ಓದಬೇಕಾಗಿರುವ ಪಠ್ಯವನ್ನು ಮಕ್ಕಳೇ ನಿರ್ಧರಿಸಬೇಕೇ ಹೊರತು ತಜ್ಞರಲ್ಲ...
ಮಕ್ಕಳು ಓದುವ ಪಠ್ಯದ ಮಕ್ಕಳ ಆಯ್ಕೆಗೆ ಬಿಡದೇ ತಜ್ಞರು ಯಾಕೆ ಆಯ್ಕೆ ಮಾಡಬೇಕು??
ಮೊನ್ನೆ ನಾವು ಕುಟುಂಬ ಸಮೇತ ಒಂದು ರೆಸ್ಟೋರೆಂಟೊಂದರಲ್ಲಿ ಊಟಕ್ಕೆ ಹೋಗಿದ್ದೆವು. ಬೇಸಿಗೆಯ ಸೈಕ್ಲೋನ್ ಹೋಗಿ ಅಂದಷ್ಟೆ ಮಳೆ ಒರಪು ಕೊಡಬಹುದು ಅಂತ ಅನಿಸುತ್ತಿತ್ತು. ಎಂಟು ವರ್ಷದ ಮಗಳು ತನೇಹಾ ಗೋಭಿಮಂಚೂರಿಯನ್ ತಿನ್ನೋಣ ಎಂದಳು..ಸರಿ ಎಂದು ಸ್ಟಾರ್ಟರ್ ಆಗಿ ಗೋಬಿಯನ್ನು ಆರ್ಡರ್ ಮಾಡಿ ಆಯಿತು. ಗೋಬಿಯನ್ನು ತಿಂದಮೇಲೆ ಏನಾದರೂ ರೈಸ್ ಐಟಂ ಆರ್ಡರ್ ಮಾಡಲು ನಾವು ಚರ್ಚೆ ಮಾಡುವಾಗ ಮಗಳು ನನಗೆ half plate ಮೊಸರನ್ನ ಬೇಕು ಎಂದಳು..ಮೊಸರನ್ನ ಬೇಡ.. ನಿನ್ನೆ ಮೊನ್ನೆ ಮಳೆಯಿದ್ದುದರಿಂದ ಯಾರೂ ಮೊಸರು ತೆಗೆದುಕೊಳ್ಳದೇ ಮೊಸರು ಹುಳಿ ಆಗಿರತ್ತೆ..ಶೀತದ ವಾತಾವರಣ ಬೇರೆ ಇದೆ. ಬೇರೆ ಏನಾದರೂ ತಗಳೊಮ್ಮ ಎಂದಿದ್ದಕ್ಕೆ ಅದಾಗಲೇ ಅವಳು ಹುಳಿಯಾದರೂ ಸರಿಯೇ ಮೊಸರನ್ನವೇ ತಿನ್ನಬೇಕು ಎಂದು ತೀರ್ಮಾನಿಸಿಯಾಗಿತ್ತು. ಅವಳ ಬೇಡಿಕೆಗೆ ಸರಿ ಎಂದು ಅವಳ ಆಯ್ಕೆಯ ಅವಳಿಗಿಷ್ಟವಾದ ಮೊಸರನ್ನ ತರಿಸಿಕೊಟ್ಟೆವು. ಹೀಗೆಯೇ ನಾವು ಬಟ್ಟೆಕೊಳ್ಳುವಾಗ,ಆಟಿಕೆಗಳನ್ನೋ,ಇನ್ನಿತರೆ ವಸ್ತುಗಳನ್ನು ಕೊಳ್ಳುವಾಗ ಅಷ್ಟೇ ಯಾಕೆ ಉದ್ಯೋಗ ಆಯ್ಕೆಯಲ್ಲೂ, ಮದುವೆ ಇನ್ನಿತರ ಹಂತಗಳಲ್ಲೂ ನಾವು ಮಕ್ಕಳ ಒಂದು ಅಭಿಪ್ರಾಯ ಕೇಳುತ್ತೇವೆ. ಇದು ಸಾಮಾನ್ಯವಾಗಿ ಬಹುತೇಕ ಎಲ್ಲಾ ಪೋಷಕರಲ್ಲೂ ಇದೆ.