ಕನಸುಗಳು ಕಥೆಯಾದಾಗ ಕನಸು-8

#ಕನಸುಗಳು_ಕಥೆಯಾದಾಗ...

      ಕನಸು-8

ಅದು ತಿಂಗಳ ಕೊನೆಯ ದಿನಗಳು..  ಆರುಷಿಯ ಕುಟುಂಬದ ತಿಂಗಳ ಖರ್ಚು ಕಳೆದು ಉಳಿದದ್ದು ಕೇವಲ ಹತ್ತು ಸಾವಿರ ಮಾತ್ರ. ಅದು ರಿಸರ್ವ್ ಮೊತ್ತ.ಅದು   ಏನಾದರೂ ಎಮರ್ಜೆನ್ಸಿಗೊ, ಅನಿವಾರ್ಯ ಸಂದರ್ಭಗಳಿಗೋ ಬಳಕೆಯಾಗುವಂಥದ್ದು . ಇತ್ತೀಚಿನ ದಿನಗಳಲ್ಲಿ ಕೈಯಲ್ಲಿ ಕಾಸು ಕಡಿಮೆ. ಎಲ್ಲಾ ಅಂಗಡಿಗಳಲ್ಲಿ ಯುಪಿಐ ಪೇಮೆಂಟ್ ಇರೋದ್ರಿಂದ ಕೈಯಲ್ಲಿ ಕ್ಯಾಶ್ ಹಿಡ್ಕೊಂಡು ಓಡಾಡುವ ಸಂಖ್ಯೆ ವಿರಳವೇ .ಜೇಬಲ್ಲಿ ಇದ್ದದ್ದು 150-200 ರೂಪಾಯಿ. ಏನಾದರೂ ಬೇಕಾದರೆ  ಅಕೌಂಟಲ್ಲಿ ಇದ್ದ ಹಣ ಪೇ ಮಾಡಿ ವಸ್ತುಗಳು ತರಬಹುದೆಂದು ನಾಲ್ಕೈದು ದಿನದಲ್ಲಿ ಸ್ಯಾಲರಿ ಆಗಬಹುದೇನೋ ಎಂಬ ನಿರೀಕ್ಷೆಯಿಂದಿದ್ದ.ಅಂದು ಸಂಡೇ...ಮಳೆಗಾಲ ಆದ್ದರಿಂದ ಎಲ್ಲಿಯಾದರೂ ಹೋಗಿ ಅಣಬೆ ಹುಡುಕಿ ತರವ ಎಂದು ಬಯಸಿದ. ಆರುಷಿಗೆ ಅಣಬೆಗಿಂತ ಕಾಡಿನಲ್ಲಿ ಏಕಾಂಗಿಯಾಗಿ ತಿರುಗುವುದೆಂದರೇ ಬಲು ಇಷ್ಟ. ಕಾಡಿನಲ್ಲಿ ಸಿಗುವ ಹಣ್ಣು,, ತಿನ್ನುವ ವಸ್ತುಗಳೆಲ್ಲಾ Bonus. ಆಗಾಗ ಏನಾದರೂ ನೆಪ ಇಟ್ಟುಕೊಂಡು ಅಡವಿ,ಬೆಟ್ಟ  ಹೀಗೆ  ತಿರುತ್ತಿರುತ್ತಾನೆ. ಅಂದು ಅಂದುಕೊಂಡಂತೆ  ಅಣಬೆ ಹುಡುಕಲು 'ಬಾಂಡ್ರಾವಿ' ರಕ್ಷಿತಾರಣ್ಯಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಒಂದಷ್ಟು ದೂರದಲ್ಲಿ ಯಾರೋ ಒಂದಿಬ್ಬರ ಮಧ್ಯದಲ್ಲಿ ನಿಂತಿದ್ದ ನಾಯಿಯೊಂದು ಕಾಣಿಸಿತು.  