು.ಸಾದ್ಯ ಆದರೆ ನೀವು ಒಮ್ಮೆ ಹೋಗಿ ಬನ್ನಿ..
✍️ನಾಗೇಂದ್ರ ಬಂಜಗೆರೆ.
Very nice experience sr
ಪ್ರತ್ಯುತ್ತರಅಳಿಸಿಥ್ಯಾಂಕ್ಯೂ ವೆರಿಮಚ್...
ಅಳಿಸಿ