ಮಾರ್ಜಕ ತಿಂದ ಮಿಕ...

ಮಾರ್ಜಕ ತಿಂದ ಮಿಕ..

ಓಮಿಕ್ರಾನ್ ಮತ್ತು ಕೋವಿದಮ್ಮಳ ಮೂರನೆಯ ಅಲೆಯ ವೀಕೆಂಡ್ ಕರ್ಪ್ಯೂನಲ್ಲಿ ಮನೆಯಲ್ಲಿ ಬಂಧಿಯಾದ ನಾವು ವೀಕೆಂಡ್ ಲ್ಲಿ ಮಾಡಲೇಬೇಕಾದ ಕೆಲ ಕೆಲಸ ಕಾರ್ಯಗಳನ್ನು ಕೆಲವು ತಾಸು ಮುಂದೂಡಿದ್ದೆವು. ಮಧ್ಯಾಹ್ನ ಯಾವಾಗಲೋ ಬಟ್ಟೆಗಳೆಲ್ಲವನ್ನೂ ಸೋಪಿನ ಪುಡಿ ಹಾಕಿ ವಾಷಿಂಗ್ ಮಷೀನ್ ನಲ್ಲಿ ನೆನೆಸಿಟ್ಟ ಬಟ್ಟೆಯನ್ನು ಹಿಂಡಿ ಬರುತ್ತೇನೆ ಮಗು ನೋಡ್ಕಳಿ ಎಂದು   ಕುಮುದಾ ಮೇಲ್ಗಡೆಯಿಂದನೇ ಕೂಗಿ ಹೇಳಿದಳು. ಅದಕ್ಕೆ  ಓ ಯೆಸ್ ಎಂದ ನಾನು  ಮಗಳನ್ನು ಹಾಗೆ ಜೆಸ್ಸಿಯನ್ನು(ನಾಯಿ) ತೋರಿಸಿ ಆಟ ಆಡಿಸುತ್ತಾ ಇದ್ದೆ. ಕೋಣದತ್ರ ಕರು ಎಷ್ಟು ಹೊತ್ತು ಇದ್ದಾತು?? ಎಂಟತ್ತು ನಿಮಿಷಗಳಲ್ಲಿ ರಾಗ ಶುರುವಾಯಿತು.ಹಾಗೆ ಮಗು ಸಮೇತ ಮೇಲೆ ಹೋದ ನಾನು "ಹೇ ಬಾರೆ ಈ ಪಾಪುನ ನೀನೆ ಹಿಡ್ಕೊ ನಾನೇ ಆ ಬಟ್ಟೆ ಎತ್ತಿ ಹಾಕುವೆ "ಎಂದೇಳಿ ಕೆಲಸ ಶುರು ಮಾಡಿಕೊಂಡೆ. ಬಟ್ಟೆ ಜಾಲಿಸಿ ಎತ್ತಿಹಾಕುವಾಗ ತನೇಹಾಳ ಯಾವುದೋ ಬಟ್ಟೆಯ ಜೇಬಿನಿಂದ ಎರಡ್ಮೂರು ಬಾದಾಮಿ,ಪಿಸ್ತ ನೀರಿನಲ್ಲಿ ತೇಲಿದವು. ಮೊದಲೇ ಚಳಿಗಾಲ , ನೀರೂ ಕೂಡ ತಣ್ಣಗಿದ್ದು ಏನಾದರೂ ಕಡಿದಾಡಲು ಸಿಕ್ಕರೆ ಬಿಡಕ್ಕಾಗತ್ತಾ??  ಚೆನ್ನಾಗಿಯೇ ನೆನೆದಿದ್ದ ಬಾದಾಮಿ ಪಿಸ್ತಾ ಎರಡನ್ನೂ   ನೀರಲ್ಲಿ ತೊಳೆದು ಒಟ್ಟಿಗೆ ಬಾಯೋಳು ಹಾಕಿ ಕ್ಷಣಾರ್ಧದಲ್ಲಿ ತಿಂದು ಮುಗಿಸಿದೆ.ನುಂಗಿದ ಮೇಲೆ ಬಾಯೋಳು ಏನೋ ಒಂಥರಾ ಪ್ಲೇವರ್!! ಅದ್ಹೇಗಿತ್ತಂದರೇ ಈ ನೆನೆಸಿದ ಉದ್ದಿನ ಬೇಳೆಯನ್ನು ಹಸಿ ಇರುವಾಗ ತಿಂದರೆ ಒಂಥರಾ ಉಪ್ಪು,ಅಂಟು ಏನೋ ಒಂಥರಾ ವಾಸನೆಯಿರುವದಲ್ಲ??ಅಂತಹ ವಾಸನೆ ಒಂದೇ ಸಮನೆ ಬಂತು.ಬಾಯೊಳಗೆಲ್ಲ ಒಂಥರಾ ಅಂಟು  ಅಂಟಿನ  ನಾಲಗೆ ಜಾರುವಂತಿದೆ.ಹೊಟ್ಟೆಯಲ್ಲಿ ಒಂಥರಾ ಸಂಕಟದ ಪೀಲ್..!

