ಹರಿದ ನೋಟು ಹುರಿದ ಕಡಲೆ..
*ಹರಿದ ನೋಟು-ಹುರಿದ ಕಡಲೆ..*
*ನನಗೆ ಸುಮಾರು ಹನ್ನೆರಡು ವರ್ಷ ಇರಬಹುದು ನಮಗೆ ಹಟ್ಟಿ ಜಾತ್ರೆ(ನಾಯಕನಹಟ್ಟಿ ಜಾತ್ರೆ) ತುಂಬಾ ಜನಪ್ರಿಯ ಮತ್ತು ಅದಕ್ಕೆ ಕಡ್ಡಾಯವಾಗಿ ಹಾಜರಾಗುತಿದ್ದ ಜಾತ್ರೆಯೂ ಹೌದು..* *ಜಾತ್ರೆಗೆ ತಿಂಗಳಗಳು ಬಾಕಿ ಇರುವಾಗಲೇ ಬಿಡಿಗಾಸು ಒಟ್ಟುಗೂಡಿಸಿ ಇಟ್ಟುಕೊಳ್ಳುತ್ತಿದ್ದೆ. ಅದೇನು ದೊಡ್ಡ ಮೊತ್ತ ಆಗುತ್ತಿರಲಿಲ್ಲ ಬಿಡಿ ಜಾಸ್ತಿ ಅಂದರೆ ಹತ್ತು-ಹದಿನೈದು ರೂಪಾಯಿ ಆಗುತ್ತಿತ್ತು...*
*ಅಂತೂ ಜಾತ್ರೆಯ ದಿನ ಸಮೀಪಿಸಿತು.*
*ಹುಣ್ಣಿಮೆಯ ರಾತ್ರಿ ಎತ್ತಿನಬಂಡಿ ಹೂಡಿಕೊಂಡು ಕುಟುಂಬ ಸಮೇತ ಹೋಗುತಿದ್ದ ಕಾಲವದು.*
*ನಾನೂ ಒಬ್ಬರ ಗಾಡಿಯಲ್ಲಿ ರಾತ್ರಿಯಿಡೀ ಪಯಣ.. ಹಟ್ಟಿ ಜಾತ್ರೆಯಲ್ಲಿ ಸ್ಥಳ ಹಿಡಿದು ಗಾಡಿಯನ್ನು ನಿಲ್ಲಿಸಿದ ಮೇಲೆ ಜಾತ್ರೆಯ ಕೇಂದ್ರ ಸ್ಥಳದಿಂದ ಅಷ್ಟ ದಿಕ್ಕುಗಳಲ್ಲಿ ಓಡಾಡಿ ಬಂಧುಗಳು, ಸ್ನೇಹಿತರನ್ನು ಕಂಡು ಮಾತನಾಡಿಸುತ್ತಿದ್ದ ಕಾಲ. ವರ್ಷವಿಡೀ ಪರಸ್ಪರ ಬೇಟಿಯಾಗದೇ ಇದ್ದರೂ ಜಾತ್ರೆಯಲ್ಲಿ ಪರಸ್ಪರ ಬೇಟಿಯಾಗಲು ಸಿಕ್ಕೆ ಸಿಗುತ್ತಿದ್ದರು. ಒಂದು ವೇಳೆ ಜಾತ್ರೆಯಲ್ಲಿ ಸಿಗಲಿಲ್ಲ ಅಂದರೆ ಒಂದು ರೀತಿಯಲ್ಲಿ ಅವರಿಗೇನೋ ತೊಂದರೆಯಾಗಿದೆ ಅಂತಾನೇ ಅರ್ಥ. ಹಾಗೆ ಪಾದಗಟ್ಟೆ ಸಮೀಪವೇ ಬಸ್ಸ್ಟಾಂಡ್ ಅಲ್ಲಿ ಒಬ್ಬ ಕೊಬ್ಬರಿ ಮಿಠಾಯಿ ಮಾರುವಾತ... ಆಹಾ! ಎಷ್ಟು ಚೆಂದವೋ ಆ ಕೊಬ್ಬರಿ ಮಿಠಾಯಿ..!*