ಆರುಷಿಗೆ ಯಾವುದಾದರೂ ನಾಯಿಗಳು ಕಂಡರೆ ಅದು  ಯಾವ ಜಾತಿಯ ನಾಯಿ country ನಾಯೋ ,ಕಂತ್ರಿ ನಾಯೊ ಜಾತಿ ನಾಯೋ ಹೀಗೆ ಅದನ್ನ ನೋಡಿ ಅವಲೋಕಿಸಿ ಹೋಗುವುದು ಅವನ ಕೆಲಸ. ಯಾವ ನಾಯಿ ಎಂದು ನೋಡಲು ಬೈಕನ್ನು ಸ್ಲೋ ಮಾಡಿದ ಆದರೆ ನೋಡಲಿಕ್ಕೆ ಅದು ಒಂಥರಾ ಜೀವಂತ ನಾಯಿ ಎನಿಸಲಿಲ್ಲ ಅಲ್ಲಿದ್ದವರ ವ್ಯಕ್ತಿಗಳ ಮುಖವು ಜಪಾನೀಯರ ಮುಖ. ನೋಡು ನೋಡುತ್ತಾ ಅವರ ಮಧ್ಯದಲ್ಲಿ ನಿಂತಿದ್ದ ನಾಯಿ ಅವನ ಬೈಕ್ ನ ಹಿಂದೆ ಅಟ್ಟಿಸಿಕೊಂಡು ಬರತೊಡಗಿತು. ಬೈಕ್ ನ ಹಿಂದೆ ನಾಯಿಗಳು ಹಿಂಬಾಲಿಸಿದಾಗ ಎಲ್ಲಿ ಕಚ್ಚುವುದೋ ಎಂಬ ಭಯದಿಂದ  ಕಾಲನ್ನು ಮೇಲಕ್ಕೆ ಎತ್ತಿ‌ಹಿಡಿಯುತ್ತಾ   ಎಕ್ಸ್ ಕ್ಯೂಲೇಟರ್ ಎಳೆಯುತ್ತಾ ಮುಂದೆ  ಬರತೊಡಗಿದ.ಆದರೆ ಆ ನಾಯಿ ಬಾಯಿ ತೆಗೆದಿತ್ತಾದರೂ ನಾಲಗೆಯಾಗಲಿ ಹಲ್ಲಾಗಲೀ ಕಾಣಿಸಲಿಲ್ಲ.. ಬೈಕಿನ ಮೇಲೆ ಕುಳಿತವರಿಗೆ ನಾಯಿ ಹಿಂಬಾಲಿಸುತ್ತಿದ್ದರೆ ಭಯ ಇರುವುದಿಲ್ಲವೇ?? ಇತ್ತು ಆದರೂ ಅದು ಕಚ್ಚುವ ಪ್ರಯತ್ನ ಮಾಡದಿದ್ದುದರಿಂದ ಆರುಷಿ ಅದನ್ನು ನೋಡುತ್ತಾ ಹಾಗೇ ಓಡಿಸುತ್ತಿದ್ದಾನೆ. ಆರುಷಿಯ ಬೈಕ್ ಮತ್ತು ಆ ನಾಯಿ ಎರಡೂ ಸಮನಾಂತರವಾಗಿ ಓಡುತ್ತಿದ್ದಾವೆ..4-5 ಸೆಕೆಂಡ್‌ಗಳ ಬಳಿಕ ಆರುಷಿಯ ಮೊಬೈಲ್ vibrate ಆಯಿತು. ಯಾವುದೋ ಕರೆ ಬರುತ್ತಿರಬಹುದೆಂದು ಜೇಬಿನಲ್ಲಿ ಇದ್ದ ಮೊಬೈಲ್ ಅನ್ನು ಹೊರಗೆ ತೆಗೆಯದೇ ಒತ್ತಿ ಹಿಡಿದ... ಒಂದೆರಡು ಬಾರಿ  vibrate ಆಗಿ ಸುಮ್ಮನಾದುದರಿ‍ಂದ ಯಾವುದೋ ಮೆಸೇಜ್ ಇರಬೇಕೆಂದು ಅಂದು ಕೊಂಡ...  