ನಾ ನಾಸ್ತಿಕನಾಗಿದ್ದು...
ನಾ ನಾಸ್ತಿಕನಾಗಿದ್ದು...
ನನ್ನ ಬಾಲ್ಯದ ಆರಂಭದ ದಿನಗಳು.ಪ್ರತಿದಿನ ನಮ್ಮ ತಂದೆಯವರು ಸ್ನಾನದ ನಂತರ ಊದಿನ ಕಡ್ಡಿ ಹಿಡಿದು ಸೂರ್ಯನಿಗೆ 'ಸ್ವಾಮಿ ದೇವ ಶ್ರೀಕೃಷ್ಣ ಪರಮಾತ್ಮ ಕಾಪಾಡಪ್ಪ' ಎಂದು ಕೈ ಮುಗಿಯುತ್ತಿದ್ದರು.ಸೂರ್ಯನೇ ಶ್ರೀಕೃಷ್ಣನಾಗಿದ್ದಾನೆ ಎಂದು ಭಾವಿಸಿದ ನಾನು ಕಾಲ ಕ್ರಮೇಣ ಮರಗಿಡಗಳ ಬುಡಕ್ಕೆ ಗುಂಡು ಕಲ್ಲು ಇಟ್ಟು,ಅರಿಶಿಣ ಕುಂಕುಮ ಹಚ್ಚಿ ಪೂಜಿಸುವ ಆಚರಣೆ ನನಗೆ ಸೋಜಿಗ ಅನಿಸಿತ್ತು.ಹಿರಿಯರೊಂದಿಗೆ ಹೋಗಿ ಬರುತ್ತಿದ್ದ ನಾನು ಎಲ್ಲೋ ಈ ದೇವರುಗಳು ಇರುತ್ತಾರೆ ಯಾವಾಗಲಾದರೂ ಒಮ್ಮೆ ನೆಂಟರ ಹಾಗೆ ಮನೆಗೆ ಬಂದು ಹೋಗುತ್ತಾರೆ. ಕುಚೇಲನ ಗುಡಿಸಲು ಶ್ರೀ ಕೃಷ್ಣನ ಅನುಗ್ರಹದಿಂದ ಅರಮನೆಯಾದಂತೆ ನಮ್ಮ ಗುಡಿಸಲು ಕೂಡ ಅರಮನೆಯಲ್ಲದಿದ್ದರೂ ಒಂದು ದೊಡ್ಡಮನೆ ಆ ದೇವರು ನೀಡುವರೆಂದು ಭಾವಿಸಿದ್ದೆ. ಬಿತ್ತುವಾಗ,ಕೊಯ್ಯುವಾಗ, ಒಳ್ಳೆಯದು ಕೆಟ್ಟದ್ದು ಆದಾಗ ಮೊದಲು ಸ್ಥಳೀಯ ದೇವರ ಬೇವಿನ ಮರಗಳ ಕಟ್ಟೆಗಳಿಗೆ ಪೂಜಿಸಿ ಕೆಲಸ ಆರಂಭ ಮಾಡುವುದು ವಾಡಿಕೆಯಾಗಿತ್ತು.ಮನೆಯಲ್ಲಿ ವಿಶೇಷವಾಗಿ ದೇವರ ಕೋಣೆಯೂ ಇಲ್ಲದಿದ್ದರೂ ಕಳೆದ ಇಪ್ಪತ್ತು ವರ್ಷಗಳ ಹಿಂದೆ ತಿರುಪತಿ ತಿಮ್ಮಪ್ಪ, ಶಿವ ಪಾರ್ವತಿ ಹೀಗೆ ನಾಲ್ಕೈದು ಪೋಟೋಗಳ ತಂದು ಮನೆಯಲ್ಲಿ ಹಾಕಿ ಅಪರೂಪಕ್ಕೆ ತಿಳಿದಂತೆ ಪೂಜೆಮಾಡುವ ಪದ್ದತಿಯೂ ನಮ್ಮ ಮನೆಯಲ್ಲಿತ್ತು. ಪೋಟೋದಲ್ಲಿರುವ ದೇವರು ಯಾವತ್ತೂ ನನಗೆ ಕಾಣಲಿಲ್ಲವಾದರೂ,ನಮ್ಮ ಊರಿನಲ್ಲಿರುವ ಎಲ್ಲಾ ದೇವಾಲಯದಲ್ಲಿ ದುಂಡನೆಯ,ವಿವಿಧ ಲೋಹಗಳ ಛತ್ರಿ ಚಾಮರ ಇರುವಂತಹ ಉತ್ಸವ ಮೂರ್ತಿಗಳು ಇದ್ದವು. ಈಗಲೂ ಇವೆ. ಆಗ ನನಗನ್ನಿಸಿದ್ದು ಆ ಬೇವಿನ ಮರದ ಕಟ್ಟೆಯ ಕಲ್ಲಿನ ದೇವರು,ಪೋಟೋದಲ್ಲಿರುವ ದೇವರುಗಳು ಹಾಗೂ ಈ ದೇವಸ್ಥಾನದ ಉತ್ಸವ ಮೂರ್ತಿಗಳೂ ದೇವರುಗಳು ಎಂದು ಹೇಳುತ್ತಿದ್ದಾಗ ವಿಚಿತ್ರ ಮತ್ತು ವಿಶೇಷ ಅನಿಸಿತು.