ಕೋರೋನಾ ನಂತರ ನಮ್ ಮಕ್ಕಳಿಗೆ ಏನಾಗಿದೆ???

*ಆತ್ಮೀಯರೇ...ಎಲ್ಲಾ ಶಿಕ್ಷಕರು ಮತ್ತು ಪೋಷಕರು ಓದಲೇ ಬೇಕಾದ ಲೇಖನ ತಪ್ಪದೇ ಬಿಡುವು ಮಾಡಿಕೊಂಡು ಓದಿ..*



*ಅದ್ಯಾಕೋ  ಶಾಲಾ ಮಕ್ಕಳು ಮೊದಲಿನ ತರ ಇಲ್ಲ...*





*ಕೋವಿಡ್ ಬಂದ ಮೇಲೆ ಇಡೀ ಪ್ರಪಂಚದ ಎಲ್ಲಾ  ವ್ಯವಸ್ಥೆಗಳು ಪಾತಾಳಕ್ಕೆ ಕುಸಿದಿದ್ದು ನಮಗೆಲ್ಲಾ ಚೆನ್ನಾಗಿಯೇ ಗೊತ್ತಿದೆ. ಅದರಲ್ಲೂ ಶಾಲೆಯ ಮಕ್ಕಳ ತಲೆಯಲ್ಲಿ ಕಲಿತದ್ದೆಲ್ಲಾ ಅಳಿಸಿ ಹೋಗಿ ಹೊಸದೇನಾದರೂ ಕಲಿಸೋಣ ಎಂದರೆ ಅದೂ ಕೂಡ ಕೆಲವರ  ತಲೆಗೆ  ಹತ್ತುತ್ತಿಲ್ಲ.!ಆಶ್ಚರ್ಯವಾದರೂ ಇದು ಸತ್ಯ.ಕರೋನ ನಂತರದಲ್ಲಿ  ನಾನೊಬ್ಬ ಶಿಕ್ಷಕನಾಗಿ  ಈ ಮಾತನ್ನು ಹೇಳುತ್ತಿದ್ದೇನೆಂದರೇ ಅದು ಈ ಕೆಳಗಿನ ಘಟನೆಗಳಿಂದ..*



