ಕಡ್ಡೀಹುಳ..
ಕಡ್ಡೀ ಹುಳ..
ಈ ಬಯೋ ಸಿಸ್ಟಮ್ ಅಲ್ಲಿರುವ ಜೀವಿಗಳ ಬಗ್ಗೆ ನಮಗೆ ಗೊತ್ತಿರುವುದು ರವೆಯಷ್ಟು. ಕ್ರಿಮಿ ಕೀಟಗಳ ಬಗ್ಗೆ ಇದುವರೆಗೂ ಮನುಷ್ಯನ ಗಮನಕ್ಕೇ ಬಾರದ ಅದೆಷ್ಟೋ ಸಂಗತಿಗಳು ನಡೆಯುತ್ತಲೇ ಇವೆ.ನಮ್ಮ ನಮ್ಮ ತಾಪತ್ರಯಗಳಲ್ಲೇ ಬ್ಯೂಸಿ ಆಗಿರುವ ನಾವು ಈ ಹುಳ ಉಪ್ಪಟೆಗಳ ಬಗ್ಗೆ ಅಗೋಚರ ಚಟುವಟಿಕೆಗಳ ಬಗ್ಗೆ ಗಮನಿಸಲು ಯಾರಿಗೂ ಪುರಸೊತ್ತಿಲ್ಲ ಬಿಡಿ. ಆದರೂ ನಮ್ಮ ಮನೆಯ ಮುಂದಿನ ಗಾರ್ಡನ್ ನಲ್ಲಿ ನಾನು ಗಮನಿಸಿದ ಈ ಹುಳುಗಳ ಬಗ್ಗೆ ಹೇಳುವೆ.
ನೋಡಲು ಅಕ್ಷರಶಃ ಸಣ್ಣ ಸೌದೆಯ ಹೊರೆಯಂತೆಯೇ ಕಾಣುವ ಈ ಕಡ್ಡೀ ಹುಳಗಳ ರಕ್ಷಣಾ ಕವಚವೇ ಎಂದು ಹೇಳಬಹುದು. ಸಣ್ಣ ಸಣ್ಣ ಕಡ್ಡಿಗಳನ್ನೇ ಸಮನಾಂತರ ಅಳತೆಗೆ ಕೊರೆದು ಕತ್ತರಿಸಿ ತನ್ನ ಮನೆಯ ಸುತ್ತಲೂ ನೀಟಾಗಿ ಪೋಣಿಸಿಕೊಂಡು ತಮ್ಮದೇ ಮನೆಯ ಹೊತ್ತು ತಿರುಗುವ ಮತ್ತು ಇದನ್ನು ಕೀಟಗಳ ಅಧ್ಯಯನ ಶಾಸ್ತ್ರ ದಲ್ಲಿ ಏನೆಂದು ಕರೆಯುವರೋ ಗೊತ್ತಿಲ್ಲ ಆದರೆ ನನಗೆ ಬುದ್ದಿ ಬಂದಾಗಿನಿಂದ ಇದನ್ನು ನಾನು 'ಕಡ್ಡೀಹುಳ' ಅಂತಲೇ ಕರೆಯುವುದು.ನಾವು ಬಾಲ್ಯದಲ್ಲಿ ಇದ್ದಾಗ ತಲೆಯಲ್ಲಿ ಏನಾದರೂ ಚರ್ಮರೋಗ ಬಂದರೆ ಆ ವ್ಯಾದಿಗೆ ತಂಗಡಗಿ ಗಿಡಗಳಲ್ಲಿರುವ ಈ ಹುಳಗಳ ಹಿಡಿದು ಆ ಇನ್ಪೆಕ್ಷನ್ ಜಾಗಕ್ಕೆ ಅವುಗಳನ್ನು ಹಿಸುಕಿ ರಾಚುತ್ತಿದ್ದರು. ಇದರಿಂದ ಆಕಸ್ಮಿಕವೋ ಅಥವಾ ಕಾಕತಾಳೀಯವಾಗಿಯೋ ಎಂಬಂತೆ ಕೆಲವೇ ದಿನಗಳಲ್ಲಿ ಅದು ಕಡಿಮೆಯಾಗುತ್ತಿತ್ತು.