ಯಾಕಿರಬಹುದು??  ಎಂದು ಯೋಚನೆ ಮಾಡಿದಾಗ ಒಹೋ "ಸೋಪಿನ ಪುಡಿಯಲ್ಲಿ  ನೆನಸಿದ ಬಾದಾಮಿ ಪಿಸ್ತಾ ತಿಂದಿದ್ದರಿಂದ  ಹೀಗಾಗಿದೆ." ಎಂಬ ನಿರ್ಧಾರಕ್ಕೆ ಬಂದೆ..

ಥೋ ಎಂತಹ ಕೆಲಸ ಮಾಡಿದೆಯಲ್ಲಾ??

ತಿನ್ನುವಾಗ ಈ ಬುದ್ದಿ ಎಲ್ಲಿ ಹೋಗಿತ್ತೋ ನಾನರಿಯೇನಾದರೂ ಅದಾಗಲೇ ತಿಂದಾಗಿದ್ದರಿಂದ ಅದರ ಎಪೆಕ್ಟ್  ಅನಿವಾರ್ಯವಾಗಿ ಸುಧಾರಿಸಿಕೊಳ್ಳಲೇ ಬೇಕಾಗಿತ್ತು. ಆಗ ನನಗೆ ನೆನಪಾಗಿದ್ದು ನಾನು ಹಾಸ್ಟೆಲ್ ನಲ್ಲಿ ಇರುವಾಗ ಹಂದಿಗಳು ನಮ್ಮ ಮೈ ಸೋಪುಗಳನ್ನು ಹೊತ್ತುಕೊಂಡು ಹೋಗಿ ತಿನ್ನುತ್ತಿದ್ದ very joyful ಆ್ಯಂಡ್ interesting matter ನಿಮಗೆ ಹೇಳಬೇಕೆಂದು...

