ಕನಸಿನ ಪಯಣ..part-3
ಕನಸಿನ ಪಯಣ..
(The journey in the Dream)
(ಕನಸಿನ ಕಥಾ ಸರಣಿ )
part-3
ಅದು ಶನಿವಾರ ರಾತ್ರಿ.. ನೆಡ್ರಿ ಊರಿಗೆ ಹೋಗದ ಬಹಳ ದಿನಗಳಾಯಿತು.. ಊರಿಗಾದರೂ ಹೋಗಿಬರೋಣ ಎಂದಳು ಆರೋಹಿ..
ಆರುಷಿ: ಸರಿ ಬೆಳಿಗ್ಗೆ ಆರು ಗಂಟೆ ಒಳಗಡೆ ಮನೆ ಬಿಟ್ಟು ರಸ್ತೆಯಲ್ಲಿರಬೇಕು..ಬೇಗ ರೆಡಿ ಅಗಬೇಕು, ಕಡಿಮೆ ಲಗೇಜ್ ಪ್ಯಾಕ್ ಮಾಡಬೇಕು ಎಂದು ಸಮ್ಮತಿ ಸೂಚಿಸಿದ..
ಬಳ್ಳಾರಿ ನಗರದಿಂದ ಆರುಷಿಯ ಊರು ನೂರು ಕಿಮೀ.. ಬಳ್ಳಾರಿ ಹೊರ ವಲಯದ ಹೀರೆಹಾಳ್ ಗೆ ಬಂದ ಮೇಲೆ ಯಾಕೋ ಸಿಂಗಲ್ ನೇಚರ್ ಕಾಲ್ ಆರುಷಿಯನ್ನು ಒತ್ತಡಕ್ಕೀಡು ಮಾಡಿದ್ದರಿಂದ ಹೈವೇಯ ನರ್ಸರಿಗಳ ಪಕ್ಕದಲ್ಲಿಯೇ ಕಾರು ನಿಲ್ಲಿಸಿ ಕೆಳಗಿಳಿದು ಆನಂದಿಸುತ್ತಿಅ ಅಕ್ಕ-ಪಕ್ಕ ನೋಡಿದಾಗ ಒಂದು ಪಪ್ಪಾಯಿ ಗಿಡದಲ್ಲಿ ಎರಡ್ಮೂರು ಕಾಯಿಗಳು.. ಗಿಡ ಬಾಡಿ ಹೋಗಿದೆ ಅದರಲ್ಲಿ ಒಂದು ಸಾಧರಣ ತೆಂಗಿನ ಕಾಯಿ ಗಾತ್ರದ ಒಂದು ಹಣ್ಣು ಹಣ್ಣಾಗಿತ್ತು. ಆರುಷಿಯು ಕೈ ಎತ್ತಿದರೂ ನಿಲುಕದ ಎತ್ತರದಲ್ಲಿ ಇದ್ದುದರಿಂದ ಅಲ್ಲೇ ಸ್ವಲ್ಪ ದೂರದಲ್ಲಿ ಬಿದ್ದಿದ್ದ ಒಂದೆರಡು ಮೊಳ ಉದ್ದದ ಕೋಲಿನಿಂದ ಆ ಹಣ್ಣನ್ನು ಕೆಡವಿ ಕ್ಯಾಚ್ ಹಿಡಿದು full ಹಣ್ಣಾಗಿದ್ದುದರಿಂದ ಸ್ಥಳದಲ್ಲೇ ಕೈಯಿಂದ ಅದುಮಿ ಓಪನ್ ಮಾಡಿದ. ಆರೋಹಿ ಕಾರಿನಿಂದ ನೋಡು ನೋಡುತ್ತಲೇ ಬಾಯಿಗೆ ಹಾಕಿ ತಿನ್ನುತ್ತಾ ಕಾರಿನ ಬಳಿಗೆ ಬಂದ.
ಆರೋಹಿ: ಅಯ್ಯೋ ರೀ.. ಅದರ juice ಎಲ್ಲಾ ಸೋರುತ್ತಿದೆ. ಕಾರಲ್ಲೇ knife ಇದೆ ಅದರಿಂದ cut ಮಾಡಿಕೊಂಡು ನೀಟಾಗಿ ತಿನ್ನಬಹುದಿತ್ತು.. ಹಂಗ್ಯಾಕೆ ತಿನ್ನುತ್ತಿದ್ದೀರಾ ಅಂದಳು.