*ಘಟನೆ -೧*

*ನಮ್ಮ ಶಾಲೆಯ ಇಬ್ಬರು ಹುಡುಗರು  ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಟಾಪ್ ಮೆರಿಟ್ ಲ್ಲಿ ಆಯ್ಕೆ ಆಗಿದ್ದರು.ಆ ಹುಡುಗರು  ಬಹುತೇಕ ಸ್ವತಂತ್ರವಾಗಿ ಬದುಕಲು ಶಕ್ತವಾದವರು.   ಈ ಏರಿಯಾದ ಮಕ್ಕಳಿಗೆ ಶಾಲಾ ಸೌಕರ್ಯಗಳು ಸರಿಯಾಗಿಲ್ಲದುದರಿಂದ ಇವರು ಈ ಹಾಸ್ಟೆಲ್ ಗೆ ಸೇರಿದ್ದು ಇವರ ವಿದ್ಯಾಭ್ಯಾಸ ಒಂದು ಹಂತ ಮುಟ್ಟಿತು ಎಂದು ನಿಟ್ಟುಸಿರು ಬಿಡುವ ವೇಳೆಗೆ ಬಂದು ತಲುಪಿದ ಸುದ್ದಿ ಎಂದರೆ ಆ ಹುಡುಗರು ಹಾಸ್ಟೆಲ್ನಿಂದ ವಾಪಾಸು ಊರಿಗೆ ಬಂದು ಸಿಕ್ಕವರಿಗೆಲ್ಲಾ ಆ ಶಾಲೆ ಬೇಡ ಅಲ್ಲಿ ಮೊಬೈಲ್ ಇಲ್ಲ ಏನು ಇಲ್ಲ.. ಬರೀ ಶಾಲೆ ಓದು ಬರೆ ..ಓದು ಬರೆ.... ನಾವು ಹೋಗಲ್ಲ ಇಲ್ಲೇ ಆದರೆ ಶಾಲೆಗೆ ಹೋಗುವೆವು ಎಂದು.ಈ ವಿಷಯ ನಮ್ಮ ಕಿವಿಗೂ ಬಂದು ತಲುಪಿತು. ಈಗ ತಾನೇ ಹೊಸ ವಸತಿ ಶಾಲೆಗೆ ಹೋಗಿದ್ದಾರೆ. ಒಂದೆರಡು ದಿನ ಸರಿಯಾಗುವರು ಎಂಬ ಆಶಾದಾಯಕತೆ ನಮ್ಮಲ್ಲಿ ಇತ್ತು. ಇಲ್ಲಿ ಊರಲ್ಲಿ   ಅವರಿಗಿಂತ ಹಿರಿಯ ಹಳೇ  ವಿದ್ಯಾರ್ಥಿಗಳೊಂದಿಗೆ ಮೊಬೈಲ್ ಹಿಡಿದು  ಊರು ತುಂಬಾ ಸುತ್ತುತ್ತಿದ್ದ ಸುದ್ದಿ. ಊರಷ್ಟೇ ಅಲ್ಲ.. ಊರು ಸುತ್ತಾ ಮುತ್ತಾ ಇರುವ ಅನೈತಿಕ ಸ್ಥಳಗಳ ಹೊಸ ಸದಸ್ಯರಾಗಿದ್ದಾರೆ.ನಾಲ್ಕೈದು ದಿನಗಳ ನಂತರ ಒಮ್ಮೆ ರಸ್ತೆಯಲ್ಲಿ ಕಂಡಾಗ  ನಮ್ಮ ಶಾಲೆಗಾದರೂ ಬರ್ರೋ ಎಂದು  ಹೇಳಿದ್ದಕ್ಕೆ ಸುಮ್ಮನೇ ನಮ್ಮ ಇತರ ಹುಡುಗರ  ಜೊತೆಗೆ ಶಾಲೆಗೆ ಬರುತ್ತಿದ್ದರು. ಹೊಸ ಶಾಲೆ. ಸ್ವಲ್ಪ ದಿನಗಳ ಮಟ್ಟಿಗೆ ಇದ್ದು ಹೋಗುತ್ತಾರೆಂದು ಅಂದು ಕೊಂಡಿದ್ದ ನಮಗೆ ಎರಡು ವಾರ ಕಳೆದರೂ ಹೋಗಲೇ ಇಲ್ಲ. ಕೊನೆಗೆ ಒಂದು ದಿನ  ಪ್ರತ್ಯೇಕವಾಗಿ ಕರೆದು ಯಾಕ್ರೋ ನೀವ್ ಹಾಸ್ಟೆಲ್ ಗೆ  ಹೋಗಲಿಲ್ಲ?? ಇಷ್ಟ ಅಗಲಿಲ್ಲವಾ? ಎಂದು  ಹೆಗಲ ಮೇಲೆ ಕೈ ಹಾಕಿ ಪ್ರೀತಿಯ ನುಡಿಗಳೊಂದಿಗೆ  ಕೇಳಿದಾಗ "ಸಾರ್ ಶಾಲೆಗೆ ಹೋಗಬೇಕಂತ ಹೋಗ್ತೀನಿ ಸಾರ್ ಆದ್ರೆ ಕ್ಲಾಸಲ್ಲಿ ಕುತ್ಕಂಡ್ರೆ ಬರೀ ಈ ಊರೇ ನೆನಪಾಗತ್ತೆ " ಇಂಟರೆಸ್ಟೇ ಬರಲ್ಲ ಎಂದ. ಹೌದು ಕಣ್ರೋ ಸ್ವಲ್ಪ ದಿನ ಹಾಗೇ ಅಲ್ಲಿ ಫ್ರೆಂಡ್ಸ್ ಆದ ಮೇಲೆ ಸರಿ ಆಗತ್ತೆ ಹೋಗ್ರಪ್ಪ ಎಂದೇಳಿದ್ದಕ್ಕೆ "ಸರಿ ಸಾರ್  ಸೋಮವಾರ ಹೋಗುತ್ತೀವಿ ಸಾರ್.. "ನಿಮ್ ತರ ಓದಿ ನಾನು ಜಾಬ್ ತೆಗೆದುಕೊಳ್ಳುತ್ತೀವಿ ಸಾರ್" ಎಂದೇಳಿ ಹೋದವರು ಮತ್ತೆ ನಮ್ಮ ಎದುರಿಗೆ ಕಂಡಿಲ್ಲ ಹಾಗಂತ ಶಾಲೆಗೂ ಹೋಗಿಲ್ಲ.! ಬೇರೆ ಹುಡುಗರನ್ನು ಕೇಳಿದ್ರೆ ದೊಡ್ಡವರ ಜೊತೆಗೆ ಹೆಡ್ ಅಂಡ್ ಟೈಲ್,  ಕ್ರಿಕೆಟ್ ಬೆಟ್ಟಿಂಗ್,ಮೊಬೈಲ್ ಲಿ ಪಬ್ಜಿ, ಆಡುತ್ತಾ ಸೀನಿಯರ್ಸ್ ಗಳಿಗೆ ತಂಬಾಕು ,ಮದ್ಯ ದಂತಹ ಪರಿಕರಗಳನ್ನು ಪೂರೈಸುತ್ತಿದ್ದಾರೆ.  ಮೊಬೈಲ್ ಹಿಡಿದು ಏನೇನೋ ನೋಡುವರು ಎಂದು ಹೇಳುವರು. ಹಾಗೆ ಮನೆಯಲ್ಲಿ ಹೊಸದೊಂದು ಆ್ಯಂಡ್ರಾಯ್ಡ್ ಮೊಬೈಲ್ ಬೇಕೇಂಬ ಬೇಡಿಕೆಯನ್ನೂ ಇಟ್ಟಿದ್ದಾರಂತೆ !*



