ಇನ್ನೂ ಯಾಕೆ ಬದಲಾವಣೆಗಳು ಆಗಿಲ್ಲ???

ಇನ್ನೂ ಯಾಕೆ  ಬದಲಾವಣೆ ಆಗಿಲ್ಲ???

  ನಿದರ್ಶನ-೧

ನನ್ನ ಕರ್ತವ್ಯದ ಸ್ಥಳ ಗುಡ್ಡಗಾಡು ಪ್ರದೇಶ. ಸೆಪ್ಟಂಬರ್ ನಿಂದ  ಡಿಸೆಂಬರ್ ಒಳಗೆ  ಯಾವ ಮಡಿಕೇರಿಗೆ ಕಡಿಮೆ ಇರದಂತ ಹಸಿರನಾಡು. ಅದೇ  ಮಳೆಗಾಲದಲ್ಲಿ ಹಚ್ಚಹಸುರಿನಿಂದ ನಳನಳಿಸುತ್ತಾ ಕಂಗೊಳಿಸುತ್ತಿದ್ದ ಬೆಟ್ಟಗುಡ್ಡಗಳ ಹುಲ್ಲುಗಾವಲು ಬೇಸಿಗೆಯ ಬಿಸಿಲಿಗೆ ಕಮರಿ ಹೋಗುತ್ತಿತ್ತು. ಈ ಬೆಟ್ಟಗುಡ್ಡಗಳ ವಿಶೇಷ ಏನೆಂದರೇ ವಿರಳಗಿಡ ಮರಗಳು ಇರುವ ಬಂಡೆಗಲ್ಲಗಳೇ ಹೆಚ್ಚಿರುವ ಗುಡ್ಡಗಳು ಅಥವಾ  ಯಾವುದೇ ರೀತಿಯ  ಮರಗಿಡಗಳಿಲ್ಲದ  ಬೋಳು ಬೋಳಾದ ಗುಡ್ಡಗಳು. ಬೇಸಿಗೆಯಲ್ಲಿ  ಗುಡ್ಡದಲ್ಲಿ ಒಣಗಿದ ಹುಲ್ಲಿಗೆ ಪ್ರತಿ ವರ್ಷವೂ  ಉದ್ದೇಶಪೂರ್ವಕವಾಗಿ ಬೆಂಕಿಹಾಕುವುದು ಇವರಿಗೆ ಶತ ಶತಮಾನದಿಂದ ಬಂದ ಅಭ್ಯಾಸ.!! ಪ್ರತೀ ವರ್ಷವೂ ಅದಕ್ಕಾಗಿಯೇ ಕೆಲವರು ಮೀಸಲಿದ್ದು ಹಗಲೋ ರಾತ್ರಿಯೋ ಅರಣ್ಯ ಕಾವಲುಗಾರರ ಕಣ್ಣು ತಪ್ಪಿಸಿ ಗುಡ್ಡಗಳಿಗೆ ಬೆಂಕಿ ಇಡುತ್ತಿದ್ದರು. ಎರಡ್ಮೂರು ದಿನಗಳು ಉರಿದು ಉರಿದು ಸಾವಿರಾರು ಹೆಕ್ಟರ್ ಭೂ ಪ್ರದೇವನ್ನು ಈ ಬೆಂಕಿಯ ಕೆನ್ನಾಲಿಗೆ ಬೂದಿ ಮಾಡುತ್ತಿತ್ತು. ಇದನ್ನು ಪ್ರತಿ ವರ್ಷವೂ ಗಮನಿಸಿದ್ದ ನಾನು ಒಂದು ದಿನ  ನನಗೆ ಪರಿಚಯದ ಅರಣ್ಯ ಕಾವಲುಗಾರರಿಂದ ಪಾರೆಸ್ಟ್ ರೇಂಜರ್ ಅವರ ಮೊಬೈಲ್ ನಂಬರ್ ಪಡೆದು ಈ ಬೆಂಕಿಯ ವಿಷಯವಾಗಿ  ಬೀದಿನಾಟಕಗಳು,ಮಾಹಿತಿಸಭೆಗಳು ನಡೆಸುವಂತೆ ಮಾತಾಡಿದೆ.ನನ್ನೊಂದಿಗೆ ಬಹಳ ಗೌರವದಿಂದ ಮಾತನಾಡಿದ ಅವರು  "ಸಾರ್ ನಿಮ್ಮ ಕಾಳಜಿಗೆ ನಮ್ಮ ಇಲಾಖೆಯವರಿಗೆ ನೀವು ಹೇಳುವ ಎಲ್ಲ ಅಂಶಗಳು ನಾವು ಮಾಡಲು   ನಮ್ಮ  ಇಲಾಖೆ ಸಿದ್ದವಿದೆ.ಆದರೆ ನಾವು ಗುಡ್ಡಕ್ಕೆ /ಕಾಡಿಗೆ ಬೆಂಕಿ ಹಾಕಬೇಡಿ ಅಂದರೆ ಅದನ್ನೇ ಅವರು ಜಾಸ್ತಿ ಮಾಡುತ್ತಾರೆ. ನಾವು ಬೆಂಕಿ ಹಾಕಬೇಡಿ ಎಂದು  ಎಷ್ಟು ಜಾಗ್ರತೆ ಮಾಡುತ್ತೇವೆಯೋ ಅಷ್ಟೇ  ತೀವ್ರತರ ವಾಗಿ ಅವರು ಬೆಂಕಿ ಹಾಕುತ್ತಾರೆ. ಇದು ಒಂದು ತರ ನೀವು ಈ ಕೆಲಸ ಮಾಡಬೇಡಿ ಎಂದು ಹೇಳಿದರೆ ಇಲ್ಲ ನಾನು ಮಾಡುತ್ತೀನಿ ಎಂದು ಹೇಳುತ್ತಾರಲ್ಲಾ ??? ಆ ತರ  ಸಾರ್ ಇದು  ಅದಕ್ಕೆ ನಾವು ಈಗ ಗುಡ್ಡದ ಸುತ್ತಲೂ ನಾವೇ ಸ್ವಲ್ಪಮಟ್ಟಿಗೆ ಸುಟ್ಟು ಮೆಟ್ಲಿಂಗ್ ಮಾಡುತ್ತೇವೆ. ಇದರಿಂದ ಬೆಂಕಿ ಹಾಕಿದರೂ ಅರಣ್ಯಕ್ಕೆ ಹತ್ತದಂತೆ ತಡೆಯುತ್ತದೆ. ಎಂದರು ಅಲ್ಲಿಗೆ ಇಲಾಖೆಯವರು ಅರಣ್ಯಗಳ ಉಳಿವಿಗೆ ಸಹಾಯ ಆಗುತ್ತೆಇಲ್ಲವಾದಲ್ಲಿ  ಮುಂದಿನ ಒಂದು ಶತಮಾನದಲ್ಲಿ ಈ ಭೂಮಿಯ ಮೇಲೆ ಜೀವಿಗಳ ಅಸ್ತಿತ್ವಕ್ಕೆ ದಕ್ಕೆ ಬರುವುದರ ಜೊತೆಗೆ ನಮ್ಮ ಜೀವನ ನೆಟ್ಟಗಂತೂ ಆಗುವುದಆಗುತ್ತೆ ಎಂದು ಹೇಳಿದರು... ನಾನೂ ಈ ಇಲಾಖೆಯವರಿಗೆ ಹೇಳಲಾಗದು ಎಂದು ಸುಮ್ಮನಾದೆ... ಇದಾದ ಒಂದು ವರ್ಷದ ನಂತರ ಪುನಃ ಬೇಸಿಗೆ ಆರಂಭವಾದಾಗ ಹಿಂದೆ ಇದ್ದ ಅಧಿಕಾರಿಯ ಜಾಗಕ್ಕೆ  ಬೇರೊಬ್ಬ ಅಧಿಕಾರಿ ಬಂದದ್ದರಿಂದ ಅವರು ಜಾಗ್ರತಿಗಾಗಿ  ನಾನು ಅಂದುಕೊಂಡಂತೆ ಯಾರೋ ಕಲಾವಿದರನ್ನು ಊರುರಿಗೆ ಕಳುಹಿಸಿ ಬೀದಿ ನಾಟಕವನ್ನು ಮಾಡಿಸಿ ಭಾಷಣ ಮಾಡಿ ಹೋಗಿದ್ದರು.ಆ ನಾಟಕದಲ್ಲಿ ಹೇಳಿದಂತೆ ಅರಣ್ಯ,ಬೆಟ್ಟಗುಡ್ಡಗಳಿಗೆ ಬೆಂಕಿಹಾಕುವುದು ಬೇಡ ಎಂದಿದ್ದರಿಂದಲೋ ಏನೋ ಮರುದಿನವೇ ಸುತ್ತಮುತ್ತಲಿನ ಗುಡ್ಡಗಳಿಗೆ ಬೆಂಕಿ ಬಿದ್ದಿತು. ಹಗಲು ರಾತ್ರಿಎನ್ನದೇ  ಎರಡ್ಮೂರು ದಿನಗಳ ಕಾಲ ಉರಿದು ಸುತ್ತಮುತ್ತಲಿನ ಗುಡ್ಡಗಳ ಮೇಲಿನ ಹುಲ್ಲು ಬೆಂಕಿಗೆ ಬೂದಿ ಆಯಿತು.

