ವ್ಯಕ್ತಿ ಗೌರವ
17.ವ್ಯಕ್ತಿ ಗೌರವ
ವ್ಯಕ್ತಿ ಗೌರವ ಎಂದರೇ ಯಾವುದೇ ಒಬ್ಬ ಮನುಷ್ಯನಿಗೆ ಅವನಿಗೆ ಇರುವ ಅಧಿಕಾರ,ದೊರೆಯುವ ಸಂಬಳ,ಆತನ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಗೌರವ ನೀಡದೇ ಆತನೂ ಒಬ್ಬ 'ಮನುಷ್ಯ'ಎಂಬ ಕಾರಣಕ್ಕೆ ಸಿಗುವ ಗೌರವವೇ ವ್ಯಕ್ತಿಗೌರವ...
ಶಿಕ್ಷಕರು ತರಗತಿಯಲ್ಲಿ ಪಾಠವನ್ನು ಮಾಡಲು ಸಿದ್ಧವಾಗಿ ಹೋಗಿದ್ದರು..ಹಿಂದಿನ ದಿನ ಶಾಲೆಗೆ ಜಿಲ್ಲಾಧಿಕಾರಿಯೊಬ್ಬರು ಆ ಶಾಲೆಗೆ ಭೇಟಿ ಮಾಡಿದ್ದರು. ನಿನ್ನೆ ನಮ್ ಶಾಲೆಗೆ ಜಿಲ್ಲಾಧಿಕಾರಿಯವರು ಬಂದಿದ್ರು ನೋಡಿದ್ರ?ನೀವು ಎಲ್ಲರೂ ಚೆನ್ನಾಗಿ ಓದಿ ನೀವು ಅವರ ತರ ದೊಡ್ಡ ಅಧಿಕಾರಿಗಳು ಆಗಬೇಕು ಎಂದು ಹೇಳುತ್ತಿದ್ದಾರೆ.. ಆದರೆ ತರಗತಿಯಲ್ಲಿ ಮೂರನೇ ಬೆಂಚ್ ನಲ್ಲಿ ಕೂತಿದ್ದ ವಿದ್ಯಾರ್ಥಿನಿ ತನೇಹಾ ಏನನ್ನೋ ತದೇಕ ಚಿತ್ತದಿಂದ ಯೋಚನೆ ಮಾಡುತ್ತಿರುವಂತೆ ಕಂಡಿತು. ಆ ವಿದ್ಯಾರ್ಥಿನಿ ಏನನ್ನೋ ತುಂಬಾ ಗಹನವಾಗಿ ಯೋಚನೆ ಮಾಡುತ್ತಿದ್ದಾಳೆಂದು ಅರಿತ ಶಿಕ್ಷಕರು ತನೇಹಾ ಎದ್ದೇಳಮ್ಮ ಏನು ತುಂಬಾ ಆಳವಾಗಿ ಯೋಚನೆ ಮಾಡುತ್ತಿದ್ದೀಯಾ ಏನಾದ್ರೂ ಪ್ರಾಬ್ಲಮ್ಮಾ?? ಎಂದು ಕೇಳಿದರು. ತಟ್ಟನೆ ಶಿಕ್ಷಕರ ಮಾತಿಗೆ ಎದ್ದು ನಿಂತ ತನೇಹಾ" ಸರ್ ನೀವೇನು ಅಂದುಕೊಳ್ಳಲ್ಲ ಅಂತ ಅಂದ್ರೆ ನನ್ನದು ಒಂದು ಪ್ರಶ್ನೆ ಇದೆ ಇದೆ ಸರ್ ಕೇಳಲಾ?" ಧಾರಾಳವಾಗಿ ಕೇಳಮ್ಮ ಅದಕ್ಕೇನು?
