ಬೇರೆಯವರು ಬಿದ್ದಾಗ(ಸೋತಾಗ) ನಾವು ನಗುವುದೇಕೆ??

ಯಾರಾದರೂ ಬಿದ್ದಾಗ(ಸೋತಾಗ) ನಾವು ನಗುವುದೇಕೆ??
low we iosl

ನಾಲ್ಕೈದು ವರ್ಷಗಳ ಹಿಂದೆ ಪರಿಚಿತರೊಬ್ಬರ  ಮಗಳ ಮದುವೆಗೆ  ನಾವು ಹೋಗಿದ್ದೆವು.  ಅಂದು ನಾವು ಹೋಗಿದ್ದು ತಡವಾಗಿತ್ತಾದರೂ  ಛತ್ರವು ಕೆಲವೇ ಅಡಿಗಳ ದೂರದಲ್ಲಿರುವಾಗ   ಪರಿಚಿತ ಶಿಕ್ಷಕರೊಬ್ಬರು  ತಮ್ಮ ಪಲ್ಸರ್ ಬೈಕ್ ಪಕ್ಕ ನಿಂತಿದ್ದವರು ನೋಡು ನೋಡುತ್ತಲೇ  ದೊಡ್ಡ ಚರಂಡಿಗೆ ಬಿದ್ದರು. ಪಲ್ಸರ್ ಬೈಕ್ ಚರಂಡಿಯ ಪಕ್ಕದಲ್ಲಿ ಬಿದ್ದಿದ್ದರೆ ಆ ವ್ಯಕ್ತಿ ಮಾತ್ರ  ಮಿರ್ಚಿ ಮಾಡುವಾಗ  ಹಿಟ್ಟಚ್ಚಿದ ಮಿರ್ಚಿ  ಎಣ್ಣೆಯಲ್ಲಿ ಪೂರಾ ಮುಳುಗಿ ಮೇಲೆಳುವಂತೆ ಇವರ ತಲೆ ಮುಖವೂ ಸೇರಿ ಸಂಪೂರ್ಣ ಮುಳುಗಿ ಎಷ್ಟೋ ದಿನಗಳ ಕೊಳೆತ ಕೊಚ್ಚೆ ನೀರಲ್ಲಿ ಮುಳುಗಿದ್ದುದರಿಂದ ಕರ್ರನೆ ಕೀಲೆಣ್ಣೆ ಬಳಿದುಕೊಂಡವರಂತೆ ಮೇಲೆದ್ದರು. ದಡಬಡನೆ ನಾನು ರಸ್ತೆಯ ಮದ್ಯದಲ್ಲೇ ಕಾರು ನಿಲ್ಲಿಸಿ ಇಳಿದು ಅವರ ಬಳಿ ಓಡಿದೆನಾದರೂ ಅವರನ್ನು ನೋಡಿ  ನನಗೆ ನಗು ತಡೆಯಲಾಗಲಿಲ್ಲ. ಎಬ್ಬಿಸಲು ಓಡೋಡಿ ಬಂದ ನಾನು   ಏನಾದರೂ  ಆಯಿತೇನ್ ಸಾರ್ ಎಂದು ಕೇಳಿದರೂ ನನ್ನ ಮುಖದಲ್ಲೂ ಮಾತಿನಲ್ಲೂ ನಗು ಮಾತ್ರ ಮರೆಯಾಗಿರಲಿಲ್ಲ. ಈಗಲೂ ಆ scene ನ್ನು ಜ್ಞಾಪಿಸಿಕೊಂಡರೆ  ನಗು  ಬರುವುದು. ಈ ರೀತಿಯಾಗಿ ನೀವು ಮಾಡಿರಹುದು  ಅಥವಾ ನೋಡಿರಬಹುದು. ಬೇರೆಯವರು ಬಿದ್ದಾಗ ಮುಂದೆ ಇರುವವರು ಏನು ಅಂದು ಕೊಳ್ಳುವರೋ ಎಂದು ಯೋಚಿಸದೇ ಕಿಸಕ್ಕನೇ ನಕ್ಕು ಬಿಡುತ್ತೇವೆ. ಅದೇ ನಮ್ಮ ಮೊದಲ ಪ್ರತಿಕ್ರಿಯೆಯೂ ಕೂಡ. ಅವರಿಗೆ ನೋವಾಗಿದ್ದರೂ ನಮಗೆ ಮಾತ್ರ ನಗುವು ಉಕ್ಕಿ ಹರಿಯುತ್ತದೆ ಒಮ್ಮೇ ನಕ್ಕ ಮೇಲಷ್ಟೇ ಅವರು ಏನೆಂದುಕೊಳ್ಳಬಹುದೋ ಎಂದು ಉದ್ದೇಶಪೂರ್ವಕವಾಗಿ ನಾವು ನಗುವನ್ನು ತಡೆದು ಅವರ ಸಹಾಯಕ್ಕೆ ಯತ್ನಿಸುತ್ತೇವೆ. ಏನಾದರೂ ಆಯಿತಾ ಎಂದು ಸೌಜನ್ಯಕ್ಕೆ ಸಾಂಕೇತಿಕವಾಗಿ ಕೇಳುವೆವಾದರೂ ನಗು ಮಾತ್ರ ನಮ್ಮ ಮುಖದಿಂದ ಹೋಗಿರುವುದಿಲ್ಲ.ಆಗ ಕೆಲವೊಮ್ಮೆ ನಮಗನ್ನಿಸಬಹುದು ನಗಬಾರದಿತ್ತು ಅಂತ ಆದರೆ  ಕೆಲವರು ಬಿದ್ದ ಕೆಲವೊಂದು  ಪ್ರಸಂಗಗಳು ಬಿದ್ದಾಗ ಆದ ಅವತಾರ ನೋಡಿದಮೇಲೆ ನಗುವನ್ನು ಅದುಮಿಡಲಾಗದೇ ಅದನ್ನು  ಎಷ್ಟು ಬಾರಿ ನೆನೆಸಿಕೊಂಡರೂ/ಇತರರಿಗೆ ಹೇಳುವಾಗಲೂ ನಗುತಾ ನಗುತಾ ಹೇಳುತ್ತಿರುತ್ತೇವೆ.

