ಅಚಲ ಯಾನ... ಬಳ್ಳಾರಿ ಕೋಟೆ

#ಅಚಲ_ಯಾನ

ಬೆಳ್ಳಂಬೆಳಗ್ಗೆ ಎದ್ದು  ಗಡಿಯಾರ ನೋಡಿದರೆ ಗಂಟೆ 4-30 ಆಗಿತ್ತು...ನನ್ನಳಗಿನ ಸೋಮಾರಿ "ಇವತ್ತು ಸಂಡೇ...ನೀನಿನ್ನೂ ಕನಿಷ್ಠ ಎರಡು hour ಮಲಗಬಹುದು" ಎನ್ನುತ್ತಿದ್ದ..ಅಲ್ಲೇ ಪಕ್ಕದಲ್ಲಿದ್ದ ನನ್ನೊಳಗಿನ ಕ್ರಿಯಾಶೀಲ "ಎದ್ದೇಳೋ... ಆಗಲೇ 4-30 ಆಗಿದೆ. ಏನೆಲ್ಲಾ ಮಾಡುವುದು, ನೋಡುವುದು ಬಾಕಿ ಇದೆ... ಇನ್ನೂ ಎಷ್ಟು ದಿನ ಅಂತ ಮಲಗುತ್ತೀಯಾ??" ಎಂದು ಜಾಡಿಸಿ ಹೊಡೆಯುತ್ತಿದ್ದ... ಏನು ಮಾಡುವುದು??? ಬಹಳ ದಿನಗಳು ಸೋಮಾರಿಯ ಮಾತನ್ನೇ ಹೆಚ್ಚು ಹೆಚ್ಚು ಕೇಳುತ್ತಿದ್ದ ನಾನು ಇಂದು ನನ್ನೊಳಗಿನ 'ಕ್ರಿಯಾಶೀಲ' ನ ಮಾತು ಕೇಳಿದೆ.ಸರಿ ಎಂದು ಕೆಳಗೆ ಬಂದು ಕ್ಯಾಮೆರಾ ಹೆಗಲಿಗೆ ಹಾಕಿ ಬೈಕ್ start ಮಾಡಿದೆ.  ಚಿತ್ರದುರ್ಗದ ಕೋಟೆಯ ಪ್ರತಿ ಬಂಡೆಯ ಮೇಲೂ ಹೆಜ್ಜೆ ಇಟ್ಟಿದ್ದ ನನಗೆ ಬಳ್ಳಾರಿಯ ಕೋಟೆಯ ನೋಡಿದ ದಿನವೇ ಹತ್ತಬೇಕೆಂದು ಬಯಸಿದ್ದ ನಾನು ನನ್ನೊಳಗಿನ ಸೋಮಾರಿಯ ಗುಲಾಮನಾಗಿದ್ದ ನಾನು ಬಳ್ಳಾರಿಗೆ ಬಂದು 18 ವರ್ಷವಾದರೂ ಹತ್ತಲು ಸಾಧ್ಯವಾಗಿರಲಿಲ್ಲ. ಅಂದುಕೊಂಡಂತೆ ಬಳ್ಳಾರಿ ಟಿಪ್ಪುಸುಲ್ತಾನನ ಕೋಟೆಯ ಮುಂದೆ ನನ್ನ 'ನೀಲಿಮಾ' ಕುದುರೆ ನಿಲ್ಲಿಸಿದೆ. ಅಲ್ಲಿಗೆ ಹೋದಾಗ 05-05 ನಿಮಿಷ... ಬೆಡ್ ಶೀಟ್ ಹೊದ್ದು ಮಲಗಿದ್ದ ಸೆಕ್ಯೂರಿಟಿ ಅವರು ಕಣ್ಣುಜ್ಜುತ್ತಾ  ಏನ್ ಸಾರ್ ಎಂದರು???

ನಾನು:  ಒಳಗೆ ಹೋಗಬೇಕು..ಕೋಟೆ ಹತ್ತಬೇಕಿತ್ತು.....

 ಸೆಕ್ಯೂರಿಟಿ: ಸರ್... ಬೆಳಗ್ಗೆ ಬೆಳಿಗ್ಗೆ  ಒಬ್ಬರನ್ನು ಬಿಡುವುದಿಲ್ಲ... ಇನ್ನೂ ಕತ್ತಲು ಬೇರೆ ಇದೆ...