ನಾನು ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಾಗ,ದನ ಕಾಯುವಾಗ ಇಂತಹ ಅನೇಕ ಕಡ್ಡೀ ಹುಳಗಳನ್ನು ನೋಡಿದ್ದೆ. ಕಿತ್ತು ಆಟವು ಆಡಿದ್ದೆ.
ಕಡ್ಡೀಹುಳು ಕಾಂಡಕ್ಕೇ ನೇತುಹಾಕಿಕೊಂಡಿರಿವುದು.
ಒಂದುದಿನ ನಮ್ಮ ಮನೆಯ ಸಪೋಟ ಮರದ ಎಲೆಗೆ ಈ ಕಡ್ಡಿಯ ಹುಳು ನೇತಾಡುತ್ತಿರುವುದ ಕಂಡು ಗತ ನೆನಪಾಗಿ ಇರಲಿ ಬಿಡು ಅಂತ ಹಾಗೇ ಬಿಟ್ಟಿದ್ದೆ. ಕಾಲ ಕ್ರಮೇಣ ಎಂಟತ್ತು ತಿಂಗಳಲ್ಲಿ ಈ ಹುಳಗಳ ಸಂಖ್ಯೆ ಹದಿನೈದು ಇಪ್ಪತ್ತು ಆಯಿತು.ಎಲ್ಲವೂ ಅಲ್ಲಲ್ಲಿ ದಾಸವಾಳ, ಸಪೋಟ ಮತ್ತು ಮಲ್ಲಿಗೆ ಹೂವಿನ ಬಳ್ಳಿಯಲ್ಲಿ ನೇತಾಡುತ್ತಿದ್ದವು. ದಿನದಿಂದ ದಿನಕ್ಕೆ ಅವುಗಳು ಸ್ಥಾನವನ್ನೂ ಬದಲಾಯಿಸುತ್ತಿದ್ದವು. ಅಷ್ಟೇ ಅಲ್ಲ ಅವುಗಳು ನೇತಾಡುತ್ತಿದ್ದ ಜಾಗದ ಸುತ್ತಲೂ ಎಲೆಗಳು ಯಾವೂ ಹಸಿರುಹುಳಗಳು ತಿಂದ ಹಾಗೆ ತಿಂದಿರುತ್ತಿದ್ದವು..
ಕಡ್ಡೀಹುಳಗಳ ಗೂಡುಗಳು
ಒಂದೆರಡು ಬಾರಿ ಎಲ್ಲೋ ಹಸಿರು ಹುಳುಗಳು ಇರಬೇಕು ಎಂದು ಎಲ್ಲಾ ಕಡೆ ಹುಡುಕಿದರೂ ಒಂದು ಹುಳ ಕಂಡಿರಲಿಲ್ಲ.ಆದರೆ ಈ ಹುಳಗಳು ತನ್ನ ಗೂಡನ್ನು ನೇತು ಹಾಕಿರುವ ಜಾಗದ ಸುತ್ತಲೂ ಬೆಳಕು ಹರಿಯುವ ಹೊತ್ತಿಗೆ ಎಲೆಗಳೆಲ್ಲಾ ರಂದ್ರ ರಂದ್ರ ಆಗಿರುತ್ತಿದ್ದವು.ಸಾಮಾನ್ಯವಾಗಿ ಹಸಿರು ತಿನ್ನುವ ಹುಳುಗಳು ರಾತ್ರಿಯ ಸಮಯದಲ್ಲಿ ಮೆಯ್ಯುವುದು ಸಾಮಾನ್ಯ. ಇತ್ತೀಚಿನ ವರ್ಷಗಳಲ್ಲಿ ನಿಮ್ಮ ಗಮನಕ್ಕೆ ಬಂದಿರಬಹುದು ಇವು ರಾತ್ರೋ ರಾತ್ರಿ ಎಕರೆಗಳಷ್ಟು ಹೊಲವನ್ನು ತಿಂದು ಮುಗಿಸುವವು.