*ಘಟನೆ-2*



*ನನ್ನ ಸ್ನೇಹಿತೆಯೊಬ್ಬರು ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕೊಂದರಲ್ಲಿ  ಸರ್ಕಾರಿ ಪ್ರೌಢಶಾಲೆಯೊಂದರ  ಕನ್ನಡ  ಶಿಕ್ಷಕಿ.ಆ ಶಾಲೆಗೆ ಬರುವ ಮಕ್ಕಳ ಬಹುತೇಕರು ಹಾಸ್ಟೆಲ್ ನಿಂದ ಬರುವಂತವರು. ಬಹಳ ದಿನಕ್ಕೆ ಕರೆ ಮಾಡಿ ಪರಸ್ಪರ  ಯೋಗಕ್ಷೇಮ ವಿಚಾರಿಸಿ ಮತ್ತೆ ನಿಮ್ಮ ಕ್ಲಾಸ್ ಮಕ್ಕಳು ಹೇಗಿದ್ದಾರೆ?? ಎಂದು ನಾನು ಕೇಳಿದೆ. ಅಯ್ಯೋ ಮಕ್ಕಳ ಅವರು.? ಇಷ್ಟು ವರ್ಷದ ಸರ್ವೀಸ್ ನಲ್ಲಿ ಇಂತಹ 'ಭಯಂಕರ' ಮಕ್ಕಳನ್ನು ನಾನು ಕಂಡಿರಲಿಲ್ಲಪ್ಪ... ಥೂ.. ಅಂದರು.*



 *ಯಾಕಮ್ಮ ಏನಾಯಿತು ಎಂಬ ಪ್ರಶ್ನೆಗೆ ಅವರು ಉತ್ತರ ಕೊಟ್ಟಿದ್ದು "ಎಲ್ಲರ ಕೈಯಲ್ಲೂ ಆ್ಯಂಡ್ರಯ್ಡ್ ಮೊಬೈಲ್ ಇವೆ. ರಾತ್ರಿ ಎಲ್ಲಾ ಏನೇನೋ ನೋಡಬಾರದೆಲ್ಲಾ ನೋಡಿ ಕ್ಲಾಸಿಗೆ ಹೋದರೆ ನನ್ನನ್ನೇ ಬಹಳ ಅಸಹ್ಯವಾಗಿ ನೋಡುತ್ತಿರುತ್ತಾರೆ,ನಿದ್ದೇ ಕಾಣದ ಕಣ್ಗಳು..ನಮಗೆ ನಿಮ್ಮ  ಪಾಠವೇ ಬೇಡ ಎನ್ನುವಂತಹ ಮುಖಭಾವನೆಗಳು. ಛೀ  ಕ್ಲಾಸಿಗೆ ಹೋಗಲು ಇರಿಸು ಮುರಿಸು ಆಗತ್ತೆ ಏನ್ ಹುಡುಗ್ರೋ ಏನೋ ಮಾರಾಯ..  ಸಾಕಾಗಿದೆ. ಈ ಸಾರಿ ಎಸ್ ಎಸ್ ಎಲ್ ಸಿ ರಿಜಲ್ಟ್ ಹೇಗ್ ಕೊಡ್ಬೇಕೋ ಗೊತ್ತಾಗುತ್ತಿಲ್ಲ...ನಿಮ್ ಕಡೆ ಮಕ್ಕಳು ಹೇಗಿದ್ದಾರೆ??*

