ಹಿಡಿಂಬವನ ಮತ್ತು ನಗ್ಲಿ ಮುಳ್ಳುಗಳು...

 *ಹಿಡಿಂಬವನ ಮತ್ತು ಮೇಲ್ದುರ್ಗ...*

part -2


(ಹಿಂದಿನ ಸಂಚಿಕೆಯಿಂದ.... ಮೂವತ್ತು ನಲವತ್ತು ಅಡಿಯ ಬಂಡೆಸಂದುಗಳ ಪ್ರಪಾತದಲ್ಲಿ ಕಂಡ ಮೂಳೆಗಳ ರಾಶಿಗೆ ಹೌಹಾರಿದ್ದೆವು...

)

*ಅಂದು ದುರ್ಗದ ಎಣ್ಣೆಕೊಳದ ಸಮಾಂತರವಾಗಿ ಬುರುಜುಗಳ ದಾಟಿ ಒಳ ಹೋದರೆ ಅಲ್ಲೊಂದು ಘಂಟೆ ಮರ ಇತ್ತು.. ಘಂಟೆ ಮರ ಎಂದರೆ ಎತ್ತಿನಗಾಡಿಯ ಚಕ್ರದ ಕುಂಬಿ ತಯಾರಿಸಲು ಬಳಸಲ್ಪಡುವ ಏಕೈಕ ಮರ ಎಂದರೆ ಈ ಘಂಟೆ  ಮರವೇ..  ಅದು ಪೆಬ್ರವರಿ ತಿಂಗಳಾಗಿದ್ದರಿಂದ ಎಲೆಗಳೆಲ್ಲಾ ಉದುರಿ ಅಂಗೈಯಗಲ ಮತ್ತು ಅಂಗೈಯಷ್ಟು ಉದ್ದದ ಅಷ್ಟೇನು ಭಾರವೇ ಇಲ್ಲದ ಕಾಯಿಗಳು ಮಾತ್ರ ಮರದಲ್ಲಿ ನೇತಾಡುತಿದ್ದವು.. ಆಗೊಮ್ಮೆ ಈಗೊಮ್ಮೆ ಏಳುತಿದ್ದ ಸುಂಟರಗಾಳಿಗೆ ಆ ಮರದ ಎಲ್ಲಾ ಕಾಯಿಗಳು ಗಳ ಗಳನೇ ಅಲ್ಲಾಡಿ ಗಂಟೆಯ ರೀತಿಯ ಶಬ್ಧಹೊರಡಿಸುತಿದ್ದವು...ಅದರ ಸುತ್ತ ಮುತ್ತಾ ದೊಡ್ಡ ಬಂಡೆಗಳ ಅಡಿಯಲ್ಲಿ ವಿಶಾಲವಾಗಿ ಹತ್ತಾರು ಜನ ಮಹಡಿಯ ಕೆಳಗೆ ಕೂರುವಂತೆ ಕೂರಬಹುದಾದ ಸ್ಥಳಾವಕಾಶ ಇತ್ತು..  ತಿಮ್ಮಣ್ಣನ  ಮಾಮೂಲಿ ಸ್ಥಳದಲ್ಲಿ ಕೂತ..ಬಾರಪ್ಪ ಇಲ್ಲೆ ಕೂತ್ಕೋ ಎಂದು ಪ್ರತಿ ಬಾರಿಯೂ ಹೇಳುತಿದ್ದ ತಿಮ್ಮಣ್ಣನಿಗೆ ನಾನು ಹೇಳುತಿದ್ದುದು ಒಂದೇ ಉತ್ತರ... ಹನ್ಸ್ ವಾಸನೆ ನನಗೆ ಆಗುವುದಿಲ್ಲಣ್ಣ... ನೀವು ಅರಾಮಾಗಿ ಕೂತ್ಕಳಿ ಎಂದು ನಾನು ಸ್ವಲ್ಪ ದೂರದಲ್ಲಿ  ದೊಡ್ಡ ಎತ್ತರದ ಬಂಡೆಯ ನೆರಳು ವಿಶಾಲವಾದ ಮತ್ತೊಂದು ಬಂಡೆಯಮೇಲೆ ಹಾಸಿ ಬಿದ್ದಿತ್ತು.ಮುಂದೆ ನೋಡಿದರೆ ಕೋಟೆಯ ಪ್ರವೇಶದ್ವಾರ ಮತ್ತು ಸುತ್ತಮುತ್ತಲಿನ ಚಿತ್ರಣ ಸ್ಪಷ್ಟವಾಗಿ ಕಾಣಿಸುತಿತ್ತು. ಓದಲು ಶುರುಮಾಡಿ ಕೆಲವೇ ನಿಮಿಷಗಳಲ್ಲಿ ತಿಮ್ಮಣ್ಣ ಆತನ ಪುಸ್ತಕಗಳನ್ನು ಅವರು ಕುಳಿತಿದ್ದ ಜಾಗದಲ್ಲೇ  ಮಡಚಿಟ್ಟು ನನ್ನ ಬಳಿ ಬಂದರು. ನಾನು ಸಮಾಜಶಾಸ್ತ್ರದ ಎಂ ಎನ್ ಶ್ರೀನೀವಾಸ್  ಅವರ ಸಂಸ್ಕೃತೀಕರಣ ಬ್ರಾಹ್ಮಣೀಕರಣ ವಿಷಯವನ್ನು  ಕೈ ಕಟ್ಟಿ ಕುಕ್ಕರುಗಾಲಿನಲ್ಲಿ ಕುಳಿತು ಪುಸ್ತಕ ಕೆಳಗಿಟ್ಟು   ಓದುತ್ತಾ ಇದ್ದೆ. ನನ್ನ ಅವತಾರವನ್ನು ನೋಡಿದ ತಿಮ್ಮಣ್ಣ ಇದ್ಯಾಕಪ್ಪ ಇಂಗೆ ಕೂತ್ಕಂಡಿಯಾ?ಎಂದ ಚಕ್ಕಂಬಕ್ಲ ಕೂತು ಬಂಡೆ ಒತ್ತುತಿತ್ತು ತಿಮ್ಮಣ್ಣ ಅದಕ್ಕೆ ಹಿಂಗೆ ಕೂತು ಓದಿಕ್ಯಂಬತೀದಿನಿ ಅಂದೆ.*


*ಮತ್ತೆ ಮೈಯಲ್ಲಿ ಇಷ್ಟೊಂದು ಮೂಳೆ ಇದ್ದರೆ ಒತ್ತಲ್ಲೇನಪ್ಪ?  ಸ್ವಲ್ಪ  ಮೈಯಲ್ಲಿ ಮಾಂಸ ಬೆಳೆಸು ಎಂದನು ತಿಮ್ಮಣ್ಣ.*


*ಅಯ್ಯೋ ತಿಮ್ಮಣ್ಣ ಗೊತ್ತಲ್ಲ ?? ಹಾಸ್ಟೆಲ್ ಲಿ  ಹೆಂಗೇ ಬ್ಯಾಟಿಂಗ್ ಮಾಡಿದರೂ  ನಾನು ದಪ್ಪನೇ ಆಗಂಗಿಲ್ಲ  ಬಿಡಣ್ಣ ಎನ್ನುತ್ತಾ ನನ್ನ ಪಕ್ಕದಲ್ಲಿದ್ದ ವಾಟರ್ ಬಾಟಲ್ ತೆಗೆದುಕೊಂಡು ನೀರನ್ನು ಕುಡಿಯುತ್ತಾ*

*"ಮೊನ್ನೆ ಬೆಟ್ಟ ಹತ್ತಿದ್ದೆವಲ್ಲ . ..ಆ ಅನುಭವ ಚೆನ್ನಾಗಿತ್ತಲ್ಲ .. "??ಎಂದು ಆ ಕಡೆ ಕೈ ತೋರಿಸುತ್ತಾ ಅಂದನು.*


*ಹ್ಞು ತಿಮ್ಮಣ್ಣ ಚೆನ್ನಾಗಿತ್ತು. ಆದರೆ ಆ ಬಂಡೆಯ ಪ್ರಪಾತದಲ್ಲಿ ಮೂಳೆಗಳ ರಾಶಿ ನೋಡಿ ನನಗೆ ಭಯ ಆಗಿತ್ತು.  ನಾವು ಅದನ್ನು ಹಾರಿದಾಗ ಅಪ್ಪಿತಪ್ಪಿ ಬಿದ್ದೋಗಿದ್ದರೆ ಏನ್ ಮಾಡ್ಬೇಕಿತ್ತು ?? ಅಮ್ಮಾ ಎಂದು ತಲೆ ಕೊಹ್ಞೂ ಕಣಪ್ಪ ನನಗೂ ಕೂಡ ಭಯ ಆಗಿತ್ತು. ಆದರೆ ದೊಡ್ಡೋನು ನಾನು .. ನನಗೂ ಭಯ ಆಗತ್ತೆ ಅಂತ ಹೇಳ್ಯ್ಕಂಬಕೆ ನಾಚಿಕೆ ಆಗಿ ಹೇಳಲಿಲ್ಲ ..*