'ಸರ್ ನಿನ್ನೆ ನಮ್ಮ ಶಾಲೆಗೆ ಜಿಲ್ಲಾಧಿಕಾರಿಗಳು ಬಂದಿದ್ದರು ಅವರು ವಯಸ್ಸಿನಲ್ಲಿ ನಿಮಗಿಂತ ಚಿಕ್ಕವರು ಎನಿಸಿತು ಆದರೂ ಕೂಡ ನೀವು ಅವರನ್ನು "ಸರ್ ...ಸರ್..." ಎಂದು ಮಾತನಾಡಿಸುತ್ತಿದ್ರಿ... ಅವರು ಕೂತರೂ ನೀವು ನಿಂತೆ ಇದ್ರಿ... ಆದರೆ ಆ ಸಂಜನಾಳ ತಾತ ನಿಮಗಿಂತ ಎಷ್ಟೊಂದು ದೊಡ್ಡವರು ಅವರು ಬಂದಾಗ ನೀವು ''ಏನು ಯಜಮಾನ ಬಂದೆ" ?ಎಂದು ಮಾತನಾಡಿಸುತ್ತೀರಿ..ನೀವು ಕುಳಿತಿರುತ್ತೀರಿ ಅವರು ನಿಂತಿರುತ್ತಾರೆ ನಿನ್ನೆ ನಿಮಗಿಂತ ಚಿಕ್ಕವರಿಗೆ ಸರ್... ಸರ್... ಎಂದು ಗೌರವ ಕೊಟ್ಟ ನೀವು ಇವರಿಗೆ ಯಾಕೆ ಈ ತರ ಮಾತಾಡಿಸುತ್ತೀರಾ ಅಂತ ಗೊತ್ತಾಗ್ಲಿಲ್ಲ ಸರ್.... 'ನಾನು ಅದನ್ನೇ ಯೋಚನೆ ಮಾಡುತ್ತಾ ಇದ್ದೆ.... ಇದ್ಯಾಕ್ ಹೀಗೆ ಅಂತಾ.."
ವೇರಿ ಗುಡ್ ತನೇಹಾ...
ಮಕ್ಕಳೇ ತನೇಹಾ ಇಂದು 'ವ್ಯಕ್ತಿ ಗೌರವ'ಕ್ಕೆ ಸಂಬಂಧಿಸಿದ ಒಳ್ಳೆಯ ಪ್ರಶ್ನೆಯೊಂದನ್ನು ಕೇಳಿದ್ದಾಳೆ. ಇದರ ಬಗ್ಗೆ ಇಂದು ಸಂಪೂರ್ಣವಾಗಿ ತಿಳಿದುಕೊಳ್ಳೊಣ ಬನ್ನಿ...
ಮಕ್ಕಳೇ... ನೀವು ನಿಮ್ಮ ಊರಿನಲ್ಲಿ ನೋಡಿರುತ್ತೀರಿ ಅಥವಾ ಕೇಳಿರುತ್ತೀರಿ...ನಮ್ಮ ಸಮಾಜದಲ್ಲಿ ಕೆಲವರು ಕೆಲವರನ್ನು ಸಾರ್, ಧಣಿಗಳೆ, ಸಾವುಕಾರರೇ, ಬುದ್ದಿಯವರೇ,ಗೌಡ್ರೇ, ಬನ್ನಿ, ಹೋಗಿ, ಬಾ, ಹೋಗು, ಬಾರೋ, ಹೋಗೋ ಹೀಗೆ ಅವರ ಬಗ್ಗೆ ಉಪಯೋಗಿಸುವ ಪದಗಳು ಕೇಳಿರುತ್ತೀರಿ... ಇವೆಲ್ಲವೂ ಕೂಡ ಆ ವ್ಯಕ್ತಿಗಳ ಆರ್ಥಿಕ ಶಕ್ತಿಯ ಹಿನ್ನೆಲೆಯಾಗಿರುತ್ತದೆ. ಆ ಹಣದ ಮೌಲ್ಯವೂ ಸಹ ಈ ಪದಗಳ ಮೇಲೆಯೇ ನಿರ್ಧರಿಸಿ ಅವರು ಹೀಗೆ ಮಾತನಾಡುವರು. ಅಧಿಕಾರದಲ್ಲಿದ್ದರೆ ಸಾರ್ ಎಂತಲೂ ,ಅವರು ಹಣ ಆಸ್ತಿಯ ಒಡೆಯರಾಗಿದ್ದರೆ ಸಾಹುಕಾರರೇ,ಧಣಿಗಳೇ,ಬುದ್ದೀ ಎಂತಲೂ ಇನ್ನೂ ಅಧಿಕಾರ ಹಣ ಏನೂ ಇಲ್ಲದವರನ್ನು ಹೋಗೋ ಬಾರೋ ಎಂದು ಏಕ ವಚನದಲ್ಲಿ ಮಾತನಾಡಿಸುತ್ತಾರೆ. ಈ ಸಮಾಜದಲ್ಲಿ ಯಾವುದೆ ವ್ಯಕ್ತಿಗಳು ಮಾಡುವ ಯಾವ ಕೆಲಸವೂ ಮೇಲಲ್ಲ, ಯಾವ ಕೆಲಸವೂ ಕೀಳಲ್ಲ ಎಲ್ಲಕ್ಕೂ ಅದರದೇ ಮಹತ್ವವಿದೆ. ಶ್ರದ್ಧೆಯಿಂದ ಸಮರ್ಪಣಾ ಮನೋಭಾವದಿಂದ, ಖುಷಿ ಖುಷಿಯಿಂದ ಮಾಡಿದರೆ ಎಲ್ಲವೂ ಶ್ರೇಷ್ಠ ಎಂದು ಹೇಳಲಾಗುತ್ತದೆ.