ಸ್ಯಾಲರಿ ಆಗಿರಬಹುದೇನೋ ಎಂಬ ಅನುಮಾನದಿಂದ ಬೈಕ್ ಓಡಿಸುತ್ತಲೇ ಹಾಗೆ ಅಂಗಿಯ ಜೇಬಲ್ಲಿದ್ದ ಮೊಬೈಲ್ ತೆಗೆದು ನೋಡಿದ. ಆರುಷಿಯು ಹೊಂದಿದ್ದ Account ಬ್ಯಾಂಕಿನ ಮೇಸೇಜ್ಗಳು..ಅರೆರೆ... ಸ್ಯಾಲರಿ ಆದ ಹಾಗೆ ಇದೆ...  ಗಾಡಿ ನಿಲ್ಲಿಸಿ  ಮೊಬೈಲ್ ತೆಗೆದು ಮೆಸೇಜ್ ಚೆಕ್ ಮಾಡಿದ... ಬ್ಯಾಂಕಿನಿಂದ ಎರಡು ಬಾರಿ ಐದು-ಐದು ಸಾವಿರದಂತೆ 10000 ರೂಗಳು ಎಲ್ಲಿಗೋ  transfer ಆಗಿದೆ. ಆದರೆ ಆರುಷಿ ಹಣದ  ಯಾವುದೇ ಟ್ರಾನ್ಸ್ಕೇಶನ್ಸ್  ಮಾಡಿರಲಿಲ್ಲ. ಇತ್ತ ಆರುಷಿಯನ್ನು ಹಿಂಬಾಲಿಸುತ್ತಿದ್ದ ನಾಯಿ ಮೊಬೈಲ್ vibrate ಆದ ಕೆಲ ಸೆಕೆಂಡ್ ಗಳಲ್ಲಿ  ಹಿಂತಿರುಗಿ ಹೋಗಿತ್ತು.ತಿಂಗಳ ಕೊನೆಯಲ್ಲಿ ಆರುಷಿ ಬಳಿ ಉಳಿದ್ದದ್ದು ಹತ್ತು ಸಾವಿರ ಮಾತ್ರ.ಇದ್ದ ಹತ್ತುಸಾವಿರವೂ Transfer ಆಗಿದೆ.ಜೊತೆಗೆ ಇನ್ನೂ ಒಂದು message ಕೂಡ ಬಂದಿದೆ.

 "your  10000-00money transfer request unsuccessful for insufficient balance ಅಂತ text message ಬಂದಿದೆ. ಬ್ಯಾಂಕ್ಗೆ ಕರೆ ಮಾಡಲು ನೋಡಿದರೆ bank official time ಬೇರೆ ಆಗಿಲ್ಲ. Online account block ಮಾಡೋಣ ಎಂದು ಯೋಚಿಸಿದನಾದರೂ ಇನ್ನೂ ಅಕೌಂಟ್ನಲ್ಲಿ ಬ್ಯಾಲೆನ್ಸ್ ಇಲ್ಲದೇ ಇದ್ದುದರಿಂದ ಕಾದು ನೋಡಲು ಸಮ್ಮನಾದ. ಆರುಷಿಯ ಮನೆಯಿಂದ 25-30 km ದೂರ ಸಾಗಿದ ಆರುಷಿ ಬೈಕನ್ನು ರಸ್ತೆ ಬದಿ ನಿಲ್ಲಿಸಿದ. ಮಳೆ ಬಿದ್ದ ಕಾರಣ ಬೈಕ್ ನ ಸ್ಟಾಂಡ್ ಮಣ್ಣಲ್ಲಿ ಹೂತುಹೋಗಿ ಬೈಕ್ ಬೀಳುವ ಅಪಾಯ ಇದ್ದುದರಿಂದ ಸ್ಟಾಂಡ್ ನ ಅಡಿ  ಬಿಲ್ಲೆಯಂತಹ ಕಲ್ಲಿಟ್ಟು ಬೈಕನ್ನು ನಿಲ್ಲಿಸಿದ.
