'ಕಿಟ್ಟ' ಎಂಬ ಕೆಲಸವ ನಂಬಿ ಕೆಟ್ಟವರು...
'ಕಿಟ್ಟ' ಎಂಬ ಕೆಲಸವ ನಂಬಿ ಕೆಟ್ಟವರು..
2015 ನೇ ಸಾಲಿನಲ್ಲಿ ನನ್ನ ಮೊದಲಿದ್ದ ರಾಜಾಪುರ ಶಾಲೆಯಿಂದ ಪಕ್ಕದ ದೊಡ್ಡ ಅಂತಾಪುರದ ಶಾಲೆಗೆ ವರ್ಗಾವಣೆಯನ್ನು ಪಡೆದುಕೊಂಡೆ. ನಮ್ಮದು ಜಿಂದಾಲ್,ಕುಡಿತಿನಿ ಥರ್ಮಲ್ ಪವರ್ ಸ್ಟೇಷನ್ ನಂತಹ ಬೃಹತ್ ಕೈಗಾರಿಕೆಗಳ ಜೊತೆಗೆ ನೂರಾರು ಸಣ್ಣಪುಟ್ಟ ಕೈಗಾರಿಕೆಗಳ ನೆರಹೊರೆಯ ಹಳ್ಳಿಗಳಾದ್ದರಿಂದ ಇಲ್ಲಿನ ಬಹುತೇಕರು ಕೈಗಾರಿಕೆ ಆಧಾರಿತ ಉದ್ಯೋಗ ನಂಬಿ ಬದುಕುತ್ತಿರುವವರು.
ನಮ್ಮ ಶಾಲಾ ಮಕ್ಕಳ ಕೆಲ ಪೋಷಕರನ್ನು ಶಾಲೆಗೆ ಮಕ್ಕಳ ಪ್ರಗತಿಯಬಗ್ಗೆ ಚರ್ಚಿಸಲೊ/ಸರ್ಕಾರದ ಯೋಜನೆಗಳನ್ನು ತಲುಪಿಸಲು ಪೋಷಕರನ್ನು ಕರೆಸಿದರೆ ಯಾವಾಗಲೂ ಮಕ್ಕಳದು ಒಂದೇ ಮಾತು ಅದೆಂದರೆ "ಮನೆಯಲ್ಲಿ ಅಪ್ಪ -ಅಮ್ಮ ಯಾರೂ ಇಲ್ಲ ಕಿಟ್ಟದ ಕೆಲಸಕ್ಕೆ ಹೋಗಿದ್ದಾರೆ".ಎಂಬುದು.. ಆಗ ಕೆಲವು ದಿನಗಳವರೆಗೆ ಎಲ್ಲೋ ಕೆಲಸಕ್ಕೆ ಹೋಗಿರುತ್ತಾರೆ ಹೊಟ್ಟೆ ಪಾಡು ನಾಳೆಯೋ ನಾಡಿದ್ದೋ ಬರುತ್ತಾರೆ ಎಂಬ ಆಶಾ ಭಾವನೆ ಇತ್ತಾದರೂ ಕೆಲವು ಪೋಷಕರು ಮಕ್ಕಳ ಬಹುಮುಖ್ಯವಾದ ಎಂದದ್ದೇ ಕೆಲಸ ಇದ್ದರೂ ಆ ತಂದೆ ತಾಯಿಗಳು ಶಾಲೆಗೆ ಶಿಕ್ಷಕರನ್ನು ಕಾಣಲು ಬರಲೇ ಇಲ್ಲ.. ಕೊನೆಗೆ ಮಕ್ಕಳು ಆಗಾಗ್ಗ ಗೈರು ಹಾಜರಿಯಾದಾಗ ಇತರೆ ಮಕ್ಕಳ ಜೊತೆ ಕರೆದುಕೊಂಡು ಮನೆಗೆ ಹೋದರೆ ಅಲ್ಲಿಯೂ ಅವರೂ ಸಿಗಲೇ ಇಲ್ಲ.. ಕೆಲವು ಹಿರಿಯ ಹಳೇ ವಿದ್ಯಾರ್ಥಿಗಳನ್ನೋ ಅಥವಾ ಬೇರೆಯವರನ್ನು ಕೇಳಿದರೆ "ಸಾರ್ ಅವರು ಕಿಟ್ಟಕ್ಕೆ ಹೋಗಿದ್ದಾರೆ ಯಾವಾಗ ಬರ್ತಾರೋ ಯಾವಾಗ ಹೋಗ್ತಾರೋ ಗೊತ್ತಿಲ್ಲ... ಬೆಳಗ ಮುಂಜಾಲೆ ನಾಲ್ಕೈದು ಗಂಟೆಗೆ ಹೋಗಿಬಿಡ್ತಾರೆ" ಅಂದರು...