ಆರುಷಿ:ಅದೇನು ದೊಡ್ಡ ಹಣ್ಣಲ್ಲ ತಗಳೇ ತಿನ್ನು ಎಂದು ಒಂದು ಹೋಳು ಕಿತ್ತುಕೊಟ್ಟ.. ಮೇಲೆ ಮೇಲೆ ತಿಂದು ಸಿಪ್ಪೆಯನ್ನು ಎಸೆಯುತ್ತಾ 'ನೀವು ಕಾಡು ಮನುಷ್ಯ' ಆಗಿರಬೇಕಿತ್ತು. ಕಾಡುಮನುಷ್ಯ ಆಗಿದ್ದರೆ ಹೇಗಿರುತ್ತಿದ್ದರೋ ಅಂದಳು.
ಆರುಷಿ: ಇನ್ನೂ ಖರಾಬು ಆಗಿರುತ್ತಿದ್ದೆ ಆದರೆ ಅಲ್ಪ ಸ್ವಲ್ಪ ಬಟ್ಟೆ ಹಾಕ್ಯಂಡ್ ಇರುತ್ತಿದ್ದೆ ಅಷ್ಟೆ...
ಹೌದಪ್ಪ . ಅದು ಸರಿನೇ..ಹೌದು ನಿಮಗೆ ಶಾಲೆಗೆ ಸೇರಿಸಲು ಅದ್ಯಾರೋ ಅಪ್ಪಾಜಿಗೆ inspire ಮಾಡಿದ್ದರು ಅಂತ ಹೇಳ್ತಿರ್ತೀರಲ್ಲ ಯಾರು?? ಎಲ್ಲಿಯವರು ಅವರು..??
ಅಯ್ಯೋ ಅದು ದೊಡ್ಡ ಕಥೆ ಇದೆ ತಾಳು ಬಂದೆ. ಉಳಿದ ಒಂದೆರಡು ಪೀಸ್ ಮಕ್ಕಳು ಎದ್ದಮೇಲೆ ತಿನ್ನುವರೆಂದು news paper ಲ್ಲಿ ಸುತ್ತಿಟ್ಟು ವಾಟರ್ ಬಾಟಲ್ ಎತ್ತಿಕೊಂಡು ಕೈ ತೊಳೆದು ಹೊರಟರು...
ಮೆಲು ದ್ವನಿಯಲ್ಲಿ ಮ್ಯೂಸಿಕ್ ಪ್ಲೇ ಆಗುತ್ತಿದೆ.
ಸುಮಾರು ಮೂವತ್ತು -ಮೂವತ್ತೆರಡು ವರ್ಷಗಳ ಹಿಂದೆ ಒಮ್ಮೆ ಆರುಷಿಯ ತಂದೆ ತಿಮ್ಮಪ್ಪ ಯಾವುದೋ ಕೆಲಸಕ್ಕೆ ಬ್ಯಾಂಕ್‌ಗೆ ಹೋದಾಗ ಯಾರೋ ಒಬ್ಬ ಅನಾಮಿಕ ಬ್ಯಾಂಕ್ ಅಧಿಕಾರಿ ಎಷ್ಟು ಜನ ನಿನಗೆ ಮಕ್ಕಳು ಏನು ಓದುತ್ತಿದ್ದಾರೆಂದು ಕೇಳಿದ್ದರಂತೆ..
ಅದಕ್ಕೆ ಆರುಷಿಯ ತಂದೆ ತಿಮ್ಮಣ್ಣ ಉತ್ತರವಾಗಿ "ನಾಲ್ಕು ಜನ ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳು ಸ್ವಾಮಿ, ಆದರೆ ಯಾವ ಮಕ್ಕಳು ಶಾಲೆಗೆ ಹೋಗುತ್ತಿಲ್ಲ"..
ಬ್ಯಾಂಕ್ ಅಧಿಕಾರಿ:ಹ್ಹಾ.. ಹ್ಹಾ.. ಆರು ಜನ ಮಕ್ಕಳಿದ್ದೂ ಒಬ್ಬರೂ ಶಾಲೆಗೆ ಸೇರಿಸಿಲ್ಲವೇ??ಬಾ ಬಾ ಇಲ್ಲಿ ಕೂತ್ಕೋ..
