ಯಾಕೋ ಈ ಮಕ್ಕಳು ಮೊದಲಿನ ತರ ಇಲ್ಲ...

 *ಆತ್ಮೀಯರೇ...ಎಲ್ಲಾ ಶಿಕ್ಷಕರು ಮತ್ತು ಪೋಷಕರು ಓದಲೇ ಬೇಕಾದ ಲೇಖನ ತಪ್ಪದೇ ಬಿಡುವು ಮಾಡಿಕೊಂಡು ಓದಿ..*


*ಅದ್ಯಾಕೋ  ಶಾಲಾ ಮಕ್ಕಳು ಮೊದಲಿನ ತರ ಇಲ್ಲ...*



*ಕೋವಿಡ್ ಬಂದ ಮೇಲೆ ಇಡೀ ಪ್ರಪಂಚದ ಎಲ್ಲಾ  ವ್ಯವಸ್ಥೆಗಳು ಪಾತಾಳಕ್ಕೆ ಕುಸಿದಿದ್ದು ನಮಗೆಲ್ಲಾ ಚೆನ್ನಾಗಿಯೇ ಗೊತ್ತಿದೆ. ಅದರಲ್ಲೂ ಶಾಲೆಯ ಮಕ್ಕಳ ತಲೆಯಲ್ಲಿ ಕಲಿತದ್ದೆಲ್ಲಾ ಅಳಿಸಿ ಹೋಗಿ ಹೊಸದೇನಾದರೂ ಕಲಿಸೋಣ ಎಂದರೆ ಅದೂ ಕೂಡ ಕೆಲವರ  ತಲೆಗೆ  ಹತ್ತುತ್ತಿಲ್ಲ.!ಆಶ್ಚರ್ಯವಾದರೂ ಇದು ಸತ್ಯ. ನಾನೊಬ್ಬ ಶಿಕ್ಷಕನಾಗಿ  ಈ ಮಾತನ್ನು ಹೇಳುತ್ತಿದ್ದೀನೆಂದರೇ ಅದು ಈ ಕೆಳಗಿನ ಘಟನೆಗಳಿಂದ..*