_ನಿದರ್ಶನ-2_


ಕಳೆದ ಆರು ವರ್ಷಗಳ ಹಿಂದೆ ನಮ್ಮ ನೌಕರರ ಸಂಘದ ಚುನಾವಣೆಯೊಂದು ನಡೆಯುತಿತ್ತು. ಚುನಾವಣೆ ಎಂದ ಮೇಲೆ ಎರಡು ತಂಡಗಳು ಇರಲೇಬೇಕಲ್ಲ??ಅದರಂತೆ  ನಮ್ಮ ಎದುರಿನ ತಂಡದವರು  ಮತದಾರ ಶಿಕ್ಷಕರ ಬೇಟಿಯಾದಗಲೆಲ್ಲಾ ಇಲ್ಲದುದನ್ನು ಹೇಳಿ ಹೇಳಿ Brain wash ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ  ನಮ್ಮ ತಂಡದ ನಾಯಕರು  ಎದುರುದಾರರ ಹೆಸರೆತ್ತದೆ ಅವರ ಲೋಪ ದೋಷಗಳನ್ನು ಪ್ರಸ್ತಾಪಿಸದೇ ಮತಕೇಳುವುದು.!! ರಾಜಕೀಯದಲ್ಲಿ ಅತಿಯಾಗಿ ಪಳಗದ ನಾನು  ನಮಗೆ ಇವರ ಆಲೋಚನೆಯೇ ಸರಿ ಇಲ್ಲ ಎಂದೆನಿಸಿ ತಕ್ಷಣವೇ ಎಂಟತ್ತು ನಿಮಿಷ ಜೋರು ಚರ್ಚೆ ಆಯಿತು. ಆಗ ಅವರು ಕೊಟ್ಟ ಉತ್ತರ ಹೀಗಿತ್ತು...