*ಅದರಲ್ಲೇನಿದೆ ಬಿಡು ತಿಮ್ಮಣ್ಣ ಅಷ್ಟೋಂದು ಮೂಳೆ ರಾಶಿ ನೋಡಿದರೆ ಎಂತವರೂ ಬಟ್ಟೆ ಒದ್ದೆ ಮಾಡಿಕ್ಯಂತಾರೆ ನಾವು ಧೈರ್ಯವಂತರು ಅದಕ್ಕೆ ಮಾಡಿಕ್ಯಂಡಿಲ್ಲ...*


*ಹ್ಞೂ..ಹ್ಞೂ..ಎನ್ನುತ್ತಾ ನಾಳೆ ಮತ್ತೆ ಬೆಟ್ಟ  ಹತ್ತಾಣ...??*

 

*ಹೋ... ನೆಡಿಯಣ್ಣಾ... ಹತ್ತಾಣ ನಾನು ಈಗಲೇ ರೆಡಿ....*


 *ಈ ಸರಿ ಯಾವಕಡೆ ಹತ್ತಾಣ? ಎಂದ ತಿಮ್ಮಣ್ಣ.*


*ತುಪ್ಪದಕೊಳದ ಕಡೆಗೆ ಹತ್ತಾಣ... ಕುದುರೆ ಹೆಜ್ಜೆಯ ಮೇಲೆ ಹತ್ತಿ ,ಹಾಗೆ ಹಿಂದುಗಡೆಯಿಂದನೇ ಇಳಿದು ಗೋಪಾಲಸ್ವಾಮಿಯ ಹೊಂಡದ ಆಚೆ ಕಡೆಯಿಂದ ಬರೋಣ ಎಂದು ನಾನೆಂದೆ. ಹ್ಞು ಸರಿಯಪ್ಪ ಹತ್ತಾಣೇಳು ಹಂಗೆ ಮಾಡೋಣ ಎಂದೇಳುತಾ ತಿಮ್ಮಣ್ಣ ಯಾಕೋ  ಇವತ್ ಓದಾಕೇ ಇಂಟರೆಸ್ಟ್ ಬತ್ತಾ ಇಲ್ಲ ನೆಡಿಯಪ್ಪ ಕೆಳಗೆ ಇಳಿಯಾನ ಅಂದ. ಸರಿ ನಡಿ ಅಣ್ಣಾ ಎಂದು ಒಪ್ಪಿಗೆ ಸೂಚಿಸಿ ಪುಸ್ತಕ ಮುದುರಿಕೊಂಡು ವಾಟರ್ ಬಾಟಲ್ ಕೈಯಲ್ಲಿ ಹಿಡಿದು ನಾನು ಕುಳಿತ ಬಂಡೆಗಲ್ಲಿನಿಂದ ಇಳಿದು  ಕೋಟೆಯ ಮುಖ್ಯ ದ್ವಾರದ ಹಾದಿ ಹಿಡಿದೆವು.*


  *ಮರುದಿನ ಬೆಳಿಗ್ಗೆ ಹೊತ್ತು    ಹತ್ತೋಣ ಅಂದ್ರೆ ಹಾಸ್ಟೆಲ್ ನಲ್ಲಿ ಕೊಡುತ್ತಿದ್ದ ತಿಂಡಿ ನಮ್ಮ ಹೊಟ್ಟೆಗೆ ಯಾವ ಮೂಲೆಗೂ ಸಾಕಾಗುತ್ತಿರಲಿಲ್ಲ. ಕುದುರೆ ಹೆಜ್ಜೆ ಮೇಲೆಲ್ಲಾ ಹತ್ತ ಬೇಕೆಂದರೆ ಪುಲ್ ಎನರ್ಜಿಬೇಕೆಂದು ಹನ್ನೊಂದು ಗಂಟೆಗೆ ಸರಿಯಾಗಿ ಬಂದು ಪುಲ್ ಮೀಲ್ಸ್ ಊಟಮಾಡಿಯೇ ಕೋಟೆಯ ಹತ್ತುವುದು ಎಂದು ನಿರ್ಧರಿಸಿ ಅಂದಿನ ಮಧ್ಯಾಹ್ನದ ಊಟಕ್ಕೆ ಮೊದಲಿಗ ಮತ್ತು ಎರಡನೆಯವರಾದ ನಾವು ಹಾಸ್ಟೆಲ್ ಭಟ್ಟರಾದ ಕಂಠಪ್ಪನಿಂದ  ಬರೀ ರಾಗಿಯ ಮುದ್ದೆಯ ಹಾಕಿಸಿಕೊಂಡು ಸುಮಾರು ಮೂರ್ನಾಲ್ಕು ಮುದ್ದೆ ಊಟಮಾಡಿ ಪುಲ್ಟ್ಯಾಂಕ್ ಮಾಡಿದನಾವು  ಹನ್ನೊಂದು ವರೆ ಸುಮಾರಿಗೆ   ಕೋಟೆಯ ಹಾದಿ ಹಿಡಿದು ಹೋಗುತ್ತಿದ್ದೆವು. ಕೋಟೆಯ ಮುಖ್ಯದ್ವಾರದಲ್ಲಿ  ಸುಮಾರು ಐವತ್ತು ವರ್ಷದ ಮೇಲ್ಪಟ್ಟ ಆರ್ಕ್ಯಾಲಾಜಿ ಅಸಿಸ್ಟೆಂಟ್ ಡೈರೆಕ್ಟರ್ ಪಾಪಣ್ಣ ಎಂಬುವವರು  ಅವರ ಇತರ ಸಹಾಯಕರೊಂದಿಗೆ ಏನನ್ನೋ ಚರ್ಚೆ ಮಾಡುತ್ತಾ,ಕೋಟೆಯ ಹಾಸುಗಲ್ಲಿನ ಹಾದಿಯನ್ನೆಲ್ಲಾ ಶುಚಿ ಮಾಡುತ್ತಿದ್ದ ಅವರ  ಮಹಿಳಾ ನೌಕರರೊಂದಿಗೆ ಮಾತಾಡುತ್ತಾ ಇದ್ದರು. ಅವರು ವಾರಕ್ಕೆ ಎರಡು ಮೂರು ಬಾರಿ ನಮಗೆ  ಆಗಾಗ್ಗೆ ಅಲ್ಲಲ್ಲಿ ಕಾಣಿಸುತ್ತಿದ್ದರು. ಅವರು ನಮ್ಮ ಕಣ್ಣೆದುರು ಕಂಡಾಗಲೆಲ್ಲಾ  ತಪ್ಪದೇ ಅವರಿಗೊಂದು ನಮಸ್ಕಾರ ಸಲ್ಲಿಕೆ ಆಗೇ ಆಗುತ್ತಿತ್ತು.  ನಮ್ಮ ನಮಸ್ತೆಗೆ ಮರುತ್ತರವಾಗಿ ಅಂದು ಅವರು ನಮ್ಮನ್ನು ತಡೆದು 'ಏನ್ರಪ್ಪ ಚೆನ್ನಾಗಿ ಓದುತ್ತಿದ್ದೀರಾ?? ಅಂದ್ರೂ..*


*ಹೌದು ಸಾರ್ ಚೆನ್ನಾಗಿ ಓದುತ್ತಿದ್ದೇವೆ...*


*ಹ್ಞುಂ ... ಚೆನ್ನಾಗಿ  ಓದಬೇಕು...ಓದ್ಕೋಳ್ರಿ... ಎಂದರು.*


 *ಆಗ ಕೋಟೆಯ ಪ್ರವೇಶಕ್ಕೆ ಇದ್ದದ್ದು ಐದು ರುಪಾಯಿ ಎಂಟರೆನ್ಸ್  ಪೀಸ್ ಇತ್ತು. ಅವರು ನಮಗೆ ಕಂಡಾಗಲೆಲ್ಲಾ ನಮ್ಮ ನಮಸ್ಕಾರಕ್ಕೆ ತಲೆಬಾಗಿ  ನಮ್ಮನ್ನೂ ಅವರು 'ನಮ್ಮಡುಗ್ರೆ' ಅಂತ ಅವರೂ ಭಾವಿಸಿದಂತಿತ್ತು.ಆಗ  ಬೇರೆಯ ಸಿಬ್ಬಂದಿಯೊಬ್ಬರು ಮೂಗು ತೂರಿಸಿ 'ಸಾರ್ ಈ ಹುಡುಗರು ದಿನಾ ಬರ್ತಾರೆ ಸಾರ್ ...' ಎಂದು ಹೇಳಿದರು.  ಬಹುಶಃ ಆ ಸಿಬ್ಬಂದಿಗೆ ನಾವು ಎಂಟರೆನ್ಸ್ ಇಲ್ಲದೇ ಪ್ರತಿದಿನ ಎರಡೆರಡು ಬಾರಿ ಕೋಟೆ ಪ್ರವೇಶಿಸುತ್ತಿದ್ದುದು ಆ ಸಿಬ್ಬಂದಿಯು ಮೂಗು ತೂರಿಸಿ ಹೇಳಿದ ಕಾರಣ ಎಂಬಂತಿತ್ತು.. ಆಗ ಆ ಡೈರೆಕ್ಟರ್ ಆ ಸಿಬ್ಬಂದಿಯ ಕಡೆ ತಿರುಗಿ ಏಕವಚನದಲ್ಲೇ*

*"ಲೇ.. ಆ ಹುಡುಗರು ಹಾಸ್ಟಲಾಗೆ ಇದಾರೆ.ಅವರೇನು ಮಜಾಮಾಡಕ ಬೆಟ್ಟಕ್ಕೆ ಹೋಗ್ತಾರೆ?ಏನೋ ಓದಕ್ಕೆ ಅಂತಾ ಹೋಗತ್ತಾರೆ. ಹೋಗ್ಲಿ ಬಿಡು...'*


*'ಏ ಹುಡುಗ್ರಾ.. ಇಲ್ಲಿ ಯಾವಾನಾದರೂ ಒಳಗೆ ಬಿಡಲಿಲ್ಲ..ಎಂಟರೆನ್ಸ್ ಪೀಸ್ ಕೊಡಬೇಕು ಅದು ಇದು ಅಂದ್ರೆ ನಾನು ಅಗೋ ಎದುರುಗಡೆ ಆಪೀಸ್ನಾಗೆ ಇರ್ತಿನಿ ಬಂದು ಹೇಳ್ರಿ ..ಎಂದು ಗದರಿಸಿದ್ದರು..ಸರಿ..  ಸರಿ ನೀವ್ ಹೋಗ್ರಯ್ಯ...  ಹೋಗ್ರಿ...ಹಂಗೆ "ಹುಷಾರ್ ಕಣ್ರಯ್ಯ.. ಅತ್ಲಾಗೆ  ಮ್ಯಾಲೆ ಹಿಂದಕ್ಕೆಲ್ಲಾ ದೂರ ದೂರ ಹೋಗ್ಬ್ಯಾಡ್ರಿ ಚಿರತೆ ಕಲ್ಡಿ-ಗಿಲ್ಡಿ ಎಲ್ಲಾ ಅದಾವೆ ಬೆಟ್ಟದಾಗೆ  ಇಲ್ಲೇ ಎಲ್ಲೇನ್ನಾ ಕುತ್ಕಂಡ್ ಓದಿಕ್ಯಳ್ರಿ  ಹೆಂಗಾ.." ಎಂದೇಳಿ ಹೋಗ್ರಿ ಹೋಗ್ರಿ ಹುಷಾರ್ ಎಂದು ಹೇಳಲು ಸರಿ ಸಾರ್ ಎಂದು ವಿನಯದಿಂದಲೇ ಬೆಟ್ಟದ ಸುತ್ತೆಲ್ಲಾ ಓಡಾಡಿದ ಕಳ್ಳಮುಖದಂತಿದ್ದ  ನಮ್ಮ ಮುಖಗಳ ಪರಸ್ಪರ ನೋಡಿಕೊಳ್ಳುತ್ತಾ ಎರಡು ಕಣ್ಣು ಒಮ್ಮೆಗೆ ಮುಚ್ಚಿ , ಇಬ್ಬರೂ ಮುಖ ಕಿವುಚಿಕೊಳ್ಳುತ್ತಾ ಹತ್ಬ್ಯಾಡ್ರಿ ಎಂದು ಹೇಳಿದ ಬೆಟ್ಟವ ಹತ್ತಲು ಹೊರಟೆವು. ಅಂದಿನಿಂದ ನಮಗೆ ಕೋಟೆಯ ಪ್ರವೇಶಕ್ಕೆ ಆಗಾಗ ಕೆಲ ಸಿಬ್ಬಂದಿಯವರು ಪ್ರವೇಶ ಶುಲ್ಕ  ಇಲ್ಲದೇ ಒಳ ಹೋಗಲು ಬರುತ್ತಿದ್ದ ತಕರಾರು ಶಾಸನೀಯವಾಗಿ ಕಡಿವಾಣ ಬಿದ್ದು ,ಲೀಗಲ್ ಆಗಿ  ಇನ್ನೂ ರಾಜಾರೋಷವಾಗಿ  ಕೋಟೆಯ ಪ್ರವೇಶಕ್ಕೆ ಅಧಿಕೃತ ಮುದ್ರೆ ಒತ್ತಿದಂತಾಗಿತ್ತು.*


*ಕೋಟೆಯ ಹೆಬ್ಬಾಗಿಲು,ಬೀಸುವ ಕಲ್ಲುಗಳು, ಬನಶಂಕರೀ ದೇವಸ್ಥಾನ,ಗೊಂಬೆ ಮಂಟಪ,ಎಣ್ಣೆ ಕೊಳ,ಮದ್ದಾನೆಯ ಕಲ್ಲಿನವರೆಗಿನ(ಆನೆಯಂತೆ ಕಾಣುವ ಬಂಡೆ) ಪ್ರದೇಶವನ್ನು 'ಕೆಳದುರ್ಗ' ಎಂದು ಕರೆಯುತ್ತಾರೆ.* *ಏಕನಾಥೇಶ್ವರಿ, ಉಯ್ಯಾಲೆಕಂಬ,ದೀಪದ ಸ್ಥಂಭ,ಗಾಳಿ ಮಂಟಪಗಳು, ಹಿಡಂಬೇಶ್ವರ ದೇವಸ್ಥಾನ,ಸಂಪಿಗೆ ಸಿದ್ದೇಶ್ವರ, ಟಂಕಸಾಲೆ,ಹಳೆಯ  ಮುರಘಾ ಮಠ, ತುಪ್ಪದಕೊಳ ಸೇರಿದಂತೆ ಈ ಪ್ರದೇಶವನ್ನು 'ಮೇಲ್ದುರ್ಗ' ಎಂದು ಕರೆಯುವರು. ಈಗಿನ ಏಕನಾಥೇಶ್ವರಿ ದೇವಸ್ಥಾನದ ಎದುರುಗಡೆ ಟಂಕಸಾಲೆಗೆ ಹೊಂದಿಕೊಂಡಂತೆ  ಯಾವುದೋ ಒಂದು ಬೃಹತ್ ಮರದ ಅವಶೇಷವನ್ನು ನಾನು ನೋಡಿದ್ದೇನೆ.ತರಾಸು ಅವರು ಒಂದು ಪುಸ್ತಕದಲ್ಲಿ 'ಮದಕರಿನಾಯಕನೇ ಗಿಡ ನೆಟ್ಟು ಬೆಳೆಸಿದ ಮರಗಳಿದ್ದವು' ಎಂದು ಬರೆದಿದ್ದಾರೆ. ಆ ಮರಗಳು ಬಹಶಃ ಈ ಹಳೆಯ ಬುಡದ ಅವಶೇಷ ಇರಬೇಕು ಅಥಾವ ಅಷ್ಟೇ ಹಳೆಯದಾಗಿರಬಹುದಾದ ಆ ಬೆಟ್ಟದಲ್ಲಿರುವ  ಇತರೆ ಮರಗಳೆಂದರೇ ಸಿದ್ದೇಶ್ವರ ದೇವಸ್ಥಾನದ ಬಳಿ ಇರುವ ಸಂಪಿಗೆ ಮರಗಳು  ಇರಬೇಕು ಎನ್ನುವುದು ನನ್ನ ಅನಿಸಿಕೆ.ನಾ ಕಂಡಂತೆ ಅಷ್ಟು ಪ್ರಾಚೀನ ಮರಗಳು ಜೀವಂತ ಇರುವ ಸಂಪಿಗೆಮರಗಳು ಮತ್ತು ಕುರುಹು ಆಗಿ ಉಳಿದಿದ್ದ ಆ ಮರದ ಬುಡ ಎರಡೇ ಸದ್ಯಕ್ಕೆ ಅಲ್ಲಿರುವ  ಪ್ರಾಚೀನ ಕುರುಹುಗಳು...!*


