ವ್ಹಾವ್ ಕಾರೇಹಣ್ಣು ಏನ್ ರುಚಿ ಗೊತ್ತಾ?
ಕಾರೆಹಣ್ಣು..
ದಿನಾಂಕ :೧೧-೦೮-೨೦೨೧
ನನ್ನ ಕರ್ತವ್ಯ ಸ್ಥಳವಾದ ಸಂಡೂರು ತಾಲ್ಲೂಕಿನ ತುಮಟಿಯ ಸುತ್ತಲೂ ಬೆಟ್ಟಗುಡ್ಡಗಳ ಸಾಲು. ಪ್ರಕೃತಿ ಬಸಿರಾಗಿ ಹಸಿರಾಗಿ,ನೋಡುವ ಕಂಗಳಿಗೆ ಆನಂದ ಉಂಟಾಗುತ್ತಿದೆ. ಅದೇ ಖುಷಿಗೆ ಬೆಟ್ಟ ಹತ್ತಿದ ನನಗೆ ಬಾಯಿ ನೋವು ಆಗುವ ವರೆಗೂ creamy filled chocolate ನಂತೆ ಕಾರೆಹಣ್ಣು ತಿಂದ ದಿನ ಇಂದು.ನನಗೆ ಸರಿಯಾಗಿ ನೆನಪಿದೆ. ಈಗಿನ ಚಾಕೋಲೇಟನ್ನೇ ಹೋಲುವ ಮುಳ್ಳಿನ ಪೊದೆಯಲ್ಲಿ ಮುಳ್ಳುಗಳನ್ನು ಚುಚ್ಚಿಸಿಕೊಳ್ಳುತ್ತಾ ಎರಡೆರಡು ಬೀಜ ಇರುವ ದಪ್ಪ ದಪ್ಪನೆಯ ಡಬ್ಬಲ್ ಹಣ್ಣುಗಳನ್ನು ಬಾಲ್ಯದಲ್ಲಿ ತಿಂದಿರುವ ನೆನಪಿದೆ.
ಆ ನೆನಪು ಪ್ರತೀವರ್ಷವೂ ಶ್ರಾವಣ ಮಾಸದ ಮದ್ಯದಲ್ಲಿ ಬರುವ ಇವುಗಳ ತಿನ್ನಲೇ ಬೇಕೆನ್ನುವ ಚಪಲ. ಈ ಕಾಲದಲ್ಲಿ ಈ ಹಣ್ಣುಗಳ ಪೊದೆಗಳ ಸರ್ಚ್ ಮಾಡಿ ವರ್ಷಕ್ಕೆ ಒಂದೆರಡು ಹಣ್ಣುಗಳಾದರೂ ತಿಂದೆ ತಿನ್ನುವೆ. ಮೊದಲು ಹಸಿರುಕಾಯಿಗಳು ಇದ್ದು, ಆನಂತರ ಹಳದೀ ಕಾಯಿ ಆಗುತ್ತಾವೆ. ಈ ಹಳದಿ ಕಾಯಿಗಳನ್ನೂ ನಾವು 'ಕಾರೆ ಕೆಂಗ' ಎಂದು ಕರೆಯುತ್ತಿದ್ದೆವು. ಇವುಗಳನ್ನೂ ನಾವು ತಿನ್ನುತ್ತಿದ್ದೆವಾದರೂ,ಒಗರು ಇರುತ್ತಿದ್ದರಿಂದ ಹೆಚ್ಚು ತಿನ್ನಲಾಗದೇ ಬಾಯಾರಿಕೆಯಿಂದ ತಪ್ಪಿಸಿಕೊಳ್ಳಲು ಇವುಗಳನ್ನು ಅನಿವಾರ್ಯವಾಗಿ ಬಾಯಲ್ಲಿ ಹಾಕಿ ಅಗೆಯುತ್ತಿದ್ದೆವು. ಆದರೆ ದೋರಾಗಾಯಿಗಳಾದ ಕಾರೆಕೆಂಗ ಕಿತ್ತುಕೊಂಡು, ಅದೇ ಗಾತ್ರದ ನಾಲ್ಕರೂ ಕಲ್ಲುಗಳನ್ನೂ ಜೇಬಲ್ಲಿ ಹಾಕಿ ಕೊಂಡು ಓಡಾಡುವ ರಭಸಕ್ಕೆ ಕೆಲವೇ ಗಂಟೆಗಳಲ್ಲಿ ಇವು ಹಣ್ಣಾಗಿ ಬಿಡುತ್ತಿದ್ದವು. ನಾನು ದನಗಳನ್ನು ಕಾಯಲು ಹೋಗುವಾಗ ಈ ಹಣ್ಣಿನ ಸೀಜನ್ ಹೊರತುಪಡಿಸಿದ ಮೇಲೂ ಬಿರು ಬೇಸಿಗೆಯ ನಡುವೆಯೂ ಆ ಕಾರೆ ಕುಟುರೆ(ಪೊದೆ)ಗಳ ಕಡೆ ನೋಡುತ್ತಿದ್ದೆ.ಚೈತ್ರ ಮಾಸ ದ ನಂತರ ಹೂ ಬಿಡುವ ಇದು ಬಿಳಿಯ,ಮದ ಭರಿತ ಸುವಾಸನೆಯ ಹೂಗಳ ರಾಶಿಯಲ್ಲಿ ಮಧುವನ್ನು ಹೀರಲು ಜೇನುಹುಳಗಳ ರಾಶಿಯೇ ಮುಸುರಿಕೊಂಡು ಅಲ್ಲಿ 'ಜುಂಯ್' ಎನ್ನುವ ಶಬ್ದ ಆ ಪೊದೆಗಳಲ್ಲಿ ಕೇಳುತ್ತಿತ್ತು.
ರಾತ್ರಿಯೆಲ್ಲಾ ಹಣ್ಣಾಗಿ ಬೆಳಿಗೆಗೆ ಪ್ರೆಶ್ ಹಣ್ಣೆನಿಸುವ ಇವುಗಳು ಪಿಕಳಾರ,ಕಪೋತ,ಕೋಗಿಲೆಗಳಿಗಳಂತಹ ಪಕ್ಷಿಗಳಿಗೆ ಸೀಜನ್ ನಲ್ಲಿ ಕಾರೇ ಹಣ್ಣು ಗಳೇ ಪುಲ್ ಮೀಲ್ಸ್.! ಒರಿಜಿನಲ್ ಚಾಕೊಲೇಟ್ ಕಹಿ ಕಹಿ. ಆದರೆ ನಮ್ಮ ನ್ಯಾಚುರಲ್ ಚಾಕೊಲೇಟ್ ಕಾರೆ ಹಣ್ಣು ಸ್ವೀಟ್ ಸ್ವೀಟ್..ಹಣ್ಣಾದಾಗ ಇವುಗಳ ಬಾಯಿತುಂಬಾ ಹಾಕಿ ಚಪ್ಪರಿಸಿದರೆ ಮೂರ್ ನಾಲ್ಕು ಬಾರಿಯಷ್ಟೊತ್ತಿಗೆ ಬಾಯಿಯೇ ನೋವಾಗಿ, ಆ ಸಿಹಿಗೆ ಬಾಯಿಯ ಅಂಗಳ ರವೆ ರವೆಯಂತಾಗುತಿತ್ತು.ಅಲ್ಲಿಗೆ ಕಾರೆ ಹಣ್ಣಿನ ತಿನ್ನುವ ಉತ್ಕಟತೆ ಕಡಿಮೆಯಾಗುತ್ತದೆ.