*ನಮ್ ಕಡೇನೂ ಹಾಗೇ ಬಿಡಿ.  ಈ ಕೊರೋನಾ ಗ್ಯಾಪ್ ಲ್ಲಿ ಮಕ್ಕಳು ಪೂರಾ ಹದಗೆಟ್ಟು ಹೋಗಿದ್ದಾರೆ.ಏನಿಲ್ಲ.. ಎಲ್ಲದೂ ಹೊಸದಾಗಿ ಪ್ರಾರಂಭಿಸಬೇಕು. ಸರಿ ಸರಿ ನನಗೆ ಸ್ವಲ್ಪ ಕೆಲಸ ಇದೆ ಪ್ರೀ ಆದಾಗ ಮಾತಾಡುವೆ ಎಂದೇಳಿ  ಮಾತು ಮುಗಿಸಿದೆ.*



*ಘಟನೆ-3*


 *ನಾನು  ಪ್ರತಿದಿನ ಶಾಲೆಗೆ ಹೋಗುವ ದಾರಿಯಲ್ಲಿ ಕೇಂದ್ರೀಯ ವಿದ್ಯಾಲಯ ಒಂದು ಶಾಲೆ ಇದೆ. ಅವರ ವೇಳಾಪಟ್ಟಿ ನಮ್ಮ ವೇಳಾಪಟ್ಟಿ ವಿಭಿನ್ನವಾದರೂ ಒಂದು ಶನಿವಾರ ನಾನು ಶ್ರೀಮತಿಯೊಂದಿಗೆ ಶಾಲೆಗೆ ಹೋಗುವಾಗ  ಆ ಶಾಲೆಗೆ ಸುಮಾರು ನೂರು ಮೀಟರ್ ದೂರದಲ್ಲಿ ಹತ್ತು ಹನ್ನೆರಡು ಹುಡುಗರು ವಯೋಸಹಜ ತರಲೆ ಕೀಟಲೆಗಳೊಂದಿಗೆ ಲೋಕಾಭಿರಾಮವಾಗಿ ಆಡುತ್ತಿದ್ದರು.ಅಷ್ಟಾಗಿ ಎಂದು ಕಾಣಿಸದ ಹುಡುಗರು ಇವತ್ತೇಕೆ ಇಲ್ಲಿ ಆಡುತ್ತಿದ್ದಾರಲ್ಲ ಎಂದೆನಿಸಿತಾದರೂ ಇನ್ನೂ ಬೆಲ್ ಆಗಿಲ್ವೇನೋ ಸೋ ಹೊರಗಡೆ ಇರಬೇಕು ಎಂದೆನಿಸಿ ನಾವು ಶಾಲೆಗೆ ಬಂದು ಬಿಟ್ಟೆವು. ನಾವು ಮಾರ್ನಿಂಗ್ ಕ್ಲಾಸ್ ಮುಗಿಸಿಕೊಂಡು ಮಧ್ಯಾಹ್ನ 12-30 ಆದರೂ  ಆ ಮಕ್ಕಳು ಅಲ್ಲೇ ಆಡುತ್ತಿದ್ದಾರೆ.  ಏನಾಶ್ಚರ್ಯ?? ಆ ಹುಡುಗರೆಲ್ಲಾ ಬೆಳಿಗ್ಗೆಯಿಂದಲೂ ಅಲ್ಲಿಯೇ  ಆಡುತ್ತಿದ್ದಾರೆ.ಅದೇ ಹುಡುಗರು!ಮುಖ ಮಾತ್ರ ಡಲ್ ಅಗಿದೆ.ಅವರು ಕ್ಲಾಸಿಗೂ ಹೋಗಿಲ್ಲ. ಇತ್ತ ಮನೆಗೂ ಹೋಗಲು  ಅವರನ್ನು ಕರೆದುಕೊಂಡು ಹೋಗುವ ಆಟೋ /ವಾಹನ ಇನ್ನೂ ಬಂದಿಲ್ಲ. ಇಲ್ಲಿ ಈ ಮಕ್ಕಳ ವಿಶೇಷ ಏನೆಂದರೇ ಅವರೆಲ್ಲಾ ಸರ್ಕಾರಿ ನೌಕರರ ಮಕ್ಕಳು.!*



