ಕನಸು ಕಥೆಯಾದಾಗ ಕನಸು -9
#ಕನಸು_ಕಥೆಯಾದಾಗ...
_ಕನಸು-09-ನಾಗಲೋಕ_
ಕಳೆದ ಐದಾರು ವರ್ಷಗಳ ಹಿಂದೆ ಒಮ್ಮೆ ನಾನು ಮತ್ತು ಕುಟುಂಬ ಮಕ್ಕಳೊಂದಿಗೆ ಕೆಮ್ಮಣ್ಣುಗುಂಡಿ Z ಪಾಯಿಂಟ್ ಗೆ ಟ್ರೆಕ್ಕಿಂಗ್ ಹೋಗಿದ್ದೆವು.ದಿಗಂತದ ಅಮೋಘ ದರ್ಶನ ಆಗುವುದರೊಂದಿಗೆ ಭದ್ರಾ ಡ್ಯಾಂ, ಡ್ಯಾಂ ನ ಹೀನ್ನೀರಿನ ಆಚೆ ಇರುವ ಅರಣ್ಯಪ್ರದೇಶದ ವಿಹಂಗಮ ನೋಟದ ಸವಿ ಸವಿಯುತ್ತಾ, ಚುಮು ಚುಮು ತಂಗಾಳಿಯಲ್ಲಿ ಆಳೆತ್ತರ ಬೆಳೆದ ಪ್ರೈರಿ ಹುಲ್ಲುಗಾವಲಿನಂತಿದ್ದ ಹಸಿರ ಹಾಸು ಪ್ರದೇಶದಲ್ಲಿ ಕುಳಿತು,ಮಲಗಿ ,ಹೊರಳಾಡಿ ಯಾವ್ಯಾವುದೋ ಭಂಗಿಯಲ್ಲಿ ಪೋಟೋ ತೆಗೆಸಿಕೊಂಡು ಇಳಿಯುವಾಗ ಗುಡ್ಡದ ಸಂದಿಯಿಂದ ಇಳಿದು ಬರುತ್ತಿದ್ದ ಸಣ್ಣ ಜಲಪಾತದ ಮುತ್ತಿನಂಥ ನೀರಿನಲಿ ನಲಿದಾಡಿ ಹಿಂದಿರುಗುವಾಗ ನಮ್ಮ ಜೊತೆಯಿದ್ದ ಶಿವು ಎಂಬ ಹುಡುಗನ ಇಮ್ಮಡಿಯಿಂದ ರಕ್ತ ಕಾರುತ್ತಿತ್ತು. ಸೃಷ್ಠಿಯ ವಿಚಿತ್ರ ಜೀವಿ ಜಿಗಣೆಯೊಂದು ಕಚ್ಚಿ ರಕ್ತ ಕುಡಿದು ಬಿಟ್ಟ ಕಾರಣ ರಕ್ತ ಸೋರುತಿತ್ತು. ಆಗ ಅಲ್ಲಿಯವರೆಗೆ ಎತ್ತರದಲ್ಲಿ ಮೇಲಿನ ಹುಲ್ಲುಗಾವಲಿನಲ್ಲಿ ನಮಗೆ ಯಾವ ಜಿಗಣೆಯು ಕಾಣಲಿಲ್ಲ ಹಾಗೂ ಕಚ್ಚಲಿಲ್ಲವಾದರೂ ಕೆಳಗೆ ನಡೆದು ಬರು ಬರುತ್ತಾ ಅವನಿಗೆ ಕಚ್ಚಿರಬಹುದು. ಆಗ ಮಕ್ಕಳನ್ನು ಹುಷಾರಾಗಿ ನೋಡಿಕೊಳ್ಳುತ್ತಾ ಕಾರು ನಿಲ್ಲಿಸಿದ ಜಾಗಕ್ಕೆ ಬರುತ್ತಿರುವಾಗ ಮದ್ಯದಲ್ಲಿ ಒಂದು ಮಕ್ಕಳು ಆಟ ಆಡಲು ಪಾರ್ಕದನ್ನು ಅರಣ್ಯ ಇಲಾಖೆಯವರು