ಗಾಳಿಕೆರೆ ( ಪ್ರವಾಸ ಕಥನಾ)



ಮಲೆನಾಡಿನ ಚೆಲುವೆ ಬಂದೌಳೇ ಊರಿಗೆ ಎಂಬ ಭಾವಗೀತೆಯನ್ನು ಕಾಲೇಜು ದಿನಗಳಲ್ಲಿ ಅದೆಷ್ಟು ಸಾವಿರ ಭಾರಿ ನಾನು ಹಾಡಿದ್ದೇನೋ ಗೊತ್ತಿಲ್ಲ. ಅಂದಹಾಗೆ  ನನ್ನ ಮನದರಸಿಯ ತವರು ಮಲೆನಾಡು, ಮಳೆಯ ನಾಡು ಕಾಫಿಯ ಬೀಡು ಚಿಕ್ಕಮಗಳೂರು.ಪ್ರತಿ ವರ್ಷವೂ ಸಾವಿರಾರು ಕಿಮೀ ಸುತ್ತುವ ಚಾಳಿ ನಮ್ಮದು. ಅದರಂತೆ ಅವಳಿಗೆ ತವರಿಗೆ ಬಂದ ಖುಷಿಯಂತೆ ನನಗೆ ಮಲೆನಾಡಿನ  ವಾತಾವರಣದಲ್ಲಿ ರಮಣೀಯ ಸ್ಥಳಗಳಿಗೆ ಬೇಟಿ ಕೊಡುವುದು ಕುಟುಂಬ ಸಹಿತ ಟ್ರೆಕ್ಕಿಂಗ್ ಹೋಗುವುದು  ನಮಗೆ ಅಭ್ಯಾಸ.ಅದರಂತೆ ಸುಂದರವಾದ ಒಂದು ಸ್ಥಳವನ್ನು ನೀವು ನೋಡಲೇಬೇಕು ಅದೇ ಗಾಳಿಕೆರೆ.


 ದತ್ತಪೀಠಕ್ಕೆ ವರ್ಷದಲ್ಲಿ ನಾಲ್ಕಾರು ಬಾರಿ ನಾವು ಹೋಗಿ ಬರುವೆವು. ದತ್ತಪೀಠದ ಸುತ್ತಾಮುತ್ತಾ ಹಸಿರರಾಶಿಯ ಮದ್ಯೆ ತಣ್ಣನೆಯ ಗಾಳಿಯನ್ನು ಆಸ್ವಾದಿಸುತ್ತಾ,ಅಲ್ಲಿ ಓಡಾಡುವುದೇ ಹಿತಕರ‌. ಆ weather ಮತ್ತು ಪ್ಯೂರ್ ಆಕ್ಸಿಜನ್ ಗಾಗಿ ಅಲ್ಲಿಗೆ ಹೋಗಬೇಕು ನೋಡಿ.ಅದೆಷ್ಟುಬಾರಿ ಹೋದರೂ ಬೇಜಾರಾಗದೇ ಪ್ರತಿಬಾರಿಯೂ ಹೊಸತು ಹೊಸತೆನಿಸುವ ಭಾವದೊಂದಿಗೆ ಹಾಯಾಗಿ ಬರುತ್ತಾ ದತ್ತಪೀಠದ ಪಕ್ಕ ಗಾಳಿಕೆರೆ  ಎಂಬ ಬೋರ್ಡ್ ಪ್ರತಿ ಬಾರಿಯೂ ನೋಡಿ ಒಮ್ಮೆ ಹೋಗಬೇಕು ಆ ಕೆರೆಯ ಹತ್ತಿರ ಅಂದುಕೊಳ್ಳುತ್ತಿದ್ದೆ.ಗಾಳಿಕೆರೆ ಅಂದ್ರೆ ಅದು ಊರೋ ಅಥವಾ ಕೆರೆನಾ ಎಂಬ  ಪ್ರಶ್ನೆಗಳೊಂದಿಗೆ  ಅದು ಕೆಲವು ಮನೆಗಳಿರುವ ಊರಾಗಿರಬೇಕು ಅದು ಚಂದ್ರ ದ್ರೋಣ ಪರ್ವತಗಳ ಶಿಖರ ಸಾಲಿನ ಮೇರುಭಾಗ ಅಲ್ಲಿ ಕೆರೆ ಇರಲಿಕ್ಕಿಲ್ಲವೆನೋ   ಎಂದು,ಇಲ್ಲ ಇಲ್ಲ ಅಲ್ಲೊಂದು ಸುಂದರ ಕೆರೆ ಇರಬೇಕು ಎಂದು ಮತ್ತೊಮ್ಮೆ ಕಾಣದ ಸ್ಥಳದ ಕಲ್ಪನೆಯನ್ನು ಮಾಡುತ್ತಾ  ಬಾಬಾ ಬುಡನ್ ಗಿರಿ/ದತ್ತಪೀಠದ   ಸುತ್ತಾ ಮುತ್ತಾ ಇರುವ ಸುಂದರವಾದ ಪ್ರದೇಶಗಳಲ್ಲಿ ಸುತ್ತಾಡಿ ಹಿಂದಿರುಗುತ್ತಿದ್ದೆವು‌‌.

ದಿನಾಂಕ:17-11-2019 ರಂದು ಮಗಳು ತನೇಹಾಳ ಬರ್ಥಡೇ.ಆ ದಿನದ ವಿಶೇಷದ ಸಲುವಾಗಿ ಪೋಟೊ ಶೂಟ್ ಗೆ  ಒಂದು ಸುಂದರ ಸ್ಥಳಕ್ಕೆ ಹೋಗಬೇಕಿತ್ತು. ಕೆಮ್ಮಣ್ಣುಗುಂಡಿ ಯ Z ಪಾಯಿಂಟ್,ಮುಳ್ಳಯ್ಯನಗಿರಿ ಅದು ಇದೆಂದು ಚರ್ಚೆಮಾಡುತ್ತಿರುವಾಗ  ನಾವು ತೀರ್ಮಾನಿಸಿದ ಸ್ಥಳ ಎಂದರೆ ಗಾಳಿಕೆರೆಯನ್ನು ಇಂದು ನೋಡುವುದು.  ಅಲ್ಲೇ ಎಲ್ಲಿಯಾದರೂ ಪೊಟೋ ಶೂಟ್ ಮಾಡಿಕೊಂಡು   ಬರೋಣವೆಂದು  ನಾನು, ಕುಮುದಾ,  ಶಿವ .,ಹರೀಶ ನಾದಿನಿಯರಾದ ನಂದಿನಿ, ಪ್ರಮೋದ ಕಾರ್ ಹತ್ತಿ ಹೊರಟೆವು.ರಸ್ತೆಯುದ್ದಕ್ಕೂ ಗಾಢ ಮಂಜಿನ ಹಾದಿಯೊಂದಿಗೆ ದ್ರೋಣಪರ್ವತ ಸಾಲಿಗೆ ದ್ವಾರ ಬಾಗಿಲಿನ ಹಾಗೆ ಇರುವ ಕೈಮರದಿಂದ ಒಳ ಬರುವಾಗಲೇ ಇಬ್ಬನಿಯ ಪ್ರಮಾಣ ಇಮ್ಮಡಿಯಾಯಿತು. ಸೂರ್ಯ ಮೊಡದೊಳಗೆ ಅಡಗಿದ್ದರಿಂದ ಇಬ್ಬನಿಯ ಪ್ರವಾಹ ಜೋರಾಗಿಯೇ ಇತ್ತು. ನಾವು ಒಳಗಡೆ ಹೋದಂತೆಲ್ಲಾ ಮೊಡಗಳ ಮರೆಯಿಂದ ಭೂಮಿಗೆ ಮೋರೆ ಹಾಕಿದ ದಿನಕರನ ರಶ್ಮಿಗೆ ಇಬ್ಬನಿಯು ಹಿಂದೆ ಸರಿದು ಭೂರಮೆಯ ಹಸಿರ ಸೌಂದರ್ಯ ಗೋಚರಿಸಿತು. ಮೋಡಗಳ ಮರೆಯಾಗುತ್ತಿದ್ದ ಸೂರ್ಯ ಕೆಲವೊಮ್ಮೆ ಪ್ರಕರ ಬಿಸಿಲಿನೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಸೂರ್ಯನ ಕಣ್ಣಾ ಮುಚ್ಚಾಲೆ ಮುಂದುವರೆದಿತ್ತು.ಹೆಚ್ಚು ಕಡಿಮೆ ಬೆಳ್ಳಗೆ ಇಬ್ಬನಿಯ ಮುಸುಕು ಇತ್ತಾದರೂ ಬಹುವಾಗಿ ಮೊಡಗಳು ಕ್ಲಿಯರ್ ಆಗಿ ಬೆಳಕು ಚೆಲ್ಲಿ ವಿಶಾಲವಾದ ಪರ್ವತ ಶ್ರೇಣಿಗಳು ಕಾಣಿಸಿದವು. ಅಷ್ಟು ಹೊತ್ತಿಗಾಗಲೇ ಕಾರು ದತ್ತಪೀಠ ತಲುಪಿದ್ದರಿಂದ ಎಲ್ಲಿ ನಿಲ್ಲಿಸುವುದು ಬೇಡ ನೇರವಾಗಿ ಗಾಳಿಕೆರೆ ಗೆ ಹೋಗೋಣ ಎಂದು ಹಳೆಯ ಚಿಕ್ಕ ಡಾಂಬಾರು ರಸ್ತೆಯೊಂದಿಡಿದು  ಒಮ್ಮೊಮ್ಮೆ ಮೈ ನಡುಗುವಂತಹ ಚಳಿಗಾಳಿಯ ನಡುವೆ ಮೂರ್ನಾಲ್ಕು ಕಿ ಮೀ ಒಳಗಡೆ ಬಂದೆ. ಒಂದಷ್ಟು ದೂರ ಬಂದ ಮೇಲೆ ಒಂದು ಬೆಟ್ಟದ ತುದಿಗೆ ರಸ್ತೆಯು ಕೊನೆಯಾಗಿ ಕಾಣದಿರಲು ಅಳಿಯ ಶಿವಪ್ಪನನ್ನು ಮುಂದೆ ರಸ್ತೆ ಇದೆಯೋ ಇಲ್ಲವೋ ಹೋಗಿ ನೋಡೆಂದು ಕಳಿಸಿದೆ. ರಸ್ತೆಯ ಸ್ಥಿತಿ ನೋಡಲು ಹೋಗುತ್ತಿದ್ದ ಶಿವ ಬೆಟ್ಟಹತ್ತಲು ತಡಕಾಡುತಿದ್ದ. ನೋಡಿ ಇನ್ನೂ ರೋಡಿಲ್ಲ ಇಲ್ಲೇ ಇಳೀರಿ ಎಂದೇಳುತ್ತಿರುವಾಗಲೇ ಶಿವ ಅಲ್ಲಿಂದಲೇ ಕೈಯನ್ನು ತಿರುಗಿಸುತ್ತಾ ಇಲ್ಲ ಎಂಬ ಸೂಚನೆ ನೀಡಿದ.ಕಾರು ನಿಲ್ಲಿಸಲು ಒಂದಷ್ಟು ಬಯಲಿನ ಜಾಗ ನೋಡಿ ಕಾರನ್ನು ಪಾರ್ಕಮಾಡಿದೆ.
ಕಾರೊಳಗೆ ಇದ್ದ ಮೂರು ಹೆಣ್ಣು ಜೀವಿಗಳು ಒಂದೇ ತೆರನಾದ ಡ್ರೆಸ್ ಹಾಕಿದ್ದರು. ಎಲ್ಲರೂ ಅಗತ್ಯ ಲಗೇಜಿನೊಂದಿಗೆ ಇಳಿದು ಗಾಳಿಕೆರೆಗೆ ಹೋಗಲು ಬೆಟ್ಟದ ಹಾದಿಗಿಳಿದೆವು. ವಿರಳವಾಗಿ ಜನರೋಡಾಡಿದ ರಸ್ತೆ. ಕೆಲವು ಕಡೆ  ರಸ್ತೆಯೇ ಕುಸಿದಿದ್ದರೆ  ಇನ್ನೂ ಕೆಲವು ಕಡೆ  ಬಂಡೆಗಲ್ಲು ತೇಲಿಹೋಗಿ ರಸ್ತೆ ನಡೆಯಲೂ ಕೆಟ್ಟುಹೋಗಿತ್ತು.  ಇದು ಊರಲ್ಲ ಎಂದು ಖಾತರಿಯಾಗಿ ಹೆವಿ ರಿಸ್ಕ್ ತಗಂಡ್ರೆ ಒಂದು ಟೂ ವೀಲರ್ ತೆಗೆದುಕೊಂಡು ಹೋಗಬಹುದಿತ್ತು. ಸುಮಾರು ಇನ್ನೂರು ಮೀಟರ್ ದೂರದಷ್ಟು ಹೆಜ್ಜೆ ಹಾಕಲು ಒಂದು ಸಾಧಾರಣ ಎತ್ತರದ ಮರ ಕಾಣಿಸಿತು. ಆ ಮರವು ಕೆರೆಯ ದಡದಲ್ಲಿ ಇರಬೇಕು ಎಂದೆನಿಸಿ ಹತ್ತಿಪ್ಪತ್ತು ಹೆಜ್ಜೆ ಮುಂದೆ ಬಂದು ನೋಡಿದರೆ  ಸಾಧಾರಣವಾದ ತುಂಬಿದ ಸುಂದರ ಕೆರೆಯೊಂದು ಕಾಣಿಸಿತು.  