ಜಯಪ್ಪನ ನಗು..

#ಜಯಪ್ಪನ_ನಗು

ಜಯಪ್ಪ ನಾನು ಪಿಯೂಸಿಯ ಕ್ಲಾಸ್ಮೇಟ್ಸ್. ಅಪರೂಪಕ್ಕೆ ಕಾಲೇಜಿಗೆ ಹೋಗುತ್ತಿದ್ದ  ಆ ದಿನಗಳಲ್ಲಿ ನೂರ ಇಪ್ಪತ್ತೈದು ವಿದ್ಯಾರ್ಥಿಗಳಲ್ಲಿ ನೆನಪಿರುವ ಕೆಲವೇ ಕೆಲವು ಮುಖಗಳಲ್ಲಿ ಇವನದು ಅಚ್ಚಳಿಯದ ಮುಖ.  ಪಿಯುಸಿಯಲ್ಲಿ ಇವನ ಮುಖ ಕೇವಲ ಮುಖ ಪರಿಚಯಕಷ್ಟೇ ಸೀಮೀತವಾಗಿತ್ತು.  ಆದರೆ ದ್ವಿತೀಯ ಪಿಯುಸಿಯ ಸಮಾಜಶಾಸ್ತ್ರದ  ಯಾವುದೋ  ಒಂದು ಟೆಸ್ಟ್ ಮಾಡಿದಾಗ ಇಪ್ಪತ್ತೈದಕ್ಕೆ ಇಪ್ಪತ್ನಾಲ್ಕು ಅಂಕಗಳನ್ನು ತೆಗೆದು ವರ್ಷವಿಡೀ ಮೂಕನಂತಿದ್ದ ನಾನು ಒಂದೇ ದಿನ Hero ಆಗಿದ್ದೆ. ಆ ಪರೀಕ್ಷೆಯನ್ನು ನಾನು ಹೇಗೆ ಬರೆದಿದ್ದೆನೋ, ಬೇರೆಯವರು ಹೇಗೆ ಬರೆದಿದ್ದರೋ ಗೊತ್ತಿಲ್ಲ ಆದರೆ ಎಲ್ಲರೂ ಹದಿನೆಂಟು ದಾಟಿರಲಿಲ್ಲ.ನನ್ನದು ಮಾತ್ರ ಇಪ್ಪತ್ನಾಲ್ಕು ಆಗಿತ್ತು.ಆದರೆ ಕಾಪಿ ಮಾತ್ರ ಹೊಡೆದಿರಲಿಲ್ಲ. ಎಲ್ಲರನ್ನೂ ತೆಗಳಿ ನನ್ನನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ಎಲ್ಲರೂ ಲಾಸ್ಟ್ ಸೆಕೆಂಡ್ ಬೆಂಚ್ ಕಡೆ ತಿರುಗಿನೋಡೋ ಹಾಗೆ ಆಗಿತ್ತು. ಆಗ ಏಕಾ ಏಕಿ ಎಲ್ಲರೂ ಮಾತಾಡುವಂತಾಗಿ ಇವನೊಂದಿಗೂ ಒಂದೆರಡು ಬಾರಿ ವಿವಿಧ ಸನ್ನಿವೇಶದಲ್ಲಿ ಮಾತಾಡಿರುವ ನೆನಪುಗಳು ಅಷ್ಟೇ.ಆದರೆ ಡಿ ಇಡಿ ಯಲ್ಲಿ ಅವನೂ ನಾನು ಬೇರೆ  ಬೇರೆ ಕಾಲೇಜು ಆದರೂ  ಇಬ್ಬರ ನಡುವಿನ ಆತ್ಮೀಯತೆಗೇನೂ ಬರ ಇರಲಿಲ್ಲ. ಸಮಯ ಸಿಕ್ಕಾಗಲೆಲ್ಲಾ ಅವನ ರೂಮಿಗೆ ನಾನು.. ನಮ್ಮ ರೂಮಿಗೆ ಅವನೂ ಪರಸ್ಪರ ಹೋಗಿ ಬರುತ್ತಿದ್ದೆವು. ಕೇವಲ 'ಬರೆಯಲೆಂದೇ' ಡಿ ಇಡಿಗೆ ಸೇರಿದ್ದೇವೆನೋ ಎನ್ನುವಂತೆ ಮಾಡಿದ್ದ ನಮ್ಮ assignments/ ಇತರ ಮಾಹಿತಿಗಳೂ ಪರಸ್ಪರ share ಆಗುತ್ತಿದ್ದವು.ಕಷ್ಟಕಾಲದಲ್ಲಿ ಚಿಲ್ಲರೆಕಾಸು,ಕೆಲವೊಮ್ಮೆ ಹೊಟ್ಟೆ ಹಸಿದಾಗ ಎರಡು ಆಪ್ ಎಗ್ ರೈಸ್  friendship ಅಲ್ಲಿ ಶೇರ್ ಮಾಡ್ಕೊತ್ತಿದ್ದೆವು.ಜಯಪ್ಪನೊಂದಿಗೆ ಬೆರೆತು ಸಮಯ ಕಳೆಯುವುದೆಂದರೆ ನನಗೆ ತುಂಬಾ ಖುಷಿಕೊಡುತ್ತಿತ್ತು. ಮಾತಾಡಲೂ ಬಿಡುವಿಲ್ಲದ ಸಮಯದ ಮದ್ಯೆಯೂ ಅವನೊಂದಿಗೆ ಕಳೆದ ಸಮಯ ಮನಸ್ಸಿಗೆ ಮುಖಕ್ಕೂ ನಗುವು ತರಿಸುತ್ತಿತ್ತು.

