ಜೀರಂಗಿ (Jewel beetle)

ಜೀರಂಗಿ..( Jewel Beetle)

 ಈ ಹಳ್ಳಿ ಹುಡುಗರಿಗೆ  ಜೀರಂಗಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ??ಎಲ್ಲಾರ ಬಾಲ್ಯದ ಸಂಗಾತಿ,ಮೃದ್ವಂಗಿಯಲ್ಲದ,ಕೆಂಪು ಅಂಗಿ ಅಥವಾ ಹಸಿರು ಅಂಗಿ ತೊಟ್ಟಿರುವ, ಚಿಣ್ಣರ  ಆಟದ ಸಾಮಾನು..
              ಕೆಮ್ಮಣ್ಣು ಜೀರಂಗಿ

 ತೊಂಭತ್ತರ ದಶಕದಲ್ಲಿ ಮಳೆಗಾಲದಲ್ಲಿ ನಮಗೆ ಇದ್ದ ಇಂಟರೆಸ್ಟಿಂಗ್ ಮತ್ತು ಆಟದ ಜೀವಂತ  ಏಕೈಕ ವಸ್ತು ಎಂದರೆ ಅದು ಜೀರಂಗಿ ಮಾತ್ರ.ಈಗಿನ ಮಕ್ಕಳ ರೀತಿಯಲ್ಲಿ ವೆರೈಟಿ ಆಟದ ವಸ್ತುಗಳು ಇರಲಿಲ್ಲ..ಯಾವುದೋ ಆಯತಾಕಾರದ ಇಟ್ಟಿಗೆಯೇ ನಮಗೆ ಲಾರಿ ಬಸ್ಸು, ತುಂಡಾದ ಅರ್ಧ ಭಾಗವೇ ಟ್ರಾಕ್ಟರ್ ಕಾರು ಜೀಪ್ ಎಲ್ಲವೂ ಆಗಿತ್ತು. ಇಂತಹವುಗಳ ಮದ್ಯೆ ಆಟದ  ಜೀವಂತ ವಸ್ತುಗಳೆಂದರೆ ಒಂದು ನಾಯಿ ಇನ್ನೊಂದು ವರ್ಷಕ್ಕೊಮ್ಮೆ ಬಂದು ಹೋಗುವ ಜೀರಂಗಿ ಆಭರಣ ಸುಂದರಿ ಈ ಜೀರಂಗಿ.

ನಮ್ಮದು ತೋಟದ ಮನೆ. ಶನಿವಾರ ಭಾನುವಾರ ನಾನು ನನ್ನ ತಮ್ಮ ಮನೆಯಲ್ಲಿಯೇ ಇರುತ್ತಿದ್ದೆವು. ಜುಲೈನ ಕೊನೆಯ ದಿನಗಳಿಂದ ಆರಂಭವಾಗುತ್ತಿದ್ದ ಈ ಜೀರಂಗಿಗಳು ಎಲ್ಲಿಯಾದರೂ  ಒಂದೇ ಒಂದು ಹಾರಾಡುವುದು ಕಂಡರೂ ಜೀರಂಗಿ ಬಂದಾವೇ ಎಂದು ಕೂಗಾಡಿ ಸಂಭ್ರಮ ವಿಜೃಂಬಿಸುತ್ತಿತ್ತು.ಹಾಗೆ ಅವುಗಳನ್ನು ಹುಡುಕುವ ಕಾರ್ಯವೂ ಶುರುವಾಗುತ್ತಿತ್ತು.ನಮಗಾಗ ಮನೆಕಾಯುವುದೇ ಕೆಲಸ. ಮನೆಯ ಪಕ್ಕ ಮುನ್ನೂರು ಮೀಟರ್ ದೂರಕ್ಕೆ 'ಬಯಲುತಿಮ್ಮಪ್ಪ'ಎಂಬ ದೇವಸ್ಥಾನ. ಅದರ ಪಕ್ಕದಲ್ಲೇ ಜಮೀನಿನಲ್ಲಿ ಒಂದು ಕರಿಜಾಲಿಮರ ಇತ್ತು. ಆ ಮರದ ಸುತ್ತೆಲ್ಲಾ ಸುತ್ತಾಡಿ ತುದಿಯಲ್ಲಿ ಕುಳಿತುಕೊಂಡಿರುವ ಅರಿಶಿಣದಂತಹ ಪೌಡರ್ ಮೆತ್ತಿಕೊಂಡಿರುವ ಹಸಿರು ಬಣ್ಣದ ಜೀರಂಗಿಯನ್ನು ಪತ್ತೆ ಹಚ್ಚುತ್ತಿದ್ದೆವು. ಪತ್ತೆ ಹಚ್ಚುವುದು ಸುಲಭವಾಗಿತ್ತು.ಆದರೆ ಅವುಗಳನ್ನು ಕಲ್ಲಿನಿಂದ ಹೊಡೆದು ಕೆಳಗುರುಳಿಸುವುದೇ ಸಾಹಸ.ಆಗತಾನೆ ಆರೇಳು ವರ್ಷಗಳಿದ್ದ ನನಗೆ ಗುರಿ ಮತ್ತು ದೈಹಿಕ ಬಲ ಕಡಿಮೆಯೇ.. ಆದರೂ ಬಿಡುತ್ತಿರಲಿಲ್ಲ. ಜೀರಂಗಿ ಕುಳಿತಿರುವ ಸನಿಹಕ್ಕೂ ಕಲ್ಲು ಎಸೆಯಲು ಸಾಧ್ಯವಾಗದಿದ್ದರೂ ಎಸೆಯುತ್ತಿದ್ದೆ. ಇಪ್ಪತ್ತು ಮೂವತ್ತು ಎಸೆತಗಳನ್ನು ನಿರಂತರವಾಗಿ ಎಸೆದ ನಂತರ ಅಪ್ಪಿ ತಪ್ಪಿ ಅದು ಕುಳಿತಿರುವ ಕೊನೆಗೆ ತಗಲಿದಾಗ ಹುಲ್ಲಿನ ಮೇಲೆ ಕೆಳಗೆ ಬಿದ್ದಾಗ ಹುಡುಕಿತೆಗೆಯುವುದು ಮತ್ತೊಂದು ಸವಾಲಾಗಿತ್ತು. ಕೈಕಾಲು ಒದ್ದಾಡಿಸದೇ ಮುದುರಿಕೊಂಡು ಮೆಳ್ಳಿ ಹಾಕಿಕೊಂಡು ಒಂದೆರಡು ನಿಮಿಷ ಕುಳಿತಿರತ್ತಿದ್ದ ಇವು ಕೆಲವೊಮ್ಮೆ ಎಲ್ಲೋ ಹುಡುಕುತ್ತಿರುವ ಇತ್ತಕಡೆ ಪುರ್ರೆಂದು ಹಾರಿ ಹೋಗುತ್ತಿದ್ದವು. ಈ ಪರಿಸ್ಥಿತಿಗೆ ಬರಲು ಸರಿ ಸುಮಾರು ಒಂದು ಗಂಟೆಯ ಅವದಿ ಆಗಿರುತ್ತಿತ್ತು. ಹೀಗೆಯೇ ದಿನಕಳೆಯುತ್ತಿದ್ದೆವು.ಯಾವಾಗಲಾದರೂ ಹೊಲಕ್ಕೆ ಹೋದರೆ ಹೊಲದಸುತ್ತಲೂ ಇದ್ದ ಹುಣಸೇಮರಗಳಲ್ಲಿ ದೊಡ್ಡದಾದ ಕೆಂಪುಬಣ್ಣದ 'ಕೆಮ್ಮಣ್ಣು ಜೀರಂಗಿ'ಹುಡುಕುತ್ತಿದ್ದೆವು.ಎತ್ತರದ ಮರಗಳಿಗೆ ಕಲ್ಲೊಡೆದು ಕೆಳಗೆ ಕೆಡವುದು ನಮ್ಮಿಂದ ಅಸಾಧ್ಯ ಆಗಿತ್ತು. ಆದರೂ ಕಡಿಮೆ ಎತ್ತರದಲ್ಲಿ ಕುಳಿತಿರುವ ಜೀರಂಗಿಗಳನ್ನು ಬಿಡುತ್ತಿರಲಿಲ್ಲ.ಶತಗತಾಯ ಪ್ರಯತ್ನ ಮಾಡಿ ಕೆಳಗೆ ಕೆಡವಲು ಪ್ರಯತ್ನಿಸುತ್ತಿರುವಾಗಲೇ
ಬಹುತೇಕ ಸಂದರ್ಭಗಳಲ್ಲಿ ಸೂಕ್ಷ್ಮತೆಯನ್ನು ಅರಿತ ಅವು ಅಲ್ಲಿಂದಲೇ ಹಾರಿ ಹೋಗಿ ನಮಗೆ ನಿರಾಸೆಯನ್ನುಂಟು ಮಾಡುತ್ತಿದ್ದವು.ನಮ್ಮ ಜೊತೆಗೆ ಅಣ್ಣ,ಅಪ್ಪ ಇದ್ದರೆ ಅವರು ಕೆಲಸ ಇಲ್ಲದೇ ಪ್ರಿ ಇದ್ದರೆ ಒಂದು ಜೀರಂಗಿ ಕೆಡವಿಕೊಡುತ್ತಿದ್ದರು.ಅಂದು ಸಂಜೆವರೆಗೆ ಆಡಿ ಮತ್ತೆ ಹುಣಸೆಮರಕ್ಕೆ ಬಿಟ್ಟುಬರುತ್ತಿದ್ದೆವು.


