ಜಗತ್ತು ಮತ್ತು ಸೂಕ್ಷ್ಮ ಜೀವಿಗಳು..
ಜಗತ್ತು ಮತ್ತು ಸೂಕ್ಷ್ಮಜೀವಿಗಳು..
ಈ ಬ್ರಹ್ಮಾಂಡದ ಸೃಷ್ಟಿಯ ನಂತರ ಮೊಟ್ಟಮೊದಲು ಈ ಭೂಮಿಯ ಮೇಲೆ ಕಾಣಿಸಿಕೊಂಡ ಜೀವಿಗಳೇ ಅಸಂಖ್ಯಾತ ಸೂಕ್ಷ್ಮ ಜೀವಿಗಳು.. ಹೆಸರೇ ಹೇಳುವಂತೆ ಅವು ಕಣ್ಣಿಗೆ ಕಾಣಲಾರದಂತಹವುಗಳಾಗಿದ್ದರಿಂದ ಬಹುಶಃ ಆಧುನಿಕ ಮೈಕ್ರೋ ಸ್ಕೋಪ್ ನಂತಹ ಸಾಧನಗಳು ಆವಿಷ್ಕರಿಸಿದ ನಂತರ ಇವುಗಳು ನಮ್ಮ ಕಣ್ಣಿಗೆ ಕಾಣುವಂತಾದವು.
ಈ ಸೂಕ್ಷ್ಮ ಜೀವಿಗಳು ಜೀವಿಸಲು ತಮ್ಮದೇ ಆದ ವ್ಯಾಪ್ತಿಯನ್ನು ಹೊಂದಿದೆ. ಕೆಲವು ನೀರಿನಲ್ಲಿ ಇನ್ನೂ ಕೆಲವು ಪ್ರಾಣಿಗಳಲ್ಲಿ ಹೀಗೆ ತಾವು ಜೀವಿಸಲು ಒಂದು ಸ್ಥಳವನ್ನು ಹುಡುಕಿಕೊಳ್ಳುತ್ತಾವೆ.ಎರಡ್ಮೂರು ವರ್ಷಗಳಿಂದ ಈಚೆಗೆ ಅಂತಹ ಸೂಕ್ಷ್ಮ ಜೀವಿಗಳ ಬಗ್ಗೆ ನಮಗೆಲ್ಲಾ ಹೆಚ್ಚೇ ತಿಳಿದಿದೆ. ಅದರಂತೆ ಈ ಸಸ್ಯಗಳಿಗೂ ಅನೇಕ ಜೀವಿಗಳು ಯಮ ಸ್ವರೂಪಿಯಂತೆ ಕಾಡುತ್ತವೆ.ಮನುಷ್ಯರಿಗೆ ಬರುವ ಬಿ ಪಿ,ಶುಗರ್ ,ಕ್ಯಾನ್ಸರ್ ನಂತಹ ರೋಗಗಳಂತೆ ಸಸ್ಯಗಳಲ್ಲಿಯೂ ರೋಗದ ಬಾದೆಗಳ ಬಗ್ಗೆ ಒಂದಷ್ಟು ತಿಳಿಯುವ.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮ ಅಕ್ಕನ ಬಾಣಂತನ ಮಾಡಲು ನಮ್ಮ ಭಾವನವರ ಅಜ್ಜಿ ಬಂದಿದ್ದರು.ಅವರಿಗೆ ಆಗಲೇ ಸುಮಾರು ಎಂಭತ್ತೈದು ತೊಂಭತ್ತು ವರ್ಷ ಆಗಿತ್ತು.ಆ ಅಜ್ಜಿ ಬರುತ್ತಲೇ ಉತ್ತುತ್ತಿ,ಒಣಕೊಬ್ಬರಿ, ಕಲ್ಲುಸಕ್ಕರೆ, ಅಂಟು,ಬಾಣಂತಿ ಕಾರ ಅದು ಇದು ಎಂದು ಸಂತೆ ಮಾಡಿಕೊಂಡು ಬಂದಿದ್ದರು.