ಜಯಪ್ಪ ಏನಾದರೂ ಸಣ್ಣ ತಮಾಷೆಯ ಸಂಗತಿ ಸಿಕ್ಕಿದರೂ  ಅವನ ನಗುವಿನ ಅಲೆ ತುಂಬಾ ದೀರ್ಘಕಾಲ ಇರುತ್ತಿತ್ತು.ಒಂದೇ ಬಾರಿಗೆ ಬಂದು ಬರಿದಾಗುವ ನಗು ಅವನಾದಾಗಿರಲಿಲ್ಲ. ಹಾಗೇ  ಅವನ ನಗುವು ಶಬ್ಧ ರಹಿತ ನಗು ಅಂತೂ ಅಲ್ಲವೇ ಅಲ್ಲ! ನಿಶ್ಯಬ್ಧದ ಸಮಯ ಆದರೆ  ಒಂದು ಕಿಲೋಮೀಟರ್ ವರೆಗೆ  dts effect ನಂತೆ ಕೇಳುವ  ಅವನ ಜೋರು ನಗು. ನಾನು ಅವನ ರೂಮಿಗೆ ಹೋದಾಗಲೆಲ್ಲಾ ಉದ್ದೇಶಪೂರಕವಾಗಿ  ಜಗ್ಗೇಶ್, ಸಾದು ಕೋಕಿಲ,ದೊಡ್ಡಣ್ಣ,ಕೋಮಲ್ ಇವರ ಕಾಮಿಡಿ ಸನ್ನಿವೇಶಗಳನ್ನು ಹೇಳಿ ಹೇಳಿ ಅವನನ್ನು ನಗೆ ಕಡಲಲ್ಲಿ ತಳ್ಳುತ್ತಿದ್ದವು.ಹ್ಹಾ...ಹ್ಹಾ ....ಹ್ಹಾ... ಎಂದು ಶುರುವಾಗುತ್ತಿದ್ದ ಅವನ ನಗುವಿನ ಪಟ್ಟು ಜಾಸ್ತಿ ಮಾಡಲು ಅವನ ಸೊಂಟಕ್ಕೆ ಒಮ್ಮೆ ಗಿಲ್ಲಿದರೆ  ಹೊಟ್ಟೆಯಿಂದ ಬಂದ ನಗುವಿಗೆ ಎಗರಿ ಎಗರಿ ಬೀಳುತ್ತಿದ್ದ! ಕುಳಿತಿರುವ ಬಂಗಿಯಲ್ಲಿದ್ದರೆ  ಕೈ ಯಿಂದ ನೆಲಕ್ಕೆ ಬಡಿದು ಮೇಲಕ್ಕೆದ್ದು  ರೂಮಿನ ಒಳಗೆ ತಟ್ಟಾಡುತ್ತಾ ಓಡಾಡಿಕೊಂಡು ನಗುತ್ತಿದ್ದ. ಅವನ ನಗು Non stop ಅಗಿ ಕನಿಷ್ಠ ಒಂದೆರಡು ನಿಮಿಷಗಳವರೆಗೂ ಮುಂದುವರೆಯುತ್ತಿತ್ತು.ನಗಲಾಗದ ಪ್ರತೀಕೂಲ ಪರಿಸ್ಥಿತಿ ಇದ್ದರೂ ಅವನ ನಗು ಕಂಟ್ರೋಲ್ ಮಾಡಲು ಅವನಿಗೂ ಅಸಾಧ್ಯವಾಗಿತ್ತು.ನಮಗೆ ಜಗ್ಗೇಶ್ ಸಾದು ಕಾಮಿಡಿಗಿಂತ ಇವನ ನಗುವಿನ ಪರಿಯೇ ಅಪಾರ ಉಆನಂದ ತರಿಸುತ್ತಿದ್ದುದು.ಅದಕ್ಕೇ ಇವನ ಜೊತೆಯಲ್ಲಿ ಸಾಧ್ಯವಾದಷ್ಟೂ ಸಮಯ ಕಳೆಯಲು ಇಷ್ಟವಾಗುತ್ತಿತ್ತು.