ಭಾರತದ ಬಹಳಷ್ಟು ಕೂಲಿಗಳು ಅನಕ್ಷರಸ್ಥರು. ಕಡು ಬಡವರು, ಸಾಮಾನ್ಯ ಜ್ಞಾನದ ಕೊರತೆ ಇರುವವರು. ಸಮಾಜದ ಇತರ ಆಗುಹೋಗುಗಳ ಬಗ್ಗೆ ಮಾಹಿತಿ ಇಲ್ಲದವರು, ಮೂಡ ನಂಬಿಕೆಗಳಿಗೆ ದಾಸರಾಗಿರುವವರು, ಸಾಮಾನ್ಯ ಜನರಿಂದ ನಿರ್ಲಕ್ಷಿಸಲ್ಪಟ್ಟವರು, ಹಸಿವಿನ ಅನಿವಾರ್ಯತೆಗಾಗಿ ಎಂತಹ ಕೆಲಸವನ್ನಾದರೂ ಮಾಡುವವರು.ಕೆಲಸದ ಒತ್ತಡದ ನಡುವೆ ಬದುಕಿನ ಸ್ವಚ್ಚತೆಯ ಬಗ್ಗೆ ಕಾಳಜಿ ಇಲ್ಲದವರು.
ಯಾವುದೇ ತೆರನಾದ ಕೆಲಸಗಳು ಒಂದು ಸಮಾಜದ ಜೀವನ ಶೈಲಿಯ ಬದುಕಿಗೆ ಅನಿವಾರ್ಯ ಮತ್ತು ಅದರದೇ ಆದ ಮಹತ್ವ ಪಡೆದಿದೆ. ಅದನ್ನು ಯಾರಾದರೂ ಮಾಡಲೇ ಬೇಕು. ಇಲ್ಲದಿದ್ದರೆ ಸಮಾಜ ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥವಾಗುತ್ತದೆ. ಆದರೆ ಬದಲಾಗಬೇಕಿರುವುದು ನಮ್ಮ ಮನೋಭಾವಗಳಲ್ಲಿ. ಮಾತುಗಳಲ್ಲಿ.. ಕೂಲಿ ಮಾಡುವವರನ್ನು ಲೇ... ಹೋಗಲೇ. ಬಾರಲೇ ಎಂದು ನಿಕೃಷ್ಟವಾಗಿ ಕಾಣಬಾರದು. ಮಾಡುವ ಎಲ್ಲಾ ಕೆಲಸಗಳು ಪವಿತ್ರವೇ ಯಾವುದು ಮೇಲೂ ಅಲ್ಲ ಕೀಳೂ ಅಲ್ಲ ಎಂಬುದು ನಮ್ಮ ನಡವಳಿಕೆಯಾಗಬೇಕು.
