ಹಾಸ್ಟೆಲ್ to ಧರ್ಮಸ್ಥಳ...
ಹಾಸ್ಟೆಲ್ ಟು ಧರ್ಮಸ್ಥಳ..
ಸುಮಾರು ಮುವತ್ತೈದು ನಲವತ್ತು ವರ್ಷದ ಆಸುಪಾಸಿನವರು.ತಮ್ಮ ತಲೆಯನ್ನು ಬೋಳು ಮಾಡಿಸಿ,ಕೈಗೆ ಮತ್ತು ಕೊರಳಿಗೆ ವಿವಿಧ ಬಣ್ಣದ ದಾರಗಳನ್ನು ಕಟ್ಟಿದ್ದಾರೆ. ಲುಂಗಿ ಮತ್ತು ಬಿಳಿಯ ಬನಿಯನ್,ಅದರ ಮೇಲೊಂದು ಕೆಂಪನೆಯ ಟವೆಲ್..ಆ ಸ್ಥಳದ ಪಯಣದ ಬಗ್ಗೆ ಸಿಕ್ಕಸಿಕ್ಕವರಲ್ಲಿ ಚಂದ್ರಲೋಕಕ್ಕೇ ಹೋಗಿ ಬಂದ ಸಾಧನೆಗೂ ಮಿಗಿಲಂತೆ ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಸಾರಾಂಶ ಏನೆಂದರೇ "ಆ ದೇವರ ಊರಿಗೆ ರಸ್ತೆಯನ್ನು ಮಾಡಲು ಸಾಕ್ಷತ್ ಹಾವೊಂದು ಹರಿದುಹೋಗಿ,ಅದು ಹೇಗೆ ಹೋಗಿತ್ತೋ ಹಾಗೇ ರಸ್ತೇ ಮಾಡಿದ್ದಾರಂತೆ ಅದಕ್ಕೇ ಆ ಊರಿಗೆ ಹೋಗುವ ರಸ್ತೆ ಸೊಟ್ಟಂಬಟ್ಟ ತಿರುವುಗಳಿಂದ ಕೂಡಿದೆಯಂತೆ, ಸುತ್ತಲೂ ದಟ್ಟವಾದ ಅರಣ್ಯದಿಂದ ಕೂಡಿದೆ. ಆ ರಸ್ತೆಯಲ್ಲಿ ಎತ್ತಿನಗಾಡಿ ಹೋಗವುದೇ ಇಲ್ಲ. ಅಲ್ಲಿಗೆ ಹೋಗಿ ತಲುಪುವುದೇ ಒಂದು ಸಾಹಸವಂತೆ" ಆ ರಸ್ತೆಯಲ್ಲಿ ಪಯಣ ಶುರು ಮಾಡುವಾಗ ಉಂಡು ಪಯಣಿಸಿದರೆ ತಲೆತಿರುಗಿ, ಉಂಡಿದ್ದೆಲ್ಲವಾ ಕಕ್ಕಿ, ಸುಸ್ತಾಗಿ ಮಲಗುವುದು ಕಾಯಂ.. ಹಾಗೆ ಪಯಣಿಸುವ ವಾಹನವು ಸ್ವಲ್ಪವೂ ಹೆಚ್ಚು ಕಮ್ಮಿ ಆಗಿ ಕೆಳಗೆ ಉರುಳಿದರೆ ಜನರ ಮೂಳೆಗಳು ಪುಡಿ ಪುಡಿ..!ಒಂದೂ ಮೂಳೆನೂ ಸಿಗಲ್ಲ."
- ಹೀಗೆಂದು ನನ್ನ ಹನ್ನೊಂದು ಹನ್ನೆರಡು ವಯಸ್ಸಿನ ಬಾಲ್ಯದ ದಿನಗಳಲ್ಲಿ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದ ಮಾರಪ್ಪ ಎಂಬ ಹಿರಿಯ ವ್ಯಕ್ತಿ ನನಗೆ ಹೇಳಿದ್ದು.ನನಗಷ್ಟೇ ಅಲ್ಲಾ ಯಾರಾದರೂ ಆಗಲಿ ಯಾಕ್ ಗುಂಡೂ ಮಾಡ್ಸೀಯಾ ಅಂದರೆ ಮುಗೀತು.ಕನಿಷ್ಠಾ ಮುಕ್ಕಾಲು ಗಂಟೆ ಮಾರಪ್ಪನಿಗೆ ತೆಗೆದಿಡಬೇಕಿತ್ತು.ಯಾರಾದರೂ ಕೇಳಲಿ ಅಂತಾನೇ ಜನಗಳ ಎದುರು ಪ್ರಶ್ನೆ ಮೂಡವಂತಹ ಪೋಷಾಕು ಧರಿಸಿ,ಬೇಕು ಅಂತಲೇ ಓಡಾಡುತ್ತಿದ್ದ. ಅಷ್ಟೇ ಅಲ್ಲಾ ಅದಕ್ಕೂ ಮುಂಚೆ ಯಾವಾದರೂ ಸಿನಿಮಾಕ್ಕೇ ಹೋಗಿ ಬಂದರೆ ಇನ್ನೋಂದು ಸಿನಿಮಾ ನೋಡೋವರೆಗೆ ಅದೇ ಸ್ಟೋರಿ ಹೇಳಿ ಹೇಳಿ ಜನಗಳ ಪಾಲಿಗೆ ನಡೆದಾಡುವ ಸ್ಪೀಕರ್ ಆಗಿ ಟೈಂ ಪಾಸ್ ಗೆ ಸಹಾಯಕವಾದರೆ, ಇನ್ನೂ ಕೆಲವರಿಗೆ ಏನ್ ತಲೆ ತಿಂತಾವ್ನೆ ಎಂದು ಅವರು ಸ್ಟೋರಿ ಹೇಳಲು ಯಾರನ್ನಾದರೂ ಹುಡುಕಿಕೊಂಡು ಬಂದರೆ ತಮ್ಮ ಜೊತೆಗೆ ತಮ್ಮ ಚಪ್ಪಲಿಯನ್ನೂ ಸೇರಿ ಬಚ್ಚಿಟ್ಟುಕೊಂಡು ಹೆಂಗಸರು,ಮಕ್ಕಳುಗಳ ಕಡೆಯಿಂದ ಇಲ್ಲ ಎಂದು ಹೇಳಿಸಿ ವಾಪಾಸು ಕಳುಹಿಸುತ್ತಿದ್ದರು. ಮಾತಿನ ಭರದಲ್ಲಿ ಇದ್ದುದನ್ನು ಇಲ್ಲದಾಗೆ ಹೇಳುವುದು,ಇಲ್ಲದದ್ದನ್ನು ಇದ್ದಹಾಗೆ ಹೇಳುವುದು ಸಾಮಾನ್ಯವಾಗಿತ್ತು.ಅದಕ್ಕೆ ಅವರನ್ನು ಬುರುಡೆ ಮಾರಪ್ಪ ಎಂದೇ ಖ್ಯಾತಿಯೂ ಪಡೆದಿದ್ದರು.