ಅದೆಲ್ಲವೂ ಒಳ್ಳಿನಲ್ಲಿ ಕುಟ್ಟಿ ಕುಟ್ಟಿ ಒಂದು ಡಬ್ಬಿಯಲ್ಲಿ ತುಂಬಿಡುವ ಹೊತ್ತಿಗೆ ಮಗುವಿಗೆ ಶೀತ ಆಗಿತ್ತು. ಶೀತದಲ್ಲಿ ಮಗು ಹಾಲು ಕುಡಿಯಲು ಒಪ್ಪದೇ ಐದತ್ತು ನಿಮಿಷಕ್ಕೊಮ್ಮೆ ಹಗಲು ರಾತ್ರಿ ಎನ್ನದೇ ಅಳುವುದೇ ಅಳುವುದು. ಅಳುವ ಕಿರಿ ಕಿರಿಗೆ "ವತ್ತಾರಿಕೆಗೆ ಹೋಗಿ ಗಿಡ ತಂದು ತೇದು ಹಾಕುವೇ ಸುಮ್ಕಿರು..'ಎಂದು ಆ ಅಜ್ಜಿ ಮಗುವನ್ನು ಸಮಾಧಾನವನ್ನು ಮಾಡುತ್ತಿದ್ದರೆ ಈ ಸಣ್ಣ ಮಗುವಿಗೆ ಏನ್ ಗಿಡ ಹಾಕುವಳೋ,?ಅದ್ಹೇಗೆ ಹಾಕುವಳೋ ಎಂಥಾ ಗಿಡವನ್ನು ಹಾಕುವಳು ಎಂಬುದಾಗಿ ಹತ್ತಾರು ಪ್ರಶ್ನೆಗಳು ನನ್ನ ತಲೆಯಲ್ಲಿ ತಿರುಗುತ್ತಿದ್ದವು. ಮರುದಿನ ಬೆಳಗ್ಗೆ ಮುಂಜಾನೆದ್ದು ಮನೆಯ ಮುಂದೆ ಅಡಿಕೆ ಎಲೆಯ ಬಾಯೊಳು ಹಾಕಿ,ಸುಣ್ಣಗಾವಿ ಯಿಂದ ಸುಣ್ಣ ಕೆರೆಯುತ್ತಾ,ಸುಣ್ಣಗಾವಿ ಹಿಡಿದ ಕೈಯಲ್ಲೇ ಊರುಗೋಲು ಹಿಡಿದು "ಲೇ ನಾಗಪ್ಪ...ನಾಗಪ್ಪ ಎತ್ಲಾಗ್ ಹೋದೆಯಲೋ... ಬಾರಲೋ.."ಎಂದು ಒಂದೇ ಸಮನೆ ಕೂಗುತ್ತಳಿದ್ದಳು.
ಏನಜ್ಜಿ..?? ಎಂದು ಹೊರಬಂದ ನಾನು ಕೇಳಿದ್ದಕ್ಕೆ ಹೊಲ್ದಾಕೆ ಹೋಗಿ ಬರೋಣ ಬಾ ಎಂದು ಕರೆದಳು..ನನಗೆ ಕೆಲಸ ಮಾಡಲು ಮೀಸಲಿದ್ದ ಸಗಣಿ ಕಸ ಬಾಚುವುದು ತಪ್ಪಿಸಿಕೊಳ್ಳಬಹುದೆಂದು ಕರೆದಕೂಡಲೇ ನೆಡಿಯಜ್ಜಿ ಎಂದು ಹೊರಟೇ ಬಿಟ್ಟೆವು.
ಹೊಲದ ಬದುವಿನಲ್ಲಿ ಕೆಲವು ಗಿಡಗಳನ್ನು ಕೋಲಿಂದ ಅತ್ತ ಇತ್ತ ಸರಿಸಿ ಸರಿಸಿ ನೋಡುತ್ತಿದ್ದಳು..ಎಂಟತ್ತು ನಿಮಿಷಗಳು ಹುಡುಕಿದ ನಂತರ ಎಲ್ಲವೂ ಒಂದೇ ತೆರನಾದ ಗಿಡಗಳ ಮದ್ಯದ ಯಾವುದೋ ಒಂದು ಗಿಡ ತೋರಿಸಿ ಈ ಗಿಡ ಕಿತ್ಕ ಅಂದಳು..