ಅದರಂತೆ ದೇಶದಲ್ಲಿ ಎಲ್ಲಿ ಬೇಕಾದರೂ ಓಡಾಡುವ,ವಾಸಮಾಡುವ,ತಮಗೆ ಇಷ್ಟವಾದ ಕೋರ್ಸ್ ಅಧ್ಯಯನ ಮಾಡುವ,ತಮಗಿಷ್ಟವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ವನ್ನೂ ನಮ್ಮ ಸಂವಿಧಾನವೂ ಸಂವಿಧಾನಾತ್ಮಕ ಒದಗಿಸಿಕೊಟ್ಟಿದ್ದರೂ ನಮ್ಮ ದೇಶದ ಮಕ್ಕಳು ಕಲಿಯಬೇಕಾದದ್ದನ್ನು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತಗಳಿಗೆ ಹೊರತುಪಡಿಸಿ ಇತರ ಹಂತಗಳ ತರಗತಿಗಳಿಗೆ ಬೇರೆಯವರು ಯಾಕೆ ಆಯ್ಕೆ ಮಾಡಬೇಕು??ಅದರಲ್ಲೂ ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಪಠ್ಯಪರಿಷ್ಕರಣೆಯಲ್ಲಿ ಜಾತಿ ಧರ್ಮಕ್ಕೆ ಸಂಬಂಧಿಸಿದ ಸಂಘರ್ಷಗಳು ನಡೆಯುತ್ತಲಿವೆ. ಅದರಂತೆ ಈ ಸಮಿತಿಗಳೂ ತಮಗೆ ಇಷ್ಟದ ತಮ್ಮ ಜಾತಿಯ, ತಮ್ಮ ಧರ್ಮದ,ತಮ್ಮ ಪ್ರಾಂತದ ಹೀಗೆ ಸಂಕುಚಿತ ಮನೋಭಾವದಿಂದ ಅವರವರ ರಾಜಕೀಯ ಬೆಂಬಲದವರು,ಅವರ ಕೋಮು/ಸಮುದಾಯದ ಲೇಖಕರ ಪಠ್ಯ ಆಯ್ಕೆ ಮಾಡಿ ತಮ್ಮ ವಯಕ್ತಿಕ ನೆಲೆಗಟ್ಟಿನ ಹಿತಾಸಕ್ತಿಗಳನ್ನು ಪಠ್ಯದಲ್ಲಿ ಅಳವಡಿಸಿದ ಪರಿಣಾಮ ನಮ್ಮ ಮಕ್ಕಳು ಅವುಗಳನ್ನು ಅದ್ಯಯನ ಮಾಡುತ್ತಿದ್ದಾರೆ. ಕೆಲವೇಗಂಟೆಗಳಲ್ಲಿ ಜೀರ್ಣ ಆಗುವ ಆಹಾರದ ಆಯ್ಕೆಯಲ್ಲಿ ಅವರವರ ಆಯ್ಕೆಗೆ ಸ್ವಾತಂತ್ರ್ಯವಿದೆ.. ಕೆಲವೇ ದಿನಗಳಲ್ಲಿ ಹರಿದುಹೋಗುವ ಬಟ್ಟೆಯ ಆಯ್ಕೆಯಲ್ಲೂ ಅವರವರಿಗೆ ಸ್ವಾತಂತ್ರ್ಯವಿದೆ ಆದರೆ ತಲೆಯಲ್ಲಿನ ಜ್ಞಾನ ಮತ್ತು ಬುದ್ದಿಶಕ್ತಿಯಂತೆ ಸಾಯುವವರೆಗೂ ಆ ಜ್ಞಾನದಂತೆ ಬಾಳಿ ಬದುಕಬೇಕಾದ ಜ್ಞಾನ ವನ್ನು ಈ ಪ್ರಜಾಸತ್ತಾತ್ಮಕ ದೇಶದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯ ಸಮಿತಿಗಳು ಯಾಕೆ ರಚಿಸಬೇಕು?? ಇಲ್ಲಿ ಯಾವುದೋ ಜಾತಿ ಧರ್ಮದ/ಯಾವುದೋ ರಾಜಕೀಯ ಪಕ್ಷದ ಪರ ಕೆಲಸ ಮಾಡುವ ಸಮಿತಿಗಳು ರಚಿಸಿದ ಪಠ್ಯಗಳನ್ನು ನಮ್ಮ ಮಕ್ಕಳು ಅದ್ಯಯನ ಮಾಡಬೇಕಾದ ಔಚಿತ್ಯ ಏನಿದೆ?? ತಾನು ಏನನ್ನು ತಿನ್ನಬೇಕು,ಯಾವ ಬಟ್ಟೆಯನ್ನು ಹಾಕಬೇಕು ಎಂದು ಅವರವರು ಆಯ್ಕೆ ಮಾಡಿಕೊಳ್ಳುವಾಗ ಅವರಿಗೆ ಏನು ಕಲಿಯಬೇಕೆನಿಸುತ್ತದೋ ಅದನ್ನೇ ಆಯ್ಕೆ ಮಾಡಿಕೊಂಡು ಕಲಿಯುವ ಸ್ವಾತಂತ್ರ್ಯ ಮತ್ತು ಅವಕಾಶ ಈ ದೇಶದಲ್ಲಿ ಯಾಕಿಲ್ಲ??
ಇಲ್ಲೊಂದು ನಿಮಗೆ ಗೊಂದಲ ಆಗಬಹುದು.ಏನು ಕಲಿಯಬೇಕು ಏನು ಕಲಿಯಬಾರದು ಅಂತ ಆ ಮಕ್ಕಳು ನಿರ್ಧರಿಸುವ ಬೌದ್ಧಿಕ ಶಕ್ತಿ ಇರುವುದಿಲ್ಲ.ಅದಕ್ಕೆ ತಜ್ಞರ ಸಮಿತಿ ಬೇಕು ಎಂದು ವಾದಿಸುವುದಾದರೆ ಪ್ರತಿಯೊಂದಕ್ಕೂ ಒಂದೊಂದು ಅದ್ಯಯನ/ಪರೀಶೀಲನಾ ಸಮಿತಿಗಳಿರುವಂತೆ ಇದಕ್ಕೂ ಒಂದು ಸಮಿತಿ ಮಾಡಿ ಮಕ್ಕಳ ಅಗತ್ಯಕ್ಕೆ ತಕ್ಕಂತೆ ಕಲಿಯಬೇಕಾಗಿರುವುದನ್ನು ಹೇಗೆ ಅವರೇ ನಿರ್ಧರಿಸಬೇಕು ಎಂಬುದನ್ನು ಅದ್ಯಯನ ಮಾಡಬೇಕು.ಇಲ್ಲವಾದಲ್ಲಿ ಒಂದು ಹಂತದವರೆಗೆ ಮಾತ್ರ ತಜ್ಞರ ಸಮಿತಿಯ ಶಿಫಾರಸ್ಸಿನ ಪಠ್ಯಗಳನ್ನು ಸಂವಿಧಾನದ ಆಶಯಗಳ ನೆಲೆಗಟ್ಟಿನಲ್ಲಿ ಅಳವಡಿಸಿ ಹಿರಿಯ ಪ್ರಾಥಮಿಕ/ಪ್ರೌಢ ಪಿಯು ಮತ್ತು ಪದವಿ ಹಂತದ ತರಗತಿಗಳಿಗೆ ಏನನ್ನು ಕಲಿಯಬೇಕು ಎನ್ನುವುದನ್ನು ಮಕ್ಕಳೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ಲಾಟ್ ಫಾರಂ ಸೃಜಿಸಬೇಕು.
