ಆತ್ಮಹತ್ಯೆಯ ಮನಸ್ಸುಗಳೊಂದಿಗೆ...STOP SUICIDE..

ಆತ್ಮಹತ್ಯೆ ಮನಸ್ಸುಗಳೊಂದಿಗೆ..

ಇಪ್ಪತ್ತೆಂಟು ಮೂವತ್ತು ವರ್ಷಗಳ ಹಿಂದಿನ ನೆನಪು.ನನಗೆ ಆರೇಳು ವರ್ಷಗಳಿರಬಹುದು. ನಾನು  ಅಪ್ಪ ಹೊಲದಲ್ಲಿ ಓಡಾಡುತ್ತಿದ್ದೆವು.ಅಪ್ಪ ಅಲ್ಲಲ್ಲಿ ಎತ್ತರವಾಗಿ ಬೆಳೆದ ಕಳೆಸಸ್ಯ ಕಿತ್ತಾಕುತ್ತಿದ್ದರೆ ನನಗೆ ಆ ಶೇಂಗಾ ಗಿಡಗಳ ಮದ್ಯೆ ಓಡಾಡುವುದೇ ಖುಷಿಯಾಗಿತ್ತು.ನಮ್ಮ ಪಕ್ಕದ ಹೊಲದ ತಿಪ್ಪೇಸ್ವಾಮಿ ಅವಸರ ಅವಸರದಿಂದ ಏನೋ ಕಳೆದುಕೊಂಡವರಂತೆ ಬಂದರು.  ಅಪ್ಪಾಜಿ ಹತ್ತಿರ ಬಂದು "ಎಂಥಾ ಅನ್ಯಾಯ ಆಯಿತು ತಿಮ್ಮಣ್ಣ.."

" ಕೆಂಗಣ್ಣ ಮೇಷ್ಟ್ರುದು ಬಾರೀ ಅನ್ಯಾಯ ಆಗೋಯಿತು  ಹಂಗಾಗಬಾರದಾಗಿತ್ತು ತ್ಚೊ...ತ್ಚೊ..." ಎಂದರು..

  "ಹ್ಞು ನೋಡಪ್ಪ ತಿಪ್ಪೇಸ್ವಾಮಿ  ಮಗಳ ಮದುವೆಯ ದಿನವೇ ಹಂಗೆ ಮಾಡಿಕೊಳ್ಳಲು ಏನು ಕಾರಣ ಇತ್ತೋ ಅವರಿಗೂ ಆ ಪರಮಾತ್ಮನಿಗೂ ಇಬ್ಬರಿಗೆ ಮಾತ್ರ ಗೊತ್ತು" 

ಬಹಳ ಸಾಲ ಮಾಡಿ ಮದುವೆಗೆ ಹೋಜು ಮಾಡಿದ್ರಂತೆ ತಿಮ್ಮಣ್ಣ..

 "ಅನ್ಯಾಯ ಅನ್ಯಾಯ ಬಾರೀ ಅನ್ಯಾಯ.."

ಸಾಲ ಮಾಡಿದ್ರೇನಂತೆ ಈ ವರ್ಸಲ್ಲ ಮುಂದಿನ ವರ್ಸ ತೀರ್ಸಬಹುದಿತ್ತು.

ಅಂತವರೇ ಹಂಗಾದರೇ ನಮ್ಮಂತವರ ಗತಿ ಏನು 
 
ಎಂದು ಪರಸ್ಪರ ಮಾತಾನಾಡಿಕೊಳ್ಳುತ್ತಿದ್ದರು..

 ನನಗೆ ಅಂದು ವಿಷಯದ ಗಂಭೀರತೆ ಅರ್ಥ ಆಗಿರಲಿಲ್ಲ. ಅದಾದ ನಾಲ್ಕಾರು ದಿನಗಳಲ್ಲಿ   ನಮ್ಮ ಅಕ್ಕಪಕ್ಕದ ಹೊಲದ ಇನ್ನೊಬ್ಬರು "ನೋಡು ಕೆಂಗಣ್ಣ ಮೇಷ್ಟ್ರು  ಜನರಿಗೆಲ್ಲಾ ಏನು ಒಳ್ಳೆಯದು ಮಾಡಿದ್ದರೂ ಕೊನೆಗೆ ತಮ್ಮ ಜೀವನ ತಾವೇ ತಕ್ಕಂಡ್ ಬಿಟ್ಟರು. ಏನು ಜೀವನನೊ ಏನೋ ಅವರ ಜೀವ ಏನೋ ಹೋತು ಆದರೆ ಈಗ ಅವರ ಹೆಂಡತಿ-ಮಕ್ಕಳ ಗತಿ ಏನೋ ಹೆಂಗೋ..." ಏನ್ ಜನ ಸೇರಿದ್ರಪ್ಪ ಅಬ್ಬಾಬ್ಬಾಬ್ಬ್ ಬ್ಬ್ ಬ್ಬ್......ಪುಣ್ಯಾತ್ಮ ಅವರು ಎಂದು ತಾವು ನಿಂತ ಸ್ಥಳದಲ್ಲೇ ಕೈ ಮುಗಿದರು.