ಪಿ ಯೂ ಸಿ ನಂತರ ನಾನೂ ಬೆಂಗಳೂರಿನ ಫ್ಯಾಕ್ಟರಿ ಯಲ್ಲಿ ಕೆಲಸಕ್ಕೆ ಸೇರಿದ್ದೆ. ಆಗ ನನಗೆ ಈ ಲೇಬರ್ಸ್ ರೂಲ್ಸ್ ಮತ್ತು ಡ್ಯೂಟೀಸ್ ಬಗ್ಗೆ ಸ್ವಲ್ಪ ಮಟ್ಟಿಗೆ ಮಾಹಿತಿ ಬಲ್ಲೆ.. ಸೊ ಮುಂಜಾನೆ ನಾಲ್ಕು ಗಂಟೆಗೆ ಯಾವ ಫ್ಯಾಕ್ಟರಿ ಶುರು ಮಾಡುವರೋ ಏನೋ ಅಥವಾ ಇವರು ಆರು ಗಂಟೆ ಶಿಪ್ಟ್ ಕೆಲಸಕ್ಕೆ ಇಷ್ಟೊತ್ತಿಗೆ ಮನೆ ಬಿಡುವರೇನೋ ಎಂದುಕೊಂಡು ಹಾಗೆ ಸುತ್ತಮುತ್ತಲಿನ ಫ್ಯಾಕ್ಟರಿ ಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದಾಗ ನನಗೆ ತಿಳಿದಿದ್ದು ಸ್ಟೀಲ್ ದಿಗ್ಗಜ ಕಂಪನಿಯೊಂದರಲ್ಲಿ ಲೇಬರ್ ಅಸೋಸಿಯೇಷನ್ ಮಾಡಿಕೊಂಡು ಹೊರಾಟ ಮಾಡುವ ಆಗಿಲ್ಲ. Factory rules is final ಎಂಬ ಕರಾಳ ಸತ್ಯ..!
ಹೀಗೆ ಶಾಲೆ ಬಿಟ್ಟ ವಿದ್ಯಾರ್ಥಿಗಳ ಮತ್ತು ಅವರ ಪೋಷಕರ ಅನ್ವೇಷಣೆಗೆ ಮಕ್ಕಳೊಂದಿಗೆ ಊರೊಳಗೆ ಹೋದಾಗ ಒಂದು ದಿನ ಮಕ್ಕಳು "ಸರ್ ಸರ್ ..ಪ್ರಭಾಕರನ ಅಪ್ಪ ಕಿಟ್ಟದಲ್ಲಿ ಬಿದ್ದು ಎದೆ ಕೈ ಮತ್ತು ತೊಡೆ ಗಾಯ ಆಗಿ ಮನೆಯಲ್ಲೇ ಇದ್ದಾನೆ ಸಾರ್..."ಎಂದರು.
