ಕನಸು ಕಥೆಯಾದಾಗ..part-5
ಸ್ವರ್ಗಸ್ಥರಾದ ಮುತ್ತಾತ ಮುತ್ತಜ್ಜಿ ಆ ಜಾಡಿಯ ಮುಚ್ಚಳ ತೆಗೆದಿರುವವರೆಗೆ ಇರುತ್ತಾರೆ. ಆಮೇಲೆ ಅದೃಶ್ಯರಾಗುತ್ತಾರೆ..!
'ಕನಸು ಕಥೆಯಾದಾಗ'..
ಭಾಗ-5
ಮಗಳು ತನೇಹಾ ಮತ್ತು ಲಭನ್ಯ ಮುತ್ತಾತ ಸುಬ್ಬಯ್ಯ ಮತ್ತು ಮುತ್ತಜ್ಜಿ ಗಂಗಮ್ಮ ಅವರ ಜೊತೆಗೆ ಮನೆಯ ಹೊರಗಡೆ ಗಾರ್ಡನ್ ಸುತ್ತಾಮುತ್ತಾ ಆಡುತ್ತಿದ್ದಾರೆ... ಆರುಷಿ ಮತ್ತು ಆರೋಹಿಗೆ ಇದು ಸಂತಸದ ಸಂಗತಿಯಾದರೂ ಏನೋ ಆತಂಕ.ಎಲ್ಲಿ ಏನಾಗಿ ಬಿಡುವುದೊ ಎಂಬ ಕಳವಳ.ಅಯ್ಯೊ ಅಜ್ಜಿ ತಾತ ರ ಬಳಿ ಆಡಿದರೆ ಏನಾಗುತ್ತೆ ಒಳ್ಳೆಯದೇ ಅಲ್ಲಾ ಅಂತೀರಾ?? ಆದ್ರೆ ಅದ್ಯಾಕೆ ಕಳವಳ ಆತಂಕ ಇಲ್ಲಿದೆ ನೋಡಿ..
ಸುಬ್ಬಯ್ಯ ಮತ್ತು ಗಂಗಮ್ಮ ಆರೋಹಿಯ ಅಜ್ಜ ಮತ್ತು ತಾತ.. ಹೊಟ್ಟೆಯ ಪಾಡಿಗೆ ಕೆಲಸ ಹುಡುಕಿಕೊಂಡು ಆಂದ್ರ ದಿಂದ ಕರ್ನಾಟಕಕ್ಕೆ ಬಂದವರು. ತುಂಗಭದ್ರಾ ಡ್ಯಾಂ ಕಟ್ಟುವಾಗ ನಾಲ್ಕೈದು ತಿಂಗಳುಗಳ ಕಾಲ ಕೆಲಸ ಮಾಡಿದ್ದರಂತೆ. ಅದೂ ಯಾಕೋ ಸರಿ ಹೋಗಲಿಲ್ಲ ಎಂದು ಭದ್ರಾ ಡ್ಯಾಂ( ಲಕ್ಕವಳ್ಳಿ ಡ್ಯಾಂ) ನಿರ್ಮಾಣ ಮಾಡುವಾಗ ಆ ಕಾಲದಲ್ಲಿ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಂಡವರು. ಅಲ್ಲೇ ಶಾಶ್ವತವಾಗಿ ವಾಸಕಂಡುಕೊಂಡರು. ಎಲ್ಲಾ ಕೆಲಸದಲ್ಲಿ ಶಿಸ್ತು ಅಂದ್ರೆ ಶಿಸ್ತು.. ಹೀಗೆ ಲಕ್ಕವಳ್ಳಿಯಿಂದ ಯೋಜನಾ ನಿರಾಶ್ರಿತರಾಗಿ ಆಶ್ರಯ ಪಡೆದಿದ್ದು ನರಸಿಂಹರಾಜಾಪುರದ ಸಿಂಸೆ ಎಂಬಲ್ಲಿ.. ಹಸು ಕುರಿ ಮೇಕೆಗಳ ಸಾಕಿ ಜೀವನ ನಡೆಸುತ್ತಿದ್ದವರು.ಅನ್ಯೋನ್ಯ ವಾಗಿದ್ದ ಇವರು ೨೦೧೩ ರಲ್ಲಿ ಐದು ದಿನಗಳ ಅಂತರದಲ್ಲಿ ಇಬ್ಬರೂ ಸ್ವರ್ಗಸ್ಥರಾದವರು..