*ಘಟನೆ -೧*


*ನಮ್ಮ ಶಾಲೆಯ ಇಬ್ಬರು ಹುಡುಗರು  ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಟಾಪ್ ಮೆರಿಟ್ ಲ್ಲಿ ಆಯ್ಕೆ ಆಗಿದ್ದರು.ಆ ಹುಡುಗರು  ಬಹುತೇಕ ಸ್ವತಂತ್ರವಾಗಿ ಬದುಕಲು ಶಕ್ತವಾದವರು. ಇವರ ವಿದ್ಯಾಭ್ಯಾಸ ಒಂದು ಹಂತ ಮುಟ್ಟಿತು ಎಂದು ನಿಟ್ಟುಸಿರು ಬಿಡುವ ವೇಳೆಗೆ ಬಂದು ತಲುಪಿದ ಸುದ್ದಿ ಎಂದರೆ ಅವರು ಆ ಶಾಲೆ ಬೇಡ ಎಂದು ವಾಪಾಸು ಬಂದು  ಅವರಿಗಿಂತ ಹಿರಿಯ ಹಳೇ  ವಿದ್ಯಾರ್ಥಿಗಳೊಂದಿಗೆ ಮೊಬೈಲ್ ಹಿಡಿದು  ಊರು ತುಂಬಾ ಸುತ್ತುತ್ತಿದ್ದ ಸುದ್ದಿ. ಒಂದು ವಾರದ ನಂತರ ಸುಮ್ಮನೇ ನಮ್ಮ ಹುಡುಗರ  ಜೊತೆಗೆ ಶಾಲೆಗೆ ಬರುತ್ತಿದ್ದರು. ಹೊಸ ಶಾಲೆ. ಸ್ವಲ್ಪ ದಿನಗಳ ಮಟ್ಟಿಗೆ ಇದ್ದು ಹೋಗುತ್ತಾರೆಂದು ಅಂದು ಕೊಂಡಿದ್ದ ನಮಗೆ ಎರಡು ವಾರ ಕಳೆದರೂ ಹೋಗಲೇ ಇಲ್ಲ. ಕೊನೆಗೆ ಒಂದು ದಿನ ಕರೆದು  ಪ್ರತ್ಯೇಕವಾಗಿ ಕರೆದು ಯಾಕ್ರೋ ನೀವ್ ಆ ಶಾಲೆಗೆ ಹೋಗಲಿಲ್ಲ ಇಷ್ಟ ಅಗಲಿಲ್ಲವಾ ಎಂದು ಪ್ರೀತಿಯ ನುಡಿಗಳೊಂದಿಗೆ  ಕೇಳಿದಾಗ "ಸಾರ್ ಶಾಲೆಗೆ ಹೋಗಬೇಕಂತ ಹೋಗ್ತೀನಿ ಸಾರ್ ಆದ್ರೆ ಕ್ಲಾಸಲ್ಲಿ ಕುತ್ಕಂಡ್ರೆ ಬರೀ ಈ ಊರೇ ನೆನಪಾಗತ್ತೆ "ಎಂದ. ಹೌದು ಕಣ್ರೋ ಸ್ವಲ್ಪ ದಿನ ಹಾಗೇ ಅಲ್ಲಿ ಫ್ರೆಂಡ್ಸ್ ಆದ ಮೇಲೆ ಸರಿ ಆಗತ್ತೆ ಹೋಗ್ರಪ್ಪ ಎಂದೇಳಿದ್ದಕ್ಕೆ "ಸರಿ ಸಾರ್  ಸೋಮವಾರ ಹೋಗುತ್ತೀವಿ ಸಾರ್.. "ನಿಮ್ ತರ ಓದಿ ನಾನು ಜಾಬ್ ತೆಗೆದುಕೊಳ್ಳುತ್ತೀವಿ ಸಾರ್" ಎಂದೇಳಿ ಹೋದವರು ಮತ್ತೆ ನಮ್ಮ ಎದುರಿಗೆ ಕಂಡಿಲ್ಲ ಹಾಗಂತ ಶಾಲೆಗೂ ಹೋಗಿಲ್ಲ.!ಹುಡುಗರನ್ನು ಕೇಳಿದ್ರೆ ದೊಡ್ಡವರ ಜೊತೆಗೆ ದುಡ್ಡಿನ ಜೂಜಾಟ,ಮೊಬೈಲ್ ಲಿ ಪಬ್ಜಿ, ಏನೇನೋ ಆಡುತ್ತಾರೆಂದು ಹೇಳುವರು. ಅದು ಸತ್ಯವೂ ಹೌದು.*


*ಘಟನೆ-2*


*ನನ್ನ ಸ್ನೇಹಿತೆಯೊಬ್ಬರು ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕೊಂದರಲ್ಲಿ  ಸರ್ಕಾರಿ ಪ್ರೌಢಶಾಲೆಯೊಂದರ  ಕನ್ನಡ    ಶಿಕ್ಷಕಿ.ಆ ಶಾಲೆಗೆ ಬರುವ ಮಕ್ಕಳ ಬಹುತೇಕರು ಹಾಸ್ಟೆಲ್ ನಿಂದ ಬರುವಂತವರು. ಬಹಳ ದಿನಕ್ಕೆ ಕರೆ ಮಾಡಿ ಪರಸ್ಪರ  ಯೋಗಕ್ಷೇಮ ವಿಚಾರಿಸಿ ಮತ್ತೆ ಕ್ಲಾಸ್ ಮಕ್ಕಳು ಹೇಗಿದ್ದಾರೆ ಎಂದು ನಾನು ಕೇಳಿದೆ. ಅಯ್ಯೋ ಮಕ್ಕಳ ಅವರು.? ಇಷ್ಟು ವರ್ಷದ ಸರ್ವೀಸ್ ಲ್ಲಿ ಇಂತಹ 'ಭಯಂಕರ' ಮಕ್ಕಳನ್ನು ನಾನು ಕಂಡಿರಲಿಲ್ಲ... ಥೂ.. ಅಂದರು.*


