ಅಭಿಮಾನ ಮತ್ತು ದೇಶದ ಅಭಿವೃದ್ಧಿ..

#ಅಭಿಮಾನ_ಮತ್ತು_ದೇಶದ_ಅಭಿವೃದ್ಧಿ..

ಕೆಲವೇ ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದ ವಿಷಯ..ಅದೇನೆಂದರೇ ಭಾರತ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಲಿದ್ದು ಇಲ್ಲಿರುವ ಮಾನವ ಸಂಪನ್ಮೂಲದ ಸದ್ಬಳಕೆಯಾದರೆ ಇಡೀ ವಿಶ್ವದಲ್ಲೇ ಭಾರತ ಪ್ರಚಂಡ ಪ್ರಬಲ ರಾಷ್ಟ್ರಗಳ ಪೈಕಿ ಭಾರತವೇ ಅಗ್ರಗಣ್ಯ ರಾಷ್ಟ್ರ ಆಗುವುದು ಎಂದು ವಿಶ್ಲೇಷಿಸುತ್ತಿದ್ದರು. ಇದಕ್ಕಾಗಿ ಭಾರತದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಇರಬಹುದಾದ ಯುವ ಜನಸಂಖ್ಯೆಯ ಪ್ರಮಾಣ, ಆ ಯುವ ಶಕ್ತಿಗೆ ಇರಬಹುದಾದ ಕೌಶಲಗಳ ದೂರದೃಷ್ಟಿ,ದೇಶದ ಸುಸ್ಥಿರ ಅಭಿವೃದ್ಧಿಯ ಬೆಳವಣಿಗೆಗೆ ಮಾಡಿಕೊಂಡಿರುವ ಒಟ್ಟಾರೆಯ ಭವಿಷ್ಯದ ಸಿದ್ಧತೆಯನ್ನು ಸರ್ವೆ ಮಾಡಿದಾಗ ತಿಳಿದು ಬಂದದ್ದು  ಭಾರತದ ಜನಸಂಖ್ಯೆಯನ್ನು ನೋಡಿ ಜಾಗತಿಕ ಮಟ್ಟದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮವ ಯಾವುದೇ ಲಕ್ಷಣಗಳು ಇಲ್ಲ... ಬದಲಾಗಿ ದೇಶದ ಯುವ ಸಮೂಹ ಸಾಗುತ್ತಿರುವ ದಿಕ್ಕು, ಯೋಚನೆಗಳು, ಕೌಶಲಗಳು,ದೂರದೃಷ್ಟಿ,ಜನಪ್ರತಿನಿಧಿಗಳ ಬದ್ಧತೆ ನೋಡಿದರೆ  ಇಂದು ಇರುವ ಜ್ಞಾನ,ಮೌಲ್ಯಗಳೂ ಕಡಿಮೆಯಾಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಜಾಗತಿಕವಾಗಿ ಯಾರೂ  ಆತಂಕ ಪಡುವ ಅವಶ್ಯಕತೆಯೇ ಇಲ್ಲ ಎಂದು ಅಂತಿಮ ತೀರ್ಮಾನಕ್ಕೆ ಬಂದು ಅವರ ಸಿದ್ದತೆಯಲ್ಲಿ ಅವರು ಪ್ರಗತಿಯತ್ತ ಮುಂದೆ ಸಾಗುತ್ತಿದ್ದಾರೆ. ನಮ್ಮ ದೇಶದ ಬಗ್ಗೆ ಈ ತರ ನಿರ್ಧಾರಕ್ಕೆ ಬರಲು ಕೆಲ ಕಾರಣ ಮತ್ತು ಉದಾಹರಣೆಗಳು ಇಂತಿವೆ.