ವಿಷಯ ಏನಂದರೆ ಅವರು ಕೆಂಗಣ್ಣ  ಅಂತ ಮಾಸ್ಟರ್ ಇದ್ದರಂತೆ ಅವರ ಹೆಸರು ಬೇರೆ ಇರಬಹುದೇನೋ ಆದರೆ ಹೆಚ್ಚು  ಹಳದಿಯೊಂದಿಗೆ ಕೆಂಪಗೆ ಇರುವವರನ್ನು  ಕೆಂಗಣ್ಣ ಅಂಥ ಕರೆದಿರಬಹುದು. ಅವರು ಅವರ ಮಗಳ ಮದುವೆ ಅದ್ದೂರಿಯಾಗಿ ಸಾಗಿಸಿದ್ದರಂತೆ.ವರದಕ್ಷಿಣೆ, ಬಂಧುಗಳಿಗೆಲ್ಲಾ ಬಟ್ಟೆ,  ಸಾವಿರಾರು ಬಂಧುಮಿತ್ರರಿಗೆ ಬಗೆಬಗೆಯ ಸಿಹಿ ಖಾದ್ಯಗಳೊಂದಿಗೆ ಊಟ, ಹಾಗೆ ಬಂದವರಿಗೆಲ್ಲರಿಗೂ ಫಲ-ತಾಂಬೂಲ ವ್ಯವಸ್ಥೆಯೂ ಮಾಡಿದ್ದರಂತೆ. ಆದರೆ ಇತ್ತ ಮಗಳ  ಕೊರಳಿಗೆ ಮಾಂಗಲ್ಯ ಧಾರಣೆ ಆಗುತ್ತಿದ್ದರೆ ಅತ್ತ ಯಾರೂ ಇಲ್ಲದ ಕೋಣೆಯಲಿ ಕೆಂಗಣ್ಣ ಅವರು ಕೊರಳಿಗೆ ಉರುಳು ಹಾಕಿಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರಂತೆ. ವಿಷಯದ ಸಂಪೂರ್ಣ ಸ್ಪಷ್ಟತೆ ನನಗಿಲ್ಲದಿದ್ದರೂ ಅವರು ಕೊಟ್ಟಂತಹ ವರದಕ್ಷಿಣೆಯೋ,ಅಥವಾ ಮದುವೆಗೆ ಮಾಡಿದಂತ ದುಂದುವೆಚ್ಚವೋ ಮಗಳ ಬಾಳಿಗೆ ಅಕ್ಷತೆ ಹಾಕಿ ಶುಭ ಹಾರೈಸಬೇಕಾದವರು ಕ್ಷಣಾರ್ಧದಲ್ಲಿ ಹೆಣವಾಗಿ , ಆ ವಿಷಯ ಎಲ್ಲರಿಗೂ ಕೆಲವೇ ನಿಮಿಷಗಳಲ್ಲಿ ಗೊತ್ತಾಗಿ  ಮದುವೆಗೆ ಸೇರಿದ್ದ ಬಂಧುಬಳಗವೆಲ್ಲಾ ಕಣ್ಣೀರಿನ ಸಾಗರದಲ್ಲಿ ಮುಳುಗಿದ್ದರಂತೆ.ಅವತ್ತು ಈ ಉರುಲು(ಉರುಳು) ಅಂದರೆ ಏನು? ಅದ್ಯಾಕೆ ಹಾಕ್ಕೋತ್ತಾರೆ. ಹೆಂಗೆ ಹಾಕ್ಕೋತ್ತಾರೆ ಅಂತಾ ಯೋಚನೆ ಮಾಡುತ್ತಿದ್ದೆ ಆದರೆ ನನಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ..