ಆ ಗಿಡವನ್ನು ಬೇರು ಸಹಿತ ಕೀಳುವಷ್ಟು ಬಲ ನನಗೆ ಆಗ ಇರಲಿಲ್ಲ.. ಬಿದ್ದು ಒದ್ದಾಡಿ ಬುಡ ಸಹಿತ ಕೀಳಲಾಗದೇ ಕೇವಲ ಅರೆಗಳನ್ನು ತಿರುವಿ ತಿರುವಿ ಕಿತ್ತು ತಂದೆ.
ಹಾಗೆ ಮುಂದೆ ಹುಡುಕುತ್ತಾ ಹೋದ ಅಜ್ಜಿ ಅಲ್ಲಿ ಇನ್ನೊಂದು ಗಿಡವ ಸೆಲೆಕ್ಟ್ ಮಾಡಿ ನನಗಾಗಿ ಕಾಯುತ್ತಿದ್ದಳು. ಒಂದೇ ತೆರನಾದ ಗಿಡಗಳಲ್ಲಿ ಈ ಎರಡು ಮೂರು ಗಿಡಗಳನ್ನು ಮಾತ್ರ ಯಾಕಜ್ಜಿ ನೀವು ಕಿತ್ಕಂಡಿದ್ದು ಎಂದು ಕೇಳಿದ್ದಕ್ಕೆ ಆ ಅರೆಯ ಗಣ್ಣುಗಳಲ್ಲಿದ್ದ ಕಡಲೆಕಾಯಿ ಗಾತ್ರದ ಗಂಟುಗಳನ್ನು ತೋರಿಸಿ ಈ ಗೆಜ್ಜೆ ಇದ್ದಾವಲ್ಲ ಅದಕ್ಕೆ ಇಂತಾವು ಕಿತ್ಕಂಡಿದ್ದು ಅಂದಳು..ಇದೇ ಯಾಕ್ ಕಿತ್ಕಂಡಿದ್ದು ಇವೆಲ್ಲವೂ ಯಾಕ್ ಬರಲ್ಲ ಎಂದಿದ್ದಕ್ಕೆ ಸಣ್ಣ ಮಕ್ಕಳಿಗೆ ಶೀತ,ಕೆಮ್ಮು ಆದರೆ ಹಾಕುವುದು. ಈ ಗೆಜ್ಜೆ ಇರುತ್ತಾವಲ್ಲ ಇವು.. ಅದಕ್ಕೆ ಇವನ್ನು ಕಿತ್ಕಂಡಿದ್ದು.. ನೆಡಿ ಹೋಗಾನಾ ಮನೆಗೆ ಮುಂದಿನ ಸರಿ ಬೇಕಾದರೆ ಇಗೋ ನೋಡಿಕೋ ಇಂತಾವೆ ತರಬೇಕು ಎಂದು ಹೇಳುತ್ತಾ ಎರಡ್ಮೂರು ಗಿಡಗಳ ಏಳೆಂಟು ಅರೆಗಳನ್ನು ಮನೆಗೆ ತಂದಿದ್ದೆವು.ಒಂದು ಕಡ್ಡಿ ಕೈಯಲ್ಲಿಡಿದು ಉಳಿದವು ಕಟ್ಟು ಕಟ್ಟಿ ಮನೆಯ ಮೇಲೆ ಎಸೆದಳು. ಕೈಯಲ್ಲಿದ್ದ ಒಂದು ಕಡ್ಡಿಗೆ ಕೆಮ್ಮಣ್ಣು ಸವರಿ ಒಲೆಯಲ್ಲಿ ಇಟ್ಟಳು. ನಾಲ್ಕೈದು ನಿಮಿಷಗಳ ನಂತರ ಗೆಜ್ಜೆಯಂತಹ ಗಂಟನ್ನು ಒಂದು ಕಲ್ಲಿಗೆ ಹಾಕಿ ನುಣ್ಣಗೆ ತೇಯ್ದರು.ಜೊತೆಗೆ ಬಜೆಯನ್ನು ತೇಯ್ದು ಸೇರಿಸಿದರು.ತೇಯ್ದ ರಸಕ್ಕೆ ನಾಲ್ಕೈದು ಹನಿ ತಾಯಿಯ ಹಾಲು ಸೇರಿಸಿ ಒಂದು ಬನೀಯನ್ ಬಟ್ಟೆಯಲ್ಲಿ ಸೋಸಿ ಒಳಲೆಗೆ ಹಾಕಿ ಆ ಮಗುವಿಗೆ ಕುಡಿಸಿದರು. ದಿನಕ್ಕೆ ಎರಡ್ಮೂರು ಬಾರಿ ಕುಡಿಸುತ್ತಾ ಕುಡಿಸುತ್ತಾ ಶೀತ,ಕಫ ಕಡಿಮೆಯಾಗಿ ಕಿರಿ ಕಿರಿಯಿಲ್ಲದೇ ಮಗು ಆರೋಗ್ಯದಿಂದ ಹಾಲುಂಡು ಆಡುತ್ತಿತ್ತು.