ಡಿ ಇಡಿಯಲ್ಲಿ ಯಾವಾಗಲಾದರೂ ಅಪರೂಪಕ್ಕೆ ನನ್ನ ರೂಮ್ ಮೇಟ್ ಲೋಕೇಶ ಮತ್ತು  ನಾನು ಸಿನಿಮಾಕ್ಕೆ ಹೋಗುತ್ತಿದ್ದೆವು. ಅಂದು ಸೆಕೆಂಡ್ ಶೋಗೆ ಹೋಗುವ ತೀರ್ಮಾನ ಆಗಿತ್ತು. ಜಯಪ್ಪನನ್ನೂ  ಕರೆದುಕೊಂಡು ಹೋಗಲು ಒಂದು ಮಾತು ಕೇಳಣ ಎಂದು" ಬಾರೊ ಜಯ ಪಿಚ್ಚರ್ ಗೆ ಹೋಗೋಣ ಎಂದೆವು.ಸರಿ ಹೋಗೋಣ ಎಂಟುವರೆ ಸುಮಾರಿಗೆ  ಚಿತ್ರದುರ್ಗ ಜಿಲ್ಲಾಧಿಕಾರಿ ಅವರ ಮನೆಯ ಮುಂದೆ ಕಾಯುವಂತೆ ಹೇಳಿ ನಾನು ಲೋಕೇಶ್ ಸಿದ್ದವಾಗಿ ನಡೆದು  ಬಂದೆವು. ಲೋಕೇಶ ಟಿಕೆಟ್ ತೆಗೆಯುವುದರಲ್ಲಿ full expert ಇದ್ದುದರಿಂದ ಅವನಿಗೆ ದುಡ್ಡು ಕೊಟ್ಟು ಮೂರು  ಟಿಕೆಟ್ ತೆಗೆಯಲು ಹೇಳಿ ಟಿಕೆಟ್ ಕೈಗೆ ಪಡೆದ ತಕ್ಷಣವೇ ಓಡಿ ಆಸನ ಹಿಡಿದು ಕುಳಿತುಕೊಂಡೆವು.ಜಯಪ್ಪ ಮದ್ಯದಲ್ಲಿ ಕೂತಿದ್ದ ನಾವಿಬ್ಬರು ಆಚೆ ಈಚೆ ಕುಳಿತಿದ್ದೆವು. ಹೀರೋ ಎಂಟ್ರಿಗೆ ಟಾಕಿಸ್ ತುಂಬಾ ಜೋರಾಗಿ ಕೇಳುವ ಹಾಗೆ ಸಿಳ್ಳು ಹೊಡೆದ.ಅದು ಎಷ್ಟು ಜೋರು ಎಂದರೇ ಅವನ ಸಿಳ್ಳಿನ ಶಬ್ಧಕ್ಕೇ  ನನಗೆ ಕಿವಿ ಮುಚ್ಚಿಕೊಳ್ಳವಷ್ಟು ಜೋರು  ದೀರ್ಘ ಶಿಳ್ಳೆ.  ಅವನ ಶಿಳ್ಳೆಗೆ ಹಿಂದೆ ಮುಂದೆ ಇದ್ದ ಸಾಲಿನ ಆಡಿಯನ್ಸ್ಗಳಿಗೆ ಕಿರಿ ಕಿರಿಯಾದರೂ ಏನೋ ಪ್ಯಾನ್ಸ್ ಎಕ್ಸಪ್ರೆಷನ್ ಅಂತ ಸುಮ್ಮನಾದರು ಅಂದೆನಿಸಿತು. ಸಿನಿಮಾ ನೋಡುತ್ತಾ ನೋಡುತ್ತಾ ಕಾಮಿಡಿ ಆ್ಯಕ್ಟರ್ಸ ಎಂಟ್ರಿ ಆದರೆ ಇವನಿಗೆ ಜೋರು ನಗು ಶುರುವಾಗಿರುತ್ತಿತ್ತು.ಪಕ್ಕದಲ್ಲಿ ಕುಳಿತಿದ್ದ ನಾನು ಜಯ ಸಾದು ಬಂದ,ದೊಡ್ಡಣ್ಣ ಬಂದ ಅಂತ ಏನಾದರೂ ಅಂದ್ರೆ ಅವನ ನಗು ಕ್ಕ ಕ್ಕ ಕ್ಕ ಎಂದು ಒಮ್ಮೇಲೇ ಸ್ಪೋಟವಾಗಿಬಿಡುತ್ತಿತ್ತು. ಹತ್ತು ಇಪ್ಪತ್ತು ಸೆಂಕೆಂಡ್ಗೆ ನಿಲ್ಲುತಿತ್ತಾ ಅದು ಇಲ್ಲ ಆ ಕಾಮಿಡಿ ಸೀನ್ ಮುಗಿಯುವವರೆಗೂ ಗಹಗಹಿಸಿ ನಗುವ  ಜೋರು ಶಬ್ಧ . ಇವನ ನಗುವಿನ ಜೋರಿನ ಮುಂದೆ ಟಾಕೀಸ್ ಲೌಡ್ ಸ್ಪೀಕರ್ಸ ಟುಸ್!  ಇವನ ನಗುವಿನ ಅಬ್ಬರಕ್ಕೆ ಹಿಂದಿನ,ಮುಂದಿನ ಲೈನ್ ಲ್ಲಿ ಕೂತವರಿಗೆ   ಸಿನಿಮಾದ ಸಂಭಾಷಣೆಯೇ ಅರ್ಥ ಆಗದೇ ಇವನ ನಗುವಿನದೇ  ಶಬ್ಧ ಆ ಟಾಕೀಸ್ ತುಂಬಾ ಗಹಗಹಿಸಿರುತ್ತಿತ್ತು.