ಅದರಲ್ಲೂ ವಿವಿಧ ದೇವರುಗಳು ಪೂಜಾರಪ್ಪನ ಮೈಯಲ್ಲಿ ಬಂದು ಆಯಾ ವರ್ಷದ ಮಳೆ ಬೆಳೆ ಸ್ಥಿತಿಗತಿ ಹೇಳುತ್ತಿದ್ದಾಗ ಅಚ್ಚರಿಯ ಜೊತೆಗೆ ಈ ದೇವರುಗಳ ಆಕಾರ ಮತ್ತು ಕಾರ್ಯವಿಧಾನಗಳು ನನ್ನ ಪ್ರಶ್ನೆಗಳಿಗೆ ಉತ್ತರ ಸಿಗದೇ ಅದು ನನ್ನ ಪಾಲಿಗೆ ಗೊಡ್ಡು ಸಂಪ್ರದಾಯ ಅಷ್ಟೇ ಆಗಿತ್ತು.
ಹೈಸ್ಕೂಲ್ ವಿದ್ಯಾಭ್ಯಾಸ ಮಾಡಲು ಚಳ್ಳಕೆರೆ ನಗರಕ್ಕೆ ಬಂದಾಗ ಎಂಟನೆಯ ತರಗತಿಗೆ ನಮಗೊಬ್ಬ ವಿಜ್ಞಾನ ವಿಷಯಕ್ಕೆ ನಮ್ಮ ಪಕ್ಕದ ಊರಾದ ಹೊನ್ನೂರು ಗ್ರಾಮದ ವೀರಣ್ಣ ಎಂಬ ಶಿಕ್ಷಕರು ಕ್ಲಾಸ್ ತೆಗೆದುಕೊಳ್ಳುತ್ತಿದ್ದರು.ಈ ಮೂಢನಂಬಿಕೆ ಆಚರಣೆಗಳನ್ನು ಅವರು ಖಂಡಿಸುತ್ತಿದ್ದ ರೀತಿಗೆ,ಅವರ ವಿಚಾರಗಳಿಗೆ ಪ್ರಭಾವಿತನಾದ ನಾನು ಅವರು ದೇವರಿಲ್ಲ,ದೇವರು ಮೈಯಲ್ಲಿ ಬರುವಂತಹ ಅವೆಲ್ಲವೂ ಕೇವಲ ನಟನೆ, ಎಂದು ಹತ್ತಾರು ಸಮರ್ಥನೀಯ ಉದಾಹರಣೆ ಕೊಟ್ಟು ನನ್ನ ಪಾಲಿಗೆ ಅಹುದು ಅಹುದು ಎನಿಸಿ ಅವರ ಪಟ್ಟ ಶಿಷ್ಯನಾಗಿ ದೇವರು ದಿಂಡರು,ಮೂಢನಂಬಿಕೆ ಆಚರಣೆಗಳ ವಿರೋಧಿಯಾಗಿ ನಾಸ್ಥಿಕತೆಯ ಅಸ್ಮಿತೆ ನನ್ನ ತಲೆಯಲ್ಲಿ ಆಳವಾಗಿ ಬೇರೂರಿದವು.ಮೂರವರ್ಷಗಳಲ್ಲಿ ದೇವರು ಇಲ್ಲ ಎಂದು ಬಹಳ ಬಲವಾಗಿ ಗೆಳೆಯರೊಂದಿಗೆ ವಿವಿಧ ಸಂದರ್ಭಗಳಲ್ಲಿ ವಾದಮಾಡುತ್ತಿದ್ದೆ. ಅದು ಹಾಗೇ ನಾಸ್ತಿಕತೆ ಮುಂದುವರೆದು ದೇವರು ಇಲ್ಲವೇ ಇಲ್ಲ ಅವೆಲ್ಲವೂ ಶುದ್ಧ ಸುಳ್ಳು ಎನ್ನುವ ಮಟ್ಟಿಗೆ ನನಗೆ ಅನಿಸಿ ಅದರಂತೆ ನನ್ನ ನಂಬಿಕೆ ಮತ್ತು ಆಚರಣೆಗಳು ಇದ್ದವು.