 *ಯಾಕಮ್ಮ ಏನಾಯಿತು ಎಂಬ ಪ್ರಶ್ನೆಗೆ ಅವರು ಉತ್ತರ ಕೊಟ್ಟಿದ್ದು "ಎಲ್ಲರ ಕೈಯಲ್ಲೂ ಆ್ಯಂಡ್ರಯ್ಡ್ ಮೊಬೈಲ್ ಇವೆ. ರಾತ್ರಿ ಎಲ್ಲಾ ಏನೇನೋ ನೋಡಬಾರದೆಲ್ಲಾ ನೋಡಿ ಕ್ಲಾಸಿಗೆ ಹೋದರೆ ಬಹಳ ಅಸಹ್ಯವಾಗಿ ನೋಡುತ್ತಿರುತ್ತಾರೆ,ನಿದ್ದೇ ಕಾಣದ ಕಣ್ಗಳು..ನಮಗೆ ನಿಮ್ಮ  ಪಾಠವೇ ಬೇಡ ಎನ್ನುವಂತಹ ಮುಖಭಾವನೆಗಳು. ಛೀ  ಕ್ಲಾಸಿಗೆ ಹೋಗಲು ಇರಿಸು ಮುರಿಸು ಆಗತ್ತೆ ಏನ್ ಹುಡುಗ್ರೋ ಏನೋ ಮಾರಾಯ.. ನಿಮ್ ಕಡೆ ಮಕ್ಕಳು ಹೇಗಿದ್ದಾರೆ??*


*ನಮ್ ಕಡೇನೂ ಹಾಗೇ ಬಿಡಿ.  ಈ ಕೊರೋನಾ ಗ್ಯಾಪ್ ಲ್ಲಿ ಮಕ್ಕಳು ಪೂರಾ ಹದಗೆಟ್ಟು ಹೋಗಿದ್ದಾರೆ.ಏನಿಲ್ಲ ಎಲ್ಲದೂ ಹೊಸದಾಗಿ ಪ್ರಾರಂಭಿಸಬೇಕು. ಸರಿ ಸರಿ ನನಗೆ ಸ್ವಲ್ಪ ಕೆಲಸ ಇದೆ ಪ್ರೀ ಆದಾಗ ಮಾತಾಡುವೆ ಎಂದೇಳಿ  ಮಾತು ಮುಗಿಸಿದೆ.*


*ಘಟನೆ-3*


 *ನಾನು ಶಾಲೆಗೆ ಹೋಗುವ ದಾರಿಯಲ್ಲಿ ಕೇಂದ್ರೀಯ ವಿದ್ಯಾಲಯ ಒಂದು ಶಾಲೆ ಇದೆ. ಅವರ ವೇಳಾಪಟ್ಟಿ ನಮ್ಮ ವೇಳಾಪಟ್ಟಿ ವಿಭಿನ್ನವಾದರೂ ಒಂದು ಶನಿವಾರ ನಾನು ಶ್ರೀಮತಿಯೊಂದಿಗೆ ಶಾಲೆಗೆ ಹೋಗುವಾಗ  ಆ ಶಾಲೆಗೆ ಸುಮಾರು ನೂರು ಮೀಟರ್ ದೂರದಲ್ಲಿ ಹತ್ತು ಹನ್ನೆರಡು ಹುಡುಗರು ವಯೋಸಹಜ ತರಲೆ ಕೀಟಲೆಗಳೊಂದಿಗೆ ಲೋಕಾಬಿರಾಮವಾಗಿ ಆಡುತ್ತಿದ್ದರು.ಅಷ್ಟಾಗಿ ಎಂದು ಕಾಣಿಸದ ಹುಡುಗರು ಇವತ್ತೇಕೆ ಇಲ್ಲಿ ಆಡುತ್ತಿದ್ದಾರಲ್ಲ ಎಂದೆನಿಸಿತಾದರೂ ಇನ್ನೂ ಬೆಲ್ ಆಗಿಲ್ವೇನೋ ಸೋ ಹೊರಗಡೆ ಇರಬೇಕು ಎಂದೆನಿಸಿ ನಾವು ಶಾಲೆಗೆ ಬಂದು ಬಿಟ್ಟೆವು. ನಮಗೆ  ಮಾರ್ನಿಂಗ್ ಕ್ಲಾಸ್ ಆದರೂ ನಾವು ಹಿಂತಿರುಗಿ ಅದೇ  KVD   ಮುಂಭಾಗ ಹಿಂದಿರುಗಿದಾಗ  ಗಂಟೆ ಮದ್ಯಾಹ್ನ  ಸುಮಾರು ಹನ್ನೆರಡು ಹನ್ನೆರಡು ವರೆ ಆಗಿತ್ತು. ಏನಾಶ್ಚರ್ಯ?? ಆ ಹುಡುಗರೆಲ್ಲಾ ಬೆಳಿಗ್ಗೆಯಂತೆಯೇ ಅಲ್ಲಿಯೇ  ಆಡುತ್ತಿದ್ದಾರೆ.ಅದೇ ಹುಡುಗರು!ಮುಖ ಮಾತ್ರ ಡಲ್ ಅಗಿದೆ.ಅವರು ಕ್ಲಾಸಿಗೂ ಹೋಗಿಲ್ಲ. ಇತ್ತ ಮನೆಗೂ ಹೋಗಲು  ಅವರನ್ನು ಕರೆದುಕೊಂಡು ಹೋಗುವ ಆಟೋ /ವಾಹನ ಇನ್ನೂ ಬಂದಿಲ್ಲ. ಇಲ್ಲಿ ವಿಶೇಷ ಏನೆಂದರೇ ಅವರೆಲ್ಲಾ ಸರ್ಕಾರಿ ನೌಕರರ ಮಕ್ಕಳು.!*