 ಒಂದೆರಡು ವರ್ಷಗಳ ನಂತರ ಅಕ್ಕ ನಾನು ಇಬ್ಬರೂ ದನಗಳ ಮೇಯಿಸುವುದು ಕಾಯಂ ಕೆಲಸ. ಆ ಹುಣಸೇಮರಗಳ ಕೆಳಗಿನಿಂದಲೇ ದನಗಳನ್ನು ಹಿಡಿದುಕೊಂಡು ಹೋಗುವಾಗ ಹುಣಸೇಮರದ ದೊಡ್ಡ ಕಾಂಡದ ಬುಡದಲ್ಲಿ ಒಂದೆರಡು ದೊಡ್ಡ ದೊಡ್ಡ ಕೆಂಪು ಜೀರಂಗಿ ಕಂಡಿದ್ದವು. ಅವು ಹಾರಿಹೋಗುವ ಆತಂಕದಿಂದ ಬೆಕ್ಕಿನಂತೆ ನಿಧಾನವಾಗಿ ಹೋಗಿ ಹಿಡಿದಿದ್ದೆವು.ಸೆಪ್ಟೆಂಬರ್ ಅಂತ್ಯಕ್ಕೆ ವಯಸ್ಕರಾಗಿ ತಮ್ಮ ಸಂತಾನ ಅಭಿವೃದ್ಧಿ ಮಾಡಲು ಎತ್ರದ ಮರದಿಂದ ಕಾಂಡ ಹಿಡಿದು ಹಿಮ್ಮುಖ ಚಲನೆಯ ಮೂಲಕ ನೆಲವನ್ನು ಮುಟ್ಟಿ  ತಮ್ಮ ಚುಪಾದ ಹಿಂಭಾಗವನ್ನು ಮಣ್ಣಿನಲ್ಲಿ ಸುಮಾರು ಒಂದಿಂಚು ಆಳ ತೂರಿಸಿ ಮೊಟ್ಟೆ ಇಡುವವು. ನಾವು ಅಂದುಕೊಂಡ ಹಾಗೆ  ಎದ್ದು ಹಾರಿ ಹೋಗದೇ ಮೊಟ್ಟೆ ಇಡಲು ಕುಳಿತಿರುವ ಕೋಳಿಯಂತೆ ಸೌಮ್ಯವಾಗಿಯೇ ಇರುತ್ತಿದ್ದವು.ಅಂದಿನಿಂದ ಜೀರಂಗಿ ಹಿಡಿಯಲು ಪ್ರಯಾಸ ಪಡುವ ಅವಶ್ಯಕತೆ ಇರಲಿಲ್ಲ. ಹುಣಸೇ ಮರದ ಕೆಳಗೆ ಓಡಾಡಿದರೆ ಸಾಕು ಮೊಟ್ಟೆ ಇಡಲು ಮೇಲಿಂದ ಹಿಂದೆ ಸರಿ ಸರಿದು ಇಳಿಯುತ್ತಿರುವ,ಮೊಟ್ಟೆ ಇಡುತ್ತಿರುವ,ಮೊಟ್ಟೆ ಇಟ್ಟು ಹಾರಿಹೋಗಲು ಸಿದ್ದವಾಗಿರುವ ಹೀಗೆ ಎಂಟತ್ತು ದೊಡ್ಡ ದೊಡ್ಡದಾದ ಜೀರಂಗಿಗಳ ಹಿಡಿದು ಖುಷಿ ಪಟ್ಟು ಸಂತಸದಿಂದ ನಲಿಯುತ್ತಿದ್ದೆವು.