ಅದಾಗಲೇ ನಾನು ಒಂಬತ್ತು ಹತ್ತನೇ ವಯಸ್ಸಿಗೇ ಒಂದು ಸೈಡ್ ನೂರೈವತ್ತು ಕಿಲೋ ಮೀಟರ್ ಗಳಷ್ಟು ದೂರ ಎರಡ್ಮೂರು ಬಸ್ ಗಳನ್ನು ಬದಾಲಾಯಿಸಿ ಸ್ವತಂತ್ರವಾಗಿ ಪಯಣಮಾಡುತ್ತಿದ್ದೆ.ರಸ್ತೆ,ಬಸ್ಸಿನ ಪಯಣ ಸುಮಾರಾಗಿ ಪರಿಚಯ ಆಗಿ ಹೋಗಿತ್ತು. ಆದರೆ ನನಗೆ ಕುತೂಹಲಕರ ಅನಿಸಿದ್ದು ಆ ಧರ್ಮಸ್ಥಳಕ್ಕೆ ಹೋಗಿ ಬಂದು ತಿಂಗಳುಗಳ ಕಾಲ ಈ ರೋಚಕ ಸ್ಟೋರಿ ಹೇಳುತ್ತಿದ್ದರಲ್ಲಾ
ಅದಕ್ಕೆ ! ಅದನ್ನು ನಾನು ಆದಷ್ಟು ಬೇಗ ನೋಡಲೇ ಬೇಕು ಎಂದೆನಿಸಿ ಅವಕಾಶಕ್ಕಾಗಿ ಕಾಯುತ್ತಲಿದ್ದೆ. ಎರಡ್ಮೂರು ವರ್ಷಗಳ ಕಾಲ ಆಗಲಿಲ್ಲವಾದರೂ ಆ ದಿನಗಳಲ್ಲೂ ಯಾರಾದರೂ ಧರ್ಮಸ್ಥಳ ಹೋಗಿ ಬಂದವರಿದ್ದರೆ ಅವರಿಂದಲೂ ನಾನು ಆ ಊರಿಗೋಗಿ ಬಂದ ಪಯಣದ ಸ್ಟೋರಿ ಕೇಳುತ್ತಿದ್ದೆ. ಅವರು ಕೂಡ ಹೆಚ್ಚು ಕಡಿಮೆ ನಾನು ಕೇಳಿದ ಮಾರಪ್ಪನ ಸ್ಟೋರಿಗೆ ತಾಳೆಯಾಗುವಂತೆಯೇ ಕೆಲವೊಂದು ಕಟ್/ಎಡಿಟ್ ಮಾಡಿ ಹೇಳುತ್ತಿದ್ದರು. ಈ ಎಲ್ಲರ ಕಥೆ ಕೇಳಿ ನಾನು ಒಂದು ದಿನ ಆ ಊರಿಗೆ ಹೋಗೇ ಹೋಗುತ್ತೀನಿ. ಅದು ಹೆಂಗಿದೆ ಅಂತಾ ನೋಡೇ ನೋಡುತ್ತೀನಿ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಅವರು ಹೇಳಿದ ವರ್ಣನೆಯಂತೆ ಹಾಗೆ ಒಂದು ಸುತ್ತು ಕಲ್ಪನೆಯಲ್ಲಿ ತೇಲಿಕೊಂಡು ಹೋಗಿ ಬರುತ್ತಿದ್ದೆಯಾದರೂ ನಿಜವಾಗಿಯೂ ಹೋಗಿ ನೋಡಲೇಬೇಕು ಎನ್ನುವ ಕುತೂಹಲ ಇದ್ದೇ ಇತ್ತು.
ನಾನು ಒಂಭತ್ತನೇ ತರಗತಿ ಓದುತ್ತಿದ್ದೆ.ಹಾಸ್ಟಲ್ ಗೆ ಹೋಗಿ ಒಂದು ವರ್ಷ ಸೀನಿಯರ್ ಆಗಿ ಸುಮಾರಾಗಿ ವಾರ್ಡನ್ ಬಸವರಾಜಪ್ಪ ಅವರ ದೃಷ್ಠಿಯಲ್ಲಿ ಗುರುತಿಸಿಕೊಂಡಿದ್ದೆ.ಕೆಲವು ಬಾರಿ ಇತರ ಹುಡುಗರಿಗೆ ಬಯ್ಯುತ್ತಾ ಓದುವುದು ಬರೆಯುವುದಕ್ಕೆ ನಾಗೇಂದ್ರನನ್ನು ನೋಡಿ ಕಲಿಯಿರಿ ಎಂದು ಹೇಳುವಷ್ಟರ ಮಟ್ಟಿಗೆ ತೋರ್ಪಡಿಕೆಗಷ್ಟೆ 'ಸಾಚಾ'ವೂ ಆಗಿದ್ದೆ.ಅದು ಆಗಸ್ಟ್-ಸೆಪ್ಟಂಬರ್ ತಿಂಗಳು ಅಂತ ಅನಿಸುತ್ತೆ. ಅವತ್ತೊಂದು ದಿನ ಸಂಜೆ ಊಟ ಆಗಿ ಒಂದೆರಡು ಸುತ್ತು ಸಿಟಿ ರೌಂಡ್ಸ್ ಹಾಕಿ ವಾಪಸ್ಸು ಬಂದು ಮಲಗಬೇಕು ಎನ್ನುವ ಹೊತ್ತಿಗೆ ಆರು ಚಕ್ರದ ಲಾರಿಯೊಂದು ಹಾಸ್ಟೆಲ್ ಮುಂದೆ ನಿಂತಿತ್ತು. ಬಾಳೆಕಂದು,ಹೂವಿನಹಾರ,ಗೂಟಗಳ ಹಾಕಿ ಕಮಾನಿನ ಆಕಾರದಲ್ಲಿ ತಾಡಪಲ್ ಕಟ್ಟಿದ್ದು ನೋಡಿದರೆ ಯಾವುದೋ ಮದುವೆ ದಿಬ್ಬಣದ ಲಾರಿ ಎಂದು ಸ್ಪಷ್ಟವಾಗಿ ಅನಿಸುತ್ತಿತ್ತು. ನಮ್ಮ ಹಾಸ್ಟೆಲ್ ಮೇಲಿನ ಮನೆಯವರು ಎಪಿಎಂಸಿಯಲ್ಲಿ ದಳ್ಳಾಳಿ ಅಂಗಡಿಯ ಮಾಲಿಕರು. ಕೆಲವು ಸಾಮಾನುಗಳನ್ನು ಲಾರಿಗೆ ಹಾಕಿ ಬೇಗ ಬೇಗ, ಹೊತ್ತಾಗತ್ತೆ ಹೊತ್ತಾಗತ್ತೆ ಎಂದು ಹೇಳುತ್ತಿದ್ದರು.