ತಿಮ್ಮಪ್ಪ:ಇರಲಿಬಿಡಿ ಸ್ವಾಮಿ..
ಬ್ಯಾಂಕ್ ಅಧಿಕಾರಿ: ಕೂತ್ಕೊ ಕೂತ್ಕೋ..
ಬ್ಯಾಂಕ್ ಅಧಿಕಾರಿ: " ಎಂಥಾ ಅದೃಷ್ಠವಂತಯ್ಯ ನೀನು ಆರು ಜನ ಮಕ್ಕಳಿದ್ದಾರೆ.. ಆದರೆ ಶಾಲೆಗೆ ಒಬ್ಬರನ್ನೂ ಸೇರಿಸದೇ ಇರೋದ್ರಿಂದ ನಿನಗೆ ಧರಿದ್ರ ನೋಡು"..
ಬ್ಯಾಂಕ್ ಅಧಿಕಾರಿಗೆ ಬ್ಯಾಂಕ್ ಅಧಿಕಾರಿ ಅವರಿಗೆ ಗ್ರಾಹಕರ ಅರ್ಥಿಕ ಪರಿಸ್ಥಿತಿಯ ಅರಿವು ಇರುತ್ತದೆ.ನೋಡಯ್ಯ ನೀನ್ನ ಬಟ್ಟೆ ಬರೆ ನೋಡಿದರೆ ಗೊತ್ತಾಗುತ್ತಿದೆ ನೀನು ಬಡವ ಅಂತ.. ಬಡವನ ಕೈಯಲ್ಲಿ ಒಪ್ಪತ್ತಿನ ಊಟ ಎಂಟು ಜನಕ್ಕೆ ಹೊಂದಿಸುವುದು ಕಷ್ಟ ಆಗತ್ತೆ ಅದಕ್ಕೆ ನೀನು ಯಾರನ್ನೂ ಶಾಲೆಗೆ ಕಳುಹಿಸಿಲ್ಲ ಹೌದಾ??
ತಿಮ್ಮಪ್ಪ:ಹೌದು ಸ್ವಾಮಿ..
ಬ್ಯಾಂಕ್ ಅಧಿಕಾರಿ:ನಾಳೆನೇ ಹೋಗಿ ನಿನ್ನ ಮಕ್ಕಳನ್ನು ಶಾಲೆಗೆ ಸೇರಿಸು ಒಂದು ಹೊತ್ತು ಉಪವಾಸ ಇದ್ದರೂ, ಮೆಣಸಿನಕಾಯಿ ಮುದ್ದೆ ತಿಂದರೂ ಮಕ್ಕಳಿಗೆ ಶಾಲೆಗೆ ಕಳುಹಿಸುವುದು ತಪ್ಪಿಸಬೇಡ ನೀನು ಶಾಲೆಗೆ ಸೇರಿಸುವುದಾದರೆ ಈ ಕೆಲಸ ಮಾಡಿಕೊಡುವೆ..
ತಿಮ್ಮಪ್ಪ:ಹ್ಞೂಂ ಸ್ವಾಮಿ. ಆಗಲಿ ಸ್ವಾಮಿ ಖಂಡಿತವಾಗಿಯೂ ನಾಳೆಯೇ ಇಸ್ಕೂಲ್ ಮೇಷ್ಟ್ರಿಗೆ ಕಂಡು ಮಾತಾಡುವೆ ಎಂದದ್ದಕ್ಕೆ 'ಆರು ನೂರು ರುಪಾಯಿ' ಲೋನ್ ಮಾಡಿ ಕೊಟ್ಟಿದ್ದರಂತೆ..