ಅಂದಿನಿಂದ ದನಕಾಯುವಾಗ ಅಂತಹ ಗೆಜ್ಜೆಗಳಿರುವ ಹತ್ತಾರು ಗಿಡಗಳ ಕಂಡಿದ್ದೆ. ಕೆಲವು ಬಾರಿ ಅವುಗಳನ್ನು ಜಜ್ಜಿ ನೋಡಿದರೂ ಕಡ್ಡಿ ಬಿಟ್ಟರೆ ಬೇರೆ ಏನೂ ಗೊತ್ತಾಗಿರಲಿಲ್ಲ.ಇಂತಹ ಗಂಟುಗಳಿರುವ ವಿವಿಧ ಜಾತಿಯ ಅನೇಕ ಗಿಡಮರಗಳನ್ನು ನೋಡಿದ್ದೇನೆ. ಈ ಗಿಡಮರಗಳ ಗಂಟುಗಳ ಮರ್ಮ ನನಗೆ ಆಗ ಸ್ಪಷ್ಟವಾಗಿ ತಿಳಿದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಗಂಟುಗಳ ಹಿಂದೆ ಬಿದ್ದ ನಾನು ಈ ಗಂಟು ಬಿಚ್ಚಿ ಒಳ ಹೋದಾಗ ನನಗೆ ತಿಳಿದಿದ್ದು ಈ ಕೆಳಗಿನಂತೆ ದಾಖಲಿಸಿದ್ದೇನೆ.
ಈ ಎಲೆ ಮತ್ತು ಕಾಂಡಗಳಲ್ಲಿ ಕಂಡು ಬರುವ ಗಂಟುಗಳು ಸೂಕ್ಷ್ಮ ಜೀವಿಗಳ ಚಟುವಟಿಕೆ. ಎಲೆಯ ಎಪಿಡರ್ಮಿಸ್ ಗೆ ಹೊಕ್ಕ ಸೂಕ್ಷ್ಮ ಜೀವಿಗಳು ತನ್ನ ದೇಹದಿಂದ ರಾಸಾಯನಿಕವನ್ನು ಸ್ರವಿಸುತ್ತಾವೆ.ಈ ರಾಸಾಯನಿಕಗಳು ಆ ಎಲೆಯ/ಕಾಂಡದ ಜೈವಿಕ ರಚನೆಯನ್ನು ರೂಪಾಂತರಿಸುತ್ತಾವೆ.ತತಕ್ಷಣಕ್ಕೆ ಈ ಕ್ರಿಯೆ ಆ ಸಸ್ಯಕ್ಕೆ ಅಪಾಯಕಾರಿ ಅಲ್ಲದೇ ಇದ್ದರೂ ಆ ಸೂಕ್ಷ್ಮ ಜೀವಿಯ ನೆಲೆಯ ಜಾಗದಲ್ಲಿ ಆ ಎಲೆ/ಸಸ್ಯಕ್ಕೆ ಹೊಂದಿಕೊಂಡೆ ಕೋಶದ ರೀತಿಯಾಗಿ ಬೆಳೆಯುತ್ತಾ ಹೋಗುತ್ತಾವೆ. ಕೋಶಗಳಾಗಿ ಮಾರ್ಪಾಡು ಆಗುವಾಗ ಆ ಸಸ್ಯದ ಒಟ್ಟಾರೆಯ ಗರಿಷ್ಠ ಪ್ರಮಾಣದ ಸಾರವು ಆ ಗಂಟುಗಳಲ್ಲಿ ಶೇಖರಣೆಯಾಗುತ್ತಾ ಪರಾವಲಂಬಿಗೆ ಆಹಾರ ,ರಕ್ಷಣೆ ಒದಗಿಸುವ ಕೋಶವಾಗಿ ನಿರ್ಮಾಣವಾಗುತ್ತಾ ಹೋಗುತ್ತದೆ.ಈ ಹಂತದಲ್ಲಿ ಎರಡೂ ಪರಸ್ಪರ ಸಹಕರಿಸಿಕೊಂಡು ಒಟ್ಟಿಗೆ ಬಾಳುತ್ತಾವೆ.
