ಶಿಕ್ಷಕರ ಕೆಲಸಕ್ಕೆ ಕೃತಕ ಬುದ್ಧಿಮತ್ತೆಗಳು (AI)ಗಳು ಬಂದರೆ???
ಶಿಕ್ಷಕರ ಕೆಲಸಕ್ಕೆ 'ಕೃತಕಬುದ್ಧಿಮತ್ತೆ'ಗಳು (ಅರ್ಟೀಪಿಶಿಯಲ್ ಇಂಟೆಲಿಜೆನ್ಸ್-AI)ಬಂದಾಗ....
ಆ ಮೇಡಂ ಏನ್ ಕೇಳಿದರೂ ಥಟ್ ಅಂತಾ ಉತ್ತರ ಕೊಡುತ್ತಾರೆ ಗೊತ್ತಾ??? ಎಷ್ಟು ಬಾರಿ ಹೇಳಿ ಎಂದರೂ ಬೇಜಾರು ಮಾಡಿಕೊಳ್ಳದೇ ಪಟಪಟನೇ ಮಾತನಾಡುತ್ತಾ ಇರುತ್ತಾರೆ.. ಇನ್ನೂ ಈ ಸರ್ ಇದ್ದಾರಲ್ಲಾ?? ಇವರು ಅಷ್ಟೆ... ಅವರೂ ಎಷ್ಟೊಂದು ಭಾಷೆಗಳನ್ನು ಮಾತಾಡುತ್ತಾರೆ ಗೊತ್ತಾ ?? ಚಿತ್ರಗಳನ್ನು ಎಷ್ಟು ಚಂದ ಬಿಡಿಸುತ್ತಾರೆ.. ಹಾಗೇ ಆದರೆ ಆ ಮೇಡಂ ರವರ ಕೂದಲು ಇದೆಯಲ್ಲಾ?? ಅದು Original ಅಲ್ಲಾ...ಅವರ ಹಲ್ಲೂ ಕೂಡ...ಅವರು ಮನೆಗೆ ಹೋಗಲ್ಲ... ಇಲ್ಲೇ ಶಾಲೆಯಲ್ಲೇ ಇರುತ್ತಾರೆ.ಅವರೂ ನಮ್ಮ ತರ ಊಟ ಮಾಡಲ್ಲಾ... ನೀರನ್ನು ಸಹಾ ಕುಡಿಯುವುದಿಲ್ಲ... ಅವರಿಗೆ ನಮ್ ತರ ಕೈ ಕಾಲು ನೋವು,ತಲೆನೋವು, ಜ್ವರ ಬರದೇ ಇಲ್ಲ... ಇದ್ಯಾವುದರ ಬಗ್ಗೆ ನಾ ಮಾತಾಡುತ್ತಿರುವುದು ಅಂತ ಅನ್ನಿಸುತ್ತಿದೆಯಾ??ಹೇ... ನಾನ್ ಹೇಳ್ತಾ ಇರೋದು ಮನುಷ್ಯರ ಬಗ್ಗೆ ಅಲ್ಲ ಕಣ್ರಿ...! 'Artificial intelligence' ಎಂದು ಕರೆಯಲ್ಪಡುವ ರೊಬೋಟ್ ಶಿಕ್ಷಕರು. ಇವರು ಒಂಥರಾ ಮನುಷ್ಯರು ಇದ್ದಹಾಗೆನೇ... ಆದರೆ ಇವು ಜೀವಿಗಳಲ್ಲ..... ಇವರುಗಳು ಸರ್ಕಾರಕ್ಕೆ ಪ್ರತಿ ತಿಂಗಳು ಲಕ್ಷ ಲಕ್ಷ ಸಂಬಳಕೊಡಿ ಎಂದು ಕೇಳುವುದಿಲ್ಲ.ಎಷ್ಟು ಕೆಲಸ ಮಾಡು ಅಂದರೂ ಅವು ಪ್ರತಿಭಟಿಸಲ್ಲ..ನಾಗರಿಕ ಸೌಲಭ್ಯಗಳನ್ನು ಕೇಳಲ್ಲ...ಅವುಗಳಿಗೆ ಗೊತ್ತಿರುವ ಕೆಲಸಗಳನ್ನು ಚಾಚೂ ತಪ್ಪದೇ ಮಾಡುತ್ತಾವೆ. ಈ ತರಹದ ಶಿಕ್ಷಕರು ಒಂಥರಾ ಸರ್ಕಾರಗಳಿಗೂ ಉತ್ತಮವೆಂದು ಅನಿಸಿರಬಹುದು.. ಅದಕ್ಕೆ ಇವರ ಸೇವೆ ಪಡೆಯಲು ಜಗತ್ತು ಸಿದ್ಧತೆ ನಡೆಸಿದೆ.
ಹೌದು..
ಬದಲಾಗುತ್ತಿರುವ ಜಗತ್ತಿಗೆ ಎಲ್ಲದರಲ್ಲೂ ಬದಲಾವಣೆ ಕಾಣಲು ಬಯಸುವುದು ಅಭಿವೃಧ್ಧಿಯ ಸಂಕೇತ.ಈಗಾಗಲೇ ಹುಟ್ಟಿನಿಂದ ಸಾಯುವವರೆಗೆ ಎಲ್ಲವೂ ಮೊದಲಿನಂತಿರದೇ ಬದಲಾಗಿದೆ.ಇದರ ಭಾಗವಾಗಿ ಅಧುನಿಕ ಪ್ರಪಂಚಕ್ಕೆ ವಿದ್ಯೆ,ಬುದ್ದಿ ನೀಡಿ ವಿದ್ಯಾವಂತರನ್ನಾಗಿ ನಿರ್ಮಿಸುತ್ತಿರುವ ಶಿಕ್ಷಕರ ಕಾರ್ಯ ಮಹತ್ತರವಾದದ್ದು. ಮಕ್ಕಳಿಗೆ ಶಿಕ್ಷಣ ನೀಡಿ ಬುದ್ಧಿವಂತನನ್ನಾಗಿ ಮಾಡುವ ಈ ಶಿಕ್ಷಕನ ಸ್ಥಳದಲ್ಲಿ ಮಾನವ ಸಂಪನ್ಮೂಲದ ಬದಲು 'ಯಂತ್ರಮಾನವ' ಅಂದರೆ ಕೃತಕ ಬುದ್ಧಿಮತ್ತೆ (Artificial intelligence)ಗಳನ್ನು ಪರಿಚಯಿಸಿ ಮಾನವ ಸಂಪನ್ಮೂಲ ಮಿತಗೊಳಿಸಿ ಕಲಿಕಾ ದಕ್ಷತೆಯನ್ನು ಹೆಚ್ಚಿಸುವ ಚಿಂತನೆಗಳು ನಡೆಯುತ್ತಿವೆ. ಆ ನಿಟ್ಟಿನಲ್ಲಿ ಅಲ್ಲಲ್ಲಿ ಪರೀಕ್ಷಾರ್ಥವಾಗಿ ಬಳಕೆಯನ್ನೂ ಕೂಡ ಮಾಡಲಾಗಿದೆ.ಒಂದು ವೇಳೆ ನಿತ್ಯ ಬೋಧನೆಗೆ,ಮಕ್ಕಳ ಬೌದ್ಧಿಕ ನಿರ್ಮಾಣದ ಜವಾಬ್ದಾರಿಗೆ ಕೃತಕ ಬುದ್ಧಿಮತ್ತೆಗಳನ್ನು ಬಳಸಿದ್ದೇ ಆದರೆ ಭವಿಷ್ಯದಲ್ಲಿ ಏನಾಗಬಹುದು??ವಿದ್ಯಾರ್ಥಿಗಳು ಯಾವ Range ನಲ್ಲಿ ಕಲಿಯಬಹುದು ಎಂಬುದರ ಬಗ್ಗೆ ಸಾದ್ಯ ಸಾಧ್ಯತೆಗಳನ್ನು ವಿಶ್ಲೇಷಣೆ ಮಾಡಿ ಈ ಕೆಳಕಂಡಂತೆ ನೋಡಬಹುದು.