ಜೇಬಲ್ಲಿ ಆರುನೂರು ರೂಗಳನ್ನಿಟ್ಟುಕೊಂಡು ಬತ್ತೀನಿ ಸ್ವಾಮಿ ಎಂದು ಕೈಮುಗಿದು ಮೂರು ಕಿಲೋ ಮಿಟರ್ ನಡೆದುಬರುವಾಗ ತಿಮ್ಮಪ್ಪ ಅವರು ಮಾಸಿದ ಅಂಗಿ ಲುಂಗಿ ಹಾಕಿದ್ದರೂ, ಯಾವಾಗಲೂ ಖಾಲಿ ಇರುತ್ತಿದ್ದ ಕಬ್ಬಿಣದ ಕುರ್ಚಿಯಲ್ಲಿ ನನ್ನನ್ನು ಕೂರಿಸಿ ಮರ್ಯಾದೆಯಿಂದ ನಡೆದುಕೊಂಡರಲ್ಲ ಎನ್ನುವ ಸಂತೃಪ್ತ ಭಾವದಲ್ಲೂ ಎಂಥಾ "ಅದೃಷ್ಠವಂತಯ್ಯ ನೀನು ಆರು ಜನ ಮಕ್ಕಳಿದ್ದಾರೆ.. ಆದರೆ ಶಾಲೆಗೆ ಒಬ್ಬರನ್ನೂ ಸೇರಿಸದೇ ಇರೋದ್ರಿಂದ ನಿನಗೆ ಧರಿದ್ರ ನೋಡು" ಎಂಬ ಮಾತು ಪದೇ ಪದೇ ಎದೆಗೆ ಚುಚ್ಚುತಿತ್ತು..
ಮರುದಿನ ಪಕ್ಕದ ಹಳ್ಳಿಯಾದ ತಿಮ್ಮಣ್ಣನಹಳ್ಳಿ ಯ ಮಾಸ್ಟರ್ ಸಿದ್ದಪ್ಪ ಅಲಿಯಾಸ್ ಕೋಳಿ ಸಿದ್ದಪ್ಪ ಮಾಸ್ಟರ್ ಬಳಿ ಒಂದು ದೊಡ್ಡ ಕೋಳಿ ಹುಂಜ ಹಿಡಿದುಕೊಂಡು ಸ್ಕೂಲ್ ಮೆಟ್ಟಿಲು ಹತ್ತದ ಹದಿನೈದು ವರ್ಷದ ಅಣ್ಣ ವಿರೂಪಾಕ್ಷ ನನ್ನು ಕರೆದುಕೊಂಡು ಶಾಲೆಯ ಬಳಿ ಹೋದ ತಿಮ್ಮಣ್ಣ..
ಸಿದ್ದಪ್ಪ ಮಾಸ್ಟರ್ ದಕ್ಷ ಮೇಲ್ವಿಚಾರಣೆ ಮತ್ತು ಭೋದನಾ ಕೆಲಸದ ಚಾಕಚಕ್ಯತೆ ಇದ್ದರೂ ಅವರ ವೀಕ್ನೆಸ್ ಎಂದರೆ ಕೋಳಿ ಮತ್ತು ಸಾರಾಯಿ..!ದಾಖಲಾತಿ ಮಾಡಿಕೊಳ್ಳಲು ಟಿಸಿ ಪಡೆಯಲು ಹೀಗೆ ಶಾಲೆಯಿಂದ ಏನೇ ಕೆಲಸ ಇದ್ದರೂ ಉಡುಗೊರೆಯಾಗಿ ಒಂದು ಕೋಳಿಯನ್ನು ಕೊಡಲೇಬೇಕಿತ್ತು.ಪೂಜೆಗೆ ಕಾಯಿ ಊದುಬತ್ತಿಯಷ್ಟೆ ಅಗತ್ಯದಂತೆ ಸಿದ್ದಪ್ಪ ಮಾಸ್ಟರ್ ರಿಂದ ಕೆಲಸ ಆಗಬೇಕಾದರೆ ಕೋಳಿ ಅಗತ್ಯವಾಗಿ ಬೇಕಾಗಿತ್ತು.ಅದಕ್ಕೆ ಇವರು ಕೋಳಿಸಿದ್ದಪ್ಪ ಮೇಷ್ಟ್ರು ಅಂತಾನೇ ಚಿರ ಪರಿಚಿತ..
