ಕಾವೇರಿ ನೀನೆಷ್ಟು ಸುಂದರಿ..??part-2
ಕಾವೇರಿ ನೀನೆಷ್ಟು ಸುಂದರಿ?? Part-2
ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿರುವಾಗ ನಮ್ಮ ಊರಿನವರೇ ಆದ ರಂಗಪ್ಪ ಎಂಬುವವರು ವಾರಕ್ಕೆ ಕನಿಷ್ಟ ಎರಡ್ಮೂರು ಬಾರಿಯಾದರೂ ನಮ್ಮ ಗುರುಗಳಾದ ಶಿವಾನಂದಪ್ಪ ಸರ್ ಬಳಿ ಬಂದು ಅದು ಇದು ಮಾತಾಡುತ್ತಿದ್ದರು. ಅವರನ್ನು ಕಂಡ ಕೂಡಲೇ ನಾವೆಲ್ಲರೂ 'ರಂಗಪ್ಪ ಹದಿನೆಂಟು ಟುಮಕೂರು' ಎಂದು ಹಾಡು ಹೇಳುತ್ತಿದ್ದೆವು. ಕಾಲಕ್ರಮೇಣ ನನಗೆ ಗೊತ್ತಾಗಿದ್ದು ಎಲ್ಲರ ಹೆಸರುಗಳೂ ದೇವರ ಹೆಸರುಗಳು ಅಂತ. ಆಗ ನನಗನ್ನಿಸಿದ್ದು ಈ ರಂಗಪ್ಪನ ಹೆಸರಿಗೆ ತುಮಕೂರು ತಳುಕು ಹಾಕಿಕೊಂಡಿದ್ದರಿಂದ ತುಮಕೂರಿನಲ್ಲಿ ರಂಗಸ್ವಾಮಿ ದೇವಸ್ಥಾನ ಇದೆ ಅದೇ ರಂಗನಾಥ ಸ್ವಾಮಿಯ ಹೆಡ್ಡಾಪೀಸು ಅನ್ಕೊಂಡಿದ್ದೆ.ಪ್ರೌಢಶಾಲೆಯಲ್ಲಿ ಮೊಟ್ಟಮೊದಲ ಬಾರಿಗೆ ಶಾಲಾ ಪ್ರವಾಸಕ್ಕೆ ಮೈಸೂರಿಗೆ ಹೋಗಿದ್ದೆವು.ಡಿಸೆಂಬರ್ ನಲ್ಲಿ ಬೆಳ್ಳಂಬೆಳಿಗ್ಗೆ ಗದ ಗದ ನಡುಗುತ್ತಾ ಐದುಹೆಡೆಯ ಬೃಹತ್ ಸರ್ಪದ ಮೇಲೆ ಮಲಗಿದ ದೇವರ ದರ್ಶನವನ್ನು ಪಡೆದಿದ್ದೆವು.ನಮ್ ಮಾಸ್ಟರ್ ಒಬ್ಬರು ''ಸ್ವಾಮಿ ರಂಗನಾಥ ಕಾಪಾಡಪ್ಪ" ಎಂದು ನನ್ನ ಮುಂದೆಯೇ ಕೈ ಮುಗಿದಾಗ ಆ ದೇವರು ರಂಗನಾಥ ಸ್ವಾಮಿ ಎಂದು ನನಗೆ ತಿಳಿದದ್ದು... ಆ ದೇವರಿಗಿಂತ ಆ ಕಲ್ಲಿನ ಸರ್ಪವ (ಆದಿಶೇಷನ)ಕಂಡು ಅಬ್ಬಾ.. ಎಷ್ಟು ದೊಡ್ಡಹಾವು ಎಂದು ಉದ್ಗಾರ ತೆಗೆಯುವಂತೆ ಇತ್ತು.ಇಂದಿಗೂ ಅದು ಹಾಗೇ ಇದೆ. ಆದರೆ ಅಂದು ನಾವು ಚಿಕ್ಕವರಿದ್ದುದರಿಂದ ಹಾವು ಮಾತ್ರ ಬಾರೀ ದೊಡ್ಡದಾಗಿ ನನಗೆ ಕಂಡಿತ್ತು. ಹೌದು ಕಾವೇರಿ ನದಿಯ ಸೌಂದರ್ಯದಲ್ಲಿ ಶ್ರೀ ರಂಗನಾಥ ಸ್ವಾಮಿ ಯ ಪಾತ್ರ ಬಹಳ ದೊಡ್ಡದಾಗಿದೆ. ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಕಾವೇರಿಯ ತಟದಲ್ಲಿ ಅದರಲ್ಲೂ ವಿಶೇಷವಾಗಿ ಕಾವೇರಿಯು ಕವಲೊಡೆದು ಮತ್ತೆ ಸೇರುವ ಸಂಗಮ ಸ್ಥಳದಲ್ಲಿ ಆದಿರಂಗ,ಮದ್ಯ ರಂಗ ಮತ್ತು ಅಂತ್ಯ ರಂಗ ಎಂಬ ಶ್ರೀ ರಂಗನಾಥ ಸ್ವಾಮಿಯ ದೇವಸ್ಥಾನಗಳು ದಕ್ಷಿಣ ಭಾರತದಲ್ಲೇ ವಿಶೇಷವಾದವುಗಳು. ಆದಿ ರಂಗನ ದೇವಸ್ಥಾನ ಶ್ರೀರಂಗ ಪಟ್ಟಣದಲ್ಲಿದೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಇವು ನಿರ್ಮಾಣವಾದವು ಎಂದು ಇತಿಹಾಸ ಹೇಳುವುದಾದರೂ ಈ ನದಿಯು ಕವಲೊಡೆದಾಗ ಮತ್ತು ಪುನಃ ಸಂಗಮಿಸುವ ಮದ್ಯದಲ್ಲಿ ಆ ಪ್ರದೇಶವು ದ್ವೀಪ ಪ್ರದೇಶ ಆಗುವುದು.ಅದರ ರಚನೆ ಮೊಟ್ಟೆಯ ಅಥವಾ ಭ್ಯೂಮಾಕಾರ ಪಡೆಯುವುದು. ಸುತ್ತಲೂ ಹರಿಯುವ ನದಿಯ ಜುಳು ಜುಳು ನಾದ ಬರುತ್ತದಲ್ಲಾ??ಇದೇ BIGBANG SOUND! ಬಿಗ್ ಬ್ಯಾಂಗ್ ಸಿದ್ದಾಂತದಿಂದ ಈ ಬ್ರಹ್ಮಾಂಡದ ಸೃಷ್ಠಿ ಎಂಬುದು ಒಂದು ಸಿದ್ದಾಂತವಾದರೆ ಅದೇ ಬ್ರಹ್ಮಾಂಡ ರಚನೆಯಾದದ್ದು ವಿಷ್ಣುವಿನಿಂದ. ವಿಷ್ಣುವೇ ಬ್ರಹ್ಮಾಂಡದ ಸೃಷ್ಠಿಕರ್ತ ಎಂದು ನಂಬುವ ಬಹುಸಂಖ್ಯೆಯ ಜನಗಳ ಮದ್ಯೆ ಬಿಗ್ ಬ್ಯಾಂಗ್ ಥೀಯರಿಯನ್ನು ಸಮರ್ಥಿಸುವಂತೆ ಈ ನದಿ ಕವಲೊಡೆದು ಸೇರುವ ನಡುವಿನ ಭೂಮ್ಯಾಕಾರದ ಸ್ಥಳಗಳಲ್ಲಿ ವಿಷ್ಣುವಿನ ಸ್ವರೂಪ ಶ್ರೀ ರಂಗನಾಥ ಸ್ವಾಮಿಯ ದೇವಸ್ಥಾನಗಳಾದ ಆದಿ ಮತ್ತು ಮದ್ಯ ರಂಗ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಇರುವುದು ವಿಶೇಷವಾದರೆ,ಅಂತ್ಯ ರಂಗ ತಮಿಳುನಾಡಿನ ಶ್ರೀರಂಗಂ ನಲ್ಲಿದ್ದು ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ದೇವಸ್ಥಾನ ಆಗಿದೆ.
