ಕಾವೇರಿ ನೀನೆಷ್ಟು ಸುಂದರಿ..part-1

ಕಾವೇರಿ ನೀನೆಷ್ಟು ಸುಂದರಿ...

ಕನ್ನಡ ನಾಡಿನ ಜೀವನದಿ ಈ ಕಾವೇರಿ... ಓ ಓ ಕಾವೇರಿ... ಈ ವೈಯ್ಯಾರಿ.

ಈ ಹಾಡನ್ನು ನಾನು ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ  ಹಲವು ಬಾರಿ ಕೇಳಿದ್ದೆ.. ಆಗ ಕೇಳಿದ ಮತ್ತೊಂದು ಹಾಡು ಎಂದರೆ ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ಸಾಗಿಸು...

ಈ ಎರಡೂ ಹಾಡುಗಳನ್ನು ಕೇಳಿದಾಗಿನಿಂದ ಕಾವೇರಿಯನ್ನು ನೋಡಬೇಕು ಎಂದು ಮನಸಿನಲ್ಲಿ ಅನಿಸುತ್ತಿತ್ತು.. ಆ ವಯಸ್ಸಿನಲ್ಲಿ  ಮುಂದೊಂದು ದಿನ ನೋಡಬೇಕು ಎಂದೆನಿಸಿತ್ತಾದರೂ ಪ್ರೌಢಶಾಲೆಯಲ್ಲಿದ್ದಾಗ  ಮೈಸೂರಿಗೆ ಪ್ರವಾಸ ಬಂದಾಗ ಕಾವೇರಿಯ  ಕೆ ಆರ್ ಎಸ್ ನೋಡಿ ಪುಳಕಗೊಂಡಿದ್ದೆ. ಹಾಡುಗಳಲ್ಲಿ ಅಡಗಿದ ಕಾವೇರಿಯ ಮಹತ್ವ ಅರ್ಥ ಆಗಬೇಕಾದರೆ ಕಾವೇರಿಯ ಮೂಲದಿಂದ ನೋಡಬೇಕು   ಆಗ ಮಾತ್ರ ಕಾವೇರಿಯ ಬಗ್ಗೆ ಗೊತ್ತಾಗೋದು  ಎಂದೆನಿಸಿತ್ತು‌. ಇದು ಸಾಕಾರಗೊಂಡಿದ್ದು  ಕೈ ಹಿಡಿದ ಕುಮುದಾ ಜೊತೆಯಿರಲು, ಕೈಯಲ್ಲಿ ಕಾರು, ಜೇಬಲ್ಲಿ ನಾನೇ ದುಡಿದ ಕಾಸಿದ್ದಾಗ ನಾವು ತೀರ್ಮಾನಿಸಿದ್ದು ಎಷ್ಟು ಸಾದ್ಯವೋ ಅಷ್ಟು ದೇಶ ಸುತ್ತಬೇಕು ಅಂತ! ದೇಶವನ್ನಂತೂ ಸಂಪೂರ್ಣ ಸುತ್ತಲಾಗಿಲ್ಲ ಆದರೆ ಕೆಲವೇ ಪ್ರದೇಶಗಳನ್ನಾದರೂ ನೋಡಿದ್ದೇವೆ. ಅದರಲ್ಲಿ ಈ ಲೇಖನದಲ್ಲಿ ನಿಮಗೆ ತಿಳಿಸಲಿಚ್ಚಿಸುವುದು  ಕಾವೇರಿಯ ಹುಟ್ಟಿನಿಂದ ಹೊಗೆನಕಲ್ ವರೆಗೂ  ಅವಳ ಹೆಜ್ಜೆಯ ಹಾದಿಯಲ್ಲಿ ಮೂಡಿದ ಜಲಧಾರೆಗಳ ಸೊಬಗು..ಆ  ಸೌಂದರ್ಯವನ್ನು ನಾನು ಕಂಡ ಅನುಭವದ ಪ್ರವಾಸಿ ಕಥನ.. 