*ಸಿದ್ದೇಶ್ವರ ದೇವಸ್ಥಾನಕ್ಕೇ 'ಸಂಪಿಗೆ ಸಿದ್ದೇಶ್ವರ' ಎಂಬ ಹೆಸರು ಬರಲು ಅಲ್ಲಿದ್ದ ನಾಲ್ಕೈದು ಸಂಪಿಗೆ ಮರಗಳಿಂದಲೇ..ನಾನು ಅಲ್ಲಿಗೆ ಹೋದಾಗ ಆ ಬೃಹತ್ ಕಾಂಡ ನೋಡಿ ಇವು ಕನಿಷ್ಠ ಇನ್ನೂರು ಮುನ್ನೂರು ವರ್ಷಗಳ ಹಳೆಯವು ಎಂದು ನನಗನಿಸುತ್ತಿತ್ತು.ಹಾಗೆ ನೋಡುತ್ತಾ ನಮ್ಮ ಗಮ್ಯದೆಡೆ ನಮ್ಮ ನೋಟ ಇತ್ತು.ತುಪ್ಪದಕೊಳದ ಮೇಲ್ದುರ್ಗ ಹತ್ತಲು ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಬಹುತೇಕ ಹಿಂಬದಿಯಲ್ಲೇ ಹಾದಿ ಇದ್ದದ್ದು.ಅಲ್ಲಿಯವರಗೇ ಒಂದೇ ಉಸಿರಿನಿಂದ  ಬೆಟ್ಟಹತ್ತಿ ಬಂದಿದ್ದ ನಾವು ಏದುಸಿರು ಬಿಡುತ್ತಿದ್ದೆವು.ನಾವು ಅಲ್ಲೇಲ್ಲಾ ಹತ್ತಿದ್ದು ಅದೇ ಮೊದಲಲ್ಲವಾದರೂ,  ಅಂದು ಬಿಸಿಲು ಇದ್ದು ಎಲ್ಲಿಯೂ ನಿಲ್ಲದೇ  ರಭಸವಾಗಿ ಹತ್ತಿಬಂದದ್ರಿಂದ ಸುಸ್ತು ಅನಿಸಿತು.*


*ತಿಮ್ಮಣ್ಣ ಮಾತಾಡುತ್ತಾ... ಈಗ ಹತ್ತೋದು ಪಿಕ್ಚರ್ ಇರೋದು ನಾಗಣ್ಣ ನಮ್ಮದು......ಒಂದು ಸ್ವಲ್ಪ ಹೊತ್ತು ರೆಸ್ಟ್ ತಗಂಡ್ ಆಮೇಲೆ ಹತ್ತೋಣ ಬಾ ಎಂದು ಅಂದಿದ್ದಕ್ಕೆ  ಅಲ್ಲೇ ಸಿದ್ದೇಶ್ವರ ದೇವಸ್ಥಾನ ಪ್ರಾಂಗಣದ ಮೇಲೆ ಹತ್ತಿದೆವು. ಮಧುರ ಸುವಾಸನೆಯ ಭರಿತ ಸಂಪಿಗೆಯ ನೆರಳಿನಲ್ಲಿ ಹಾಯಾಗಿ ಬೀಸುತ್ತಿದ್ದ ನೆರಳಿನಲ್ಲಿ ಸಂಪಿಗೆಯ ತರಗೆಲೆಗಳನ್ನು,ಅದರ ಒಣಗಿದೆ ಗಂಟುಗಳಂತಹ ಕಾಯಿಯ ಕಸವನ್ನು ಕಾಲಲ್ಲಿ ಸರಿಸಿ ತಿಮ್ಮಣ್ಣ ಹಾಗೆ ಮಲಗಿಕೊಂಡ.ನಾನು ವಿಶ್ರಾಮ ಸ್ಥಿತಿಯಲ್ಲಿ ಎರುಡೂ ಕೈಗಳನ್ನೂ ಹಿಂದೆಯೂರಿ, ಎರಡು ಕಾಲೂ ಮುಂದೆ ಚಾಚಿ ಕುಳಿತು ಆ  ಬೃಹತ್ ಕೆಂಡ ಸಂಪಿಗೆಯ ಮರದ ಕಾಂಡವನ್ನೇ ನೋಡುತ್ತಿದ್ದೆ. ಆ ಮರದಲ್ಲಿ ಹತ್ತಾರು ದೊಡ್ಡಗಾತ್ರದ ಅಳಿಲು ಇದ್ದವು. ದೊಡ್ಡವು ಅಂದ್ರೆ ಕೆಂದಳಿಲು ಅಲ್ಲ ಆದರೆ ಅವು ಸಣ್ಣವುಗಳೇ..!ಅದರಲ್ಲಿ ಎರಡು ದೊಡ್ಡ ಅಳಿಲುಗಳು  ಬಹಳ ಸೀನಿಯರ್ ಅಂತವು ಬೀಜದ ಹೋರಿಯಂತೆ ಬೀಜವ ಹೊತ್ತುಕೊಂಡ ಒಂದೆರಡು ಗಂಡು ಅಳಿಲುಗಳು ಮತ್ತೆರಡು ಅಳಿಲುಗಳನ್ನು ಹಿಂಬಾಲಿಸುತ್ತಾ ಮರಹಸಿ ಇದ್ದರೂ ಗರಿಗರಿ ಒಣಗಿದ್ದ ಆ ಮರದತೊಗಟೆಯ ಅಳಿಲುಗಳ ಕಾಲುಗುರಿನ ಸಪ್ಪಳ ಆ ಸಂಪಿಗೆ ಮರದಲೆಲ್ಲಾ ಮೇಲಿಂದ ಕೆಳಗಿನವರೆಗೂ ಪಳಪಳ ಎಂದು ಸದ್ದು ಮಾಡುತ್ತಾ ಓಡುತಿದ್ದ ಅಳಿಲುಗಳು ಸರಸ ಸಲ್ಲಾಪ ಮಾಡುತ್ತಿರುವುದನ್ನು ನೋಡುತ್ತಾ ಕುಳಿತೆ. ಅದನ್ನೂ ತಿಮ್ಮಣ್ಣನಿಗೂ ತೋರಿಸಿದೆ. ಕ್ಷಣಹೊತ್ತು ನೋಡಿದ ತಿಮ್ಮಣ್ಣ ಈಟೋಂದು ಜೋರಾಗಿ ಓಡಿ ಹೋಗೋ  ಆ ಹೆಣ್ಣು ಅಳಿಲನ್ನು ಇವು  ಯಾವಾಗ ಹಿಡಿತಾತಪ್ಪ ಎಂದೇಳಲು 'ಇದು ಗಂಡಳಿಲು ತಿಮ್ಮಣ್ಣ... ಹೆಣ್ಣಳಿಲಿಗಿಂತಲೂ ಶಕ್ತಿ ಐತೆ. ಹಿಡಿತಾದೆ ನೋಡುತಾ ಇರು... ಸ್ವಲ್ಪ ಹೊತ್ತಲ್ಲೇ ಅವು ಒಂದಾಗ್ತಾವೆ ಎಂದೆ..ಏನು ಒಂದಾಗ್ತಾವೋ.. ಏನೋ ಓಡೀ ಓಡೀ ಸುಸ್ತು ಮಾಡಿಕ್ಯಂತಾವೆ.. ಅವು ಹಾಗೆ ನಿರಂತರವಾಗಿ ಒಂದು ಸೆಂಕೆಂಡು ಬಿಡುವಿಲ್ಲದೇ ಗರಗರನೇ,ಪಳಪಳ ಎಂಬ ಶಬ್ಧದಿಂದ ಬುಡದಿಂದ ತುದಿಯವರೆಗೂ ಅವುಗಳ ಗರಿಷ್ಠವೇಗದಲ್ಲಿ ತಿರುಗುತ್ತಿದ್ದವು.ಆ  ‍ಸಂಪಿಗೆಯ ದಪ್ಪ ಕಾಂಡದ ಮೇಲೆ ಅಳಿಲುಗಳ ಚೂಪಾದ ಪಂಜಾ ಒತ್ತಿ ಓಡಾಡುವಾಗ ಮುತ್ತು /ಮಣಿಗಳು ಸುರಿಯುವಾಗ ಬರುವ ಪಳ ಪಳನೇ ಶಬ್ಧ ಬರುತ್ತಿತ್ತು.ಅಷ್ಟೊತ್ತಿಗೆ ಆಗಲೇ ರೌಂಡ್ಸ್ ಹೋಗಿದ್ದ  ನೂರಾರು ಸಂಖ್ಯೆಯ ವಾನರ ಪಡೆ ಅಲ್ಲಿಗೆ ಆಗಮಿಸಿ ನಮ್ಮನ್ನು ನೋಡಿ ಅವು, ಅವುಗಳನ್ನು ನೋಡಿ ನಾವು ಪರಸ್ಪರ ಹೆದರಿದೆವು.ಮೇಲ್ಗಡೆ ಕುಳಿತಿದ್ದ ನಾನು ಗಾಳಿಗೋಪುರಗಳ ಕಡೆ  ನೋಡಲು ಅದೇ ದೇವಸ್ಥಾನದ ಗೋಪುರದ ಪಕ್ಕದಲ್ಲಿ ಎರಡು ಸಂಪಿಗೆಯ ಮರ ಇರಲು ಅದರ ಆರೆಂಜ್ ಬಣ್ಣದ ಸಂಪಿಗೆ ಹೂಗಳು ನನ್ನ ಆಕರ್ಷಿಸಿದವು. ಅವುಗಳಲ್ಲಿ ಕೆಲವು ಎತ್ತರ ದಲ್ಲಿದ್ದುದರಿಂದ ಅವನ್ನು ಕೀಳಲಾಗದೇ, ಅಲ್ಲೇ ಕೈಗೆ ಸಿಕ್ಕ ನಾಲ್ಕೈದು ಹೂಗಳನ್ನು  ಕಿತ್ತು  ಘಮ ಘಮಿಸುವ ವಾಸನೇ ಆಹ್ಲಾದಿಸಿದೆವು.ಏನೋ ಒಂಥರಾ ಮಾಧಕ ವಾಸನೆ.ಮತ್ತೆ ಮತ್ತೆ ವಾಸನೆಯ ಹೀರಬೇಕೆಂದು ಅನಿಸುತಿತ್ತು. ಹಾಗೆ ಕೈಯಲ್ಲಿ ಹಿಡಿದು  ಆಗೊಮ್ಮೆ ಈಗೊಮ್ಮೆ ವಾಸನೆ ಹೀರುತ್ತಾ ಇದ್ದೆ.*