ಜೀರಂಗಿಯ ವಿಧಗಳು:

ಹಿಡಿ ಗಾತ್ರದ ಕೆಂಪು ವರ್ಣದ ಕೆಮ್ಮಣ್ಣು ಜೀರಂಗಿ ಮತ್ತು ಬೆರಳಗಾತ್ರದ ಹಸಿರು ಜೀರಂಗಿ ಹೆಚ್ಚು ಕ್ರಿಯಾಶೀಲ ಮತ್ತು ಜನಪ್ರಿಯ ಪ್ರಬೇದಗಳು.ಈ ಕೆಮ್ಮಣ್ಣು ಜೀರಂಗಿ  ಸಂಪೂರ್ಣ ಗಟ್ಟಿ ಕವಚದ ಹೊದಿಕೆ ಇದ್ದು, ತಲೆಯಭಾಗ   ಮಿರ  ಮಿರನೇ ಹೊಳೆಯುವ ರಾಯಲ್ ಗ್ರೀನ್ ಕಲರ್,ಮತ್ತು ರೆಕ್ಕೆ ಮತ್ತು ಹೊಟ್ಟೆಯ ಕೆಳಭಾಗವೂ ಕೂಡ ಡಾರ್ಕ್ ಪಿಕಾಕ್ ಬ್ಲೂ ಶೈನಿಂಗ್ ಕಲರ್ ಇರುತ್ತದೆ.ಇನ್ನೂ ಹಸಿರು ಬಣ್ಣದ ಜೀರಂಗಿಗಳನ್ನು ನಾವು 'ಗೊಂಚಿಗಾರ'ಜೀರಂಗಿ/ಸಣ್ಣ ಜೀರಂಗಿ ಎಂದು ಕರೆಯುತ್ತಿದ್ದೆವು. ಇವುಗಳೂ ಕೂಡ ಹಸಿರು ಬಣ್ಣದ ಮಿಂಚುವ ಹೊದಿಕೆಯನ್ನು ಹೊಂದಿರುತ್ತಾವೆ. ದೇಹದ ಸುತ್ತಲೂ ಗಟ್ಟಿ ರಕ್ಷಣಾ ಕವಚ ಹೊಂದಿರುವ ಇವುಗಳು ತನ್ನ ಕತ್ತಿನಿಂದ ಇರುಕಿಸುವುದು ಬಿಟ್ಟರೆ ವಿಷಕಾರಿ ಮತ್ತು ಹಾನಿಕಾರಕ ಅಲ್ಲದೇ ಇರುವುದು ಮಕ್ಕಳಿಗೆ ಸೂಕ್ತ ಆಟದ ಸಾಮಾನುಗಳಾಗಿವೆ.
               ಕೆಮ್ಮಣ್ಣು ಜೀರಂಗಿ