"ನೋಡಪ್ಪ ನಾವು ಹೋದಲೆಲ್ಲಾ ನಮ್ಮ ಎದುರುದಾರರ ಹೆಸರನ್ನು ಪ್ರಸ್ತಾಪಿಸಿ ನಾವು ಮತ ಕೇಳಿದರೆ ಅವರನ್ನು ನಾವು ಪ್ರಚಾರ ಮಾಡಿದಂತೆ ಅಲ್ಲವೇ...???ನಾವು ಹೆಚ್ಚು ಹೆಚ್ಚು ಅವರ ಹೆಸರು ಹೇಳಿದಂತೆಲ್ಲಾ ಅವರ ಹೆಸರೇ  ಚಿರಪರಿಚಿತವಾಗಿ 4-5 % ಹೆಚ್ಚು ಮತಗಳು ಅವರ ಪಾಲಾಗುವುದು ಎಂದು.ಅಂದರೇ ಅವರಿಗೆ ಓಟು ಹಾಕಬೇಡಿ ಹಾಕಬೇಡಿ ಎಂದು ಹೇಳಿದಂತೆಲ್ಲಾ ನಮ್ಮ ಮತದಾರರು ಅವರಿಗೇ ಓಟು ಹಾಕುವವರು..ನಿಮಗೆಲ್ಲಾ ಆಶ್ಚರ್ಯ ಎನಿಸಿದರೂ ಇದು ಸತ್ಯ ನನ್ ಮಾತು ಕೇಳಿ... "ಎಂದು ಹೇಳಿದರು.ಅಂದು ನಾವ್ ನಮ್ಮ ಎದುರುದಾರರ ಹೆಸರು ಹೇಳದೇ ಪ್ರಚಾರ ಮಾಡುವುದು ಎಂದು ನಿಶ್ಚಯಿಸಿ ನಮ್ಮ ರೂಟ್ ಮ್ಯಾಪ್ ನಿಗದಿ ಮಾಡಿ ಅದರಂತೆಯೇ ಮಾಡಿದೆವು. ಆ ಭಾರಿ ನಮ್ಮ ತಂಡವೇ ಜಯಬೇರಿ ಸಾಧಿಸಿ ನಮ್ಮ ಎದುರುದಾರರಿಗಿಂತ ಹತ್ತು -ಹನ್ನೆರಡು ಪರ್ಸೆಂಟ್ ಮತ ಹೆಚ್ಚೆ ಪಡೆದಿದ್ದರು.ಫಲಿತಾಂಶದ ನಂತರ ವಿಶ್ಲೇಷಣೆಯ ಮಾಡಲಾಗಿ ನಮ್ಮ ನಿರಾಸದಾಯಕ ಗೆಲುವಿಗೆ ಎದುರುದಾರರ ಹೆಸರು ಪ್ರಸ್ತಾಪಿಸದೇ  ಪ್ರಚಾರ ಮಾಡಿದ strategies ಉತ್ತಮವಾಗಿ ಕೆಲಸಮಾಡಿತ್ತು ಎಂದು ನಮಗೆ ಅನಿಸಿತ್ತು. ಇದು ಸತ್ಯವೂ ಕೂಡ..!

ಮೇಲೆ ಹೇಳಿದ ಎರಡೂ ನಿದರ್ಶನದಲ್ಲಿ ನಮಗೆ ವಿಶೇಷವಾಗಿ ನನಗೆ ಅನ್ನಿಸಿದ್ದು "ಯಾವುದನ್ನು ಮಾಡಬೇಡಿ ಎಂದು ನಾವು ಹೇಳುತ್ತೇವೋ ಅದನ್ನೇ ಜನರು ಮಾಡುತ್ತಾರೆ."!!.ಆಶ್ಚರ್ಯಕರವಾದರೂ ಇದು ಇಂದಿನ ಜಗತ್ತಿಗೆ ತುಂಬಾ ಹತ್ತಿರವಾದುದು.ಇಂದಿನ ಅತಿಯಾದ ಆತ್ಮವಿಶ್ವಾಸದ ಕೆಲಸಗಳು ಪೇಲ್ ಆಗಿರುವುದು ಇದೇ ನಿಯಮವೇ ಕಾರಣ... ಇದೇ ತತ್ವದ ನೆಲೆಯಲ್ಲಿ  ಇಂದಿನ ಜಗತ್ತನ್ನು ನೋಡುವುದಾದರೇ...


ಬದಲಾವಣೆ ಜಗದ ನಿಯಮ.. ಬದಲಾವಣೆ ನಿರಂತರ ಈ ವಾಕ್ಯಗಳನ್ನು ನಾವು ಆಗಾಗ ಅಲ್ಲಲ್ಲಿ ನೋಡುತ್ತಿರುತ್ತೇವೆ ಅಥವಾ ಓದುತ್ತಿರುತ್ತೇವೆ ಆದರೆ  ಬದಲಾವಣೆ ವಾಸ್ತವವಾಗಿ ಆಗುತ್ತಿದೆಯಾ???

ಇದಕ್ಕೆ ಉತ್ತರ 'ಇಲ್ಲ' ಅಂತ ಹೇಳಬಹುದು.