ನನ್ನ ಜೊತೆಗೆ ಹುಣಸೆ ಹಣ್ಣು ಸುನೀಲನೂ ಇದ್ದ. ಹಾಸ್ಟೆಲ್ ಹುಡುಗರೆಲ್ಲಾ ಹೊರಗೆ ನಿಂತು ಆ ಲಾರಿ ಮತ್ತು ಜನರನ್ನು ನೋಡುತ್ತಿದ್ದಾರೆ. ನಾನು ಯಾರಿಗೋ ಯಾರದು ಮದುವೆ,ಎಲ್ಲಿ ಏನು ಎಂದು ವಿಚಾರಿಸಿದೆ. ಅದಕ್ಕವರು ಹುಡುಗ ಹುಡುಗಿ ತೋರಿಸಿ ಅವರದೇ ಮದುವೆ.ಇನ್ನೂ ಆಗಿಲ್ಲ ಧರ್ಮಸ್ಥಳಕ್ಕೆ ಮದುವೆ ಮಾಡಿಕೊಂಡು ಬರಲು ಹೋಗುತ್ತಿದ್ದೇವೆ ಎಂದು ಹೇಳಿದರು.
ಮತ್ತೆ ಈ ಲಾರಿ ಇಲ್ಲಿ ಬತ್ತತಾ??
ಹ್ಞು.. ಬರುತ್ತೆ..ಸಾಹುಕಾರರನ್ನು ಮನೆಗೆ ಇಳಿಸಿಹೋಗಬೇಕಲ್ಲಾ? ಅವರೇ ಈ ಮದುವೆ ಮಾಡುತ್ತಿರುವುದು ಅಂದರು.
'ಧರ್ಮಸ್ಥಳ' ಎಂದು ಕೇಳಿದ ತಕ್ಷಣ ಚುರುಕಾದ ನಾನು "ಸುನೀಲಾ ಮೇಮೂ ಪೋದಾಮಾ?" ಎಂದು ಅವನೊಂದಿಗೆ ತೆಲುಗಿನಲ್ಲಿ ಕೇಳಿದೆ. ಅವನೂ ಒಂದೇ ಮಾತಿಗೆ "ಹ್ಞು ದಾರಾ ಪೋದಾಮು "ಎಂದು ಒಪ್ಪಿಗೆ ಸೂಚಿಸಿಬಿಟ್ಟ. ತಕ್ಷಣವೇ ಹಾಸ್ಟೆಲ್ ಒಳಗೆ ಬಂದು ಇಬ್ಬರೂ ಒಂದು ಸ್ಕೂಲ್ ಬ್ಯಾಗ್ ಗೆ ಇದ್ದ ಬಟ್ಟೆಯ ಹಾಕಿಕೊಂಡು ಟ್ರಂಕಿನ ಬೀಗ ಹುಷಾರಾಗಿ ಇಟ್ಕೊಂಡು,ಯಾರಿಗೂ ಹೇಳದೇ ಕೇಳದೇ ಲಾರಿ ಹತ್ತಿ ಕೂತು ಬಿಟ್ಟೆವು. ಅದನ್ನು ನೋಡಿದ ಇತರೆ ಹುಡುಗರು ಎಲ್ಲರೂ ಸೇರಿ ಮರುದಿನ ಬೆಳಿಗ್ಗೆ ವಾರ್ಡನ್ ಹಾಸ್ಟೆಲ್ ಒಳಗೆ ಕಾಲು ಇಡುತ್ತಿದ್ದ ಹಾಗೆ ನಮ್ಮಿಬ್ಬರ ಮೇಲೆ ದೂರು ಹೇಳಿದ್ದಾರೆ.
"ಎಲಾ ಇವುನಾ?? ನಾಗೇಂದ್ರ ,ಅವುನ್ ಬಾಡಕಾವ್ ಸುನಿಲ ಇಬ್ರೂ ಹೇಳದೇ ಕೇಳದೇ ಲಾರಿ ಹತ್ಯಗಂಡ್ ಹೋಗಿದ್ದಾರಾ? ದನಕಾಯರ್ ತಂದ್.."
"ಏಯ್ ರುದ್ರಪ್ಪ ಅವರು ಬಂದಾಗ ನನ್ ಪರ್ಮಿಶನ್ ಇಲ್ಲದೇ ಹಾಸ್ಟೆಲ್ ಒಳಗೆ ಬಿಟ್ಕೊಬೇಡ ಸರಿಯಾಗಿ ನೆನಪಿಟ್ಕೊ" ಎಂದು ಹೇಳಿ ಹೋಗಿದ್ದಾರೆ.
ಬೆಳಗಿ ಜಾವ ಏಳು ಏಳುವರೆ ಆಗಿತ್ತು. ಸುಮಾರಾಗಿ ಇಬ್ಬನಿಯೂ ಇತ್ತು. ಚಾರ್ಮಡಿ ಘಾಟ್ ಹತ್ತುವ ಮುನ್ನ ಮೂಡಿಗೆರೆಯ ಸಮೀಪ ನೀರು ಮತ್ತು ಬಯಲು ಇರುವ ಕಡೆ ಅರ್ಧ ಗಂಟೆ 'ನ್ಯಾಚುರಲ್ ಬ್ರೇಕ್' ನೀಡಿದರು. ನಾವೆಲ್ಲಾ ಬಯಲುಸೀಮೆಯ ಬೆಂಗಾಡಿನಲ್ಲಿ ಬೆಳೆದವರು.ಆ ತರಹದ ಹಸಿರ ಮಲೆನಾಡ ಬೆಟ್ಟದ ತಪ್ಪಲಿನಲ್ಲಿ ನಿತ್ಯಕರ್ಮ ಮಾಡಲೂ ಪುಣ್ಯಬೇಕು ಎಂದು ಕೆಲಸ ಮುಗಿಸಿ ಕೆಂಪು ದಾಸವಾಳದ ರೀತಿಯ ಹೂವಿನ ರಾಶಿಯನ್ನು ನೋಡಿ ಆನಂದಿಸಿದೆವು. ನಮ್ಮ ಕಡೆ ಈ ತರ ಸಸ್ಯಗಳಿಲ್ಲ. ಆ ತರಹದ ಸಸ್ಯಗಳಿಲ್ಲ, ತರಹೇವಾರಿ ಹುಲ್ಲು,ಗಿಡಮರಗಳಿಲ್ಲ ಎಂದು ಮಾತಾನಾಡುತ್ತಾ ಲಾರಿ ಹತ್ತಿ ಹಿಂಬದಿಯ ಡೋರ್ ಗೆ ಆನಿಕೊಂಡು ನಿಂತೆವು. ಆ ಶೀತಕ್ಕೆ ನಮಗೆ ಬಾಯ್ದೆರೆದು ಮಾತಾಡುವಾಗ ದೇಹದ ಶಾಖದ ಉಸಿರು ಹೊಗೆಯಂತೆ ಕಾಣುತ್ತಿದ್ದರೆ,ಅಲ್ಲೋರ್ವ ಸುಮಾರು ನಲವತ್ತು ನಲವತ್ತೈದರ ವ್ಯಕ್ತಿ ಲಾರಿ ನಿಲ್ಲಿಸಿದಾಗ ಬೀಡಿ ಸೇದಲು ಶುರು ಮಾಡಿದವರು ನಿರಂತರವಾಗಿ ಬೀಡಿ ಸೇದುತ್ತಲೇ ಇದ್ದರು.