ಮಗಳ ಕೈ ಹಿಡಿದು ಗಾಳಿಕೆರೆ ಗಾಳಿಕೆರೆ ಎಂದು ಕೂಗುತ್ತಾ ಕೆರೆಯ ಸೊಬಗನ್ನು ನೋಡುತ್ತಿರಲು  ಕುಮುದಾ ಕೆರೆಗೆ ಇಳಿಯಲು ಬಾಯಾರಿದ ಹಸುವಿನಂತೆ ಹಾತೊರೆಯುತ್ತಿದ್ದಳು. ನಾನು ಸಾಮಾನ್ಯವಾಗಿ ನೀರಿಗಿಳಿಯಲು ಅನುಮತಿ ನಿರಾಕರಿಸುವುದರಿಂದ ಅಂದು ಇಳಿ ಇಳಿ ಎಂದೇಳಿದ್ದಕ್ಕೆ ನೀರಿಗಳಿದು ನೀರೆಲ್ಲಾ ಮೇಲೆಹಾಕಿಕೊಂಡು ಹತ್ತು ಹದಿನೈದು ನಿಮಿಷಗಳ ಕಾಲ ಆಟ ಆಡಿದೆವು.ಒಂದು ಬೆಟ್ಟದ ಗೊಡೆಯಿಂದ ಸುಮಾರು ಮುಕ್ಕಾಲು ಇಂಚಿನಷ್ಟು ನೀರು ಕೆರೆಗೆ ಸೇರುತಿತ್ತು. ಆ ನೀರನ್ನು ಕುಡಿಯಲು ತಣ್ಣಗೆ ರುಚಿಕರವೂ ಇತ್ತು. ಸಾಮಾನ್ಯವಾಗಿ ನೈಸರ್ಗಿಕ ನೀರಿನ ಮೂಲಗಳಿಂದ ನೀರು ಕುಡಿಯಲು ಇಷ್ಟಪಡುವ ನಾವುಗಳು ಆ ನೀರು ಅದಮ್ಯ ಖನಿಜಾಂಶಗಳು ಹೊಂದಿರುವುದರಲ್ಲಿ ಸಂಶಯವಿಲ್ಲ. ಇಂತಹ ಸಾವಿರಾರು ನೀರಿನ ಸೆಲೆಗಳು ಈ ಭಾಗದಲ್ಲಿ ಅಲ್ಲಲ್ಲಿ ಕಾಣಬರುವುದರಿಂದ ಸ್ವಚ್ಚತೆಯನ್ನು ಪರಿಶೀಲಿಸಿ ಕುಡಿದರೆ ತುಂಬಾ ಉತ್ತಮ.  ಹಾಗೆ ಮುಂದೆ ಬಂದರೆ ಅಲ್ಲೊಂದು ಆಂಜನೇಯ ಮತ್ತು ಕೆಂಚರಾಯ ಎಂಬ  ದೇವಸ್ಥಾನಗಳು.ಕೆಲವರು ಮರಣೋತ್ತರ ಪಿಂಡ ಪ್ರಧಾನದಂತಹ ಕರ್ಮಗಳನ್ನು ಇಲ್ಲಿ ಮಾಡುವರು.  ಈ ಕೆರೆಯು ಕೇವಲ ಇಬ್ಬನಿಗೇ ಈ ಕೆರೆ ತುಂಬುವುದು ಎಂಬ ನಂಬಿಕೆಯೂ ಇದೆ. ನಮ್ಮ Destination  ಇನ್ನೂ ಪೂರ್ಣಗೊಂಡಿರಲಿಲ್ಲ. ಆ ಕೆರಗೆ ಹೊಂದಿಕೊಂಡಿರುವ ಬೆಟ್ಟವನ್ನು ಹತ್ತಿ ಆಚೆ ಕಡೆ ನೋಡಿ ಸುಂದರ ಸ್ಪಾಟ್ ಹುಡುಕಲು ಎಲ್ಲರೂ ಹತ್ತಿದೆವು.