*ಕೊಬ್ಬರಿ ಮಿಠಾಯಿಗೂ ನನಗೂ ಅದಕ್ಕೂ ಹಿಂದಿನ ನಾಲ್ಕೈದು ವರ್ಷಗಳ ನಂಟು... ಹೇಗೆ ಅಂದರೆ ವರ್ಷಕ್ಕೆ ಎರಡ್ಮೂರು ಬಾರಿ ನನ್ನ ಅಕ್ಕನ ಊರಿಗೆ ಹೋಗುವಾಗ ನಾಯಕನಹಟ್ಟಿಯಲ್ಲಿ ಕೊಬ್ಬರಿ ಮಿಠಾಯಿ ತಿಂದೆ ಮುಂದಿನ ಪಯಣ ...ಹಿಂದಿರುವಾಗಲೂ ಅಕ್ಕ ಏನಾದರೂ ತಿನ್ನು ಎಂದು ಕೊಡುತಿದ್ದ ಪೈಸೆ ಭಾಗಶಃ ಮಿಠಾಯಿಯ ಪಾಲು ಆಗುತ್ತಿತ್ತು..*
*ಅವರೋ ನನಗೆ ಆಯತಾಕಾರದ ಮಿಠಾಯಿಯ ಜೊತೆಗೆ ಪುಡಿ ಪುಡಿಯಾಗಿ ಉದುರಿದದ್ದನ್ನು ಹೆಚ್ಚುವರಿಯಾಗಿ ಹಿಡಿ ತುಂಬಾ ಕೊಟ್ಟು ಬಾಯಿ ಸಿಹಿ ಮಾಡುತ್ತಿದ್ದರಿಂದ ಮಿಠಾಯಿಯ ಜೊತೆ ಅವರೂ ಅಚ್ಚು ಮೆಚ್ಚು ನನಗೆ...ಮೊದಲು ಮಿಠಾಯಿ ತಿಂದೆ ಬಿಡುವ ಎಂದು ಹುಡುಕಿ ಮಿಠಾಯಿ ತಿಂದು ಬಾಯಿ ಸಿಹಿ ಮಾಡಿಕೊಂಡು ಜಾತ್ರೆಯಲ್ಲಿ ತಿರುಗುವ ಯೋಚನೆ ಇತ್ತು.*
*ಮಿಠಾಯಿ ತಿಂದು ಹಾಗೆ ಮುಂದೆ ಹೋಗುವಾಗ ಒಬ್ಬ ವ್ಯಕ್ತಿ ಸುಮಾರು ಇಪ್ಪತ್ತು-ಇಪ್ಪತ್ತರಡು ವಯಸ್ಸಿನ ವ್ಯಕ್ತಿ ಅಲ್ಲಲ್ಲಿ ಕಳ್ಳತನ ಮಾಡುತ್ತಿದ್ದವನ್ನು ಕಂಡೆ ಅವನನ್ನೂ ಹಿಂಬಾಲಿಸಿದೆ ಕಳ್ಳ ಅಂತ ಕೇಳಿದ್ದೆ ಆದರೆ ಕಳ್ಳರು ಹೇಗಿರುತ್ತಾರೆ ಹೇಗೆ ಕಳ್ಳತನ ಮಾಡುವರೆಂದು ಕಣ್ಣಾರೆ ಕಂಡದ್ದು ಅಂದೆ*
*ನಾನು.*