ಇವರಿಂದ ನೇರವಾಗಿ ಆರುಷಿಯ ಅಣ್ಣ ಏಳನೇಯ ತರಗತಿಗೆ ದಾಖಲು ಮಾಡಿಕೊಳ್ಳುವ ಮೂಲಕ ಅವರ ಶಿಕ್ಷಣಕ್ಕೆ ಅವಕಾಶವನ್ನು ಮಾಡಿ ಕೊಟ್ಟರು. ಹಂಗೇ ನಾನೂ ಶಾಲೆಗೆ ಹೋಗುವ,ಕಲಿಯುವ ಹಾಗೆ ಆಯಿತು...ಇಲ್ಲಾ ಅಂದಿದ್ರೆ ಆರುಷಿಯು ದನಕರುಗಳ ಸಗಣಿ ಬಾಚುವುದು,ಅವುಗಳಿಗೆ ಹುಲ್ಲುತರುವುದು,ದನಕಾಯುವುದು ಕೂಲಿನಾಲಿ ಮಾಡುವುದೇ ಕೆಲಸ ಆಗಿರುತ್ತಿತ್ತು. ನೀನು ಇರ್ತಿರಲಿಲ್ಲ ಈ ಕಾರು ಇರುತ್ತಿರಲಿಲ್ಲ..
ಆರೋಹಿ:ಒಳ್ಳೆಯ ಸಿದ್ದಪ್ಪ ಮಾಸ್ಟರ್..ಹೋಗ್ಲಿ ಬಿಡಪ್ಪ ಕೋಳಿ ಕೊಟ್ಟರೂ ಚಿಂತೆಯಿಲ್ಲ ಏನೋ ಅನುಕೂಲ ಮಾಡಿಕೊಟ್ಟರಲ್ಲಾ ಇಲ್ಲ ಅಂದಿದ್ರೆ..?? ಇಷ್ಟು ಕಥೆ ಹೇಳುವ ಹೊತ್ತಿಗೆ ನಾವು ಮನೆಗೆ ತಿಮ್ಮಣ್ಣನಹಳ್ಳಿಯಿಂದಲೇ ಹಾದು ಹೋಗಬೇಕಾಗಿದ್ದರಿಂದ ಹಳೇ ಶಾಲೆ ಆ ಸಿದ್ದಪ್ಪ ಮಾಸ್ಟರ್ ಇರುತ್ತಿದ್ದ ಮನೆಯನ್ನು ತೋರಿಸಿ ಮನೆಯನ್ನು ತಲುಪಿದೆವು.
ಅಮ್ಮ ಮತ್ತು ಅತ್ತಿಗೆ ಗೋಣಿ ಸೊಪ್ಪನ್ನು ಸೋಸುತ್ತಿದ್ದರು. ಆರೋಹಿ ನೇರವಾಗಿ ತಾನು ಸೊಪ್ಪು ಹಿಡಿದುಕೊಂಡು ಕ್ಲೀನ್ ಮಾಡಲು ಶುರುಮಾಡಲು ಆರುಷಿ ವಾಡಿಕೆಯಂತೆ ಚಿಕ್ಕ ಮಗಳನ್ನು ಎತ್ತಿಕೊಂಡು ತೋಟದ ಕಡೆ ಹೋದ... ಆರುಷಿಯ ತಮ್ಮ ಪ್ರದ್ಯಮ್ನ ಕೃಷಿಹೊಂಡದ ಮೇಲೆ ನಿಂತಿದ್ದ. ಮಗುವನ್ನು ಇಸ್ಕೊಂಡ.. ಆರುಷಿ ಐವತ್ತು ಅರವತ್ತು ಅಡಿದೂರದಲ್ಲಿ ನಿಂತು ಆರುಷಿಯೇ ಹಾಕಿ ಬೆಳೆಸಿದ್ದ ಖರ್ಜೂರದ ಗಿಡವನ್ನು ನೋಡುತ್ತಿದ್ದ.. ಹಿಂತಿರುಗಿ ನೋಡಿದರೆ ಮಗಳು ಲಭನ್ಯ ಕೃಷಿ ಹೊಂಡದ ತುದಿಯಲ್ಲಿ ಕೂತಿದ್ದಾಳೆ.
ಆರುಷಿ:ಎಯ್...ಲೇ...ಎನಾ..?? ಆರುಷಿ ಕೂಗಿದ ಶಬ್ದಕ್ಕೆ ಹೊಂಡದ ತೂಬು ಮುಚ್ಚುತ್ತಿದ್ದ ಬಗ್ಗಿ ಕೊಂಡೇ ತಲೆ ಎತ್ತಿ ನೋಡಿದ..
ಅಲ್ನೋಡು ಪಾಪು ಪಾಪು...!!