ನಾನು:ಇರಲಿ ಸರ್...05:10 -05-15 ಆಯಿತಲ್ಲ...?? ಇನ್ನೇನು ಬೆಳಕಾಗತ್ತೆ ಬಿಡಿ ...

ಸೆಕ್ಯುರಿಟಿ: ತೆಗೆದ ಬೀಗ ಲಾಕ್ ಮಾಡುತ್ತಾ "ಸರ್ ಏನು ಅನ್ಕೋ ಬ್ಯಾಡ್ರೀ... ನಮ್ ಸಾರ್ ಹೇಳಿದ್ದಾರೆ ಬಿಡಕಾಗಲ್ಲ..."

ನಾನು:ನಾನು  Sun rise ಪೋಟೋ ತೆಗೆಯಲೆಂದೇ ಬಂದಿದ್ದೇನೆ ನೀವು ಆರು-ಏಳು ಗಂಟೆಗೆ ಪ್ರಯೋಜನ ಇರುವುದಿಲ್ಲ...ಓಪನ್ ಮಾಡ್ರಿ...

ಸೆಕ್ಯೂರಿಟಿ: ನಾವೇನು ಮಾಡಲಿ ಸಾರ್... ಸಿ ಸಿ ಕ್ಯಾಮೆರಾ ಇದಾವೆ...

ನಾನು:ಹೌದು ಏನು ಪ್ರಾಬಲಮ್ ಯಾಕ್ ಬಿಡಲ್ಲಾ ಒಬ್ಬರನ್ನೇ..??

ಸೆಕ್ಯೂರಿಟಿ: ಸಾರ್  ಇದು ದೊಡ್ಡ ಬೆಟ್ಟ ಬೆಟ್ಟ ಸಾರ್ ಇದು ... ಹಾವು ಇದಾವೆ... ಅದರ್ಹಾಗ್ ಬೇರೆ ಮೊನ್ನೆ ಯಾರೊ ಒಬ್ಬನೇ ಹೋಗಿ ಬೆಟ್ಟದ ಮೇಲಿಂದ ಹಾರಿ suicide ಮಾಡಿಕೊಂಡಿದ್ದಾನೆ. ಅದಕ್ಕೆ ಬಿಡಲ್ಲಾ ...

ನಾನು: ನಾನು ಹಾವು, ಹಂದಿಗೆಲ್ಲಾ ಹೆದರುವುದಿಲ್ಲ... ಹಾಗಂತ ನಾನು ಬೆಟ್ಟದಿಂದ ಹಾರೋಕಂತೂ ಬಂದಿಲ್ಲ ಬಿಡಿ ಬಿಡಿ ...

ಸೆಕ್ಯೂರಿಟಿ: ಇಲ್ಲಾ ಸರ್ ಆಗಲ್ಲ ಅಂದ್ರೆ ಆಗುವುದಿಲ್ಲ...

ಅ ಸೆಕ್ಯೂರಿಟಿ ಅವರಿಗೂ ನನಗೂ ದೊಡ್ಡ ವಾದವೇ ಆಯಿತು.... ಅಕ್ಕಪಕ್ಕದವರೂ ಬಂದು ಬಗ್ಗಿ ನೋಡಿದರೂ ಇಬ್ಬರ ಸೆಕ್ಯೂರಿಟಿ ಯವರ ಜೊತೆಗೆ ಮತ್ತಿಬ್ಬರು ಬಂದು ಸೇರಿದರು. ನನ್ನ ಅವರ ವಾದ,ಪ್ರತಿ ವಾದದ ನಡುವೆ ಸಮಯ ಹೋಯಿತಾದರೂ ಅವರು ಒಳ ಹೋಗಲು ಸುತಾರಾಂ ಒಪ್ಪಲಿಲ್ಲ... ಅದೇ ಟೈಂ ಗೆ ನನ್ನೊಳಗಿನ ಸೋಮಾರಿಯು "ನಾನೇಳಿದೆ ಮಲಗು ಅಂತಾ... ನನ್ ಮಾತು ಕೇಳಲಿಲ್ಲ.. ಈ ಚಳಿಯಾಗೆ ಇಲ್ಲಿ ಬಂದು ಕೋಟೆನೂ ಹತ್ತಲಿಲ್ಲ... ಬೆಚ್ಚಗೂ ಇರಲಿಲ್ಲ..." ಎಂದು ಕೋಟೆ ದಾಟುವಷ್ಟು ಕೇಕೆ ಹಾಕ ತೊಡಗಿದ... ಈಗಲೂ ಕಾಲ ಮಿಂಚಿಲ್ಲ ಮನೆಗೆ ವಾಪಾಸು ಹೋದರೆ ಇನ್ನೂ ಒಂದು ಗಂಟೆಯಾದರೂ ಮಲಗಬಹುದೆಂದೂ ಹೇಳಿದ... ಅದಕ್ಕೆ ಪ್ರತಿಯಾಗಿ ತಕ್ಷಣವೇ   ಎಚ್ಚರಗೊಂಡು ನಾಲಗೆ ತೂರಿಸಿದ ಕ್ರಿಯಾಶೀಲ "ಇವತ್ತು ಎಂಟು ಗಂಟೆಗೆ ಒಳಗೆ ಬಿಡಲಿ.. ಕೋಟೆ ನೋಡಿಯೇ ಹೋಗುವುದು ಶತ ಸಿದ್ಧ" ಎಂದು  ಗಂಟಾಘೊಷವಾಗಿ ಘೋಷಿಸಿದ್ದರಿಂದ ಬೇರೆ ದಾರಿ ಇಲ್ಲದೇ ಸೋಮಾರಿ  ಸೈಲೆಂಟ್ ಆಗಿ ಸೈಡಿಗೆ ಹೋದ...