*ಎಂತಾ ಚಾಲಾಕಿ ಕಳ್ಳ ಅವನೆಂದರೆ ಕ್ಷಣಾರ್ಧದಲ್ಲಿ ಡ್ರಾದಿಂದ ಕೈಗೆಸಿಕ್ಕಷ್ಟು ಹಣ ಎತ್ತಿ ತನ್ನ ಲುಂಗಿಯೊಳಗೆ, ಅಂಗಿ ಒಳಗೆ ಹಾಕಿಕೊಳ್ಳುತಿದ್ದ.. ಅವನ್ನು ನಾನು ಮೂರು ನಾಲ್ಕು ಅಂಗಡಿ ಹಿಂಬಾಲಿಸಿದೆ ಅವನಿಗೂ ನಾನು ಹಿಂಬಾಲಿಸುತ್ತಿರುವುದು ತಿಳಿಯಿತು. ಆಮೇಲೆ ನನಗೇನಾದರೂ ತೊಂದರೆ ಮಾಡಿಯಾನು ಎಂದು ನಾನು ಬೇರೆ ಕಡೆ ಹೋದೆ.*
*ಅಷ್ಟರಲ್ಲಿ ನನ್ನ ಅಕ್ಕನ ಊರಿನ ನನ್ನ ಸಮಾನ ವಯಸ್ಕರು ಸಿಕ್ಕರು... ಆ ಸಂಭ್ರಮ ಕ್ಕೆ ಮಿತಿಯೇ ಇಲ್ಲದಂತಾಯಿತು... ಅದೇ ಖುಷಿಗೆ ಮೂವರು ಹಾಲು ಐಸ್ ತಿಂದೆವು... ಇಂದಿನ ಜಾತ್ರೆಗಳಲ್ಲಿ ಬೊ.... ಎಂದು ಕರ್ಕಶ ಶಬ್ದ ಮಾಡುವ ಹಾಗೆ ಅಂದು ಸುಮದುರ ಕಿಟ್ರ್ ಕಿಟರ್ ಎಂದು ಶಬ್ದ ಮಾಡುವ ಸಾಧನ ಹಿಡಿದು ಜಾತ್ರೆಯಲ್ಲಿ ಸುತ್ತುವ ರಭಸ ಜೋರಾಯಿತು.. ಮೂವರ ಜೇಬಲ್ಲಿ ಇದ್ದ ದುಡ್ಡೆಲ್ಲ ಕಂಡ ಕಂಡದ್ದೆಲ್ಲ ತಿಂದು ಹಣ ಖಾಲಿಯಾಗತೊಡಗಿತ್ತು...*
*ಇನ್ನೂ ತಿಪ್ಪೆರುದ್ರ ರಥೋತ್ಸವ ದಲ್ಲಿ ಬಾಳೆ ಹಣ್ಣು ಎಸೆಯುವುದಕ್ಕಿಂತ ಬೇರೆಯವರು ಎಸೆದ ಬಾಳೆಹಣ್ಣು ಹಿಡಿದು ತಿನ್ನುವ ಮಜಾ ಅತ್ಯದ್ಭುತ.. ಅದಕ್ಕಾಗಿ ಕನಿಷ್ಠ ಒಂದೆರಡು ಕಿಲೋಮೀಟರ್ ರಥದ ಹಿಂದೆ ಓಡಾಡಿ ಹೊಟ್ಟೆಯ ತುಂಬಾ ಹಣ್ಣು ತಿನ್ನುವುದೇ ನಮಗೆ ಜಾತ್ರೆಯಾಗಿತ್ತು.*
*ನನ್ನ ಬಳಿ ಅಪ್ಪ ಕೊಟ್ಟ ಐದು ರುಪಾಯಿ ಇತ್ತು ಅದೋ ಬಿಸಿ ನೀರಲ್ಲಿ ಬೆಂದ ಸೊಪ್ಪಿನಂತೆ ಇದ್ದು ಚಲಾವಣೆ ಆಗದ ಸ್ಥಿತಿಯಲ್ಲಿತ್ತು..*
