ತೊಂಡೆಹಣ್ಣು..
ತೊಂಡೆಹಣ್ಣು..
ಆಗ ತಾನೆ ಮಳೆಬಿದ್ದು ಎಳೆಯ ಹುಲ್ಲು ಚಿಗುರಿ ನಂತರ ಬಾರದ ಮಳೆಗೆ ಬಯಲಿನ ಹುಲ್ಲು ಬಾಡಿದರೆ ಗಿಡ-ಗಂಟೆಗಳ ಕೆಳಗೆ ಕೆಲವು ದಿನಗಳು ಹಸಿರಾಗಿಯೇ ಇರುತ್ತದೆ.ಅಂತಹ ದಿನಗಳಲ್ಲಿ ದನಗಳ ಮೇಯಿಸಲು ಗೋಮಾಳಕ್ಕೆ ಹೋದರೆ ಬೀಸುತ್ತಿದ್ದ ಆಷಾಢ ದ ಗಾಳಿಗೆ ಹನ್ನೊಂದು ಹನ್ನೆರಡು ಗಂಟೆಗೆ ಹೊಟ್ಟೆ ಚುರುಗುಟ್ಟುತ್ತಿತ್ತು.ಆಗ ನಾವು ಉಣ್ಣುತ್ತಿದ್ದದು ಬೆಳಿಗ್ಗೆ ಮತ್ತು ರಾತ್ರಿ ಎರಡೇ ಹೊತ್ತು..ದಿನವಿಡೀ ದನಗಳ ಹಿಂದೆ ಅಲೆದು ಅಲೆದು ಆಗುತ್ತಿದ್ದ ಸುಸ್ತನ್ನು ತಣಿಸುತ್ತಿದ್ದುದು ಆಗಿನ ಕಾಲದಲ್ಲಿ ಸಿಗುತ್ತಿದ್ದ ಕವಳೆ,ಕಾರೆ,ತೊಂಡೆ ಹಣ್ಣುಗಳೇ ನನಗೆ ರಸದ ಔತಣ..ಅಲ್ಲೊಂದು ಇಲ್ಲೊಂದು ಇದ್ದ ಗಿಡಗಳಲ್ಲಿ ಬೆಳಗಾಗುತ್ತಲೇ ಪಕ್ಷಿಗಳೆಲ್ಲ ತಿಂದುಗುಳಿರುತ್ತಿದ್ದವು. ಅಳಿದುಳಿದ ಹಣ್ಣುಗಳಿಗಾಗಿ ಯಾರು ಆ ಗಿಡಗಳ ಬಳಿ ಮೊದಲು ಹೋಗುವರೋ ಅವರಿಗೆ ಎರಡನೇ ಪ್ರಾಶಸ್ತ್ಯದ ಹಣ್ಣುಗಳು ದೊರೆಯುತ್ತಿದ್ದವು. ಆ ಎರಡನೇ ಪ್ರಾಶಸ್ತ್ಯದ ಹಣ್ಣುಗಳಿಗಾಗಿ ದನಗಳ ಹಿಂದೆ ಅಲೆಯುವುದಕ್ಕಿಂತ ಹೆಚ್ಚು ಅಲೆಯುತ್ತಿದ್ದೆ.
ಅನೇಕಗಿಡಗಳ ಮೇಲೆ ಹಸಿರ ಹೊದಿಕೆಯಂತೆ ಹಬ್ಬಿದ್ದ ತೊಂಡೆಯ ಬಳ್ಳಿಯಲ್ಲಿ ನೇತಾಡುತ್ತಿದ್ದ ಕೆಂಪನೆಯ ಹಣ್ಣುಗಳು. ಆಹಾ.. ಆ ಕೆಂಪನೆಯ ಹಣ್ಣುಗಳಲ್ಲಿ ಇಳಿದಿರುತ್ತಿದ್ದ ಸಕ್ಕರೆಯ ಪಾಕದಂತಹ ಹನಿಗಳು ಇರುವ ಹಣ್ಣು ಅದ್ಬುತ ರುಚಿ ಇರುತ್ತಿದ್ದವು.ಅಂತಹ ತೊಂಡೆಹಣ್ಣುಗಳು ಸಿಕ್ಕರೆ ಆಗಾಗುತ್ತಿದ್ದ ಸಂತಸಕ್ಕೆ ಮಿತಿಯೇ ಇರುತ್ತಿರಲಿಲ್ಲ. ಹಳ್ಳದ ಒಡಲಿನಲ್ಲಿಯೇ ಇರುತ್ತಿದ್ದ ನಾನು ತೊಂಡೆಹಣ್ಣುಗಳಿಗೆ ಬರವೇ ಇರಲಿಲ್ಲ. ಹಣ್ಣಾಗಿ ಕಳಿತವುಗಳು ಮೆತ್ತಗಾಗಿ ಹುಳಿ ಬಂದರೆ ಸರಿಯಾಗಿ ಹಣ್ಣಾದವುಗಳು ಬಾಯೋಳು ಹಾಕಿ ಚೀಪಿದರೆ ಕೆಲವು ಹನಿ ಜೇನಿನ ಹನಿಯಂತೆ ಚಿಮ್ಮಿದರೆ ಬಾಯ್ತುಂಬ ರಸಗುಲ್ಲಾ ಬಿದ್ದಂತಾಗುತ್ತಿತ್ತು.ಈ ತೊಂಡೆಯ ಉಂಡು ರುಚಿ ಕಂಡಿದ್ದ ನನಗೆ ಎಲ್ಲಿಯಾದರೂ ಅವು ಕಂಡಾಗ ಸ್ಥಳದ ಪರಿವೆ ಇಲ್ಲದೇ ತಿನ್ನಲು ತನುಮನ ಹಾತೋರೆಯುತ್ತದೆ.ಈಗಲೂ ಎಲ್ಲಿಯಾದರೂ ಈ ಕೆಂಪು ಕೆಂಪು ತೊಂಡೆ ಹಣ್ಣು ಕಂಡರೆ ಅವಿರುವ ಪರಿಸರ ನೋಡಿಕೊಂಡು ಬಾಯ್ತುಂಬ ಹಾಕಿ ತಿಂದು ಮಜಾ ಮಾಡುವೆ.