ಅಂತೂ ನಲವತ್ತು ನಿಮಿಷ ಸುಧೀರ್ಘ ಕಾಲದ ವಾದದ ನಂತರ ಒಳಬಿಟ್ಟರು...

 ಅಂದ ಹಾಗೆ ನಾನು ಹೋಗಿದ್ದು  ಬಳ್ಳಾರಿ ಕೋಟೆ.. ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲಾ ಬೆಟ್ಟ... ಶಿಲಾಯುಗದ ಕಾಲದಲ್ಲಿ  ಸಂಗನಕಲ್ಲು  ಮತ್ತು ಈ ಬೆಟ್ಟದಲ್ಲಿ ನಮ್ಮ ನಿಮ್ಮ ಮುತ್ತಾತಂದಿರು ಇದ್ರಂತೆ... ಅವರು ಬಳಸಿದ ಎಲ್ಲಾ ಶಿಲಾಯುಗದ ಆಯುಧಗಳು ಇಲ್ಲೂ ಸಿಕ್ಕಿವೆ ಎಂದು ಪುರಾತತ್ತ್ವ ಇಲಾಖೆ ಹೇಳುತ್ತಿದೆ. ತದ ನಂತರ  ಸುಮಾರು ಹದಿನೇಳನೇ ಶತಮಾನದಲ್ಲಿ ನಿರ್ಮಾಣಗೊಂಡಿರಬಹುದಾದ ಕೋಟೆಯಾಗಿದ್ದು ಸಮುದ್ರ ಮಟ್ಟದಿಂದ ಸುಮಾರು 600 ಮೀಟರ್ ಎತ್ತರ ಇದ್ದು   ಸಾಧಾರಣವಾದ ದಪ್ಪದ ಕಲ್ಲು,ಸುಟ್ಟ ಇಟ್ಟಿಗೆ ಹಾಗೂ ಉತ್ತಮ ಗುಣಮಟ್ಟದ ತುಕ್ಕು ಹಿಡಿಯದಂತಹ ಕಬ್ಬಿಣದ ಬಾಗಿಲು ಲೋಹದ ಕೀಲುಗಳನ್ನು ಇಲ್ಲಿ ಬಳಸಿರುವುದು ಮತ್ತೊಂದು ವಿಶೇಷ.. ಗಾರೆಯನ್ನು ಬಳಸಿ ಕಟ್ಟಿದ ಇದು.. ಕೋಟೆಯ ಆರಂಭದಲ್ಲಿ ಒಂದು ದ್ವಾರ ಇದ್ದರೆ ಮಧ್ಯಂತರ ಭಾಗದಲ್ಲಿ ಮತ್ತೊಂದು ದ್ವಾರ ಬಾಗಿಲು ಇದೆ.ಮಧ್ಯ ಭಾಗದಿಂದ ಅದ್ಬುತ ಸೂರ್ಯೋದಯ ನೋಡುತ್ತಾ ಒಂದೆರಡು ಚಂದದ ಪೋಟೋಗಳನ್ನು ಕ್ಲಿಕ್ಕಿಸಿಕೊಂಡೆ. ಸೂರ್ಯನ ಆಗಮನವಾಗಬಹುದು ಎಂದು ಅವಸರವಸರವಾಗಿ ಹತ್ತಿ ಬಂದೆ.ಕಾಲುಗಳು ನೋವಾಗಿ ಸುಸ್ತಾಗುತ್ತಿತ್ತು.
ಸರ್ಕಾರಿ ಸೇವೆಗೆ ಸೇರಿದ ಮೇಲೆ ದೈಹಿಕ ಕೆಲಸ ಕಡಿಮೆ ಆಗಿದ್ದರಿಂದಲೋ ಅಥವಾ ಹತ್ತಾರು ವರ್ಷಗಳ ಬೆಟ್ಟವನ್ನು ಹತ್ತದೇ ಇದ್ದ ಪರಿಣಾಮವಾಗಿಯೋ ಕಾಲು ಎತ್ತಿ ಮೆಟ್ಟಿಲುಗಳನ್ನು ಹತ್ತುತ್ತಿದ್ದರೆ ತೊಡೆಗಳಲ್ಲಿ ಶಕ್ತಿಯೇ ಇಲ್ಲವೇನೋ  ಎಂಬಂತೆ ಭಾಸವಾಗುತ್ತಿತ್ತು. ಇನ್ನೂ  ಮೇಲ್ಭಾಗದ ಹೊಂಡದಲ್ಲಿ ಒಳ್ಳೆಯ ಕಮಲದ ಸಸ್ಯಗಳನ್ನು ತಂದು ಹಾಕಿದ್ದಾರೆ. ಬಹುಶಃ ಯಾರೋ ಪುರಾತತ್ತ್ವ ಇಲಾಖೆಯ ಅಧಿಕಾರಿಗಳು ಇರಬಹುದು. ಅದಕ್ಕಾಗಿ  ಹಣಕಾಸಿನ ವ್ಯಯ ಮಾಡಿರಬಹುದು.  ಆಗ ತಾನೇ ರವಿಯ ಆಗಮನಕ್ಕೆ ಕಾಯುತ್ತಿದ್ದ ಕಮಲಳು  ಮೊಗವರಳಿಸುತ್ತಿದ್ದಳು. ಆ  ಅಂದದ ಮೊಗವ ನನ್ನ ಕ್ಯಾಮೆರದೊಳಗೆ ಸೆರೆ ಹಿಡಿದು ಕೋಟೆ ಇಳಿದು ಬಂದೆ... 