Biological ಪ್ರಕಾರ CYTES ಎಂದು ಕರೆಯುವ ಇವುಗಳ ಸೂಕ್ಷ್ಮ ಜೀವಿಗಳು ಕೆಲವು ದಿನಗಳ ನಂತರ ಕಣ್ಣಿಗೆ ಕಾಣುವಂತಹ ಮ್ಯಾಕ್ರೋ ಜೀವಿಯಾಗಿ ಪರಿವರ್ತಿತ ಹೊಂದುತ್ತಾವೆ. ಸಸ್ಯಗಳಿಗೆ ನಿಜವಾದ ಕಂಟಕ ಇರುವುದು ಈ ಹಂತದಲ್ಲಿ.. ಅಸಂಖ್ಯಾತ ಸಂಖ್ಯೆಯಲ್ಲಿ ಸೃಷ್ಟಿಯಾಗುವ ಹುಳುಗಳು ಮೊದಲು ಆ ಸಸ್ಯವು ಹೂವು,ಕಾಯಿ,ಹಣ್ಣು ಹೀಗೆ ಯಾವ ಹಂತದಲ್ಲಿದ್ದರೂ ಅದರ ಅದನ್ನು ತಿಂದು ಮುಗಿಸಿ ಇಡೀ ಸಸ್ಯದ ಬೆಳವಣಿಗೆಯನ್ನೇ ಸುಮಾರು ಅರವತ್ತರಿಂದ ತೊಂಭತ್ತು ದಿನಗಳವರೆಗೆ ತಡೆ ಹಿಡಿಯುತ್ತಾವೆ.ಹೊಂಗೆಯಂತಹ ಗಿಡಗಳಲ್ಲಿ ಎಲೆಗಳೆಲ್ಲಾ ಸಂಪೂರ್ಣವಾಗಿ ಕೀಟಗಳ ದಾಳಿಗೆ ಒಳಗಾಗಿ ಎಲೆಗಳು ಕೋಶಗಳಂತೆ ಮಾರ್ಪಾಡಾಗುವವು. ಇದೇ ರೀತಿಯಾಗಿ ಬನ್ನಿ ಮರಗಳಲ್ಲಿ ಹಿಡಿ ಗಾತ್ರದ ಗಂಟುಗಳು ಕಂಡು ಬರುವವು. ಕೆಲವು ಮುಳ್ಳಿನ ಜಾತಿಯ ಮರಗಳಲ್ಲಿ ಕಾಂಡದ ಸರಿ ಸಮಾನ ಗಾತ್ರದವು ಕಂಡುಬರುವವು.ಇಂತಹ ರೋಗ ಯಾವುದಾದರೂ ಮರಗಳಿಗೆ ಬಂತೆಂದರೆ ಸ್ವಾಭಾವಿಕವಾಗಿ ಅದು ರೋಗ ಮುಕ್ತವಾಗಲು ಕಷ್ಟ ಸಾಧ್ಯ.. ಈ ತೆರನಾದ ಗಂಟುಗಳಿರುವ ಬೃಹತ್ ಬನ್ನಿಮರವೊಂದು ನಮ್ಮ ಪಕ್ಕದ ಹೊಲದಲ್ಲಿ ಕಣ್ಣಮುಂದೆಯೇ ಒಣಗಿ ಹೋಗಿತ್ತು. ಇಂತಹ ಗಂಟುಗಳಿರುವ ಮೂಲಿಕೆಗಳನ್ನು ಹಸುಗೂಸಿನಿಂದ ವೃದ್ಧ ರವರೆಗೂ ವಿವಿಧ ಸಾಮಾನ್ಯರೋಗಗಳಿಗೆ ಔಷಧಿಯಾಗಿ ಬಳಸುವರು. ಈ ಗಿಡಮೂಲಿಕೆಗಳ ಔಷಧೀಯ ಜ್ಞಾನದ ವರ್ಗಾವಣೆ ಇತ್ತೀಚಿನ ಜನರೇಶನ್ ನವರಿಗೆ ಆಗಲಿಲ್ಲ.ಅದು ಬಹುತೇಕ ಅಳಿವಿನಂಚಿನಲ್ಲಿದೆ ಎನ್ನಬಹುದು.ಅನೇಕ ರೋಗಗಳಿ ಶಕ್ತಿಯುತ ಮತ್ತು ಪ್ರಧಾನ ಔಷಧಿಯಾಗಿ ಈಗಲೂ ಪರಾವಲಂಬಿ ಸಸ್ಯಗಳನ್ನು ಬಳಸುವುದು ನಿಮಗೆ ಗೊತ್ತಿರಬಹುದು.