1.ಭಾವನಾತ್ಮಕ ಮತ್ತು ಮಾನವ ಸಂಬಂಧಗಳ ನಾಶ:
ಇದು ಎಂಟು ವರ್ಷಗಳ ಹಿಂದಿನ ಘಟನೆ. ನಾನು ಮುಖ್ಯಗುರುಗಳಾಗಿದ್ದಾಗ. ಆ ಊರಿನ ಕೆಲ ವಿದ್ಯಾರ್ಥಿಗಳು ಸಮಾಜದ ಕೆಳವರ್ಗದ,ಆರ್ಥಿಕವಾಗಿ ಹಿಂದುಳಿದ ದೇವದಾಸಿ ಮತ್ತು single parents ಇರುವ ಮಕ್ಕಳು ಶಾಲೆಗೆ ಸೇರಿದಮೇಲೆ ಒಂದು ದಿನವೂ ಶಾಲೆಗೆ ಬರದೇ ವಯಸ್ಸು ಕಿರಿಯದಾದರೂ ಬೀಡಿ,ಸಿಗರೇಟ್ ಗುಟ್ಕಾ,ಕಳ್ಳತನ ಇಂತಹ ಸಮಾಜ ಘಾತುಕ ಕೆಲಸಗಳಲ್ಲಿ ಚಿಕ್ಕ ವಯಸ್ಸಿಗೆ ತೊಡಗಿಕೊಂಡಿದ್ದರು. ಹತ್ತಾರು ನಿರಂತರ ಪ್ರಯತ್ನಗಳ ಮೂಲಕ ಯಶಸ್ವಿಯಾಗಿ ಆ ಮಕ್ಕಳನ್ನು ನಾನು ಶಾಲೆಗೆ ಕರೆತಂದೆ. ಅವರು ದಿನದಿಂದ ದಿನಕ್ಕೆ ಮುಖ್ಯವಾಹಿನಿಗೆ ಹೊಂದಿಕೊಂಡು ಓದು ಬರಹ ಕಲಿಕೆಯಲ್ಲಿ ತೊಡಗಿಕೊಂಡರು. ಅವರ ಸಮಾಜ ಘಾತುಕ ಕೆಲಸಗಳು ಇಲ್ಲವೇ ಇಲ್ಲ ಎನ್ನುವ ಮಟ್ಟಿಗೆ ತಿದ್ದಿಕೊಂಡು ನಿತ್ಯವೂ ಶಾಲೆಗೆ ಬರುತ್ತಿದ್ದರು. ಇದರ ಮಧ್ಯೆ ಬಹಳ ವರ್ಷಗಳಿಂದ ವರ್ಗಾವಣೆಗೆ ಕಾಯುತ್ತಿದ್ದ ನನಗೆ ವರ್ಗಾವಣೆಯ ಭಾಗ್ಯ ಸಿಕ್ಕಿತ್ತು. ನಾನೇನೋ ವರ್ಗಾವಾಗಿ ಬೇರೆ ಶಾಲೆಗೆ ಬಂದೆ ಆದರೆ ಎರಡ್ಮೂರು ವರ್ಷಗಳಾದ ನಂತರ ಆ ನಾಲ್ಕು ಹುಡುಗರನ್ನು ಆಕಸ್ಮಿಕವಾಗಿ ಬೇಟಿಯಾಗಬೇಕಾಯಿತು. ಬೇಜಾರಿನ ವಿಷಯ ಎಂದರೆ ಅದರಲ್ಲಿ ಮೂರು ಹುಡುಗರು ನಾನು ಆ ಊರಿನಿಂದ ಬಂದ ಮರುದಿನವೇ ಶಾಲೆಯನ್ನು ಬಿಟ್ಟು ಅದೇ ಸಮಾಜ ಘಾತುಕ ಕೆಲಸದಲ್ಲಿ ತೊಡಗಿ ಬಿಟ್ಟಿದ್ದರು. ಯಾಕ್ರಪ್ಪ ಹೀಗೆ ಮಾಡಿದಿರೆಂಬ ನನ್ನ ಪ್ರಶ್ನೆಗೆ ಅವರು ಹೇಳಿದ್ದು "ಸರ್ ನಾವು ಶಾಲೆಗೆ ಬರುತ್ತಿದ್ದುದೇ ನೀವು ಇದ್ದೀರಾ...ಅಂತ. ನಮ್ಮ ತಂದೆ ಯಾರು ಅಂತ ಗೊತ್ತಿಲ್ಲ ಸಾರ್ ನಮಗೆ... ಶಾಲೆಯಲ್ಲಿ ನಿಮ್ಮಲ್ಲೇ ನಾವು ನಮ್ಮ ತಂದೆ-ತಾಯಿಯನ್ನು, ಗುರುಗಳನ್ನು ಕಾಣುತ್ತಿದ್ದೆವು. ನೀವು ನಮ್ಮನ್ನು ಪ್ರೀತಿಯಿಂದ ಕಾಣುತ್ತಿದ್ದು,ನಾವು ಹೇಳದಿದ್ದರೂ ನಮ್ಮ ಮುಖ ನೋಡಿ ನೀವು ಊಟ ಮಾಡಿಲ್ಲ ಹೋಗ್ರಿ ಏನಾದರೂ ತಿನ್ನಿ ಎಂದು ಅಡುಗೆ ರೂಂ ಗೆ ಕಳುಹಿಸುತ್ತಿದ್ದುದು, ಎರಡರೆಡು ಲೋಟ ಹಾಲು ಕುಡಿಸುತ್ತಿದ್ದುದು,ಪ್ರೀತಿಯಿಂದ ಮುಟ್ಟಿ ಮಾತನಾಡುಸುತ್ತಿದ್ದ ರೀತಿಗೆ ನಾವು ಶಾಲೆಗೆ ಬರುತ್ತಿದ್ದೆವು. ಈಗ ನೀವೇ ಶಾಲೆಯಲ್ಲಿ ಇಲ್ಲ ಅಂದ ಮೇಲೆ ನಮಗೆ ಆ ಶಾಲೆಯೇ ಬೇಡ... ಅದಕ್ಕೆ ನಾವು ಶಾಲೆಗೆ ಹೋಗ್ಲಿಲ್ಲ.."ಎಂದರು... ಒಂದು ಕ್ಷಣ ನನ್ನ ಎದೆಗೆ ಗರ ಬಡಿದಂತಾಯಿತು. ಮೂರು ಮಕ್ಕಳ ಜೀವನವೇ ನಾಶ ಆಯಿತು. ಆ ಮಕ್ಕಳು ಪುನಃ ಅದೇ ಕಳ್ಳತನ, ಕಿಡಿಗೇಡಿತನದಲ್ಲೇ ಈಗ ಕಾಲಕಳೆಯುತ್ತಿದ್ದಾರೆ. ಈ ತರ ಅದೆಷ್ಟೋ ವಿದ್ಯಾರ್ಥಿಗಳು ಮನೆಯಲ್ಲಿ ಇಲ್ಲದ ಪ್ರೀತಿಯ ಭಾವನೆಯನ್ನು ಶಿಕ್ಷಕ /ಶಿಕ್ಷಕಿಯರಲ್ಲಿ ಹುಡುಕಿ ಶಾಲೆಗೆ ಬರುತ್ತಿರುವುದು ಸುಳ್ಳಲ್ಲ...ಈ ಶಿಕ್ಷಕನ ಸ್ಥಳದಲ್ಲಿ ಕೃತಕ ಬುದ್ಧಿಮತ್ತೆಯ ಶಿಕ್ಷಕ(AI) ಬಂದರೆ ಇಂತಹ ಮಕ್ಕಳನ್ನು ಭಾವನಾತ್ಮಕವಾಗಿ ಅದು ಮುಟ್ಟಬಹುದೇ??? ನೋವು, ಹಸಿವು ನಲಿವುಗಳ ಪರಿಚಯವೇ ಇಲ್ಲದಂತದ್ದು ಇತರರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ?? ಇಂಥ ಮಕ್ಕಳನ್ನು ಇದು ಪ್ರೀತಿಯಿಂದ ಗೆಲ್ಲಬಹುದೇ???ಇದು ನಮ್ಮ ಕನಿಷ್ಠ ನಿರೀಕ್ಷೆಗೂ ನಿಲುಕಲು ಅಸಾಧ್ಯವಾಗಿದೆ.
2. ಕಲಿಕೆಯಲ್ಲಿ ಮನೋವಿಜ್ಞಾನದನ್ವಯದ ಕೊರತೆ:
ಬೋದನೆ ಮತ್ತು ಕಲಿಕೆ ನಿಂತಿರುವುದೇ ಮನೋವಿಜ್ಞಾನದ ತಳಹದಿಯ ಮೇಲೆ.ಶಿಕ್ಷಕರು ಮಕ್ಕಳಿಗೆ ಭೋದಿಸಲು ಶೈಕ್ಷಣಿಕ ಮನೋವಿಜ್ಞಾನದ ಅರಿವು ಬಹಳ ಮುಖ್ಯವಾಗಿದೆ. ಏಕೆಂದರೆ ಇದು ಕಲಿಕಾರ್ಥಿಯನ್ನು ಮತ್ತು ಕಲಿಕೆಯನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ
ಕಲಿಕೆಯ ಪರಿಸರಗಳು, ಸಾಮಾಜಿಕ ಅಂಶಗಳು, ವಿದ್ಯಾರ್ಥಿಗಳ ಪ್ರೇರಣೆ, ವಿದ್ಯಾರ್ಥಿಗಳು ಹೇಗೆ ಕಲಿಯುತ್ತಾರೆ ಎಂಬುದರ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಶೈಕ್ಷಣಿಕ ಮನೋವಿಜ್ಞಾನ ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಇದು ಅವರಿಗೆ ಹೆಚ್ಚು ಪರಿಣಾಮಕಾರಿ ಪಾಠ ಯೋಜನೆಗಳು ಮತ್ತು ತರಗತಿಯ ಅನುಭವಗಳನ್ನು ವಿನ್ಯಾಸಗೊಳಿಸಲು ಸಹಾಯ ಮಾಡುತ್ತದೆ.ಕಲಿಕೆಯ ಅಗತ್ಯಗಳನ್ನು ಗುರುತಿಸಿ ಶೈಕ್ಷಣಿಕ ಮನೋವಿಜ್ಞಾನವು ಮಕ್ಕಳ ವಿಶಿಷ್ಟ ಕಲಿಕೆಯ ಅಗತ್ಯಗಳು ಮತ್ತು ಸಾಮರ್ಥ್ಯಗಳನ್ನು ಗುರುತಿಸಲು ಮತ್ತು ಪರಿಹರಿಸಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಇದು ವೈಯಕ್ತಿಕ ಸಾಮರ್ಥ್ಯಗಳು ಮತ್ತು ಸಮಸ್ಯೆಗಳಿಗೆ ಸೂಚನೆಯನ್ನು ಹೊಂದಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.ಶೈಕ್ಷಣಿಕ ಅನುಭವಗಳನ್ನು ನೀಡುವ ಶೈಕ್ಷಣಿಕ ಮನೋವಿಜ್ಞಾನವು ಕಲಿಕೆಯನ್ನು ಅಳೆಯುತ್ತದೆ. ವಿದ್ಯಾರ್ಥಿಗಳ ಪ್ರೇರಣೆಯನ್ನು ಹೆಚ್ಚಿಸಿ,ಅವರಿಗೆ ಶೈಕ್ಷಣಿಕ ಅನುಭವಗಳನ್ನು ರಚಿಸಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಅನೇಕ
ತಂತ್ರಗಳನ್ನು ಯೋಜಿಸಿ ಮತ್ತು ಕಾರ್ಯಗತಗೊಳಿಸಿ ಶೈಕ್ಷಣಿಕ ಮನೋವಿಜ್ಞಾನವು ಬೋಧನೆ ಮತ್ತು ಕಲಿಕೆಯ ಗುಣಮಟ್ಟದ ಮೇಲೆ ಪ್ರಭಾವ ಬೀರುವ ಮುಖ್ಯ ಅಂಶಗಳನ್ನು ಗುರುತಿಸಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿಯಾಗಿ ಸಹಾಯಮಾಡುತ್ತದೆ. ಮಕ್ಕಳ ಕಲಿಕೆಗೆ ಅಗತ್ಯ ತಂತ್ರಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಇದು ಅವರಿಗೆ ಸಹಾಯ ಮಾಡುತ್ತದೆ. ಈ ಎಲ್ಲಾ ಮಾಹಿತಿ ಆ AI ಗೆ ಇರಬಹುದು. ಆದರೆ ಅದನ್ನು ಮಕ್ಕಳನ್ನು ಪ್ರಾಯೋಗಿಕವಾಗಿ ಮನೋವಿಜ್ಞಾನದ ನೆಲೆಯಲ್ಲಿ ಅರ್ಥಮಾಡಿಕೊಂಡು ಮಕ್ಕಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಮಾನವೀಯ ನೆಲೆಯಲ್ಲಿ ಈ ಮೇಲಿನ ಎಲ್ಲಾ ಅಂಶಗಳನ್ನು ಕಾರ್ಯಗತಗೊಳಿಸಲು Ai ಗಳಿಗೆ ಸಾದ್ಯವಿಲ್ಲ.