ಯಾವ ಬದಲಾವಣೆಗಾಗಿ ಶಾಂತಿಯ ದೂತ ಬುದ್ದ ತನ್ನ ವೈಭವೋಪಿತ ಸಿಂಹಾಸನವನ್ನು,ಅರಮನೆಯನ್ನೂ ತ್ಯಜಿಸಿದನೊ ಅದಕ್ಕಾಗಿ  ತನ್ನದೇ ಧರ್ಮ ಸಿದ್ದಾಂತಗಳನ್ನು ಜಗತ್ತಿನಾದ್ಯಂತ ಪ್ರಚಾರ ಮಾಡಿದರೂ ಅವರು ಅಂದುಕೊಂಡ ಬದಲಾವಣೆ ಆಗಲಿಲ್ಲ...❗

ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಅಂದಿನ ಸಮಾಜದ ಅನಿಷ್ಟಗಳಲ್ಲಿ  ಯಾವುದನ್ನು  ಆಚರಣೆಯಲ್ಲಿ ಬದಲಾವಣೆ ತರಬೇಕಿತ್ತೋ ಅವೆಲ್ಲವೂಗಳನ್ನು ವಚನ,ಪ್ರವಚನ, ಆಚರಣೆಗಳು, ಸಾಮಾಜಿಕ  ಕ್ರಾಂತಿಯ ಮೂಲಕ ಶ್ರಮಿಸಿ ಕೊಲೆಯಾದರೋ ಅವರು  ಅಂದು ಅಪೇಕ್ಷಿಸಿದ ಬದಲಾವಣೆಗಳು  ಇಂದಿಗೂ ಆಗಲಿಲ್ಲ..‼


ಜಾತೀಯತೆಯ ಕರಾಳ ವ್ಯವಸ್ಥೆಯಲ್ಲಿ ಮಿಂದು ನೊಂದು  ಜಾತಿಯ ಜಾಲದಲ್ಲಿ ಸಿಲುಕಿದ ಅಸ್ಪೃಶ್ಯರು  ಹಿಂದುಳಿದವರು ಅವಕಾಶದಿಂದ ವಂಚಿತರು,ಸ್ತ್ರೀಯರ ಹೀನ ಸ್ಥಿತಿಯನ್ನು ಕಂಡು ಅವರನ್ನು ಮೇಲೆತ್ತಲು 'ಮನು ಸಂವಿಧಾನ'ದ ವಜ್ರಮುಷ್ಠಿಯಲ್ಲಿ ಸ್ವಾತಂತ್ರ್ಯ ಭಾರತದಲ್ಲಿ ಸಂವಿಧಾನವನ್ನು ರಚನೆ ಮಾಡಿದರು. ಅದೊಂದು ಧಮನಿತರ ಬದುಕಿಗೆ ಮೈಲಿಗಲ್ಲು ಆಯಿತಾದರೂ ನಿಜವಾಗಿ ಆಗಬೇಕಾದದ್ದು ಆಗಲಿಲ್ಲ...❗‼️.

ಅನಕ್ಷರಸ್ಥತೆ ಬಡತನ ಜೀತ ಪದ್ದತಿ ತಾಂಡವಾಡುತ್ತಿದ್ದ ಕಾಲದಲ್ಲಿ ಅವರ ಉದ್ದಾರಕ್ಕೆ  ಯಾವ ಬದಲಾವಣೆಗಳು ಆಗಬೇಕೆನಿಸಿ ಎಡಬಲ ಪಂಥೀಯರೆಲ್ಲರೂ ಶ್ರಮಿಸಿದರೂ ತದ್ವಿರುದ್ಧವಾಗಿ ಫಲಿತಾಂಶಗಳು ಬಂದವಾದರೂ ಅಪೇಕ್ಷಿತ ಬದಲಾವಣೆಗಳನ್ನು ಕಾಣಲಿಲ್ಲ...

ಬುದ್ಧ ಬಸವ ಅಂಬೇಡ್ಕರ್  ಗಾಂಧಿ  ಆದಿಯಾಗಿ ಸಾವಿರಾರು ಜನ ಸಂತರು ಮಠ ಮಾನ್ಯರು,ಧಾರ್ಶನಿಕರು ರಾಜಕೀಯ ನೇತಾರರು,ಪ್ರಗತಿಪರ ಚಿಂತಕರು ಬರಹಗಾರರು  ಅವಿರತ ಶ್ರಮಿಸುತ್ತಾ ಬಂದರೂ   ಬದಲಾಗಬೇಕಾದ್ದು ಬದಲಾಗದೇ ಉಳಿದದ್ದು  ನಮ್ಮ ದೇಶದ  ದುರಂತವೇ ಸರಿ...