ಬನ್ನಿ ಮರದ ಕಾಂಡದಲ್ಲಿ ಗಂಟು..
ಮನುಷ್ಯರಿಗೆ ರೋಗ-ರುಜಿನ ಬರದೇ ಮರಕ್ಕೆ ಬರುತ್ತಾ..??ಎಂಬ ನುಡಿಗಟ್ಟು ಸುಳ್ಳಾಗಿದೆ.ಈ ಅರಣ್ಯನಾಶಕ್ಕೆ ಮನುಷ್ಯನ ಚಟ-ವಟಿಕೆಗಳು ಪ್ರದಾನ ಕಾರಣವಾದರೆ ಇನ್ನೊಂದಷ್ಟು ಪ್ರಮಾಣ ಅರಣ್ಯ ನಾಶಕ್ಕೆ ಇಂತಹ ರೋಗಗಳೂ ಕಾರಣ.ಹಿಂದಿನ ದಿನಗಳಲ್ಲಿ ದ್ವಿದಳ ಧಾನ್ಯಗಳು ಹುಳು ಆಗಬಾರದೆಂದು ಬೇವಿನ ಎಲೆಗಳನ್ನು, ಮೆಣಸಿನಕಾಯಿ/ಕಾರದಪುಡಿಯನ್ನು ಕಾಳುಗಳಲ್ಲಿ ಮಿಕ್ಸ್ ಮಾಡುತ್ತಿದ್ದರು. ಆಗ ಅದು ಕೀಟಗಳ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿತ್ತು ಕೂಡ..!ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪಾರ್ಮೂಲಾ ವರ್ಕೌಟ್ ಆಗುತ್ತಿಲ್ಲ. ಕಾರಣ ಕೀಟನಾಶಕಗಳ ಸಿಂಪಡಣೆ ಯ ಪರಿಣಾಮ ಈ ಕೀಟಗಳು ಕೀಟನಾಶಕಗಳಂತಹವುಗಳ ವಿರುದ್ಧ ಸೆಣಸಾಡಿ ಬದುಕುಳಿಯುವ ತಾಕತ್ತು ಅವುಗಳಿಗೆ ಬಂದಿದೆ. ಆದ್ದರಿಂದ ಕೀಟಗಳಿಗೆ ಈಗ ಬೇವಿನ ಮರ,ಮೆಣಸಿನಕಾಯಿ ಬಹಳಷ್ಟು ಇಷ್ಟಪಟ್ಟು ತಿನ್ನುವ ಆಹಾರಗಳಾಗಿವೆ.