3.ಶಿಸ್ತು ಮತ್ತು ನೈತಿಕತೆ:
ಆಧುನಿಕ ಶಿಕ್ಷಣದ ಬಹುದೊಡ್ಡ ಲೋಪ ಎಂದರೆ ಮಕ್ಕಳಲ್ಲಿ ಶಿಸ್ತು ಮತ್ತು ನೈತಿಕತೆಯು ಸಮಾಜ ಅಪೇಕ್ಷಿತ ಮಟ್ಟದಲ್ಲಿ ಇಲ್ಲದುದು.ಕಳೆದ ಎರಡು ದಶಕಗಳಿಂದ ಮಕ್ಕಳಲ್ಲಿ ಅನಪೇಕ್ಷಿತ ವರ್ತನೆಗಳೇ ತುಂಬಿ ತುಳುಕುತ್ತಿರುವಾಗ ಈ ಕೃತಕ ಬುದ್ಧಿಮತ್ತೆ ಗಳು ಈ ಶಿಸ್ತನ್ನು ಅದ್ಹೇಗೆ ಮೂಡಿಸುತ್ತಾವೆ?ಒಂದು ವೇಳೆ ಮಕ್ಕಳು ಶಿಸ್ತನ್ನು ಮೀರಿ ವರ್ತಿಸಿದರೆ ತತ್‌ಕ್ಷಣದಲ್ಲಿ ಅದರ ಪ್ರತಿಕ್ರಿಯೆ ಏನು ಮತ್ತು ಹೇಗಿರಲಿದೆ? ಮಕ್ಕಳಲ್ಲಿ ಶಿಸ್ತನ್ನು ಯಾವ ಮಟ್ಟದಲ್ಲಿ ಸ್ಥೀರಿಕರಣ ಮಾಡುತ್ತಾವೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.ಮಕ್ಕಳಿಗೆ AI ಒಂದಷ್ಟು ಮೌಖಿಕವಾಗಿ ಹೇಳಬಹುದಾದರೂ ಶಿಸ್ತಿನ ಬಹುತೇಕ ಸಂಗತಿಗಳು ನಿತ್ಯ ಜೀವನದ ವಿವಿಧ ಸಂದರ್ಭಗಳಲ್ಲಿ ಮಗು ಮಾದರಿ ಎಂದೆನಿಸಿಕೊಳ್ಳುವವರಲ್ಲಿ ಇರಬಹುದಾದ ವ್ಯಕ್ತಿತ್ವವನ್ನು ನೋಡಿ ಅನುಕರಿಸುವುದರಿಂದ ಶಿಸ್ತು ಮೈಗೂಡಿಸಿಕೊಳ್ಳುದಾಗಿರುತ್ತದೆ. ಸಾಮಾಜಿಕ ಜೀವನದ ಶಿಸ್ತು ಕೃತಕ ಬುದ್ಧಿಮತ್ತೆ ಗಳಲ್ಲಿ ನಾವು ಕಾಣಲಾಗುವುದಿಲ್ಲ. ಶಿಕ್ಷಕರ ಎದುರೇ ಹುಡುಗ-ಹುಡುಗಿಯರು ಅನುಚಿತ ವರ್ತನೆ ಮಾಡುವ ಇಂದಿನ ದಿನಗಳಲ್ಲಿ ಅದು ಒಂದು ಯಂತ್ರ ಅನಿಸಿದರೆ ಇನ್ನೂ ಏನೇನು ಮಾಡಬಹುದೊ ಗೊತ್ತಿಲ್ಲ. ಇಂತವುಗಳನ್ನು ಗುರುತಿಸಿ ಅಭಿವೃದ್ಧಿಗೊಳ್ಳಲು ಇನ್ನೂ ಅನೇಕ ದಶಕಗಳು ಬೇಕಾಗಬಹುದು.ಒಂದು ವೇಳೆ ಅದು ಮಶೀನ್ ಅಂತ ಮಕ್ಕಳಿಗೆ ಅನಿಸಿ ಜವಾಬ್ದಾರಿ ಮರೆತು ಸ್ವೇಚ್ಚಾಚಾರದಿಂದ ವರ್ತಿಸಬಹುದಾದ ಸಾಧ್ಯತೆ ನಿಶ್ಚಳವಾಗಿವೆ.
4.ಸೃಜನಶೀಲತೆ ಮತ್ತು ಅನನ್ಯತೆಗೆ ಅವಕಾಶಗಳು ಇಲ್ಲವಾಗಬಹುದು...
ಕೃತಕ ಬುದ್ಧಿಮತ್ತೆ ಗಳಿಗೆ ಮುಂಗಡವಾಗಿ ಗರಿಷ್ಠ ದತ್ತಾಂಶವನ್ನು ದಾಖಲೀಕರಣ ಮಾಡಿರುವುದರಿಂದ ಒಂದು ವೇಳೆ ಮನುಷ್ಯ ಅದರ ದತ್ತಾಂಶ ಮೀರಿ ಸೃಜನಶೀಲವಾಗಿ/ unique ಆಗಿ ಯೋಚಿಸಿದರೆ ಅದನ್ನು ಬೆಂಬಲಿಸುವ ಅರ್ಹತೆ Ai ಗೆ ಇಲ್ಲದಿರುವ, ಮಗುವಿನ ನಾವೀನ್ಯ ಸೃಜನಾತ್ಮಕ ಸಾಧನೆಗೆ ಇದು ಅಡ್ಡಿಯಾಗಬಹುದು. ಜಗತ್ತಿನಲ್ಲಿ ಮರಕ್ಕಿಂತ ಮರದೊಡ್ಡದು. ತಲೆಗಿಂತ ತಲೆ ವಿಭಿನ್ನವಾದದು. ಯಾರೋ ಕೆಲವು ಸ್ವಯಂ ಘೋಷಿತ ಬುದ್ದಿವಂತರು ಮಾತ್ರ ಸೇರಿ AI ಗೆ ದತ್ತಾಂಶವನ್ನು ತುಂಬಿದ ಮಾತ್ರಕ್ಕೆ ಅದಕ್ಕಿಂತ ಬುದ್ದಿವಂತ ಮಾನವರು,ಅನುಭವಗಳು ಇಲ್ಲವೇ ಇಲ್ಲ ಎಂದು ನಂಬುವುದು ಮೂರ್ಖತನದ ಪರಮಾವಧಿ ಎನ್ನಬಹುದು. ಆದರೆ ಇದು ತನ್ನ ಜ್ಞಾನದ ಮಿತಿಯಲ್ಲೇ ವಿದ್ಯಾರ್ಥಿಗಳನ್ನು ಹಿಡಿದಿಡುತ್ತದೆ.
5.ಗೃಹಪಾಠಗಳು ಮತ್ತು ಹಿಮ್ಮಾಹಿತಿಗಳು:
ಶಿಕ್ಷಕರು ಗೃಹಪಾಠಗಳನ್ನು ನೋಡಿ ಉತ್ತಮವಾಗಿದ್ದರೆ ಪ್ರಶಂಸಿಸುವ,ಸರಿಯಾಗಿ ಮಾಡದಿದ್ದರೆ ಯಾವ ಹಂತದಲ್ಲಿ ಆ ಮಗು ಎಡವಿದೆಯೋ ಅಲ್ಲಿಂದಲೇ ತಿದ್ದುವ ಕೆಲಸ ಈಗ ಆಗುತ್ತಿದೆ. ಆದರೆ AI ಗಳುಯಾವ ಹಂತದಲ್ಲಿ ತಪ್ಪುಮಾಡಿದ್ದಾರೋ ಅದೇ ಹಂತದಿಂದಲೇ ತಪ್ಪು ತಿದ್ದುವ ಕೆಲಸ ಮಾಡದಿರುವ ಸಾಧ್ಯತೆಗಳು ಇವೆ. ಸಾಮಾನ್ಯವಾಗಿ ಇದು ಪುನಃ ಮೊದಲಿನಿಂದಲೂ ಪುನಾರವರ್ತನೆ ಮಾಡುವವು. ಇಲ್ಲಿ ಸಮಯ ಮತ್ತು ಮಗುವಿನ ಆಸಕ್ತಿಯ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಇದು ಒಂಥರಾ ನೀವೆಲ್ಲಾ ಹಣ withdrawal ಮಾಡಲು ATM ಗೆ ಹೋದಾಗ ಆ ATM processing ರೀತಿ ಒಳಗೊಂಡಿರುತ್ತದೆ. ಹಣ ಇಲ್ಲ ಅಂತ ಅದು ಮೊದಲೇ ತಿಳಿಸದೇ ಪೂರಾ ಪ್ರಕ್ರಿಯೆ ಮುಗಿಯುವವರೆಗೂ ನಾವು ಅದರೊಂದಿಗೆ ವ್ಯವಹರಿಸಿದ ಮೇಲೆ ಕೊನೆಯಲ್ಲಿ ಅದರ ತೀರ್ಮಾನ ತಿಳಿಸುವಂತೆ ಇಲ್ಲೂ ಆಗಬಹುದು.ಈ ತೆರನಾದ ಸಂದರ್ಭಗಳು ಒಂದೆರಡು ಬಾರಿ ಮಗು ಎದುರಿಸಿದರೆ ಕಲಿಯಲು ನಿರಾಸಕ್ತಿ ಹೊಂದುವ ಸಾದ್ಯತೆ ಹೆಚ್ಚಿರುತ್ತದೆ.