ನಿಮಗನಿಸಬಹುದು.. ನೂರಾರು ವರ್ಷಗಳಲ್ಲಿ ಲಕ್ಷಾಂತರ ಬದಲಾವಣೆಗಳು ಆಗಿವೆ... ಅನಾಗರಿಕ ಸ್ಥಿತಿಯಿಂದ ನಾಗರಿಕರಾಗಿ  ನಾಗರಿಕ ಸಮಾಜದಲ್ಲಿ  ಸಭ್ಯ ಬದುಕನ್ನು ಕಟ್ಟಿಕೊಂಡಿಲ್ಲವೇ ??ಎಂದು ನಿಮಗನಿಸಬಹುದು. ಹೌದು  ಬದಲಾಣೆ ಜಗದ ನಿಯಮ ನಿರಂತರವಾಗಿ ಬದಲಾವಣೆಗಳು ಆಗುತ್ತಲಿವೆ. ಆದರೆ ಆ ಬದಲಾವಣೆಗಳೆಲ್ಲವೂ ಅಪೇಕ್ಷಿತ ರೀತಿಯಲ್ಲಿ, ಅಪೇಕ್ಷಿತ ಪ್ರಮಾಣದಲ್ಲಿ ಬದಲಾವಣೆಗಳು ಆಗಿವೆಯೇ ??ಎಂಬುದು ಇಲ್ಲಿ ಗಮನಿಸಬಹುದಾದ ಅಂಶ. ಮಾನವ ಕುಲ ಈ ಭೂಮಿಯ ಮೇಲೆ ಹುಟ್ಟಿದಾಗಿನಿಂದ ಅಸಮಾನತೆಯ ಸೆರಗು ಇದ್ದೇ ಇದೆ. ಆ ಅಸಮಾನತೆಯು ಸ್ವಾಭಾವಿಕವಾಗಿ ಇದೆಯಾದರೂ  ವೇದಗಳೋತ್ತರ  ಮತ್ತು ಇನ್ನಿತರ ಕಾಲಘಟ್ಟದಲ್ಲಿ  ಸಮಾಜದಲ್ಲಿ ಆದ ಆಚರಣೆಗಳ ಏರಿಳಿತಗಳು ಮಾನವನ ಸಾಮಾಜಿಕ ಬದುಕನ್ನು ದುಸ್ಥರಗೊಳಿಸಿದವು. ಕೆಲವು ವರ್ಗದವರ ಬದುಕು ಅಕ್ಷರಶಃ ನರಕವಾದವು. ನಂತರ ಆದದ್ದು   ಬದಲಾವಣೆಯ ಹೆಸರಿನಲ್ಲಿ ಕ್ರಾಂತಿ.. ಅದು  ಕೇವಲ ಹೆಸರಿಗಷ್ಟೇ ಕ್ರಾಂತಿಯಾಯಿತೇ ವಿನಃ ವಾಸ್ತವವಾಗಿ  ಬದಲಾವಣೆಯಂ ಕ್ರಾಂತಿ ಆಗಲಿಲ್ಲ...ಇದು ಕೇವಲ  ಸಾಮಾಜಿಕ ಅಂಶಗಳಲ್ಲಿ ಅಷ್ಟೇ ಅಲ್ಲದೇ ಅದು ವೈಯಕ್ತಿಕ ಜೀವನದ ಉದ್ದಾರದ  ವಿಷಯಗಳಲ್ಲಿ ಕೂಡ  ಬದಲಾವಣೆಗಳನ್ನು ತಂದುಕೊಳ್ಳದೇ ಇರುವುದು ಇಂದಿನ ವಾಸ್ತವವಾಗಿ ಆಗಬೇಕಾಗ ಬದಲಾವಣೆಗಳು ಆಗದೇ  ಇಂದಿನ ಎಲ್ಲಾ  ಸಾಮಾಜಿಕ ಪಿಡುಗುಗಳ ದುಸ್ಥಿತಿಯ ಮೂಲಬೇರು  ಆಗಿದೆ.  ಕುಲ ಕುಲವೆಂದು ಹೊಡೆದಾಡದಿರಿ ಎಂದೇಳಿದ ಕನಕದಾಸರು ಬಸವಣ್ಣರಂತಹ ಸಮಾಜ ಸುಧಾರಕರನ್ನು ಒಂದೊಂದು ಸಮುದಾಯ ಹಿಡಿದು ತಮ್ಮ ಜಾತಿಯ ನಾಯಕನನ್ನಾಗಿ ಮಾಡಿಕೊಂಡರು. ಯಾವ ಪಿಡುಗಿಗಾಗಿ ಹೊರಾಡಿದರೋ ಅವರನ್ನೇ ತಮ್ಮ ಜಾತಿಯವರು ಎಂದು ಜಾತೀಯತೆ ಅಂಟಿಸಿಕೊಂಡೇ ಸಾಗುತ್ತಿದ್ದಾರೆ.

ನಮ್ಮ ದೇಶದಲ್ಲಿ  ಈಗಿನ ಸಂವಿಧಾನದ ರಚನೆಯೇ 'ಅವೈಜ್ಞಾನಿಕ'ಎಂದು ವಾದಿಸುವ ಗುಂಪೊಂದು ರಚನೆಯಾಗಿದೆ.ಅದಕ್ಕೆ ಕಾರಣ ನಮ್ಮ ರಾಜಕೀಯ..! ಇಂಥ ಮನಸ್ಥಿತಿಯವರು ನಮ್ಮ ದೇಶ ಬದಲಾಯಿಸಲು ಯಾವ ಮಟ್ಟದ ಪ್ರಯತ್ನಗಳು ಮಾಡಬಹುದು??

ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಸಾವಿರಾರು ಘಟನೆಗಳು ಸಂವಿಧಾನದ ಕವಚದ ಒಳಗಡೆಯೇ ಯಾವೆಲ್ಲವೂ ಮಾಡಬಾರದೋ ಅದೆಲ್ಲದುದನ್ನೂ ವ್ಯವಸ್ಥಿತವಾಗಿ ಮಾಡುತ್ತಾ ಬಂದಿದ್ದಾರೆ.ಸಂವಿಧಾನವೇ ಬೆನ್ನೆಲುಬಾಗಿ ನಿಂತಿದ್ದರೂ ಅಸಮಾನತೆಯ ವಿವಿಧ ಮಜಲುಗಳು ಯಥಾವತ್ತಾಗಿ ಇಂದಿಗೂ ಹಾಗೆಯೇ ಇವೆ.ತಗ್ಗು ಪ್ರದೇಶಕ್ಕೆ ನೀರು ಹರಿದು ಬರುವಂತೆ ಉಳ್ಳವರೇ ಉಳ್ಳವರಾಗುತ್ತಿದ್ದಾರೆ. ಉಳಿದವರು ಒಂದರ್ಥದಲ್ಲಿ ಇಲ್ಲದವರಂತೆಯೇ ಉಳಿದಿದ್ದಾರೆ. ಹಾಗಾದರೆ ಬುದ್ಧ ಬಸವ ಅಂಬೇಡ್ಕರ್  ಗಾಂಧಿ ನೂರಾರು ಜನ ಸಾಧು ಸಂತರ ಪ್ರಯತ್ನಗಳು ಎಲ್ಲಿ ಹೋದವು???