ಮೊಲಗಳು,ಕಾಡುಹಂದಿ,ಮುಳ್ಳು ಹಂದಿ , ಜಿಂಕೆ ಕಡವೆಗಳು ಓಡಾಡಿದ  ಹೆಜ್ಜೆಗುರುತುಗಳು. ಮೊಣಕಾಲೆತ್ತರದ ಹುಲ್ಲಲ್ಲಿರುವ ಸೀಳುದಾರಿಯ ಮದ್ಯೆ ಏರಿ ಬಂದಾಗ ನೋಡಿ ಸ್ವರ್ಗಕ್ಕೆ ಒಂದೇ ಗೇಣು ಬಾಕಿ ಉಳಿದಿದ್ದು. ಕೇವಲ ಹುಲ್ಲಷ್ಟೇ ಇರುವ ಬೆಟ್ಟದ ತುದಿ,ಆಗಾಳಿ, ಆ ಮೋಡ ಹತ್ತಿಪ್ಪತ್ತು ಕಿಲೋಮೀಟರ್ ಕಾಣುವ ಹಸಿರ ರಾಶಿ,ಎಲ್ಲೋ ಒಂದೊಂದು ಕಡೆ ಸ್ವಲ್ಪ ಭಾಗ ಮಾತ್ರ ಸೂರ್ಯನ ಬೆಳಕು, ಉಳಿದದ್ದೆಲ್ಲಾ ಶೇಡ್.. ಒಂದು ಕಡೆ ಪ್ರಪಾತ ಭೂಮಟ್ಟದಲ್ಲಿ painting ನಂತೆಕಾಣುವ ಸಿಲ್ವರ್ ಮರಗಳ ವನರಾಶಿ,ತಣ್ಣಗಿನ ಶೀತಗಾಳಿಯ ನುಸುಳಿಕೊಂಡು ಬರುತ್ತಿರಲು ಆಹಾ ಆಹಾ.. ಅದನ್ನು ನೋಡಿಯೇ ಅನುಭವಿಸಿಯೇ ಆನಂದಿಸಬೇಕು. ದೇವಿರಮ್ಮ ಬೆಟ್ಟದ ಸಮನಾಂತರವಾಗಿ ಅದನ್ನೂ ದಾಟಿ ಆಚೆಕಡೆ ಬೆಟ್ಟದ ಮೇಲ ಅಲ್ಲೇ ಒಂದು ಕಲ್ಲಿನ ಮೇಲೆ ಚಿಕ್ಕ ಕೇಕೊಂದನ್ನು  ಕತ್ತರಿಸಿ ಬರ್ಥಡೇ ಸಂಭ್ರಮಿಸಿ,ಮನಸೋ ಇಚ್ಚೆ ನೂರಾರು ಪಟಗಳ ತೆಗೆಸಿಕೊಂಡು ನಲಿದೆವು. ಜಿಗಣೆಯ ಆತಂಕದನಡುವೆಯೂ ಹುಲ್ಲಲ್ಲಿ ಬಿದ್ದು ಹೊರಳಾಡಿದೆವು.  ಸಮಯ ಎರಡು ವರೆ ಅಗಿದ್ದರಿಂದ ಅಲ್ಲಿ ಯಾವ ಮುನ್ಸೂಚನೆ ಇಲ್ಲದೆ  ಇದ್ದಕ್ಕಿದ್ದಂತೆ ಕೆಲವೊಮ್ಮೆ  ಮಳೆ ಸುರಿಯುವುದರಿಂದ  ನಡೀರಿ ನಡೀರಿ ಹೊಗೋಣ ಎಂದು ಎತ್ರದ ಬೆಟ್ಟದಿಂದ ಇಳಿದು ಒಂದು ಬಾಟಲ್ ಲ್ಲಿ ಆ ಮಿನರಲ್ ವಾಟರ್ ತುಂಬಿಕೊಂಡು ಕಾರಬಳಿ ಬಂದು ನಮಗಾಗಿ ಕಾಯುತ್ತಿದ್ದ ವಾಂಗೀಬಾತ್  ತಿಂದು ಹೊಟ್ಟೆ ಶಾಂತಿ ಮಾಡಿ  ಆ ದಿನದ ಮನತೃಪ್ತಿಯಾಗಿ ದತ್ತಪೀಠ ಇಳಿದು ಕೆಳಗೆ ಬಂದೆವು. ಕೈ ಮರದ ಸನಿಹ ಇರುವ ಸಿರಿ ಕಾಫಿಯ ಹೀರಿ ಮನೆಗೆ ಹಿಂತಿರುಗಿದೆವು.