6.ಕ್ರೀಡೆ,ನೃತ್ಯ,ನಾಟಕ ,ಸಂಗೀತ, ಯೋಗ-ಚಿತ್ರಕಲೆ:
ಮಾನವ ಅಥ್ಲೆಟ್ ಗಳಿಗಿಂತ ಹೆಚ್ಚಿನ ಕಾರ್ಯಕ್ಷಮತೆ ತೋರುವ Ai ಗಳು ಇದ್ದಾವೆ. ಆಯ್ದ ಕೆಲವು ವಿಷಯಗಳಲ್ಲಿ ಒಂದಷ್ಟು ಕಲಿಕಾರ್ಥಿಗಳಿಗೆ ಸಹಾಯಮಾಡುಬಹುದಾದ AI ಗಳು ಆಟಗಳನ್ನು, ಯೋಗಾಸನಗಳನ್ನು,ಕರಾಟೆ ಭಂಗಿಗಳನ್ನು,ಜಿಮ್ನಾಸ್ಟಿಕ್ಸ್,ನೃತ್ಯ, ನಾಟಕಾಭಿನಯಗಳು ಇತರ ಅಂಶಗಳನ್ನು ಸ್ವತಃ ಮಾಡಿ ತೋರಿಸಿದರೆ ಮಾತ್ರ ಕಲಿಯಬಹುದಾದ ಅವಕಾಶಗಳು ಇರುವುದರಿಂದ ಇವೆಲ್ಲವುಗಳನ್ನು ಸಮರ್ಥವಾಗಿ ನಿಭಾಯಿಸಲು ಕೃತಕ ಬುದ್ಧಿಮತ್ತೆ ಗಳಿಗೆ ಆಗುವುದಿಲ್ಲ.ಸಂಗೀತ,ನಾಟಕ,ನೃತ್ಯದ ದತ್ತಾಂಶವನ್ನು ಅದು ದಾಖಲಿಸಿಕೊಂಡಿರಬಹುದಾದರೂ ಮೌಖಿಕವಾಗಿ ರಾಗ- ಸ್ವರಗಳ ಆಲಾಪ ಮಾನವ ಸಂಪನ್ಮೂಲದಷ್ಟು ಸಂಪನ್ನವಾಗಿರಲು ಸಾಧ್ಯವಿಲ್ಲ.
7.ಮಕ್ಕಳ ಕೈ ಬರಹಗಳ ಸರಿ ತಪ್ಪುಗಳನ್ನು ತಿದ್ದುವುದು:
ಮಕ್ಕಳ ಕೈ ಬರಹಗಳನ್ನು ಡಿ-ಕೋಡಿಂಗ್ ಮಾಡಿಕೊಳ್ಳಲು Ai ಶಕ್ತವಾದರೂ ಅಕ್ಷರಗಳನ್ನು ಬರೆಯಲು ಓದಲು ಬಾರದ ಆರಂಭಿಕ ತರಗತಿಗಳಿಗೆ ಇದು ಸೂಕ್ತವಾಗುವುದಿಲ್ಲ.ಮತ್ತು ಮಾನವ ಶಿಕ್ಷಕನಂತೆ muscular strength ಬಳಸಿ ಬರೆಯಲು ಶಕ್ತವಾಗುವ ಸಾಧ್ಯತೆ ತೀರ ಕ್ಷೀಣವಾಗಿರುತ್ತದೆ.ಆರಂಭಿಕ ಮಕ್ಕಳ ವಯಸ್ಸಿನ ಸಾಮರ್ಥ್ಯಕ್ಕೆ ಇಳಿದು ಕಲಿಸುವಂತ ಕೆಲಸವಂತೂ ತೀರಾ ಅಸಾಧ್ಯ ಎನ್ನಬಹುದು.ಇವು ಬರವಣಿಗೆಯ ಬದಲಾಗಿ ಕೇವಲ ವೀಡಿಯೋ ಆಡಿಯೋ ಸೆಲ್ಪ್ ರೆಕಾರ್ಡಿಂಗ್ ಮಾಡಿಕೊಳ್ಳಲು ಶಕ್ತವಾಗಿರುತ್ತವೆ ಆದರೆ ಬರವಣಿಗೆಯ ಕೌಶಲಕ್ಕೆ ಆದ್ಯತೆ ಕಡಿಮೆ..ಈಗಾಗಲೇ ಬರೆಯುವ ಕೌಶಲವೇ ಕಡಿಮೆಯಾಗುತ್ತಿರುವ ದಿನಮಾನಗಳಲ್ಲಿ ಕೃತಕಬುದ್ದಿ ಮತ್ತೆಗಳು ಕೈ ಬರಹಗಳನ್ನು ನಿರ್ಲಕ್ಷಿಸುವ ಅವಕಾಶಗಳು ಹೇರಳವಾಗಿವೆ.
8.ಆಪ್ತ ಸಮಾಲೋಚನೆ:
ನಮ್ಮ ಮಕ್ಕಳಿಗೆ ಶಿಕ್ಷಣದಷ್ಟೇ ಅಗತ್ಯವಾಗಿ ಅಗತ್ಯವಾದ ಕೆಲವು ಸಂದರ್ಭಗಳಲ್ಲಿ ಬಹುಮುಖ್ಯವಾಗಿ ಆಪ್ತ ಸಮಾಲೋಚನೆಯ ಅನಿವಾರ್ಯತೆ ಇದೆ. ನಮ್ಮಲ್ಲಿ ಎಷ್ಟೋ ಮಕ್ಕಳ ತಂದೆ ತಾಯಂದಿರ ಸಾಂಸಾರಿಕ ಜೀವನದ ಗಲಾಟೆಗಳು,ಕೇಸ್ ಗಳು,ಕುಡಿತದಂತಹ ಅನೇಕ ಸಾಮಾಜಿಕ ಸಮಸ್ಯೆಗಳ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಅವರ ಬದುಕೇ ಕತ್ತಿಯ ಮೇಲೆ ಸಾಗುತ್ತಿರುತ್ತದೆ. ಇಂತಹ ಅದೆಷ್ಟೋ ಮಕ್ಕಳು ಶೋಷಣೆ,ದೌರ್ಜನ್ಯ,ಲೈಂಗಿಕವಾಗಿ ದುರ್ಬಳಕೆ,ಬಾಲ್ಯ ವಿವಾಹದಂತಹ ಕೂಪಕ್ಕೆ ಬಿದ್ದು ಅವರಜೀವನವೇ ಅಂಧಕಾರದಲ್ಲಿ ಮುಳುಗಿರುವ ಸಾವಿರಾರು ಉದಾಹರಣೆ ನಮ್ಮ ಮುಂದೆ ಇದ್ದಾವೆ. ಇಂತಹ ಮಕ್ಕಳಿಗೆ ಶಿಕ್ಷಣಕ್ಕಿಂತ ಮೊದಲು ಜೀವ ಉಳಿಸಿಕೊಂಡು ಸುರಕ್ಷಿತವಾಗಿ ಬದುಕುವ ಆತ್ಮವಿಶ್ವಾಸವನ್ನು ನೀಡುವ ಅವರೊಂದಿಗೆ ವಿಶ್ವಾಸನೀಯವಾಗಿ, ಆತ್ಮೀಯವಾಗಿ ಸಮಾಲೋಚಿಸುವ ಅಗತ್ಯ ಇದೆ. ಅಂತಹ ಮಕ್ಕಳನ್ನು ಕೃತಕಬುದ್ದಿ ಮತ್ತೆಗಳು ನಿರ್ವಹಿಸುವುದರ ಮೇಲೆ ಯಾವುದೇ ವಿಶ್ವಾಸ ಇಲ್ಲ. ಒಂದು ವೇಳೆ ಇಂತಹ ಗೌಪ್ಯವಾಗಿ ಇಡಬೇಕಾದಂತಹ ವಿಷಯಗಳು ವೀಡಿಯೋ/ಆಡಿಯೋ ರೆಕಾರ್ಡಿಂಗ್ ಆಗಿ ಮೂರನೇ ವ್ಯಕ್ತಿಗಳಿಗೆ ತಲುಪಿ ದೌರ್ಜನ್ಯಕ್ಕೆ ಒಳಗಾದವರ ಬದುಕನ್ನು ಇನ್ನಷ್ಟು ಬರ್ಬರ ಸ್ಥಿತಿಗೆ ತಲುಪಬಹುದು.