ಅದರಂತೆ ಇದೂ ಕೂಡ ರಾತ್ರಿಯ ಹೊತ್ತು ನೋಡೋಣ ಎಂದು ಅಂದುಕೊಂಡು ನಮ್ಮ ಜೆಸ್ಸಿಯನ್ನು (ನಾಯಿ)ವಾಕ್ ಕರೆದುಕೊಂಡು ಹೋಗಿ ಬಂದ ಮೇಲೆ ನೆನಪಾಗಿ ಮೊಬೈಲ್ ಬ್ಯಾಟರಿ ಬಿಟ್ಟು ನೋಡಿದರೆ ಸುಮಾರು ಒಂದೂವರೆ ಇಂಚಷ್ಟು ಎತ್ತರಕ್ಕೆ ತಮ್ಮ ತಲೆಯನ್ನು ಎತ್ತಿ ಸುತ್ತಲೂ ಸಿಗುವಂತಹ ಎಲೆಗಳನ್ನು ಮೇಯತ್ತಿದ್ದವು.
ಪ್ರಭೆಯನ್ನು ಕಂಡ ತಕ್ಷಣ ದಡಕ್ಕನೇ ಅವುಗಳ ಗೂಡೊಳೊಗೆ ಸೇರಿಕೊಂಡವು. ಇವೇ ಹುಳುಗಳು ಈ ಎಲೆಗಳನ್ನು ತಿನ್ನುತ್ತಿರುವುದು ಎಂದು ಕನ್ಪರ್ಮ್ ಆದ ಮೇಲೆ ಗಾರ್ಡನ್ ನಲ್ಲಿದ್ದ ಎಲ್ಲಾ ಕಡ್ಡಿಹುಳಗಳ ಗೂಡನ್ನು ಕಿತ್ತು ಬೇರೆಗಿಡ ಮರಗಳು ಇರುವ ಜಾಗಕ್ಕೆ ಬಿಟ್ಟು ಬಂದಿದ್ದೇನೆ...
ಕಡ್ಡೀಹುಳಗಳ ಜೀವನ:
ನಾನು ಗಮನಿಸಿದಂತೆ ಒಂದು ವರ್ಷ ಬದುಕಿರುವ ಇವು ವಯಸ್ಕ ಹುಳು ಮರದ ಯಾವುದಾದರೂ ಭದ್ರವಾದ ಕೊಂಬೆಗೆ ತಮ್ಮನ್ನು ತಾವು ಅಂಟಿಸಿಕೊಂಡು ಅದೇ ಗೂಡಿನಲ್ಲಿಯೇ ಎಂಟತ್ತು ಮೊಟ್ಟೆಗಳನ್ನು ಇಟ್ಟು ತಾಯಿ ಹುಳು ಗೂಡಿನಲ್ಲಿಯೇ ಸತ್ತುಹೋಗುತ್ತದೆ. ಕೆಲವು ದಿನಗಳಲ್ಲಿ ಆ ಮೊಟ್ಟೆಯಿಂದ ಹೊರಬರುವ ಮರಿಗಳಿಗೆ ಶುಷ್ಕವಾಗಿರುವ ತಾಯಿಯ ದೇಹವೇ ಇವುಗಳ ಪ್ರಾಥಮಿಕ ಆಹಾರವಾಗಿದೆ. ಹೊರಬಂದ ಸಣ್ಣ ಹುಳುಗಳು ಶತೃಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಅವಿರುವ ಜಾಗದಲ್ಲೇ ದೂಳು ಮತ್ತು ಮಣ್ಣಿನ ಕಣಗಳನ್ನು ಅಂಟಿಸಿಕೊಂಡು ಗೂಡು ಕಟ್ಟುತ್ತವೆ.