ನಾನು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಾಗ  ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯ ಜನತಾ ಕಾಲೋನಿಯ ಒಂದು  ಜನತಾಮನೆಯ ಸಮೀಪ ನೂರಾರು ಜನ ಜಮಾಯಿಸಿದ್ದರು.ನನಗೆ ಆತ್ಮಹತ್ಯೆ ವಿಷಯದಬಗ್ಗೆ ಇದ್ದ ಕುತೂಹಲ ಕೆರಳಿ  ಕೆಲವು ಹುಡುಗರನ್ನು ಕರೆದೆ  ಒಂದೆರಡು ಹುಡುಗರು ನನ್ನೊಂದಿಗೆ ಬರಲು ಸಮ್ಮತಿಸಿದರೆ ಬಹುತೇಕರು ಅಯ್ಯಯ್ಯಪ್ಪ ನಾನು ಬರಲ್ಲ.. ನಾನು ಬರಲ್ಲ ಎಂದು ಎಲ್ಲಾರೂ ಹಿಂದೆ ಸರಿದರು ಆದರೆ ನಾವು ಒಂದಿಬ್ಬರು ಕ್ಷಣಹೊತ್ತಲ್ಲಿ ಅಲ್ಲಿಗೆ ಧಾವಿಸಿದೆ.ತುಂಬಾ ಜನ ಸೇರಿದ್ದರೂ ಅಲ್ಲಿ ಇಲ್ಲಿ ತೂರಿ  ಅವರು ಹೇಗೆ ಉರಳು ಹಾಕಿಕೊಂಡಿದ್ದಾರೆಂದು ನೋಡುವ ಕಾತರದಿಂದ ಬಾಗಿಲಲ್ಲಿ ಬಗ್ಗಿನೋಡಿದೆ.  ಏನು ಕಾರಣ ಇತ್ತೋ ಏನು ಕಷ್ಟ ಇತ್ತೋ ಗೊತ್ತಿಲ್ಲ ಆದರೆ ಅಲ್ಲಿ ಒಬ್ಬ ಇಪ್ಪತ್ತು ಇಪ್ಪತ್ತೈದು ವರ್ಷದ  ಹೆಣ್ಣುಮಗಳೊಬ್ಬಳು ತನ್ನ ಎರಡು ಗಂಡು , ಒಂದು ಹೆಣ್ಣು ಮಗು. ಎಲ್ಲರೂ ನಾಲ್ಕೈದು ವರ್ಷದ ವಯಸ್ಸಿನವರು.ಮೂರು ಮಕ್ಕಳನ್ನು ಸಾಲಾಗಿ ನೇಣುಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಳು. ನನಗೆ ಅದನ್ನು ನೋಡಿ ಆತ್ಮಹತ್ಯೆ ಅಂದರೆ ಈ ತರ  ಹಗ್ಗ ಬಿಗಿದುಕೊಂಡು ಸತ್ತೋಗದಾ??ಎಂದು ನನಗೆ ಅವತ್ತೇ ಗೊತ್ತಾಗಿದ್ದು. ಆದರೆ ಅದನ್ನು ನೋಡಿದ್ರೆ ಎಂಥಹ ಕಲ್ಲು ಕರಗುವಂತಿತ್ತು.ನನಗೂ ಕರಳು ಹಿಂಡಿಬಂತು. ಅದನ್ನೆಲ್ಲಾ ನೋಡಲಾಗದೇ ಇದೆಂಥಾ ಘೋರ ಎಂದೆನಿಸಿತು. ಈ ಮಕ್ಕಳು ಏನು ತಪ್ಪುಮಾಡಿದ್ದಾರೆ ಅಂತ ಸಾಯಿಸಿದ್ದಾಳೆಂದು ಅವಳ ಮೇಲೆ ಕೋಪವೂ ಬಂತು. ಎಷ್ಟು ಕುತೂಹಲದಿಂದ ಹೋಗಿದ್ದೆನೋ ಅಷ್ಟೇ ಬೇಜಾರಿನಿಂದ ಭಾರವಾದ ಮನಸ್ಸಿನಿಂದ ಹೆಜ್ಜೆ ಇಡುತ್ತಾ ಹಾಸ್ಟಲ್ಗೆ ಬಂದೆವು.

ನಾನು ಪ್ರಥಮ ವರ್ಷದ ಬಿ ಎ ಇದ್ದಾಗ ನಮ್ಮ ಕಾಲೇಜ್‌ನ ಅಂತಿಮ ವರ್ಷದ  ಚಳ್ಳಕೆರೆಯ ಚಿತ್ರಯ್ಯನಹಟ್ಟಿಯ ಕವಿತಾ ಎಂಬ  ಪ್ರತಿಭಾನ್ವಿತ  ವಿದ್ಯಾರ್ಥಿನಿಯೊಬ್ಬಳು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ  ಆತ್ಮಹತ್ಯೆ ಮಾಡಿಕೊಂಡಿದ್ದಳು. ಕವಿತಾಳ ಪೋಸ್ಟ್ ಮಾರ್ಟಂ ನಿಂದ  ಹಿಡಿದು ಸುಡುಗಾಡಿನಲ್ಲಿ ಅಗ್ನಿ ಸ್ಪರ್ಶದ  ಆಗೋವರೆಗೂ ನಮ್ಮ ಕಾಲೇಜ್‌ನ ಪ್ರಿನ್ಸಿಪಾಲರೂ ಗುಡ್ ಸ್ಟುಡೆಂಟ್ ಕಣ್ರಯ್ಯ ಎಂದು ಪೇಚಾಡುತ್ತಾ ದಿಕ್ಕು ತೋಚದ ಪೋಷಕರ ಸಹಾಯಕ್ಕೇ ಜೊತೆಗೆ ಇದ್ದಿದರಿಂದ  ಅವರ ಜೊತೆಗೆ ನಾನೂ  ಮತ್ತು ಮಹಾಸ್ವಾಮಿ ಎಂಬುವವನು  ಸಂಸ್ಕಾರದ ಕೊನೆಯವರೆಗೂ ಇದ್ದೆವು.. ಹೀಗೆ ಆರೇಳು  ವಿವಿಧ ಆತ್ಮಹತ್ಯೆ ಮಾಡಿಕೊಂಡವರನ್ನು ಹತ್ತಿರದಿಂದ ನೋಡಿದ್ದೆ.