ಮಾಡಿದ್ದಾರೆ. ಅಲ್ಲಿನ ಮಳೆಯ ಹೊಡೆತಕ್ಕೆ ಬಹುತೇಕ ಆಟದ ಸಾಮಾಗ್ರಿಗಳು ಜಂಗು ಹಿಡಿದು ಹಾಳಾಗಿದ್ದವು. ಅಲ್ಲಿ ಯಾವುದೋ ಒಂದು ಆನೆ ಸೊಂಡಿಲಿನಂತಹ ದೊಡ್ಡ ಬಳ್ಳಿಯೊಂದನ್ನು ನೋಡಲು ಹೋದಾಗ ಆಗಿದ್ದು Shock...!ಅದೇನೆಂದರೇ ಅದೆಷ್ಟೋ ದಿನಗಳಿಂದ ರಕ್ತಕಾಣದೇ ಉಪವಾಸ ಇದ್ದ ಕಾರಣವೋ ಏನೋ.... ನಮ್ಮ ಸುತ್ತಾ ಮುತ್ತಾ ಸಾವಿರಾರು ಜಿಗಣೆಗಳು ನಮ್ಮನ್ನು ತಲುಪಲು ಹಾತೊರೆಯುತ್ತಿವೆ.! ನಾವಿದ್ದ ನಾಲ್ಕಾರು ಎಕರೆಯ ಪಾರ್ಕ್ ನಲ್ಲಿ ಸಾವಿರಾರು ಜಿಗಣೆಗಳು! ಹಸಿವಿನಿಂದ ಬಳಲಿ ಅಲ್ಲಿಗೆ ಹೋದ ಐದೂವರೆ ಜನರ ವಾಸನೆ ಗ್ರಹಿಸಿದ ಜಿಗಣೆಗಳು ಹಳೇ ನೀರಿನಲ್ಲಿದ್ದ ಮೀನುಗಳು ಹೊಸ ನೀರನ್ನು ಸೋಕಲು ಓಡುವಂತೆ ನಮ್ಮ ಕಡೆ ಧಾವಿಸುತ್ತಿವೆ.ಜವಗು ಮಣ್ಣು ಅಲ್ಲ ಆದರೆ ಆರದ ತೇವಾಂಶದ ಮಣ್ಣು,ಹುಲ್ಲು,ಕೊಳೆಯುವ ಸ್ಥಿತಿಯಲ್ಲಿದ್ದ ತರಗೆಲೆಯ ಮೇಲೆ ನಮ್ಮ ಸುತ್ತಲೂ ಸಾವಿರಾರು ಕೇರೆ ಹಾವಿನ ಮರಿಗಳು ತಲೆ ಎತ್ತಿ ಕತ್ತು ಅಲ್ಲಾಡಿಸಿದರೆ ಹೇಗೆ ಕಾಣಬಹುದೋ ಹಾಗೆ ಕಾಣುತ್ತಿವೆ.! ಎತ್ತ ನೋಡಿದರೂ ಅಪಾರ ಸಂಖ್ಯೆಯ ಜಿಗಣೆಗಳು ನಮ್ಮ ಮುಂದೆ ಇದ್ದವು. ಭತ್ತದ ಸಸಿ ಹಾಕಿದಾಗ ಏಳೆಂಟು ದಿನಕ್ಕೆ ಎರಡು ಮೂರು ಇಂಚಿನ ಒಂದೇ ಎಳೆಯೊಂದು ಸೂರ್ಯನನ್ನು ಕಾಣುವ ತವಕದಲ್ಲಿ ಕಾಣುವಂತೆ ಇಲ್ಲಿ ಈ ಸಾವಿರಾರು ಜಿಗಣೆಗಳು ನಮ್ಮನ್ನು ತಲುಪಲು ಸಣ್ಣ ಹಾವುಗಳಂತೆ ಕತ್ತೆತ್ತಿ ಹೀಗೆ ಅಲ್ಲಾಡಿಸುತ್ತೇವೆ. ಬಹುಶಃ ಎಚ್ಚರ ತಪ್ಪಿದ ಬಿಸಿರಕ್ತ ಪ್ರಾಣಿಯೊಂದು ಸಿಕ್ಕಿಬಿಟ್ಟರೆ ಹತ್ತಿಪ್ಪತ್ತು ನಿಮಿಷದಲ್ಲಿ ದೇಹದ ಒಂದು ಹನಿಯ ಪಸೆಯೂ ಬಿಡದಂತೆ ಹೀರಿ ಎಳೆಯುವವೇನೋ ಎಂದು ಅನಿಸುತ್ತಿತ್ತು. ಅಲ್ಲಿಂದ ಬಚಾವಾದ ನಾವು ನಾನು ಜೀವನದಲ್ಲಿ ನೋಡಿರುವ ಅತ್ಯಧಿಕ ಜಿಗಣೆಗಳನ್ನು ಇಲ್ಲಿಯೇ ನೋಡಿದ್ದು...ಆ ಭಯಾನಕ ಸಂದರ್ಭವನ್ನು ನೆನಪು ಮಾಡಿಕೊಂಡರೂ ಈಗಲೂ 'ಅಮ್ಮಾ..' ಎಂದು ತಲೆಕೊಡವುವಂತೆ ಆಗುತ್ತದೆ...ಅಂತಹದ್ದೇ ಸಂದರ್ಭ ಇಲ್ಲಿ ಬಂದೊದಗಿದೆ.ಆದರೆ ಅಲ್ಲಿ ಜಿಗಣೆ ಇಲ್ಲಿ ಹಾವು...
ವಾತವರಣದಲ್ಲಿರುವ ಮೂಲ ಘಟಕಾಂಶಗಳು ಹೆಚ್ಚು ಕಡಿಮೆ ಆದರೆ ಭೌತಿಕವಾಗಿ ಹೊಸ ಹೊಸ ಜೀವಿಗಳು ಅಥವಾ ಇರುವ ಜೀವಿಗಳಲ್ಲಿ ನೂರು ಪಟ್ಟು ಸಾವಿರ ಪಟ್ಟು ಅಧಿಕವಾಗುತ್ತಾವಂತೆ.. ಅದು ಯಾವುದೇ ಜೀವವರ್ಗ ಆದರೂ ಆಗಿರಬಹುದು. ಸರಿಸೃಪ, ಜಲಚರ ಮೃದ್ವಂಗಿ , ಸಸ್ಯವರ್ಗ ಇತರ ಯಾವುದಾದರೂ ಒಂದು ವರ್ಗ ಯಥೇಚ್ಛವಾಗಿ, ಪ್ರಕೃತಿಯ ಅಸಮತೋಲನಕ್ಕೆ ಕಾರಣವಾಗುವುದಂತೆ. ಹೀಗೆ ಬದಲಾದ ವಾತಾವರಣದಲ್ಲಿ ಹಾವುಗಳ ಸಂಖ್ಯೆ ಅಥವಾ ಸರಿಸೃಪಗಳ ಸಂಖ್ಯೆ ಅಧಿಕವಾಗಿತ್ತು. ಎಷ್ಟರಮಟ್ಟಿಗೆ ಅಧಿಕವಾಗಿತ್ತೆಂದರೇ ಮಳೆ ಬಂದಾಗ ಎರೆಹುಳುಗಳು ಕಾಣುವ ಹಾಗೆ...! ನಾಗರ ಹಾವು, ಕೇರೆ ಹಾವು,ಕೊಳಕು ಮಂಡಲ,ಕಟ್ಟು ಹಾವು..ಹಸಿರಾವು...ಹೆಬ್ಬಾವು.. ಅಯ್ಯೋ ಎಲ್ಲಿ ನೋಡಿದರೂ ಹಾವೇ...! ರಸ್ತೆಯಲ್ಲಿ ಮನೆಯಲ್ಲಿ.. ಎಲ್ಲೆಲ್ಲೂ ಹಾವು ಎಂದರೆ ಹಾವುಗಳೇ!