ಕೆಲವು ಬಾರಿ ಹೊಟ್ಟೆತುಂಬಾ ಅವುಗಳನ್ನೇ ತಿನ್ನುತ್ತಿದ್ದ ನಾನು ಸಾಕಷ್ಟು ಪ್ರಮಾಣದಲ್ಲಿ ಬೀಜ ಪ್ರಸಾರ ಮಾಡಿದ್ದೇನೆ.!ಬಹುಶಃ ಟಾಯ್ಲೇಟ್ ಜಾಗೃತಿ ಹೆಚ್ಚಾಗಿ ಬಳಸುವಂತಾದಾಗಿನಿಂದ ನೈಸರ್ಗಿಕವಾಗಿ ಬೀಜ ಪ್ರಸಾರವಾಗುತ್ತಿದ್ದ ಪ್ರಕ್ರಿಯೆ ನಿಂತುಹೋಗಿದೆ.ಆದುದರಿಂದಲೇ ನಿಮಗನಿಸಿರಬಹುದು ಆಗ ನಾವೆಲ್ಲಾ ತಿನ್ನುತ್ತಿದ್ದ ಕಾಕಿ ಹಣ್ಣು ಇತರೆ ಹಣ್ಣುಗಳ ಸಸ್ಯಗಳು ಈಗ ಹುಟ್ಟಿಬೆಳೆಯುವುದೇ ಕಡಿಮೆಯಾಗಿವೆ.
ಕಣ್ಣು ಕಾಮನಬಿಲ್ಲು ಮೂಗು ಸಂಪಿಗೆಯ ಎಸಳು ತುಟಿಯು ತೊಂಡೆಹಣ್ಣು ನನ್ನವಳು..ಹಾಗೆ ಹೀಗೆ
ತೊಂಡೆಹಣ್ಣಿಗೂ ಹೆಣ್ಣಿಗೂ ಮಾಡುವ ಹೋಲಿಕೆ ಕವಿಪುಂಗವರದು..ನೈಸರ್ಗಿಕವಾಗಿ ಬೆಳೆದ ಇವು ವಿಟಮಿನ್ ಎ ,iron,ಮತ್ತು ಕ್ಯಾಲ್ಸಿಯಂ ಪ್ರಮಾಣವು ಅತ್ಯಧಿಕವಾಗಿ ಇರುವುದಲ್ಲದೇ ಹೃದಯದ ಮಿತ್ರ ಎನ್ನುವರು.ಈ ಹಣ್ಣು ತಿಂದರೆ ಚಯಾಪಚಯ ಕ್ರಿಯೆ ಸರಾಗವಾಗಿ ಆಗುತ್ತದೆ.ಮಾರುಕಟ್ಟೆಯಲ್ಲಿ ತೊಂಡೆಕಾಯಿ ಸಿಗುವುದಾದರೂ ಅಡವಿಯಲ್ಲಿ ಸಿಗುವ ಹಣ್ಣು ಭಲೇ ರುಚಿ..ಆದರೂ ತೊಂಡೆಹಣ್ಣಿನ ರಂಗು ತೊಂಡೆಹಣ್ಣಿಗೇ ಸಾಟಿ..
ಸೋ ಎಲ್ಲಿಯಾದರೂ ಕಂಡರೆ ಬಿಡಬೇಡಿ ಹುಡುಕಿ ತಿನ್ರಿ. ಯಾರ್ ಏನ್ ಅನ್ಕೊಂಡ್ರೆ ನಮಗೇನು ಅವರೇನು ನಮಗೆ ಬೇಕಾದಾಗ ತೊಂಡೆಹಣ್ಣು ತಂದು ಕೊಡುವರೆ??
✍️ನಾಗೇಂದ್ರ ಬಂಜಗೆರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