 ನಾನು  ಸಂಡೂರು ತಾ ರಾಜಾಪುರ ಶಾಲೆಯಲ್ಲಿ ಕರ್ತವ್ಯ ಮಾಡುತ್ತಿರುವಾಗ ನಾನು ಮತ್ತು ಪ್ರೌಢಶಾಲಾ ಮುಖ್ಯೋಪಾದ್ದಯರಾಗಿದ್ದ ದೇವರಾಜ್  ಮತ್ತು ನಾನು ಪ್ರತಿದಿನ ಅವರ ಬೈಕಲ್ಲೇ ರಾಂಪುರದಿಂದ ರಾಜಾಪುರಕ್ಕೇ ದಿನವೂ ಹೋಗಿಬರುತ್ತಿದ್ದೇವು. ಬೈಕು ಅವರಾದಾದರೂ ಅವರಿಗೆ ಓಡಿಸಲು ಬಾರದ ಕಾರಣ ನಾನೇ ಓಡಿಸುತ್ತಿದ್ದೆ.ಒಂದು ವರ್ಷ ಇಬ್ಬರೂ ಜೊತೆ ಜೊತೆಯಲ್ಲಿಯೇ ಓಡಾಡಿತ್ತಿದ್ದೆವು ನಾನು ಮಾರ್ನಿಂಗ್ ಹೋಗಿ ಗಾಡಿ ತೆಗೆದುಕೊಂಡು ಬಂದು ಅವರನ್ನು ಅವರ ಶಾಲೆಗೆ ಬಿಟ್ಟು ಅದೇ ಗ್ರಾಮದ ನನ್ನದು ಇನ್ನೊಂದು ಶಾಲೆಗೆ ಹೋಗುತ್ತಿದ್ದೆ. ಅವರಿಗೆ ಎರಡು ವರ್ಷದ ಒಬ್ಬ ಮಗಳು  ಮತ್ತು ಪತ್ನಿ ಇದ್ದರು .ಅವರೂ ಚೆನ್ನಾಗಿಯೇ ಇದ್ದರು.   ಪ್ರತಿದಿನ ಕಾಪಿ/ಟೀ ಕುಡಿದು ಹೊರಡುತ್ತಿದ್ದೆವು. ಆಗೊಮ್ಮೆ ಈಗೊಮ್ಮೆ ತಿಂಡಿ ,ಊಟವನ್ನೂ ಮಾಡುತ್ತಿದ್ದೆ.ಅವರು ರೀಸೆಂಟ್ ಆಗಿ ಮನೆಯನ್ನೂ ಕೂಡ ಬದಲಾಯಿಸಿದ್ದರು.ಹತ್ತು ಹದಿನೈದು ದಿನಗಳು ಅಷ್ಟೇ ಅಗಿತ್ತು  ಮನೆ ಬದಲಾಯಿಸಿ .ಅಂದು ಶನಿವಾರ ಆ ಸರ್ ಅವರ  ಅತ್ತೆ ಮಾವ,ಹೆಂಡತಿಯ ಸೋದರ ಮಾವ  ಮನೆಗೆ ಬರುತ್ತಾರೆ ಸ್ವಲ್ಪ ದಿನಸಿ ತಗೋಬೇಕೆಂದು ಅಂದುದರಿಂದ ಅಂದು ನಾನು ಅವರು ಹೋಗಿ ಸಾಮಾನುಗಳ ಮನೆಗೆ ಹಾಕಿ ನಾನು ಆಮೇಲೆ ಊರಿಗೆ ಹಿಂದಿರುಗಿದ್ದೆ.ಅವರ ಹೆಂಡತಿಯ ಸೋದರ ಮಾವ ಅಂದಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಎಸ್ಪಿ ಆಗಿದ್ದರು.ಅವರ   ಮಾವ ಪ್ರಾದೇಶಿಕ ಅರಣ್ಯ ಅಧಿಕಾರಿಗಳಾಗಿದ್ದರಂತೆ ಅವರೆಲ್ಲಾ ಬರುವರು ಎಂದೂ, ಎಸ್ಪಿ ಬಂದರೆ ಲೋಕಲ್ ಪೋಲಿಸ್ ಅಧಿಕಾರಿಗಳೂ ಮನೆಗೆ ಬರುವರು ಎಂದು ನನಗೆ ಖುಷಿಯಿಂದನೇ ಹೇಳಿಕೊಂಡಿದ್ದರು.ಆಗಲಿ ಸರ್ ಎಲ್ಲರನ್ನು ಚೆನ್ನಾಗಿ ನೋಡಿಕೊಂಡು ಕಳುಹಿಸಿ ಎಂದೇಳಿ ಬಂದಿದ್ದೆ.  ಮರುದಿನ ಭಾನುವಾರ ರಾತ್ರಿ   ಸುಮಾರು ಎಂಟುಗಂಟೆ   ಆಗಿರಬಹುದು ನಮ್ಮ ಸಿಬ್ಬಂದಿ ಮತ್ತು ಮಿತ್ರರಾದ ಮುಜಾವರ್ ಅವರು ಕಾಲ್ ಮಾಡಿ ಸರ್ ಎಲ್ಲಿದ್ದೀರಾ? ಎಂದರು.

 ಊರಲ್ಲಿ ಇದ್ದೇನೆ ಮನೇಲಿದ್ದೇನೆ ಸರ್ ಎಂದೆ..

 ಸರ್ ವಿಷಯ ಗೊತ್ತಾಯಿತಾ?

   ಯಾವ್ ವಿಷ್ಯ ಸಾರ್??ಗೊತ್ತಿಲ್ಲ ಹೇಳಿ ಅಂದೆ..  ಸಾರ್ ದೇವರಾಜ್  ಸಾರ್ ಹ್ಯಾಂಗ್ ಮಾಡಿಕೊಂಡಿದ್ದಾರಂತೆ ಅದ್ರು.
ಏ ಇಲ್ಲಾ ಬಿಡಿ ಸಾರ್..
ನಾನು ಅವರು ನಿನ್ನೆ ನಾಲ್ಕು ಗಂಟೆಯವರೆಗೆ ಜೊತೆಯಲ್ಲಿದ್ದು, ಅವರ ರಿಲೇಶನ್ ಬರುವರೆಂದು ರೇಷನ್ ಹಾಕಿ ಬಂದಿದ್ದೆವು.ನಿಜ ಏನ್ ಸಾರ್ ?