*ಘಟನೆ-4*



*ಕಳೆದ ಕೆಲ ದಿನಗಳ ಹಿಂದೆ ಚನ್ನಗಿರಿ ತಾಲ್ಲೂಕಿನ ಪ್ರೌಢಶಾಲೆಯ ಮಕ್ಕಳು ಅವರ ತರಗತಿಯ ಶಿಕ್ಷಕರ ತಲೆಗೆ ಡಸ್ಟ್ ಬಿನ್ ಮುಚ್ಚಿ ಹಲ್ಲೆ ಮಾಡಲು ಆಡಿದ ಆಟ ನೋಡದೇ ಇರುವವರು ಯಾರು ಇಲ್ಲ. ಈ ಘಟನೆಯಲ್ಲಿ ತಲೆ ಮೇಲೆ ಕುಳ್ಳರಿಸಿಕೊಂಡಿರುವ ಶಿಕ್ಷಕನದೇ ತಪ್ಪು  ಸ್ಟೂಡೆಂಟ್ಸ್ ಎಲ್ಲಿರಬೇಕೋ ಅಲ್ಲಿಡಬೇಕಿತ್ತು ಎಂದು ಸಾರ್ವಜನಿಕರಿಗೆ ಅನಿಸಿದರೂ ನಾನೊಬ್ಬ ಶಿಕ್ಷಕನಾಗಿ  ಹೇಳುವುದಾದರೇ ಇದು ಶಿಕ್ಷಕನ ದೌರ್ಬಲ್ಯ ಅಲ್ಲವೇ ಅಲ್ಲ.*

*ಈ ಮೇಲಿನ ನಾಲ್ಕೂ ಉದಾಹರಣೆಗಳು ಕೇವಲ ಸ್ಯಾಂಪಲ್ ಮಾತ್ರ. ಇಂತಹವು ಸಾವಿರ ಉದಾಹರಣೆಗಳು ಸಿಗುತ್ತಾವಾದರೂ ನಾವು ಈ ಮಕ್ಕಳ ಬಗ್ಗೆ ಗಂಭೀರವಾಗಿ ಯೋಚಿಸುವ ಅನಿವಾರ್ಯತೆ  ಪೋಷಕ ಮತ್ತು ಶಿಕ್ಷಕರಿಗೆ ಬಂದೊದಗಿದೆ. ಕೊರೋನಾ ಮುನ್ನಾ ಶಿಕ್ಷಕರಿಗೆ ಇದ್ದಂತಹ ತರಗತಿ ಮಕ್ಕಳ ಹಿಡಿತ, ಕೋರೋನಾ ಪೂರ್ವದಲ್ಲಿದ್ದ ಮಕ್ಕಳ ಕಲಿಕೆಯ ಮಟ್ಟ ಕೋರೋನೋತ್ತರ ದಿನಗಳಲ್ಲಿ ಕಾಣಿಸುತ್ತಿಲ್ಲ.ಕಲಿಕೆಯ ಬಗ್ಗೆ ಮಕ್ಕಳ ನಿರಾಸಕ್ತಿ ಹೇಳ ತೀರದು.ಅದ್ಯಾವುದೋ  'ಸ್ಟೈಲ್ ಕಟಿಂಗ್'ಎಂಬ ಹೆಸರಿನ ಕೆಟ್ಟ ಕೆಟ್ಟ ಡಿಸೈನ್ ಡಿಸೈನ್ ಕಟಿಂಗ್ ಗಳು, ಕಲರ್ ಕಲರ್ ಹೇರ್ ಡೈ, ಬಾಯಲ್ಲಿ  ಅಡಿಕೆ ಗುಟ್ಕಾಗಳು..! ಅಬ್ಬಾ ಒಂದಾ ಎರಡಾ???  ಮೊನ್ನೆ ನನ್ನ ಸಹೋದ್ಯೋಗಿ ಒಬ್ಬರು ಹೇಳ್ತಾ ಇದ್ದರು ಒಂಭತ್ತನೇ ತರಗತಿಯ ಹುಡುಗನೊಬ್ಬನ ಬಳಿ ಮದ್ಯದ ಬಾಟಲಿಯೊಂದು ಪಾಠಮಾಡುವಾಗಲೇ ಕಂಡಿದ್ದು..!! ಅಯ್ಯೋ ...ಈ ಮಕ್ಕಳ ಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎಂದರೇ ಅದನ್ನು  ಶಿಕ್ಷಕನಾಗಿ ಹೇಳಲು ಬಹಳ ದುಃಖ ಆಗುತ್ತಿದೆ. ಇವರ  ಮುಖದಲ್ಲಿ ಈ ಮೊಬೈಲ್ ಹಾವಳಿ ಎಷ್ಟಿದೆ ಎಂದರೆ ಕಣ್ಣು ಮತ್ತು ಮುಖಚರ್ಯೆನೇ ಬದಲಾಗಿದೆ.*