*ಆ ಸಂಪಿಗೆಯ ದಳ ದಳಗಳ ವಿಭಜಿಸಿ,ಹಿಚುಕಿ ವಿಕೃತವಾಗಿ ವಾಸನೆಯನ್ನು ಹೀರುತ್ತಿರುವಾಗ ಕೆಳಗಿನಿಂದ ಯಾರೋ ಬೇಕರಿಯ ಬನ್ ಗಳನ್ನು  ಮೇಲಕ್ಕೆ ಎಸೆದರು.*

*ಅವು ನಾವಿರುವ ಜಾಗಕ್ಕೆ ತೊಪ ತೊಪನೇ ಬಂದು ಬಿದ್ದವು. ನಾವಿರುವುದನ್ನೂ ಲೆಕ್ಕಿಸದೇ ಕೋತಿಗಳು ಓಡಿಬಂದು ಬನ್ನನ್ನು ಎತ್ತಿಕೊಂಡು  ಬಾಯಲ್ಲೊಂದು,ಎಡ ಬಲಗೈಯಲ್ಲೊಂದು ಹಿಡಿದು ಓಡುತಿದ್ದರೆ ,ಬನ್ ಸಿಗದೇ ಇರುವ ಕೋತಿಗಳು ಬನ್ ಹಿಡಿದುಕೊಂಡಿದ್ದ ಕೋತಿಗಳನ್ನು* *ಅಟ್ಟಾಡಿಸಿಕೊಂಡು ಹೋಗಿ ಚೀರುತ್ತಾ ,ಕಚ್ಚುತ್ತಾ ಅವುಗಳಿಂದ ಕಸಿದುಕೊಂಡು ಬರುತ್ತಿದ್ದವು. ಅವಸರ ಅವಸರವಾಗಿ ತಮ್ಮ ಬಾಯಿಚೀಲಕ್ಕೆ ತುರುಕಿಕೊಳ್ಳುತಿದ್ದವು. ಬೇಕರಿ ಬನ್  ಎಲ್ಲಿಂದ ಬರುತ್ತಿವೆ ಎಂದು ಬಗ್ಗಿ ಕೆಳಗೆ ನೋಡಿದರೆ ಯಾರೋ ಒಂದು ದೊಡ್ಡ ಕವರಿನಲ್ಲಿ ಕೋತಿಗಳಿಗೆಂದೇ ಬನ್ ತಂದು ಎಸೆಯುತ್ತಿದ್ದರು.*

*ಎಂಟತ್ತು ನಿಮಿಷಗಳ ಕಾಲ ಆ ಕೋತಿಗಳ ನೋಡಲು ಅತೀ ರಂಜನೀಯವಾಗಿತ್ತು.ಅಷ್ಟರವರೆಗೆ ರೋಮ್ಯಾನ್ಸ್ ಮಾಡುತ್ತಿದ್ದ ಅಳಿಲುಗಳು ಈ ನೂರಾರು ಕೋತಿಗಳ  ಚೀರಾಟದ ಅರ್ಭಟಕ್ಕೆ  ಅವು ಎಲ್ಲಿ ಅಡಗಿಕುಳಿತವೋ ಗೊತ್ತೇ ಆಗಲಿಲ್ಲ. ಬಿಸಿಲು ಏರುತಲಿತ್ತು.ತೆಗೆದುಕೊಂಡು ಹೋಗಿದ್ದ ಪುಸ್ತಕ ಹೊಟ್ಟೆಗೆ ಸಿಕ್ಕಿಸಿಕೊಂಡು ಕುದುರೆ  ಹೆಜ್ಜೆಯ ಮೆಟ್ಟಿಲ ಹಿಡಿದು ತುಪ್ಪದಕೊಳದ ಏಕಶಿಲೆಯ ಎತ್ತರಕ್ಕೆ ಹೋಗಲು ಎದ್ದು ನಿಂತೆವು.*