ಅಂದಹಾಗೆ  ನಾನು ಹಾಸ್ಟೆಲ್ ನಲ್ಲಿ ಇದ್ದಾಗ ಈಗಿನಷ್ಟು ವ್ಯವಸ್ಥಿತವಾಗಿ ಆಗ ನಮ್ಮ ಹಾಸ್ಟೆಲ್ ಇರಲಿಲ್ಲ. ಹಾಸ್ಟೆಲ್ ಮುಂದೆ  ಇದ್ದ 4*8*4 ಅಳತೆಯ ಒಂದು ನೀರಿನ ತೊಟ್ಟಿಯ ನೀರೇ ನಮಗೆ ಎಲ್ಲಾ ಕೆಲಸಗಳಿಗೆ ಬಳಸಲ್ಪಡುತ್ತಿತ್ತು. ಊಟದ ತಟ್ಟೆಗಳನ್ನು ತೊಳೆದಾಗ  ಬಿದ್ದಿರುತ್ತಿದ್ದ ಅನ್ನದ ಅಗಳನ್ನು ಮೇಯಲು ಮಿಕಗಳು ಅಲ್ಲೇ ಇರುತ್ತಿದ್ದವು. ನಾವು ಸ್ನಾನ ಮಾಡುವಾಗ   ಸೋಪು ಕೆಳಗಿಟ್ಟಾಗ ಮಿಕಗಳ ಕಣ್ಣೆಲ್ಲಾ ಈ ಸೋಪಿನ ಮೇಲೆ ಇರುತ್ತಿತ್ತು.life boy ಸೋಪು ಅದರ ವಾಸನೆಗೆ tempt ಆಗಿ ಬರುತ್ತಿದ್ದವೋ ಅಥವಾ ಅದನ್ನು ತಿಂದಾಗ ಅದರ ರುಚಿ ಮೈಸೂರು ಪಾಕಿನಂತೆ ಇತ್ತೊ ಗೊತ್ತಿಲ್ಲ ಆದರೆ ಅವುಗಳಿಗೆ ಆ ಸೋಪು ಅಂದರೆ ಬಹಳ ಇಷ್ಟ. ಎಷ್ಟೂ ಬಾರಿ ಕೆಲವು ಹುಡುಗರು ಮುಖಕ್ಕೆ ಸೋಪು ಹಚ್ಚಿ ಸೋಪು ಕೆಳಗಿಟ್ಟು ಕಣ್ಮುಚ್ಚಿ ಮುಖ ಉಜ್ಜಿ ತೊಳೆಯುವುದರೊಳಗೆ ಈ ಮಿಕಗಳಲ್ಲಿ ಒಂದು ಸೋಪನ್ನು ಎತ್ತಿಕೊಂಡು ಹೋಗಿ ಅವುಗಳಲ್ಲೇ ನನಗೆ ನನಗೆಂದು ಪೈಪೋಟಿ ಶುರುವಾಗಿ  ಜಗಳ ಆಡುತ್ತಿದ್ದವು.ಆ ಸೋಪನ್ನು ಅವು ಒಂದೇ ಬಾರಿಗೆ ನುಂಗಲಾಗದೇ ಬೇರೆಯ ಪ್ರಾಣಿಗೆ ಕೊಡಬಾರದೆಂದು ಬಾಯಲ್ಲಿ ಹಿಡಿದು ತಿನ್ನುವ ಪ್ರಯತ್ನದಲ್ಲಿ ಸಹಜವಾಗಿಯೇ ಬರುತ್ತಿದ್ದ ನೊರೆ ಬಾಯ್ತುಂಬ ಆಗಿರುತ್ತಿತ್ತು. ಜೊತೆಗೆ ಸೋಪು ನನಗೆ ಕೊಡು ಎಂದು ಮತ್ತೊಂದು ಮೂತಿಯಿಂದ ತಿವಿದರೆ ಬಾಯಲ್ಲಿ ಸೋಪು ಇಟ್ಟುಕೊಂಡ ಮಿಕ ಜೋರಾಗಿ ಸೋಪನ್ನು ಅಗಿಯುತ್ತಾ ಅಗಿಯುತ್ತಾ ಇನ್ನೂ ಹೆಚ್ಚಿನ ನೊರೆ ಉತ್ಪಾದಿಸುತ್ತಾ  ದೀರ್ಘಕಾಲದವರೆಗೂ ಜಗಳ ಆಡುತ್ತಿದ್ದವು. ಒಂದರಿಂದ ಮತ್ತೊಂದು ಕಸಿದುಕೊಂಡು ಎರಡ್ಮೂರು ಮಿಕಗಳು ಬಾಯೆಲ್ಲಾ ದೊಡ್ಡಮಟ್ಟದ ಸೋಪಿನ ನೊರೆಯೊಂದಿಗೆ ಅವುಗಳ ಕಾದಾಟ ನೋಡುವುದೇ ನಮಗೆ ಮಹಾ ಮನೋರಂಜನೆ ಆಗಿತ್ತು. ಹೀಗೆ ವಾರಕ್ಕೆ ಒಂದೆರಡು ಈ ತರಹದ ಸೀನ್ಗಳು ಹಾಸ್ಟೆಲ್ ನಲ್ಲಿ common ಆಗಿತ್ತು. ಆಗ ಅನುಭವಿಸಿದ ಮನೋರಂಜನೆ ಮರೆಯಲು ಅಸಾಧ್ಯವಾದರೂ ನನಗೆ ಚಿಂತೆ ಶುರುವಾಗಿದ್ದು ಸೋಪಿನ ನೀರಲ್ಲಿ ನೆನೆದ ಬಾದಾಮಿ ಮತ್ತು ಪಿಸ್ತಾ ತಿಂದ ನನ್ನ Next scene ಏನೆಂಬುದು??ನನಗೂ ಆ ಮಿಕಗಳಂತೆ ಬುರುಗು ಬುರುಗು ಬರುತ್ತಾ ಅನ್ನುವುದೇ ಚಿಂತೆಯಾಯಿತು.