ನಮ್ಮ ಸ್ನೇಹಿತ  ನರಸಿಂಹ ರಾಜಾಪುರದ ಅಶೋಕ ಮದುವೆಯಾಗಲೆಂದು ಹುಡುಗಿ ನೋಡಲು ಶುರುಮಾಡಿ  ಬಹಳ ದಿನಕ್ಕೆ ಮಡಿಕೇರಿಯಲ್ಲಿ ಹುಡುಗಿ ಖಾಯಂ ಆಗಿತ್ತು. ನಾವು ನೋಡಲೇಬೇಕಾದ ಹಿಟ್ ಲಿಸ್ಟ್ ಪಟ್ಟಿಯಲ್ಲಿ ಮಡಿಕೇರಿಯೂ ಒಂದಾಗಿದ್ದೂ ಅಶೋಕನ ಮದುವೆ ಮಡಿಕೇರಿಯಲ್ಲಿ ಪಿಕ್ಸ್ ಆಗಿದ್ದು ಮಡಿಕೇರಿಯನ್ನು ನೋಡಿದಂತೆಯೂ ಮತ್ತು ಅಶೋಕನ ಮದುವೆ ಮಾಡಿದಂತೆಯೂ ಆಗುತ್ತದೆಂದು ಎರಡು ವರ್ಷದ ಮಗಳು ತನೇಹಾಳೊಂದಿಗೆ ನಾಲ್ಕೈದು ದಿನಗಳಿಗೆ ಲಗೇಜ್ ಸಿದ್ದಪಡಿಸಿಕೊಂಡು  ಹೊರಟೆವು.

 ಮದುವೆಯ ಮುನ್ನಾದಿನ  ಸಂಜೆ ನಾಲ್ಕೈದು ಗಂಟೆಗೆ ಮಡಿಕೇರಿಯ ರಾಜಾಸೀಟ್ ತಲುಪಿದೆವು. ಸೂರ್ಯಾಸ್ತ ಈ ಜಾಗದಿಂದ ಅಧ್ಬುತ ವಾಗಿ ಕಾಣಿಸುತ್ತದೆಯಂತೆಂದು ನೋಡಲು ಕುಳಿತಿದ್ದೇವು. ವಿಶಾಲ ವನಸಿರಿಯ ಆಳಕ್ಕೇ ಜಾರಿದ ರವಿ ಹೊಂಬಣ್ಣದ ತೇಜವನ್ನು ಪಡುವಣದ ಆಗಸದಲ್ಲಿ ಮೂಡಿಸಿದ್ದ.ರವಿ ಆಗಸದಿ ಜಾರಿದಾಗ ಚಳಿಯ ಸುಳಿಗಾಳಿ ಜಾಸ್ತಿಯಾಯಿತು.ದಿನವಿಡೀ  ಡ್ರೈವಿಂಗ್ ಗೆ ಸುಸ್ತಾಗಿದ್ದ ನಾನು ಅಲ್ಲೇ ಯಾವುದೋ ಹೊಂ ಸ್ಟೇ ನಲ್ಲಿ ಉಳಿದುಕೊಂಡಿದ್ದೆವು.

ಮಡಿಕೇರಿಯ ರಾಜಾ ಸೀಟ್ ನಲ್ಲಿ ನಾನು ನನ್ನ ಮಗಳ
...
ಮರುದಿನ ಮಡಿಕೇರಿ ಪಟ್ಟಣದ ಕೇಂದ್ರ    ಓಂಕಾರೇಶ್ವರ ದೇವಸ್ಥಾನದ ಸಮುದಾಯ ಭವನ ದಲ್ಲಿ  ಅಶೋಕನ ಮದುವೆ  ಮುಗಿಸಿ ಆ ದಿನವೆಲ್ಲಾ ಮಡಿಕೇರಿಯ ಟಿಪ್ಪು ಅರಮನೆ,ಮ್ಯೂಸಿಯಂ  ನೋಡಿ ನಾಳೆಗೆ ತಲಕಾವೇರಿಯ ನೋಡಲು early morning ಹೋಗೋಣ ಎಂದು ರೂಂ ಗೆ ಬಂದೆವು.
ಓಂಕಾರೇಶ್ವರ ದೇವಸ್ಥಾನ-ಮಡಿಕೇರಿ(ಸಾಂದರ್ಭಿಕ ಚಿತ್ರ)