ಆ ಕ್ಷಣಕ್ಕೆ ಸರಿಯಾಗಿ ಏನಾದರೂ ಅವನ ಸೊಂಟಕ್ಕೆ ಒಂದು ಬೆರಳು ತಾಗಿಸಿದರೂ ಕೈ ಕಾಲು ಸೊಂಟ ಮೈ ಎಲ್ಲಾ ಅಲ್ಲಾಡಿಸುತ್ತಾ ಏನೂ ಮಾಡಿದರೂ ಅವನ ನಗು ನಿಲ್ಲಿಸಲು ಸಾಧ್ಯ ಆಗುತ್ತಿರಲಿಲ್ಲ. ಒಂದು ಕ್ಷಣ Uncontroled ಆಗಿ ನಿಲ್ಲಿಸಲು ಒಂದೆರಡು ನೈಸರ್ಗಿಕ  ನಿಮಿಷಗಳೇ ಬೇಕಾಗುತ್ತಿದ್ದವು. ಒಂದೆರಡು ಬಾರಿ ಸಹಿಸಿಕೊಂಡ ಇತರ ಪ್ರೇಕ್ಷಕರು ನಿಧಾನವಾಗಿ ನಗಲು ಹೇಳಿದರು. "ಕಾಮಿಡಿ ಸೀನ್ ಇದ್ದಾಗ ನಗುಬರುತಾತಪ್ಪ ಏನು ಮಾಡದು..ನಗಾಡಾದು ಬೇಡ್ವೇನು?? ಅಂತ ಕೇಳುತ್ತಲೇ ಇನ್ನೋಂದು ಸುತ್ತು  ಹ್ಹ ಹ್ಹ ಎಂದು ನಕ್ಕು ಬಿಡುತಿದ್ದ.  ಇವನ ಇನ್ನೊಂದು ಬದಿಗೆ ಇರುತ್ತಿದ್ದ ಲೋಕೇಶನೂ "ನಿಧಾನವಾಗಿ ನಗಲೇ ಸಂಭಾಷಣೆ ಅರ್ಥ ಆಗಲ್ಲ"ಅಂತ ಹೇಳಿದರೂ ಇವನಿಗೆ ನಗುವಿನ ನಿಯಂತ್ರಣ ಸಾಧಿಸಲು ಆಗಲಿಲ್ಲ.ಇವನ ನಗುವಿನ ಕಾಟಕ್ಕೆ ಲೋಕೇಶ  ಇಂಟರ್ವಲ್ ಗೆ ಸೀಟ್ ಲೋಕೇಶನ್ ಚೇಂಜ್ ಮಾಡಿದ  ಆದರೂ ಸಿನಿಮಾ ಮುಗಿಯುವವರೆಗೂ ಇವನ ಅಬ್ಬರದ ನಗುವಿನ ಭರಾಟೆ ಹಾಗೇ ಸಾಗಿತ್ತು. ಯಾವುದೋ ಒಂದು ಪಿಲಂಗೆ ಹೋದಾಗ ಇವನ ನಗುವಿನ ಅಬ್ಬರಕ್ಕೆ  ಇತರೆ ಪ್ರೇಕ್ಷಕರು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು.ಆಗ ನಾವೇ ಜೋರು ಮಾಡಿ ಅವರನ್ನೂ ಇವನನ್ನೂ ಸಮ್ಮನೇ ಮಾಡಿಸಿದ್ದೆವು.ಹಾಗೆ ಸಿನಿಮಾ ಮುಗಿದು ರೂಂ ಗೆ ನಡೆದುಕೊಂಡು ಬರುವಾಗ ಕಾಮಿಡಿ ಸೀನ್ಸ್  recall  ಮಾಡಿಕೊಂಡು ಮತ್ತೆ  ಮತ್ತೆ ಹೊಟ್ಟೆ ಹುಣ್ಣಾಗುವವರೆಗೂ ನಕ್ಕು ನಕ್ಕೂ ಬರುತ್ತಿದ್ದೆವು. ಬರುವಾಗ ನಮ್ಮ ನಗುವಿನ ಶಬ್ಧಕ್ಕೇ ಮುದುರಿಕೊಂಡು ಮಲಗಿದ್ದ ನಾಯಿಗಳೆಲ್ಲಾ ಎದ್ದು ಬೊಗಳುತ್ತಿದ್ದವು.  ನಾಯಿ ಬೊಗಳುವಿಕೆಗೂ, ನಮ್ಮ ಮಧ್ಯರಾತ್ರಿಯ ಜೋರು ನಗುವಿನ ಅಟ್ಟಹಾಸಕ್ಕೂ  ಹತ್ತಾರು ಬಾರಿ ಹೆಂಗಸರು ಗಂಡಸರು ಹಾಕಿದ್ದ ಬಾಗಿಲ ತೆಗೆದು ಬಗ್ಗಿ ಬಗ್ಗಿ ನೋಡುತ್ತಿದ್ದರು.ಸದ್ಯಕ್ಕೆ ಯಾರು ಆ ವಿಚಾರವಾಗಿ ಒದ್ದಿಲ್ಲ ಅನ್ನೋದೇ ಖುಷಿ ವಿಚಾರ.!