 ಹೌದಲ್ಲವೇ?? ಒಂದು ವೇಳೆ ಇಲ್ಲವೆಂದರೆ*
ಒಮ್ಮೆ ನಿಮ್ಮ ಮುಂದೆ ವಿಚಿತ್ರವಾಗಿ ಬಿದ್ದವರನ್ನು ನೆನಪಿಸಿಕೊಳ್ಳಿ..

 ನಗುಬರುತ್ತಿದೆಯಲ್ಲವೇ??

  ಹೌದು ಯಾಕೆ ನಾವು ಹೀಗೆ??

 ಬಿದ್ದವರಿಗೆ ನೋವಾಗಿರಬಹುದೆಂದು 'ಅಯ್ಯೊ'ಎಂಬುದ ಬಿಟ್ಟು ನಮಗೆ ನಗು ಏಕೆ ಬರುತ್ತದೆ..?

ನಮ್ಮ(ಸಮಾಜದ) ಮುಂದೆ ಯಾರಾದರೂ ಬಿದ್ದಾಗ ನಾವು(ಸಮಾಜ) ಬಿದ್ದು ಬಿದ್ದು  ನಗುತ್ತೇವೆಂದರೇ ಅದು ನಮಗೆ ಹಾಸ್ಯ ಪ್ರಸಂಗವೇ ಸರಿ.  ನಮ್ಮ ಹತ್ತಿರದ ಬಂಧು -ಬಾಂಧವ್ಯದವರಾದರೂ ನಮಗೆ ಗಂಭಿರತೆ ಕಾಳಜಿಗಿಂತ ಹಾಸ್ಯವೇ ಮೇಲುಗೈ ಆಗಿರುತ್ತದೆ.  ಇತರ ಯೋಗಕ್ಷೇಮ ಪ್ರಥಮ ಚಿಕಿತ್ಸೆ ಇತ್ಯಾದಿಗಳು ಆನಂತರವೇ..