ಹಾಗೆ ಸುತ್ತಲೂ ನೋಡುತ್ತಾ ಹತ್ತಾರು ಚಂದದ ಫೋಟೋಗಳನ್ನು  ತೆಗೆದುಕೊಂಡೆ. ಮುಂದೆ ಹೋದರೆ ಸಿಗುವುದು ಕೋಟೆಯ ಮೇಲ್ಬಾಗ... ಮಧ್ಯದಲ್ಲಿ ದ್ವಾರ ಬಾಗಿಲು.. ಎರಡೂ ಬದಿಯಲ್ಲಿ ದೊಡ್ಡ ಗಾತ್ರದ ಭದ್ರವಾದ ಬುರುಜುಗಳು. ಒಳಗಡೆ ಎರಡು ಅಂತಸ್ತಿನ ಲೌಕಿಕ ಕಲ್ಲಿನ ಕಂಬಗಳುಳ್ಳ   ಹಜಾರ ದಂತಹ ರಚನೆಯನ್ನು ಕಾಣಬಹುದು.  ಅದರಾಚೆಗೆ ನೈಸರ್ಗಿಕವಾದ ಸರ್ವ ಋತುಗಳ ಹೊಂಡಗಳಿದ್ದು  ಮಳೆಗಾಲದಲ್ಲಿ ಹೆಚ್ಚು ನೀರು ಮೇಲು ಕೋಟೆಯಿಂದ  ನಾಗಲಕೆರ ಎನ್ನುವ  ಕಂದಕಕ್ಕೆ ಹರಿದು  ಬರುತ್ತದೆ. ಸುತ್ತಲೂ  ಕಂದಕ ಇದ್ದು ನಗರೀಕರಣದ ಪರಿಣಾಮ ಭಾಗಶಃ ಮುಚ್ಚಿಹೋಗಿ ನಾಗಲಕೆರೆಯ ಭಾಗ ಮಾತ್ರ ಕುರುಹಾಗಿ ಉಳಿದುಕೊಂಡಿದೆ. ಅದು ಒಂದೆರಡು ಮಳೆಗೆ ಕೋಡಿಯಾಗಿ ಗುಗ್ಗರಿಹಟ್ಟಿಯ ಹಳ್ಳವನ್ನು  ಸೇರುವುದು.