 ಇದು  ದೇಶಾದ್ಯಂತ ಕಳೆದ ಹದಿನೈದು-ಇಪ್ಪತ್ತು ವರ್ಷಗಳಿಂದ ನಡೆಯುತ್ತಿರುವ ರೀತಿಯಲ್ಲಿ ನಡೆದ ಒಂದು ಬೆಳವಣಿಗೆ. ಒಬ್ಬ ಪ್ರಭಾವಿ ರಾಜಕಾರಣಿಯೋರ್ವ ಈ ಹಿಂದೆ ಮಾಡಿದ ಕೆಲವು ಆರೋಪ ಮತ್ತು ಅಪರಾಧದ ಹಿನ್ನೆಲೆಯಲ್ಲಿ ಅವರ ಜಿಲ್ಲೆಯನ್ನು ಪ್ರವೇಶಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿರಲಿಲ್ಲ. ಸುಮಾರು ಒಂದು  ದಶಕದ ನಂತರ ಸುಪ್ರೀಂ ಕೋರ್ಟ್ ಕಳೆದ ಕೆಲದಿನಗಳ ಹಿಂದೆ  ಅವಕಾಶ ಮಾಡಿತು.ವೈಯಕ್ತಿಕವಾಗಿ  ಆ ರಾಜಕಾರಣಿಗೂ, ಅವರ ಅಪಾರ ಹಿಂಬಾಲಕರೂ  ಪಟಾಕಿ ಹೊಡೆದು, ಕೇಕ್ ಕತ್ತರಿಸಿ,  ಕಟೌಟ್ ಹಾಕಿ, ಎಣ್ಣೆ ಹೊಡೆದು, ಬಾಟಲುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಹೊಡೆದು ಸಂಭ್ರಮಿಸಿದ್ದರು. ಅವರು ಬರುವ ದಿನ ಬೆಳಿಗ್ಗೆಯಿಂದ. ಸಂಜೆವರೆಗೆ ಅವರು ಬರುವವರರಗೂ ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದರು..

 ಹೊರಗಡೆಯಿಂದ ನಿರಂತರವಾಗಿ ಕೇಳುತ್ತಿದ್ದ ಪಟಾಕಿ ಶಬ್ಧಗಳು. ಕಾಂಪೌಂಡ್ ಒಳಗೆ ಎಲ್ಲಿಯೋ ಮಲಗಿದ್ದ ನಮ್ಮ ನಾಯಿಯೊಂದು ಪಟಾಕಿ ಶಬ್ದದ ಘರ್ಷಣೆಗೆ ಒಳ  ಬಂದು ಹೊರಗೆ ಇದ್ದರೆ/ ಹೊರಗೆ ಹೋದರೆ ಸತ್ತೇ ಹೋಗುವುವೆನೇನೋ ಎಂಬಂತೆ ಸೋಪಾದ ಕೆಳಗಡೆಯೇ ಕುಳಿತುಕೊಂಡಿತ್ತು.ಯಾರದೋ ಮದುವೆಯೋ ರಾಜಕಾರಣೀಯೋ ಬಂದಿರಬೇಕು ಒಂದೆರಡು ನಿಮಿಷಗಳಲ್ಲಿ ಮುಗಿಯಬಹುದು ಎಂದು ನಂಬಿದ್ದ  ನನಗೆ ಕೇಳಿಸಿದ್ದು ಸಮಾರು ಅರ್ಧ ಗಂಟೆಯ ಕಾಲ ಒಂದು ಸೆಕೆಂಡ್ ಬಿಡುವಿಲ್ಲದಂತೆ ಅತೀ ಅಪಾಯಕಾರಿ ಶಬ್ಧದ ತೀವ್ರತೆಯಲ್ಲಿ ಸಿಡಿಯತೊಡುಗಿದವು.ಸುತ್ತಲಿನ ಎರಡೂ ಕಿಲೋಮೀಟರ್ ಹೊಗೆಯಿಂದ ಮುಚ್ಚಿಹೋಯಿತು. ಆ ವ್ಯಾಪ್ತಿಯಲ್ಲಿ ಆಡುತ್ತಾ ನಲಿಯುತ್ತಿದ್ದ  ನಾಯಿ ಬೆಕ್ಕು ಇತರ ಪ್ರಾಣಿ ಪಕ್ಷಿಗಳು  ಆ ಶಬ್ದದ ಕಿರಿಕಿರಿಗೆ ನಲುಗಿದವು.  ಈ ಪಟಾಕಿ ಹೊಡೆಯುತ್ತಿರುವುದು ಯಾಕೆಂದು ಅಲ್ಲಲ್ಲಿ ವಿಚಾರಿಸಿದರೆ   ಅವರ್ಯಾರೋ ಹತ್ತಾರು ವರ್ಷಗಳಿಂದ ಈ ಜಿಲ್ಲೆಗೆ ಬರಲು ನಿಷೇಧಿಸಿತ್ತು. ಅವರು ಇವತ್ತು ಬರ್ತಾರೆಂದು ಅದಕ್ಕೇ ಈ ಸದ್ದು ಗದ್ದಲ ಕೇಕೆ ಎಂದು ಹೇಳಿದರು. ಅಯ್ಯೋ ಅದೇನ್ರಿ ?ಅವರ್ಯಾರೋ ರಾಜಕಾರಣಿಗಳು ಬರುವುದಕ್ಕೆ ಇವರು ಇಲ್ಲಿ ಬೆಳಿಗ್ಗೆ ಎಂಟು ಗಂಟೆಯಿಂದ  ದೊಡ್ಡ ದೊಡ್ಡ ಪಟಾಕಿ ಹೊಡೆಯುತ್ತಿದ್ದಾರೆ.ಅಷ್ಟೇ ಅಲ್ಲದೆ ಅವರನ್ನು ಸ್ವಾಗತಿಸಲು ಬಂದ ಯುವಕ ಪಡೆ ಈಗಾಗಲೇ ಕುಡಿತಾ, ಸಿಗರೇಟ್, ಇನ್ನಿತರೆ ಅನೈತಿಕ ಚಟುವಟಿಕೆಗಳಲ್ಲಿ ಈಗಾಗಲೇ ತೊಡಗಿದ್ದಾರೆ .ಅಲ್ಲಿ ಆ ರಾಜಕಾರಣಿಯನ್ನು ಸ್ವಾಗತಿಸಲು  ಬಂದಿರುವವರು ಎಲ್ಲರೂ ಕೂಡ ಈ 16 ರಿಂದ 30 -35 ವರ್ಷದ ಯುವಕರು ಅನ್ನೋದು ಇಲ್ಲಿ ಗಮನಿಸಬೇಕಾದಂತ ವಿಷಯ. ದುಡಿಯ ಬೇಕಾದಂತಹ ವಯಸ್ಸಿನಲ್ಲಿ ಯಾವುದು ರಾಜಕಾರಣಿಗಳ ಬೆಂಬಲಿಗರಂತೆ  ಇದ್ದಾರೆ.ಈಗ ಅವರನ್ನ ಕರೆದುಕೊಂಡು ಹೋಗಲಿಕ್ಕೆ ಇಲ್ಲಿ ಜನ ತರಲೆ ತಮಾಷೆ, ಕೂಗಾಟ ಮಹಿಳೆಯರನ್ನ ಕೆಟ್ಟದಾಗಿ ನೋಡುತ್ತಾ ಏನೇನೋ ಆಟ ಆಡ್ತಾ ಇದ್ದಾರೆ.