ಬಿಸಿಲ ಬರನಾಡಿನಲ್ಲೇ ಹುಟ್ಟಿ ಬೆಳೆದ ನಮಗೆ  ಮಡಿಕೇರಿಯ ಮಂಜು ಕಾಶ್ಮೀರ ಹಿಮದಂತೆ ಭಾಸವಾಯಿತು. ಬೆಳಗಿನ ಬೆಳ್ಳನೆಯ ಮಂಜಿನ ಅನಭವ ವರ್ಣಿಸಲಾಗದು ಅದನ್ನು ಅನುಭವಿಸಬೇಕು. ಇಬ್ಬನಿಯ ಸಿಂಚನದಲ್ಲಿ ಕಾರ್ ಡ್ರೈವಿಂಗ್  ಇನ್ನಿಲ್ಲದ ಥ್ರಿಲ್ ನೀಡುತಿದ್ದರೇ ಪ್ರತಿವರ್ಷವೂ ಮಳೆಗೆ ಭಾಗಮಂಡಲ ಮುಳುಗಿದಾಗ ಒಮ್ಮೇ ನೋಡಬೇಕು ಎಂದೆನಿಸಿತು.  ಅಲ್ಲಲ್ಲಿ ದಾರಿ confuse ಆಗುತ್ತಿದ್ದರಿಂದ ಅವರಿವರ ಕೇಳಿ  ಕಾವೇರಿಯ ಉಗಮಸ್ಥಾನ ತಲಕಾವೇರಿಯ ತಲುಪಿದೆವು.

ಮಂಜು ಮುಸುಕಿದ ಮಬ್ಬಿನಲಿ ಎತ್ತ ನೋಡಿದರೂ ಇಬ್ಬನಿ.. ಎತ್ತರ ಪ್ರದೇಶದಲ್ಲಿ ಸುಳಿಗಾಳಿಯಂತೆ ಬೀಸುತ್ತಿದ್ದ  ತಣ್ಣನೆಯ ಶೀತ ಗಾಳಿ ಮೈಯನ್ನು ನಡುಕ ಉಂಟುಮಾಡುತ್ತಿತ್ತು.  ತಲಕಾವೇರಿಯ ಸುತ್ತಮುತ್ತ ಗ್ರಾನೈಟ್ ಮಾರ್ಬಲ್ ಬಳಸಿ ಅಂದ ಚೆಂದ ಮಾಡಿದ್ದರೆ ಆ ಶೀತದ ವಾತಾವರಣಕ್ಕೆ  ಅಂಗಾಲುಗಳು  ಮಂಜುಗಡ್ಡೆಯ ಮೇಲೆ ನಡೆದಂತೆ ಅನಿಸುತ್ತಿತ್ತು.ತಲಾಕಾವೇರಿ ಪ್ರದೇಶವು ಬ್ರಹ್ಮಗಿರಿ ಬೆಟ್ಟಗಳ ತುದಿ. ಸುತ್ತಮುತ್ತಲಿನ ಪ್ರದೇಶಕ್ಕಿಂತ ಎತ್ತರ ಮತ್ತು ಹೆಚ್ಚುಮಳೆ ಬೀಳುವುದರಿಂದ  ಸ್ವಲ್ಪ ಪ್ರದೇಶದಲ್ಲಿದ್ದು ಕೇವಲ ಹುಲ್ಲಷ್ಟೇ ಇತ್ತು. ಸ್ವಾಭಾವಿಕವಾಗಿ  ಬೆಟ್ಟದ ಅಂಚಿನಲ್ಲಿ ಭೂ ಗರ್ಭದಲ್ಲಿನ ಅಂತರ್ಜಲ ಒಸರಿ  ನೀರಿನ ಒರತೆ ಇರುವವರೆಗೂ ಜಿನುಗುವುದು ಸಾಮಾನ್ಯ.ಆದರೆ 'ತೀರ್ಥೋತ್ಬವ'ಎಂದು ಆಚರಿಸುವ ನಿಗಧಿತ ದಿನದಂದೇ ಅಲ್ಲಿ ನೀರು ಮೂರು ಬಾರಿ  ಬುಗ್ಗೆಯಂತೆ ಹೇಗೆ ಬರುವುದು ಎಂಬುದಕ್ಕೆ  ನನಗೆ clarity ಸಿಕ್ಕಿಲ್ಲ . ಈ ವಿಚಾರವಾಗಿ ನಾನು ಕುಮುದಾ ಚರ್ಚಿಸಿ ಕಾವೇರಿ ಮಾತೆ, ಗಂಗೆಯ ಸ್ವರೂಪ ಅದು ಇದೂ ಎಂದು  ಐತಿಹ್ಯ ಹೇಳಿದಾಗ ನಾನೇ  ನನ್ನ ಮಾತಿಗೆ ವಿರಾಮ ಇಟ್ಟೆ..
ತಲಾಕಾವೇರಿಯ ಕುಂಡಿಕೆ..