*ಕೋರೋನಾ ನಂತರ ನಮ್ಮ ಮಕ್ಕಳಿಗೆ ಏನಾಯಿತು???*

 👉 *ಕೋರೋನಾ ನಂತರ ಶಾಲೆಗಳು ಪುನಾರಂಭಗೊಂಡ ನಂತರ ಮಕ್ಕಳು ಶಾಲೆಗೆ ಬಂದವಾದರೂ ಶಾಲೆಗೆ  ಬಂದ   ಬಹುತೇಕ ಮಕ್ಕಳ ತಲೆಯಲ್ಲಿ ಹಿಂದಿನ ತರಗತಿಯ ಪೂರ್ವಜ್ಞಾನ ಕನಿಷ್ಟವೂ ಉಳಿದಿರಲಿಲ್ಲ. ಎಲ್ಲದನ್ನೂ ಹೊಸದಾಗಿ ೦ ಇಂದ ಶುರು ಮಾಡಬೇಕಾದ ಅನಿವಾರ್ಯತೆ ಶಿಕ್ಷಕರಿಗೆ ಉಂಟಾಯಿತು.*

 👉

*ಕೋರೋನೋತ್ತರವಾಗಿ ಮಕ್ಕಳ ಸಾಮಾಜಿಕ ವರ್ತನೆಯೇ  ಬದಲಾಯಿತು. ಇದು ಕೊರೋನಾ ಅವಧಿಯಲ್ಲಾದ ಕ್ಷಿಪ್ರ ಸಾಮಾಜಿಕ ಬದಲಾವಣೆ ಎಂದೇ ಹೇಳಬಹುದು.ಅಂತಹ ಸಾಮಾಜಿಕ ಬದಲಾವಣೆಗಳೆಂದರೇ ಕೊರೋನಾಗಮನಕ್ಕಿಂತ ಮುಂಚೆ ಮಕ್ಕಳಿಗೆ ಸಾಮಾಜಿಕ ವ್ಯವಸ್ಥೆಗಳೊಂದಿಗೆ ಇದ್ದ ಸಕರಾತ್ಮಕ ಆಂಶಗಳು ದೂರಾದವು. ಶಿಕ್ಷಕರು ಮತ್ತು ಶಿಕ್ಷಣದ ಬಗ್ಗೆ ಇದ್ದ ಗೌರವ ಕಾಣೆಯಾಯಿತು.  ಗೆಳೆಯರೊಂದಿಗಿನ ವರ್ತನೆಯೂ ಬದಲಾಗಿದೆ. ಎಲ್ಲರದೂ ಒಂದೇ ಮನಸ್ಥಿತಿ... ಅವರಿಗೆಲ್ಲಾ ಎಲ್ಲದರಲ್ಲೂ ಉದಾಸೀನ ಮನೋದೋರಣೆ. ಯಾವ ವಿಷಯಕ್ಕೂ ಗಂಭೀರ ಆಲೋಚನೆಯಿಲ್ಲ.  ತರಗತಿ, ಪಾಠ ಬೋಧನೆ,ಪರೀಕ್ಷೆ ಎಂದರೂ  ಕಿಂಚಿತ್ತೂ ಕಿಮ್ಮತ್ತಿಲ್ಲದ ತಾತ್ಸಾರ ಮನೋಭಾವ.ಬಹುಶ:  ನಾವು ಕೋರೋನಾ ಅವಧಿಯಲ್ಲಿ ಒಂದರಿಂದ ಪದವಿಯ ಮಕ್ಕಳನ್ನು ಬೇಷಾರತ್ ಆಗಿ ಉತ್ತೀರ್ಣಗೊಳಿಸಿದ್ದು  ಇಂದು ಈ ಮಕ್ಕಳ ಇಂತಹ ಮನೋಧೋರಣೆಗಳು ಉದಯಿಸಲು ಕಾರಣವಾಗಿರಬಹುದು.ಈ ಯೋಚನೆ  ಆ ಸಂದರ್ಭದಲ್ಲಿ ವಿದ್ದಾರ್ಥಿಗಳ ಪಾಲಿಗೆ ವರವಾಗಿತ್ತಾದರೂ  ಪ್ರಸ್ತುತ ಕಲಿಯುತ್ತಿರುವ ಬಹಳ ಮಕ್ಕಳಿಗೆ ಬೌದ್ದಿಕವಾಗಿ ಇದು ಶಾಪವೇ ಸರಿ.*