ಸೃ಼ಷ್ಟಿಯ ಆದಿಮ ಜೀವಿಗಳಾದ ಇವುಗಳು ಭೂಮಿಯಿಂದ 30-50 km ಮೇಲೆಯೂ,10000 ಮೀಟರ್ ಸಮುದ್ರದಾಳದಲ್ಲೂ,ಗಟ್ಟಿ ಭೂ ಗರ್ಭದಲ್ಲೂ,ಅಂಟಾರ್ಕ್ಟಿಕ ದಂತಹ ಆಳ ಹಿಮ ಸಮುದ್ರದಲ್ಲೂ, ಅಷ್ಟೇಯಾಕೆ ಆಮ್ಲಜನಕ ರಹಿತ ಜಾಗದಲ್ಲೂ ಈ ಸೂಕ್ಷ್ಮ ಜೀವಿಗಳು ಲಕ್ಷಾಂತರ ವರ್ಷಗಳು ಬದುಕಿವೆ. ನಾವೇ ಪ್ರಬಲ ಎಂದು ಇತರ ಜೀವಿಗಳನ್ನು ಕಡೆಗಣಿಸಿದ ಕಾರಣಕ್ಕೆ ಮಾನವ ಜಗತ್ತಿಗೆ ಈ ಸೂಕ್ಷ್ಮ ಜೀವಿಗಳು ಕೋವಿಡ್ ನಂತಹ ವ್ಯಾಘ್ರ ರೂಪಕ್ಕೆ ಬಂದ ನಂತರ ಇಡೀ ವಿಶ್ವದಾದ್ಯಂತ ಎಲ್ಲರೂ ಇವುಗಳ ಕಡೆ ಸ್ವಲ್ಪಮಟ್ಟಿಗೆ ಸೀರಿಯಸ್ ಆಗಿ ನೋಡುವಂತಾಗಿದೆ. ಕ್ರಿಸ್ತ ಪೂರ್ವದಿಂದಲೂ ಮನುಷ್ಯರ ಬಲಿಗೆ ಪ್ಲೇಗ್ ನಂತಹ ರೋಗಗಳು ಯಮಸ್ವರೂಪಿಯಂತೆ ಕಾಡಿದರೂ ಅನೇಕ ಯಶಸ್ವೀ ವೈದ್ಯಕೀಯ ಸಂಶೋಧನೆ & ಸೌಲಭ್ಯಗಳ ಮೂಲಕ ಹಿಮ್ಮೆಟ್ಟಿಸಿದೆವಾದರೂ ಶಾಶ್ವತವಾಗಿ ಅಪಾಯಕಾರಿ ಸೂಕ್ಷ್ಮ ಜೀವಿಗಳನ್ನು ನಾಶಮಾಡಲಾಗಲಿಲ್ಲ.ಅಸ್ತಿತ್ವದಲ್ಲಿದ್ದ ಸೂಕ್ಷ್ಮ ಜೀವಿಗಳು ನಮ್ಮ ಔಷಧದ ಪ್ರಭಾವಕ್ಕೆ ರೂಪಾಂತರಿಸಿಕೊಂಡು ಕೋವಿಡ್,ಎಬೋಲಾ ಎಂಬಂತಹ ಬೇರೆ ಸ್ವರೂಪಗಳಲ್ಲಿ ದಾಳಿ ಮಾಡುತ್ತಿವೆ.ಈಗೀನ ಮೆಡಿಸಿನ್ ರೋಗಿಗಳಿಗೆ ತಾತ್ಕಲಿಕ ಆರೋಗ್ಯ ನೀಡಿ,ರೋಗ ವಾಸಿಯಾದ ಮೇಲೆ ಶಾಶ್ವತ ರೋಗಿಗಳನ್ನಾಗಿ ಮಾಡುವ ಔಷಧಿಗಳನ್ನೇ ನಾವು ಇಂದು ಹೆಚ್ಚು ಬಳಸುತ್ತಿದ್ದೇವೆ.ನೈಸರ್ಗಿಕವಾಗಿ ಆಯುರ್ವೇದದ ಕಡೆ ಹೆಚ್ಚು ಆದ್ಯತೆಯನ್ನು ನೀಡುವ ಅನಿವಾರ್ಯತೆ ಎಲ್ಲರಿಗೂ ಇದೆ.
ಅತ್ತಿ ಗಿಡದ ಸಸ್ಯದಲ್ಲಿ ..
ತೇಗದ ಮರದ ಎಲೆಗಳಲ್ಲಿ..
✍️ನಾಗೇಂದ್ರ ಬಂಜಗೆರೆ.
👌👌
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಯಾವ ಕಮೆಂಟ್???
ಅಳಿಸಿ👌
ಪ್ರತ್ಯುತ್ತರಅಳಿಸಿ👌👌👌🌹🌹🌹
ಪ್ರತ್ಯುತ್ತರಅಳಿಸಿತುಂಬಾ ಉಪಯುಕ್ತ ಮಾಹಿತಿ
ಪ್ರತ್ಯುತ್ತರಅಳಿಸಿ