              ಹಸಿರುಜೀರಂಗಿ

ಇವುಗಳ ಜೊತೆಗೆ ಇನ್ನೂ ನಾಲ್ಕೈದು ಪ್ರಭೇದಗಳು ಇದೇ ಜಿರಂಗಿ ತರಹ ಇರುವವಾದರೂ ಮೇಲಿನ ಕೆಮ್ಮಣ್ಣು ಮತ್ತು ಹಸಿರು ಜೀರಂಗಿಗಳಷ್ಟು  ಅ್ಯಕ್ಟಿವ್ ಮತ್ತು ಮನುಷ್ಯರೊಂದಿಗೆ ಇವು ಸಹಕಾರ ತೋರುವುದಿಲ್ಲ.ಇವುಗಳನ್ನು 'ನಾಯಿ ಜೀರಂಗಿ' ಎಂದು ಕರೆಯುವರು.ಎಲ್ಲಾ ರೀತಿಯ ಜೀರಂಗಿಗಳು ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತವೆ.
         ವಿವಿಧ ನಾಯಿ ಜೀರಂಗಿಗಳು


ಸಂತಾನ ಅಭಿವೃದ್ಧಿ:

ಎಲ್ಲಾ ಜೀವಿಗಳಂತೆ ಸಂತಾನೋತ್ಪತ್ತಿ ಮಾಡುವ ಇವುಗಳು ಮರದಲ್ಲಿ  ಆಹಾರಕ್ಕಾಗಿ ಕುಳಿತ ಜಾಗದಲ್ಲೇ ಸಂಗಾತಿಯ ಸೇರುತ್ತಾವೆ.ಕೆಲವೇ ದಿನಗಳಲ್ಲಿ ಮೊಟ್ಟೆ ಇಡುವ ಹಂತಕ್ಕೆ ಬರುವ ಇವು ಮೊಟ್ಟೆಯನ್ನು ಅವು ಮರದಿಂದ ಇಳಿದು ಬಂದೋ,ಅಥವಾ ಹಾರಿ ಹೋಗಿ ಸಣ್ಣ ಗಿಡದ ಮೇಲೆ ಕುಳಿತೋ ಅಲ್ಲಿಂದ ಮಣ್ಣಿನವರೆಗೆ ಸರಿದು ಮಣ್ಣಿನಲ್ಲಿ ಮೊಟ್ಟೆಗಳನ್ನು ಸುಮಾರು ಅರ್ಧ ಇಂಚಿನಿಂದ ಒಂದು ಇಂಚಿನ ಆಳಕ್ಕೆ ಸೇರಿಸುತ್ತಾವೆ.ಈ ಪಕ್ಷಿಗಳಂತೆ ಗೂಡು ಕಟ್ಟಿ ಎಲ್ಲಾಮೊಟ್ಟೆಗಳನ್ನು ಒಂದೇ ಕಡೆ ಇಡುವುದಿಲ್ಲವಾದರೂ, ಒಂದೊಂದು ದಿನ ಒಂದೊಂದು ಕಡೆ ಇಡುತ್ತಾವೆ.ಸಣ್ಣದಾದ ಕ್ರೀಮ್ ಕಲರಿನ ಸುಮಾರು ಹತ್ತು ಹನ್ನೆರಡು ಮೊಟ್ಟೆಗಳನ್ನು ಇದು ಇಡುತ್ತದೆ. ಈ ಮೊಟ್ಟೆಗಳು ಬೇಸಿಗೆಯಲ್ಲಿ ಬಿಸಿಲು,ಕ್ರಿಮಿ ಕೀಟಗಳಿಂದ ತಪ್ಪಿಸಿಕೊಂಡು ಮುಂಗಾರು ಮಳೆ ಬಂದು ಹದವಾದ ತೇವ ಆದಾಗ ,ಒಂಭತ್ತು ತಿಂಗಳನಂತರ ಇವುಗಳ ಮೊಟ್ಟೆಗಳು ಒಡೆಯತ್ತಾವೆ.
 ಜೀರಂಗಿ ಮೊಟ್ಟೆ ಜೀರಂಗಿ ಮೊಟ್ಟೆ