*👉 ಕೊರೋನಾವಧಿಯಲ್ಲಿ ಶಾಲೆ ಇಲ್ಲದ ವೇಳೆಯಲ್ಲಿ ಆನ್ಲೈನ್ ಕ್ಲಾಸಿಗೆಂದು ತಂದೆ ತಾಯಿ  ಕೊಟ್ಟ /ಕೊಡಿಸಿದ ಮೊಬೈಲ್‌ ಅಥವಾ ಆ ಸಂದರ್ಭದಲ್ಲಿ ಶಾಲೆಗಳಿಲ್ಲದೇ ಇರುವಾಗ ಹೊಟ್ಟೆಪಾಡಿಗಾಗಿ ಪೋಷಕರು ಪರದಾಡುತಿದ್ದಾಗ ಯಾರ ಮೇಲುಸ್ತುವಾರಿಗೂ ಸಿಗದ ಮಕ್ಕಳು  ಒಟ್ಟಾರೆ ಕೋರೋನಾ ಅವಧಿಯಲ್ಲಿ    ಕಲಿತ  ಕೆಲಸವಿಲ್ಲದ ಹಿರಿಯ ವಿದ್ಯಾರ್ಥಿಗಳಿಂದಲೋ,ಮೊಬೈಲ್ ನಂತಹ ಸಾಧನಗಳಿಂದಲೋ ಕಲಿತ ಪಾಠವೇ ಆಗಿದೆ.* 

*👉ಈ  ಮಕ್ಕಳು ಶಿಕ್ಷಕರ ಮಾತಿಗೆ ರೆಸ್ಪಾನ್ಸ್ ಇಲ್ಲ, ಮಾಡಬೇಡ ಎಂಬುದನ್ನೇ   ಅತಿ ಹೆಚ್ಚು ಮಾಡಲ್ಪಡುವ boomering ಎಪೆಕ್ಟ್   ಗೆ ಒಳಗಾಗುವ ಮಕ್ಕಳು. ಗುರಿ ಮುಟ್ಟದ ಕಲಿಕೆ ಮತ್ತು ನೀರೀಕ್ಷಿತ ಕಲಿಕಾ ಫಲಗಳನ್ನು ಮಕ್ಕಳು ತಲುಪಲಾಗುತ್ತಿಲ್ಲ. ಮಕ್ಕಳು ಮನೆಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ  ಸಮಯ ತೀರಾ ಕನಿಷ್ಟ ಮಟ್ಟಕ್ಕೆ ತಲುಪಿದೆ.*

 *ಈಗಿನ ಮಕ್ಕಳು ಶಾಲೆಯ ಹೊರಗಿರಲು ಇಚ್ಚಿಸುವಷ್ಟು ತರಗತಿಯ ಒಳಗಡೆ ಇರಲು ಇಚ್ಚಿಸುತ್ತಿಲ್ಲ.ಅದಕ್ಕೆ ಕಾರಣ ಕೋರೋನಾದಲ್ಲಿ ಎರಡು ವರ್ಷ ಆರಾಮವಾಗಿ ತಿರುಗಾಡಿದ ಪರಿಣಾಮ !.*