ಡಿ ಇ ಡಿ ಓದುತ್ತಿರುವಾಗ ನನ್ನ ಅನೇಕ ಸ್ನೇಹಿತರು ಅಪ್ಪಟ ದೈವ ಭಕ್ತರಾಗಿದ್ದು ಪ್ರತಿದಿನವೂ ಒಂದೊಂದು ದೇವರ ದರ್ಶನಕ್ಕೆ ತಪ್ಪದೇ ಹೋಗುತ್ತಿದ್ದರು.ಅದರಲ್ಲೂ ಮಂಜುನಾಥ ಎನ್ನುವ ನನ್ನ ಗೆಳೆಯ ನನಗಿಷ್ಟ ಇಲ್ಲವೆಂದರೂ ಬಿಡದೇ ನನ್ನನ್ನು ದೇವಸ್ಥನಕ್ಕೆ ಎಳೆದುಕೊಂಡು ಹೋಗುತ್ತಿದ್ದ.ನಾನು ಜೊತೆಗೆ ಹೋಗಿ ಪ್ರಸಾದ,ಫಲಾಹಾರ ಪಡೆದುಬರುತ್ತಿದ್ದೆ.ಹೀಗೆ ಎರಡು ಮೂರು ವರ್ಷಗಳು ಕಳೆದ ನಂತರ ನನಗೆ ಶಿಕ್ಷಕನಾಗಿ ಸರ್ಕಾರಿ ಸೇವೆಯ ಅವಕಾಶ ಒದಗಿಬಂತು.ನನಗೆ ಕೆಲಸ ಸಿಗಲೆಂದು ನನ್ನ ಸ್ನೇಹಿತರು ಹರಕೆಯನ್ನೂ ಮಾಡಿದ್ದರು.
ಎರಡು ಸಾವಿರದ ಎಂಟನೇ ಇಸವಿ..ಅದೇ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕಿನ ಪ್ರಸಿದ್ದ ಗೌರಸಮುದ್ರ ಮಾರಮ್ಮ ದೇವಸ್ಥಾನಕ್ಕೆ ಬೃಹತ್ ರಾಜಗೋಪುರ ನಿರ್ಮಿಸಿ ದೇವಸ್ಥಾನವನ್ನು ನವೀಕರಿಸಿದ್ದರು. ಈ ವಿಚಾರ ಎಲ್ಲರ ಮನೆಮಾತಾಗಿ ದೇವಸ್ಥಾನ ಈ ಮಟ್ಟಿಗೆ ಆಗಿರುವುದರ ಹಿಂದೆ ತಾಯಿ ನಮ್ಮಮ್ಮ ಮಾರೆಮ್ಮ ಅವರ ಪವಾಡವೇ ಸರಿ ಎಂದೆಲ್ಲಾ ಕೊಂಡಾಡುತ್ತಿದ್ದರು. ಇದೇ ದಿನಗಳಲ್ಲಿ ನೆಚ್ಚಿನ ಹೈಸ್ಕೂಲ್ ಶಿಕ್ಷಕರಾದ ವೀರಣ್ಣ ಸರ್ ಅವರನ್ನು ಬೇಟಿಯಾಗಲು ನಮ್ಮ ಪಕ್ಕದ ಗ್ರಾಮ ಹೊನ್ನೂರು ಎಂಬ ಗ್ರಾಮಕ್ಕೆ ಹೋಗಿದ್ದೆ. ಅವರ ಮನೆ ಪತ್ತೆ ಮಾಡಿ ಅವರನ್ನು ಕಂಡು, ಗುರು ಶಿಷ್ಯರು ಉಭಯಕುಶಲೋಪರಿ ಮಾತಾಡಿದೆವು.