ಒಳ್ಳೆಣ್ಣೆ ವಿಷವಾದಾಗ...

ಒಳ್ಳೆಣ್ಣೆ ವಿಷವಾದಾಗ.....

ಹಲಸು- ಮಾವಿನ ಹಣ್ಣಿನ ಸೀಜನ್ ನಲ್ಲಿ  ನಮ್ಮ ಮನೆಯಲ್ಲಿ ಎರಡೂ ಹಣ್ಣಿನ ಕಲರವ ಜೋರಾಗಿಯೇ ಇರುತ್ತದೆ...ಅಚ್ಚಮಲೆನಾಡಿನ ನರಸಿಂಹರಾಜಾಪುರದಲ್ಲಿ ಮತ್ತು ಅರೆ ಮಲೆನಾಡಿನ ತರೀಕೆರೆಯಲ್ಲಿ ಕುಮುದಾಳ ತಾತ ನೆಟ್ಟು ಬೆಳೆಸಿರುವ ಮಾವಿನ ಮರದಿಂದ ತಿನ್ನುವವರೆಲ್ಲಾ ತಿಂದು ಬಿಟ್ಟು ಅಳಿದುಳಿದ ಹತ್ತಿಪ್ಪತ್ತು ಕೆಜಿಯಷ್ಟಾದರೂ ಮಾವಿನ ಕಾಯಿಗಳು ಸಿಕ್ಕೇ ಸಿಗುತ್ತಾವೆ.ಮನೆಯಲೆಲ್ಲಾ ಮಾವಿನ ಘಮ ಘಮಿಸುವ ಸುವಾಸನೆಯಿದ್ದರೆ, ಅದರ ಜೊತೆಗೆ ಬರುವ ಇನ್ನೊಂದು ಹಣ್ಣು ಹಲಸು.. ಹಲಸಿನ ಹಣ್ಣು  ನನಗೆ ಕರಡಿಯಂತೆ  ಇಷ್ಟ ದಿನವೊಂದಕ್ಕೆ  ಮೀಡಿಯಂ ಗಾತ್ರದ ಒಂದು ಹಣ್ಣನ್ನು ಸಲೀಸಾಗಿ ತಿಂದು ಮುಗಿಸುವೆ.ಮನೆಯಲ್ಲಿ  ಕೆಲವು ದಿನಗಳ ವರೆಗೆ ಯಾವುದು ತಿನ್ನಲಿ ಯಾವುದು ಬಿಡಲಿ ಎನ್ನುವಂತಿರುತ್ತದೆ..ಆದರೆ ಅಪ್ಪಿ ತಪ್ಪಿಯೂ ಎರಡನ್ನೂ ಒಟ್ಟಿಗೆ ಸೇವಿಸಿದರೆ ಹೊಟ್ಟೆಕೆಡುವ ಸಾಧ್ಯತೆ ಹೆಚ್ಚಿರುವುದರಿಂದ ಒಂದು ದಿನ ಹಲಸಿನ ದಿನ ಮತ್ತೊಂದು ದಿನ ಮಾವಿನ ದಿನ ಆಚರಣೆಯಂತೆ ಸೇವಿಸಬೇಕು.