ಹೌದಾ?? ಹಾಗಾದರೆ ನಡೀರಿ ಮೊದಲು ಅವರ ಮನೆಗೇ ಹೋಗಾಣ ಎಂದು ಅವರ ಮನೆಯ ಕಡೆ ಹೊರಟೆವು.ಜನಾತಾ ಮನೆಯ ಒಳಗಡೆ ಎದೆ ಮತ್ತು ಬುಜದ ಬಾಹುಗಳು ತರಚಿದ ಗಾಯ.. ಆದರೆ ತರಚಿದ ತೀವ್ರತೆ ಸ್ವಲ್ಪ ಜಾಸ್ತಿ ಯೇ ಇತ್ತು.. ಆದ ಗಾಯಕ್ಕೆ ಬೆಟ್ನವೆಟ್ ointment ಹಚ್ಚಿ ಬೆನ್ನು ಗೋಡೆಗೆ ಆನಿಸಿ ಟವೆಲ್ನಿಂದ ನೊಣ ಕುಳಿತುಕೊಳ್ಳದಿರುವಂತೆ ಬೀಸಣಿಗೆಯಂತೆ ಬೀಸಿಕೊಳ್ಳುತ್ತಿದ್ದ..
ಹೊನ್ನೂರಸ್ವಾಮಿ ನೀವೇನಾ??
ಹ್ಞೂ ಸಾ...
ಏನ್ಮಾಡ್ಕೊಂಡೀಯಪ್ಪ ಏನಿದು ಗಾಯ ಇಷ್ಟೊಂದು ಆಗಿದೆಯಲ್ಲ??
ಹ್ಞು ಸಾ.. ಮೊನ್ನೆ ಕಿಟ್ಟದಲ್ಲಿ ಕಿಟ್ಟ ಆರಿಸುವಾಗ ನೂಕು ನುಗ್ಗಲಿನಲ್ಲಿ ಆಯ ತಪ್ಪಿ ಗುಡ್ಡದಂತಹ ಮಣ್ಣಿನ ರಾಶಿಯಿಂದ ಜಾರಿ ಬಿದ್ದೆ ಸಾ..
ಅಯ್ಯಯ್ಯೋ... ತ್ಚೊ.ತ್ಚೊ... ಎಂಥಾ ಕೆಲಸ ಮಾಡಿಕೊಂಡಿಯಾಲ್ಲಪ್ಪ.. ಎಲ್ಲೆಲ್ಲಿ ಆಗಿದೆ ಗಾಯ ಎಂದು ಮೈ ಮೇಲೆ ಹಾಕಿದ್ದ ಬಟ್ಟೆಯ ಸರಿಸಿ ನೋಡಿ.. ಮೊದಲು ಆಸ್ಪತ್ರೆಗೆ ಹೋಗು ಎಂದೆ..
ಹೋಗಿ ಬಂದೆ ಸಾರ್.. ಈ ಮುಲಾಮು ಕೊಟ್ಟಾರೆ..
ಹ್ಞು.. ದಿನಕ್ಕೆ ಎರಡು ಬಾರಿ ಹಚ್ಚಿಕೋ.. ಗಾಯದ ಮೇಲೆ ನೊಣ ಕೂರಾಕೆ ಬಿಡಬೇಡ.. ಸೊಳ್ಳೆ ಪರದೆಯಾದರೂ ಕಟ್ಟಿಕೊಂಡು ಅದರಳೊಗೆ ಇರು ಎಂದೆ..
ಸೊಳ್ಳೆಪರದೆ ಎಂದರೆ ಹೊನ್ನೂರಸ್ವಾಮಿಗೆ ಅರ್ಥ ಆಗಲಿಲ್ಲ..ಪರದೆ ಎಂಬ ಪದದ ಸುಳಿವಿನಿಂದ "ಚುಕ್ಕಾಡಿ ಪರ್ದೆ ಏನ್ ಸಾ..??
ಹ್ಞೂಂ ನೋಡು.. ಅದೇ ಚುಕ್ಕಾಡಿ ಪರದೆಯೊಳಗೆ ಇರು ಎರಡು ಮೂರು ದಿನ ಅಂದೆ... ಅದೇನ್ ಆಗಲ್ಲ ಸಾ.. ಹೋಗ್ತಾತೆ ಎರಡು ದಿನ ಮತ್ತೆ ಏನ್ ಮಾಡದು.. ಗ್ರಚಾರ ನೋವು ತಿನ್ಬೇಕು ಅಂತ ಐತೆ ತಿನ್ಬೇಕು..