9.ಶಕ್ತಿ ಮತ್ತು ಸಂಪನ್ಮೂಲಗಳ ಅತಿಯಾದ ಬಳಕೆ:
ಪ್ರತಿದಿನ 7-8 ಗಂಟೆಗಳ ಕಾಲ ಬಳಸುವ ಲ್ಯಾಪ್‌ಟಾಪ್ ಬಳಕೆ ಮಾಡುವುದರಿಂದ 15-300 kWh ವಿದ್ಯುತ್ ಬಳಕೆ ಆದರೆ 44-88 kg ಕಾರ್ಬನ್ ಡೈಆಕ್ಸೈಡ್ ಪರಿಸರಕ್ಕೆ ಬಿಡುಗಡೆಯಾಗುತ್ತಿದೆ. ಇನ್ನೂ ಕೃತಕ ಬುದ್ಧಿಮತ್ತೆ ವ್ಯಾಪಕವಾಗಿ ಬಳಕೆಯಾದರೆ ಈಗಾಗಲೇ ಅತೀ ದೊಡ್ಡ ಪ್ರಮಾಣದಲ್ಲಿ gadgets ಗಳಿಗೆ ವಿದ್ಯುತ್ ಬಳಕೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ವಿದ್ಯುತ್ ದುಬಾರಿ ಬೆಲೆ ತೆರಬೇಕಾಗುವುದು. ನೀರು ಅತ್ಯಂತ ದುಬಾರಿ ಬೆಲೆಯ ವಸ್ತು ಆಗುವುದು. ಅಲ್ಲದೆ ಕಾರ್ಬನ್ ಡೈಆಕ್ಸೈಡ್ ವ್ಯಾಪಕವಾಗಿ ಹೆಚ್ಚಿ ಜಾಗತಿಕ ತಾಪಮಾನ ಹೆಚ್ಚಿ ಆಹಾರ ಬೆಳೆಗಳ ಇಳುವರಿ ಕಡಿಮೆಯಾಗಬಹುದು. ಈಗಿನ ಯುವ ಜನರಲ್ಲಿ ಇವೆಲ್ಲಾ ಕಾರಣಗಳಿಂದ ಸಂತಾನೋತ್ಪತ್ತಿ fertility ಕಡಿಮೆ ಆಗುತ್ತಾ, ಕ್ಯಾನ್ಸರ್ ಹೃದಯಾಘಾತದಂತಹ ಕಾಯಿಲೆಗಳು ಹೆಚ್ಚಾಗಬಹುದು. ಇವೆಲ್ಲಾ ಸಹಜವಾಗಿ ಭವಿಷ್ಯದಲ್ಲಿ ಈ ಭೂಮಿ ಮೇಲೆ ಜನಿಸುವ ಮಕ್ಕಳಿಗೆ ಬೋನಸ್ ಆಗಿ ಎಲ್ಲರಿಗೂ ಸಿಗುವವು.
10.ವಿದ್ಯಾರ್ಥಿ-ಶಿಕ್ಷಕ-ಸಮುದಾಯದ ಸಂಬಂಧ ಬೆಸೆಯುವಲ್ಲಿ ವಿಫಲ:
ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಪ್ರತಿದಿನ ಉಭಯ ಕುಶಲೋಪರಿಗಳನ್ನು ಮಾತಾಡುತ್ತಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಸಂಬಂಧ ಬೆಸೆಯುತ್ತದೆ. ಅಲ್ಲದೇ ಶಿಕ್ಷಕರು ಪೋಷಕರೊಂದಿಗೆ ಮಕ್ಕಳ ಕಲಿಕೆ ಪ್ರಗತಿಯ ಬಗ್ಗೆ ಮಾತನಾಡುವುದರಿಂದ ಅಲ್ಲಿ ತ್ರಿಕೋನ ಸಬಂಧವೇ ರೂಪುಗೊಂಡಿರುತ್ತದೆ. ಅವರು ಪರಸ್ಪರ ಬದುಕಿರುವವರೆಗೂ ಅವರು ಮಾತಾಡಿಕೊಂಡು ಹಬ್ಬ ಮದುವೆಗಳಂತಹ ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಎಲ್ಲಿಯಾದರೂ ಸಿಕ್ಕರೆ ಸಂತೋಷದಿಂದ/ದುಃಖ ದಿಂದ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಇಂತಹ ಸಂಬಂಧಗಳಿಗೆ ಈ ಕೃತಕಬುದ್ದಿ ಮತ್ತೆಗಳು ತಿಲಾಂಜಲಿ ಹಾಡಬಹುದು.ಪರಸ್ಪರರಿಗೆ ಯಾವುದೇ ಸಂಬಂಧಗಳು ಇರುವುದಿಲ್ಲ. ಉಳಿಯುವುದೂ ಇಲ್ಲ.
11.ಬಾಲಕ-ಬಾಲಕಿಯರ ಹದಿಹರೆಯದ ತಳಮಳಗಳಿಗೆ ಮಾತೃಸ್ಪರ್ಶೀ ಮಾರ್ಗದರ್ಶನದ ಕೊರತೆ:
ಬಾಲ್ಯಾವಸ್ಥೆಯ ದಾಟಿ ಕೌಮಾರ್ಯ ಹೊಸ್ತಿಲಲ್ಲಿರುವ ಹುಡುಗಿಯರ ದೇಹದಲ್ಲಾಗುವ ದೈಹಿಕ ಬೆಳವಣಿಗೆಗಳು,ಋತುಮತಿ,ಋತುಚಕ್ರದಂತಂಹ ಕೆಲವು ಕೌತುಕದ ಪ್ರಶ್ನೆಗಳು, ಮುಜುಗರದ ಸಂಗತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಅನ್ಯಲಿಂಗದ ಎದುರು ಕೆಲವು ಪದಗಳನ್ನು ಬಳಸಲು ಸಮಾಜ ಅಂಜುತ್ತಿದೆ.ಅಂತಹ ಸಂದರ್ಭದಲ್ಲಿ ನೇರವಾಗಿ ಈ AI ಲಿಂಗತ್ವ,ಗುಪ್ತಾಂಗಗಳಂತಹ ಪದಗಳನ್ನು ಮುಚ್ಚುಮರೆಯಿಲ್ಲದೆ ಗಂಡುಮಕ್ಕಳ ಎದುರು ಬಳಸಿದರೆ ಹೆಣುಮಕ್ಕಳಿಗೆ ಅವಮಾನ ಆಗಿ ಸಮಾಜದಲ್ಲಿ ತಲೆತಗ್ಗಿಸುವಂತಾಗುತ್ತದೆ.ಇಂತಹ ಪ್ರಸಂಗಗಳಿಂದ ಶಾಲೆಯಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿರುತ್ತದೆ.
12.ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥಿತಿಗನುಗುಣವಾಗಿ ಭೋದಿಸಲು ವಿಫಲ:
ಕೃತಕ ಬುದ್ಧಿಮತ್ತೆಗಳು ದತ್ತಾಂಶ ಮತ್ತು ಮೌಖಿಕ ಅಭಿವ್ಯಕ್ತಿಯನ್ನು ಹೊಂದಿರುವ ಇವು ವಿದ್ಯಾರ್ಥಿಯ ಮುಖ ನೋಡಿ face reading ಮಾಡುವ ಅವಕಾಶಗಳು ಇರುವುದಿಲ್ಲ.ಮಗು ಹಸಿವು,ದುಃಖ ,ಬೇಜಾರಿನಲ್ಲಿ ಇದ್ದಾಗ ಅವರನ್ನು ಸಂತೈಸಿ ಪಾಠಕ್ಕೆ/ಕಲಿಕೆಗೆ ಅಣಿಗೊಳಿಸುವ ಮಾನವೀಯ ಗುಣಗಳು ಕೃತಕ ಬುದ್ಧಿಮತ್ತೆ ಯಲ್ಲಿ ನೀರೀಕ್ಷಿಸುವುದು ಅಸಾಧ್ಯ...
13.ತರಗತಿ ಕೋಣೆಯ ಹೊರಗಡೆ...
ಶಾಲಾ ತರಗತಿಕೋಣೆಯನ್ನು ಹೊರತುಪಡಿಸಿ ಹೊರಗಿನ ಪ್ರಪಂಚದಲ್ಲಿ ಭಾಗಶಃ ಕಲಿಯಬೇಕಾದದ್ದು ತಿಳಿಯಬೇಕಾದದ್ದು ಇದೆ.ಶಾಲೆಯಲ್ಲಿ ಕಲಿಯುವುದು ಕಡಿಮೆ ಪ್ರಕೃತಿಯಲ್ಲಿ ಕಲಿಯುವುದು ಅಧಿಕ.ಹಾಗೆ ಕೆಲವು ಪರಿಚಿತ ಪ್ರಸಿದ್ಧ ಸ್ಥಳಗಳ ದತ್ತಾಂಶವನ್ನು Ai ಇಟ್ಟುಕೊಂಡಿರಬಹುದಾದರೂ ಅಪರಿಚಿತ ಪ್ರದೇಶದಲ್ಲಿ ಅದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ವಿಚಾರದಲ್ಲಿ ಅದಕ್ಕೆ ಸಾಧ್ಯವಾಗದಿರಬಹುದು. ಉದಾಹರಣೆಗೆ ಯಾವುದೋ ಒಂದು ಶಾಲೆಯ ಪಕ್ಕದಲ್ಲಿ ಇರುವ ಬೆಟ್ಟವನ್ನು ಸ್ವತಂತ್ರವಾಗಿ ಹತ್ತಿ ಮಕ್ಕಳಿಗೆ ಮಾರ್ಗದರ್ಶನ ಮಾಡುವ ಹಂತಕ್ಕೆ ಅದು ಕೆಲಸ ಮಾಡದು. ಮಾಡಬೇಕಾದರೆ ಅದರ ದತ್ತಾಂಶವನ್ನು ಮೊದಲೇ feed ಮಾಡಿ ಅದನ್ನು ಕರೆದುಕೊಂಡು ಹೋಗಲು ಮತ್ತೋರ್ವರು ಬೇಕಾಗಬಹುದು..ಇದು ಪ್ರತಿ ಹಂತದಲ್ಲೂ ದಿನ ದಿನಕ್ಕೂ ನಿರ್ವಹಣೆ ಕಷ್ಟ..