ಕನಸು ಹೀಗಿತ್ತು... ನಾವು ಆ ಹಾವುಗಳ ಲೋಕಕ್ಕೆ ಹೊಸಬರು. ಅಲ್ಲಿನ ಕಾಡು,ಗಿಡ-ಮರ, ಜನರ ಜೀವನ ನಾವು ನೋಡುತ್ತಿದ್ದೇವೆ.ಅವರೆಲ್ಲಾ ಹೇಗೆ ಜೀವನ ಮಾಡುತ್ತಿದ್ದಾರೋ ಹಾಗೆ ನಾವು ಇಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳಬೆಂಕೆಂದು ನಮ್ಮ ಭವಿಷ್ಯದ ಯೋಚನೆ ಮತ್ತು ಯೋಜನೆ...
_ಇಬ್ಬರೂ ಡಾಕ್ಟರ್ಸ_...
ಆ ಕಾಡಿನಲ್ಲಿ ಬರುತ್ತಿರುವಾಗ ಅಲ್ಲೊಂದು ಕಾರು ಜಾರುವ ನೆಲದಲ್ಲಿ ಹತ್ತಲಾಗದೇ ಗಿರ್ರ್ ಎಂದು ನಿಂತಲ್ಲೇ ತಿರುಗುತ್ತಿತ್ತು. ಅವರ ಸಹಾಯಕ್ಕೆ ಯಾರೂ ಇಲ್ಲದಿದ್ದರಿಂದ ಆಕಸ್ಮಿಕವಾಗಿ ನಾನೂ ಅಲ್ಲೇ ಇದ್ದುದರಿಂದ ಮಣ್ಣಿನಲ್ಲಿ ಊತು ಹೋಗಿ ಕಾಲು ಭಾಗ ಮಾತ್ರ ಕಾಣುತ್ತಿದ್ದ ಮೂರ್ನಾಲ್ಕು ಕಲ್ಲುಗಳನ್ನು ಆ ತಿರುಗುವ ಟೈರಿಗೆ ಹಾಕಿದೆ. ಆದರೆ ಆ ಡ್ರೈವರ್ ಆ ಕಲ್ಲನ್ನು ಹತ್ತಿಸಲು ಹತ್ತಾರು ಸರಿ ಪ್ರಯತ್ನಿಸಿ ಕಷ್ಟವಾಗಿ ಆಗುವುದಿಲ್ಲ ಎಂದು ಕೆಳಗಿಳಿದರು. ನಾನು ಟ್ರೈ ಮಾಡಲಾ ಸರ್?? ನಿಮಗೆ ಡ್ರೈವಿಂಗ್ ಬರತ್ತ??? ಈ ತರ ಕಾರು ಓಡಿಸಿ ಅಭ್ಯಾಸ ಇದೆಯೇ ಎಂದು ಕೇಳಿದರು. ಈ ತರಹದ್ದೇ ಕಾರು ಓಡಿಸಿಲ್ಲ. ಆದರೆ ಅನೇಕ ಕಾರುಗಳನ್ನು ಓಡಿಸಿದ್ದೇನೆ ಎಂದಿದ್ದಕ್ಕೆ ನೋಡಿ ಒಮ್ಮೆ ಎಂದು ಹೇಳಿದ್ದಕ್ಕೆ ಕಾರು ಹತ್ತಿ ಸ್ಟಾರ್ಟ್ ಮಾಡಿದೆ. ಗಾಡಿಯ ಕ್ಲಚ್ ಲೆವೆಲ್ ಕಡಿಮೆ ಇದ್ದುದರಿಂದ ಎಕ್ಸ್ಕೂಲೇಟರ್ ಬಿಡುತ್ತಿದ್ದಂತೆ ಕಾರ್ ಇಂಜಿನ್ ನಿಂತು ಹೋಯಿತು.ಕೊನೆಗೆ ಎರಡನೇ ಬಾರಿಗೆ ಕಾರನ್ನು ಆ ಗುಂಡಿಯಿಂದ ಹೊರ ತಂದಿದ್ದಕ್ಕೆ ಆ ವ್ಯಕ್ತಿ ಗಟ್ಟಿಯಾಗಿ ಪರಿಚಿತವಾದೆವು. ಆ ಅನಾಮಿಕ ಅರಣ್ಯದಲ್ಲಿ ಶಾಶ್ವತ ವಾಗಿ ಮನೆಯ ಕಟ್ಟಿ ನೆಲೆಸಿದ್ದ ಅಲ್ಲಿ ಕಂಡ ಏಕ ಮನೆ ಮತ್ತು ಜನರೆಂದರೇ... ಡಾಕ್ಟರ್ ದಂಪತಿಗಳು.. ಯಾವುದೋ ಬೆಟ್ಟ ಗುಡ್ಡ ಗಾಡುಗಳಲ್ಲಿ ಸಂಚರಿಸುವಂತಹ ಕಾರು... ಆದರೆ ಡಾಕ್ಟರ್ ಆಗಿ ಕೆಲಸ ಮಾಡಲು ಅಲ್ಲಿಂದ ಬೇರೆ ಎಲ್ಲಿಗೋ ಹೋಗಿ ಬರುತ್ತಿದ್ದರು. ಒಂದೆರಡು ದಿನಗಳಲ್ಲಿ ಅವರ ಇನ್ನಷ್ಟು ಪರಿಚಿತವಾಯಿತು.
ಅವರು ಗಂಡ ಹೆಂಡತಿ ಇಬ್ಬರೂ ಡಾಕ್ಟರ್ಸ್... ಅವರು ನಮಗಿಂತಲೂ ಮುಂಚಿನಿಂದಲೂ ಆ ಹಾವುಗಳ ಏರಿಯಾದಲ್ಲಿ ಇದ್ದುದರಿಂದ ಮತ್ತು ಹಾವುಗಳು ಮತ್ತು ಅವರು friendly ಆಗಿ ಇದ್ದುದರಿಂದ ನಾವು ಅವರಂತೆ ಹಾವುಗಳೊಂದಿಗೆ ಇರಲು ಆ ಡಾಕ್ಟರ್ಸ್ ನಮಗೆ ಮಾದರಿ ಆದರು.