ಕೆನ್ನೆಗಳೆಲ್ಲಾ ಒಳಗೋಗಿ ಗೊರ್ ಗೊರ್ ಎಂದು ಕೆಮ್ಮುತ್ತಾ ಒಂದರ ಮೇಲೊಂದು ಬೀಡಿ ಹಚ್ಚಿಕೊಳ್ಳುತ್ತಿದ್ದರು.ಲಾರಿಯೊಳಗೆ ನಿಂತಿದ್ದ ಮತ್ತೊಬ್ಬ ಮಧ್ಯವಯಸ್ಕ "ಮಾವ ಸೇದು ಸೇದು ಧರ್ಮಸ್ಥಳದಲ್ಲಿ ಬೀಡಿ ಸೇದಂಗಿಲ್ಲ ಇವಾಗಲೇ ಎಷ್ಟು ಬೇಕೋ ಸೇದ್ಕಂಡ್ ಬಿಡು" ಎಂದು ಹೇಳಿದರು. ಆಗ ನನಗೆ ಗೊತ್ತಾಗಿದ್ದು ಆ ಸ್ಥಳದಲ್ಲಿ ಅಂದಿಗೂ,ಇಂದಿಗೂ ಬೀಡಿ, ಸಿಗರೇಟು, ಮದ್ಯ ಮಾರಾಟ ಮಾಡುವ ಆಗಿಲ್ಲ ಎಂದು ತಿಳಿದಿದ್ದು. ಹಳೇ ಲಾರಿ ಬುರ್ರೋ ಎಂಬ ಶಬ್ಧದೊಂದಿಗೆ ಕೊಟ್ಟಿಗೆಹಾರ ತಲುಪಿತು. ಅದರಲ್ಲೇ ಯಾರೋ ಒಬ್ಬ ಇಲ್ಲಿಂದ "ಘಾಟ್ ಶುರು ಯಾರೂ ಹೊರಗಡೆ ನೋಡಬೇಡಿ " ಎಂದು ಕೂಗಿದ. ಅದರಂತೆ ಕೆಲವರು ಚಳಿಗೆ ಮುದುರಿ ಕುಳಿತರೆ ಕೆಲವರು ಬಗ್ಗಿ ಬಗ್ಗಿ ನೋಡುತಲಿದ್ದರು. ನಮಗೆಲ್ಲಾ ಮನೆಯಲ್ಲಿ ಒಣಮೆಣಸಿನ ಕಾಯಿ ಹುರಿದಾಗ ಬರುತ್ತಿದ್ದ 'ಘಾಟು'ಗೊತ್ತಿತ್ತೇ ವಿನಃ ಈ 'ಘಾಟ್' ರಸ್ತೆ ಬಗ್ಗೆ ಅರಿವೂ ಇರಲಿಲ್ಲ ಈ ಘಾಟ್ ಹೇಗಿರತ್ತೆ ಎಂದು ನೋಡಲೇಬೇಕೆಂದು ನೋಡುತ್ತಾ ಹೋದೆ. ಅಲ್ಲಲ್ಲಿ ಮಳೆ,ದಟ್ಟವಾದ ಮಂಜಿನೊಂದಿಗೆ ಪ್ರಪಾತಗಳು ಕ್ಲಿಯರ್ ಕಂಡಿರಲಿಲ್ಲ. ಎದುರುಗಡೆಯಿಂದ ಬರುತ್ತಿದ್ದ ವಾಹನಗಳು ಹೆಡ್ಲೈಟ್ ಹಾಕಿಕೊಂಡು ಬರುತ್ತಿದ್ದವು.ಹಿಂದೆ ಆ ಬುರುಡೆ ಮಾರೆಪ್ಪ ಹೇಳಿದಂತೆ ರಸ್ತೇ ತಿರುವುಗಳಿಂದ ಕೂಡಿತ್ತಾದರೂ ಈ ರಸ್ತೆ ಹೀಗೆ ಹೋಗಬೇಕೆಂದು ಸೂಚಿಸಿದ ಹಾವು ಯಾವುದು?ಆ ಹಾವಿನ ಹಿಂದೆ ಬಂದು ರಸ್ತೆಗೆ ಗುರುತು ಮಾಡಿದವರು ಯಾರು ಎಂದೆಲ್ಲಾ ಯೋಚನೆ ಮಾಡುತ್ತಿರುವಾಗ ಹನ್ನೆರಡು ಹದಿಮೂರ ವರ್ಷದ ಹುಡುಗನೊಬ್ಬ ವಯ್ಕ್... ಎಂಬ ಶಬ್ಧ ಕೇಳಿಸಿತು. ಅಣ್ಣಪ್ಪ ಸ್ವಾಮಿ ದೇವಸ್ಥಾನ ಬರುವವರೆಗೂ ವಯ್ಕ್ ವಯ್ಕ್ ಎಂಬ ಶಬ್ದ ಸಾಮಾನ್ಯವಾಗಿತ್ತು. ಇತ್ತ ಸುನೀಲ ಸುಸ್ತಾಗಿ ಕಣ್ಣು ತಿರುಗಿದಂತೆ ಆಗುತ್ತಿದೆ ಎಂದು ಮಲಗಿದರೆ ನಾನು ಮಾತ್ರ ರಸ್ತೆಯ ಇಕ್ಕೇಲಗಳಲ್ಲಿ ಕಂಡುಬರುವ ಗಿಡ ಮರಗಳು,ಅಲ್ಲಲ್ಲಿ ಡಾಪ್ಲರ್ ನಿಯಮದಂತೆ ಕೇಳಿಸುತ್ತಿದ್ದ ಜುಳು ಜುಳು ಝರಿಯ ನೀರು, ಸಣ್ಣ ಪುಟ್ಟ ತೊರೆಗಳ ನೀರಿನ ಶಬ್ದ ಕೇಳುತ್ತಾ ಉಜಿರೆವರೆಗೆ ನನಗೆ ಏನೂ ಆಗಲಿಲ್ಲ. ಆದರೆ ತಡೆದುಕೊಳ್ಳುವ ಸಂಯಮ ಮೀರಿ ಯಾವಾಗ ಬೇಕಾದರೂ ಏನ್ ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿಯಲ್ಲಿಯೇ 'ಸಾಕೇತ್' ಲಾಡ್ಜ್ ಗೆ ಬಂದು ಇಳಿದ ಮೇಲೆ ಎಲ್ಲರಂತೆ ನಾನು ವಯ್ಕ್ ವಯ್ಕ್ ಎಂದು ಅಂದಿದ್ದೆ...