*ಮೊದಲಿನಿಂದಲೂ ಹತ್ತಾರು ಬಾರಿ ಚಲಾವಣೆಗೆ ಪ್ರಯತ್ನಿಸಿದ ಮೇಲೂ ಅದು ಚಲಾವಣೆಯಾಗದೇ ಹಾಗೇ ಉಳಿದಿತ್ತು...ಕೊನೆಯ ದಿನ ಊರಿಗೆ ಹಿಂದಿರುಗುವ ಸಮಯ ಸ್ನೇಹಿತರಿಗೆ ವಿದಾಯ ಹೇಳಿ ಊರಿಗೆ* *ಹೊರಡುಬೇಕೆನ್ನುವ ವೇಳೆ ಆಗ ಅಲ್ಲೊಂದು ಬಸ್ಸು ಹೊರಟು ನಿಂತಿತ್ತು. ಅಲ್ಲೊಬ್ಬ ಒಂದು ಬುಟ್ಟಿಯಲ್ಲಿ ಹುರಿಗಡಲೆ ಮಾರುತಿದ್ದವನ ಕಂಡು "ಅಣ ಅಣ ಐದು ರೂಪಾಯಿ ಕಡಲೆ ಕೊಡು" ಎನ್ನುತ್ತಾ ಮೊದಲೇ ಪ್ಲಾನ್ ಮಾಡಿದಂತೆ ಇನ್ನೊಬ್ಬ ಬಾರೋ ಬೇಗ ಬಸ್ ಹೋಗತ್ತೆ ಎಂದು ಕೂಗುತ್ತಿರುವನು.. ಹೀಗೆ ಕೃತಕ ಅವಸರ ಸೃಷ್ಠಿ ಮಾಡಿ ಆತನಿಗೆ ಆ ಐದು ರುಪಾಯಿ ಸ್ಥಿತಿ ಗತಿ ನೋಡಲೂ ಬಿಡದೇ ಅಂತೂ ಇಂತೂ ಹರಿದ ನೋಟು ಚಲಾವಣೆ ಮಾಡಿ ಹುರಿಗಡಲೆ ಮುಕ್ಕಿದ್ದೆವು.... ಆದರೆ ಆಮೇಲೆ ಅದನ್ನು ಸ್ಮರಿಸಿಕೊಂಡು ಪಾಪ ಅವರಿಗೆ ಮೋಸ ಮಾಡಿದೆವಲ್ಲ ಎನ್ನುವ ಪಶ್ಚಾತ್ತಾಪ ಈಗಲೂ ಕಾಡುತ್ತಿದೆ... ಆದ್ದರಿಂದಲೇ ಈಗಲೂ ನಾನು ಹರಿದ ನೋಟು ಚಲಾವಣೆ ಮಾಡಲು ಮನಸು ಬರದೇ ವಿವಿಧ ಮುಖಬೆಲೆಯ ಹತ್ತಾರು ನೋಟುಗಳು ನನ್ನ ಬಳಿಯೇ ಉಳಿದಿವೆ... ಹಾಗೆಯೇ ಆ ಸವಿಕೊಬ್ಬರಿ ಮಿಠಾಯಿ ಮಾರುವಾತನನ್ನು ಈಗಲೂ ನಾನು* *ನಾಯಕನಹಟ್ಟಿಗೆ ಹೋದಾಗ ಸುತ್ತಾ ಮುತ್ತಾ ನೋಡುವೆ ಹುಡುಕುವೆ...ಬಹಳ ದಿನ ಆಯಿತು ಕಂಡಿಲ್ಲ...*
ಆತ್ಮೀಯರೊಬ್ಬರು ನನ್ನ ಬರಹಕ್ಕೆ ಸ್ಪಂದಿಸಿ ಅವರನ್ನು ಹಿಡಿದು ಪೋಟೊ ತೆಗೆದು ಕಳಿಸಿದ್ದಾರೆ..
✍️ *ನಾಗೇಂದ್ರ ಬಂಜಗೆರೆ*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