ಭಾರತೀಯ ಸಾಂಸ್ಕೃತಿಕ ವ್ಯಾಪಕ ಸಂಕೀರ್ಣವಾದ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಯಾರು ಎಲ್ಲಿಂದ ಆರಂಭಿಸಬೇಕೋ  ಯಾರಿಗೂ ತಿಳಿಯುತ್ತಿಲ್ಲ. ಒಂದು ಕಡೆ ಧರ್ಮ ಮತ್ತೊಂದು ಕಡೆ ಸಂವಿಧಾನ. ಮತ್ತೊಂದು ಕಡೆ ದೇಶಾದ್ಯಂತ ಹರಡಿರುವ ಎಡ-ಬಲ ಪಂಥ. ಇವೆಲ್ಲವನ್ನೂ ಮೇಳೈಸಿಕೊಂಡು ಬದಲಾವಣೆ ದಿಕ್ಕಿನಲ್ಲಿ ಸಾಗುವುದು  ಇಂದು ಬಹು ಕಠಿಣ ಮತ್ತು ಸವಾಲಿನ ಕೆಲಸ...ಕಾರ್ಯಾಂಗದಲ್ಲಿಯೂ  ಇಂದು ಕೇವಲ ಘೋಷಣೆ, ಆದೇಶಗಳಲ್ಲಿ ಮಾತ್ರ ಬದಲಾವಣೆ ಉಳಿದಿದೆ.ಒಂದು ವೇಳೆ ಬದಲಾವಣೆಗಳು ಆಗಿದ್ದರೆ  ರಾಜಾರಾಮ್ ಮೋಹನ್ ರಾಯ್ ಮತ್ತು ವಿಲಿಯಂ ಬೆಂಟಿಕ್ ಅವರು 1891 ರಲ್ಲಿ ಆರಂಭವಾದ ಬಾಲ್ಯವಿವಾಹ ತಡೆ ಮತ್ತು ನಿಷೇಧ ವಾಗಿ ಇತರ ಸಾಮಾಜಿಕ ಪಿಡುಗುಗಳು ಇಂದು ಹೇಳ ಹೆಸರಿಲ್ಲದೇ ನಿರ್ಮೂಲನೆ ಆಗಬೇಕಿತ್ತು. ಇಂದಿಗೂ ಇವೆಲ್ಲವುಗಳ ಆಚರಣೆ ನಡೆಯತ್ತಲೇ ಇವೆ. ಹಾಗಾದರೇ ಬದಲಾವಣೆ ಆಗಿದ್ದು ಎಲ್ಲಿ??

ಮದ್ಯಪಾನ ಮತ್ತು ತಂಬಾಕು ವಸ್ತಗಳು ಬಳಸಿದರೆ ಕ್ಯಾನ್ಸರ್ ಬರಬಹುದು ಎಂದು ಭಯಾನಕ ಚಿತ್ರಗಳನ್ನು ಅಧಿಕ ಬೆಲೆಯನ್ನು ಹಾಕಿ ಮಾರಾಟ ಮಾಡಿದರೂ ಅದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಪ್ರಾಪ್ತ ವಯಸ್ಕರಲ್ಲೇ ಇತ್ತೀಚಿಗೆ ಅಧಿಕವಾಗಿ ಕಂಡು ಬರುತ್ತಿದೆ. ಹಾಗಾದರೆ ಟಿ ವಿ ಸಿನಿಮಾ ಗಳಲ್ಲಿ ಧೂಮಪಾನ ಮದ್ಯಪಾನ ಮಾಡಿದರೆ ಸಾವು ಬರುತ್ತದೆ ಎಂದು ಹೇಳಿದರೂ ಅಪ್ರಾಪ್ತ ಮತ್ತು  ಯುವ ಜನತೆಯೇ ಇಂತಹ ದುಶ್ಚಟಗಳಿಗೆ ಹೆಚ್ಚೆಚ್ಚು ಬಲಿಯಾಗುತ್ತಿದ್ದಾರೆ.

ಬದಲಾವಣೆ ಎಂದರೇ ಈಗ ಇರುವುದಕ್ಕಿಂತ ಉತ್ತಮವಾಗಿರುವ ಸ್ಥಿತಿಯನ್ನು  ಹೊಂದುವುದು ಬದಲಾವಣೆ ಎನ್ನಬಹುದು.ಆದರೆ ನಮ್ಮ ಬದಲಾವಣೆಗಳು ಎಲ್ಲವೂ ನಕಾರಾತ್ಮಕ ಎಡೆಗೆ ಸಾಗಿದ್ದು ಬದಲಾವಣೆ ಎನ್ನಬಹುದಾದರೂ ಮಾನವ ಪ್ರಗತಿಯ ದೃಷ್ಠಿಯಿಂದ ಧನಾತ್ಮಕವಾದ ಬದಲಾವಣೆಗಳು ಎನ್ನಲಾಗದು.