14.ಆರ್ಥಿಕವಾಗಿ ವೆಚ್ಚದಾಯಕ:
ಇಂದಿನ ಒಂದು basic AI $6000 ಡಾಲರ್ ಇದೆ. ಅಂದರೆ ಇಂದಿನ ಭಾರತೀಯ ರುಪಾಯಿ ಯಲ್ಲಿ 3.90.000-00 ದಿಂದ 3.25.00000-(ಮೂರುಕೋಟಿ ಇಪ್ಪತ್ತೈದು ಲಕ್ಷ) ವೆಚ್ಚದ AI ಗಳು ಮಾರುಕಟ್ಟೆಯಲ್ಲಿ ಇದ್ದು ಅದರ ವಾರ್ಷಿಕ ನಿರ್ವಹಣೆಗೆ ಅದರ ಮೂಲ ಬೆಲೆಯ ಶೇ-15-20 ರಷ್ಟು ಪ್ರತ್ಯೇಕ ನಿರ್ವಹಣೆ ವೆಚ್ಚ ಇರುತ್ತದೆ.ಇದನ್ನು ಭರಿಸಲು ಸರ್ಕಾರಕ್ಕೆ ದುಬಾರಿ ಆಗುತ್ತದೆ. ಒಂದು ವೇಳೆ ಕೆಲ ಖಾಸಗಿ ಶಾಲೆಗಳು ವೆಚ್ಚವನ್ನು ಭರಿಸಿ ನಿರ್ವಹಣೆ ಮಾಡಿದರೂ ಪರೋಕ್ಷವಾಗಿ ಪೋಷಕರೇ ಇದರ ಬಡ್ಡಿ ಸಮೇತ ಮರು ಪಾವತಿಸಬೇಕಾಗಿರುವುದರಿಂದ ಆರ್ಥಿಕವಾಗಿ ಹೊರೆಯಾಗುವುದರಲ್ಲಿ ಎರಡು ಮಾತಿಲ್ಲ.ಇನ್ನೂ ನಮ್ಮ ಸರ್ಕಾರಿ ಶಾಲೆಗಳಲ್ಲಿ ನಿರ್ವಹಣೆಯ ವಿಚಾರಕ್ಕೆ ಬಂದರೆ ಸದ್ಯ ನಮ್ಮ ಶಾಲೆಗಳಲ್ಲಿ CALC ಅಡಿ ಪೂರೈಕೆಯಾದ ಕಂಪ್ಯೂಟರ್ ಗಳನ್ನು ಆನ್ ಮಾಡಲಾಗದೇ ದೂಳೆದ್ದು ಮೂಲೆ ಸೇರಿದ್ದಾಗಿದೆ. ಇನ್ನೂ ಅಪರಿಚಿತ ತಂತ್ರಜ್ಞಾನದ AÍ ಗಳು ನಿರ್ವಹಣೆ ಕಾಣದೇ ಹೋಗಬಹುದು.
15. 24*7 ಶಿಕ್ಷಕನಾಗಿರಲು ಸಾಧ್ಯವೇ??
ಶಿಕ್ಷಕರು ಸಾಯುವವರೆಗೂ ಶಿಕ್ಷಕರಾಗಿಯೇ ಇರುತ್ತಾರೆ. ಆದರೆ ಕೃತಕ ಬುದ್ಧಿಮತ್ತೆ ಗಳು ಸ್ವಿಚ್ ಆನ್ ಮಾಡಿದಾಗ ಮಾತ್ರ ಶಿಕ್ಷಕರಾಗಿ ಪಾತ್ರ ಮಾಡಬಹುದು. ಆದರೆ ಜೀವವೇ ಶಿಕ್ಷಕ ನಾಗಿ ಇರವುದಿಲ್ಲ. ಕರ್ತವ್ಯವಲ್ಲದ ವೇಳೆಯಲ್ಲೂ ಯಾರದರೂ ಶಾಲೆಗೆ ಬಾರದ ಮಕ್ಕಳು ಕಂಡರೆ ಅಲ್ಲಿಯೇ ಅವರ ವಿಚಾರಣೆ ನಡೆಸಿ ಸಾಧ್ಯವಾದರೆ ಪೋಷಕರಿಗೂ ತಿಳಿಸಿಬರುವರು. ಅಥವಾ ಕಲಿಕೆಯ ಬಗ್ಗೆ ಕೇಳದಿದ್ದರೂ ಅಲ್ಲಿ ನಾನು ಮಧ್ಯ ಪ್ರವೇಶದ ಅವಶ್ಯಕತೆ ಇದೆ ಎಂದರೇ ತಾನಾಗಿಯೇ ಹೋಗಿ ಅಲ್ಲಿ ಅದರ ಬಗ್ಗೆ ತಿಳಿಸಿ ಬರುವರು.ಇದನ್ನು AI ಮಾಡಲು ಕಷ್ಟ ಸಾದ್ಯ.
16. AI ಗಳನ್ನು ದುಷ್ಕರ್ಮಿಗಳು ಮತ್ತು ಸಮಾಜ ಘಾತುಕ ಶಕ್ತಿಗಳು ನಿರ್ವಹಿಸಿದರೆ??
ತರಕಾರಿ ಕತ್ತರಿಸಲು,ಹಣ್ಣು ಕೊಯ್ಯಲು ಬಳಸುವ ಚಾಕುಗಳನ್ನು ಕೆಲವರು ಕೊಲ್ಲಲು ಬಳಸುವಂತೆ AI ಗಳು ನಿರ್ದೇಶಿತ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವುದರಿಂದ ಉಗ್ರರು,ಭಯೋತ್ಪಾದಕರು ಈ ತಂತ್ರಜ್ಞಾನವನ್ನು ದುರುದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಹೇರಳವಾಗಿದೆ. ಈ ನಿಟ್ಟಿನಲ್ಲಿ ಇಡೀ ರಕ್ಷಣಾ ವ್ಯವಸ್ಥೆಯೇ ಬುಡಮೇಲಾಗಿ ಅಪಾರ ಸಾವು ನೋವುಗಳಾಗಿ ಸಮಾಜವೇ ತಪ್ಪುದಾರಿಯಲ್ಲಿ ನಡೆಸಲು ಪ್ರೇರೇಪಣೆ ನೀಡಿದರೂ ಅಚ್ಚರಿ ಇಲ್ಲ.ಗೌಪ್ಯತೆ ಮತ್ತು ಇತರರ ಹಕ್ಕು ಸಂರಕ್ಷಣೆಯ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ.
17.ಕಲಿಸುವ ವಿಸ್ತರಣಾ ಮನೋಭಾವ:
ನಮ್ಮ ಶಿಕ್ಷಣ ಇಲಾಖೆಯಲ್ಲಿ ಕೆಲವು ವ್ಯಕ್ತಿಗಳು ತಾವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಮಾತ್ರವೇ ಅಲ್ಲದೇ ರಾಜ್ಯವಿಡೀ ಅವರು ಸಂಚಾರ ಮಾಡಿ ಕಾರ್ಯಗಾರ/ ತರಬೇತಿಗಳನ್ನು ನೀಡಿ ಆಯಾ ವಲಯ/ತಾಲ್ಲೂಕು ಸ್ಥಳಗಳಲ್ಲಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ತರಬೇತಿಗಳನ್ನು ಸ್ವಯಂಸೇವಕರಂತೆ ಹೋಗಿ ನೀಡಿ ಕೆಲಸ ಮಾಡವವರು ಇದ್ದಾರೆ. ನಿತ್ಯವೂ ಅವರು ಈಗಲೂ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಾರೆ. ಆದರೆ ಇಂತಹ ಇಚ್ಚಾಶಕ್ತಿಯ ಕೆಲಸಗಳು ಕೃತಕ ಬುದ್ಧಿಮತ್ತೆಗಳಿಂದ ಕಷ್ಟಕರ ಎನಿಸುತ್ತದೆ.ಇಲ್ಲಿ ಮಾನವ ಶಿಕ್ಷಕನಿಗೆ ಇರಬಹುದಾದ ಅರ್ಪಣಾ ಮನೋಭಾವ,ಗುರಿ,ಛಲಗಳು AI ಗೆ ಬರುವುದಿಲ್ಲ.ಒಂದೇ ಸಾಮರ್ಥ್ಯದ AI ಗಳನ್ನು ನಾವು ಬೇರೆ ಬೇರೆ ಸ್ಥಳಗಳಲ್ಲಿ ಬಳಸಬಹುದಾದರೂ ಮನುಷ್ಯನಂತೆ dedication ಇಂದ ಕರ್ತವ್ಯವನ್ನು ನಿರ್ವಹಿಸುವುದು ವಿರಳ..
18.ಅಸಹಾಯಕ ಸ್ಥಿತಿಗೆ ಜಗತ್ತು:
ಕೆಲವು ದಿನಗಳಹಿಂದೆ microsoft ನಲ್ಲಾದ ಒಂದು ತಾಂತ್ರಿಕ ದೋಷ ಇಡೀ ಜಗತ್ತಿನ online ಗೆ ಸಂಬಂಧಪಟ್ಟ ಎಲ್ಲಾ ವ್ಯವಹಾರಗಳು ನಿಂತು ಹೋಗಿ ಹಲವು ಗಂಟೆಗಳ ಕಾಲ ಜಗತ್ತೇ ತಲ್ಲಣಗೊಂಡಿತ್ತು. ಕೆಲವು ಗಂಟೆಗಳಲ್ಲಿ ಸಾವಿರಾರು ಕೋಟಿ ವ್ಯವಹಾರಗಳೇ ನಿಂತುಹೋದವು. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಕೆಲಸಗಳನ್ನು ಮಾಡುವಾಗ ಕೆಲವು ಸರ್ವರ್ ಗಳ ಆಧಾರಿತವಾಗಿ ಕೆಲಸ ಮಾಡುವವು. ಒಂದು ವೇಳೆ ಸರ್ವರ್ ನಲ್ಲಿ ದೋಷಗಳು ಕಂಡರೆ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಆದ್ದರಿಂದ ಯಾರೂ ಏನನ್ನೂ ಮಾಡಲಾಗದೆ ಅಸಹಾಯಕರಾದಂತೆ ಮುಂದಿನಗಳಲ್ಲಿ 'ಕೃತಕ ಬುದ್ಧಿಮತ್ತೆ' ಬಳಸುವುದರಿಂದ ಇಂತಹ ಸಂದಿಗ್ಧ ಪರಿಸ್ಥಿತಿ ಬರಬಹುದು.
19.ಪ್ರಥಮ ಚಿಕಿತ್ಸೆಯಂತಹ ತುರ್ತುಪರಿಸ್ಥಿತಿಗಳ ನಿರ್ವಹಣೆ:
ಮಕ್ಕಳು ಅಗಾಗ ತಲೆಸುತ್ತಿ ಬೀಳುವುದು, ಮಕ್ಕಳಿಗೆ ಆಕಸ್ಮಿಕವಾಗಿ ಬಂದೊದಗುವ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಎಲ್ಲಾ ಸಾಮರ್ಥ್ಯಗಳು, ಕೌಶಲಗಳು ಇದು ಒಳಗೊಂಡಿರುವ ಬಗ್ಗೆ ವಿಶ್ವಾಸನೀಯತೆ ಕಡಿಮೆ ಇದೆ.
20.ಮಕ್ಕಳಿಗೆ ಶಿಕ್ಷಕರು ಅನಿಸದೇ ತಮಾಷೆಯ ಮಷಿನ್ ಅನಿಸಬಹುದು...
ಶಿಕ್ಷಕ ಬೋಧನೆ ಮಾಡಲು ಬಂದಾಗ ಮಕ್ಕಳ ಸಹಜ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರಕೊಡಲೇ ಬೇಕಾಗುತ್ತದೆ.ಅಂತಹ ಸಂದರ್ಭಗಳಲ್ಲಿ ಮಕ್ಕಳು ಕೇಳುವ ಪ್ರಶ್ನೆಗಳು ಜ್ಞಾನ ಹೆಚ್ಚಿಸುವ ಪ್ರಶ್ನೆಗಳಾಗಬಹುದು ಅಥವಾ ಆ ಪ್ರಶ್ನೆಗಳು ಕೆಲವೊಮ್ಮೆ ತಮಾಷೆಯ,ದುರುದ್ದೇಶ ಪೂರಕ ಸಂಗತಿಗಳಾಗಬಹುದು. ಉದ್ದೇಶಪೂರ್ವಕವಾಗಿ ಅವರು ಅಂತಹ ಕೀಟಲೆಯ ಪ್ರಶ್ನೆಗಳನ್ನು ಕೇಳುವುದು,ಪುನರಾವರ್ತನೆ ಮಾಡುವುದು. ಎಲ್ಲರೂ ನಗುವಂತಹ ಸನ್ನಿವೇಶಗಳನ್ನು ಸೃಷ್ಠಿಸುವುದು ಸಾಮಾನ್ಯವಾಗುತ್ತದೆ. ಅವರೇನು ಮಾತಾಡಿದರೂ ಪ್ರತಿರೋಧ,ನಿಯಂತ್ರಣ ಇಲ್ಲದಿದ್ದಾಗ ಮಕ್ಕಳ ಮಾತುಗಳು ಹದ್ದುಮೀರುವ ಎಲ್ಲಾ ಸಾಧ್ಯತೆಗಳು ಇದ್ದೇ ಇರುತ್ತದೆ.ಯಾವುದೇ ವ್ಯಕ್ತಿ/ವಸ್ತುವಿನ ಮಿತಿ ಇಷ್ಟೇ ಎಂದು ಗೊತ್ತಾದ ಮೇಲೆ ಅತಿರೇಕದ ಆಟ-ಟೋಪಗಳಿಗೆ ಅವಕಾಶ ನೀಡಿ ಕಲಿಕೆಯ ಉತ್ತಮ ಪರಿಸ್ಥಿತಿ ಹದಗೆಟ್ಟು,ಶಿಕ್ಷಕರ ಮೇಲೆ ಇರುವ ಅಲ್ಪ ಸ್ವಲ್ಪ ಗೌರವವೂ ಕಳೆಯುವ ಹುನ್ನಾರ ನಡೆಯುತ್ತಿದೆ. ಕಲಿಕೆಯ ವ್ಯವಸ್ಥೆ ಕಲ್ಪಿಸುವಂತಹ ಸ್ಥಿತಿಯು ಇಲ್ಲದ ಮಟ್ಟಕ್ಕೆ ತಲುಪುವುದು.
21.ಕಲಿಕೆಗೆ ಜೀವ ತುಂಬುವ ಶಿಕ್ಷಕ/ಶಿಕ್ಷಕಿ ಆಗಬಹುದೇ???
ಮಕ್ಕಳಿಗೆ ಕಲಿಸುವುದೆಂದರೇ ವಿಶಾಲ ವ್ಯಾಪ್ತಿ ಮತ್ತು ಅನೇಕ ತತ್ವಗಳಾಧಾರಿತ ಬೋಧನೆ ಮತ್ತು ಚಟುವಟಿಕೆಯಿಂದ ಕಲಿಸುವುದಾಗಿದೆ.ಜೀವಾಂತ ಮಕ್ಕಳಿಗೆ ನಿರ್ಜೀವ ವಸ್ತುವಿನಿಂದ ಮಾಡುವ ಬೋಧನೆ ಮಕ್ಕಳಿಗೆ ಕಲಿಕೆಯನ್ನು ಮಾಡುವಲ್ಲಿ ವಿಫಲವಾಗಬಹುದು.ಮಕ್ಕಳಿಗೂ ನಿರ್ಜೀವ ವಸ್ತುಗಳೊಡನೆ ಕಲಿಕೆಯಲ್ಲಿ ತೊಡಗುವುದು ನೀರಸವಾಗುವುದು.ಇದರಿಂದ ಕಲಿಕೆಯಲ್ಲಿ ಜೀವತುಂಬಿವಿಕೆ AI ಗಳಿಂದ ಕಷ್ಟ...
22.ವಾಸ್ತವಿಕ ಬಳಕೆಯ ನೆಲೆ ಅವಶ್ಯಕ:
ಕೃತಕ ಬುದ್ದೀಮತ್ತೆಯನ್ನು ಬಳಸಿಕೊಂಡು ವಾಹನಗಳ ಚಾಲಕರ ಬದಲಾಗಿ Artificial intelligence ಬಳಕೆಯ ಬಗ್ಗೆ ವ್ಯಾಪಕವಾಗಿ ಚರ್ಚೆ ಆಗುತ್ತಿದೆ.ಇದು ಆಯ್ದ ಕೆಲವು ನಗರಗಳಲ್ಲಿ ಅಥವ ರಸ್ತೆಗಳಲ್ಲಿ ಸಾಧ್ಯವಾಗಬಹುದೇನೋ... ಅದಕ್ಕೆ ಬೇಕಾದ ಸಂವಹನ ಸೂಚನೆಗಳನ್ನು ಅಳವಡಿಸಬೇಕು. ಅದನ್ನು ನಿರಂತರ ನಿರ್ವಹಿಸಬೇಕು. ತನ್ನ ಮುಂದೆ ಯಾವುದೇ ಸಂವಹನ ಸೂಚನೆಗಳನ್ನು ಅಳವಡಿಸದೇ ಏಕಾ ಏಕಿ ಸಂತೆಯೊಳಗೋ, ಜಾತ್ರೆಯ ಒಳಗೊ ಬಿಟ್ಟ ಒಬ್ಬ ಬುದ್ಧಿಮತ್ತೆ (AI) ಚಾಲಕನ ಪಾಡು ಏನಾಗಬಹುದೆಂದು ನೀವು ಊಹಿಸಬಹುದು. ಅದರಂತೆ ಕೃತಕ ಬುದ್ಧಿಮತ್ತೆ ಬಳಕೆ ಎಲ್ಲಾ ಸ್ಥಳಗಳಲ್ಲಿ ಒಂದೇ ರೀತಿಯ ಬಳಕೆ ಸೂಕ್ತವಾಗುವುದಿಲ್ಲ.