ತಲಕಾವೇರಿಯಿಂದ  ಎಂಟತ್ತು ಕಿ ಮೀ ಕೆಳಗಿಳಿದು ಬಂದರೆ ನಿಜವಾದ ಕಾವೇರಿಯು ಸುಜ್ಯೋತಿ ಮತ್ತು ಕನ್ನಿಕೆ ಎಂಬ ಸೋಹೋದರಿಯರೊಂದಿಗೆ  ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಕೊಡಗಿನ ಕಾವೇರಿ ನದಿಯಾಗಿ ಗೋಚರಿಸುತ್ತಾಳೆ.ಕಾವೇರಿಯ ಕೊನೆಯವರೆಗೂ ನೋಡುವ ಬಯಕೆಯ ಪ್ರಾರಂಭ ನಯನ ಮನೋಹರವಾಗಿತ್ತು.

ಅಬ್ಬೀ ಜಲಪಾತ:

ಭಾಗ ಮಂಡಲದ ಭಗಂಡೇಶ್ವರ ದೇವಸ್ಥಾನದ ದರ್ಶನವನ್ನು ಪಡೆದು ಯಾವುದೋ ಹೋಟೆಲ್ನಲ್ಲಿ ಕೇರಳ ಶೈಲಿಯ ತಿನಿಸುಗಳನ್ನು ತಿಂದು ನೇರವಾಗಿ ನಾವು ಹೋಗಿದ್ದು ಕಾವೇರಿ ನಾಡಿನ ಮನಮೋಹಕ ತಾಣಗಳಲ್ಲೊಂದಾದ ಅಬ್ಬೀ ಪಾಲ್ಸ್..ಮಡಿಕೇರಿ ಸಿಟಿಯಿಂದ ಆರೇಳು ಕಿಲೋಮೀಟರ್ ದೂರ ಇರುವ ಇದರ ದರ್ಶನವಾಗಲು ಸುಮಾರು ಐನೂರು ಮೀಟರ್ ಕಾಫಿ ಎಸ್ಟೇಟ್ ಮಧ್ಯೆ  ನಡೆದು ಹೋಗಬೇಕು.ಸುಮಾರು ಐವತ್ತು-ಅರವತ್ತು ಅಡಿಯ ಎತ್ತರದಿಂದ ಬಿಳಿಯ ಹಾಲಿನ ನೊರೆಯಂತೆ ದುಮ್ಮಿಕ್ಕುವ ಜಲಧಾರೆಯ ಹನಿಗಳು ಮುಖಕ್ಕೆ ಸಿಂಚನವಾಗುತ್ತವೆ. ಬಿಳಿನೊರೆಯ ನೀರು ಅಲೆಯಲೆಯಾಗಿ ಧರೆಗೆ ದುಮ್ಮಿಕ್ಕುವ ರಮಣೀಯ ದೃಶ್ಯವನ್ನು ನೋಡಿ ಅಬ್ಬಾ..