ಯಾರಾದರೂ ಬಿದ್ದಾಗ ನಗದೇ ಅಳಬೇಕಾ? ಹಾಸ್ಯ ಪ್ರಸಂಗಕ್ಕೆ ನಗದೇ ಇರಲು ಸಾಧ್ಯವೇ ಎಂದು ನೀವು ಕೇಳಬಹುದು. ನಿಮ್ಮ ಅಭಿಪ್ರಾಯ ಒಂದು ರೀತಿಯಲ್ಲಿ ಸರಿಯೆನಿಸಬಹುದು ಆದರೆ  ವಾಸ್ತವವಾಗಿ ಬೀಳುವುದು ಎಂದರೆ ಏನು??

 ಎಡವಿಯೋ ಕಾಲು ಜಾರಿಯೋ ಇನ್ನೋಬ್ಬರು ಬಿದ್ದಾಗ ಬಿದ್ದ ವ್ಯಕ್ತಿಗೆ ಆಗುವುದು ನೋವು. ವಾಸ್ತವವಾಗಿ ಅವರಿಗೆ ನೋವಾದಾಗ ನಮಗೂ ನೋವಾಗಿ ಅಯ್ಯೋ ಎಂದೆನಿಸಿ ಅವರ ನೋವು ನನ್ನ ನೋವು ಎಂದು ಭಾವಿಸಿಬೇಕಾದ ಅಂತಃಕರಣ ಹಾಸ್ಯವಾಗಿರುವುದು  ನಮಗೆಲ್ಲಾ ಅದು ರಕ್ತಗತವಾಗಿ ಬಿಟ್ಟಿದೆ. ಹತ್ತಾರು ತಲೆಮಾರು ಹಿಂದಿನಿಂದಲೂ ಇದೊಂದು ಭಾವನೆ ಅನುವಂಶಿಕವಾಗಿ ಇಂದೂ ಇದು ಹಾಸ್ಯವಾಗಿಯೇ ನಾವು ನೀವೆಲ್ಲರೂ ಕಾಣುತ್ತಿದ್ದೇವೆ.

ನಾವು ಚಿಕ್ಕವರಿರುವಾಗ ಯಾವುದಕ್ಕೆ ಅಳಬೇಕು ಯಾವುದಕ್ಕೆ ನಗಬೇಕು ಎನ್ನುವ ಜ್ಞಾನವು ಇರದೇ ಇರುವಾಗ ಬೀಳುವ ಸನ್ನಿವೇಶಗಳು  ಹಾಸ್ಯವಾಗಿಯೇ ಪರಿಗಣಿಸಿರುವ ಪ್ರಯುಕ್ತ  ಇಂದಿಗೂ ನಾವು ಇಂತಹ ಸನ್ನಿವೇಶಗಳನ್ನು ಹಾಸ್ಯವೆಂತಾಗಿಯೇ ಭಾವಿಸಿರುವುದರಿಂದ ಬಿದ್ದಾಗ ನಗುವುದು ಸಹಜ ಧರ್ಮವಾಗಿದೆ. ಬಿದ್ದಾಗ ನೋವಾಗುವುದು ನೋವಿಗೆ  ನಗುವಿನ ಪ್ರತಿಕ್ರಿಯೆ ನೀಡಬಾರದು ಎಂದು ಯಾರೂ ಹೇಳದ ಕಾರಣ ಇಂದಿನ ಮಕ್ಕಳಿಗೂ ಅದೂ ಅನುವಂಶೀಯವಾಗಿಯೂ ಮತ್ತು ಪರಿಸರದ ಹಿನ್ನೆಯಲ್ಲೂ ಅವರಲ್ಲೂ ಈ ಗುಣ ಅಡಗಿದೆ.

