ಶ್ರಮ ಗೌರವ..
18.ಶ್ರಮ ಗೌರವ..
ಶ್ರಮ ಗೌರವ ಎಂದರೆ ಮಾಡುವ ಕೆಲಸವನ್ನು ಗೌರವಯುತವಾಗಿ ಕಾಣುವುದು. ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು ಎಂಬಂತೆ ಜೀವಿಗಳ ಶ್ರೇಷ್ಠತೆ ಕುಲದಿಂದ ಬರುವುದಿಲ್ಲ ಕಾಯಕದ ಶ್ರಮದಿಂದ ಬರುತ್ತದೆ ಎಂಬುದನ್ನ ಅರಿಯುವುದು.
ರಾಜು ಹಳ್ಳಿ ಹುಡುಗ . ತಂದೆ ಚಂದ್ರಪ್ಪ ರೈತ ಮೂರು ಎಕರೆ ಹೊಲ 2 ಎತ್ತುಗಳೇ ಅವರ ಆಸ್ತಿ.ರಾಜು ತಂದೆ ತಾಯಿ ಹೊಲದಲ್ಲಿ ವ್ಯವಸಾಯ ಮಾಡಿ ಕುಟುಂಬದ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ನಗರದ ವಿದ್ಯಾರ್ಥಿಗಳ ಗೆಳೆತನ ಮಾಡಿದ ರಾಜು ಡ್ರೆಸ್,ಊಟ ಭಾಷೆ ಹೀಗೆ ಎಲ್ಲಾ ವಿಷಯದಲ್ಲೂ ಕೆಲವು ಸ್ನೇಹಿತರನ್ನು ಅನುಕರಿಸುತ್ತಿದ್ದನು.ನಮ್ಮ ತಂದೆ ತಾಯಿ ಕೃಷಿಕರು ಎಂದು ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದನು. ಮನೆಯಲ್ಲಿ ಅಮ್ಮ ರಾತ್ರಿಯ ಅನ್ನ ರೊಟ್ಟಿ ಅಥವಾ ಮುದ್ದೆ ಇದೆ ಊಟ ಮಾಡಿ ಹೋಗು ಎಂದರೆ ರಾಜು ಕೋಪಿಸಿಕೊಳ್ಳುತ್ತಿದ್ದ.ಮಗ ಉಪವಾಸ ಹೋಗುವನಲ್ಲಾ ಎಂದು ಬಿಸಿಯಾದ ತಿಂಡಿ ಮಾಡಿ ಊಟ ಮಾಡಿಸಿ ಅಮ್ಮ ಕಳಿಸುತ್ತಿದ್ದಳು. ಒಂದು ದಿನ ಅಮ್ಮನಿಗೆ ಹುಷಾರಿರಲಿಲ್ಲ.ಹೊಲದಲ್ಲಿ ಕಳೆ ಬೆಳೆದು ನಿಂತಿತ್ತು.
ಅಪ್ಪ: "ರಾಜು ನಾಳೆ ಶಾಲೆಗೆ ರಜೆ ಇದೆಯಲ್ಲ ನನಗೆ ಒಂದು ಸಹಾಯ ಮಾಡುವೆಯಾ?
ರಾಜು: ಹ್ಞೂಂ.. ಹೇಳಿ ಅಪ್ಪ...
ಅಪ್ಪ: ಏನಿಲ್ಲ ಮಗ ನಾಳೆ ಹೊಲದಲ್ಲಿ ಸ್ವಲ್ಪ ಎಡೆಕುಂಟೆ ಹಾಕುವುದಿದೆ. ಬರ್ತೀಯಾ ??
ರಾಜು: ನಾನು ಬರುವುದಿಲ್ಲ.. ನಾನು ಗೆಳೆಯರೊಂದಿಗೆ ಆಟ ಆಡಬೇಕು.. ಟಿ ವಿ ನೋಡಬೇಕು...