*ಬಂಡೆಗಲ್ಲುಗಳುಗಳು ಬಿಸಿಲಿಗೆ ಕಾದು ಶಾಖ ಪ್ರತಿಂಬಿಂಬಿಸುತ್ತಿವೆ. ತುಂಬಾ ಕಡಿದಾದ ಸ್ಥಳದಲ್ಲಿ ಕುದುರೆಯ ಹೆಜ್ಜೆಯಂತೆ ಕಲ್ಲನ್ನು ಕಡಿದಿದ್ದಾರೆ.ಅವುಗಳು ರಾಜನ ಕಾಲದಲ್ಲಿ ಆ ಜಾಗದಲ್ಲಿ ಕುದುರೆಯ ಓಡಿಸುತ್ತಿದ್ದರೂ ಎಂದು ಹಲವರು ಹೇಳುವರು. ಆದರೆ ಅದು ನನ್ನ ಪ್ರಕಾರ ಮನುಷ್ಯರು ಹತ್ತಲು ಸುಲಭವಾಗಲಿ ಎಂದು ಯಾರೋ ಮಾಡಿರುವಲ್ಲದೇ ಬೇರೇನೂ ಅಲ್ಲ.ಹಾಗೆ  ಆ ಕುದುರೆ ಹೆಜ್ಜೆಗಳಲ್ಲಿ ನಾವೂ ಹೆಜ್ಜೆ ಹಾಕುತ್ತಾ, ನೇರವಾಗಿ ಹತ್ತಲು ಪ್ರಯತ್ನಿಸಿ ಗುರುತ್ವಕ್ಕೆ ಅನಿವಾರ್ಯವಾಗಿ   ನಾವು ಬಾಗಿ ಬಾಗಿ ಚೌ ಪಾದಿಗಳಂತೆ ಕೈ ಕಾಲುಗಳನ್ನು ಬಳಸಿ ಅಂತೂ ಇಂತೂ ಮೇಲ್ದುರ್ಗದ ತುತ್ತತುದಿಯನ್ನು ತಲುಪಿಯೇ ಬಿಟ್ಟೆವು.ಅದು  ಸಮುದ್ರ ಮಟ್ಟದಿಂದ ತುಸು ಎತ್ತರದ ಸ್ಥಳ ಆಗಿದ್ದರಿಂದ ಸ್ವಲ್ಪ ಗಾಳಿಯ ಬೀಸುವ ಪ್ರಮಾಣ ಹೆಚ್ಚಿತ್ತು.ಬೆಟ್ಟವ ಹತ್ತಲು ಬಾಗಿ ಬಾಗಿ  ಬೆವರಿದ್ದ ಮೈಯನ್ನು ಬೀಸುವ  ಗಾಳಿಗೆ ಒಡ್ಡಿ  ತ್ರೀಡಿ ಚಿತ್ರಗಳಲ್ಲಿ ಕಾಣುವ ಗುಳ್ಳೆಗಳಂತೆ ಚಿತ್ರ ಚಿತ್ರವಾಗಿ ಹಿಡಿಂಬ ಪಟ್ಟಣ ಕಾಣುತ್ತಿದ್ದರೆ ಅತ್ತ  ಭೂ ಮಟ್ಟದಲ್ಲಿ ಮಾನವ ನಿರ್ಮಿತವಾದ ನಗರದ  ಮನೆಗಳೂ ಪುಟ್ಟ ಪುಟ್ಟ ಪೆಟ್ಟಿಗೆಗಳಂತೆಯೂ, ಗೆರೆಗಳಂತೆ ರಸ್ತೆಗಳೂ ಕಾಣುತಿದ್ದವು.  ದುರ್ಗದ  ಸುತ್ತಲಿನ ವಿಶಾಲ ವಿಹಂಗಮ ನೋಟವನ್ನು ನೋಡುತ್ತಾ ದಣಿವಾರಿಸಿಕೊಂಡೆವು. ಪ್ರತಿದ್ವನಿಗಾಗಿ ಒಂದೆರಡು ಬಾರಿ ಕೂಗಿದೆನಾದರೂ ಶುಷ್ಕ ವಾತಾವರಣದ ಬಿಸಿಲಿನ ತಾಪಕ್ಕೆ ನಾನು ಕೂಗಿದ ಶಬ್ಧ ಯಾವ ಬೆಟ್ಟಕ್ಕೂ ತಾಗಿ ಪ್ರತಿಧ್ವನಿಸದೇ ಯಾವ ಮರು ಧ್ವನಿಯೂ ಬರಲಿಲ್ಲ. ಸಾಮಾನ್ಯವಾಗಿ ಅಲ್ಲಿಗೆ ಹತ್ತುವ ಪ್ರವಾಸಿಗರೂ ಕಡಿಮೆಯೇ.ಅಂದೂ ಬಿಸಿಲು ಇದ್ದುದರಿಂದ ನಮ್ಮ ಇಬ್ಬರನ್ನು ಬಿಟ್ರೆ ಯಾರೂ ಇರಲಿಲ್ಲ.ಸುತ್ತಾಲೂ ಕಾಣುವ ದುರ್ಗದ ಹೆಗ್ಗುರುತುಗಳ ಹೆಸರು ಹೇಳುತಾ  ಹೊಸ ಮುರುಘಾ ಮಠ,ಗೋನೂರು ಕೆರೆ.ಮದಕರಿ ಪುರದ ಗಾಳಿಯ ಪ್ಯಾನ್ಗಳನ್ನು ನೋಡಿ ಖುಷಿಪಟ್ಟೆವು. ಉತ್ತರ ದಿಕ್ಕಿನಿಂದ ಹತ್ತಿ ದಕ್ಷಿಣದ ಕಡೆಯಿಂದ ಇಳಿಯಬೇಕಿದ್ದ ನಾವು ಪಶ್ಚಿಮಕ್ಕೆ ಅಕ್ಕ -ತಂಗಿ ಹೊಂಡದ ಕಡೆಗೆ ದಾರಿ ಇದ್ದರೂ ದಕ್ಷಿಣದಲ್ಲೇ ಇಳಿಯಬೇಕೆಂದು  ನಮ್ಮ ಟ್ರೆಕ್ಕಿಂಗ್ ನ ಯೋಜನೆ ಆದ್ದರಿಂದ ನಾವು ಆ ಕಡೆ ಹೋದೆವು. ಅಂದಾಜು ಒಂದು ನೂರು ಮೀಟರ್ ಕ್ರಮಿಸಿರಬೇಕು. ಬಂಡೆ ಬರು ಬರುತ್ತಾ ಇಳಿಜಾರು ಹೆಚ್ಚಾಯಿತು. ಸ್ವಲ್ಪ ಬಗ್ಗಿ ನೋಡಿದರೆ ನಡೆಯಲಾಗದಷ್ಟು ಕಡಿದಾದ ಆಳವಾದ ಪ್ರಪಾತ ಕಾಣುತ್ತಿದೆ.* *ಅಲ್ಲಿಂದಲೇ ಇಳಿದರೆ ನಮ್ಮ ಬೆನ್ನುಮೂಳೆಪಕ್ಕೆಲುಬು ಎಣಿಸುವುದು ಖಚಿತವಾಗಿತ್ತು‌. ಮೈಯಲ್ಲಿ ಬೆವರ ನೀರು ನವರಂದ್ರಗಳಲ್ಲೂ ಕಿತ್ತು ಬರುತ್ತಿದೆ.  ನೆರಳಿಗೂ ಯಾವ ನೆರಳಿನ ಮರ ಇಲ್ಲ.. ಬಂದಗಳ್ಳಿಯ ಗಿಡಗಳಲ್ಲದೇ ಬೇರೇನು ಇಲ್ಲ.. ಅವು ಬಂಡೆಯ ಮೇಲೆ ಬೆಳೆದುದರಿಂದ ನೀರಿಲ್ಲದೇ ಅವುಗಳ ಸ್ಥಿತಿಯೂ ದಯಾನಿಯಾಸ್ಥಿತಿಯಲ್ಲಿ ಇದ್ದವು. ಅವುಗಳಿಂದ  ನೆರಳು ನಿರೀಕ್ಷಿಸುವುದು ವ್ಯರ್ಥವೆನಿಸಿ ನಿರ್ಜನ ಪ್ರದೇಶ  ಕೂಗಿದರೂ,ಬಾಯಿಬಡಿದುಕೊಂಡರೂ ಕೇಳುವವರು ದಿಕ್ಕಿಲ್ಲದ ಸ್ಥಳದಲ್ಲಿ  ನಾವು ಬಂದಕೆಲಸವನ್ನು ಮುಗಿಸಿ ಹೊರಡುವುದು ಅತ್ಯಂತ ಜರೂರಾಗಿತ್ತು. ತಂದ ಹಳೆಯ ಒಂದು ಲೀಟರ್ ನ ಬಾಟಲ್ ನ್ನು ನೀರು ಖಾಲಿಮಾಡಿ ಸಂಪಿಗೆ ಮರದ ಬಳಿಯೇ ಎಸೆದು ಬಂದಿದ್ದೆವು. ಹಾಗೂ ಹೀಗೂ ಸರಿದಾಡಿ ಆಕಡೆ ಈ ಕಡೆ  ಓಡಾಡಿ ಒಂದು ಜಾಗದಿಂದ  ಕುಳಿತುಕೊಂಡು  ತೆವಳಿಕೊಂಡು ಇಳಿದೆವು.ಕಾಲೆಲ್ಲಾ ಬೆವರಿ  ನೀರಾಗಿ ನಾವು ಹಾಕಿದ್ದ ಚಪ್ಪಲಿ ನಮಗೆ ಇಳಿಯುವ ಕಾರ್ಯಕ್ಕೆ ತೊಡಕಾಗಿದ್ದವು. ತಿಮ್ಮಣ್ಣ ಒಂದು ಐಡಿಯಾ ..!ಚಪ್ಪಲಿ ತೆಗೆದು ಕೆಳಗಡೆ ಜಾರಿಬಿಡೋಣ ಎಂದ... ಹಿಂದೂ ಮುಂದು ಯೋಚಿಸದ ನಾನು ತಿಮ್ಮಣ್ಣ ಹೇಳಿದ ಒಂದೇ ಮಾತಿಗೆ ಹ್ಞುಂ ಎಂದು ಬಿಟ್ಟೆ... ನನ್ನ ಚಪ್ಪಲಿಯ ಕೈಗೆ ತೆಗೆದುಕೊಂಡೆ. ಬಿಡಲಾ... ಎಂದು ಕೇಳಿದ್ದಕ್ಕೆ ಹ್ಞುಂ ಎಂದೇಳಿ ನನಗಿಂತ ಮೊದಲೇ ತಿಮ್ಮಣ್ಣ ತನ್ನ ಚಪ್ಪಲಿಯನ್ನು ಜಾರಿಬಿಟ್ಟನು. ಜಾರುವ ಬಂಡಿಯಂತೆ  ಇಬ್ಬರೂ ನಾಲ್ಕೂ ಚಪ್ಪಲಿಗಳನ್ನು   ಒಂದರ ಹಿಂದೆ ಮತ್ತೊಂದು ಜಾರಿ ಬಿಟ್ಟೆವು. ಅದೇ ನೇರದಲ್ಲಿ ಇಳಿಯಲು ಹಾಗೇ ತೆವಳಿ ತೆವಳಿ ಹೋಗುತ್ತಿದ್ದೇವೆ. ಸುಮಾರು ಅರ್ಧದಷ್ಟು ಸಾಗಿದ್ದೇವೆ.* *ಇಳಿಯಲು ಕಷ್ಟ ಆಗುತ್ತಿದೆ.  ಅಪ್ಪಿತಪ್ಪಿ ಜಾರಿ ಬಿದ್ರೆ ನಮ್ಮ ಮೂಳೆ ಪುಡಿ ಪುಡಿಯಾಗುವುದು ನಿಶ್ಚಿತ.ವಾಪಾಸು ಹಿಂದಿರುಗೋಣ ಎಂದರೇ ಚಪ್ಪಲಿ ಬೇರೆ ಕೆಳಗೆ ಜಾರಿ ಬಿಟ್ಟಿದ್ದೇವೆ.ಹೆಂಗೋ  ಅರ್ಧ ಭಾಗದಷ್ಟು  ಇಳಿದಿದ್ದೇವೆ.ಬಿಸಿಲಿನ ತಾಪಕ್ಕೆ ಬಂಡೆಕಾದು ಬಾಣಲೆಯಂತಾಗಿದೆ. ಬಂಡೆಯ ಮೇಲೆ ಕಾಲು ಇಡಲು ಸಾಧ್ಯವಾಗುತ್ತಿರಲಿಲ್ಲಪಶ್ಚಿಮಕ್ಕೆ ಹೋದರೆ ಗೋಪಾಲಸ್ವಾಮಿ ಹೊಂಡ ಅಲ್ಲಿಂದಂತೂ ಇಳಿಯಲು ಸಾದ್ಯವಿಲ್ಲ. ಪೂರ್ವಕ್ಕೆ ಹೋದರೆ ಹಿಡಿಂಬಾ ವನ. ದೊಡ್ಡ ದೊಡ್ದ ಕಲ್ಲು ರಾಶಿ ದಾಟಿ ಹೋಗುವುದೂ ಕಷ್ಟ ಹಂಗೂ ಹಿಂಗೂ ಮಾಡಿ ಸುಮಾರು ನೂರೈವತ್ತು ಇನ್ನೂರು ಮೀಟರ್ಗಳಷ್ಟು ಪೂರ್ವಕ್ಕೆ ಹೋಗಿ ಆಗ್ನೇಯ ದಿಕ್ಕಿನಲ್ಲಿ  ಬಂಡೆಗಲ್ಲುಗಳನ್ನು ಹತ್ತಿ ಇಳಿದು ,ಬಂಡೆಕಲ್ಲುಗಳ ಸಂದಿಯಲ್ಲಿ ಕರಡಿಯಿರಬಹುದು ಚಿರತೆ ಇರಬಹುದು ಎಂದು ಜೋರಾಗಿ ಕೂಗುತ್ತಾ, ಹ್ಞೂಂ..ಹ್ಹ... ಎನ್ನುತ್ತಾ ಕಷ್ಟಪಟ್ಟು  ಸುತ್ತಲೂ ಗುಡ್ಡ ಇರುವ  ಮದ್ಯಭಾಗದ ಒಂದಷ್ಟು ಸಮತಟ್ಟು ಪ್ರದೇಶಲ್ಲೆ ಇಳಿದೆವು. ಅದೊಂದು ಸಮತಟ್ಟಾದ ಸುತ್ತಲೂ ಕಲ್ಲು ಬೆಟ್ಟಗಳ ನಡುವಿನ ಫಲವತ್ತಾದ ಮಣ್ಣಿನ ಪ್ರದೇಶ.  ಎದೆಯ ಎತ್ತರಕ್ಕೆ ಕಂಚಿಯ ಹುಲ್ಲು ಬೆಳೆದಿದೆ. ಕಂಚಿಯ  ಬುಡದ ಹುಲ್ಲು, ಕಡ್ಡಿಗಳೆಲ್ಲಾ ಒಣಗಿ ಕಾಲಿಟ್ಟರೆ ಪುಡಿ ಪುಡಿಯಾಗುವಷ್ಟು ಒಣಗಿ ಮಂಡಕ್ಕಿಯಂತೆ ಕರ್ರ ಮುರ್ರ ಎನ್ನುತ್ತಾ ಹೆಜ್ಜೆಹಾಕುತಿದ್ದೇವೆ. ಒಂದಷ್ಟು ಹಳೆಯ ಮನೆಯಂತಹ ಅವಶೇಷಗಳು  ಎರಡ್ಮೂರು ಅಡಿಗಳೆತ್ತರದ  ಒಂದೆರಡು ಸಮಾಧಿಗಳು ಇಲ್ಲಿ ಇದ್ದಾವೆ.* *ಬಹುಶಃ ಈ ಸಮಾಧಿಗಳು ಮದಕರಿನಾಯಕ ಅಥವಾ ಸಹೋದರರ ಸಮಾಧಿಯೇ ಇರಬೇಕು.  ಈ ಜಾಗದಲ್ಲೇ ಕುದುರೆ ಲಾಯ ಮತ್ತು ಸೈನಿಕರ ವಸತಿಗೃಹಗಳು ಇದ್ದವಂತೆ.ಸುಟ್ಟ ಮಣ್ಣಿನ ದುಂಡನೆಯ ಗುಡಿಸಲಿನ ತರಹದ ಆಕಾರಗಳು,ಅವಶೇಷಗಳು  ಶತಮಾನಗಳಿಂದಲೂ  ಅಲ್ಲಿ  ಈಗಲೂ ಕಾಣಬಹುದು... ಆ ಹುಲ್ಲಿನಲ್ಲಿ ನಮ್ಮ ತಲೆಗಳು ಆ ಅವಶೇಷಗಳು ಬಿಟ್ಟರೆ ನೆಲಕಾಣಿಸುತ್ತಿಲ್ಲ.ಅದರಲ್ಲಿ ನಮಗೆ ಸಹಿಸಲಾಗದದ್ದು ಅಂದರೆ  ನಗ್ಲಿ ಮುಳ್ಳುಗಳು..! ಎಷ್ಟು ವರ್ಷದಿಂದ ಅವು ಅಲ್ಲಿ ಕೇಂದ್ರೀಕೃತ ವಾಗಿದ್ದವೋ ತಿಳಿಯದು..*