ತಪ್ಪುಗಳು/ಸುಳ್ಳುಗಳು ಪದೇ ಪದೇ ಪುನಾರಾವರ್ತನೆಯಾದಾಗ  ಅವುಗಳೇ ಸರಿ /ಸತ್ಯ ಎಂದೆನಿಸುತ್ತವೆ.ಇಂತಹ ಧೋರಣೆಯೊಂದು  ರಾಜ್ಯಾಂಗ ಮತ್ತು ಕಾರ್ಯಾಂಗದ ಅಲ್ಲಲ್ಲಿ ನ್ಯಾಯಾಂಗದಲ್ಲೂ ಈ ಧೋರಣೆ ಪಾಲಿಸುತ್ತಿದ್ದಾರೆ ಎಂಬ ಸಂಶಯ ಎಲ್ಲಾ ಜನಮನದಲ್ಲಿದೆ. ಇನ್ನೂ  ಮೊಬೈಲ್ ತಲೆಮಾರಿನ ಜನರು ಯಾವುದು ಮಾಡಬೇಡ ಎಂದು ಹೇಳುತ್ತಿದ್ದೇವೆಯೋ ಅದನ್ನೇ ಮಾಡುತ್ತಾ Boomerang ನಿಯಮಾನುಸಾರ ತಪ್ಪುಗಳನ್ನೇ ಸರಿ ಎಂದು ಒಪ್ಪಿಕೊಂಡು ಅವುಗಳನ್ನೇ ರೂಢಿಸಿಕೊಂಡು ತಪ್ಪನ್ನೇ ಸರಿಯಾದುದು ಕಾನೂನಾತ್ಮಕ ಎನ್ನುವ ಮಟ್ಟಿಗೆ  ಜನ ಮುಂದುವರೆಯುತ್ತಿದ್ದಾರೆ.

_ಹಾಗಾದರೆ ಬದಲಾಗಬೇಕಾಗಿದ್ದೇನು???_


 

👉 _ಅರ್ಥಪೂರ್ಣ ಶಿಕ್ಷಣ:_

 ಇಂದಿನದು ಸಾರ  ರಹಿತ ಶಿಕ್ಷಣದ ಪದ್ದತಿ.. ಇದೊಂದು  ಇಷ್ಟೆಲ್ಲಾ  ನೈತಿಕ ಸಾಂಸ್ಕತಿಕ ಅದೋಗತಿಗೆ ಬಹುಮುಖ್ಯವಾದ ಕಾರಣವಾಗಿದೆ. ವ್ಯವಹಾರದ ಮುಖವಾಡದ ಸೋಗಿನಲ್ಲಿ ಶಿಕ್ಷಣ ಸಂಸ್ಥೆಗಳು ಸ್ಥಾಪನೆ ಮಾಡಿದವರು ದುಡ್ಡನ್ನು ಗಳಿಸುವ ನಾನಾ ದಾರಿಗಳನ್ನು ಕಂಡುಕೊಂಡರು.ಒಂದೊಂದು ರಾಜಕೀಯ ಪಂಥದವರು ಒಂದೊಂದೊಂದು ನಿಯಮ ಸಿದ್ದಾಂತವನ್ನು ಶಿಕ್ಷಣದಲ್ಲಿ ಅಳವಡಿಸಿ ಇತಿಹಾಸ ತಿರುಚಿ ತಮ್ಮ ಕಲ್ಪನೆಯ ದೃಷ್ಠಿಯಲ್ಲಿ ಇತಿಹಾಸ ರಚನೆ ಇವು ಸಲ್ಲದು.ತಮ್ಮ ತಮ್ಮ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ರಾಜಕೀಯ ಪಕ್ಷಗಳ ಬೂಟಾಟಿಕೆ ಸಿದ್ದಾಂತಗಳು ಪಾಲನೆಯಾಗಬಾರದು.  ಪ್ರತಿ  ಸರ್ಕಾರ ಯಾವುದೇ ಪಕ್ಷದ್ದಿರಲಿ.. ಶಿಕ್ಷಣದ ಮೇಲೆ ಹಸ್ತಕ್ಷೇಪ ಸಲ್ಲದು. ಇತ್ತೀಚಿನ ದಶಕಗಳಲ್ಲಿ  ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಯಿತಾದರೂ ಶಿಕ್ಷಣದ ಗುಣಮಟ್ಟ ಪಾತಾಳಕ್ಕೆ ಕುಸಿಯಿತು.ಶಿಕ್ಷಣದ ಗುಣಮಟ್ಟ ಸುಧಾರಿಸಿದ ಹೊರತು ಯಾವ ಸುಧಾರಣೆಗಳು, ಬದಲಾವಣೆಗಳು ಅಸಾಧ್ಯ..

👉 _ಕಟ್ಟುನಿಟ್ಟಿನ ಕಾನೂನು ಪರಿಪಾಲನೆ:_

ಕಾನೂನುಗಳ ಕಟ್ಟುನಿಟ್ಟಿನ ಅನುಷ್ಠಾನ ಆಗಬೇಕು.ಯಾವ ಹಂತದಲ್ಲೂ ಎಂಥವರಿಗೂ ರಿಯಾಯಿತಿ ಸಲ್ಲದು. ಎಂದು ಪಾರ್ಲಿಮೆಂಟ್ ನಿಂದ  ಪಂಚಾಯತ್  ವರೆಗೂ ಪ್ರತಿ ಹೆಜ್ಜೆಯಲ್ಲೂ ಪಾಲನೆ ಆಗಬೇಕು.