  ಕೋಟೆಯ ಸುತ್ತಲೂ ಬುರುಜು ಭತೇರಿಗಳನ್ನು ಒಳಗೊಂಡಿದ್ದು ಅಲ್ಲಲ್ಲಿ ಸೈನಿಕರಿಗೆ ತಂಗಲು ಐದಾರು ಅಡಿ ಎತ್ತರದ ಏಳೆಂಟು ಅಡಿ ಉದ್ದದ  ಕೋಣೆಗಳನ್ನು ನಿರ್ಮಿಸಿರುವುದು ವಿಶೇಷ..ಈ ತರಹದ ಸೈನಿಕರ ಶಯನಕ್ಕೆ ಅನುಕೂಲ ಮಾಡಿಕೊಟ್ಟಿರುವುದು ನಾ ಕಂಡಂತೆ ಈ ಕೋಟೆಯಲ್ಲಿಯೇ ಮೊದಲು... ಬೇರೆ ಎಲ್ಲಿಯೂ ಇದುವರೆಗೆ  ಕಂಡಿಲ್ಲ...ತದ ನಂತರ ಹನುಮಪ್ಪ ಎಂಬ ಪಾಳೆ ಪಟ್ಟಿಗೆ ಒಳಪಟ್ಟು ಟಿಪ್ಪುವಿನ ವಶ ಆಗುತ್ತದೆ. ಇಲ್ಲಿನ ಬಿಸಿಲೋ ಅಥವಾ  ಮೈಸೂರಿನಿಂದ ಇಲ್ಲಿವರೆಗೆ ಆಡಳಿತದ ಅಂತರವೋ ಆಯಿತು ಅಷ್ಟೊತ್ತಿಗೆ ಆಂಗ್ಲೋ ಮೈಸೂರು ಯುದ್ಧ ಗಳು ಶುರುವಾಗಿದ್ದರಿಂದ ಯಾರು ಇಲ್ಲದ ಕೋಟೆಯನ್ನು ಬ್ರಿಟಿಷರು ವಶ ಪಡಿಸಿಕೊಂಡು ಸುಡುವ ಬಿಸಿಲ ಬಂಡೆಗೆ ಹೆದರಿಂದ ಬ್ರಿಟಿಷರು ಕೆಳಭಾಗದಲ್ಲಿ  ನೂರಾರು ಸೈನಿಕರ ತುಕಡಿ  ನಿಲ್ಲಲು ಕುದುರೆ ಲಾಯ ಸೈನಿಕ ಟೆಂಟ್ಗಳು ನಿರ್ಮಿಸಿದರು. ಅದೇ ಈಗ Cantonment ಎಂದು ಕರೆಯುವ ಸ್ಥಳ ಆಗಿತ್ತು. ಅಂದಿನಿಂದ  ಶತಮನಗಳ ಕಾಲ ಬೆಳೆದ ನಗರ 8-10 ಕಿಮೀ ವ್ಯಾಪಿಸಿದೆ. ಅದು ಬೃಹತ್ ಮಹಾನಗರ ಆಗಿ ಇನ್ನೂ ನಗರದ ಕಬಂದ ಬಾಹುಗಳು ವಿಸ್ತರಿಸುತ್ತಲೇ ಇದೆ.

ಬರುವಾಗ ನನ್ನೊಳಗಿನ ಸೋಮಾರಿ ಮಧ್ಯಾಹ್ನ ಊಟ ಮಾಡಿ ಮಲಗಬೇಕು... 4-30 ಕ್ಕೆ ಚಳಿಯಾಗೆ ಎದ್ದು ಬೆಟ್ಟ ಬೇರೆ ಹತ್ತಿರೋದು  ಕಾಲು ಬೇರೆ ತುಂಬಾ ನೋವಾಗಿವೆ ಎಂದು  ಪದೇ ಪದೇ ಚುಚ್ಚಿ  ಚುಚ್ಚಿ ಹೇಳುತ್ತಿದ್ದ. ಅವನ ಕೋರಿಕೆಯನ್ನು ಈಡೇರಿಸಬೇಡ ಎಂದು ನನ್ನೊಳಗಿನ ಕ್ರಿಯಾಶೀಲ ಚತುರ ಹೇಳುತ್ತಿದ್ದಾನೆ.
ನೋಡಬೇಕು ಯಾರು ಗೆಲ್ಲುವರೋ ಅಂತ....

✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..