ಕೀಲು ಕುದುರೆ ಮಂಚಗಳು:
ಅಲ್ಲಿನ ಹಾವುಗಳ ಕಾಟದಿಂದ ತಪ್ಪಿಸಿಕೊಳ್ಳಲೋ ಅಥವಾ ಅಲ್ಲಿಯ ಪದ್ಧತಿಯೋ ಏನೋ..?? ಎಲ್ಲರ ಮನೆಯಲ್ಲಿನ ಮಂಚಗಳು 8-10 ಅಡಿಯ ಎತ್ತರದಲ್ಲಿ ಇರುತ್ತಿದ್ದವು. ಕೇವಲ ಮನೆಗಳಲ್ಲಿ ಮಾತ್ರವಲ್ಲದೇ ಮನೆಯ ಒಳಗೆ, ಮನೆಯ ಮುಂದೆ ಕಾಡು ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಹೊಲಗದ್ದೆಗಳಲ್ಲಿ ಎಲ್ಲೆಂದರಲ್ಲಿ ಇಂತಹ ಕೀಲು ಮಂಚಗಳು ಕಂಡುಬರುತ್ತಿದ್ದವು. ಕೆಲವರು ಸೊಳ್ಳೆ ಪರದೆಗಳಿಂದ ಮುಚ್ಚಿದ್ದರೆ ಇನ್ನೂ ಕೆಲವರು Pu slide ಗಳಿಂದ ಮತ್ತು ಮೆಸ್‌ಗಳನ್ನು ಬಳಸಿರುತ್ತಿದ್ದರು. ಹಗ್ಗದಿಂದಲೇ ಮಾಡಿದ ಏಣಿಗಳನ್ನು ಮಾಡಿರುತ್ತಿದ್ದರು.ಮಂಚದ ಮೇಲೆ ಹತ್ತಿದ ಮೇಲೆ ಅದನ್ನು ಸುತ್ತಿ ನೇತು ಹಾಕುತ್ತಿದ್ದರು. ಯಥೇಚ್ಛವಾಗಿ ಮಳೆ ಬೀಳುತ್ತಿದ್ದ ಆ ಕಾನನದಲ್ಲಿ ಮಳೆಯ ನೀರು ಸೋರದೆ ಇರುವಷ್ಟು ಭದ್ರವಾಗಿಯಂತೂ ಅವರು ಆ ಮಂಚಗಳನ್ನು ನಿರ್ಮಿಸಿಕೊಂಡಿದ್ದರು.*
_ಅನಾಥವಾಗಿ ಬಿದ್ದಿದ್ದ ವಾಹನಗಳು:
ಆ ಕಾಡಿನಲ್ಲಿ ಸೈಕಲ್, ಸ್ಕೂಟರ್ ಹಳೆಯ ಕಾರುಗಳು ಸೇರಿ ಕೆಲವು ಮಾಲೀಕರಿಲ್ಲದ ವಾಹನಗಳು ಅಲ್ಲಲ್ಲಿ ಇರುತ್ತಿದ್ದವು ಅವುಗಳನ್ನ ಬೇಕಾದವರು ಅವಶ್ಯಕತೆ ಇದ್ದಾಗ ಬಳಸಬಹುದಿತ್ತು..
_ಆ ಡಾಕ್ಟರ್ ಗೆ ಕಚ್ಚಿದ ಹಾವು:_
ನಾನು ಆ ಡಾಕ್ಟರ್ ಮನೆ ಮುಂದೆ ಹೋಗುತ್ತಿದ್ದೇನೆ.. ಆ ಡಾಕ್ಟರ್ ಎರಡು ಮೂರು ಹಾವುಗಳನ್ನು ಎಲ್ಲೋ ಒಳಗಿನಿಂದ ಎಳೆದು ಹೊರಗೆ ಹಾಕುತ್ತಿದ್ದರು. ದಿಡೀರನೆ ಕೈ ಹಿಂದೆ ಎಳೆದು ಛೇ... shut ಎಂದರು. ಅಲ್ಲೇ ಇದ್ದ ನಾನು 'ಏನಾಯ್ತು ಸರ್ ಎಂದು ಕೇಳಿದರೆ ಹಾವು ಕಚ್ಚಿದ ಹಾಗಾಯಿತು ಕಣ್ರಿ ಎಂದರು. ಅಯ್ಯೋ ಹೌದಾ ಎಂದು ಓಡಿ ಹೋದೆ ಇದ್ದ ಮೂರ್ನಾಲ್ಕು ಹಾವುಗಳಲ್ಲಿ ಯಾವ ಹಾವು ಕಚ್ಚಿದೆಯೋ ಗೊತ್ತಿಲ್ಲ.