ಮೊಟ್ಟೆಯಿಂದ ಹೊರಬಂದ ಜೀವಿ ತಕ್ಷಣಕ್ಕೆ ಹೊರಗಡೆ ಬಾರದೇ ಸರಿಸುಮಾರು ಹದಿನೈದು ಇಪ್ಪತ್ತು ದಿನಗಳು ಮಣ್ಣಿನಲ್ಲೇ ಸಣ್ಣ ಗೂಡಿನಲ್ಲೇ ಹುದುಗಿದ್ದು , ತನ್ನ ಹೊರಗಿನ ಬಲಿಷ್ಠವಾದ ರೆಕ್ಕೆಗಳು ಮತ್ತು ಒಳಗಿನ ಪೊರೆಯಂತಹ ರೆಕ್ಕೆಗಳು ಬಲಿತು ಹಾರಲು ಶಕ್ತವಾದಾಗ ಗೂಡಿನಿಂದ ಹೊರಬರುತ್ತಾವೆ. ಹೊರಬಂದಾಗ ಬೂದು ಬಣ್ಣದ ಅರಿಶಿಣದಹಾಗೆ ಮೆಣದಂತಹ ತೆಳುವಾದ ಪೌಡರ್ ಅದರ ರೆಕ್ಕೆಗಳ ಮೆಲ್ಪದರದಲ್ಲಿ ಅಂಟಿಕೊಂಡಿರುತ್ತದೆ. ಹೊರಗಡೆ ಬಂದು ತಮ್ಮ ಆಹಾರವನ್ನು ಹುಡುಕುತ್ತಾ ಹಾರುತ್ತಾವೆ.
       ಜೀರಂಗಿಯ ರೆಕ್ಕೆಯ ರಚನೆ.


ಜೀರಂಗಿಗಳ ಆಹಾರ:

 ಇವುಗಳು ಆರಂಭದ ಬಾಲ್ಯದಲ್ಲಿ ಗೂಡಿನಲ್ಲಿ ಬಹುಶಃ ಮಣ್ಣು ತಿನ್ನುತ್ತಾವೋ ಅಥವಾ ಹುಟ್ಟಿನಿಂದ ಹಾಗೆ ಇರುತ್ತಾವೋ ಅನುಮಾನ ವಾದರೂ,ಅದರ ಗೂಡು ನೋಡಿದರೆ ಮಣ್ಣನ್ನೇ ತಿಂದಿರಬೇಕು ಎನ್ನುವ ಸಂಶಯ ನನ್ನದು.ಏಕೆಂದರೆ ಇಲಿಗಳಂತೆ ತೋಡಿ ಹಾಕಿದ ಮಣ್ಣು ಒಂದೆಡೆ ಬಿದ್ದಿರುವುದಿಲ್ಲ.ಮಣ್ಣಿನಿಂದ ಸಗಣಿಹುಳಗಳು ಎದ್ದು ಬಂದಿರುವಂತೆ ಇರುತ್ತದೆ. ಸಸ್ಯಹಾರಿಗಳೇ ಆದ ಇವು ಸಾಮಾನ್ಯವಾಗಿ ತುಗ್ಲಿಮರ,ಹುಣಸೇಮರ,ಬನ್ನಿ ಮರ,ಮತ್ತು ಬೆಲವಿನ ಮರಗಳಲ್ಲಿ ಅದರ ಸೊಪ್ಪನ್ನೇ ತಿಂದು ಬದುಕುತ್ತವೆ. ಆದರೆ ವಾಸ್ತವವಾಗಿ ಅವು ವಾಸಿಸುವ ಭೌಗೋಳಿಕ ಪ್ರದೇಶದ ಗಿಡಮರಗಳೇ ಇವುಗಳಿಗೆ ಆಹಾರ ಮತ್ತು ಆಶ್ರಯ.ಆದರೆ ಇವುಗಳ ಮೊಟ್ಟೆಯನ್ನು ಒಡೆದುಕೊಟ್ಟರೆ ಅದರ ದ್ರವವನ್ನು ಇವು  ಹೀರಿ ಕುಡಿಯುತ್ತಾವೆ.ಮೂರರಿಂದ ನಾಲ್ಕುತಿಂಗಳ ಕಾಲ ಬದುಕುವ ಇವುಗಳನ್ನು
ಹಿಡಿದು ಅವುಗಳ ಕತ್ತಿಗೆ ದಾರ ಕಟ್ಟುತ್ತಿದ್ದೆವು. ಇನ್ನೂ ಕೆಲವರು ಸಣ್ಣ ಜೀರಂಗಿಯನ್ನು ಬೆಂಕಿ ಪೊಟ್ಟಣಕ್ಕೆ ಹಾಕಿ ಎರಡ್ಮೂರು ದಿನ ಹಾಕಿಟ್ಟು ಆಹಾರ ಇಲ್ಲದ ಅವು ನಿತ್ರಾಣ ಆಗಿರುತ್ತಿದ್ದವು.ಯಾರಾದರೂ ದೊಡ್ಡವರು ಹೋಗಿ ಬಿಟ್ಟು ಬಾ ಇಲ್ಲ ಪಾಪ ಬರತ್ತೆ ಎಂದೇಳಿ ಬಯ್ದರೇ ಅವು ಬಚಾವ್ ಇಲ್ಲಂದ್ರೆ ಅವುಗಳ ಹಿಂಸೆ ಹೇಳ ತೀರದು.ಅವುಗಳ ಮೊಟ್ಟೆಯನ್ನು ಒಡೆದು ಅವುಗಳಿಗೆ ಕುಡಿಸಿ, ಬಹುಶಃ ಯಾವ ಉಗ್ರರೂ ಕೊಡದಷ್ಟು ಹಿಂಸೆಯನ್ನು ಕೊಡುತ್ತಿದ್ದರು.ಅಪ್ಪಿ ತಪ್ಪಿ ಅವುಗಳು ಕತ್ತಿನಿಂದ ಇರುಕಿಸಿ  ನಮಗೆ ನೋವು ಮಾಡಿದರೆ ಅದು ನಮಗೆ ಮಾಡಿದ ಮಹಾ ಹಿಂಸೆ.. ಅದೋ ಮಹಾಗಾಯ..!