ಶ್ರೀರಂಗಪಟ್ಟಣದಲ್ಲಿ ಹೇಮಾವತಿ ಲೋಕಪಾವನಿ ಉಪನದಿಗಳು ಕಾವೇರಿಯೊಳು ಸಂಗಮವಾಗುವುದರಿಂದ ಇದೂ ಕೂಡ ತ್ರಿವೇಣಿ ಸಂಗಮವಾಗಿದೆ. ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಕಾವೇರಿಯ ಹೃದಯಭಾಗ.ಇಲ್ಲಿರುವ ಪ್ರತಿ ಸಜೀವಿಗಳಿಗೂ ಕಾವೇರಿಯೇ ಜೀವ ತುಂಬಿಹಳು.ಹಾಗೆ ಇಲ್ಲಿ ಐತಿಹಾಸಿಕವಾಗಿ ಈ ರಂಗನಾಥ ಸ್ವಾಮಿ ದೇವಾಲಯ, ಧರಿಯಾದೌಲತ್, ಟಿಪ್ಪು ಹೈದರ್ ಸಮಾಧಿ ಸ್ಥಳ, ಶ್ರೀರಂಗಪಟ್ಟಣ ದ ಕೋಟೆ,ನಿಮಿಷಾಂಭ ದೇವಸ್ಥಾನಗಳು,ಸಂಗಮ ಸ್ಥಳಗಳು ಇಲ್ಲಿ ನೋಡಲೇಬೇಕಾದ ಸ್ಥಳಗಳು.ಈ ಸ್ಥಳಗಳ ಬಗ್ಗೆ ನಿಮ್ಮೆಲ್ಲರಿಗೂ ಈಗಾಗಲೇ ತಿಳಿದಿರುವುದರಿಂದ ಹೆಚ್ಚೇನು ಹೇಳುವುದಿಲ್ಲ.
ಸೋಮನಾಥಪುರ.
ಶಿಕ್ಷಕರಿಗೆ ರಾಜ್ಯಮಟ್ಟದ ತರಬೇತಿ ನೀಡಲು ರಾಜ್ಯ ಸಂಪನ್ಮೂಲ ತಂಡದವರ ಜೊತೆಯಲ್ಲಿ ಆ ದಿನದ excursion ಕೈಗೊಂಡಿದ್ದೆವು.ಬೆಳ್ಳಂಬೆಳಿಗ್ಗೆ ಟೆಂಪೋಟ್ರಾವೆಲ್ಲರ್ ಹತ್ತಿ ಟಿ ನರಸೀಪುರದ ಸಂಪನ್ಮೂಲ ಶಿಕ್ಷಕಿ ವಿಜಯಲಕ್ಷ್ಮಿ ಅವರ ನಮ್ಮ ಊರಿಗೆ ಒಮ್ಮೆ ಬನ್ನಿ..ಒಮ್ಮೆಯಾದರೂ ಬನ್ನಿ ಎಂಬ ಬಹುದಿನದ ಕೂಗಿಗೆ ಓಗೊಟ್ಟು ಅವರ ಒಡೆತನದ ದೋಸೆ ಹೋಟೆಲ್ನಲ್ಲಿ ಖಾಲಿ ದೊಸೆಗೆ ಬೆಣ್ಣೆ,ಸೆಟ್ ದೋಸೆಗೆ ಬೆಣ್ಣೆ, ಮಸಾಲೆದೋಸೆಗೆ ಬೆಣ್ಣೆ,ಈರುಳ್ಳಿ ದೋಸೆ-ಬೆಣ್ಣೆ!