ಕೆಂಪು ಮಣ್ಣಿನಲ್ಲಿ ಬೆಳೆದ ಹಸಿರ ವನರಾಶಿಯ ನಡುವೆ ಅಣಬೆ ಹುಡುಕಲು ತಿರುಗಾಡಿದ. ಬೆಳ್ಳಗೆ ಕಂಡ ಕಲ್ಲು,ಪೇಪರ್  ಹೂವು ಹೀಗೆ ಎಲ್ಲೆಲ್ಲಿ ಬಿಳಿಯಾಗಿ ಕಾಣಿಸುವುದೋ ಅಲ್ಲಿಗೆ ಹೋಗಿ ಕಂಡ ಕಡೆಯೆಲ್ಲಾ ಅದು ಅಣಬೆಯೇ ಎಂದು ನೋಡುತ್ತಾ ನೋಡುತ್ತಾ ಕಾಡಿನಲ್ಲಿ ಸುತ್ತುತ್ತಿದ್ದ. ಎರಡ್ಮೂರು ವರ್ಷಗಳ ನಂತರ ಅಣಬೆ ಹುಡುಕಲು ಹೋಗಿದ್ದುದರಿಂದ ಅಣಬೆಗಳು ಸಿಗುತ್ತಾವೋ?? ಎತ್ತಕಡೆ ಹೋದರೆ ಸಿಗಬಹುದು ಎಂಬ ಆಲೋಚನೆಗಳು ಒಂದು ಕಡೆಯಾದರೇ ಕೆಲವೇ ನಿಮಿಷಗಳ ಹಿಂದೆ ಅಕೌಂಟ್ ಇಂದ deduction ಆದ ಹಣದ ಬಗ್ಗೆ ಮತ್ತೊಂದು ಯೋಚನೆಯಾಗಿತ್ತು.ಬುಲ್ ಬುಲ್,ರಾಬಿನ್,ನವಿಲುಗಳಂತಹ ಪಕ್ಷಿಗಳ ಕೂಗನ್ನು ಕೇಳುತ್ತಾ ಹತ್ತಾರು ನಿಮಿಷ ಸುತ್ತಾಡುತ್ತಿರುವಾಗ ಹಂದಿಯ ಹೆಜ್ಜೆಗುರುತೊಂದು ಕಾಣಿಸಿತು. ನನ್ನ ಅನುಭವದ ಆಧಾರದಲ್ಲಿ ಅದು ಹಂದಿಯ ಹೆಜ್ಜೆ ಗುರುತೇ.ಅದು ಈಗ ಬೆಳಿಗ್ಗೆ ಮುಂಚೆ 5-00-5:30   ತನ್ನ ವಿಶ್ರಾಂತಿಯ ಪಡೆಯಲು ಹೋಗಿದೆ.  ಈ ಬಾರಿ ಮಳೆ ಉತ್ತಮವಾಗಿ ಆದುದರಿಂದ ಭರಪೂರ ನೈಟ್ರೋಜನ್ ಸಿಕ್ಕು ಹಸಿರು ಹುಲ್ಲು,ನೂರಾರು ಜಾತಿಯ ಹುಲ್ಲು ಸೊಪ್ಪು,ಪೊದೆಗಳು, ಧಾರಾಳವಾಗಿ ಬೆಳೆದುದರಿಂದ ಹಂದಿಗಳು ಆ ಪೊದೆಗಳಲ್ಲಿ ಅವಿತಿರಬಹುದಾದ ಎಲ್ಲಾ ಸಾದ್ಯತೆಗಳು ಇದ್ದವು.ಅಣಬೆಯ ಹುಡುಕುತ್ತಾ ಹಂದಿಯ ಹೆಜ್ಜೆ ಹಿಂಬಾಲಿಸಿದ ಆರುಷಿಗೆ ಒಂದಷ್ಟು ದೂರದಲ್ಲಿ ಬೆಳ್ಳಗೆ ಏನೋ ಕಾಣಿಸಿತು. ಅಲ್ಲಿಂದಲೇ ಅದು ಅಣಬೆಯೇ ಎಂದು ಅನಿಸಿತು. ಆದರೆ ಅದು ಅಣಬೆಯೇ ಅಥವಾ ಬಿಳಿಯದಾದ ಬೆಣಚು ಕಲ್ಲೊ ಎಂದು  ನೋಡಲು ಹತ್ತಿರ ಹೋದರೆ ನಿಜ ಅಣಬೆಯೇ! ಹತ್ತಿರ ಹೋಗಿ ನಿಂತು ಸುತ್ತಲೂ ನೋಡಿದ ಅಲ್ಲಲ್ಲಿ ಹತ್ತಾರು ಅಣಬೆಗಳು ಕಾಣಿಸಿದವು. ಹುಡುಕಿಕೊಂಡು ಬಂದ ವಸ್ತು ಸಿಕ್ಕಾಗ ಆನಂದವಾಗಿ ಖುಷಿಯಿಂದಲೇ ಜೇಬಲ್ಲಿದ್ದ ಕವರ್ ತೆಗೆದು  ಹುಲುಸಾಗಿ ಬೆಳೆದ ಅಣಬೆಗಳನ್ನು ಪಟಕ್ ಪಟಕ್ ಎಂದು ಎಳೆದು ಕಿತ್ತು  ಕವರ್ ಗೆ ಹಾಕಿದ. ಸುತ್ತಲೂ ಎಡತಾಕಿ ನೋಡಿದ..