ಹೀಗೆ ಮಾಡುತ್ತಾ  ನಗುವಿನ ನಲಿವಿನಲಿ ಎಲ್ಲವನ್ನು ಮರೆತು  ಮನೆ ಸೇರಿದ ಮೇಲೆ ರಾತ್ರಿ ಹನ್ನೆರಡು ವರೆಯಷ್ಟೊತ್ತಿಗೆ  ಮೂರ್ನಾಲ್ಕು ಘಂಟೆಗಳು ನಿರಂತರ ನಕ್ಕ ಕಾರಣ ಹೊಟ್ಟೆ ಹಸಿವಾಗಿಬಿಡುತ್ತಿತ್ತು. ಅಂದಿನಿಂದ ನಮಗೆ ಪಿಚ್ಚರ್ ನೋಡಬೇಕು ಅನಿಸಿದಾಗಲೆಲ್ಲಾ ಜಯಪ್ಪನ ಹತ್ತಿರ ನಗದು (cash) ಇದ್ದರೂ,ಇಲ್ಲದಿದ್ದರೂ ಅವನ ನಗುವಿಗಾಗಿ ನಾನು/ಲೋಕೇಶ ಯಾರಾದರೂ ಅವನ ಟಿಕೆಟ್ ವೆಚ್ಚವನ್ನೂ ಭರಿಸಿ ಅವನನ್ನೂ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿತ್ತು.ಆದರೆ ಕೆಲವೊಮ್ಮೆ ಲೋಕೇಶ ಇವನ ನಗುವಿನ ಕಾಟಕ್ಕೆ ದೂರಕುಳಿತು ಅಲ್ಲಿಂದಲೇ ಅವನು ಜಯಪ್ಪನನ್ನು ನೋಡಿ ನಗುತ್ತಿರುತ್ತಿದ್ದ. ಅವನಿಲ್ಲದಿದ್ದರೆ ಪಿಲಂನ ಮಜಾನೇ ಇರುತ್ತಿರಲಿಲ್ಲ.

ನಾನು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಚಿತ್ರದುರ್ಗದ ತೋಟಗಾರಿಕೆ ಇಲಾಖೆಯ ಸಪೋಟ ತೋಟದಲ್ಲಿ ನನ್ನ ಅಭ್ಯಾಸದ ತಾಲೀಮು ನಡೆಯುತ್ತಿತ್ತು.ಅದಕ್ಕಾಗಿ ನಾನು ಅವರಿಂದ ಅನುಮತಿಯನ್ನು ಪಡೆದು ಒಳಗೆ ಕೂತು ಓದುತ್ತಿರುತ್ತಿದ್ದೆ.ನನ್ನನ್ನು ಹುಡುಕಿಕೊಂಡು  ಒಂದು ದಿನ ಸಂಜೆ ರೂಮ್ ಗೆ ಹೋದ ಜಯಪ್ಪ ನಾನಿಲ್ಲದುದನ್ನು ಕಂಡು ಆ ಸಪೋಟ ತೋಟಕ್ಕೆ ಮುಖ್ಯ ದ್ವಾರದಿಂದ ಒಳ ಬಂದ.  ನಾನು ಒಂದು ನೆರಳಿರುವ ಸಪೋಟ ಮರದ ಕೆಳಗೆ ಕುಳಿತಿದ್ದೆ.ಜಯಪ್ಪನನ್ನು ಕಂಡು "ಬಾರ ಜಯ .."ಎಂದು ಕೂಗಿ ಕರೆದೆ. ಅವನು ಬಂದು ಕೂರಲು ಹಾಗೆ ಮಾತಾಡುತ್ತಾ ಕುಳಿತ ಐದು ಹತ್ತು ನಿಮಿಷಕ್ಕೆ ಹತ್ತು ಹನ್ನೆರಡು  ಹಿರಿಯ ಜೀವಗಳು(ಸೀನಿಯರ್ ಸಿಟಿಜನ್ಸ್) ಬಂದವು.ಎಲ್ಲರೂ ಬಹುತೇಕ  ಅರವತ್ತು ವರ್ಷದ ಮೇಲ್ಪಟ್ಟವರು ಮತ್ತು ಎಲ್ಲರೂ ಮಹಿಳೆಯರು. ಅವರೂ ನಾವು ಕುಳಿತ ಜಾಗದಿಂದ ಸುಮಾರು ನೂರು ಅಡಿ ದೂರದಲ್ಲಿ ದುಂಡಾಗಿ ನಿಂತು ಕೃತಕವಾದ ಹ್ಹ...ಹ್ಹ..ಹ್ಹ... ಎಂದು 'ನಗುವಿನ ಕೂಟ ' ಮಾಡುತಿದ್ದರು. ಈ ಮೊದಲು ನಾನು ಎರಡ್ಮೂರು ಬಾರಿ ನೋಡಿದ್ದೆ. ನನಗೇನು ಹೊಸತು ಎನಿಸಲಿಲ್ಲ.