ಹೀಗೆ ಅವರ ಪ್ರೀತಿಯ ಔತಣದ ಉಪಚಾರಕ್ಕೆ ನಮ್ಮ ಕೈ- ಹೊಟ್ಟೆಯ ತುಂಬಾ ಬೆಣ್ಣೆಮಯವಾಗಿತ್ತು. ಬೆಳಿಗ್ಗೆ ಬೆಳಿಗ್ಗೆ ಬೆಣ್ಣೆಯೊಂದಿಗೆ ಪುಲ್ ಮೀಲ್ಸ್ ಆಗಿ,ಬೆಣ್ಣೆಯ ಕೊಬ್ಬಿಗೆ ನಿದ್ದೆ ಬಂದಂತಾಗಿ ಕಣ್ಣೆಲ್ಲಾ ಮಬ್ಬು ಮಬ್ಬು ಅನಿಸುತಿತ್ತು.ನಲಿಕಲಿ ರವೀಂದ್ರ ಸಾರ್,ರಾಮನಾಥ್ ರಾವ್, ಗಂಗಾಧರ ಹಿರೇಮಠ ,ಪೂರ್ಣೇಶ್,ಪ್ರಶಾಂತ,ಹುಸೇನ್ ವಡಗೇರಿ,ಸುಜಾತ,ಮತ್ತು ನಾವಿಬ್ಬರು ದಂಪತಿಗಳು TT ಹತ್ತಿ
ಟಿ ನರಸೀಪುರ ದಿಂದ 12-13 ಕಿ ಮೀ ಸಿಂಗಲ್ , ಪಕ್ಕಾ ರೂರಲ್ ರಸ್ತೆಯಲ್ಲಿ ಬಂದರೆ ಸಿಗುವುದೇ ಈ ಸೋಮನಾಥಪುರ. ದಾರಿಯುದ್ದಕ್ಕೂ ದನಗಳು,ಎಮ್ಮೆಗಳು ತಿಪ್ಪೆ,ತಿಪ್ಪೆಯಲ್ಲಿ ಕೊಳೆಯುವತ್ತಿರುವ ಸಗಣಿಯವಾಸನೆ ಮೂಗಿನ ಆಗ್ರಾಣಗಳಿಗೆ ಅಪ್ಪಳಿಸುವ ಅನುಭವ ದಾರಿಯುದ್ದಕ್ಕೂ ಆಗುತ್ತದೆ. ಇತಿಹಾಸದಲ್ಲಿ ಕೆಲವು ಮಹಾನ್ ಪ್ರತಿಭೆಗಳು ಲೋಕದ ಕಣ್ಣಿಗೆ ಕಾಣದೆ ಇದ್ದು ಇಲ್ಲದಂತೆ ಇದ್ದುಹೋದರಲ್ಲ ಆ ಸಾಲಿಗೆ ಸೇರುವ ಅಪ್ರತಿಮ ಕಲಾ ನೈಪುಣ್ಯ ಮೆರೆದಿರುವ ಹೊಯ್ಸಳರ ಕಾಲದ ಸುಂದರ ಕೆತ್ತನೆಯ ಅದ್ಭುತ ವಾಸ್ತುಶಿಲ್ಪ ಈ ಸೋಮನಾಥಪುರದ ಚೆನ್ನಕೇಶವ ದೇವಾಲಯ.
ಸೋಮನಾಥಪುರ ಕಾವೇರಿಯ ದಡದಲ್ಲಿರುವುದು ವಿಶೇಷ. ತಿರುಮಕೊಂಡ ನರಸೀಪುರದ ಬಳಿ ಕಪಿಲ ನದಿಯು ಕಾವೇರಿಯೊಳು ಸಂಗಮವಾಗುತ್ತದೆ.ಈ ಸಂಗಮದ ಕೂಗಳತೆಯ ದೂರದಲ್ಲಿ ಈ ಸೋಮನಾಥಪುರ.