👉 _ನಿಸರ್ಗದ ಮೇಲೆ ಪ್ರೀತಿ:_

ಪ್ರಕೃತಿಯನ್ನು ದೇವರೆಂದು  ಕಂಡ ನೆಲ ಇದು.. ಆದರೆ ನಗರೀಕರಣ ಜನಸಂಖ್ಯೆಯು ಮಿತಿಮೀರಿದ ಬೆಳವಣಿಗೆ ನಿಸರ್ಗವನ್ನು ನಾಶ ಮಾಡಿತು. ಯಾವ ಅಂಶಗಳು ಜೀವಿಗಳ ಹುಟ್ಟು ಬೆಳವಣಿಗೆಗೆ ಕಾರಣವಾದ ಅಂಶಗಳೆಲ್ಲಾ ಒಂದೊಂದೇ ಕಣ್ಮರೆಯಾಗುತ್ತಿವೆ.ಅದರ ಪ್ರಭಾವವೇ ಇಂದು ಅನಾವೃಷ್ಠಿ ಅತೀವೃಷ್ಟಿ ..! 50° ಸಾಮಾನ್ಯ ಉಷ್ಣಾಂಶ ಕ್ಕೆ ಇಂದು ಈ ಭೂಮಿ ಭಾಗಶಃ  ತಲುಪಿದೆ.ಈ ಭೂಮಿಯ ಮೇಲೆ ಬದುಕುಳಿಯಲು ಅವಶ್ಯವಿದ್ದ ಆಮ್ಲಜನಕ, ನೀರು ಉಷ್ಣಾಂಶಗಳಂತಹ ಸಾಮಾನ್ಯ ವಾತಾವರಣ ಇಂದು ಭೂಮಿಯ ಮೇಲೆ ಇಲ್ಲವಾಗುತ್ತಿದೆ.ಹೀಗೆ ಪರಿಸರ ನಾಶ ಆದರೆ ಹನಿ ನೀರೂ ಸಿಗದೇ ಬಿಸಿಲಿಗೆ ಒದ್ದಾಡಿ ಒದ್ದಾಡಿ ಸಾಯುವ ದಿನಗಳು ಬಹಳ ಹತ್ತಿರವಾಗುತ್ತಿದೆ.

👉 _ಭ್ರಷ್ಟಾಚಾರ ನಿಯಂತ್ರಣ:_

ಇಂದು ಕಾನೂನುಗಳ ಉಲ್ಲಂಘನೆ ಮತ್ತು  ಅವ್ಯವಸ್ಥೆಗೆ  ಪ್ರಮುಖ ಕಾರಣ ಭ್ರಷ್ಟಾಚಾರ...ಹಣದ ಆಸೆಗೆ ನಮ್ಮ ವ್ಯವಸ್ಥೆಯಲ್ಲಿ ರಹದಾರಿಯೇ ಇದೆ. ಹಣ ಇದ್ದರೆ ಯಾವುದೂ ಅಸಾದ್ಯ ಅಲ್ಲವೇ ಅಲ್ಲ... ಅದು  ಕಾನೂನಾತ್ಮಕವಾಗಿ ಅಲ್ಲದಿದ್ದರೂ ಅದು ಸಾಧ್ಯ..!ಇದು ಅವ್ಯವಸ್ಥಿತ ಅರಾಜಕತೆಗೆ ಕಾರಣವಾಗುತ್ತಿದೆ.

ನಾವು ಬದಲಾಗಿದ್ದೇವೆ. ನಮ್ಮ ಪೂರ್ವಜರ ಕಾಲದಿಂದಲೂ ಬದಲಾಗುತ್ತಲೇ ಇದ್ದೇವೆ.... ಆದರೆ ನಮ್ಮ ಸ್ವಾರ್ಥಕ್ಕಾಗಿ ನಾವು ಬದಲಾಗಿದ್ದೇವೆ.ಅಥವಾ ಮತ್ಯಾರನ್ನೋ ನೋಡಿ ಅವರಂತೆ ನಾವಾಗಬೇಕು ಎಂಬ ಅನುಕರಣೆಯನ್ನು ಮಾಡಿದ್ದೇವೆ.ನಮ್ಮವರುಗಳ ಮುಂದೆ ನಾವು ಏನು ಕಡಿಮೆ ಇಲ್ಲ ಎಂದು  ಅಹಂಕಾರ ತೋರಿಸಲು ನಾವು ಕೆಲವೊಮ್ಮೆ ಬದಲಾಗಿದ್ದೇವೆ.ಆದರೆ ನಮ್ಮ ಬದಲಾವಣೆ ಸ್ವಾಭಾವಿಕವೇ ಅಥವಾ ಕೃತಕವೇ ???ನಮ್ಮ ದೈಹಿಕ ಬೆಳವಣಿಗೆಯು ಸ್ವಾಭಾವಿಕವಾದರೆ ಉಳಿದವೆಲ್ಲಾ ಕೃತಕ ಇದರಿಂದ  ಪರಿಸರ ನೆರೆಹೊರೆ ಇತರ ಜೀವ ವ್ಯವಸ್ಥೆಗೆ ಅಪಾರ ದಕ್ಕೆಯನ್ನುಂಟು ಮಾಡುತ್ತದೆ. ಇದರ ಅರಿವು ಎಲ್ಲರಿಗೂ ಇರಲೇಬೇಕಾಗುತ್ತದೆ.ಬದಲಾಗೋಣ ಎಲ್ಲರೂ ಆದರೆ ಅದು ಸ್ವಾರ್ಥಕ್ಕಾಗಿರದೇ ಸರ್ವರ ಉದ್ದಾರಕ್ಕಾಗಿ ಬದಲಾಗಲಿ...ಈ ಭೂಮಿಯ ಸರ್ವ ಜೀವಿಗಳಿಗೂ ತೊಂದರೆಯಾಗದೇ ಉದ್ದಾರವಾಗುವಂತೆ ಬದಲಾದರೇ ಬದಲಾದೀತು ಎಲ್ಲದೂ....

✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..