ಇಲ್ಲವಾದಲ್ಲಿ ಯಾರೋ ಮಹಾಬುದ್ದಿವಂತರಂತಹ ಸೋಗಿನಲ್ಲಿ ಬೇರು ಬುಡ ಸಮೇತ ಕಿತ್ತಾಕಬೇಕಾಗಿರುವ ಆಚರಣೆಗಳನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳ ತಲೆಯಲ್ಲಿ ಬಿತ್ತುತ್ತಿದ್ದಾರೆ.ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳ ಸಾಮರಸ್ಯ ಮತ್ತು ಬೌದ್ಧಿಕ ಜ್ಞಾನದ ಕೊರತೆಯ ಬಹುದೊಡ್ಡ ಆತಂಕ ಎದುರಾಗುವುದರಲ್ಲಿ ಸಂಶಯವಿಲ್ಲ.. ಎಲ್ಲದರಲ್ಲೂ ಅವರವರ ಆಯ್ಕೆಯೇ ಅಂತಿಮ ಎಂದು ಬಡಾಯಿ ಕೊಚ್ಚಿಕೊಳ್ಳುವ ನಾವು ಪಠ್ಯದ ಆಯ್ಕೆಯಲ್ಲೂ ಅದೂ ಮಕ್ಕಳೇ ಕಲಿಯಬೇಕಾಗಿರುವುದರಿಂದ ಮಕ್ಕಳ ಆಯ್ಕೆಗೆ ಬಿಡದಿರುವುದು ಎಷ್ಟರಮಟ್ಟಿಗೆ ಸರಿ?ಈ ಹಿಂದಿನ ಪ್ರತಿ ಹಂತದ ಪರಿಷ್ಕರಣೆಯಲ್ಲೂ ಈ ಜಾತಿ ಧರ್ಮ ಮತ್ತು ಆಡಳಿತ ಸರ್ಕಾರದ ಪರ-ವಿರುದ್ದ ಆರೋಪಗಳನ್ನು ನಾವು ಕೇಳುತ್ತಲೇ ಬಂದಿದ್ದೇವೆ. ವಿಶ್ವಚೇತನ ಆಗಬೇಕಿರುವ ಮುಗ್ದ ಮಕ್ಕಳ ಮೇಲೆ ಜಾತಿ,ಧರ್ಮ ರಾಜಕೀಯ ಆಧಾರಿತ ಪಠ್ಯ ಅಳವಡಿಕೆಯ ಪ್ರಯತ್ನ ಯಾಕಾಗುತ್ತಿದೆ.??
ಈಗಿನ ಪರಿಷ್ಕೃತ ಸಮಿತಿಯ ಸದಸ್ಯರೊಬ್ಬರು "ಬರೀ ಬ್ರಾಹ್ಮಣ ಬರಹಗಾರರ ಪಠ್ಯಗಳನ್ನು ಸೇರಿಸುವುದಕ್ಕೇ ನನಗೇ ಮುಜುಗರ ಆಗುತ್ತಿದೆ.." ಎಂಬ ಹೇಳಿಕೆಯೂ,ಬಂಡಾಯ ಸಾಹಿತಿಯೊಬ್ಬರು ಪಠ್ಯಪುಸ್ತಕಗಳಲ್ಲಿ ತಮ್ಮ ಬರಹಗಳನ್ನು ಅಳವಡಿಸಲು ನನಗೆ ಒಪ್ಪಿಗೆಯಿಲ್ಲ"ಎಂಬ ಅಭಿಪ್ರಾಯಗಳು ಪ್ರಸ್ತುತದ ಪರಿಷ್ಕರಣಾ ಸಮಿತಿಗಳ ದೃಷ್ಠಿಕೋನ ಪ್ರತಿನಿಧಿಸುತ್ತದೆ.