ಆದರೆ ಹಾವಂತೂ ಕಚ್ಚಿದೆ ಬಲಗೈಯ ಮನೆ ಕಟ್ಟಿಗೆ ಕಚ್ಚಿರುವ ಹಾವು ಕಚ್ಚಿದ ಜಾಗದಲ್ಲಿ ಸಣ್ಣದೊಂದು ಕ್ಯಾಮರಾ ಲೆನ್ಸ್ ನಂತೆ ಎಕ್ಸರೇ ಮಾಡುವ ರೀತಿ ಕೈ ಮೇಲೆ ಹಿಡಿದರು. ಆ ಲೆನ್ಸ್ ನಿಂದ ರಕ್ತನಾಳಗಳು, ರಕ್ತ ಹರಿಯುವುದು ಕಾಣಿಸುತ್ತಿದೆ. ಅದು ಹಿಡಿದೆಲೆಲ್ಲಾ ದೇಹದ ಎಲ್ಲಾ ಭಾಗದಲ್ಲೂ ಕೂಡ ರಕ್ತ ಸಂಚಾರ ಗೋಚರಿಸುತ್ತಿದೆ ಆದರೆ ಕಚ್ಚಿದ ಜಾಗದಲ್ಲಿ ಮಾತ್ರ ಕೆಂಪು ಹಿಮೋಗ್ಲೋಬಿನ್ ಕಾಣಿಸದೆ ಹಸಿರಾಗುತ್ತಾ ರಕ್ತ ಗೋಚರಿಸುತ್ತಿಲ್ಲ . "ರಕ್ತ ಹೆಪ್ಪುಗಟ್ಟುತ್ತಿದೆ ಸಾರ್ ಏನಾದರೂ ಮಾಡಬೇಕು.... Emergency ಅಂದೆ.. ಬೇರೆ ಯಾರಾದರೂ ಆಗಿದ್ದರೆ ಹಾಸ್ಪಿಟಲ್ ಗೆ ಹೋಗಿ ಎನಬಹುದಿತ್ತು, ಡಾಕ್ಟರ್ ಗೆ ಹಾಸ್ಪಿಟಲ್ಗೆ ಹೋಗಿ ಅಂತ ಹೇಗೆ ಹೇಳುವುದು?? ಅವರೇನೋ ನಥಿಂಗ್ ಟು worry sir...I have vaccinated nothing ll happen ಎನ್ನುತ್ತಿದ್ದಾರೆ.ಆದರೂ ಅವರಿಗೆ ಪುಸ್ತಕದ ಜ್ಞಾನ...ನನಗೆ ನೆಲದ ಜೀವನದ ಜ್ಞಾನ ..ಹಾವು ಕಚ್ಚಿದರೆ ಸಾಯುವರು ಅಂತ ನನಗೆ ಗೊತ್ತು.. ಆದರೆ ಹಾವು ಕಚ್ಚಿದರೆ ಔಷಧಿ ಕೊಡುವುದು ಅವರಿಗೆ ಗೊತ್ತಿರಬಹುದು ಆದರೂ ಯಾಮಾರಿದರೆ ಹೋಗುವುದು ಪ್ರಾಣವಲ್ಲವೆ ???