ಮದುವೆಯ ಉಸ್ತುವಾರಿ ವಹಿಸಿಕೊಂಡವರು ಎರಡು ದೊಡ್ಡ ಹಾಲ್ ತೆಗೆದುಕೊಂಡರು.ಒಂದು ಹಾಲ್ ಗೆ ಹೋಗಿ ಮುಂದೇನು ಎಂದು ಅಂದುಕೊಳ್ಳುತ್ತಿರುವಾಗಲೇ ಒಂದೆರಡು ದಿನಗಳ ಹಿಂದೆಯೇ ಮಾಡಿದ್ದ ಹುರಿದ ವಗ್ಗರಣೆ ಹಾಕಿದ ಖಾರ ಮಂಡಕ್ಕಿ ವಿತರಣೆ ಮಾಡಿದರು. ಕೆಟ್ಟ್ ಹೊಟ್ಟೆ ಹಸಿದಿದ್ದ ಎಲ್ಲಾರಿಗೂ ಆ ಮಂಡಕ್ಕಿ ಯಾವ ಮೂಲೆಗೂ ಸಾಕಾಗಲಿಲ್ಲ. ಯಾರೇ ಎಲ್ಲೇ ಹೋದರೂ ಈ ರೂಂ ನಂಬರ್ ನೆನಪಿಟ್ಟುಕೊಂಡು ಬರಬೇಕು ಎಂದು ಹೇಳುತ್ತಿದ್ದರು. ಬರ್ರಿ ಬರ್ರಿ ಎಲ್ಲರೂ ನದಿಗೆ ಹೋಗಾನ ಎಂದು ಆ ಲಾರಿಯಲ್ಲೇ ಎಲ್ಲರೂ ನದಿಗೆ ಹೋಗಿ ನಾಸ್ತಿಕ ಧೋರಣೆಯು ಪಕ್ವವಾಗುತ್ತಿದ್ದರೂ ನದಿಯಲ್ಲಿ ತಣ್ಣನೆಯ ನೀರಲ್ಲಿ ಈಜಾಡಿ ಬಂದು ದರ್ಶನವ ಪಡೆಯಲು ಆಗಮಿಸಿದೆವು.ಸರದಿ ಸಾಲಿನಲ್ಲಿ ನಿಂತಿದ್ದ ನಾವು ಮಳೆಯು ಶುರುವಾಗಿ ದೋ ಎಂದು ಸುರಿಯ್ಯುತ್ತಿದೆ. ಮಂಜುನಾಥ ದೇವಸ್ಥಾನದ ಪೌಳಿಯನ್ನು ನೋಡುತ್ತಾ ಅಲ್ಲಿಗೇ ಹೋಗುವುದಕ್ಕಿಂತ ಕೆಲವೇ ದಿನಗಳ ಮುಂಚೆ ಹಳದಿ ಬಣ್ಣದ ಪಾಂಪ್ಲೆಕ್ಸ್ ಒಂದು ಓದಿದ್ದೆ.ಅದರಲ್ಲಿ ಮಂಜುನಾಥ ಸ್ವಾಮಿಯ ದೇವಸ್ಥಾನದಲ್ಲಿ ಏಳು ಹೆಡೆಯ ಸರ್ಪವೊಂದು ಪ್ರತ್ಯಕ್ಷವಾಗಿ ಸ್ವಾಮಿಯ ಮಹಿಮೆಯನ್ನು ನೂರೊಂದು ಜನರಿಗೆ ಪತ್ರದ ಮುಖೇನ ತಿಳಿಸುವುದು. ಒಂದು ವೇಳೆ ಇದು ಸುಳ್ಳೆಂದು ಅದನ್ನು ಹರಿದು ಹಾಕಿದರೆ ಸ್ಥಳದಲ್ಲಿ ಸತ್ತುಹೋದನು ಎಂಬುದನ್ನು ಓದಿದ್ದೆ. ಆ ರಸ್ತೆಯನ್ನು ತೋರಿಸಿದ್ದು ಮತ್ತು ಈ ದೇವಸ್ಥಾನದ ಆವರಣದಲ್ಲಿ ಪ್ರತ್ಯಕ್ಷವಾದ ಹಾವು ಎರಡೂ ಒಂದೇ ಇರಬಹುದಾ ಎಂದು ವಿಚಾರ ಮಾಡುತ್ತಾ, ಮಳೆಯು ಸುರಿಯುತ್ತಿದ್ದರೂ ಅಂಗಿಯನ್ನು ತೆಗೆದು ಬರೀ ಮೈಯಲ್ಲಿ ದೇವರ ದರ್ಶನ ಪಡೆದ ನಾವು ನೇರವಾಗಿ ಹೋಗಿದ್ದು ಅನ್ನಪೂರ್ಣೇಶ್ವರಿ ಸನ್ನಿ ದಾನಕ್ಕೆ,ಹೊಟ್ಟೆ ಶಾಂತವಾದ ನಂತರ ದೇವಸ್ಥಾನ ದ ಮುಂದೆ ಇದ್ದ ಉದ್ಯಾನವನ ಕ್ಕೆ ಹೋಗಿ ತಿರುಗಾಡಿದೆವು. ವಿವಿಧ ಗಿಳಿ ಮತ್ತು ಪಾರಿವಾಳಗಳು ನೋಡಿ,ಮುದ್ರಮಂಜೂಷಕ್ಕೂ ಹೋದೆವು.ಆಗ ಅಲ್ಲೇ ಎದುರುಗಡೆಯೇ ಪ್ರದರ್ಶನಕ್ಕೆ ಇಟ್ಟ ಸಣ್ಣ ವಿಮಾನವೊಂದನ್ನು ನೋಡಿ ಪುಳಕಿತರಾದೆವು.ಹಾಗೆ ರಾತ್ರಿ ಏಳೆಂಟು ಗಂಟೆಯವರೆಗೆ ತಿರುಗಾಡಿ ಪುನಃ ಊಟಮಾಡಿ ವಾತಾವರಣವು ತಣ್ಣಗೆ ಇದ್ದುದರಿಂದ ಲಾರಿಯಲ್ಲಿ ರಾತ್ರಿಯಿಂದಲೂ ನಿದ್ದೆ ಸರಿಯಾಗಿ ಆಗದೇ ಇದ್ದುದರಿಂದ ಕೈ ಕಟ್ಟಿಕೊಂಡು ರೂಂಗೆ ಹೋಗಿ ಮಲಗಿದೆವು.