ಪ್ರಭಾಕರ ಎಲ್ಲಿ??ಅವನು ಯಾಕೆ ಸರಿಯಾಗಿ ಶಾಲೆಗೆ ಬರಂಗಿಲ್ವಲ್ಲ??
ಸಾ.. ಇವತ್ತು ಅವನು ಅವರಮ್ಮನ ಹಿಂದೆ ಕಿಟ್ಟಕ್ಕೆ ಹೋಗಿದ್ದಾನೆ..ನನಗೂ ಬೇರೆ ಹಿಂಗಾಗೇತೆ ಒಂದೆರಡ್ಮೂರು ದಿನ ಸಾ.. ಕಳುಸ್ತೀನಿ..
ಅವನೇನು ಕೆಲಸ ಮಾಡಕೆ ಹೋಗ್ಯಾನೆ ಅಲ್ಲಿ??ಪ್ಯಾಕ್ಟ್ರಿ ಒಳಗೆ ಹತ್ತು ಹನ್ನೆರಡು ವರ್ಷದ ಸಣ್ಣ ಹುಡುಗರನ್ನು ಕರೆದುಕೊಳ್ಳುತ್ತಾರಾ??
ಅದು ಪ್ಯಾಕ್ಟರೀ ಅಲ್ಲ ಸಾ..ಕಿಟ್ಟದಾಗೆ.. ಅದೆಲ್ಲಾ ಸ್ಟೀಲ್ ಕಂಪನಿದೇ.. ಅಲ್ಲಿ ಜನ ಜಾತ್ರೆ ಸಾರ್.. ಹೆಣ್ಮಕ್ಕಳು ಗಂಡು ಮಕ್ಕಳು.. ಹುಡುಗರು ಎಲ್ಲರೂ ಬರ್ತಾರೆ...ಬಾರಿ ಜನ ..ಬಾರಿ ಜನ..
ಅಲ್ಲಾ ಹೊನ್ನೂರಸ್ವಾಮಿ ಕಿಟ್ಟಕ್ಕೆ ಹೋದ ನಿನಗತಿನೇ ಹಿಂಗಾಗಿದೆ.. ಅವನು ಸಣ್ಣ ಹುಡುಗ ಅವನೇನು ಮಾಡ್ತಾನಪ್ಪ ಅಲ್ಲಿ ಹೋಗಿ??ಅವನು ಆರನೇ ತರಗತಿ.. ಸರಿಯಾಗಿ ಶಾಲೆಗೆ ಬರ್ತಾ ಇಲ್ಲ.. ಊರಾಗೆ ಇರ್ತಾನಂತ ಹುಡುಗರು ಹೇಳ್ತಾರೆ. ಅವನ ಹಂಗ್ಯಲ್ಲ ಕೆಲಸಕ್ಕೆ ಕಳುಹಿಸಬಾರದು ಅವನು ಶಾಲೆಯಲ್ಲಿರಬೇಕು ಎಂದೆಲ್ಲಾ ಬುದ್ದಿ ಹೇಳಿ, ಮಕ್ಕಳು ಓದಿದ್ರೆ ಉದ್ದಾರ ಆಗ್ತರೆ ಸೋಮವಾರದಿಂದ ಕಳಿಸು ನೀನು ಹುಷಾರು ಎಂದು ಹೇಳಿ ಮತ್ತೆ ಎರಡ್ಮೂರು ಇಂತಹ ಗೈರು ಹಾಜರಿಯಾಗುವ ಮಕ್ಕಳ ಮನೆಗೆ ಸುತ್ತಾಡಿ ಶಾಲೆಗೆ ಹೋದೆ..ಇದು ಕೇವಲ ಒಂದು ಉದಾಹರಣೆ ಅಷ್ಟೆ..ತೋರಣಗಲ್ಲು ಸುತ್ತಾಮುತ್ತಾ ಕೈಗಾರಿಕಾ ವಲಯದ ಪ್ರತಿಯೊಂದು ಹಳ್ಳಿಯಲ್ಲೂ ಇಂತಹ ಸಾವಿರಾರು ಪ್ರಕರಣಗಳು ಕಾಣಸಿಗುತ್ತಾವೆ. ಇದರಿಂದ ವರ್ಷಕ್ಕೆ ಹತ್ತಾರು ಬಡಜಿವಗಳು ಬಲಿಯಾಗುವುದರ ಜೊತೆಗೆ ನೂರಾರು ಮಕ್ಕಳ ಭವಿಷ್ಯ ಕಿಟ್ಟಿಗಂಟಿಕೊಂಡು ಕಮರಿಹೋಗುತ್ತಿದೆ.