ಈ ಚೆನ್ನಕೇಶವ ದೇವಾಲಯ ನಕ್ಷತ್ರಾಕಾರದ ರಚನೆಯಲ್ಲಿ ಬಳಪದ ಕಲ್ಲಿನಿಂದ ರಚನೆಯಾಗಿದ್ದು, ಮೂರು ಗರ್ಭಗುಡಿ ಹೊಂದಿರುವ ತ್ರಿಕೂಟ ವ್ಯವಸ್ಥೆಯ ವಾಸ್ತುಶಿಲ್ಪ.ಸಾಮಾನ್ಯವಾಗಿ ಹೊಯ್ಸಳರ ಎಲ್ಲಾ ದೇವಾಲಯಗಳಲ್ಲಿ ಇರುವಂತೆ ಆನೆ,ಕುದುರೆಗಳ ಸಾಲು, ಎಲೆ ಬಳ್ಳಿಗಳ ರಚನೆ,ರಾಮಾಯಣ ಮಹಾಭಾರತದ ದೃಷ್ಠಾಂತಗಳು,ಕಾಮಸೂತ್ರದ ಸುಂದರ ಕೆತ್ತನೆಗಳನ್ನು ಕಾಣಬಹುದು. ಆಧಾರಸ್ಥಂಭಗಳಾದ ಕಂಬಗಳ ಮೇಲೆ ಸೂಕ್ಷ್ಮವಾದ ಕುಸುರಿ ಕೆತ್ತನೆ ಇದೆ.ನಾಲ್ಕು ಕಂಬಗಳ ಸೇರುವ ಅರ್ಧ ವೃತ್ತಾಕಾರದಂತಹ ಮೇಲ್ಬಾಗದ ರಚನೆಯ ಮದ್ಯದಲ್ಲಿ ಕೆತ್ತಿರುವುದು ಅತ್ಯಂತ ಸೂಕ್ಷ್ಮ ಮತ್ತು ಅಮೋಘ ಕುಸುರಿ ಕೆಲಸವಾಗಿದೆ. ಆ ಕೆತ್ತನೆಯನ್ನು ನೋಡಿದರೆ ವಾವ್ಹ್... ಬ್ಯೂಟಿಫುಲ್! ಅಮೇಜಿಂಗ್!! ಎಂದು ಏನ್ ಸೂಪರ್ ವರ್ಕ್ ಮಾಡಿದ್ದರೆ ಎಂಬುವಂತಿದೆ.ನಾ ಕಂಡಂತೆ ಬೇಲೂರು ಹಳೇಬೀಡಿನಲ್ಲಿಲ್ಲದ ಸುಂದರ ಕೆತ್ತನೆಯ ಶಿಲ್ಪಕಲೆಗಳನ್ನು ನಾವು ಇಲ್ಲಿ ನೋಡಬಹುದು. ಬಹುಶಃ ಈಗಿರುವ ಎಲ್ಲಾ ತಂತ್ರಜ್ಞಾನವನ್ನು ಬಳಸಿಕೊಂಡು ಕೆತ್ತನೆ ಮಾಡಿದರೂ ಆ ಪಿನಿಷಿಂಗ್ ಬರುವುದಿಲ್ಲ.ಅಂತಹ ಕೆಲಸವನ್ನು ಯಂತ್ರಗಳಿಲ್ಲದ ಸಮಯದಲ್ಲೇ ಮಾಡಿ ತೋರಿಸಿದ್ದಾರೆ.
ಸೋಮನಾಥಪುರ ಚೇನ್ನಕೇಶವನ ಮುಂದೆ..