ಬೆಳಿಗ್ಗೆ ಎದ್ದು ನೋಡಿದರೆ ಹೊಟ್ಟೆ ತುಂಬಾ ಹಸಿಯುತ್ತಿತ್ತು.ದೇವಸ್ಥಾನದಲ್ಲಿ ಊಟ ಸಿಗುತ್ತಿತ್ತಾದರೂ ಹನ್ನೊಂದು-ಹನ್ನೊಂದು ವರೆವರೆಗೆ ಕಾಯಬೇಕಿತ್ತು. ಅಲ್ಲಿಯವರೆಗೆ ಕಾಯಲು ಇಬ್ಬರಿಗೂ ಆಗಲಿಲ್ಲ. ಅಲ್ಲೊಂದು ಹೋಟೆಲ್ ಈಗಿನ 'ತೃಪ್ತಿವಿಹಾರ್' ಹೋಟೆಲ್ ಇರುವ ಜಾಗದಲ್ಲೇ ಹಿಂದಿನ ರಾತ್ರಿ ಅದರ ಮುಂದೆ ಹಾದು ಹೋಗುವಾಗ ಘಮಘಮ ವಾಸನೆಯು ಈ ಹೋಟೆಲಿನಲ್ಲಿ ಏನಾದರೂ ತಿನ್ನಬೇಕು ಎಂದೆನಿಸಿತ್ತು. ಇಬ್ಬರೂ ಮಾತಾಡಿಕೊಂಡು ಇಬ್ಬರ ಬಳಿಯೂ ಇದ್ದದ್ದು ನಲವತ್ತು ರುಪಾಯಿ.ನನ್ನ ಬಳಿ ಹತ್ತು-ಹದಿನೈದು ರೂ. ಅವನತ್ರ ಇಪ್ಪತ್ತು ಮುವತ್ತು ಇತ್ತು.ಹೋಟೆಲ್ ಒಳಗೋಗಿ ಏನಿದೆ ಎಂದರೇ ಚೌ ಚೌ ಬಾತ್ ಪಲಾವ್ ದೋಸೆ ಏನೇನೊ ಹೇಳಿದರು.ನಾವು ಒಂದೊಂದು ಪ್ಲೇಟ್ ಚೌ ಚೌ ಬಾತ್ ತೆಗೆದುಕೊಂಡೆವು.ಒಂದು ಸಣ್ಣ ಕಪ್ ಕೇಸರೀಬಾತ್,ಮತ್ತೊಂದು ಕಪ್ ಉಪ್ಪಿಟ್ಟು.ಇಷ್ಟು ದುಡ್ಡಿಗೆ ಇಷ್ಟೇನಾ ಎಂದು ಕೇಳುವಂತಿತ್ತು.ಬೆಳಿಗ್ಗೆ ಬೆಳಿಗ್ಗೆ ಮುದ್ದೆ ಊಟ ಮಾಡುತ್ತಿದ್ದ ನನಗೆ ಆ ಉಪ್ಪಿಟ್ಟು ಕೇಸರೀಬಾತ್ ನನಗೆ ಎರಡೂ ತುತ್ತಿಗೂ ಸಾಲಲಿಲ್ಲ. ರುಚಿಯೇನು ಚೆನ್ನಾಗಿತ್ತಾದರೂ ಪ್ಲೇಟಲ್ಲಿ ಒಂದು ರವೆಯ ಹಗುಳೂ ಬಿಡದಂತೆ ತಿಂದರೂ ಹೊಟ್ಟೆಗೆ ಎಲ್ಲಿಗೂ ಸಾಕಾಗದೇ ನಾಲಗೆಯಿಂದ ತುಟಿಯನ್ನು ಸವರಿಕೊಳ್ಳುತ್ತಾ ಹೊಟೆಲ್ನ ಕಿಚನ್ ಕಡೆಯೇ ನೋಡುವಂತಾಗಿತ್ತು.
ಎಲ್ಲರೂ ಮದುವೆ ಮಾಡಿಸಲು ಮದುವೆಯ ಮಂಟಪಕ್ಕೆ ಹೋಗಿದ್ದಾರೆ. ಅದೇನು ಹೇಳಿದರೋ,ಯಾಕೋ ಗೊತ್ತಿಲ್ಲ ಆದರೆ ಮದುವೆಯನ್ನು ಮೂರ್ನಾಲ್ಕು ದಿನ ಮುಂದಕ್ಕೆ ಹಾಕಿದರು.ಗುರುವಾರ ಹೋಗಿದ್ದ ನಾವು ಮದುವೆಯನ್ನು ಸೋಮವಾರಕ್ಕೆ ನಿಗಧಿ ಮಾಡಿದ್ದರು.ಅಲ್ಲಿಯವರೆಗೂ ದೇವಸ್ಥಾನದ ಊಟ. ಮನಸೋ ಇಚ್ಚೇ ಓಡಾಟ.ಸಾಕೇತದಿಂದ ಬಾಹುಬಲಿಯ ಬೆಟ್ಟ,ನದಿ ಹೀಗೆ ಸುತ್ತಲೂ ನಾನು ಸುನೀಲ ಆ ಗಿಡಮರಗಳು,ಆ ತಂಪು ವಾತಾವರಣ,ಯಾವಾಗ ಬೇಕಾದರೂ ಧಾರಾಳವಾಗಿ ಸುರಿಯುತ್ತಿದ್ದ ಮಳೆ,ನದಿಯ ಬಗ್ಗೆ ನಮ್ಮದೇ ಜ್ಞಾನ ಮತ್ತು ಕಲ್ಪನೆಯಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ಈ ತರ ಮಳೆ ಸುರಿಯುವುದರಿಂದಲೇ ಇಲ್ಲಿ ಈ ತರ ಕಾಡು. ನಮ್ ಕಡೇನೂ ಮಳೆ ಬಂದಿದ್ದರೆ ಇದೇ ತರಹ ಎತ್ತರ ಮರಗಿಡಗಳಿರುವ ಕಾಡು ಇರುತ್ತಿತ್ತೇನೋ ಎಂದು ಮಾತನಾಡುತ್ತಾ ಎಂದು ಮಾತಾನಾಡುತ್ತಾ ಪಾಚಿಗಟ್ಟಿದ ಕಂಡ ಕಂಡಲ ದಾರಿಯ ಅಂತ್ಯದವರೆಗೂ ಅಷ್ಟ ದಿಕ್ಕುಗಳಲ್ಲಿ ತಿರುಗಿದೆವು.ಮೂರ್ ನಾಲ್ಕು ದಿನಗಳು ಕಾಲ ಕಳೆದು ಸೋಮವಾರ ಮುಂಜಾನೆ ಮದುವೆ ಎಂದು ಬೇಗನೇ ಎದ್ದೇಳಿಸಿದರು.ಎಲ್ಲರೂ ಮದುವೆ ಮಾಡಲು ಕಲ್ಯಾಣ ಮಂಟಪ ಕಡೆ ಹೋದರೆ ನಾನು ಸುನಿಲ ಲಾಸ್ಟ್ ರೌಂಡ್ ಎಂದು ಬಾಹುಬಲಿ ಬೆಟ್ಟ ಹತ್ತಿದೆವು. ಮದುವೆ ಮುಗಿಸಿಕೊಂಡು ಹೋದಾರು ಎಂದು ಬೇಗನೇ ಬಂದು ನೇರವಾಗಿ ಊಟಕ್ಕೇ ಹೋಗಿ ಹೊರ ಬರುತ್ತಿದ್ದಾಗ ಮದುವೆಯ ಮಾಡಲು ಉಸ್ತುವಾರಿ ವಹಿಸಿದ್ದವರು ಎಲ್ಲರಿಗೂ ಪ್ರಸಾದದ ಪೊಟ್ಟಣ ಹಂಚುತ್ತಿದ್ದರು. ನಮ್ಮ ಇಬ್ಬರಿಗೆ ಹಾಸ್ಟೆಲ್ ಹುಡುಗರಿಗೂ ಸೇರಿ ನಮಗೂ ಒಂದು ಪೊಟ್ಟಣ ಪ್ರಸಾದ ಸಿಕ್ಕಿತ್ತು.ಎಲ್ಲಾರದೂ ದರ್ಶನ,ಮುಂದುಗಡೆ ಸಿಗುತ್ತಿದ್ದ ಜಾತ್ರೆಯ ವಸ್ತುಗಳು ಕೊಂಡು, ಮಧ್ಯಾಹ್ನದ ಹೊತ್ತಿಗೆ ಹೊರಟು ಸಕಲೇಶಪುರದವರೆಗೂ ಘಾಟಿ ರಸ್ತೆಯ ಸೊಬಗನ್ನು ಸವಿಯುತ್ತಾ ಬೆಳಗಿನಜಾವ ಎರಡ್ಮೂರು ಗಂಟೆಗೆ ಹಾಸ್ಟೆಲ್ ತಲುಪಿದೆವು.