ಎರಡ್ಮೂರು ಬಾದಾಮಿ ಪಿಸ್ತಾ ಎಸೆದಿದ್ದರೆ ಏನಾಗುತ್ತಿತ್ತೋ ಸುಮ್ನಿರಲಾರದೇ ತಿಂದು ಈಗ ಏನಾದರೂ ಬಾಯಲ್ಲಿ ರಾಶಿ ರಾಶಿ ನೊರೆ ಬಂದರೆ ಏನ್ಮಾಡೋದು?? ಇದನ್ನು ಸೀರಿಯಸ್ ಆಗಿ ತಗೋಬೇಕೋ ನೊರೆ ನೋಡಿ  ಆ ಮಿಕಗಳ ನೆನೆದು ನಕ್ಕು ನಲಿಯಬೇಕೊ ಎಂಬ ಸಂದಿಗ್ಧ ಸಮಯದಲ್ಲಿ ಗಂಟಲು ನಾಲಗೆ ಏನೋ ಒಂಥಾರ ಕಸಿ ವಿಸಿ ಅನಿಸುತ್ತಿದೆ.‌  ನೊರೆ ಹೆಚ್ಚಾಗಿ ಒಂದು ವೇಳೆ ಆಸ್ಪತ್ರೆಗೆ ಹೋದರೆ ಅವರಿಗೆ ಏನೆಂದು ಹೇಳುವುದೋ ಅಲ್ಲಿಯೂ ಇಂದು  ನನಗೆ ನಗೆ ಪಾಟಲು ಆಗೋದಂತೂ ಗ್ಯಾರಂಟಿ..

ಅಲ್ರಿ ಮಾಸ್ಟ್ರೇ ಸೋಪ್ ತಿಂದು ಬಾಯೆಲ್ಲಾ ನೊರೆ ಮಾಡ್ಕಂಡೀರಲ್ಲರೀ ನಿಮಗೆ ಬುದ್ದಿ ಇದೆಯಾ ಅಂತಾ ಬಯ್ತಾರೆಂದು ಏನೇನೋ ಯೋಚನೆ ಮಾಡುತ್ತಾ  ಕೆಳಗಿಳಿದು ಬಂದು ಒಂದು ಲೋಟ ಬಿಸಿನೀರು ಕುಡಿದೆ. ಯಾರಿಗೂ ಏನು ಹೇಳದಂತೆ ಮನೆಯ ಮುಂದಿರುವ ತುಳಸೀ ಎಲೆಗಳನ್ನು ಕಿತ್ತು ಓಡಾಡುತ್ತಾ ಒಂದೆರಡು  ಎಲೆಗಳನ್ನು ತಿಂದೆ.ಓಡಾಡಿದರೆ  ಹೊಟ್ಟೆಯ ಒಳಗೆ  ನೀರು ಕುಲುಕಿ ಕುಲುಕಿ ಬುರುಗು ಬಂದರೆ ಹೇಗೆ?? ಏ ಏನು ಆಗಲ್ಲ ಬಿಡು ನಾನೇನು ಸೋಪು ತಿಂದಿಲ್ಲ   ಅಂತ ನನಗೆ ನಾನೇ ಧೈರ್ಯ ಮಾಡ್ಕಂಡ್ ಸುಮ್ಮನಾದೆ. 

 ಲೇಖನ ಮುಗಿಸುವ ಮುನ್ನಾ ಸದ್ಯಕ್ಕೇ ನಾನು ಸೋಪು ತಿನ್ನದೇ ಇದ್ದುದರಿಂದ ಬಾಯಲ್ಲಿ ಯಾವ ನೊರೆಯೂ ಬರಲಿಲ್ಲ. ಆದರೆ ಹಾಸ್ಟೆಲ್ ದಿನಗಳಲ್ಲಿ ಈ ಮಿಕಗಳು ಸೋಪು ಕದ್ದೊಯ್ದು ಬಾಯಲ್ಲಿ ಬುರುಗು ಮಾಡಿಕೊಂಡು ತಿನ್ನುತ್ತಿದ್ದುದು ಅಚ್ಚರಿ ಮತ್ತು ವಿಶೇಷ. ಅದೆಷ್ಟು ಬಾರಿ ಇವು ನಮಗೆಲ್ಲಾ ಪುಕ್ಕಟೆ ಮನರಂಜಿಸಿದ್ದಾವೋ ಆದರೆ ಮಾರ್ಜಕದಲ್ಲಿ ಅದೆಂಥಾ ಕಿಕ್ ಅಡಗಿದೆಯೋ ಗೊತ್ತಿಲ್ಲ ಆದರೆ ನಮಗೆ ರಂಜಿಸಿದ್ದು ಸತ್ಯ..

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..