ಆದರೂ  ಈ ಜಯಪ್ಪ ಅವರನ್ನೇ ನೋಡುತ್ತಾ ಅಷ್ಟೊಂದು ಜೋರಾಗಿ ಅಲ್ಲದಿದ್ದರೂ continue ನಗುತ್ತಲೇ ಇದ್ದ.  ಆ ಸಮಯಕ್ಕೆ  ಆ ನಗುವಿನ ಕೂಟದಲ್ಲಿ ಯಾರೋ ಬೇರೊಬ್ಬ ಮಹಿಳೆಯ ಕಮ್ಯಾಂಡ್ ಸ್ಟಾರ್ಟ್ ಆಯಿತು‌.ಅವರ  ದ್ವನಿ  ಮಧುರವಾಗಿರದೇ ಸ್ವಲ್ಪ ಕರ್ಕಶವಾಗಿತ್ತು. ಕಮ್ಯಾಂಡ್ ಕೊಡುತ್ತಾ  ಒಮ್ಮೇಲೇ "ಹ್ಹು..ಹ್ಹು" ಅಂತ ಅಂದ್ರು ಕಣ್ರಿ.ಅಷ್ಟೋತ್ತಿನಿಂದ ನಗುವನ್ನು  ಅದುಮಿಟ್ಟಿದ್ದ ಜಯಪ್ಪನಿಗೆ ತಡೆದುಕೊಳ್ಳಲಾಗದೇ ಒಮ್ಮೇ "ಹ್ಹ...ಹ್ಹ...ಹಾ..."ಎಂದು ಹೈ ಪಿಚ್ ಗೆ ಹೋಗಿ ಮುಂದುವರೆದು ಹ್ಹಿ ಹ್ಹಿ ಎಂದು ನಗುತ್ತಿರುವ ಶಬ್ಧ ನಾಲ್ಕಾರು ಎಕರೆಯಷ್ಟು ಇದ್ದ ಸಪೋಟಾ ತೋಟದ ಕಾಂಪೌಂಡ್ ತುಂಬಾ ಇವನ ನಗು ಮಾರ್ಧನಿಸಿತು. ಅಹ್ಹಾ. ಅಹ್ಹಾ ಅಹ್ಹಾ.. ಹ್ಹಿಂ..ಹ್ಹಿ... ಹ್ಹು..ಹ್ಹು.. ಎಂದು ಕೃತಕವಾಗಿ ನಗುತ್ತಿರುವ ದೃಶ್ಯವನ್ನು ನೋಡುತ್ತಾ ಇವನು "ಇವರೇನಾ ಹಿಂಗೆ ಮಾಡುತ್ತಿದ್ದಾರೆ ಎಂದು ಹ್ಹ..ಹ್ಹ..ಎಂದ"... ಇವನ ಹ್ಹ.. ಹ್ಹ... ರಣ ಭಯಂಕರ ನಗುವಿಗೆ ಸಪೋಟ ತೋಟದಲ್ಲಿದ್ದ ಸಣ್ಣಪುಟ್ಟ ಪಕ್ಷಿಗಳೆಲ್ಲಾ ಹಾರಿ ಹೋದವು.ಅತ್ತ ಕೃತಕ ನಗುವಿನ ಕೂಟ ಮಾಡುತ್ತಿದ್ದ ಹಿರಿಯ ಜೀವಗಳು ನಮ್ಮಕಡೆ ತಿರುಗಿ ನಮ್ಮನ್ನೇ ನೋಡುತ್ತಾ ಅವಕ್ಕಾಗಿ ನಿಂತರು."ನಗಬೇಡಲೇ‌ ಜಯ  ನೀನು ನಕ್ಕರೆ ಮತ್ತೆ ನನಗೆ ಇಲ್ಲಿ ಬರದಂತೆ ಯಾರಾದರೂ ತೊಂದರೆ ಮಾಡಿಯಾರು ಸುಮ್ಮನಿರಲೇ " ಎಂದೆ.  ನನ್ನ ಮಾತಿಗೆ ಗೌರವ ಕೊಟ್ಟ ಜಯ ನಗುವನ್ನು ನಿಯಂತ್ರಣಕ್ಕೆ ತಂದನು.