ವಾಸ್ತವವಾಗಿ ಬಿದ್ದಾಗ ನಗುವುದರ ಹಿಂದಿನ ಔಚಿತ್ಯವನ್ನು  ನಾವು ನೋಡುವುದಾದರೆ ನೂರಾರು ವರ್ಷಗಳ ಹಿಂದೆ ಯಾವ ಜನ  ಧರ್ಮ, ಸಮಾಜದ ಕಟ್ಟುಪಾಡು, ನೀತಿನಿಯಮಗಳ ಬಿಟ್ಟು ನಡೆಯುವವರನ್ನು ಸಮಾಜ ಅವರು ಆ ರೀತಿ ಮಾಡಿದುದಕ್ಕೆ ಅಣುಕಿಸಿ ನಗುತ್ತಿತ್ತು.ಇದರಿಂದ ಅವರಿಗೆ ಮುಜುಗರವಾಗಿ  ಸಮಾಜದ ಆಶೋತ್ತರಗಳ ವಿರುದ್ಧದ ಹಾದಿಗೆ ಹೋಗುವವರನ್ನು ಈ ಭಾವನೆ ತಪ್ಪಿಸುತ್ತಿತ್ತು.ಇನ್ನೆಂದಿಗೂ ಜನ ನೋಡಿ ನಗುವಂತಹ ತಪ್ಪುಮಾಡಬಾರದು ಎಂಬಂತಹ ಅರಿವು ಆಗುತ್ತಿತ್ತು.ಇದು ಅಂದಿನ ಇಂದಿನ ಸಮಾಜಕ್ಕೆ  ಅವಶ್ಯಕವಾದರೂ ಅಂದಿನ ಸಾಮಾಜಿಕ ನಿಯಂತ್ರಣ ಸಾಧಿಸಲು ಮಾಡಿದ ಪದ್ದತಿಯೊಂದು ರೂಪಾಂತರ ಈ ರೀತಿಯಲ್ಲಿ  ಆಗಿದೆ ಎನ್ನಬಹುದು.

ನಗುವುದು ಸಹಜ ಧರ್ಮ ವಾದರೂ ಬಿದ್ದಾಗ ನಗುವುದು ವಿಕೃತಿಯ ಪ್ರದರ್ಶನವೇ ಸರಿ..ಅಹಂಕಾರದ ವ್ಯಕ್ತಿಯೋರ್ವ ಬಿದ್ದಾಗ ಬಾರಿ ಮೆರೆಯುತ್ತಿದ್ದ ಸರಿ ಆಯಿತು ಎಂದು ಗಂಭೀರವಾಗಿ ಹೇಳಬೇಕಾದಾಗಲೂ ನಗುವಿನೊಂದಿಗೆ ಹೇಳುವುದು ಇಲ್ಲಿ ವಿಶೇಷವಾಗಿದೆ. ಯಾರಾದರೂ ನನ್ನನ್ನು ಆಡಿಕೊಂಡು ನಕ್ಕಾರು ಎಂದು ಬಿದ್ದವರು ಏನು ಆಗಿಲ್ಲ ಎಂದು  ವರ್ತಿಸಿದ ಹಿನ್ನೆಲೆಯಲ್ಲಿಯೇ "ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ"ಎಂಬ ಗಾದೆಯ ಜನನವಾಗಿದ್ದಿರಬೇಕು.ಇತ್ತೀಚಿನ ದಿನಗಳಲ್ಲಿ ಇದು ಬಹು ವಿಕಾರವಾಗಿ ಭೌತಿಕವಾಗಿ ಬಿದ್ದಾಗಷ್ಟೇ ಅಲ್ಲದೇ ಜೀವನದಲ್ಲಿ ಯಾರಾದರೂ ಬಿದ್ದಾಗಲೂ (ಸೋತಗಲೂ) ನಮಗೆ ನೋವಾಗದೇ ನಲಿವಾಗುವುದು ವಿಚಿತ್ರ ವಿಕೃತಿಯೇ ಸರಿ. ಅದಕ್ಕೆ ಇಂದು ನನ್ನಲ್ಲೂ ನಿಮ್ಮಲ್ಲೂ ಎಲ್ಲರಲ್ಲೂ ನಾವು ಕಾಣಬಹುದು. ಬೇರೆಯವರು ಬಿದ್ದಾಗ ಬರುವಷ್ಟು ನಗು ಅದೇ ಅವರು ಗೆದ್ದಾಗ ಬರುವುದಿಲ್ಲ.ವಾಸ್ತವವಾಗಿ ಬಿದ್ದಾಗ ನೋವಾಗಿ, ಗೆದ್ದಾಗ ನಗುವಾಗಿ ಅರಳಬೇಕಿತ್ತು.ಆದರೆ ಇಂದಿನ ಸಮಾಜ ಇತರರು ಗೆದ್ದಾಗ ನಗುಬಾರದೇ ಅದೇ ಇಂದು ಅಸೋಯೆಯಾಗಿ, ಸೇಡಿನ ರೂಪವಾಗಿ ನಾನ ಆವೇಷಗಳಿಗೆ ತಿರುಗಿ ಕದನ ಕೊಲೆಗಳಾಗುತ್ತಿರುವುದು ಈ ನಾಗರಿಕತೆಯ ಅನಾಗರಿಕ ವಿಕೃತಿಯಾಗಿದೆ.ಅದೇ ನಮ್ಮ ಪ್ರೀತಿ ಪಾತ್ರರು ಉದಾಹರಣೆಗೆ ನಮ್ಮ ತಂದೆ ತಾಯಿ ಅಕ್ಕ ತಂಗಿ ಮಕ್ಕಳು ಬಿದ್ದಾಗ ನಿಜಾವಾಗ್ಲೂ ಆಗ ನಮಗೂ ನೋವಾಗುವುದು. ಆದರೆ ಇಲ್ಲಿ ಪರರು ಬಿದ್ದಾಗ ನಮಗಾಗದು ನೋವು ಆಗ ನಮಗಾಗುವುದು ನಲಿವು.