ಹೌದು ಸಾರ್ ಸತ್ಯ ಎಂದರು.

ಎಂಥಾ ಕೆಲಸ ಮಾಡ್ಕೊಂಡರಲ್ಲಾ?? ನಿನ್ನೆ ಲವಲವಿಕೆಯಿಂದ ಮಾತಾಡಿ ಓಡಾಡಿದ ನೆನಪುಗಳೇ ಕಣ್ಮುಂದೆ ಕಾಣುತ್ತಿವೆ..ನಂಬಲಾಗುತ್ತಿಲ್ಲ.. 
ಹೊರಡೋಣ ಅನಿಸಿತು..ಅದರೆ
ಆಗ ನಾನು ಊರಲ್ಲಿ ಇದ್ದುದರಿಂದ ತಕ್ಷಣವೇ ಬರಲು ಅನುಕೂಲಗಳಿಲ್ಲದೇ  ಮರುದಿನ ಬೆಳಿಗ್ಗೆ ಧಾವಿಸಿದೆ. ನಮ್ಮ ಗೆಳೆಯ ಮತ್ತು ಅವರ ಸಿಬ್ಬಂದಿ ತುಮರಿ ಮಂಜುನಾಥ ಅವರತ್ರ  ನಾನು ಮಾತನಾಡುತ್ತಾ ಸರ್ ಅವರು ಏನಾದರೂ ಪ್ರಾಬಲಮ್ಮು  ಹೇಳಿದ್ರ?
ಅಂದೆ

ಆ ತರ ಏನ್ ಹೇಳಿಲ್ಲ ಸಾರ್ ಸಾರ್ ನೀವೇ ಜೊತೆಯಲ್ಲಿ ಓಡಾಡುತ್ತಿದ್ರಿ ನಿಮಗೇ ಏನಾದರೂ ಹೇಳಿದ್ರ ಅಂದರು.ಜೊತೆಯಲ್ಲಿ ಹೋಗುತ್ತಿದ್ದ್ವಿ, ಬರುತಾ ಇದ್ದಿವಿ ಹಾಗಂತಾ ಜನರಲ್ ಆಗಿ ಮಾತಾಡುತ್ತಿದ್ದುದು  ಬಿಟ್ರೆ  ಆ ತರ ಸಮಸ್ಯೆಗಳ ಬಗ್ಗೆ ಎಂದೂ ಹೇಳಿಲ್ಲ ಬಿಡಿಸಾರ್  ಎಂದೆ. ಅದರೆ ಏನೋ ಮೋಸ ಅಗಿದೆ. ದೇವರಾಜ್ ಅವರ ಹೆಂಡತಿ ಮತ್ತು  ಅವರ ಅಪ್ಪ ಅಮ್ಮ ಮಾವಂದಿರು ಸೇರಿದಾಗ  ನನ್ನ ಪ್ರಕಾರ ಏನೋ ವಾದ ಆಗಿದೆ. ಅವರೆಲ್ಲಾ ಯಾವುದೋ ವಿಚಾರಕ್ಕೆ ದೇವರಾಜ್ ಅವರಿಗೆ  ಬೆದರಿಕೆಯೂ ಹಾಕಿರಬಹುದು.ನಿನ್ನೆ ಅವರು ನಮ್ ಮಾವ ಅತ್ತೆ,ನಮ್ ಮನೆಯವರ ಸೋದರಮಾವಂದಿರು ಎಲ್ಲರೂ ಬರುತ್ತಾರೆಂದು ಕೆಲವು ಸಾಮಾನುಗಳನ್ನು ಸಂತೆ ಮಾಡಿಕೊಂಡು ಹೋಗಿದ್ವಿ ಸಾರ್ ಅಷ್ಟೇ ನನಗೆ ಗೊತ್ತಿರೋದು.. ಎಂದೆ..