ಆ ಹಿರಿಯ ಜೀವಗಳು ಎಂಟತ್ತು ನಿಮಿಷ ನಕ್ಕ ಕೃತಕವಾದ ನಗುವಿಗೆ ಇವನ ನ್ಯಾಚೂರಲ್ ಆಗಿ  ನಕ್ಕ ಒಂದೇ ನಗುವಿನ SHOTಗೆ ಅವಕ್ಕಾದ ಅವರು ನಗು ಮತ್ತು ವ್ಯಾಯಾಮ ಎರಡನ್ನೂ ನಿಲ್ಲಿಸಿ ನಮ್ಮ ಕಡೆ  ನೋಡುತ್ತಾ ನಿಂತರು.!ಇವನು ಅವರ ಕಡೆ ನೊಡದೇ ಅತ್ತಕಡೆ ತಿರುಗಿ ಹ್ಹಿ ಹ್ಹಿ ಅಂತ ನಗು ನಿಲ್ಲಿಸದೇ ನಗುತ್ತಲೇ ಇದ್ದಾನೆ.ಇವನೇನೋ ಹೀಗೇ ಮಾಡಿ ನಾಳೆ ನಾನು ಇಲ್ಲಿ ಬರದಹಾಗೆ ಮಾಡುವನು ಎಂದು "ನೆಡಿಯಲೇ ಹೋಗಾಣ" ಎಂದು ಎಬ್ಬಿಸಿ ಚಿತ್ರದುರ್ಗದ ಎಸ್ ಪಿ ಆಪೀಸ್ ಹಿಂದುಗಡೆ ಕಾಂಪೌಂಡ್ ಹಾರಿ ಬರುವ ಒಂದು ಶಾರ್ಟ್ ಕಟ್ ದಾರಿ ಇತ್ತು. ನಾನು ಅದೇ ದಾರಿಯಲ್ಲೇ  ನಿತ್ಯ ಹೋಗಿ ಬರುತ್ತಿದ್ದೆ. ಅಂದು ಅವನನ್ನೂ ಅದೇ  ದಾರಿಯಲ್ಲಿ ಕರೆದುಕೊಂಡು ಬರುವಾಗ ಕಾಂಪೌಂಡ್  ಹತ್ತಿ   SP OFFICE ಒಳಗೆ ಹಾರಿದ ಕೂಡಲೇ ಆ  ಹಿರಿಯರ ನಗೆ ಕೂಟವನ್ನು ನೆನೆದು ಮತ್ತೆ ಒಂದು ಶಾಟ್  ಜೋರಾಗಿ ನಕ್ಕು ಬಿಟ್ಟ! ನಿಶ್ಯಬ್ಧ ವಾತಾವರಣದಲ್ಲಿ ಸೀರಿಯಸ್ ಆಗಿ ಕೆಲಸ ಮಾಡುತ್ತಿದ್ದ SP ಆಪೀಸ್  ಕಾಂಪೌಂಡ್ ಇವನ ನಗುವಿನ ಅಟ್ಟಹಾಸ ಕೇಳಿ ಸೆಲ್ಯೂಟ್ ಹೊಡೆಯಲೆಂದೇ ಗನ್ ಹಿಡಿದು ನಿಂತಿರುತ್ತಿದ್ದ ಪೋಲಿಸ್ ಓಡಿ ಬಂದು "ಏಯ್ ಏನ ಅದು?ಯಾರೋ ಒಳಗೆ ಬರಾಕೇಳಿದ್ದು ?ಏನ್ ಅನ್ಕಂಡಿಯಾ ಇದನ್ನು?" ಎಸ್ ಪಿ ಅಪೀಸ್ ಒಳಗೆ ಬಂದು ಕಿಸಿತಿಯೇನಲೇ ??ಎಂದು ಗದರಿಸಿದರು. ಅವನೂ ಬಾಯಿ ಮುಚ್ಚಿದ್ದಾನೆ ಅಷ್ಟೇ ಆದರೆ ನಗು ಹೋಗಿಲ್ಲ. ಪ್ರತಿದಿನ ಓಡಾಡುತ್ತಿದ್ದ ನನಗೆ ಅವರ ಪರಿಚಯ ಇದ್ದುದರಿಂದ "ಸಾರ್... ಸಾರ್... ಅವನಿಗೆ ಇದು ಎಸ್ ಪಿ ಆಪೀಸ್ ಅಂತ ಗೊತ್ತಿಲ್ಲ ಹಾಗೆ ಏನೋ ತಮಾಷೆಯಾಗಿ ಮಾತಾಡುತ್ತಾ ಬಂದ್ವಿ ಹಾಗೆ ನಕ್ಬಿಟ್ಟ"...ಅಂದೆ. ಇನ್ನೊಂದು ಸರಿ ಕರ್ಕೊಂಡು ಬರಬೇಡ ಅವನನ್ನ. ----ಹಲ್ಲು ಬಂದಾವೇನ್ಲೇ ??ಅಂತ ಪೋಲಿಸ್ ಭಾಷೆಯ ಪ್ರಯೋಗ ಮಾಡಿದರು. "ಸಾರಿ ಸಾರ್ "ಎಂದೇಳಿ ಅಲ್ಲಿಂದ ಬಂದು ಬಿಟ್ಟೆವು.ಮತ್ತೊಂದು ಬಾರಿ ಎಲ್ಲಿ  ಜೋರಾಗಿ ನಕ್ಕು ಒದೆ -ಗಿದೆ ಬೀಳ್ಸುವನೋ ಎಂಬ ಆತಂಕ ಇದ್ದರೂ ಪೋಲಿಸ್ Uniform ನೋಡಿದ ಮೇಲೆ ನಗುವನ್ನು ನುಂಗಿ  ಭಾಗಶಃ ಗಪ್ ಚುಪ್ ಆಗಿದ್ದ! ಅವತ್ತೇನಾದರೂ ಜಯಪ್ಪ ಮತ್ತೊಂದು ಬಾರಿ  ನಕ್ಕಿದ್ರೆ ಅಂದು ಪೋಲಿಸ್ ಕಜ್ಜಾಯವಂತೂ ಗ್ಯಾರಂಟಿ ಸಿಗುತ್ತಿತ್ತು.!ಇಂತಹ ಒಂದೆರಡು ಬಾರಿ ಕಿರಿ ಕಿರಿಗಳಾಗಿದ್ದರೂ ಅವನ  ಜೊತೆಗೆ ಇದ್ದ ಕಾಲ ಆನಂದಮಯವಾಗಿತ್ತು. ಅವನ ಜೊತೆಗೆ ಇದ್ದಷ್ಟೂ ಕಾಲ ಮನರಂಜನೆ UNLIMITED ಆಗಿ ಇರುತ್ತಿತ್ತು.