ಕ್ರಮೇಣವಾಗಿ ಬೆಳೆದಂತೆಲ್ಲಾ ಅವುಗಳೇ ತಮ್ಮ ಬಾಯಿಯಿಂದ ಸಾಮಿಲ್ಗಳಲ್ಲಿ Wood carving ಮಾಡುವ ರೀತಿಯಲ್ಲಿ ಹಸಿಕಡ್ಡಿಗಳನ್ನು ಕಟ್ ಮಾಡಿ ತನ್ನ ವಾಸ ಗೂಡಿನ ಸುತ್ತಲೂ ಅಂಟಿಸಿಕೊಳ್ಳುತ್ತವೆ.
ಗೂಡಿಗೆ ಸೇರಿಸಲು ಕಡ್ಡಿ ಕೊರೆದು ಸಿದ್ದಮಾಡಿರುವುದು.
ಸಾಮಾನ್ಯವಾಗಿ ಈ ಹುಳಗಳು ಅವು ವಾಸ ಮಾಡುವ ಸಸ್ಯದ ಭಾಗಗಳನ್ನೇ ಕೊರೆದು ಕತ್ತರಿಸಿ ಪೋಣಿಸಿಕೊಳ್ಳುತ್ತಾವೆ. ಚೂಪಾದ ಜಾಲಿ ಮುಳ್ಳುಗಳಲ್ಲೇ ಗೂಡು ಕಟ್ಟಿರುವುದು.
ಮಲೆನಾಡಿನ ಕಾಡುಗಳಲ್ಲಿ ಪೆನ್ಸಿಲ್ ಗಾತ್ರದ
ಕೀಟ ಪ್ರಪಂಚದಲ್ಲಿ ಪ್ರತಿ ಕೀಟದ ಹುಟ್ಟು, ಜೀವನ ,ಆಹಾರ ಹುಡುಕುವ ಪರಿ,ವಾಸಸ್ಥಾನ ಹೀಗೆ ಪ್ರತಿಯೊಂದು ಕೀಟವೂ ವಿಶೇಷ ಮತ್ತು ಅದ್ಭುತ ವಾದದ್ದು.ಆದರೆ ಬೆಳೆಗಳಿಗೆ ಕೀಟನಾಶಕ ಸಿಂಪರಣೆಯಿಂದ ಅನೇಕ ಸಂತತಿ ಈಗಾಗಲೇ ನಾಶವಾಗಿದೆ.ಇರುವ ಕೀಟಗಳ ಬಗ್ಗೆಯೂ ಸ್ವಲ್ಪ ಎಲ್ಲರೂ ತಿಳಿಯುವಂತಾಗಬೇಕು. ಹಾಗೇ ಕೀಟಗಳ ಸಂತತಿ ಉಳಿಯುವಂತಾಗಬೇಕು.
✍️ ನಾಗೇಂದ್ರ ಬಂಜಗೆರೆ.
superbror
ಪ್ರತ್ಯುತ್ತರಅಳಿಸಿThank you Anna..
ಅಳಿಸಿSuper
ಪ್ರತ್ಯುತ್ತರಅಳಿಸಿThank you...
ಅಳಿಸಿಒಳ್ಳೆಯ ಮಾಹಿತಿ ಸರ್.
ಪ್ರತ್ಯುತ್ತರಅಳಿಸಿThank you sooo much...
ಅಳಿಸಿNice story sir
ಪ್ರತ್ಯುತ್ತರಅಳಿಸಿ
ಪ್ರತ್ಯುತ್ತರಅಳಿಸಿWonderful article 👌👌
ಬಾಲ್ಯದ ದಿನಗಳು ನೆನಪಾಗುತ್ತಿವೆ.
Thank you sooo much...
ಅಳಿಸಿ