*ಘಟನೆ-4*


*ಕಳೆದವಾರ ಚನ್ನಗಿರಿ ತಾಲ್ಲೂಕಿನ ಪ್ರೌಢಶಾಲೆಯ ಮಕ್ಕಳು ಅವರ ತರಗತಿಯ ಶಿಕ್ಷಕರ ತಲೆಗೆ ಡಸ್ಟ್ ಬಿನ್ ಮುಚ್ಚಿ ಹಲ್ಲೆ ಮಾಡಲು ಆಡಿದ ಆಟ ನೋಡದೇ ಇರುವವರು ಯಾರು ಇಲ್ಲ. ಈ ಘಟನೆಯಲ್ಲಿ ತಲೆ ಮೇಲೆ ಕುಳ್ಳರಿಸಿಕೊಂಡಿರುವ ಶಿಕ್ಷಕನದೇ ತಪ್ಪು  ಸ್ಟೂಡೆಂಟ್ಸ್ ಎಲ್ಲಿರಬೇಕೋ ಅಲ್ಲಿಡಬೇಕಿತ್ತು ಎಂದು ಅನಿಸಿದರೂ ನಾನೊಬ್ಬ ಶಿಕ್ಷಕನಾಗಿ  ಹೇಳುವುದಾದರೇ ಇದು ಶಿಕ್ಷಕನ ದೌರ್ಬಲ್ಯ ಅಲ್ಲವೇ ಅಲ್ಲ. ಕೊರೋನಾವಧಿಯಲ್ಲಿ ಶಾಲೆ ಇಲ್ಲದ ವೇಳೆಯಲ್ಲಿ ಆನ್ಲೈನ್ ಕ್ಲಾಸಿಗೆಂದು ತಂದೆ ತಾಯಿ ಕೊಡಿಸಿದ ಮೊಬೈಲ್ನಿಂದ ಕಲಿತ ಪಾಠದ ಮಹಿಮೆ ಇರಬಹುದು.*