ಇವುಗಳನ್ನು ನಾನು ಇದುವರೆಗೂ ಇತರ ಪ್ರಾಣಿ,ಪಕ್ಷಿಗಳು  ಆಹಾರವಾಗಿ ಬಳಸಿಕೊಂಡಿದ್ದನ್ನು ನಾನು ನೊಡಿಲ್ಲ. ಸ್ವಲ್ಪ ದಿನಗಳಕಾಲ ಪ್ರಕೃತಿಯನ್ನು ಪಚ್ಚೆ,ಹವಳಗಳಂತೆ ಅಲಂಕರಿಸಿ, ಎಲ್ಲ ಮಕ್ಕಳ ಸಂತಸದ ಗೆಳತಿಯಾಗಿ, ಮಕ್ಕಳಿಗೆಲ್ಲಾ ಪುಲ್ ಮನರಂಜನೆ ಕೊಟ್ಟು  ಆಯಾ ವರ್ಷದ ಇಸಾಕಿ  (ವಿಶಾಖ)ಮಳೆಯ ನಕ್ಷತ್ರ ದಲ್ಲಿ ಅನೇಕ  ಕ್ರಿಮಿ ಕೀಟಗಳು,ಜೀವ ಜಂತುಗಳ ಜೊತೆಗೆ ಇವುಗಳೂ ಸತ್ತುಹೋಗುತ್ತಾವೆ.
        ಕೆಮ್ಮಣ್ಣು ಮತ್ತು ಹಸಿರು ಜೀರಂಗಿಗಳು


(ಎಲ್ಲಾ ಚಿತ್ರಗಳ ಕೃಪೆ-ಅಂತರ್ಜಾಲ)

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

  1. ಜೀರಂಗಿ ಬಗ್ಗರ ಮರೆತೇ ಹೋಗಿದ್ದೆ ನಾನು.
    ನಿಮ್ಮ ಲೇಖನ ನನ್ನ ಬಾಲ್ಯವನ್ನು ಸ್ಮರಣೆಗೆ ತರಿಸಿತು. so nice

    ಪ್ರತ್ಯುತ್ತರಅಳಿಸಿ
  2. ಬಾಲ್ಯದಲ್ಲಿ ಆಡಿದ ನೆನಪು ಮರುಕಳಿಸಿತು. ಲೇಖನ ಉತ್ತಮವಾಗಿದೆ ಸರ್

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..