ಅಮ್ಮ:ಹಾಗೆ ಹೇಳಬಾರದು ಮಗ... ನನಗೆ ಹುಷಾರಿಲ್ಲ.. ಅಪ್ಪ ಒಬ್ಬರೇ ಇದ್ದಾರೆ.. ಸ್ವಲ್ಪವೇ ಅಪ್ಪನಿಗೆ ಸಹಾಯ ಮಾಡು ಎಂದು ಹೇಳಿದ್ದಕ್ಕೆ
ಸರಿಯಪ್ಪ ಹೋಗೋಣ ಎಂದು ತಲೆಯಾಡಿಸಿದ..ಬೆಳಿಗ್ಗೆಯೇ ಹೊಲಕ್ಕೆ ಹೋಗಿ ಎಡೆ ಕುಂಟೆ ಹಾಕಲು ತಂದೆ ಮಗ ಶುರು ಮಾಡಿದರು. ತಂದೆ ರಾಜುವಿಗೆ ಎಷ್ಟು ಚಂದ ಬೆಳಿದಿದೆ ಅಲ್ವಾ ಮಗ ??ಎಂದು ಅತೀ ಸಂತಸದಿಂದ ಹೇಳುತ್ತಿದ್ದರೇ ಕರಿಯ ಬಿಳಿಯ ಎಂದು ಎತ್ತುಗಳನ್ನು ಮಾತಾಡಿಸುತ್ತಾ ನಗುತ್ತಾ ನಗುತ್ತಾ ಕೆಲಸ ಮಾಡುತ್ತಿದ್ದರು.ರಾಜುವಿಗೆ ಕಷ್ಟ ಎನಿಸುತ್ತಿತಾದರೂ ಅಪ್ಪನ ಆ ಸಂತಸವನ್ನು ನೋಡಿ ನಾವು ಆಟ ಆಡುವಾಗ ಕೂಗಿ ಸಂತಸ ಪಡುವುದಕ್ಕಿಂತಲೂ ಹೆಚ್ಚು ಸಂತೋಷ ಪಡುತ್ತಿದ್ದಾರಲ್ಲ? ಎಂದೆನಿಸಿತು. ಅಣ್ಣ ಅಪ್ಪನಿಗೆ ತಂಗಿ ರೇಖಾ ಬುತ್ತಿಯನ್ನು ಹೊತ್ತು ತಂದಳು. ರೇಖಾಳು ಸ್ವಲ್ಪ ಹೊತ್ತು ಎಡೆಕುಂಟೆ ಹೊಡೆದಳು. ಹೊಲದಲ್ಲಿ ಓಡುತ್ತಾ ಆಡುತ್ತಾ,ಹಾಡುತ್ತಾ ಸಂಭ್ರಮಿಸಿದಳು. ಸ್ವಲ್ಪ ಹೊತ್ತು ಎತ್ತುಗಳಿಗೂ ವಿಶ್ರಾಂತಿ ನೀಡಿ ಎಲ್ಲರೂ ಮರದ ನೆರಳಲ್ಲಿ ಊಟಕ್ಕೆ ಕುಳಿತರು.ಅಂದು ಅಮ್ಮನಿಗೆ ಹುಷಾರಿಲ್ಲವಾದ್ದರಿಂದ ತಂಗಿಯೇ ಮುದ್ದೆಯನ್ನು ಮಾಡಿದ್ದಳು. ಮುದ್ದೆಯಲ್ಲಿ ಕೆಲವು ಗಂಟು ಗಂಟುಗಳು ಇದ್ದವು. ರಾಜು ಆ ಮುದ್ದೆಯನ್ನು ನೋಡಿ ಛೀ...ಎಂದು ಅದನ್ನು ಪಕ್ಕಕ್ಕೆ ಇಟ್ಟು ಅನ್ನವನ್ನು ಮಾತ್ರ ಊಟ ಮಾಡಿದ.ತಂದೆ ತನ್ನ ಪಾಲಿನ ಅನ್ನವನ್ನು ಮಗನಿಗೆ ನೀಡಿ ತಾನು ಮಾತ್ರ ಗಂಟು ಗಂಟಾದ ಮುದ್ದೆಯನ್ನು ಅದುಮಿ ಅದುಮಿ ಮಿದುಕೆ ಮಾಡಿ ಊಟ ಮಾಡುತ್ತಿದ್ದನು.
ರಾಜು: ಅಪ್ಪ ಆ ಗಂಟು ಹಿಟ್ಟು ಯಾಕೆ ಊಟ ಮಾಡುತ್ತಿದ್ದೀಯಾ ?? ಎಸೆದು ಬಿಡು...