*ಈ ಮೇಲಿನ ನಾಲ್ಕೂ ಉದಾಹರಣೆಗಳು ಕೇವಲ ಸ್ಯಾಂಪಲ್ ಮಾತ್ರ. ಇಂತಹವು ಸಾವಿರ ಉದಾಹರಣೆ ಸಿಗುತ್ತಾವಾದರೂ ನಾವು ಈ ಮಕ್ಕಳ ಬಗ್ಗೆ ಗಂಭೀರವಾಗಿ ಯೋಚಿಸು ಅನಿವಾರ್ಯತೆ  ಪೋಷಕ ಮತ್ತು ಶಿಕ್ಷಕರಿಗೆ ಬಂದೊದಗಿದೆ. ಕೊರೋನಾ ಮನ್ನಾ ಇದ್ದಂತಹ ತರಗತಿ Holding,ಕಲಿಕೆಯ ಮಟ್ಟ ಈಗ ಕಾಣಿಸುತ್ತಿಲ್ಲ.ಕಲಿಕೆಯ ಬಗ್ಗೆ ಮಕ್ಕಳ ನಿರಾಸಕ್ತಿ ಹೇಳ ತೀರದು.ಅದ್ಯಾವುದೋ  'ಸ್ಟೈಲ್ ಕಟಿಂಗ್'ಎಂಬ ಹೆಸರಿನ ಕೆಟ್ಟ ಕೆಟ್ಟ ಡಿಸೈನ್ ಡಿಸೈನ್ ಕಟಿಂಗ್ ಗಳು, ಕಲರ್ ಕಲರ್ ಹೇರ್ ಡೈ,ಇವರ  ಮುಖದಲ್ಲಿ ಈ ಮೊಬೈಲ್ ಹಾವಳಿ ಎಷ್ಟಿದೆ ಎಂದರೆ ಕಣ್ಣು ಮತ್ತು ಮುಖಚರ್ಯೆನೇ ಬದಲಾಗಿದೆ. ಮಾತಿಗೆ ರೆಸ್ಪಾನ್ಸ್ ಇಲ್ಲ, ಮಾಡಬೇಡ ಎಂಬುದೇ  ಅತಿ ಹೆಚ್ಚು ಮಾಡಲ್ಪಡುತ್ತಿರುವ ಮಕ್ಕಳು. ಗುರಿ ಮುಟ್ಟದ ಕಲಿಕೆ ಮತ್ತು ನೀರೀಕ್ಷಿತ ಕಲಿಕಾ ಫಲಗಳು ಸಮಾಜಕ್ಕೆ ಗಂಡಾಂತರದ ಸೂಚನೆಯಲ್ಲದೇ ಮತ್ತೇನೂ ಅಲ್ಲ. ಮುಂದುವರೆದ ವೈಜ್ಞಾನಿಕ ಕಾಲದಲ್ಲಿ ಎಲ್ಲರ ಜೀವನ ಸುಧಾರಿಸಿ ಬದುಕು ಸುಲಭ ಮತ್ತು ಸುಖಮಯಗೊಳಿಸ ಬೇಕಾಗಿದ್ದ ಕಾಲದಲ್ಲಿ ಅದೇ ವಿಜ್ಞಾನ ಬಾಳಿ ಬದುಕಬೇಕಾಗಿರುವವರ ಬದುಕು ದುಸ್ತರ ಗೊಳಿಸುತ್ತಿರುವುದು ದುರಂತವೇ ಸರಿ.*


  *ಬರಹ ಮುಗಿಸುವ ಮುನ್ನ  ಈ ಕೊರೋನಾ ಬಾರದಿರಲೆಂದು  ಸುರಕ್ಷತಾ ದೃಷ್ಠಿಯಿಂದ ವ್ಯಾಕ್ಷಿನ್ ,ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವಂತೆ ಈ ಮಕ್ಕಳ ಕಲಿಕೆ ಮತ್ತು ಇವರ ವಿಚಿತ್ರ ವರ್ತನೆಯಬಗ್ಗೆ  ಬಗ್ಗೆ ಪೋಷಕರು, ಶಿಕ್ಷಕರು, ಮನಶಾಸ್ತ್ರಜ್ಞರು ಸಮರೋಪಾದಿಯಲ್ಲಿ ಇವರ ಈ ರೋಗಕ್ಕೂ ಮದ್ದು ಕಂಡುಕೊಳ್ಳಬೇಕಿದೆ. ಇಲ್ಲವಾದಲ್ಲಿ ಈ ಸಮಾಜವು ಅತ್ಯಂತ ವೇಗವಾಗಿ ಅಪಾಯದಂಚಿಗೆ ನೂಕಲ್ಪಡುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಪೋಷಕರೇ, ಶಿಕ್ಷಕರೇ ಎಚ್ಚರ ಎಚ್ಚರ..'ಮಕ್ಕಳು ನಮ್ಮ ಮತ್ತು ದೇಶದ ಅಮೂಲ್ಯ ಆಸ್ತಿ' ಕಾಪಾಡಿಕೊಳ್ಳೋಣ..*


✍️ ನಾಗೇಂದ್ರ ಬಂಜಗೆರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..