ನಾವು ಮಲಗಿದ್ದಾಗಲೇ ಬೆಡ್ ಶೀಟ್ ಎತ್ತಿ ಮುಖನೋಡಿ ಖಚಿತ ಮಾಡಿಕೊಂಡ ಇತರ ಹುಡುಗರು ರುದ್ರಪ್ಪ ಬರುವಾಗಲೇ ಎದುರು ಹೋಗಿ ನಾಗೇಂದ್ರ ಸುನೀಲ ಧರ್ಮಸ್ಥಳ ದಿಂದ ಬಂದಾರೆ ಇನ್ನೂ ಮಲಗಿದ್ದಾರೆ ಎಂದು ಚಾಡಿ ಹೇಳಿ ಮಜಾನೋಡಲು ಜೊತೆಯಲ್ಲೇ ಬಂದಿದ್ದಾರೆ.ಅಷ್ಟೊತ್ತಿಗಾಗಲೇ ನಮ್ಮ ಉಪಟಳದಿಂದ ಬೇಸತ್ತಿದ್ದ ಭಟ್ಟ ರುದ್ರಪ್ಪ ಇವರನ್ನು ಕಂಟ್ರೋಲ್ ತಗಳುವ ಚಿಂತನೆಯನ್ನು ನಡೆಸಿದ್ದ ಅಂತ ಕಾಣಿಸುತ್ತೆ. ಬಂದ ಬಂದವನೇ ಬೆಡ್ ಶೀಟ್ ಎಳೆದು ಹಾಕಿ
"ಎದ್ದೇಳ್ರಲೇ ದನಕಾಯರ .. ಯಾರ್ ನಿಮಗೆ ಧರ್ಮಸ್ಥಳಕ್ಕೆ ಹೋಗ್ರಿ ಅಂತ ಹೇಳಿದ್ದ, ಯಾವನ್ನಾ ಕೇಳಿ ಹೋಗೀರಲೇ? Get up and get out..ವಾರ್ಡನ್ ಪರ್ಮಿಶನ್ ತಗಂಡು ಒಳಗೆ ಬರ್ರಿ.. ಬ್ರಷ್ ಮಾಡಿಕೊಂಡು ಹೋಗುತ್ತೀವಿ ಅಂತ ಹೇಳಿದರೂ ಬಿಡದೇ ಆಟೋದಲ್ಲಿ ಹೋಗುತ್ತೀವಿ ದುಡ್ಡು ತಗಳ್ಳುತೀವೆಂದು ಬ್ಯಾಗಲ್ಲಿ ಇದ್ದ ಪ್ರಸಾದದ ಪೊಟ್ಟಣ ಹಿಡಿದು ದುಡ್ಡು ಇಲ್ಲದೇ,ಆಟೋನೂ ಇಲ್ಲದೇ ಹೊರಗಡೆ ಬಂದು ಸುಮಾರು ಎರಡು ಕಿ ಮೀ ನಷ್ಟು ನಡೆದುಕೊಂಡೇ ಹೋದೆವು.
"ಡಾಕ್ಟಲೇ.. ಮಾ ನಾನ್ನಕೂ ಪೋನ್ ಚೇಸ್ತಾನ್ರಾ ಇಟ್ಲ ಅಯ್ಯಿಂದಿ ಅನಿ ಚೆಪ್ಪುತಾನು ನಾನ BDO ಆಪೀಸಾರ್ ಕೂ ಚೆಪ್ಪುತೇ ಈ ವಾರ್ಡನ್ ಊರ್ಕೆ ಆಯ್ಯಿಪೋತಾರು" ಅಂದ..
ಉಂಡು ಇಪ್ಪಡು ಒದ್ದು
ಒಕ ಸಾರಿ ಅಡಗುದಾಮು ದಾನಿಕೀ ಒಪ್ಕೋಕೊಕುಂಟೆ ಚೆಪ್ಪುದಾಮುರ್ರಾ ಸುನಿ ಒದ್ದು ರಾ ರಾ ಎಂದು ವಾರ್ಡನ್ ಮನೆಗೆ ಬಂದೆವು.(ಸುನೀಲನ ತಂದೆ ತಾ ಪಂ ಸದಸ್ಯರಾಗಿದ್ದರು)
ಬೆಳಿಗ್ಗೆ ಏಳು-ಏಳುಕಾಲು ಆಗಿತ್ತು. ವಾರ್ಡನ್ ಆಗ ತಾನೇ ಸ್ನಾನ ಮಾಡಿ ಸೂರ್ಯನ ಬಿಸಿಲುವೊಡ್ಡಲು ಬಾಗಿಲ ಹೊರಗೆ ಇದ್ದರು.
ನಮಸ್ತೇ ಸಾರ್..
ಏನ್ರಲಾ ಇಲ್ಲಿ??
ಸಾರ್ ಧರ್ಮಸ್ಥಳ ಹೋಗಿದ್ವಿ ಮಂಜುನಾಥ ಪ್ರಸಾದ ತಂದೀವಿ ಎಂದು ಪ್ರಸಾದದ ಪ್ಯಾಕ್ ಹಿಡಿದು ಕೈ ಚಾಚಿದೆ..
ವೇರಿಗುಡ್...