ಮೊನ್ನೆ ಹಲಸಿನ ಕಡುಬು  ಮಾಡಲೆಂದು ಕುಮುದಾ ಸಿದ್ದತೆ ಮಾಡಿದ್ದಳು.. ಹಲಸಿನ ಕಡುಬು ಮಾಡಲು ತೇಗದ ಮರದ ಎಲೆಗಳು ಅವಶ್ಯವಿದ್ದುದರಿಂದ ಮಾಮೂಲಿಯಾಗಿ ಪ್ರತಿ ಬಾರಿಯೂ ತರುತ್ತಿದ್ದ ತೇಗದ ಮರದಿಂದಲೇ ಎಲೆಗಳನ್ನು ಕಿತ್ತು ತಂದೆ. 25% ನಷ್ಟು ನೆನೆಸಿಟ್ಟ ಅಕ್ಕಿ ಮತ್ತು 75% ಹಲಸಿನ ಹಣ್ಣುಗಳನ್ನು  ಮತ್ತು ಅಗತ್ಯವಾದರೆ ಸ್ವಲ್ಪ ಬೆಲ್ಲ ಮಿಕ್ಸಿಗೆ ಹಾಕಿ  ತೇಗದ ಎಲೆಗಳಿಗೆ ತುಪ್ಪ ಅಥವಾ ಎಣ್ಣೆಯ ಹಚ್ಚಿ ಹಬೆಯಲ್ಲಿ ಬೇಯಿಸಲಾಗುತ್ತದೆ. ಅಂದು ಮನೆಯಲ್ಲಿ ತುಪ್ಪ ಲಭ್ಯ ವಿಲ್ಲದ ಕಾರಣ ಎಣ್ಣೆಯನ್ನು ಆ ಎಲೆಗಳಿಗೆ ಸವರಲಾಯಿತು. ಇಪ್ಪತ್ತು ಇಪ್ಪತ್ತೈದು ನಿಮಿಷಗಳ ನಂತರ ಎಲೆಬಿಚ್ಚಿ ರುಚಿ ನೋಡಿದರೆ ವಿಷ ವಿಷ!! ಇದ್ಯಾವುದೋ ಎಳೆಯ ಎಲೆ ರಸ ಬಿಟ್ಟಿರಬಹುದು ಎಂದು ಇನ್ನೊಂದು ಬಲಿತ ಎಲೆಯನ್ನು ಬಿಚ್ಚಿನೋಡಿದರೂ ಅದೂ ವಿಷ ವಿಷ.. ಕಡುಬಿನ ಒಳ ಭಾಗ ಸರಿ ಇದೆ ಆದರೆ ಮೇಲ್ಭಾಗ ಮಾತ್ರ  ವಿಷ... ಇದಕ್ಕೆ ಕಾರಣ ಎಲೆಯೋ ಹಣ್ಣೋ ಬೇಯಿಸುವಿಕೆಯಲ್ಲಿ ಲೋಪವೋ ಗೊತ್ತಾಗಲಿಲ್ಲ. ಅರೆ ಬೆಂದಿರಲಿಲ್ಲ.. . ಓವರ್ boil ಆಗಿ ಈ ತರ ಆಯಿತಾ ಎಂದು ಎಲ್ಲಾ ಸಾದ್ಯ ಸಾಧ್ಯತೆ ಗಳನ್ನು ನೋಡಿದರೂ ನಿಖರವಾದ ಕಾರಣ ಗೊತ್ತಾಗಲಿಲ್ಲ.

 ಅಂದು ಹಲಸಿನ ಕಡುಬಿನ ಸ್ವಾಧ ಸವಿಯಲಾಗದೇ ಅತೃಪ್ತಿ ಆದ ಕಾರಣ ನಾಳೆಯೂ ಕಡುಬು ಮಾಡೋಣ ಎಂದು ಪುನಃ ಸಿದ್ದತೆಯಾಯಿತು. ಅದೂ ಉಳಿದರ್ಧ ಹಲಸಿನ ಹಣ್ಣು, ಅದೇ ಮರದ ತೇಗದ ಎಲೆಗಳು. ಆದರೆ ಎಲೆಗಳಿಗೆ ಸವರಬೇಕಾಗಿದ್ದ ಎಣ್ಣೆ ಮಾತ್ರ ಈ ಬಾರಿ ಹಾಕಲಿಲ್ಲ.  ಹಾಗೆ ಹಿಟ್ಟು ಮಾತ್ರ ಹಾಕಿ ಬೇಯಿಸಲಾಗಿತ್ತು.ಬೆಂದ ನಂತರ ರುಚಿಯ ನೋಡಿದರೆ   ನೆನ್ನೆಯದರಂತೆ  ವಿಷ ಇರದೇ  ಸಿಹಿಯಾಗಿ ಸ್ವಾದಿಷ್ಟ ಹಲಸಿನ ಕಡುಬು ತಿನ್ನಲು ಬಹು ರುಚಿಯಾಗಿತ್ತು.