ಯಾರಾದರೂ ಬಿದ್ದಾಗ ಮರುಕ ಪಡಬೇಕಾದ ಸಂದರ್ಭದಲ್ಲಿ ನುಸುಳಿ ಬಂದ ವಿಕೃತ ನಗುವು ಮನುಷ್ಯ ಭಾವದ ವ್ಯವಸ್ಥಿತ ಕೊಂಡಿಯು ಎಲ್ಲಿಯೋ ನಮ್ಮ ಸಮಾಜ ಮತ್ತು ಶಿಕ್ಷಣದಲ್ಲಿ ತಪ್ಪಿದೆ. ಅಂದು ಸಾಮಾಜಿಕ ನಿಯಂತ್ರಣಕ್ಕೆ ಮಾಡಿಕೊಂಡ ಪದ್ದತಿಯೊಂದು   ಇಂದು ಯಾರು ಹೇಗೆ ಬಿದ್ದರೂ ನಗುವಂತಾಗಿದೆ.ಈಗ ಇದು ಶಿಕ್ಷಣ ಮತ್ತು ಸಮಾಜದ ನಿಯಂತ್ರಣ ವ್ಯವಸ್ಥೆಗೆ ಸಿಗದೇ ಸಮಾಜದಲ್ಲಿ ಹೆಮ್ಮರವಾಗಿ ಬೆಳೆದುಬಿಟ್ಟಿದೆ. ಬಿದ್ದಾಗ ನಗುವುದ ಬಿಟ್ಟು ಅಯ್ಯೋ ಎನ್ನುವ ಭಾವದ  ಅಂತಃಕರಣದ ಬೀಜ ಬಿತ್ತನೆ ಇಂದಿನ ಸಮಾಜ ಮತ್ತು ಶಿಕ್ಷಣದಲ್ಲಿ ಬಿತ್ತಬೇಕಿದೆ.  ಮನುಷ್ಯತ್ವದ ತಳಹದಿಗೆ ಈಗಾಗಲೇ ಧಕ್ಕೆಯಾಗಿರುವುದರಿಂದ ಮುಂದಿನ ತಲೆಮಾರುಗಳಲ್ಲಾದರೂ ಈ ವಿಕೃತ ಭಾವ ತೊಲಗಿ ಮನುಷ್ಯತ್ವದ ಎಲ್ಲಾ ಭಾವಗಳನ್ನು  ಶಿಕ್ಷಣದಲ್ಲಿ ಅಳವಡಿಸಿ  ಈ ನಮ್ಮ  ಸಮಾಜದಲ್ಲಿ  ಅರ್ಥಪೂರ್ಣ ಮಾನವೀಯ ಮೌಲ್ಯಗಳ ಸ್ಥಾಪಿಸಿ ಪೋಷಿಸಬೇಕಾಗಿದೆ.

✍️ ನಾಗೇಂದ್ರ ಬಂಜಗೆರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..