*ಭಯಂಕರ ಮುಳ್ಳಿನ ರಾಶಿ ಹರಡಿದಂತೆ ಇದ್ದವು.ಅವು ನಾಯಿ ನಗ್ಲಿ ಮುಳ್ಳುಗಳು ಅಲ್ಲ ಆನೆ ನಗ್ಲಿಮುಳ್ಳುಗಳು!!ವಜ್ರಾಕಾರವಾಗಿ ತೆಂಗಿನಕಾಯಿ ಕರಟ ಇದ್ದಹಾಗೆ ಇವೆ.ಒಂದೊಂದು ಮುಳ್ಳುಗಳು ಚುಚ್ಚಿದರೆ ಪ್ರಾಣ ಹೋದಂತಾಗುತ್ತಿದೆ. ಈ ನಗ್ಲಿ ಮುಳ್ಳುಗಳನ್ನು ತುಳಿದರೆ ದೈತ್ಯ ಆನೆಯೂ ಕೂಡ ಅಂಜುವುದಂತೆ! ನಮ್ಮ ಪಾಡು ಏನಾಗಿರಬಹುದು.?? ನಾಗೇಂದ್ರ ಏನಪ್ಪ ಇವು ಮುಳ್ಳುಗಳು...*

*ಅಬ್ಬಾಬ್ಬಾ... ಅಸವಲ್ಲದ ನಗ್ಗಲಿ ಮುಳ್ಳು ಎಂದು ಅಂಜಿ ತಿಮ್ಮಣ್ಣ ಕಾಲಿಡಲು ಕಾಲು ನಡುಗಿಸುತ್ತಿದ್ದಾನೆ....ಉರಿಯುವ ಬಿಸಿಲಿಗೆ  ಅಪರಾಧಿಗಳಿಗೆ  ಶಿಕ್ಷೆಯನ್ನು ಕೊಟ್ಟಂತಿತ್ತು ನಮ್ಮ ಪಾಡು.ಬಂದ ದಾರಿಯಲ್ಲಿ ವಾಪಾಸು ಹೋಗುವುದಂತೂ ತೀರಾ ಅಸಾಧ್ಯವಾಗಿತ್ತು.*