ನಿನ್ನೆ ಸಂಜೆ ಇಬ್ಬರೂ ಮಕ್ಕಳು ಮನೆಯಲ್ಲಿಲ್ಲ.. ಕಾಂಪೌಂಡ್ ಮೇಲೆ ಉಪ್ಪಿನಕಾಯಿ ಇಡುವಂತಹ ಒಂದು ಜಾಡಿ.. ಅದರ ಮುಚ್ಚಳ ನಾಲ್ಕೈದು ಇಂಚು ಎತ್ತರದಲ್ಲಿ ತಾನೇ ನಿಂತಿದೆ. ಹೊರಗಡೆ ಬಂದು ನೋಡಿದರೆ ಮಕ್ಕಳೊಂದಿಗೆ ಮುತ್ತಾತ ಮುತ್ತಜ್ಜಿ ಲವಲವಿಕೆಯ ಆಟ..! ಸಣ್ಣ ಮಗುವನ್ನು ಕೈ ಹಿಡಿದು ಹೆಜ್ಜೆ ಹಾಕಿಸುತ್ತಿದ್ದರೆ ಅಜ್ಜಿ ಇನ್ನೊಂದು ಮಗುವನ್ನು ಕಂಕುಳದಲ್ಲಿ ಎತ್ತಿಕೊಂಡು ಬೇವಿನ ಮರದಲ್ಲಿ ಏನೋ ತೋರಿಸುತ್ತಿದ್ದಾರೆ. ಆ ಕಾಂಪೌಂಡ್ ಮೇಲೆ ಇಟ್ಟಿದ್ದ ಜಾಡಿಯ ಮುಚ್ಚಳ ಗಂಟೆಯ ಮುಳ್ಳಿನ ವೇಗದಲ್ಲಿ ನಿಧಾನವಾಗಿ ಜಾಡಿಗೆ ಮುಚ್ಚಿಕೊಳ್ಳಲು ಹತ್ತಿರ ಆಗುತ್ತಿದೆ. ಆ ಮುಚ್ಚಳ ತೆರೆದಿರುವಷ್ಟು ಸಮಯ ಅಜ್ಜಿ ತಾತ ಹೊರಗಿರುವರು. ಅಜ್ಜಿ ತಾತ ಆರುಷಿ ಮತ್ತು ಆರೋಹಿ ಗೆ ಕಾಣಿಸುತ್ತಿದ್ದಾರೆ ಆದರೆ ಮಾತಿಗೆ ಕನೆಕ್ಟ್ ಆಗುತ್ತಿಲ್ಲ. ಹೀಗೆ ತಾತ ಸಣ್ಣ ಮಗುವಿಗೆ ಪುಟ್ಟ ಪುಟ್ಟ ಹೆಜ್ಜೆಯ ಇಡಿಸುತ್ತಾ ಒಂದಷ್ಟು ದೂರ ಹೋದರು ತಾತ.. ಅಜ್ಜಿಯೂ ದೊಡ್ಡ ಮಗಳನ್ನು ಎತ್ತಿಕೊಂಡು ಹೋದಳು. ಕೆಲವೇ ನಿಮಿಷಗಳ ನಂತರ ತನೇಹಾ ಮನೆಗೆ ಓಡಿ ಬಂದು ಅಜ್ಜಿ "ನಮಗೆ ಟೈಮ್ ಆಯಿತು ನಾವ್ ಹೋಗ್ತೀವಿ ಅಂತ ಬಂದರು ಮನೆಯೊಳಗೆ ಇದ್ದಾರಮ್ಮಾ"? ಅಂತ ಕೇಳುವಾಗ ಆಚೆಕಡೆ ಲಭನ್ಯ ಅಳುತ್ತಿರುವ ಶಬ್ದ.. ಆರುಷಿ ಓಡಿ ಹೋಗಿ ನೋಡಿದರೆ ನನ್ನೊಬ್ಬಳನ್ನೇ ಬಿಟ್ಟೋದ್ರಲ್ಲ ಎನ್ನುವ ಹಾಗೆ ರಸ್ತೆಯಲ್ಲೇ ಕುಳಿತು ಕಾಲು ಹಿಂದೆ ಮುಂದೆ ಆಡಿಸುತ್ತಾ ಅಳುತ್ತಿದ್ದಾಳೆ. ಮಗುವನ್ನು ಎತ್ತಿಕೊಂಡು ಬಂದು ಆ ಜಾಡಿಯ ಮುಚ್ಚಳ ನೋಡಿದರೆ ಆ ಮುಚ್ಚಳ ಪೂರಾ ಮುಚ್ಚಿಕೊಂಡಿತ್ತು.
"ಅಮ್ಮ ಅಮ್ಮಾ..ಅಜ್ಜಿ ತಾತ ಎಲ್ಲೋದ್ರು ಮತ್ತೆ ಯಾವಾಗ ಬರುತ್ತಾರೆ. ಅಮ್ಮ..?"ಅಂತ ಕೇಳುತ್ತಿರಲು ಮಕ್ಕಳ ಪ್ರಶ್ನೆಗೆ ಆರುಷಿ ಮತ್ತು ಆರೋಹಿ ಇಬ್ಬರ ಬಳಿಯೂ ಉತ್ತರ ಇರಲಿಲ್ಲ.ಏನೇಳುವುದು ಎಂದು ಪೇಚಾಡುತ್ತಿರುವಾಗ ಆರೋಹಿ ಆರುಷಿಯ ಭುಜ ತಟ್ಟಿ "ಎದ್ದೇಳ್ರಿ ಶಾಲೆಗೆ ಹೊತ್ತಾಯ್ತು.."ಅಂತ ಕೂಗುತ್ತಿದ್ದಳು...
✍️ ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