ಹೀಗೆ ಇದ್ದಾಗ ಒಂದೊಮ್ಮೆ ಬೆಳಿಗ್ಗೆಯಿಂದ ಎದುರು ನೋಡುತ್ತಿದ್ದಂತೆ ಅವರ ನಾಯಕರು ಬಂದುಬಿಟ್ಟರು ಆಗ ನೋಡಿ ಕೂಗಾಟ ಇನ್ನುಳಿದ ಎಲ್ಲ ಪಟಾಕಿಗಳು ಸಿಡಿ ಮದ್ದುಗಳನ್ನು ಸಿಡಿಸಿದ್ದು ನೋಡು ನೋಡುತ್ತಲೇ ಸಾವಿರಾರು ಬೈಕುಗಳ ಕರ್ಕಶಬ್ದ ಜೈಕಾರ ಕೂಗಟ ಯಾವುದೋ ಒಂದು ರೇಸನ್ನ ಬೈಕುಗಳ ರೇಸನ್ನು ಅದನ್ನು 100 ಪಟ್ಟು ಏಕಕಾಲಕ್ಕೆ ಕಲ್ಪಿಸಿಕೊಂಡರೆ ಹೇಗಿರುತ್ತೋ ಹಾಗೆ ಇದೆ ಇತ್ತ ನಿತ್ಯ ಸಂಚರಿಸುವ ಪ್ರಯಾಣಿಕರ ವಾಹನ ಸರಕು ಸರಂಜಾಮು ವಾಹನ, ಆಂಬುಲೆನ್ಸ್ ಇಂತಹ ತುರ್ತು ವಾಹನಗಳು ಎಲ್ಲೆಲ್ಲಿಯೊ ಜಾಮ್ ಆಗಿವೆ. ಎಲ್ಲಿಯೋ ಮುಂದೆ ಹೋಗಿ ಬಸ್ಸು ರೈಲು ಹಿಡಿಯ ಬೇಕಾಗಿದ್ದ ಪ್ರಯಾಣಿಕರು ಇಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ನಡುವೆ ಸಿಲುಕಿ ಕೊಂಡಿದ್ದಾರೆ. ಇತ್ತ ನಗರದಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡ್ಲಿಕ್ಕೆ ಪೊಲೀಸರು ಹರಸಹಾಸ ಪಡುತ್ತಿದ್ದಾರೆ.   ಒಂದು ದಿನ ಪೂರ ಟ್ರಾಫಿಕ್ ಆದ್ರೆ ಇಲ್ಲಿ ಎಲ್ಲಿಯೋ ಹಳ್ಳಿಗಳಿಂದ ಬಂದಂತಹ ಸಾರ್ವಜನಿಕರು ಯಾರದ್ದೋ ಆಗಮನ ,ಯಾರದೋ ಸ್ವಾಗತ ನಡೆದರೆ ಪೇಚಾಟ ಮಾತ್ರ ಸಾರ್ವಜನಿಕರದ್ದು. ಈ ತರಹ ಆಗೋದು ಇದು ಒಂದು ಉದಾಹರಣೆ ಮಾತ್ರ. ಆದರೆ ಈ ತೆರನಾದ ರ್ಯಾಲಿ,ಶೋಭಾಯಾತ್ರೆಗಳು ನಮ್ಮ ದೇಶದಲ್ಲಿ ದಿನಕ್ಕೆ ನೂರಾರು ಆಗುತ್ತವೆ.