 ದೇವರಾಜ್ ಅವರ ತಂದೆ ತಾಯಿ  ಅರವತ್ತು ಅರವತ್ತೈದು ವಯಸ್ಸಾಗಿದೆ.ಅವರ ಅಸಹಾಯಕತೆ,ಆ ರೋಧನೆ ನೋಡಲಾಗುತ್ತಿಲ್ಲ..ಹೆಂಡತಿಯ ಕಡೆಯವರು ಪ್ರಭಾವಿಗಳಾಗಿದ್ದರಿಂದ ದೇವರಾಜ್ ಅವರ ತಂದೆ ತಾಯಿ ಮತ್ತು  ಅವಿವಾಹಿತ ತಂಗಿಗೆ ನ್ಯಾಯ  ಕೊಡಿಸಬೇಕೆಂಬುದು ಎಂದು  ನಾವೆಲ್ಲರೂ ಮಾತನಾಡುತ್ತಾ,ಅವರು ಒಂದು ಡೆತ್ ನೋಟು ಕೂಡ ಬರೆದಿಟ್ಟಿದ್ದರು. ಅದನ್ನು ಎಲ್ಲಿ ನಾಶ ಮಾಡುವರೋ ಎಂದು ಅದನ್ನು ರಕ್ಷಿಸಬೇಕೆಂದು ನಾವೆಲ್ಲರೂ ಜೊತೆಯಲ್ಲೇ ಇದ್ದೆವು. ಆದರೆ ಪೋಸ್ಟ್ ಮಾರ್ಟಂ ವೇಳೆಯಲ್ಲಿ ಮುಂದಿರಬೇಕು ಎಂದು ಪೋಸ್ಟ ಮಾರ್ಟಂ ಆಗುವವರೆಗೂ ನಾನು ಅವರ ಮುಂದೆಯೇ ಇದ್ದೆ.  ಅವರು ಗ್ರೀನ್ ಪೆನ್ನಲ್ಲಿ ಬನಿಯನ್ ,ಹೊಟ್ಟೆ,ತೊಡೆಯಮೇಲೂ ಯಾವುದೋ ನಂಬರ್ ಮತ್ತು ಹೆಸರು ಬರೆದು ಇವರನ್ನು ಬಿಡಬೇಡಿ.. ನನ್ನ ಸಾವಿಗೆ ಇವರೇ ಕಾರಣ ಎಂದು ಬರೆದಿದ್ದರು.ನಾನು ಪೋಸ್ಟ್ ಮಾರ್ಟಂ ಮಾಡುವಾಗ ನನ್ನ ಹಾಜರಿಯಲ್ಲೇ ಇದೆಲ್ಲಾ ನೋಡಿ ಅದನ್ನು ದಾಖಲಿಸಲು ಹೇಳುತ್ತಿದ್ದೆ.ಆಮೇಲೆ  ತಲೆಯ ಚಿಪ್ಪು ತೆಗೆಯಲು ಹಣೆಯ ಸುತ್ತಾ  ಉಳಿಯಿಂದ ಹೊಡೆಯಲು ಶುರುಮಾಡಿದರೂ ಅವರ ಆಪ್ತನಾದ ನನಗೆ ಅದನ್ನು ನೋಡಿ ಸಹಿಸಲು ಅಗಲಿಲ್ಲ ತುಂಬಾ ನೋವಿನಿಂದ ಹೊರಬಂದೆ. ಹತ್ತುನಿಮಿಷ ಕಾಲು ಗಂಟೆಯಲ್ಲಿ ಪೋಸ್ಟ್ ಮಾರ್ಟಂ ಮುಗಿಸಿ ಬಾಡಿಯನ್ನು ಕೋರಾ ಬಟ್ಟೆಯಲ್ಲಿ ಸುತ್ತಿಇಟ್ಟಿದ್ದರು. ಅದಾದ ನಂತರ ಸ್ವಲ್ಪ ಸಮಯದ ನಂತರ ಪೋಲಿಸ್ ಸ್ಟೇಶನ್  ಪಿ ಎಸ್ ಐ ಬೇಟಿ ಮಾಡಿ ಇವರಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿ ನಾಶ ಆಗಬಾರದೆಂದು ಮನವಿ ಮಾಡಲಾಗಿ,ಅವರೂ ವಿವರಗಳನ್ನು ಓದಿ ಹೇಳಿ ಓಕೆ ಎಂದು ನಾವೆಲ್ಲ ಒಪ್ಪಿಗೆ ಕೊಟ್ಟು ಬಾಡಿ ತೆಗೆದುಕೊಂಡು ಅವರ ತವರು ಚಿಕ್ಕನಾಯಕನಹಳ್ಳಿಗೆ ಹೋಗಿದ್ದೆವು. ಕೆಲಸಕ್ಕೆ ಸೇರಿ ಕೇವಲ ಎರಡು-ಎರಡುವರೆ ವರ್ಷ ಅಷ್ಟೇ ಅಗಿತ್ತು.‌ ಪೋಷಕರು ಮತ್ತು ಊರಿನವರ ಆಕ್ರಂಧನದ ಮಧ್ಯೆ  ಅಂತ್ಯಸಂಸ್ಕಾರ ಮಾಡಿ ಆತ್ಮೀಯ ಸಿಬ್ಬಂಧಿಯೊಬ್ಬರಿಗೆ ಅಂತಿಮ ನಮನಗಳೇಳಿ ಎರಡೂ ಶಾಲೆಯ ಸಿಬ್ಬಂಧಿ ಅಂದೇ ರಾತ್ರಿ ವಾಪಾಸಾಗಿದ್ದೆವು.  ಅವರ ನೆನಪುಗಳು ಎಂಟತ್ತು ದಿನಗಳು ತುಂಬಾ ಕಾಡಿತ್ತು.ನನಗೆ  ಹೆಚ್ಚು ಕಾಡಿದ ಆತ್ಮಹತ್ಯೆಗಳಲ್ಲಿ ಈ ದೇವರಾಜ್ ಅವರ  ಆತ್ಮಹತ್ಯೆ. ಒಬ್ಬ ಕೆ ಇಎಸ್  ಅಧಿಕಾರಿಯಾಗಿ ಅವಿವಾಹಿತ ತಂಗಿಯರು ಮತ್ತು  ವಯಸ್ಕ ಪೋಷಕರನ್ನು ನೋಡಿಕೊಳ್ಳಬೇಕಾಗಿದ್ದವರು ಪ್ರಾಣ ಕಳೆದುಕೊಂಡರು. ಯಾಕೆ ಹೀಗೆ ಮಾಡಿಕೊಂಡರು ಎಂಬ ಮಾತುಗಳು ನಮ್ಮಲ್ಲಿ ನಿರಂತರ ಚರ್ಚೆಯಲ್ಲಿದ್ದವು.ಆದರೂ ಅವರು ನನ್ನನ್ನು ಶಾಶ್ವತವಾಗಿ ಜೈಲಲ್ಲಿ ಇಡವರೆಂದು ಅಂಜಿ ಈ ಕೃತ್ಯ ಮಾಡಿಕೊಳ್ಳುತಿದ್ದೇನೆಂದು ತಂದೆ ತಾಯಿಯರಲ್ಲಿ ಡೆತ್ ನೋಟ್ ನಲ್ಲಿ ಕ್ಷಮೆಯನ್ನೂ ಕೇಳಿದ್ದರು.ಆದರೂ ಅನ್ಯಾಯವಾಗಿ ತಂದೆ ತಾಯಿ ನೋಡಿಕೊಳ್ಳದೇ ಸತ್ತು ಹೋದರು ಎಂದು ಇವತ್ತಿಗೂ ನನಗೆ ಕಾಡುತ್ತಿದೆ