ಕಿಟ್ಟ ಎಂದರೇನು??
ಈ ಕಿಟ್ಟ ಎಂಬ ಪದವನ್ನು ನಾವು ಹತ್ತನೆಯ ತರಗತಿಯ ವಿಜ್ಞಾನದ ಪುಸ್ತಕದಲ್ಲಿ ಊದು ಕೊಲುಮೆಯ ಚಿತ್ರ ಬರೆದು ಗುರುತಿಸಿ ಓದಿದ ನೆನಪು. ದಿನಕ್ಕೆ ಸಾವಿರಾರು ಮೆಟ್ರಿಕ್ ಟನ್ ಗಳಷ್ಟು ಕಬ್ಬಿಣವನ್ನು ಉತ್ಪಾದನೆ ಮಾಡುವ ಕಂಪನಿಗಳು ಉತ್ಪಾದನೆಯ ಎರಡರಷ್ಟು ಖನಿಜತ್ಯಾಜ್ಯಗಳನ್ನು ಅದೇ ಕಂಪನಿಯ ಸುಪರ್ದಿಯ waste dump ಯಾರ್ಡ್ ನಲ್ಲಿ ದೊಡ್ಡ ದೊಡ್ಡ ಬೆಟ್ಟಗಳ ರಾಶಿಯಂತೆ ಸುರಿಯುತ್ತಾ ಬರುತ್ತಾರೆ. ಈ ಕಿಟ್ಟದ ತ್ಯಾಜ್ಯದಲ್ಲಿ ಹಿತ್ತಾಳೆ,ತಾಮ್ರ,ಮ್ಯಾಂಗನೀಸ್, ಸ್ಟೀಲ್,ಕಬ್ಬಿಣ ದ ಕಚ್ಚಾ ಲೋಹಗಳು ಒಂದು ಗ್ರಾಂ ನಿಂದ ನೂರು ಕಿಲೋ ಗ್ರಾಂ ವರೆಗೆ ಲೋಹಗಳು ಸಿಗುತ್ತಾವೆ. ಕೂಲಿಕಾರರ ಅದೃಷ್ಟ ಚೆನ್ನಾಗಿದ್ದರೆ ನಲವತ್ತು ಐವತ್ತು ಕೆಜಿಯಷ್ಟು ಗಾತ್ರದ ಲೋಹದ ಗಟ್ಟಿಗಳು ಸಿಗುತ್ತಾವೆ. ಆದರೆ ಇವು 200 -300° ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿ ಇರುವ,ಕೆಲವೊಮ್ಮೆ ದ್ರವರೂಪದ ಜ್ವಾಲಾರಸದಂತಹ ಸ್ಥಿತಿಯಲ್ಲಿ ಸಿಗುತ್ತಾವೆ. ಇವುಗಳನ್ನು ಬರೀಗೈಯಿಂದ ಮುಟ್ಟಲೂ ಅಸಾಧ್ಯ. ಆದರೆ ನೂರಾರು ಮೀಟರ್ ಎತ್ತರದಲ್ಲಿ ದೊಡ್ಡ ದೊಡ್ಡ ಲಾರಿಗಳಿಂದ ಕಿಟ್ಟ ಸುರಿಯುವುದನ್ನೇ ಸಾವಿರಾರು ಜನಗಳು ರಣಹದ್ದುಗಳಂತೆ ಕಾಯುತ್ತಿದ್ದವರು ಕಿಟ್ಟದ ರಾಶಿ ಲಾರಿಯಿಂದ ಕೆಳಗೆ ಸುರಿಯುತ್ತಿರುವಾಗ ಜನರೆಲ್ಲಾ ಒಮ್ಮೆಲೇ ಮುಗಿಬಿದ್ದು,ನಾನು ಮೊದಲು ನೋಡಿದ್ದು ಅದು ನನ್ನದು.. ಏಯ್ ಏಯ್.. ಎಂದು ಕುಸ್ತಿಯಾಡಿಕೊಂಡು ಸಿಕ್ಕ ಸಿಕ್ಕ ವಸ್ತುಗಳನ್ನು ರಾಶಿ ಹಾಕಿಕೊಳ್ಳಬೇಕು.