‌ ಒಂದೆರಡು ಹೆಜ್ಜೆ ದೂರದಲ್ಲಿ ಹುಟ್ಟಿದ್ದ  ಮತ್ತೆ ನಾಲ್ಕೈದು ಅಣಬೆಗಳನ್ನು ಕಿತ್ತನು.  ಕವರಿನ ತೂಕ ಅಂದಾಜು ಒಂದೂವರೆ ಕೆಜಿಯಷ್ಟು ಇದೆ. ಅಂದರೆ ಆ ಅಣಬೆಯ ಮಾರುಕಟ್ಟೆಯ ಬೆಲೆ ಅಂದಾಜು1500 ! ರಜಾದಿನದಲ್ಲಿ ಉತ್ಕೃಷ್ಟ ಅಣಬೆಯ ಬೇಟೆಯಾಗಿದ್ದು ಬಂಪರ್ರೆ...ಆದರೆ ಬರುವ ಹಾದಿಯಲ್ಲಿ ಹೋದ ಹತ್ತು ಸಾವಿರ... ಗ್ರೇಟ್ ಲಾಸ್ ಅಲ್ಲವೇ...?ಐವತ್ತು ಅಲ್ಲ ನೂರು ಅಲ್ಲ..‌ ಹತ್ತುಸಾವಿರ...ಬ್ಯಾಂಕಿಗೆ ಕರೆ ಮಾಡಿದ ಆರುಷಿ ಎರಡ್ಮೂರು ಬಾರಿ  ಕರೆ ಮಾಡಿದರೂ  ಯಾರೂ ಪೋನ್ ತೆಗೆಯಲಿಲ್ಲ. ಯಾಕೆ ಪೋನ್ ತೆಗೆಯುತ್ತಿಲ್ಲ ಎಂದು ವಿಚಾರ ಮಾಡಿದಾಗ ಆರುಷಿಗೆ ಹೊಳೆದದ್ದು ಇವತ್ತು ಸಂಡೇ ಅಂತ...ಆರುಷಿಯ ಮೊಬೈಲಲ್ಲಿ ಸೇವ್ ಆಗಿದ್ದ ಬ್ಯಾಂಕ್ employee  ಒಬ್ಬರಿಗೆ  ಕಾಲ್ ಮಾಡಿದ .ಅರುಷಿ ಬೆಳಿಗ್ಗೆ ಏಳುವರೆ ಸುಮಾರಿಗೆ ಐದು ಐದು ಸಾವಿರದಂತೆ ಹತ್ತು ಸಾವಿರ ಅಮೌಂಟ್ ಕಟ್ ಆಗಿರುವ ಬಗ್ಗೆ ತಿಳಿಸಿದ.  ಎರಡ್ಮೂರು ಜನರದ್ದು ಹೀಗೆ ಆಗಿದೆಯಂತೆ.ಅವರ್ಯಾರದೋ ಎಂಭತ್ತು ಸಾವಿರ ಕಟ್ ಆಗಿದೆಯಂತೆ ಅಂತೆಲ್ಲಾ ಹೇಳಿದ್ದಕ್ಕೆ ಸದ್ಯ ನನ್ನ ಖಾತೆಯಲ್ಲಿ ಇದ್ದದ್ದು ಹತ್ತೇ ಸಾವಿರ ಒಂದು ವೇಳೆ ಜಾಸ್ತಿ ಇದ್ದಿದ್ದರೇ ಅದು ಹೊಗೆ ಎಂದು ಕೊಂಡು ಇನ್ನೂ ಅಣಬೆಯ ಹುಡುಕೋಣ ಎಂದರೇ ಬಿಸಿಲಾಗುತ್ತಿತ್ತು. ಬಿಸಿಲಿನ ಉರಿಗಿಂತ ಹತ್ತು ಸಾವಿರ ಹೋದ ಉರಿಯೇ   ಹೆಚ್ಚಾಗಿದ್ದರಿಂದ ರಸ್ತೆಯ ಪಕ್ಕದಲ್ಲಿ ಬೈಕಿನ ಕಡೆಗೆ ಹಿಂದಿರುಗಿ  ಬೈಕ್ ನ ಕ್ಯಾರಿಯರ್ ಬ್ಯಾಗಿಗೆ ಅಣಬೆಯ ಕವರ್ ಎಸೆದು ಮನೆ ಕಡೆ ಬರಲು ಬೈಕ್ start ಮಾಡಿದ.  