ಇನ್ನು ಇದೇ ತೆರನಾದ ಮತ್ತೊಂದು ಆಯಾಮ ಎಂದರೇ ನಮ್ಮ ಸಿನಿಮಾ ತಾರೆಗಳನ್ನ ತುಂಬಾ ವೈಭವಿಕರಿಸಿ ಅವರನ್ನ ಅನುಕರಿಸುವುದು, ಅನುಸರಿಸುವುದು. ಕಳೆದ ಕೆಲವು ದಿನಗಳಿಂದ ನಮ್ಮ ಕರ್ನಾಟಕದ ಒಬ್ಬ ಸಿನಿಮಾ ತಾರೆ ಕೊಲೆ  ಮಾಡಿದ ವಿಷಯಕ್ಕೆ ಬಂಧನ ಆಗಿದ್ದರು. ಅವರನ್ನು ಬಂಧಿಸಿದ ಕಾರಣಕ್ಕೆ ಲಕ್ಷಾಂತರ ಅವರ ಅಭಿಮಾನಿಗಳು ಇಂದು ಅವರ ಪರ ಜೈಕಾರ ಹಾಕುತ್ತಿದ್ದಾರೆ. ಇಲ್ಲಿ ಯಾರಿಗೆ ಯಾರು ಜೈಕಾರ ಹಾಕಿದರೆ ನಮಗೇನು ಎಂದು ನಿರ್ಲಕ್ಷಿಸಬಹುದೇನೋ ಎನಿಸುತ್ತದೆ ಲಕ್ಷಾಂತರ ಅಭಿಮಾನಿಗಳು ಕೇವಲ 15-35ನೇ ವಯಸ್ಸಿನವರು ಎನ್ನುವುದು ಗಮನಾರ್ಹ... ಪ್ರಚಾರಕ್ಕೋ ಅಭಿಮಾನಕ್ಕೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ರೀತಿಯ ಅನೈತಿಕ ಸಂಚಲನವನ್ನೇ ಮಾಡುತ್ತಿದ್ದಾರೆ. ಅದನ್ನು ತೋರಿಸಲು ಮಾದ್ಯಮದವರೂ ಇವರೊಂದಿಗೆ ಶಾಮೀಲು ಆಗಿದ್ದಾರೆ. ಈ ಸಿನಿಮಾ ತಾರೆಗಳು ಮತ್ತೆ ಅಭಿಮಾನಿಗಳ ವಿಷಯವನ್ನು ಇಲ್ಲಿ ಯಾಕೆ ಪ್ರಸ್ತಾಪಿಸುತ್ತಿದ್ದೇನೆಂದರೆ ವ್ಯವಸ್ಥಿತವಾಗಿ ಇಲ್ಲೂ ಕೂಡ ಒಂದು ಜಾಲ ಇದೆ ಅದು ಅವರು ಮಾಡುತ್ತಿದ್ದಾರೋ ಅಥವಾ ಅವರ ಅಭಿಮಾನಿಗಳು ಮಾಡುತ್ತಿದ್ದಾರೋ ... ಆ  ಬಂಧನವಾಗಿದ್ದ ನಾಯಕನ ಸಿನಿಮಾ ಬಿಡುಗಡೆಯಾದರೆ ಪ್ರತಿ ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಉಚಿತವಾಗಿ ಟಿಕೆಟ್ ಖರೀದಿಗೆ ಹಣವನ್ನ ಕೊಡುವವರು . ಸಾವಿರಾರು ಸಂಖ್ಯೆಯಲ್ಲಿ ಉಚಿತವಾಗಿ ಸಿನಿಮಾವನ್ನು ನೋಡುತ್ತಾರೆ. ನೋಡಲಿ ಬಿಡಿ ಯಾರೋ ಇದ್ದವರು ಕೊಡ್ತಾರೆ ಎಂದು ನೀವು ಹೇಳಬಹುದು ಆದರೆ ಇದೇ ಇಲ್ಲಿ ತೊಂದರೆ ಆಗಿರೋದು. ಇವತ್ತಿನ ಅಂದಾಭಿಮಾನಕ್ಕೆ ಈ ಒಂದು ದೋರಣೆ ಮಾರಕವಾಗಿದೆ. ಒಂದನೇ ಪ್ರಕರಣದಲ್ಲಿ ಆ ರಾಜಕಾರಣಿಯೊಬ್ಬರು ಅವರ ರಾಜಕೀಯ ಬೆಳವಣಿಗೆಗೆ ಅವರು ಅಡ್ಡ ಮಾರ್ಗದಲ್ಲಿ ಸಂಪಾದಿಸಿದ ಹಣವನ್ನೆಲ್ಲಾ ಯುವ ಸಮೂಹವನ್ನು ತನ್ನ ಬೆಂಬಲಕ್ಕೆ ಇರಲು ಅವರು  ತಮ್ಮ ಪರ ಇರಲೆಂದು ಲೆಕ್ಕವಿಲ್ಲದಷ್ಟು  ಹಣವನ್ನು ಖರ್ಚು ಮಾಡುತ್ತಿದ್ದಾರೆ. ಈ ಅಮಾಯಕ ಸಾಮಾನ್ಯ ಪ್ರಜೆಗಳು ಯಾರೋ ಕೊಡುವ ಕಾಸಿನಲ್ಲಿ ಮೋಜು ಮಸ್ತಿ ಮಾಡಬಹುದೆಂಬ ಆಸೆ/ಆಶಯದಿಂದ  ಶಾಲೆ,ಕಾಲೇಜು, ಓದುವುದು, ಕೆಲಸ ಮಾಡುವುದು, ಅಪ್ಪ, ಅಮ್ಮ, ಕುಟುಂಬ ಹೀಗೆ ಎಲ್ಲವನ್ನೂ ಬಿಟ್ಟು ಇಲ್ಲಿ ಅಸಲಿಯೋ ನಕಲಿಯೋ ಸಮಾಜ ಹಾನಿಗೊಳಗಾಗುವಷ್ಟು   ಅಭಿಮಾನವನ್ನಂತೂ ತೋರುತ್ತಿರುವುದು ಸತ್ಯ...