ಯಾವುದೇ ಕೀಟನಾಶಕಗಳು ಬಳಕೆಯಾಗದೇ ಕಾಲಕಾಲಕ್ಕೆ ಸಿಗುವ ಎಲ್ಲಾ ರೀತಿಯ ಹಣ್ಣು ಗಳು ಅಮೃತಕ್ಕೆ ಸಮಾನ. ಎಲ್ಲರೂ ವಿಷಯುಕ್ತ ಹಣ್ಣುಗಳ ದುಡ್ಡುಕೊಟ್ಟು ಕೊಳ್ಳುವುದರ ಜೊತೆಗೆ ಒಂದೆರಡು ಹೆಜ್ಜೆ ಹೊರಗೆ ಹೋದರೆ ಪ್ರಕೃತಿಯ ಸೌಂದರ್ಯದ ಜೊತೆಗೆ ಆರೋಗ್ಯಕರವಾದ ಹಣ್ಣುಗಳನ್ನೂ ತಿನ್ನಬಹುದು.
ದೋರಗಾಯಿ(ಕಾರೆಕೆಂಗ)..
ಒಂದು ಆತಂಕಕಾರಿ ವಿಷಯ ಏನೆಂದರೇ ಕಾಡು ಹಣ್ಣಿನ ಗಿಡಮರಗಳಲ್ಲಿ ಇಪ್ಪತ್ತು ಮುವತ್ತು ವರ್ಷಗಳ ಹಳೆಯ ಗಿಡಗಳು ಮಾತ್ರ ಉಳಿದಿರುವುದು. ಅದೆಷ್ಟು ಬೀಜಗಳು ಉತ್ಪಾದನೆಯಾದರೂ ಹೊಸ ಸಸ್ಯಗಳು ಹುಟ್ಟಿ ಬೆಳೆದಿರುವ ಪ್ರಮಾಣ ತುಂಬಾ ವಿರಳ.ಅದರ ಸಾಲಿಗೆ ಈ ಕಾರೆ ಪೊದೆಗಳು ಸೇರುತ್ತಾವೆ. ಸಣ್ಣ ಪಕ್ಷಿಗಳಿಗೆ ಗೂಡುಕಟ್ಟಲು ಯೋಗ್ಯವಾದ ಸ್ಥಳ. ಕಾರೆ ಮುಳ್ಳುಗಳು ಬೇದಿಸಿ ಯಾವ ಶತೃವೂ ದಾಳಿ ಮಾಡಲಾರ.ಕಡಜ,ಸಂಜೀವಿನಿ ಯಂತಹ ಕೀಟಗಳ ಮನೆಯೂ ಹೌದು ಹಾಗೆ ನಾನು ಕಂಡಂತೆ ಈ ಕಾರೆ ಪೊದೆಗಳು ಮೊಲಗಳ ಸಾಮಾನ್ಯ ವಾಸಸ್ಥಳವೂ ಹೌದು.ಅಪ್ಪಟ ಬಯಲು ಸೀಮೆಯ ಕುರುಚಲು ಕಾಡಿನಲ್ಲಿ ಕಂಡು ಬರುವ ಸಾಮಾನ್ಯ ಸಸ್ಯಗಳು.ಸಾದ್ಯ ಆದರೆ ಹೊರಗೆ ಹೋಗಿ ಬನ್ನಿ ಕಾರೆ ಕವಳೆ ನಿಮಗಾಗಿ ಕಾಯುತ್ತಿವೆ.ಮಂಗಳ ವಾರಪತ್ರಿಕೆಯಲ್ಲಿ
ಪ್ರಕಟವಾದ 'ಕಾರೇಹಣ್ಣು' ಲೇಖನ..
✍️ನಾಗೇಂದ್ರ ಬಂಜಗೆರೆ.
esccellent sir
ಪ್ರತ್ಯುತ್ತರಅಳಿಸಿನಿಮ್ಮ ಬರಹ ಕ್ರಿಯಾಶೀಲತೆಯಿಂದ ಕೂಡಿದೆ. superb
ಪ್ರತ್ಯುತ್ತರಅಳಿಸಿ