ಈ ಲೇಖನದಲ್ಲಿ ನಾನು ಹೇಳಬೇಕಾಗಿರುವುದು ಪಾಕದ ಬಗ್ಗೆ ಅಲ್ಲ  ಆದರೆ ಅಡುಗೆಯಲ್ಲಿ ನಾವು ಬಳಸುತ್ತಿರುವ ಎಣ್ಣೆಯ ಬಗ್ಗೆ.. ನಾವು ಚಿಕ್ಕವರಿದ್ದಾಗ  ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದೆ ಐದಾರು ಜನರಿರುವ ಕುಟುಂಬದಲ್ಲಿ ಒಮ್ಮೆಗೆ ಒಗ್ಗರಣೆ ಹಾಕಲು ಹತ್ತರಿಂದ  -ಹದಿನೈದು ML ನಷ್ಟು ಬಳಸುತ್ತಿದ್ದರು. ಒಗ್ಗರಣೆ ರಹಿತ ಸಾರಿಗೂ ಒಗ್ಗರಣೆ ಸಹಿತ ಸಾರಿಗೂ ರುಚಿಯಲ್ಲಿ  ಶೇ%  ಹತ್ತು-ಇಪ್ಪತ್ತರಷ್ಟು  ಬದಲಾವಣೆಯನ್ನು ನೀಡುತ್ತಿತ್ತು. ಕೆಲವೊಮ್ಮೆ ಹಿರಿಯರು ಹತ್ತು ಹದಿನೈದು ml ನಷ್ಟು ಬಳಸಿದ ಎಣ್ಣೆ ಸಾರಿನಲ್ಲಿ ತೇಲಿದಾಗ ಇಷ್ಟೊಂದು ಎಣ್ಣೆ ಹಾಕಿದರೆ ಹೆಂಗೆ  ನೋಡಿ ಹಾಕು ಎಂಬ ಬಯ್ಗುಳಗಳೂ ಆಗಾಗ್ಗೆ ಬರುತ್ತಿದ್ದವು. ಈಗ  ಲೀಟರ್ನಷ್ಟು ಎಣ್ಣೆಯನ್ನು ನಾವು ಬಳಸಿದರೂ ಆ ಕಾಲದ ರುಚಿ ಯಾಕೆ ಬರುತ್ತಿಲ್ಲ??  ಕೆಲವೊಮ್ನೆ ನಾವು ಮಾಡುವ ತಿಂಡಿ ತಿನಿಸುಗಳಿಗೆ ಪ್ರತಿ ಅಗಳೂ ನೆಂದೂ-ಮಿಂದೂ ಬಸಿಯುತ್ತಿದ್ದರೂ  ರುಚಿಯಲ್ಲಿ ಅಷ್ಟಕಷ್ಟೇ...ಅಂದು ಒಂದು ಲೀಟರ್  ಒಂದು ತಿಂಗಳಕಾಲ ಬಳಸುತ್ತಿದ್ದರು.ಆದರೆ ಇಂದು ಒಂದು ಲೀಟರ್ ಅಡುಗೆ ಎಣ್ಣೆಯನ್ನು ನಾವು ಆರೇಳು ದಿನಗಳಲ್ಲೇ ಖಾಲಿ ಮಾಡುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ಗರಿಷ್ಠಬೆಲೆಯೇರಿದ  ಈಡಿಬಲ್ ಆಯಿಲ್ ನಲ್ಲಿ  ಎಣ್ಣೆಯ ಅಂಶವೇ ಕಡಿಮೆಯಾಗಿದೆ.ಹತ್ತು ಎಂ ಎಲ್  ಹಾಕುತ್ತಿದ್ದ ಜಾಗದಲ್ಲಿ ಇಂದು 50-60 ml ಹಾಕಿದರೂ ಯಾವುದೇ ರುಚಿ ಬದಲಾಗದೇ ಅತಿಯಾದ FAT ಮತ್ತು obesity,ಹೃದಯರೋಗಗಳಂತಹ ಇಂದಿನ ಸಾಮಾನ್ಯ ನಾನಾ ರೋಗಗಳಿ ಕಾರಣವಾಗುತ್ತವೆ.ನಾವು ಕಡುಬು ಮಾಡಲು ಹಿಟ್ಟು ಅಂಟಿಕೊಳ್ಳದೇ ಇರಲಿ ಎಂದು ಎಲೆಗೆ ಸವರಿದ ಎರಡ್ಮೂರು ಹನಿಗಳೇ ಅಷ್ಟು ವಿಷವಾದರೆ ಇನ್ನೂ ನಾವು ನಮ್ಮ ಜೀವಿತಾವಧಿಯಲ್ಲಿ ಸೇವಿಸುವ ಎಣ್ಣೆಯಲ್ಲಿ ಎಷ್ಟು ವಿಷ ಇರಬಹುದು??