ಜನರು ಯಾವಾಗಲೂ ಗಂಟು ಮುಖ ಹಾಕಿಕೊಂಡು ಜೋಕ್ ಇದ್ದರೂ ನಗದವರು ನಮ್ಮ ನಡುವೆ ಬಹಳ ಜನ ಇದ್ದಾರೆ. ಅತ್ತ ಬಲವಂತವಾಗಿ ನಗಲೇ ಬೇಕು ಎಂದು ನಗೆಕೂಟ ಮಾಡಿಕೊಂಡವರೂ ಇದ್ದಾರೆ. ನೈಸರ್ಗಿಕವಾಗಿ ನಗುವುದು ನ್ಯಾಚುರಲ್ ಹೂವಿನಂತೆ ಪರಿಮಳ ಸುಗಂದ ಇದ್ದರೆ ಬಲವಂತವಾಗಿ ನಗುವುದು ಒಂಥರಾ ಪ್ಲಾಸಿಕ್ ಹೂ ಇದ್ದ ಹಾಗೆ ಯಾವುದೇ ಸುಗಂಧ ಇರಲಾರದು.ಇಂತಹವುಗಳ ನಡುವೆ ನಗುವಿನ ಬುಗ್ಗೆಯಾಗಿ ಸಿಡಿಯುವ ನಿಶ್ಕಲ್ಮಶವಾಗಿ ಅಷ್ಟು ಧಾರಳವಾಗಿ ನಗುವ ಮತ್ತೊಬ್ಬ ವ್ಯಕ್ತಿಯನ್ನು ನಾನು ನೋಡಲಿಲ್ಲ. ಪುಕ್ಕಟೆಯಾದ ನಗುವಿನಲ್ಲೂ ಧಾರಳತೆ ಇಲ್ಲದ ಒತ್ತಡಗಳಲ್ಲಿ ನಾವು ಇದ್ದೇವೆ.ಇವತ್ತಿಗೂ ಅವನಿಗೆ ಪೋನ್ ಮಾಡಿ ಏನೋ ಜಯ ಅಂದ್ರೆ ಕನಿಷ್ಠ ಇಪ್ಪತ್ತು ಸೆಕೆಂಡ್ ನಗುವಿನ ಹೈ ಪಿಚ್ಗೆ ಹೋಗಿ ಮತ್ತೆ ಲೋ ಪಿಚ್ ಗೆ ಬಂದ ಮೇಲೆಯೇ ಇತರ ಯೋಗಕ್ಷೇಮ. ಹಾಗಂತ ಏನೂ ಮಾನಸಿಕ ದೌರ್ಬಲ್ಯ ಅಂತೂ ಕಂಡಿತ ಅಲ್ಲ. ಆದರೆ ಅವನಲ್ಲಿ ಈ ಅಮಾಯಕ  ಧಾರಳವಾದ ನಗುವಿನ ಪೊಟೆನ್ಷಿಯಲ್ ನಗುವಿನ ಮೂಲ ಗೊತ್ತಾಗಲಿಲ್ಲ. ಈ ತರ ನಗುವುದ ಕಲಿಯಲು ಪ್ರಯತ್ನ ಮಾಡಿರುವೆ ಆದರೆ ಅದು ಕೆಲವೊಮ್ಮೆ ಮಾತ್ರ ಸಾಧ್ಯವಾಗುವುದು ಬಿಟ್ಟರೆ ಅವನಷ್ಟು ಜೋರು ಆ ನಗುವಿನ ಪೊಟೆನ್ಷಿಯಲ್  ಯಾರಿಗೂ ಬರಲ್ಲ.ಈ ಮುಗ್ಧ ನಗುವಿಗಾಗಿಯೇ ನನಗೆ ಅವನೊಂದಿಗೆ ಬೆರೆತು ಮಾತನಾಡಬೇಕು ನಾನೂ ನಕ್ಕು ನಲಿಯಬೇಕು ಅನ್ನಿಸಿದ್ದು.ಈ ಬರಹ ಬರೆಯಲು ಶುರುಮಾಡಿದಾಗಿನಿಂದಲೂ ನಗು ನಗುತ್ತಲೇ ಬರೆದಿರುವೆ.😀😀

✍️ _ನಾಗೇಂದ್ರ ಬಂಜಗೆರೆ_

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..