*ಅಲ್ಪ ಸಮಯದ ಬಹು  ಕೆಲಸದೊತ್ತಡಗಳ ಮಧ್ಯೆ ಇಂತಹ ಮಕ್ಕಳಿಗೆ ಯಾವುದನ್ನೂ ಪೂರಾ ಮಾಡಲಾಗದ ಶಿಕ್ಷಕರು ಅಸಹಾಯಕತೆಯಲ್ಲಿ ಇವರು ಹೀಗೆ ಮುಂದುವರೆಯುತ್ತಿದ್ದಾರೆ.*

*ಇಂದಿನ ಮಕ್ಕಳು ಮುಂದಿನ ಪ್ರಜೆಗಳು..ಈ ಮಕ್ಕಳ ಇಂದಿನ ವರ್ತನೆ ಭವಿಷ್ಯದ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರುವುದು ಖಂಡಿತ. ಈ ಮೇಲೆ ವಿವರಿಸಿದ ಎಲ್ಲದೂ ಕೂಡ   ಆರೋಗ್ಯಕರ ಸಮಾಜಕ್ಕೆ ಗಂಡಾಂತರದ ಸೂಚನೆಯಲ್ಲದೇ ಮತ್ತೇನೂ ಅಲ್ಲ.ಹಾಗೆಯೇ ಮುಂದುವರೆದ ವೈಜ್ಞಾನಿಕ ಕಾಲದಲ್ಲಿ ಎಲ್ಲರ ಜೀವನ ಸುಧಾರಿಸಿ ಬದುಕು ಸುಲಭ ಮತ್ತು ಸುಖಮಯಗೊಳಿಸ ಬೇಕಾಗಿದ್ದು ವಿಜ್ಞಾನ. ಸದ್ಯದ ಆಧುನಿಕ ಜೀವನ ಶೈಲಿ  ಬಾಳಿ ಬದುಕಬೇಕಾಗಿರುವ ಮಕ್ಕಳ ಬದುಕು ದುಸ್ತರ ಗೊಳಿಸುತ್ತಿರುವುದು ದುರಂತವೇ ಸರಿ.*


  *ಬರಹ ಮುಗಿಸುವ ಮುನ್ನ  ಈ ಕೊರೋನಾ ಬಾರದಿರಲೆಂದು  ಸುರಕ್ಷತಾ ದೃಷ್ಠಿಯಿಂದ ವ್ಯಾಕ್ಷಿನ್ ,ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವಂತೆ ಈ ಮಕ್ಕಳ ಕಲಿಕೆ ಮತ್ತು ಇವರ ವಿಚಿತ್ರ ವರ್ತನೆಯಬಗ್ಗೆ  ಬಗ್ಗೆ ಪೋಷಕರು, ಶಿಕ್ಷಕರು, ಮನಶಾಸ್ತ್ರಜ್ಞರು ಸಮರೋಪಾದಿಯಲ್ಲಿ ಇವರ ಈ ರೋಗಕ್ಕೂ ಮದ್ದು ಕಂಡುಕೊಳ್ಳಬೇಕಿದೆ.ಇವರಿಗೂ ಬೂಸ್ಟರ್ ಲರ್ನಿಂಗ್ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಈ ಸಮಾಜವು ಅತ್ಯಂತ ವೇಗವಾಗಿ ಅಪಾಯದಂಚಿಗೆ ನೂಕಲ್ಪಡುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಪೋಷಕರೇ, ಶಿಕ್ಷಕರೇ ಎಚ್ಚರ ಎಚ್ಚರ..'ಮಕ್ಕಳು ನಮ್ಮ ಮತ್ತು ದೇಶದ ಅಮೂಲ್ಯ ಆಸ್ತಿ' ಕಾಪಾಡಿಕೊಳ್ಳೋಣ..*



✍️ ನಾಗೇಂದ್ರ ಬಂಜಗೆರೆ.
ಸಹ ಶಿಕ್ಷಕರು,ಸಹಿಪ್ರಾಶಾಲೆ ಮಿಂಚೇರಿ,ಬಳ್ಳಾರಿ ತಾ mobile-9902912684

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..