ಶಿಷ್ಯನೊಬ್ಬ ಶಿಕ್ಷಕನಾಗಿ ಅವರ ಮನೆಗೆ ಹೋಗಿದ್ದು ಅವರ ಸಂತಸಕ್ಕೆ ಮಿತಿಯೇ ಇರಲಿಲ್ಲ.ಸುಮಾರು ಹೊತ್ತು ಮಾತಾಡಿ ಅವರ ಮನೆಯಲ್ಲೇ ಮಧ್ಯಾಹ್ನದ ಊಟವನ್ನೂ ಮಾಡಿದೆ. ಹೊರಡುವ ವೇಳೆಗೆ ನಮ್ಮ ಗುರುಗಳು "ನಾಗೇಂದ್ರ ಗೌರಸಮುದ್ರ ದೇವಸ್ಥಾನ ನೋಡಿದೆಯಾ"?? ಎಂದು ಕೇಳಿದರು.
"ಇಲ್ಲಾ ಸಾರ್ ಹೋಗಿಲ್ಲ" ಅಂದೆ.
"ಏನ್ ಗೋಪುರಪ್ಪ ಅಬ್ಬಾಬ್ಬಾ!..ಎಲ್ಲಾ ದೇವರ ಮಹಿಮೆ" ಎಂದು ನಿಂತ ಸ್ಥಳದಿಂದಲೇ ದೇವಸ್ಥಾನದ ದಿಕ್ಕಿಗೆ ತಿರುಗಿ ಕೈಮುಗಿದರು.
ಏನಾಶ್ಚರ್ಯ??
ಮೂರು ವರ್ಷ ದೇವರು, ಮೂಢನಂಬಿಕೆ ಮೇಲೆ ಅವರ ನಿಲುವಿಗೆ ಒಪ್ಪಿ ಅಸ್ಪಸ್ಟ ಆಸ್ತಿಕನಾಗಿದ್ದ ನಾನು ಸಂಪೂರ್ಣ ನಾಸ್ತಿಕನಾಗಿ ಬದಲಾಗಿ ಆಗಿತ್ತು. ಅವರು ಕೈ ಮುಗಿದ ಭಕ್ತಿಗೆ ಮೂಕ ವಿಸ್ಮಿತನಾದೆ.ನನ್ನ ನಾಸ್ತಿಕತೆಯ ಮೂಲ ಪುರುಷನೇ ಕೈ ಮುಗಿದದ್ದು ನನಗೆ ಒಮ್ಮಿಂದೊಮ್ಮೇಲೆ ಅವರನ್ನು ಕೇಳಲು ನೂರು ಪ್ರಶ್ನೆಗಳು ಮೂಡಿದವು.ಆದರೆ ಅದ್ಯಾಕೋ ಈ ಪ್ರಶ್ನೆಗಳೆಲ್ಲಾ ಗುರುಗಳ ಬಳಿ ಕೇಳಲು ಶಿಷ್ಯನಾದ ನನಗೆ ಧೈರ್ಯ ಸಾಲಲಿಲ್ಲ. ಮತ್ತೊಂದು ದಿನ ಸಂವಾದ ಸಲುವಾಗಿಯೇ ಬೇಟಿಮಾಡಬೇಕು ಎಂದೆನಿಸಿ ಬಂದುಬಿಟ್ಟೆ.