ಬೇಲೂರಿನ ಶಿಲಾಬಾಲಿಕೆಯರ ಸುಂದರ ಶಿಲ್ಪಕಲೆಗಳಿಗೆ ಮಾರು ಹೋದ ಪ್ರವಾಸಿ ಪ್ರೇಕ್ಷಕರು ಅವರದೇ ನಿರ್ಮಾಣದ ಮೂರನೇ ನರಸಿಂಹನ ಕಾಲದಲ್ಲಿ ನಿರ್ಮಿಸಿದ ಕಲಾನೈಪುಣ್ಯತೆಯ ಮೇರು ಪ್ರತೀಕವಾದ ಸೋಮನಾಥಪುರದ ಚೆನ್ನಕೇಶವ ಬೇಲೂರು ಹಳೇಬೀಡಿನಷ್ಟು ಪ್ರಸಿದ್ದವಾಗಲಿಲ್ಲ.ಬೇಲೂರಿನ ಚೆನ್ನಕೇಶವ ದೇವಸ್ಥಾನ, ಹಳೇಬೀಡಿನ ಸ್ಮಾರಕಗಳು ವ್ಯಾಪಕವಾದ ಪ್ರಚಾರ ಮತ್ತು ದರ್ಶನಕ್ಕೆ ಒಳಗಾದರೆ ಮೈಸೂರಿನ ಸೆರಗಿನಲ್ಲಿರುವ ಕಾರಣ ಅರಮನೆ,ಚಾಮುಂಡಿ ಬೆಟ್ಟ,ಮೃಗಾಲಯ,ಕೆ ಆರ್ ಎಸ್ ಗಳೇ ಪ್ರವಾಸಿಗರನ್ನು ಆಕರ್ಷಿಸಿಬಿಟ್ಟವು. ಇದನ್ನು ನೋಡಲಿಕ್ಕೆ ಅಷ್ಟು ಒತ್ತು ಮತ್ತು ಹೊತ್ತು ಸಿಗಲಿಲ್ಲವೇನೋ...?ಹೊಯ್ಸಳರ ಮರೆಯಲಾಗದ ವಾಸ್ತುಶಿಲ್ಪಗಳಲ್ಲಿ ಸೋಮನಾಥಪುರ ದ ದೇವಸ್ಥಾನವೂ ಬಹುಮುಖ್ಯವಾದದು. ಕಾವೇರಿಯ ಮಡಿಲಲ್ಲಿ ನೆಲೆಸಿರುವ ಈ ಸೋಮನಾಥಪುರಕ್ಕೆ ಒಮ್ಮೆಯಾದರೂ ಬೇಟಿಕೊಟ್ಟು ಕಲಾಶಿಲ್ಪಗಳು ನೋಡಿ ಪ್ರತಿಯೊಬ್ಬರೂ ಕಣ್ತುಂಬಿಕೊಳ್ಳಬೇಕು.
ಸೋಮನಾಥಪುರ ದೇವಸ್ಥಾನದಲ್ಲಿ ಮಾಡಿದ ಶಿಲ್ಪಕಲೆಗಳ ವಿಭಿನ್ನ ಚಿತ್ರಣಗಳು.
, ಪೂರ್ಣೇಶ್,ಹೀರೇಮಠ್..
(ಮುಂದಿನ ಭಾಗದಲ್ಲಿ ನಿರಿಕ್ಷಿಸಿ-ಕಾವೇರಿ ನೀನೆಷ್ಟು ಸುಂದರಿ?? ಭಾಗ-3)
✍️ನಾಗೇಂದ್ರ ಬಂಜಗೆರೆ.
ಓದುಗರಿಗೂ ಪ್ರತ್ಯಕ್ಷ ಅನುಭವ ನೀಡುವ ಲೇಖನ. ನಾಗೇಂದ್ರ ಸರ್ ತಮ್ಮ ಪ್ರವಾಸದ ಅನುಭವ ನಿಜಕ್ಕೂ ಅದ್ಭುತ. ಈ ನಿಮ್ಮ ಪ್ರವಾಸದಲ್ಲಿ ನಾವೂ ಭಾಗೀದಾರರಾಗಿದ್ದು ನಿಜಕ್ಕೂ ಸಂತೋಷದ ವಿಷಯ. ತಮ್ಮೊಳಗೊಬ್ಬ ಬರಹಗಾರನಿದ್ದಾನೆ.ಅದಕ್ಕೆ ಸರಿಯಾಗಿ ದಂಪತಿಗಳೀರ್ವರೂ ಊರು ಸುತ್ತುವ ಹವ್ಯಾಸದವರು.ಎರಡೂ ಸೇರಿದಾಗ ಓದುಗರಿಗೆ ಪ್ರವಾಸ ಕಥನದ ರಸದೌತಣ. ಇನ್ನಷ್ಟು ಇಂತಹ ಲೇಖನಗಳ ನಿರೀಕ್ಷೆಯಲ್ಲಿ ರವೀಂದ್ರ.ಆರ್.ಡಿ.
ಪ್ರತ್ಯುತ್ತರಅಳಿಸಿ