ಸಮಿತಿಯ ತಜ್ಞರ ಆಯ್ಕೆ ಪ್ರಕ್ರಿಯೆ ಬದಲಾಗಬೇಕು. ನಾಲ್ಕು ಗೋಡೆಗಳ ಮದ್ಯೆ ಕಲ್ಪಿತ ಅಂಕಣಗಳನ್ನು ಬರೆದ ಕಾರಣ ಅವರನ್ನು ತಜ್ಞರು ಎಂದು ಪರಿಗಣಿಸದೇ ಅಧ್ಯಾಪನಾ ವೃತ್ತಿಯ ಗರಿಷ್ಠ ಅನುಭವ,ಕಲಿಕೆ ಮತ್ತು ಸಮಾಜಿಕ ವಿಚಾರಗಳಲ್ಲಿ ಸಂಶೋಧನೆ ಮಾಡಿದ,ಜ್ಞಾನದ ಅದಃಪತನ ತಲುಪದ,ಎಲ್ಲಾ ಪ್ರದೇಶಗಳನ್ನು ಪ್ರತಿನಿಧಿಸುವ ಸಮಿತಿಯನ್ನು ಬಹು ಮುತುವರ್ಜಿಯಿಂದ ನೇಮಿಸಬೇಕು. ನಮ್ಮ ರಸ ಋಷಿ ರಾಷ್ಟ್ರಕವಿ ಕುವೆಂಪರಂತಹವರಿಗೆ ಬೆಲೆ ಇಲ್ಲ ಅಂದರೆ ನಾವು ಯಾವ ದಿಕ್ಕಿನಲ್ಲಿ ಸಾಗಲು ಪಠ್ಯದಲ್ಲಿ ಇಂತಹ 'ಪಠ್ಯ ರಾಜಕೀಯ' ಮಾಡುತ್ತಿದ್ದೇವೆ ಅಂತ ಪುನರ್ ವಿಮರ್ಶಿಸಿಕೊಳ್ಳಬೇಕು. ಮಕ್ಕಳು ಕಲಿಯುವ ಪಠ್ಯದಲ್ಲೂ ಜಾತಿ ಧರ್ಮದ ಸೋಗು ಯಾಕೆ??ಜಾತಿ ಧರ್ಮ ಸಂಕೋಲೆಗಳಿಂದ ಬಿಡಿಸಿಕೊಂಡು ಅಭಿವೃದ್ಧಿ ಯತ್ತ ಹೆಜ್ಜೆ ಹಾಕ ಬೇಕಾಗಿರುವ ನಾವು ಈ ಜಾತಿ ಧರ್ಮದ ಸಂಕೋಲೆಗಳನ್ನು ಇನ್ನಷ್ಟು ಸುತ್ತಿಕೊಳ್ಳುತ್ತಿದ್ದೇವೆ.. ಭಾರತದೇಶದ ಅಭಿವೃದ್ಧಿ ಮತ್ತು ಗುಣಾತ್ಮಕ ಶಿಕ್ಷಣದ ಪರಿಕಲ್ಪನೆಗೆ ಸದ್ಯದ ಬೆಳವಣಿಗೆಗಳು ಮಾರಕವಲ್ಲವೇ???
ಇನ್ನಾದರೂ ಈ ನಿಟ್ಟಿನಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯವರು ಪಠ್ಯಕ್ಕೆ ಆಯ್ಕೆ ಮಾಡುವಾಗ ಜಾತಿ,ಧರ್ಮ,ಪ್ರಾಂತ್ಯ ರಾಜಕೀಯ ಹಿತಾಸಕ್ತಿಗಳನ್ನು ಬದಿಗೊತ್ತಿ ಸಾಮಾಜಿಕ ಸಾಮರಸ್ಯಗಳನ್ನು ಪ್ರಜಾಪ್ರಭುತ್ವದ ಆಶಯದಲ್ಲಿ ಪಠ್ಯಗಳನ್ನು ನಿರೀಕ್ಷೆ ಮಾಡಬಹುದೇ??
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