ಕನಿಷ್ಠ ವ್ಯಕ್ತಿ ಗೌರವ ಆತ ಮನುಷ್ಯ ಎಂಬ ಕಾರಣಕ್ಕಾಗಿ ಸಿಗಬೇಕೆ ಹೊರತು ಆತನ ಉದ್ಯೋಗ, ಆತ ಪಡೆಯುವ ಹಣದ ಆಧಾರ ಮೇಲಲ್ಲ. ಎಷ್ಟೋ ಕೂಲಿ ಕೆಲಸ ಮಾಡುವ ಸ್ಥಳಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇರುವುದಿಲ್ಲ, ಅವರಿಗೆ ಸರಿಯಾದ ಸಮಯಕ್ಕೆ ಆಹಾರ ಒದಗಿಸುವುದಿಲ್ಲ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳವುದಿಲ್ಲ. ಕೆಲವೊಮ್ಮೆ ಕೂಲಿಯನ್ನು ಕೊಡದೆ ಹಿಂಸಿಸುತ್ತಾರೆ. ಕೂಲಿ ಕೇಳಿದರೆ ದಬ್ಬಾಳಿಕೆಯನ್ನು ಮಾಡುತ್ತಾರೆ.
ಈ ತಾರತಮ್ಯಗಳು ನಿವಾರಣೆ ಆಗಬೇಕಾಗಿದೆ. ಆಧಿಕಾರದ ಆಧಾರದ ಮೇಲೆ, ಹಣದ ಆಧಾರದ ಮೇಲೆ, ವೃತ್ತಿಯ ಆಧಾರದ ಮೇಲೆ ಜಾತಿಯ ಆಧಾರದ ಮೇಲೆ ವ್ಯಕ್ತಿ ಗೌರವ ನಿರ್ಧರಿಸಬಾರದು. ಉದ್ಯೋಗ ಏನೇ ಆಗಿರಲಿ ವ್ಯಕ್ತಿಗೆ ಸಿಗಬೇಕಾದ ಕನಿಷ್ಠ ಮಾನ್ಯತೆ ನೀಡಬೇಕು. ಆಗಲೇ ನಮ್ಮ ನಮ್ಮ ಧರ್ಮಗಳಿಗೆ, ದೇವರುಗಳಿಗೆ, ಕಾನೂನಿಗೆ, ಸಮಾಜಕ್ಕೆ, ಮಾನವೀಯತೆಗೆ ಒಂದು ಅರ್ಥ ಬರುತ್ತದೆ. ಮಕ್ಕಳೇ... ನೀವು ಇಂದಿನಿಂದ ಯಾರು ಯಾವ ಕೆಲಸ ಮಾಡಿದರೂ ಮೊದಲು ಅವರೊಬ್ಬ ಮನುಷ್ಯರು ಎಂದು ತಿಳಿದು ಮನುಷ್ಯತ್ವದಿಂದ ವರ್ತಿಸಬೇಕು..ಒಬ್ಬ ಜಿಲ್ಲಾಧಿಕಾರಿಗೆ ಕೊಡುವಷ್ಟು ಗೌರವವನ್ನು ಒಬ್ಬ ಕೂಲಿ-ಕಾರ್ಮಿಕನಿಗೂ ಕೊಡಬೇಕು.
ಇಂದಿನಿಂದಲೇ ನಾವು ಈ ವಿಷಯದಲ್ಲಿ ಕನಿಷ್ಠ ಮಟ್ಟದ ಬದಲಾವಣೆಗೆ ಸಾಧ್ಯವಾದಷ್ಟು ಪ್ರಯತ್ನಿಸೋಣ. ನಾವು ಇರುವ ಜಾಗದಿಂದಲೇ ನಮ್ಮ ಸುತ್ತಮುತ್ತಲಿನ ಜನರ ಬಗ್ಗೆ ನಮ್ಮ ಅಭಿಪ್ರಾಯ ಆತ ಮನುಷ್ಯ ಜೀವಿ ಎಂಬಂತೆ ವರ್ತಿಸೋಣ. ಆತನ ವೃತ್ತಿ ಏನೇ ಆಗಿರಲಿ ಆತನಿಗೂ ಗೌರವ ಕೊಟ್ಟು ಮಾತನಾಡೋಣ, ಆತನ ಮೂಲಭೂತ ಸೌಕರ್ಯಗಳಿಗೂ ಮಾನ್ಯತೆ ನೀಡೋಣ. ಇದೇ ಧರ್ಮ, ಇದೇ ದೇಶಭಕ್ತಿ.
ನೀತಿ: ಎಲ್ಲರನ್ನೂ ಮನುಷ್ಯರಂತೆ ಕಂಡು ಪರಸ್ಪರ ಗೌರವ ನೀಡೋಣ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