ಅನ್ನುವಂತಿದೆ ಈ 'ಅಬ್ಬೀ ಫಾಲ್ಸ್..' ಅಬ್ಬೀ ಪಾಲ್ಸ್ ಕಾವೇರಿಯ ಮೂಲ ನದಿಯಿಂದ ಆಗದೇ ಇದ್ದರೂ ಇದೂ ಕೂಡ ಕಾವೇರಿಯ ಭಾಗವಾಗಿದೆ.
ಅಬ್ಬಿ ಪಾಲ್ಸ್ ನ ಸಾಂಧರ್ಬಿಕ ಚಿತ್ರ..
ಬಲಮುರಿ:  ಮೈಸೂರಿನ ಕಾವೇರಿಯ ಕೊಳ್ಳದ ಮತ್ತೊಂದು ಸುಂದರ ತಾಣ ಎಂದರೆ ಬಲಮುರಿ.. ಸುಮಾರು ನೂರು ಮೀಟರ್ ಉದ್ದವಾಗಿ ಸುಮಾರು ಎಂಟತ್ತು ಅಡಿಗಳ ಎತ್ತರದಿಂದ ಬೀಳುವ ನದಿಯ ನೀರು ನೋಡಲು ನಯನ ಮನೋಹರ.ಒಂದು ಜೊತೆ ಬಟ್ಟೆ extra ಇದ್ದರೆ ನಾವೂ ನೀರೊಳಗೆ ಹಾರಿ ಈಜಾಡಿ ನಲಿದಾಡಬಹುದು. ಮೀನು ಪ್ರಿಯರಿಗೆ ವಿವಿಧ ಜಾತಿಯ ಮೀನುಗಳನ್ನು ಪ್ರೆಶ್ ಆಗಿ ಬಿಸಿ ಬಿಸಿಯಾಗಿ  ನಿಮ್ಮ ಕಣ್ಮುಂದೆಯೇ ಪ್ರೈ ಮಾಡಿ ಬಾಳೆ ಎಲೆಯಲ್ಲಿ ಹಾಕಿಕೊಡುವವರು.  ಮೀನನ್ನು ಸವೆಯುತ್ತಾ ಸವೆಯುತ್ತಾ ಮತ್ತೇ ಮೀನು ತಿನ್ನಲಿಕ್ಕೇಂದೇ ಇಲ್ಲಿಗೆ ಬರಬೇಕು ಎನ್ನುತ್ತಾ ಮರಳಿ ಬರಬಹುದು... 
ನಾನು ನನ್ನ ಕುಮುದಾ...

 ಬಲಮುರಿಯಲ್ಲಿ ಮಗಳು ತನೇಹಾಳೊಂದಿಗೆ..


ಕೆಆರ್ಎಸ್ ನೀವೆಲ್ಲರೂ ನೋಡಿರುವುದರಿಂದ ಅದರ ಬಗ್ಗೆ ವಿವರಣೆ ಅಗತ್ಯ ಇಲ್ಲ..


ರಂಗನತಿಟ್ಟು:

ಮೈಸೂರಿನ ಅರಮನೆ,ಜೂ, ಚಾಮುಂಡೇಶ್ವರಿ ಯಂತೆ ರಂಗನತಿಟ್ಟು ಪಕ್ಷಿ ಧಾಮ ನೋಡಲೇಬೇಕು..ಕಾವೇರಿಯೇ ನಿರ್ಮಿತ  ಈ ಜಾಗ  ಆರೇಳು ನಡುಗಡ್ಡೆಯಲ್ಲಿ ಲಕ್ಷಾಂತರ ದೇಶಿ-ವಿದೇಶಿ ಪಕ್ಷಿಗಳ ಪ್ರಸೂತಿಗಾಗಿ ಇರುವ ಪಕ್ಷಿಗಳ ತವರುಮನೆ..ನದಿಯ ಮದ್ಯದಲ್ಲಿ ದ್ವೀಪದಂತಿರುವ ನಡುಗಡ್ಡೆಗಳಲ್ಲಿ ಸಾವಿರಾರು ಪಕ್ಷಿಗಳ ಕಲರವ. ಮರಗಿಡಗಳ ತುಂಬೆಲ್ಲಾ ಅದರ ಎಲೆಗಳಿಗಿಂತಲೂ  ಕೊಕ್ಕರೆಗಳ ಗೂಡು..! ಗಂಡು ಹೆಣ್ಣಿನ ಭೇದವಿಲ್ಲದೆ   ಗಂಡು ಹೆಣ್ಣು ಎರಡೂ ಪಕ್ಷಿಗಳು ಆಗ ತಾನೇ ಮೊಟ್ಟೆಯಿಂದ ಹೊರಬಂದ ಮರಿ ಪಕ್ಷಿಗಳಿಗೆ ಆಹಾರ ತಂದುಕೊಡುತ್ತಿದ್ದರೆ,ಕೆಲವು ಪಕ್ಷಿಗಳು ಗೂಡಿನಲ್ಲಿ ಕೂತು ಮೊಟ್ಟೆಗೆ ಕಾವು ಕೊಡುತ್ತಾ ಕುಳಿತಿರುತ್ತಾವೆ. ಇನ್ನೂ ಕೆಲವು ಮೊಟ್ಟೆ ಇಡಲು ಗೂಡು ಕಟ್ಟಲು ಕೊಕ್ಕಿನಲ್ಲಿ ಕಡ್ಡಿಗಳನ್ನು ಹಿಡಿದು ಕರ್ರ್ ಕರ್ರ್ ಎಂದು ಕೂಗುತ್ತಾ ಬಣ್ಣ ಬಣ್ಣದ ತುಪ್ಪಳಗಳನ್ನು ಒಳಗೊಂಡ ವಿವಿಧ ಭಂಗಿಯಲ್ಲಿ  ಹಲವಾರು ಪಕ್ಷಿಗಳ ನೋಡುವುದೇ ಹಬ್ಬ..spoon bills,ಪೆಲಿಕಾನ್, IBIS,ಉದ್ದಕೊಕ್ಕಿನ ನೀರುಕಾಗೆ, ಇತರೆ ನಲವತ್ತಕ್ಕೂ ಅಧಕ ಸಂಖ್ಯೆಯ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳನ್ನು ಕಾಣಬಹುದು. ಅರಣ್ಯ ಇಲಾಖೆಯಿಂದ ಬೋಟಿಂಗ್ ವ್ಯವಸ್ಥೆ ಇದೆ.DSLR ಕ್ಯಾಮೆರಾ ಏನಾದರೂ ಇದ್ದರೆ  ವಿವಿಧ ಪಕ್ಷಿಗಳ ಅಂದದ ಪೋಟೋಗಳನ್ನು ಸೆರೆ ಹಿಡಿಯಬಹುದು. ಕೆ ಆರ್ ಎಸ್ ಡ್ಯಾಂ ತುಂಬಿ ಗೇಟ್ ಎತ್ತಿದಾಗ ಪ್ರವಾಹಕ್ಕೆ ಪಕ್ಷಿಧಾಮವೆಲ್ಲಾ ಮುಳಗಿ ಪಕ್ಷಿಗಳ ಗೂಡು  ಕೊಚ್ಚಿಹೋಗುತ್ತಾವೆ. ಜೊತೆಗೆ ಅಲ್ಲೇ ಶಾಶ್ವತವಾಗಿ ವಾಸ ಇರುವ ಮೊಸಳೆ ಮತ್ತು ಮೊಸಳೆ ಮರಿಗಳು ಪ್ರವಾಹಕ್ಕೆ ಕೊಚ್ಚಿಹೋದಾಗ  ಪ್ರವಾಹ ಕಡಿಮೆಯಾದಾಗ ಅವು ಪುನಃ ಅಲ್ಲಿಗೆ ಮರಳಿ ಬರುತ್ತಾವಂತೆ..