*ತಿಮ್ಮಣ್ಣನನ್ನು ಅಲ್ಲೇ ನಿಲ್ಲಿಸಿ ನಾನೇ  ಬಂಡೆಯಂಚಿಗೆ ಬಂದು ಹಾಗೆ ಮುಳ್ಳನ್ನು ಎಡ ಬಲಗೈಯಲ್ಲಿ ತೆಗೆಯುತ್ತಾ ಆ ಚಪ್ಪಲಿ ಎಸೆದ ನೇರಕ್ಕೆ ಬಂದೆ.ನನ್ನದೊಂದು ಚಪ್ಪಲಿ ಬಂದಗಳ್ಳಿಯಲ್ಲಿ ನೇತಾಡಿತಿತ್ತು.ಅದನ್ನು ತೆಗೆದು ಮೊದಲು ಹಾಕಿಕೊಂಡು ಹಾಗೆ ಸುತ್ತಾ ಮುತ್ತಾ ನೋಡುತ್ತಾ ಮತ್ತೊಂದು ಸ್ವಲ್ಪದೂರಕ್ಕೆ ಇನ್ನೊಂದು ಚಪ್ಪಲಿ ಬಿದ್ದಿತ್ತು. ಅವುಗಳನ್ನು  ತಿಮ್ಮಣನಿಗೆ ಎಸೆದೆ.  ತಿಮ್ಮಣ್ಣ  ನ ಚಪ್ಪಲಿ ಸಿಗಲಿಲ್ಲ.  ಮೇಲೆಯೇ ಎಲ್ಲೋ ಇರಬೇಕು ಎಂದು  ಹುಡುಕಲು ಒಂದು ಚಪ್ಪಲಿ ಬಂಡೆಯ ಸಂದಿಯಲ್ಲಿ  ಸಿಕ್ಕಿಹಾಕಿಕೊಂಡಿತ್ತು.  ತಿಮ್ಮಣ್ಣನ ಇನ್ನೊಂದು ಚಪ್ಪಲಿ ಡುಬ್ಬಗಳ್ಳಿಯಲ್ಲಿ  ಸಿಕ್ಕು ಹಾಕಿಕೊಂಡಿತ್ತು.ಅದನ್ನು ಹತ್ತಿ ತೆಗೆದುಕೊಂಡು ಬಂದೆ.  ಆಮೇಲೆ ನಗ್ಲಿಮುಳ್ಳಿನ ಕಂಟಕ ತಪ್ಪಿದಂತಾಯಿತು.ಸುತ್ತಾ ಮುತ್ತಾ ಮೊಲದ ಹಿಕ್ಕೆಗಳು  ರಾಶಿ ರಾಶಿ ಸಣ್ಣ ಸಣ್ಣ ಬಂಡೆಯ ಮೇಲೆಲ್ಲಾ,ಅದರ ಸುತ್ತಲೂ ಬಿದ್ದಿದ್ದವು.. ಅಷ್ಟು ಎತ್ರದ ಆ ಹುಲ್ಲಿನಲ್ಲಿ ಏನಿದೆಯೋ ಏನಿಲ್ಲವೋ ಕಾಲಿಡಲು ಭಯ ಆಗುತ್ತಿದೆ.ಹಾಗೇ ತಿಮ್ಮಣ್ಣ ನಡೆದು ಬರುತ್ತಿರುವಾಗ ಆತನ ಕಾಲ ಬುಡದಲ್ಲೇ ಒಂದು ಮೊಲ ಚಂಗನೇ ನೆಗೆದು ಬಂತು. ನಾವು  ಹುಲ್ಲಿನಲ್ಲಿ ಚಿರತೆ ತೋಳಗಳು ಇರಬಹುದು ಎಂದು ಹೆದರಿಕೊಂಡೇ ನಡಿಯುತಿದ್ದ ನಮಗೆ ಮೊಲದಂತಹ ಸಾಧು ಪ್ರಾಣಿಯ ನೋಡಿಯೂ ಎದೆ ಬಡಿತ ಜೋರಾಗಿತ್ತು. ನೋಡಿದ ನೆನಪಾಗಿ ಇದರಲ್ಲಿ ಚಿರತೆ ಮಲಗಿದ್ರೆ ಹೆಂಗ ಮಾಡುವುದೆಂದು  ತಿಮ್ಮಣ್ಣನ ಕೆಳಲು,ಸುಮ್ನಿರಪ್ಪ ಏನೇನೋ ಹೇಳಬೇಡ ಎಂದು ತಿಮ್ಮಣ್ಣ ಹೇಳುತ್ತಾ ಮುಂದೆ ಬಂದಾಗ ಹಸಿರುಪಾಚಿಗಟ್ಟಿದ ನೀರು ಕಾಣಿಸಿತು. ಅದೇ ಐತಿಹಾಸಿಕ ಗೋಪಾಲ ಸ್ವಾಮಿ ಹೊಂಡ.ಹೈದರಾಲಿಯು ದುರ್ಗದ ಕೋಟೆಗೆ ಮುತ್ತಿಗೆ ಹಾಕಿದಾಗ ಅರಮನೆಯ ಮತ್ತು ಖಜಾನೆಯ ಸಂಪತ್ತನ್ನು  ಇದೇ ಗೋಪಾಲಸ್ವಾಮಿ ಹೊಂಡದಲ್ಲಿ ಮುಳುಗಿಸಿ ಇಟ್ಟಿದ್ದರಂತೆ.. ಎಂದು ನಾನು ಹೇಳಿದ್ದಕ್ಕೆ ಅವಗೀನವರು ಇಟ್ಟಿದ್ದರೂ ಇಟ್ಟಿರಬಹುದು. ಆದರೆ ಅವೆಲ್ಲಾ ಈಗ ಇರಲಿಕ್ಕೆ ಸಾಧ್ಯವಿಲ್ಲ . ಅಂತಹ ಒಂದು ಸಣ್ಣ ಲಕ್ಷಣ ಕಂಡರೂ ದೊಡ್ಡ ದೊಡ್ಡ ಹಳ್ಳಗಳಲ್ಲಿ ವಡ್ಡು ಕಟ್ಟಿ ಸಣ್ಣ ಸಣ್ಣ ಮೀನುಗಳನ್ನು ಹಿಡಿಯುವ ನಮ್ಮ ಜನ ಅಮೂಲ್ಯ ರತ್ನ,ಹೊನ್ನು ವೈಡೂರ್ಯ ಇದ್ದರೆ ಬಿಡುವರೇ...??? ಎಂದ ತಿಮ್ಮಣ್ಣ.. ನನಗೂ ತಿಮ್ಮಣ್ಣ ಹೇಳಿದ್ದು ಅಕ್ಷರಶಃ ಸತ್ಯ ಅನಿಸಿತು. ಗೋಪಾಲ ಹೊಂಡಕ್ಕೆ ಹೋಗಿ  ಪಾಚಿಗಟ್ಟಿದ ನೀರಿನ ತ್ಯಾಟೆ ಸರಿಸಿದರೂ, ಆ ಸಣ್ಣ ಹಸಿರು -ಹಳದಿಯಂತಹ  ಹಾಲ್ಗೆಯ ಪಾಚಿ ಹೋಗಲಿಲ್ಲ... ಅದನ್ನೆ ಕಣ್ಮುಚ್ಚಿಕೊಂಡು ಹೊಟ್ಟೆಯ ತುಂಬಾ ನೀರುಕುಡಿದೆವು.ಬಿಸಿಲಿಗೆ ಕಾದಿದ್ದ ಬೆವರಿದ್ದ ನಮ್ಮ ತಲೆಯ ಬುರುಡೆಯನ್ನೂ ನೀರಲ್ಲಿ ನೆನೆಸಿಕೊಂಡು ಮುಖದ ಮೇಲೆ ಇಳಿಯುತಿದ್ದ ನೀರನ್ನು ಒರೆಸಿಕೊಳ್ಳುತ್ತಾ  ಬಂದ ಹಾದು ಬಂದ ರುದ್ರಮ ಹಾದಿಯನ್ನೊಮ್ಮೆ ನೋಡುತ್ತಾ  ಅಮ್ಮಾ... ಎಂಬ ಉದ್ಗಾರ ತೆಗದೆವು. ಊರಿನ ಹಾದಿ ಹಿಡಿದ ನಮಗೆ ಹೊಟ್ಟೆಯ ತುಂಬಾ  ನೀರು ಕುಡಿದುದರಿಂದ ಕೋಟೆಯ ಮೆಟ್ಟಿಲುಗಳನ್ನು ಇಳಿಯುವಾಗ ಹೊಟ್ಟೆಯಲ್ಲಿ  ನೀರು ಡುಳುಂ ಡುಳುಂ ಎಂದು ಶಬ್ಧ ಮಾಡುತಿತ್ತು. ಅಂತೂ ಐತಿಹಾಸಿಕ ಸ್ಥಳದ ಒಡಲಲ್ಲಿ  ಯಶಸ್ವೀ  ಚಾರಣದ ನೆನಪುಹೊತ್ತು ರೂಮಿಗೆ ಹಿಂದಿರುಗಿದೆವು.*


(ಮುಂದುವೆರೆಯುವುದು)


✍️ *ನಾಗೇಂದ್ರ ಬಂಜಗೆರೆ*


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..