ತಂದೆ ಇಷ್ಟು ಹಿಟ್ಟಿಗೆ ಎಷ್ಟು ಕಷ್ಟಪಟ್ಟಿದ್ದೇವೆ ಅಂತಾ ಗೊತ್ತಾ ಮಗ ನಿನಗೆ?? ನಾನು ನಿನ್ನ ಅಮ್ಮ ಹಗಲಿರುಳೆನ್ನದೆ ಶ್ರಮವಹಿಸಿ
ಬಿಸಿಲು ,ಮಳೆ ಚಳಿ ಗಾಳಿ,ಗುಡುಗು ಸಿಡಿಲುಗಳಿಗೆ ಅಂಜದೆ ದುಡಿದಿದ್ದೇವೆ. ಈಗ ತಟ್ಟೆಯಲ್ಲಿರುವ ಅನ್ನ ಎಸೆದರೆ ನಮಗೆ ಅನ್ನ ಸಿಗುವುದಿಲ್ಲ ಮಕ್ಕಳೇ ಎಂದು ಹೇಳಿದರು. ಹಾಗೆ ಈ ಜಗತ್ತಿಗೆ ಅನ್ನವನ್ನು ಬೆಳೆದು ಕೊಡುವವನು ರೈತನೇ ಹೊರತು ಬೇರೆ ಯಾರು ಅಲ್ಲ...ಶ್ರೀಮಂತ ಎಷ್ಟೇ ನಗ ನಾಣ್ಯ ಇದ್ದರೂ ಹೊಟ್ಟೆಗೆ ತಿನ್ನುವುದು ಅನ್ನವನ್ನೇ ಹೊರತು ಹಣವನ್ನು ತಿನ್ನಲಾಗುವುದಿಲ್ಲ... ಆಗ ರಾಜು ಮತ್ತೆ ರೇಖಾಳಿಗೆ ಅರ್ಥ ಆಯ್ತು ತನ್ನ ತಂದೆ ನಮಗಷ್ಟೇ ಅಲ್ಲ ಜಗತ್ತಿಗೆ ಅನ್ನ ನೀಡುತ್ತಿರುವ ರೈತ ಎಂದು... ಅಂದಿನಿಂದ ತಮ್ಮ ತಂದೆ ರೈತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಪ್ರತಿಯೊಂದು ಕೂಡ ಶ್ರಮ ಪಟ್ಟಿರೋದ್ರಿಂದ ಬಂದಿರೋದು ಅದನ್ನ ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದೆಂದು ಅಂದಿನಿಂದ ರಾಜು ಮತ್ತೆ ರೇಖಾ ಯಾವ ವಸ್ತುವನ್ನು ಕೂಡ ಅವರು ಎಸೆಯುತ್ತಿರಲಿಲ್ಲ ಅದನ್ನು ಪೂರಾ ಬಳಸಿಕೊಳ್ಳುತ್ತಿದ್ದರು. ಅವರ ಗೆಳೆಯರು ಅಥವಾ ಇತರರು ಅನ್ನವನ್ನೋ ಅಥವಾ ಏನಾದರೂ ವಸ್ತುಗಳನ್ನು ಎಸೆಯುವುದು ನೋಡಿದರೆ ಅವರಿಗೂ ಎಸೆಯದೇ ಬಳಸಿಕೊಳ್ಳುವ ಬಗ್ಗೆ ಹೇಳುತ್ತಿದ್ದರು.ಪ್ರತಿ ಕೆಲಸವನ್ನು ಶ್ರಮ ವಹಿಸಿ ಶ್ರದ್ಧೆಯಿಂದ ಮಾಡಿದ್ದರಿಂದ ಓದು ಬರಹದಲ್ಲೂ ರಾಜು ರೇಖಾ ಸದಾ ಮುಂದೆ ಇದ್ದರು...
ನೀತಿ:
ಶ್ರಮವೇ ವಿರಾಮ,ಶ್ರಮವೇ ಮನೋರಂಜನೆ...ಕಷ್ಟ ಪಟ್ಟು ಕೆಲಸ ಮಾಡಿದರೆ ಸ್ವರ್ಗ ಸುಖ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