 ದೇಶದಲ್ಲಿ  ಇಂದು  ಆಗುತ್ತಿರುವುದೇನು??

👉 ಒಂದು ತಿಂಗಳಲ್ಲಿ ಆಗಬಹುದಾದಷ್ಟು ಪರಿಸರ ಮಾಲಿನ್ಯ ಕೆಲವೇ ನಿಮಿಷ/ಗಂಟೆಗಳಲ್ಲಿ ಆಗುವುದು.

👉 ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಮಾಡಿಸಿ ಮಕ್ಕಳು ಮಹಿಳೆಯರು ವೃದ್ಧರು ರೋಗಿಗಳೆನ್ನದೇ ಸಾರ್ವಜನಿಕರಿಗೆ ತೊಂದರೆ ಆಗುವುದು.

👉 ಬಹುಮುಖ್ಯವಾಗಿ ಅಭಿಮಾನ ತೋರಿಸಲು ಹಗಲಿರುಳೆನ್ನದೇ ದುಡಿಮೆ ಬಿಟ್ಟು  ಕುಟುಂಬ ಮಕ್ಕಳನ್ನ ಬಿಟ್ಟು ಬರುವುದು.

👉 ಇವರಲ್ಲಿ ಬಹುತೇಕರು ದೂಮಪಾನ  ಕುಡಿತ ಮತ್ತು ಮಾದಕ ವಸ್ತುಗಳ ವ್ಯಸನಿಗಳಾಗಿದ್ದು ಉತ್ತಮ ಅಭ್ಯಾಸ ಇರುವರನ್ನು ದುಶ್ಚಟಗಳಿಗೆ ದಾಸನಾಗುವಂತೆ ಪ್ರೇರೇಪಿಸುವುದು.

👉  ಪರಿಸರ ಮಾಲಿನ್ಯ,ಅತೀ ತೀವ್ರತರವಾದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ .

👉 ಪರಿಸರಕ್ಕೆ ಅತ್ಯಂತ   ಹೆಚ್ಚು ಪ್ಲಾಸ್ಟಿಕ್ ಅಥವಾ ಗಾಜಿನ ವಸ್ತುಗಳ ಬಳಕೆ.

👉 ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡದವರು,ಕುಟುಂಬದಲ್ಲಿ ಹೆಂಡತಿ ಮಕ್ಕಳು ತಂದೆ ತಾಯಿ ಹಸಿವೆಯಿಂದ ಬಳಲಿದರೂ ತಿರುಗಿನೋಡದ ಇವರು ಅಭಿಮಾನದ ಹೆಸರಲ್ಲಿ ಅನ್ನ ಸಂತರ್ಪಣೆ,ಹಾಲಿನ ಅಭಿಷೇಕ ಮಾಡುವರು.

👉 ಹೂವು ಹಾರ ಗಿಪ್ಟ್ ಕೇಕ್ ಪಟಾಕಿ ಇಂತಹವುಗಳ ಕೊಳ್ಳಲು ಆರ್ಥಿಕ ದುಂದು ವೆಚ್ಚ.

👉  ಸಾರ್ವಜನಿಕ ಸೇವಾ ವಲಯದ ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚುವರಿ ಹೊರೆ...ಇದರಿಂದ ವೈಯಕ್ತಿಕ ಸಮತೋಲನ ತಪ್ಪುತ್ತಿರುವುದು.

👉 ಅಪಘಾತಗಳು ಮತ್ತು ಅಪರಾಧಿಗಳ ಸಂಖ್ಯೆ ಏರಿಕೆ..