ಮನೆಗೆ ಬಂದು ಟಿವಿ ಆನ್ ಮಾಡಿದರೆ ಟಿವಿಯಲ್ಲಿ ಹಣದ್ದೇ ಸುದ್ದಿ! ಯಾರದೋ ಮನೆಯಲ್ಲಿ ಇಲಿಯೊಂದು ಬಂದೋದಾಗ ಹಣ ಕಟ್ ಆಯಿತಂತೆ. ಇನ್ಯಾರದೋ ಮನೆಯ ಕಾಂಪೌಂಡ್ ಮೇಲೆ ಪಾರಿವಾಳ ಕೂತಾಗ ಅವರ ಅಕೌಂಟ್ ಲ್ಲಿ ಇದ್ದ ಹಣ ಕಟ್ ಆಯಿತಂತೆ...ಯಾವುದೋ ನಗರದಲ್ಲಿ ಹೆಲಿಕಾಪ್ಟರ್ ಹಾರಿ ಹೋದ   ಕಾರಣಕ್ಕೆ ಸಾವಿರಾರು ಖಾತೆಗಳಿಂದ ಕೋಟ್ಯಾಂತರ ಹಣ ಸಾಮೂಹಿಕವಾಗಿ ಎಗರಿಸಿದ್ದಾರಂತೆ.  ಬರೀ ವೈಯಕ್ತಿಕ ಖಾತೆಗಳಿಂದ  ಹಣ ಲಪಟಾಯಿಸಿದ್ದಲ್ಲ..ಬ್ಯಾಂಕ್ ಗಳಿಂದಲೇ ಹಣ ವರ್ಗಾವಣೆಯಾಗಿದೆಯಂತೆ...! ಅಯ್ಯೋ... ಯಾವುದೋ ದೇಶವು ಭಾರತವನ್ನು  ಅಶಕ್ತಗೊಳಿಸಲು 'ಸರ್ಜಿಕಲ್ ಸ್ಟ್ರೈಕ್ ' ತರ ಮಾಡಿದ Robbery of money ಎಂದು ಬೆಚ್ಚಿ ಬಿದ್ದು ಎದ್ದು ನೋಡಿದರೆ ಮೋಡ ಕವಿದ ವಾತಾವರಣ. ಅಲ್ಲೊಂದು ಇಲ್ಲೊಂದು ಮಳೆ ಬಂದು ಹೋದಾಗ ಮರದ ಹನಿಗಳು ಬೀಳುವಂತೆ ದೊಡ್ಡ ದೊಡ್ಡ ಹನಿಗಳು ಪಟ ಪಟನೇ ಬೀಳುತ್ತಿದ್ದವು.

ಇಂದಿನ ಜಗತ್ತು ತಂತ್ರಜ್ಞಾನದ ಮೇರು ಸ್ಥಿತಿಯಲ್ಲಿದೆ. ಪ್ರತಿ ಹೆಜ್ಜೆ ಹೆಜ್ಜೆಯಲ್ಲಿ ಕೂಡ ನಮಗೆ ತಂತ್ರಜ್ಞಾನದ ಅವಶ್ಯಕತೆ ಮತ್ತು ಅನಿವಾರ್ಯ ಎದ್ದು ಕಾಣುತ್ತಿದೆ.ನಮ್ಮ ಬದುಕಿನ ಎಲ್ಲಾ ಹಂತಗಳಲ್ಲಿ  ತಂತ್ರಜ್ಞಾನ ಹಾಸುಹೊಕ್ಕಾಗಿದೆ.  ಆದರೆ ಕೆಲವರು ಅದನ್ನು ಉಪಯೋಗಿಸಿಕೊಂಡರೆ ಇನ್ನೂ ಕೆಲವರು ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಈ ಹಣವನ್ನು ಲಪಟಾಯಿಸಲು ಯಾವ ಯಾವ ಸೋಗು ಹಾಕಿ ಬರುತ್ತಿದ್ದಾರೋ ಗೊತ್ತಾಗುತ್ತಿಲ್ಲ.ಯಾವುದಕ್ಕೂ ಎಲ್ಲರೂ ಹುಷಾರಾಗಿರ್ರಿ...

( *ಕನಸು ಕಥೆಯಾದಾಗ...* _ಮುಂದುವರೆಯುವುದು..._)

✍️  *ನಾಗೇಂದ್ರ ಬಂಜಗೆರೆ.*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..