  ಗಾಳಿಕೆರೆಯ ಸುತ್ತಮುತ್ತ ತೆಗೆದ ಪಟಗಳು


 ಐದಾರು ಜನ ಕುಟುಂಬ ಟ್ರೆಕ್ಕಿಂಗ್ ಗೆ ಈ ಜಾಗ ಹೇಳಿಮಾಡಿಸಿದ್ದು. ಒಬ್ಬರೇ ಅಥವಾ ಇಬ್ಬರೇ ಹೋಗುವುದು ಅಪಾಯಕಾರಿಯೂ ಹೌದು. ನೆಟ್ವರ್ಕ್ ಸಿಗಲ್ಲ. ನಿರ್ಜನ ಪ್ರದೇಶ. ಆ ದಿನದ ಹವಾಮಾನ ಪರಿಸ್ಥಿತಿಯನ್ನು ನೋಡಿ ಟ್ರೆಕ್ಕಿಂಗ್ ಹೋಗುವುದು ಉತ್ತಮ.ಅಪ್ಪಿ ತಪ್ಪಿ ಮಳೆ ಬಂದರೂ ಅದೂ ಒಂಥರ ಒಳ್ೞೆಯದೇ ಆದರೂ ಆ ಆಯ್ಕೆ ಆಯಾ ಚಾರಣಿಗರಿಗೆ ಮುಕ್ತವಾದದ್ದು.ಜೊತೆಯಲ್ಲೊಂದಿಷ್ಟು ಕುರುಕಲು ತಿಂಡಿ ಇದ್ದರೆ ಸೂಕ್ತ. ಚಳಿ ಮತ್ತು  ಚಳಿಗಾಳಿ ಇರುವುದರಿಂದ ಸ್ವಲ್ಪ ಕಡಿದಾಡಿದರೆ ಸಮಯ ಸುಖಮಯವಾಗಿರುತ್ತದೆ. ಹಾಗೆ ಒಂದೇ ದಿನ ಮೂರ್ನಾಲ್ಕು ಸ್ಥಳವನ್ನು ಕವರ್ ಮಾಡಬೇಕೆನ್ನುವವರಿಗೆ ಇದು ಸ್ವಲ್ಪ ಅನಾನುಕೂಲ. ಒಂದು ದಿನ ಪೂರ ಮೀಸಲಿಟ್ಟರೆ ಆ ದಿನದ ಪೂರ ಸಮಯ ಆನಂದದಾಯಕವಾಗಿ ನೀವು ಕಳೆಯಬಹುದು. ದಿನ ಪೂರ ಕಳೆಯಲಾಗದಿದ್ದರೂ ನಮ್ಮ ಕರ್ನಾಟಕದ ಸ್ವರ್ಗ ಚಿಕ್ಕಮಗಳೂರಿನ ದತ್ತಪೀಠ ಮತ್ತು ಮುಳ್ಳಯ್ಯನ ಗಿರಿ ಶ್ರೇಣಿಗಳನ್ನು ಒಮ್ಮೇಯಾದರೂ ನೋಡಲೇಬೇಕು.ಅತ್ಯಂತ ಶುದ್ದ ಆಮ್ಲಜನಕ ಸ್ವಿಟ್ಜರ್ಲೆಂಡ್‌‌ ಬಿಟ್ಟರೆ ಈ ದ್ರೋಣ ಪರ್ವತಗಳಲ್ಲಿಯೇ ಶುದ್ದ ಗಾಳಿ ಸಿಗುವುದು ಒಮ್ಮೇ ಪ್ರಯತ್ನಿಸಿ..

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು



  1. ಪ್ರವಾಸ ಕಥನ ಅದ್ಭುತವಾಗಿ ಮೂಡಿಬಂದಿದೆ ನಓದಿದರೆ ನೋಡಿದಂತಹ ಅನುಭವವಾಗುತ್ತದೆ ನಿಮ್ಮ ಅನುಭವಗಳನ್ನು ಕಟ್ಟಿಕೊಡುವ ರೀತಿ ತುಂಬಾ ಉತ್ತಮವಾಗಿದೆ

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆನ್ನಾಗಿ ಮೂಡಿಬಂದಿದೆ ಹಾಗು ನಿಮ್ಮ ಲೇಖನ ನಮಗ ಪ್ರವಾಸ ಮಾಡಲು ಹಾತೋರೆಯುವಂತೆ ಮಾಡುತ್ತದೆ... ಧನ್ಯವಾದಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..