ಇಬ್ಬರೂ ನೋಡುತ್ತಲೇ ಇದ್ದೇವೆ.. ಸಣ್ಣ ಮಗಳು ನೀರು ಮುಟ್ಟಲು ಬಂದು ಏಳೆಂಟು ಅಡಿ ಆಳದ ಹೊಂಡಕ್ಕೆ ತುಪಕ್ಕನೇ ಜಾರಿ ಬಿದ್ದೇ ಬಿಟ್ಟಳು!!
ಅವನೂ ಅಲ್ಲಿಂದನೇ ನೀರಲ್ಲಿ ಹಾರಿ ಡೈವ್ ಹಾಕಿದ. ಆರುಷಿ ನಾಲ್ಕೈದು ಸೆಕೆಂಡ್ ಗಳಲ್ಲಿ ಹೊಂಡದ ಬಳಿ ರಸದಿಂದ ಓಡಿ ಬಂದ.. ಪಾಪು ಹಿಡಿಯಲು ನೀರಿಗೆ ಬಿದ್ದ ಆರುಷಿಯ ತಮ್ಮ ಪ್ರದ್ಯುಮ್ನ ಬರಿ ಗೈಯಲ್ಲಿ ನೀರನ್ನು ಉಗುಳುತ್ತಾ ಮೇಲೆದ್ದ.! ನೀರು ಕೆಸರಾಗಿ ಏನು ಕಾಣದಾಯಿತು. ಅಷ್ಟೊತ್ತಿಗೆ ಆರುಷಿಯೂ ನೀರಿಗೆ ಇಳಿದಿದ್ದ. ನಿಲ್ಲು ನಿಲ್ಲು ಗುಳ್ಳೆ ಬರತ್ತೆ ನೋಡು.. ಅಲ್ಲಿ ಮುಳುಗಬೇಕು ಎಂದೇಳಿದ..
ಒಂದು ಸಣ್ಣ ಗುಳ್ಳೆ ಬಂದ ತಕ್ಷಣವೇ ಇಬ್ಬರೂ ನೀರಲ್ಲಿ ಮುಳುಗಿ ಮಗುವನ್ನು ಎತ್ತಿಕೊಂಡರೇ ಮಗುವಿನ ಮೈಯ್ಯಿಯೂ ಒದ್ದೆಯಾಗಿಲ್ಲ.. ಪ್ರದ್ಯುಮ್ನನನು ಅವನ ತಲೆಗೆ ಬಿಗಿದಿದ್ದ ಟವೆಲ್ ಹಾಸಿ ಪಾಪು ಮಲಗಿಸಿ ಒತ್ತು ಒತ್ತು ಹೊಟ್ಟೆ ಹೊತ್ತು ಅಂತ ಕೂಗುತ್ತಿದ್ದಾನೆ. ಆರುಷಿಗೆ ಆತಂಕದ ನಡುವೆಯೂ ಮೈ ಕೂಡ ನೆನೆದಿಲ್ಲಂದ್ರೆ ಅದ್ಯಾಕ್ ಒತ್ತಬೇಕು ಅಂತ ಒಂದೆರಡು ಸೆಕೆಂಡ್ ಆರುಷಿ ಯೋಚನೆ ಮಾಡುತ್ತಿರುವಾಗ ಮನೆಯ calling bell ರಿಂಗ್ ಆಯಿತು. ಬಾಗಿಲು ತೆರೆದು ನೋಡಿದರೆ ಹಾಲು ಹಾಕುವ ನಾಗಣ್ಣ..!ಏನ್ ಸಾರ್ ಸಂಡೇ ಅಂತ ಜಗ್ಗೀ ಮಕ್ಕಂಬಿಟ್ಟೀರಾ ಅಂದ..! ಏನೂ ಮಾತಾಡದೇ ಒಳಗೆ ಬಂದವನೇ ಯಥಾರೀತಿ ಇದನ್ನು ಗೀಚಿ ಇಟ್ಟೆ.
(ಮಗು ನೀರಿಗೆ ಬಿದ್ದಿದ್ದು ಕನಸಾದರೂ ಉಳಿದ ಮಾಹಿತಿಯೆಲ್ಲಾ ಕನಸಿನಲ್ಲೇ ಹೇಳಿದ ವಾಸ್ತವ..)
✍️ ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