ಬರುವಾಗ ಅಲ್ಲೇ ಇರುವ ಗುಜರಿ ಅಂಗಡಿಗಳಿಗೆ ಮಾರುವರು. ಕಿಟ್ಟದಲ್ಲಿ ಕೆಲವೊಮ್ಮೆ ಅತಿ ಬಿಸಿಯಾದ ಜ್ವಾಲಾರಸದಂತಹ ವಸ್ತುಗಳನ್ನು ಪೈಪೋಟಿ ಮೇಲೆ ಓಡಿ ಹೋಗಿ ಅವುಗಳನ್ನು ತೆಗೆದುಕೊಳ್ಳುವಾಗ ಅದರಲ್ಲಿ ಬೀಳುವುದು ಏಳುವುದು ಸಹಜವಾಗಿಯೇ ಇರುತ್ತದೆ.ಇಂತಹ ಸಂದರ್ಭಗಳಲ್ಲಿ ಸಾವು ಕೂಡ ಬಂದರೂ ಅಚ್ಚರಿಯಿಲ್ಲ. ಹೀಗೆ ನೂರಾರು ಬಡ ಕೂಲಿ ಕಾರ್ಮಿಕರು ಕಿಟ್ಟದ ಜ್ವಾಲೆಗೆ ಬಿದ್ದು ಬಲಿಯಾಗಿದ್ದಾರೆ.
ಒಂದೆರಡು ರುಪಾಯಿ ಅಧಿಕ ದುಡಿಯಬಹುದು ಎನ್ನುವ ಆಸೆಗೆ ಅದೆಷ್ಟೊ ಅಮಾಯಕ ಬಡ ಜೀವಗಳು ಇಂದಿಗೂ ಹಗಲು ರಾತ್ರಿ ಎನ್ನದೇ ಬೆಳಿಗ್ಗೆ ಮೂರ್ನಾಲ್ಕು ಗಂಟೆಗೆ ಎದ್ದು ಹೋಗುತ್ತಾರೆ.ಕಣ್ಣಿಗೆ ನಿದ್ರೆ ಆಹಾರವಿಲ್ಲದ ಕಿಟ್ಟದ ಶ್ರಮದ ಒಂದು ಮುಖ ಬಡ ತಂದೆ ತಾಯಿಯದಾದರೆ ಇನ್ನೊಂದು ಮುಖ ಅಸಹಾಯಕ ಸ್ಥಿತಿಯಲ್ಲಿರುವ ಯಾರೂ ಹೇಳುವವರು ಕೇಳುವವರು ಇಲ್ಲದ ಅವರ ಮಕ್ಕಳದು ಇನ್ನೊಂದು ಕರಾಳ ಮುಖ!ಹೌದು.. ದಿನ ಬೆಳಗಾಗೊದ್ರೊಳಗೆ ಈ ಮಕ್ಕಳು ಮಲಗಿರುವಾಗಲೇ ಏನೋ ಒಂದಿಷ್ಟು ಬೇಯಿಸಿಟ್ಟು ಎದ್ನೊ ಬಿದ್ನೊ ಎಂದು ಕಿಟ್ಟದ ಕೆಲಸಕ್ಕೆ ಓಡಿ ಹೋದಮೇಲೆ ಈ ಮಕ್ಕಳು ಯಾವಾಗಲೋ ಎದ್ದೇಳುವರು,ಯಾವಾಗಲೋ ಒಮ್ಮೆ ಊಟ ಮಾಡಿದ ಪರಿಣಾಮ ಅವರನ್ನು ಅಪೌಷ್ಟಿಕತೆ ಕಾಡುತ್ತಿದ್ದರೆ ಬಹುಮುಖ್ಯವಾಗಿ ಇಂತಹ ಮಕ್ಕಳು ವಿಮುಖ ಆಗುತ್ತಿರುವುದು ಕಲಿಕೆಯಿಂದ. ಮನೆಯಲ್ಲಿ ಹೇಳುವವರು ಕೇಳುವವರು ಇಲ್ಲದೇ ಸ್ವೇಚ್ಚಾಚಾರದ ಬದುಕು ಮಕ್ಕಳದ್ದಾಗಿದೆ. ಯಾವಾಗಲೋ ಒಮ್ಮೆ ಶಾಲೆಗೆ ಬರುವ ಮಕ್ಕಳು. ಮಕ್ಕಳು ಕಾಡದೇ ಇರಲಿ ಎಂದು ಪ್ರತಿದಿನ ಹತ್ತು ಹದಿನೈದು ರೂಪಾಯಿಗಳಷ್ಟು pocket money ಕೊಡುವುದು ಮಕ್ಕಳು ಕಲಿಕೆಯಿಂದ ಹೊರಗುಳಿದು ದುಷ್ಟರ ಸಹವಾಸ ಮಾಡಿ ಚಿಕ್ಕವಯಸ್ಸಿನಲ್ಲೇ ದುಶ್ಚಟಗಳ ದಾಸರಾಗುತ್ತಿರುವುದು,ಅನಕ್ಷರತೆ,ನಿರುದ್ಯೋಗ,ಮದ್ಯವ್ಯಸನ,ಬಾಲ್ಯವಿವಾಹದಂತಹ ಸಾಮಾಜಿಕ ಸಮಸ್ಯೆಗಳು ಜನನ ಆಗುತ್ತಿರುವುದು ಇಂತಹ ಸನ್ನಿವೇಶಗಳಲ್ಲೇ..ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಟೀಲ್ ರಪ್ತು ಮಾಡುವ ಕಂಪನಿಗಳು ಅದ್ಯಾಕೋ ಈ ಕಿಟ್ಟವನ್ನು ಸುರಿಯುವ yard ಗಳಿಗೆ ಮಾನವ ಸಂಚಾರ ನಿಷೇಧಿಸುವಲ್ಲಿ ವಿಫಲರಾಗಿದ್ದಾರೆ. ಈ ಬೃಹತ್ ಕಂಪನಿಗಳು ಇನ್ನೂ ಅಧಿಕ ಸಂಖ್ಯೆಯಲ್ಲಿ ಉದ್ಯೋಗ ಸೃಜಿಸಿ ಸುತ್ತಮುತ್ತಲಿನ ಜನರ ಆರೋಗ್ಯ ಸ್ಥಿತಿಯನ್ನು ಕಾಪಾಡಬೇಕು.ಅಲ್ಲದೇ ಜನರೂ ಕೂಡ ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವಂತಿರಬೇಕು.ಒಂದೆರಡು ರೂಪಾಯಿಯ ಆಸೆಗೆ ಬಿದ್ದು ಅಪಾಯಕಾರಿ ಪ್ರಾಣಕ್ಕೆ ಕುತ್ತು ತರುವಂತಹ ವಾತಾವರಣದಲ್ಲಿ ಕೆಲಸಮಾಡುವಂತಾಗಬಾರದು.ಜೊತೆಗೆ ಮಕ್ಕಳ ಶಾಲೆಗೆ ಪ್ರತಿದಿನ ಕಳುಹಿಸಿ,ಮಕ್ಕಳ ಉಜ್ವಲ ಭವಿಷ್ಯದ ಕಡೆ ಗಮನ ಕೊಡುವುದು ಪ್ರತಿಯೊಬ್ಬ ತಂದೆ ತಾಯಿಯ ಕರ್ತವ್ಯ ಮತ್ತು ಜವಾಬ್ದಾರಿಯಾಗಬೇಕು.
✍️ ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