ನಾಸ್ತಿಕತೆಯ ದೋರಣೆಯಿಂದ ಅದಾಗಲೇ ಬಹಳ ದೂರ ನನ್ನ ಬದುಕು ಸಾಗಿತ್ತು.ಕೆಲವು ಸಂದರ್ಭಗಳು ದೇವರಿಲ್ಲ ಎಂಬುದನ್ನು ಸಾರಿ ಹೇಳಿದ್ದವು. ಸೋ ಇವೆಲ್ಲವೂಗಳ ನಡುವೆ ದೇವರ ಬಗ್ಗೆ ಒ'ಲವ್ವಾ'ಗಲೀ,ಭಕ್ತಿಯಾಗಲೀ ಲವಲೇಶದಷ್ಟು ಇರಲಿಲ್ಲವಾದ್ದರಿಂದ ಈಗ ಈ ವಿಚಾರವನ್ನು ಗುರುಗಳಲ್ಲಿ ಚರ್ಚಿಸಿದ ನಂತರ ಒಂದೊಮ್ಮೆ ಆಸ್ತಿಕತೆಯ ಭಾವವನ್ನು ನಾನು ನಾಸ್ತಿಕತೆಯ ಮನಸ್ಥಿತಿಯಲ್ಲಿ ಪುನರ್ ಸ್ಥಾಪಿಸಿಕೊಳ್ಳುವುದು ಕಷ್ಟಸಾದ್ಯವಾಗಿತ್ತು. ಆ ಹಿನ್ನೆಲೆಯಲ್ಲಿ ಈ ವಿಚಾರವಾಗಿ ನಾನು ಪುನಃ ಚರ್ಚಿಸಲು ಹೋಗಲಿಲ್ಲ.ಸದ್ಯಕ್ಕೆ ಗುರುವೆಂಬ ಭಕ್ತಿಭಾವಕ್ಕೆ ಧಕ್ಕೆ ಬಾರದೇ ಹಾಗೇ ಸ್ಥಿರವಾಗಿ ಉಳಿದಿದೆ.
ಹಬ್ಬ ಹುಣ್ಣಿಮೆಗೆ ಪತ್ನಿ ಕುಮುದಾಳದು ಒಂದೇ ಕೊರಗು. ಮನ್ಯಾಗೆ ಎರಡೆರಡು ಹೆಣ್ಣು ಮಕ್ಕಳು ಇವೆ. ಇವುಗಳಿಗೆ ಸ್ವಲ್ಪ ಪೂಜೆ ಪುನಸ್ಕಾರ, ಸಂಸ್ಕಾರ,ಭಕ್ತಿಭಾವ ಬೇಳೆಸಪ್ಪ,ನಿಮ್ ತರ ಗುಂಡ್ರಗೋವಿ ತರ ಮಾಡಬೇಡ ಅಂತ ಒಂದೇ ಸಮನೇ ಹಾಡು ಹೇಳುತ್ತಿರುತ್ತಾಳೆ.ಪೂಜೆಯ ಸಮಯದಲ್ಲಿ ನಾನಾಡುವ ಕೆಲವು ಮಡಿ ಮೈಲಿಗೆಯ ಮಾತುಗಳಿಂದ ವ್ರತಕ್ಕೂ ಅಪಚಾರವಾಗಿತೂ ಎಂದು ಜಾಸ್ತಿ ಕಾಡಿಸದೇ ಪೂಜಾ ಕಾರ್ಯಗಳಿಗೆ ಬಾಹ್ಯಬೆಂಬಲವನ್ನಷ್ಟೇ ಪಡೆದು ಅದು ಇದೂ ಮಾಡುತ್ತಿರುತ್ತಾಳೆ.ನನ್ನದೂ ಪೂಜೆಗಿಂತ ಅಡುಗೆಮನೆ ಕಡೆಯೇ ಸ್ವಲ್ಪ ಜಾಸ್ತಿ ಗಮನ ಇರುತ್ತದೆ.
ದೇವರು ಇದ್ದಾನೋ ಇಲ್ಲವೋ ಅದು ಅವರವರ ನಂಬಿಕೆ. ಇದರಲ್ಲಿ ನಾನು ಹೆಚ್ಚು ವಿತಂಡವಾದ ಮಾಡಲು ಹೋಗಿ ದೈವ ಭಕ್ತರ ಶಾಪಕ್ಕೆ ಗುರಿಯಾಗಲು ಇಷ್ಟ ಇಲ್ಲ. ಆಸ್ಥಿಕತೆಯ ಮನೆ ಮಂದಿಯೊಳಗೆ ನಾಸ್ತಿಕ ನಾದ ನಾನು 'ನಾಸ್ತಿಕ'ನಾಗಿಯೇ ಉಳಿದುಬಿಟ್ಟೆ.!!
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