ಒಮ್ಮೆ ಕಾಯಿಸಿದ ಎಣ್ಣೆಯನ್ನು ಪುನಃ ಪುನಃ ಬಿಸಿ ಮಾಡಿದರೆ ಅದರ ರಾಸಾಯನಿಕ ಸಂಯೋಜನೆಗಳಲ್ಲಿ ಬದಲಾವಣೆಯಾಗಿ ಇನ್ನಷ್ಟು ವಿಷವಾಗುತ್ತದೆ. ಅಚ್ಚರಿಯೆಂದರೆ ಇಂತಹ ಎಣ್ಣೆಯಲ್ಲಿ ಕರಿದ ಪದಾರ್ಥಗಳು ನಮಗೆಲ್ಲಾ ಹೆಚ್ಚು ಇಷ್ಟವಾಗುತ್ತವೆ. ಇನ್ನೂ ದುರಂತ ಎಂದರೆ ಇತ್ತೀಚಿನ ದಿನಗಳಲ್ಲಿ ಎಣ್ಣೆ ಗಗನಕ್ಕೇ ಏರಿರುರುವ ದಿನಗಳಲ್ಲಿ ಎಣ್ಣೆ ಬೆಳೆಗಳನ್ನು, ಬೆಳೆಗಾರರನ್ನು ಪ್ರೋತ್ಸಾಹಿಸಬೇಕಾದ ದಿನಗಳಲ್ಲಿ ಬೀಜತಯಾರಿಕಾ ಕಂಪನಿಗಳು  ಸೂರ್ಯಕಾಂತಿ ಬೀಜಗಳನ್ನು ತಯಾರುಮಾಡಿಲ್ಲವಂತೆ..!!ಒಂದು ಕೆಜಿಯಷ್ಟು ಸೂರ್ಯಕಾಂತಿ ಬಿತ್ತನೆ ಬೀಜಗಳು 5-6 ಸಾವಿರವಂತೆ..!! ಇಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ಖಾದ್ಯ ತೈಲ ಕ್ಕೆ  ಕಲಬೆರಕೆಯಾಗಿ ಬಳಸುತ್ತಿರುವ  'ಮಿನರಲ್ ಆಯಿಲ್'ಅವರ ಕರಾಳ ಕಪಿ ಮುಷ್ಟಿಗೆ  ಸರ್ಕಾರಗಳು,ರೈತರು,ಜನಸಾಮಾನ್ಯರು ಬೀದಿಹೆಣವಾಗುತ್ತಿದ್ದಾರೆ.  ಈ ದೇಹದ್ರೋಹಿಗಳಿಗೆ ಏನು ಮಾಡಬೇಕು??

 ಈಗಾಗಲೇ ಗಾಳಿ, ನೀರು, ವಿಷಕಾರಿಯಾಗಿ ಬಹಳದಿನಗಳಾಯಿತು. ಒಳ್ಳೆಣ್ಣೆ ಎಂದು ಕರೆಯಲ್ಪಡುವ ಒಳ್ಳೆಣ್ಣೆಯೇ ವಿಷವಾದರೆ ಉಳಿದಿರುವ ಒಳ್ಳೆಯದಾದರೂ ಏನು??

✍️ನಾಗೇಂದ್ರ ಬಂಜಗೆರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..