ಜಯಾ.. ಜಯಾ...(ಮನೆಯವರನ್ನು ಮಾತಾಡಿಸಿದರು)
ಅಡುಗೆ ಮನೆಯಲ್ಲೇ ಏನ್ರೀ??ಅಂದರು
ಬಾ ಜಯ ಇಲ್ನೋಡು ಧರ್ಮಸ್ಥಳ ಹೋಗಬೇಕು ಹೋಗಬೇಕು ಅಂತಿದ್ದೆ ಅಲ್ಲಾ ಪ್ರಸಾದ ಬಂದೀತೆ ಬಾ ಇಲ್ಲಿ ಅನ್ನುತ್ತಾ ಪ್ರಸಾದ ತೆಗೆದುಕೊಂಡು "ಮಂಜುನಾಥ ಕಾಪಾಡಪ್ಪ" ಎಂದು ಬಾಯಿಗೆ ಹಾಕಿಕೊಂಡರು.ಕೆಲಸ ಸುಲಭವಾಗಿ ಆಯಿತು ಎಂದುಕೊಂಡು ಸರಿ ಸಾರ್ ಹಾಸ್ಟೆಲ್ ಗೇ ಹೋಗುತ್ತೀವಿ ಎಂದು ಅಲ್ಲಿಂದ ಬಂದುಬಿಟ್ಟೆವು. ಸರಿ ಸರಿ ಹೋಗ್ರಿ ಹೋಗ್ರಿ ಹುಷಾರಾಗಿ ಹೋಗ್ರಿ ಬತ್ತೀನಿ ಈಗ ಎಂದೇಳಿದರು. ಜಾಸ್ತಿ ಮಾತಾಡದೇ ಅಲ್ಲಿಂದ ಕಾಲ್ಕಿತ್ತೆವು.
ಶ್ರೀಯುತರು ಮಂಜುನಾಥ ಸ್ವಾಮಿಯ ಅಪ್ಪಟ ಭಕ್ತರು.ಅದಕ್ಕೆ ಸಾಕ್ಷಿ ಎಂದರೆ ಅವರ ಮಗನ ಹೆಸರೂ ಮಂಜುನಾಥನೇ.. ಆದರೆ ಆ ವಾರ್ಡನ್ ರವರು ನಾವು ಹಾಸ್ಟೆಲ್ ನಿಂದ ಧರ್ಮಸ್ಥಳಕ್ಕೆ ಹೇಳದೇ ಕೇಳದೇ ಹೋಗಿರುವ ವಿಷಯ ಅಸಲಿ ವಿಷಯ ಮರೆತೇಬಿಟ್ಟಿದ್ದಾರೆ.ಹಾಸ್ಟೆಲ್ ಗೆ ಬಂದು ಅಂದು ನಿದ್ರಾ ಭಂಗ ಮಾಡಿದ್ದ ರುದ್ರಪ್ಪನಿಗೆ "ಏಯ್ ರುದ್ರ ವಾರ್ಡನ್ ಪರ್ಮೀಶನ್ ತಗಂಡ್ ಬಂದೀವಿ ಎಂದೇಳಿ ಈ ಸೇಡು ಮನದಲ್ಲಿಟ್ಟುಕೊಂಡು ಒಂದೆರಡು ವಾರಗಳ ಕಾಲ ರುದ್ರಪ್ಪನಿಗೆ ಇಲ್ಲದ ಕಿರುಕುಳ ಕೊಟ್ಟಿದ್ದೆವು.
ಈ ಬರಹ ಮುಗಿಸುವ ಮುನ್ನಾ ನನ್ನವಳ ತವರು ಚಿಕ್ಕಮಗಳೂರು.ನಾವೂ ಮದುವೆ ಆಗಿದ್ದು ಮಂಜುನಾಥನ ಸನ್ನಿದಿಯಲ್ಲೇ. ಈ ನನ್ನ ಹಳೇಯ ಅನುಭವದಲ್ಲಿ ನಮ್ಮ ಮದುವೆಗೆ ಮೊದಲೇ ಸಹೋದರ ರಮೇಶನನ್ನು ಕಳುಹಿಸಿ ಕಲ್ಯಾಣಮಂಟಪ ಬುಕ್ ಮಾಡಿಸಿ ಎಲ್ಲಾ ಅರೆಂಜ್ಮೆಂಟ್ಸ್ ಮಾಡಿದ ಮೇಲೆ ರಾತ್ರಿ ಹೋಗಿ ಮುಂಜಾನೆ ಬಂದು ಮಿತ್ರರು,ಗುರುಹಿರಿಯರೊಂದಿಗೆ ಮದುವೆ ಮುಗಿಸಿಕೊಂಡು ಬಂದಿದ್ದೆವು. ಈ ಬಾಲ್ಯದ ದಿನಗಳ ನೆನಪುಗಳೊಂದಿಗೆ ಇಂದು ಅಂದುಕೊಂಡಾಗ ಎಲ್ಲಿಗೇ ಬೇಕೋ ಅಲ್ಲಿಗೆ ಹೊರಡುವೆವು. ವರ್ಷದಲ್ಲಿ ಐದಾರು ಬರಿ ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ,ಕೆಮ್ಮಣ್ಣುಗುಂಡಿ, ಒಂದೆರಡು ಬಾರಿ ಮೂಡಿಗೆರೆ ಸುತ್ತಾಮುತ್ತಾ,ದೇವರಮನೇ ಎಸ್ಟೇಟ್, ಕೊಟ್ಟಿಗೆಹಾರದ ನೀರ್ದೋಸೆ ತಿಂದು ಈ ಚಾರ್ಮಡಿ ಘಾಟ್ ನ ಜಲಪಾತಗಳ ನೋಡುತಾ ಕುಟುಂಬದೊಂದಿಗೆ ಆಗಾಗ್ಗೆ ಮನಸೋ ಇಚ್ಚೆ ಕಾಲ ಕಳೆಯುತ್ತಿರುತ್ತೇವೆ.ಅಂದಹಾಗೆ ಈ ಬುರುಡೆ ಮಾರೆಣ್ಣ ನಾನು ಊರು ಬಿಟ್ಟು ಇಪ್ಪತ್ತು ವರ್ಷ ಆದುದ್ದರಿಂದ ಅವರಿಗೆ ಸ್ಟೋರಿ ಹೇಳಲು ಸಿಕ್ಕಿಲ್ಲ.ಹಂಗೂ ಈಗೊಮ್ಮೇ ಸಿಕ್ಕಿದರೂ ನನ್ನ ಕತೆಗಳಿಂದ ತಪ್ಪಿಸಿಕೊಳ್ಳಲು ಅವರು ಬೇರೇನೇ ಉಪಾಯ ಮಾಡಬೇಕಾಗಬಹುದೇನೋ..😀😀
✍️ನಾಗೇಂದ್ರ ಬಂಜಗೆರೆ.
superr brother
ಪ್ರತ್ಯುತ್ತರಅಳಿಸಿThank you anna
ಪ್ರತ್ಯುತ್ತರಅಳಿಸಿಸೂಪರ್ ಸರ್
ಪ್ರತ್ಯುತ್ತರಅಳಿಸಿ