👉 ಯುವಕರ ಗುಂಪು-ಗುಂಪುಗಳ ಮಧ್ಯೆ ಘರ್ಷಣೆಗೆ ಅವಕಾಶ..

👉 ಶಾಲೆ ಕಾಲೇಜುಗಳಲ್ಲಿ ಉನ್ನತ ವಿದ್ಯಾಭ್ಯಾಸ, ವೃತ್ತಿಪರ ಕೌಶಲ್ಯಗಳನ್ನು ಕಲಿಯಬೇಕಾದವರು ಇಂದು ನಿರುಪಯುಕ್ತರಾಗಿ ಸಮಾಜಘಾತುಕ ಶಕ್ತಿಗಳಂತೆ ಓಡಾಡುತ್ತಿರುವುದು. ಇನ್ನೂ ಸಾಕಷ್ಟು ಇವೆ...

_ಬರಹ ಮುಗಿಸುವ ಮುನ್ನ..._

ಇರುವ ಜನಸಂಖ್ಯೆಯಲ್ಲಿ ಶೇಕಡ 30-35 % ರಷ್ಟು ಹದಿನೈದು ವರ್ಷದಿಂದ ಮೂವತ್ತು ವರ್ಷದ ಯುವಕ ಶಕ್ತಿಯೇ ಇದೆ. ಇವರಿಗೆಲ್ಲ ಉತ್ತಮ ಶಿಕ್ಷಣ,ಕೌಶಲವನ್ನು ನೀಡಿದರೆ ದೇಶಕ್ಕೆ ಶಕ್ತಿ ಆಗುವರು. ಅತೀ ಹೆಚ್ಚು ಮಾನವ ಸಂಪನ್ಮೂಲ ಹೊಂದಿದ ದೇಶದಲ್ಲಿ ಮಾನವ ಸಂಪನ್ಮಲ ಸರಿಯಾಗಿ ನಿಭಾಯಿಸದೇ  ಮಾನವ ಸಂಪನ್ಮೂಲವೇ ನಿರುಪಯುಕ್ತವಾಗುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ..ಶಿಕ್ಷಣ, ನೈತಿಕತೆ, ಕೌಶಲಗಳನ್ನು ಕಲಿತು ದೇಶವನ್ನು  ಪ್ರಬಲ ಶಕ್ತಿಯನ್ನಾಗಿ ಮಾಡಬೇಕಾದವರು ಯಾರಿಗೋ ಜೈ ಕಾರ ಹಾಕಿ ಸಾಯುತ್ತಿರುವುದು ದೇಶದ ಕರಾಳ ದೂರದೃಷ್ಠಿಯಲ್ಲದೇ ಮತ್ತೇನು??? ಹೀಗೆ ಆದರೆ ದೇಶದ ಸುಸ್ಥಿರ ಬೆಳವಣಿಗೆಯ ಸೂಚ್ಯಾಂಕ ಏರುವುದಾದರೂ ಹೇಗೆ??ದೇಶದ ಪ್ರಗತಿಗೆ ಯಾವ ವೇಗವೂ ಇಲ್ಲದೇ ಇನ್ನೂ ಅಧೋಗತಿಗೆ ತಲುಪುವ ಮುನ್ನಾ ಮಕ್ಕಳ ಶಿಕ್ಷಣ ,ಕೌಶಲ,ಮಕ್ಕಳಮೇಲೆ  ಇಂದಿನ ರಾಜಕೀಯ ಬೆಳವಣಿಗಗಳಿಂದಾಗುತ್ತಿರುವ  ಪರಿಣಾಮಗಳನ್ನು ಸಕಾರಾತ್ಮಕವಾಗಿ ಅರ್ಥ ಮಾಡಿಸಲು ಕೆಲವು ಚಿಂತನೆಗಳನ್ನು ಪಠ್ಯದಲ್ಲಿ ಅಳವಡಿಸುವ ತುರ್ತು ಅವಶ್ಯಕತೆಯ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯತೆ ಇದೆ.

✍️  _ನಾಗೇಂದ್ರ ಬಂಜಗೆರೆ_.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..