ಬೋಟಿಂಗ್ ಮುಗಿಸಿ ದಡ ಸೇರಿದ ನಾವು ಉದ್ಯಾನವನದಂತಹ ಪ್ರದೇಶದಲ್ಲಿ ನದಿಯ ದಡದ ಮೇಲೆ ಹಾಗೆ ಹೋಗುತ್ತಿದ್ದೇವು.  ನೇಚರ್ ಕಾಲ್ ಒತ್ತಡಕ್ಕೆ ಸೈಡ್ ಗೆ ಹೋದ ನಾನು ಬೃಹತ್ ಮರವೊಂದು ಅರೆಬುಡ ಸಹಿತ ನದಿಯ ನೀರೋಳಗೆ ಬಿದ್ದಿತ್ತು. ಅಲ್ಲೇ ಎಂಟತ್ತು ಅಡಿ ದೂರದಲ್ಲಿ ಬಕವೊಂದು ಮೀನು ಹಿಡಿಯಲು ಹೊಂಚು ಹಾಕಿ ನಿಂತಿತ್ತು. ಮರದ ಮೇಲೆಯೇ ಒಂದಷ್ಟು ದೂರ  ಶಬ್ಧ ಮಾಡದೇ ನಡೆದು ಹೋದ ನಾನು ಬಕ ಮೀನನ್ನು ಹೇಗೆ ಹಿಡಿಯುವುದು ಎಂದು ನೋಡುವ ತವಕದಲ್ಲಿ ನಿಂತಿದ್ದೆ.ಎರಡ್ಮೂರು ಅಡಿಯಷ್ಟು ಅಗಲವಾದ ಮರದ ದಿಮ್ಮಿಯ ಮೇಲೆ ನೋಡುತ್ತಾ ನಿಂತಿದ್ದ ನನಗೆ ಒಂದೆರಡು ನಿಮಿಷಗಳಲ್ಲಿ  ಎಲ್ಲಿಯೋ ಅಡಗಿದ್ದ ಮೊಸಳೆಯೊಂದು  ಮೀನಿಗಾಗಿ ಹೊಂಚು ಹಾಕಿದ್ದ ಬಕವನ್ನು ಲಬಕ್ಕನೇ ಬಾಯೊಳು ಹಾಕಿ ಲಚ ಲಚ ಎಂದು ಉಳಿವಿಗಾಗಿ ರೆಕ್ಕೆ ಬಡಿಯುತ್ತಲೇ ಇದ್ದ ಬಕವ ಹಿಡಿದು ಈಜುತ್ತಾ ಹೋಯಿತು.ಮರದ ದಿಮ್ಮಿಯ ಮೇಲೆ ನಿಂತಿದ್ದ ನನಗೆ ಆ ಸೀನ್ ನೋಡಿ ಆ ಮೊಸಳೆ ಬಕವ ಮಿಕವಾಗಿಸದೇ ನನ್ನನ್ನೇ ಮಿಕವಾಗಿ ಕಂಡಿದ್ದರೆ ಎಂಥಾ ಅಪಾಯ ಕಾದಿತ್ತು ಎಂದು ನೆನೆದು  ಜೀವವೇ ಬಾಯಿಗೆ ಬಂದಂತಾಗಿ ಅಲ್ಲಿಂದ ಜಾಗ ಖಾಲಿ ಮಾಡಿದೆ.ಅಷ್ಟೊತ್ತಿಗಾಗಲೇ ಇಳಿಸಂಜೆಯಾದ್ದರಿಂದ ನಾವು ಸ್ಟೇ ಮಾಡಬೇಕೆಂದು ಕೊಂಡಿದ್ದ ಮೇಲುಕೋಟೆಗೆ ಬಂದು  ಮೇಲುಕೋಟೆಯ ಪ್ರವಾಸಿ ಮಂದಿರದಲ್ಲಿ ರೂಂ ಪಡೆದು ನಾಳೆಗೆ ಮೇಲುಕೋಟೆ ಮತ್ತು ಧನುಷ್ಕೋಟಿ ನೋಡವ ಎಂದು ಮಲಗಿದೆವು.
 ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್..
 ನೀರ್ ಕಾಗೆಗಳ ಹಿಂಡು...
ಬಕ ಮತ್ತು ಮೊಸಳೆ..

( ಮುಂದಿನ ಭಾಗದಲ್ಲಿ ನಿರೀಕ್ಷಿಸಿ-ಕಾವೇರಿ ನೀನೆಷ್ಟು ಸುಂದರಿ?
part-2)

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..