ಕೋಟ್ಯಾಧೀಶ ಸಿದ್ಧಾರ್ಥ್ ಅವರ ಆತ್ಮಹತ್ಯೆ,ಕೆಲವೇ ದಿನಗಳ ಹಿಂದೆ ಭದ್ರಾವತಿಯ ಎಂಸಿ ಹಳ್ಳಿ ಬಳಿ ಅಪ್ಪ ಮಾಮ ನಮ್ಮನ್ನೂ ನೀರಲ್ಲಿ ಮುಳುಗಿಸಬೇಡಿ  ಬೇಡ ಬೇಡ ಎಂದು ಗೊಗೆರೆದರೂ ಬಿಡದೇ ಕಾರು ಸಮೇತ ಭದ್ರಾ ಕಾಲುವೆಗೆ ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು,ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಕುಂಟುಂಬವೊಂದರ ಸಾಮೂಹಿಕ ಆತ್ಮಹತ್ಯೆ ಇವೆಲ್ಲವುಗಳಿಂದ ಮನನೊಂದು  ಈ ಲೇಖನ ಬರೆಯಬೇಕೆನಿಸಿದ್ದು...

ಯಾಕೆ ಆತ್ಮಹತ್ಯೆಮಾಡಿಕೊಳ್ಳಬಾರದು?

ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೇ ಇರಬಹುದು  ಬದುಕಿದ್ದಾಗ ಏನೂ ಮಾಡದೇ ಆತ್ಮಹತ್ಯೆ ಮಾಡಿಕೊಂಡ ನಂತರ ಏನೂ ಸಾಧಿಸಲು ಆಗುವುದಿಲ್ಲ.ಏನೇ ಸಾಧಿಸಲು ಬದುಕಿದ್ದರೆ ತಾನೇ ಸಾಧ್ಯ.?
ಎಲ್ಲರಿಗೂ ಸಮಸ್ಯೆಗಳು ಇರುತ್ತಾವೆ ಆದರೆ ಅದಕ್ಕೇ ಬೇಕಾದಷ್ಟು ಪರಿಹಾರಗಳು ಇವೆ.ಅವುಗಳನ್ನು ತಾಳ್ಮೆ ಮತ್ತು ಜಾಣ್ಮೆಯಿಂದ ಕಂಡುಕೊಳ್ಳಬೇಕು.ಅದನ್ನು ಬಿಟ್ಟು ಆತ್ಮಹತ್ಯೆ ಒಂದೇ ಖಂಡಿತ ಪರಿಹಾರ ಅಲ್ಲವೇ ಅಲ್ಲ..
ನಿಮ್ಗೆ ತುಂಬಾ  ಸಮಸ್ಯೆಆಗಿ ಒತ್ತಡ/ಖಿನ್ನತೆ ಗೆ ಒಳಗಾಗದೇ ಸಮಸ್ಯೆಗಳನ್ನು ನಿಮ್ಮ ಆಪ್ತರಬಳಿ ಹೇಳಿಕೊಳ್ಳಿ ಅದು ಎಂತಹದ್ದೇ ಆಗಿದ್ದರೂ ಪರವಾಗಿಲ್ಲ.
ಗೆಳೆಯರ ಹತ್ತಿರ ಹೇಳಿಕೊಳ್ಳುವುದರಿಂದ  ಸಮಸ್ಯೆಗೆ ಒಂದಲ್ಲ ಒಂದು ಪರಿಹಾರವು ಸಿಗಬಹುದು. ಅವುಗಳನ್ನು ಕೇವಲ ಮಾನಸಿಕವಾಗಿ ತೆಗೆದುಕೊಳ್ಳದೇ,ಮನಬಿಚ್ಚಿ ಮಾತಾಡಿದರೆ  ಪರಿಹಾರ ಇದ್ದೇ ಇದೆ ಎಂದು ಅರಿಯಬೇಕು.
ಆತ್ಮಹತ್ಯೆ ಮಾಡಿಕೊಂಡ ನಂತರ ಇಷ್ಟು ವರ್ಷ ಸಾಕಿ ಬೆಳೆಸಿದ ತಂದೆ ತಾಯಿ ಮತ್ತು ಹೆಂಡತಿ ಮಕ್ಕಳ ಬದುಕು ಬೀದಿಗೆ ಬಿದ್ದು ಬದುಕು ದುಸ್ಥರವಾಗುವುದಿಲ್ಲವೇ?ಅವರನ್ನು ಆ ಸ್ಥಿತಿಗೆ ತಳ್ಳಲು ನೀವು ಇಷ್ಟೆಲ್ಲಾ ಮಾಡಿದ್ದು ? ಎಂತಹ ಪರಿಸ್ಥಿತಿಯಲ್ಲೂ ಆತ್ಮಹತ್ಯೆ ನಿರ್ಧಾರ ಬಿಟ್ಟು ಬೇರೆ ಬೇರೆ ಯಾವುದೇ  ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು.
ಸಮಸ್ಯೆಗೆ ಹೆದರಿ ಹೇಡಿಯಂತೆ ಸಾಯುವ ಬದಲು ಸಾಧನೆಯ ಬದುಕು ಬದುಕಿ ತೋರಿಸಲು ತುಂಬಾ ಅವಕಾಶಗಳಿವೆ.
ನಾನು ಪ್ರಸ್ಥಾಪಿಸಿರುವ ಘಟನೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರೆಲ್ಲರಿಗೂ ಸಮಸ್ಯೆಗಳಿರಬಹುದು ಆದರೆ ಸಮಸ್ಯೆಗಳನ್ನು ಎದುರಿಸಿ ಅದ್ಭುತ ಬದುಕು ಕಟ್ಟಿಕೊಳ್ಳಬಹುದಿತ್ತು.
ಮಾನವ ಸೃಷ್ಟಿಯೇ ಅದ್ಭುತ. ಮಾನವಜೀವನವನ್ನು ಹತಾಶರಾಗಿ ಸ್ವಯಂ ಹತ್ಯೆ ಮಾಡಿಕೊಂಡು ಜೀವನ ಕೊನೆಗೊಳಿಸಿಕೊಳ್ಳುವುದು ಅತ್ಯಂತ ಹೀನವಾದುದು.ತತ್‌ಕ್ಷಣದ ನಿರ್ಧಾರ ಪ್ರಾಣತೆಗೆಯುವುದು.