ಈ ಮೇಲಿನ ಎಲ್ಲಾ ಅನಾನುಕೂಲಗಳನ್ನು ನೋಡಿದರೆ ನನ್ನದೇ ಮನೆಯ ಒಂದು ಇಂಟೆರೆಸ್ಟಿಂಗ್ ಉದಾಹರಣೆ ನೆನಪಾಗುತ್ತಿದೆ. ಅದೇನೆಂದರೇ ನಮ್ಮದು official ಕುಟುಂಬ... ಗಂಡ ಹೆಂಡತಿ ಇಬ್ಬರೂ ಸರ್ಕಾರಿ ನೌಕರರು.. ನಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಈ ಮನೆ ಕೆಲಸಗಳಾದ ಕಸ,ಮುಸುರೆ ನೆಲ ಇತ್ಯಾದಿ ಕೆಲಸಗಳನ್ನು ಕೆಲವೊಮ್ಮೆ ನಮಗೆ ಮಾಡಿಕೊಳ್ಳಲು ಕಷ್ಟ ಆಗುತ್ತಿತ್ತು.ಆದ್ದರಿಂದ ನಾವು ಮಾಡಿದ ಯೋಚನೆ ಮತ್ತು ಯೋಜನೆ ಎಂದರೆ ಪಾತ್ರೆಗಳನ್ನು ತೊಳೆಯಲು ಒಂದು advanced Dish washer ಮಶಿನ್ ಕೊಂಡುಕೊಳ್ಳುವುದು.ಅಂದುಕೊಂಡಂತೆ ಡಿಶ್ ವಾಷರ್ ಏನೋ ಕೊಂಡಾಯಿತು.ಆ ಮಶಿನ್ ಗೆ ಬಳಸುವ ಪಾತ್ರೆ-ಸಾಮಾನುಗಳನ್ನು ಒಮ್ಮೆ ನೆನೆಸಿ ನೀಟಾಗಿ ಅವುಗಳ ಗಾತ್ರ ಅಗಲಕ್ಕೆ ತಕ್ಕಂತೆ ಮಷೀನ್ ನಲ್ಲಿ ಹೊಂದಿಸಬೇಕು. ಆನಂತರ ಆಯ್ದ ಕ್ಲೀನಿಂಗ್ ಆಯ್ಕೆಗಳನ್ನು ಒತ್ತಿದರೆ ನಿಗದಿತ ಸಮಯದಲ್ಲಿ ಅದರ ಕೆಲಸ ಅದು ಮಾಡಿಬಿಡುತ್ತದೆ. ಮನುಷ್ಯನಿಗೆ ಮುಸುರೆ ತೊಳೆಯುವ ಕೆಲಸ ಕಡಿಮೆ ಮಾಡಿ ಸುಲಭವಾಗಿ ಪಾತ್ರೆ ತೊಳೆದುಕೊಟ್ಟಿದೆಯಲ್ಲ??ಇನ್ನೇನು ಬೇಕು ನಿಮಗೆ ಅಂತ ಕೇಳಬೇಕೆನಿಸುತ್ತಿದೆಯಲ್ಲಾ???ಈಗ ಕೇಳಿ ಅಸಲೀ ಮಜಾ!ಅದು ಸರಿಯಾಗಿ ತೊಳೆಯುವುದು ಹಾಲು ನೀರು ಕುಡಿದ ಲೋಟಗಳು,ಊಟ ಮಾಡಿದ ಎಣ್ಣೆ ಜಿಡ್ಡಿನ ತಟ್ಟೆ ಮುಚ್ಚಳಗಳು... ಆದರೆ ಈ ಅನ್ನ ತಳಹತ್ತಿ ಸೀದು ಹೋದ ಪಾತ್ರೆಯನ್ನೋ,ಅಥವಾ ಒಣಗಿದ ಮುದ್ದೆ ಪಾತ್ರೆಯನ್ನೋ/ಹಾಲು ಹಿಮರಿ ಸೀದು ಹೋದ ಹಾಲಿನ ಪಾತ್ರೆಯನ್ನು ಅದು 24*7 ಕ್ಲೀನಿಂಗ್ Mode ನಲ್ಲೇ ಇಟ್ಟರೂ ಅದನ್ನು ಶುದ್ಧ ಮಾಡಲು ಅದರ ಕೈಯಲ್ಲಿ ಆಗದ ಮಾತು. ಪುನಃ ಅದನ್ನು ಮಾನವರೇ ಉಜ್ಜಿ,ಕೆರೆದು ಸ್ವಚ್ಚಗೊಳಿಸಬೇಕು ಇಲ್ಲ ಆ ಪಾತ್ರೆಯನ್ನೇ ಎಸೆಯಬೇಕು.
ಈ ಮೇಲಿನ ಉದಾಹರಣೆಯನ್ನು ನಾನು ಏಕೆ ನೀಡಿದೆ ಎಂದರೇ ಮಕ್ಕಳಿಗೆ ಬೋಧನೆ ಮಾಡಲು ಆರ್ಟೀಫೀಶಿಯಲ್ ಇಂಟೆಲಿಜೆನ್ಸ್( AI-ARTIFICIAL INTELLIGENCE) ಶಿಕ್ಷಣದಲ್ಲಿ ಹೆಚ್ಚು ಅಳವಡಿಸಿಕೊಂಡರೆ ಆಗಬಹುದಾದ ಪರಿಣಾಮಗಳಿಗೆ ಒಂದು ಉದಾಹರಣೆ ಮಾತ್ರ...ಯಾರು ಯಾವ ಕೆಲಸವನ್ನು ಹೇಗೆ ಮಾಡಬೇಕೋ ಹಾಗೆ ಅವರೇ ಮಾಡಬೇಕು . ಒಂದು ವೇಳೆ ಯಂತ್ರದ ಸಹಾಯದಿಂದ ಮಾಡಿದರೂ ಪರಿಣಾಮ ಅಪರಿಪೂರ್ಣವೇ ಆಗಿರುತ್ತದೆ. ಅದೆಂದಿಗೂ ಶೇಕಡಾ 100% ಆಗದ ಕೆಲಸ ಎಂದಷ್ಟೇ ಹೇಳಬಹುದು.
ಭಾರತ ಸ್ವಾತಂತ್ರ್ಯ ಗಳಿಸಿ 78-80 ವರ್ಷಗಳು ಸಮೀಪಿಸುತ್ತಿದೆ. ಅಂದಿನಿಂದಲೂ ಶಿಕ್ಷಣ ಪಡೆಯಲು,ಎಲ್ಲರಿಗೆ ಅದನ್ನು ತಲುಪಿಸಲು ನಾನಾ ಕಸರತ್ತುಗಳನ್ನು ಮಾಡಲಾಗಿದೆ.ಸಾವಿರಾರು ಕೋಟಿ ಹಣಕಾಸಿನ ವೆಚ್ಚದ ಜೊತೆಗೆ ನಿರಂತರ ಮಾನವ ಸಂಪನ್ಮೂಲ ತಳಮಟ್ಟದಲ್ಲಿ ಮಾಡಿದ ಪ್ರೇರಣೆ ಮತ್ತು ಬೆಂಬಲದ ಪರಿಣಾಮವಾಗಿ ಇಂದು ಗಳಿಸಲಾದ ಒಟ್ಟು ಸಾಕ್ಷರತೆಯ ಮೊತ್ತವಾಗಿದೆ.ಇದು ಯಾರೆಲ್ಲಾ ಬೋಧಕರಾಗಿ ಕೆಲಸ ಮಾಡಿದ್ದಾರೋ,ಹಾಲಿ ಮಾಡುತ್ತಿರುವವರು ಮತ್ತು ಸಂಬಂಧಿಸಿದ ಇಲಾಖೆಯ ವಿವಿಧ ಹಂತದ ಎಲ್ಲಾ ನೌಕರರ ಒಟ್ಟಾರೆ ಶ್ರಮದ ಫಲ. ಯಾವುದೋ ಒಂದು ತಾಂತ್ರಿಕ ವರ್ಗ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ತಮ್ಮ ಭ್ರಮೆ ಕೇಳಿ ಅದನ್ನು ಅನ್ವಯಗೊಳಿಸಿದರೆ ಆಗುವ ಅಪಾಯ ಎಷ್ಟಿರಬಹುದೆಂದರೇ ಒಂದು ಬೃಹತ್ ಪರಮಾಣು ಸ್ಥಾವರ ದುರಂತಕ್ಕೀಡಾದರೇ ಯಾವ ಪ್ರಮಾಣದಲ್ಲಿ ಅಪಾಯ ಸಂಭವಿಸಬಹುದೋ ಅದಕ್ಕೂ ನೂರು ಪಟ್ಟು ಹೆಚ್ಚಿನ ಅಪಾಯ ಸಂಭವಿಸಬಹುದು.ಶಾಲೆಗಳಲ್ಲಿ ಈ ಕೃತಕ ಬುದ್ಧಿಮತ್ತೆಗಳನ್ನು ಶಿಕ್ಷಕರ ಮೇಲ್ವೀಚಾರಣೆಯಲ್ಲಿ ಆಗಾಗ ಅವಶ್ಯಕತೆ ಇದ್ದಾಗ ಬಳಸಿಕೊಳ್ಳಬಹುದು.ಉದಾಹರಣೆಗೆ ಶಿಕ್ಷಕರು ತರಬೇತಿಯಲ್ಲಿರುವಾಗ,ರಜೆಯಲ್ಲಿರುವಾಗ ಆಯ್ದ ಕೆಲವು ವಿಷಯಗಳನ್ನು ಮಕ್ಕಳೊಂದಿಗೆ ಚರ್ಚಿಸಲು ಅವಕಾಶಗಳನ್ನು ಕೊಡಬಹುದು.ಆದರೆ ಶಿಕ್ಷಕರ ಸ್ಥಾನವನ್ನು AI ಗಳಿಂದ ತುಂಬಲು ಪ್ರಯತ್ನಿಸಿದರೆ ಗಂಭೀರವಾದ ಪ್ರಮಾದವಾದೀತು. ಯಾವುದೇ ಬದಲಾವಣೆಗಳನ್ನು ಇರುವ ಪರಿಸ್ಥಿತಿಯನ್ನು ಅತ್ಯುತ್ತಮಗೊಳಿಸುವಂತಿದ್ದರೆ ಅಂತಹ ಬದಲಾವಣೆಗಳನ್ನು ಒಪ್ಪಿಕೊಳ್ಳುವುದು ಸರ್ವಕಾಲಿಕ ಸತ್ಯ... ಆದರೆ ಇರುವ ಪರಿಸ್ಥಿತಿಯನ್ನು ಹಿನಾಯವಾದ ದುಸ್ಥಿತಿಗೆ ತಳ್ಳುವಂತಿದ್ದರೆ ಅಂತಹ ಬದಲಾವಣೆಗಳ ಸ್ವೀಕಾರ ಸರ್ವಕಾಲಕ್ಕೂ ಒಪ್ಪಿತವಲ್ಲ.
✍️ ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