ಸಮಸ್ಯೆಗಳ ಒತ್ತಡಕ್ಕೆ ಸಿಲುಕಿದಾಗ ಅದರಿಂದ ಹೊರಬರುವುದು, ಅವಮಾನ,ಅಪಹಾಸ್ಯ ಸಹಿಸುವುದು ನಾನೇಳಿದಷ್ಟು ಸುಲಭ ಅಲ್ಲ ಎಂದು ನನಗೂ ಗೊತ್ತಿದೆ. ಆತ್ಮಹತ್ಯೆ ನಿರ್ಧಾರ ಹೊರತುಪಡಿಸಿ ಬೇರೆ ಯಾವುದೇ ನಿರ್ಧಾರ ಆದರೂ ತೆಗೆದುಕೊಳ್ಳಬಹುದು.

ಕೊನೆಯಮಾತು
ಬದುಕು ಕೊನೆಗೊಳಿಸುವ ಮುನ್ನ  ಹೇಗಾದರೂ ಮಾಡಿ ಬದುಕಬಹುದೆನ್ನುವ ಆಲೋಚನೆ ಇರಲಿ...  ಅವಮಾನ,ಅಪಮಾನ ಆರ್ಥಿಕ ದಿವಾಳಿ,ಏನೇ ಬಂದರೂ ಏನೇ ಹೋದರೂ ಯಾರೂ ಹತ್ಯೆ ಮಾಡಿಕೊಳ್ಳದೇ ಬಾಳಿ ಬದುಕಬೇಕೆನ್ನುವ ಆಶಯ ನನ್ನದು ಏನಂತೀರಿ???

✍️ನಾಗೇಂದ್ರ ಬಂಜಗೆರೆ.


ಕಾಮೆಂಟ್‌ಗಳು



  1. Nija sir niv heliddu
    Namma nechhina gurugala bagge nimma jothe eruva anu banda & nija gatanegalu.....

    Aa ondu chikka alochane Inda avaru hora banadiddare indu namma, nimna nechina gurugalu dura aguthiralilla...... 😥

    ಪ್ರತ್ಯುತ್ತರಅಳಿಸಿ
  2. ನಿಮ್ಮ ಲೇಖನಗಳನ್ನು ತಪ್ಪದೇ ಓದುತ್ತೇನೆ ... ನಿಮ್ಮ ಈ ಲೇಖನ ತುಂಬಾ ಚೆನ್ನಾಗಿದೆ ಸರ್ ...🙏🙏🙏

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು..ಹೀಗೆ ಓದುತ್ತಿರಿ.. ಯಾವುದಾದರೂ ಸಂಗತಿಗಳು ಸೂಕ್ತ ಎನಿಸಲಿಲ್ಲ ಎಂದರೆ ಚರ್ಚಿಸಿ...

      ಅಳಿಸಿ
  3. ನಿಮ್ಮ ಬರವಣಿಗೆಯ ವಿಷಯ ಯಾವಾಗಲೂ ಸಮಾಜಮುಖಿ ಮುಂದುವರೆಯಲಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..