ಅದಕ್ಕೆ ಆ ಡಾಕ್ಟರ್ ಅವರ ಹೆಂಡತಿ ಇದ್ರಲ್ಲ??? ಡಾಕ್ಟರಮ್ಮ ಅವರನ್ನು ಕರೆದುಕೊಂಡು ಬರಲು ಹೊರಟೆ. ಆಗ ಅಲ್ಲೇ ಇದ್ದ ಸೈಕಲನ್ನು ಹತ್ತಿ ಅರ್ಜೆಂಟು ಬೇಗ ಹೋಗಬೇಕು ಏನಾದರೂ ವಾಹನ ಬೇಕಾಗಿತ್ತು. ಡಾಕ್ಟರ್ ಅವರದು ಎರಡು ಕಾರು ಇತ್ತು.ಅದೆಲ್ಲಾ ಕೇಳದೇ ಇದ್ದು ಅದ್ಯಾಕೋ ಅಲ್ಲೇ ಇದ್ದ ಸೈಕಲ್ಲೇ ಸಾಕು ಎಂದು ಸೈಕಲ್ ತೆಗೆದುಕೊಂಡೆ. ಅಷ್ಟೊತ್ತಿಗೆ ಕಾಡಿನಲ್ಲಿ ಎಲ್ಲೋ "ಬೇಗ ಬೇಗ ನಡೀರಿ.. ನಡಿರೋ ನಡಿರಿ ನಡಿರಿ" ಎಂಬ ಶಬ್ದ. ಆದರೆ ಯಾರೂ ಕಾಣಿಸುತ್ತಿಲ್ಲ. ಮೂರ್ ನಾಲ್ಕು ಸೆಕೆಂಡುಗಳ ನಂತರ ದಾಂಡಿಗರು ಒಂದು stretcher ಮೇಲೆ ಯಾರನ್ನು ಕಟ್ಟಿಕೊಂಡು ಬಂದಿದ್ದಾರೆ .ಅದು ಹೇಗೆ ಕಟ್ಟಿದ್ದಾರೆ ಅಂದರೆ ನಾಲ್ವರು ಹೆಗಲ ಮೇಲು ಹೊರಬಹದು ಅಥವಾ ನಾಲ್ಕು ಜನ ಲಂಬಕೋನವಾಗಿಯೂ ಕೂಡ ಆ ಸ್ಟ್ರೆಚ್ಚರ್ ನ್ನು ಹಿಡಿಯಬಹುದಿತ್ತು. ಅವರನ್ನು ಸಹಾಯಕ್ಕೆ ಕರಿಯೋಣ ಎಂದರೆ ಅವರು ಇನ್ನೊಬ್ಬರಿಗೆ ಸಹಾಯ ಮಾಡಲು ಅಥವಾ ಅವನಿಗೂ ಹಾವು ಕಡಿದಿರಬೇಕು ಅವರನ್ನ ತುರ್ತಾಗಿ ಆಸ್ಪತ್ರೆಗೆ ಸೇರಿಸಲು ಓಡುತ್ತಿದ್ದಾರೆನಿಸಿ ಹೇಗಾದರೂ ಮಾಡಿ ಆ ಡಾಕ್ಟರ್ ಅಮ್ಮ ನವರನ್ನು ಕರೆದುಕೊಂಡು ಬರಲು ಹೊರಟೆ...
ನಾನು ಹತ್ತಿದ್ದ ಸೈಕಲ್ ಮರದ ಸೈಕಲ್..ಆ ಸೈಕಲ್ ನ ಚಕ್ರ, ಪೆಡಲ್ಲು, ಸೀಟು,ಹ್ಯಾಂಡಲ್ ಎಲ್ಲದೂ ಕೂಡ ಮರದಿಂದಲೇ ಮಾಡಲ್ಪಟ್ಟಿದ್ದು.ಅದನ್ನ ತುಳಿಯುವಾಗ ಕಿರ್ರ್... ಕಿರ್ರ್... ಎಂದು ಶಬ್ದ ಬರುತ್ತಿತ್ತು. ಆ ಕಿರ್ ಎಂಬ ಶಬ್ದಕ್ಕೂ ಏನೋ ಸಡನ್ನಾಗಿ ಕಾಡಿನಲ್ಲಿದ್ದ ಪಕ್ಷಿಗಳ ಚೀರಾಟ ಮಾಡಿದವು. ಕಾಡಿನಲ್ಲಿ ಕ್ರೂರ ಮೃಗವೊಂದು ಘರ್ಜಿಸಿದಾಗ ಕಾಡಿನಲ್ಲಿರುವ ಪಕ್ಷಿಗಳು, ಮಂಗಗಳು ಚೀರಿ ಇತರರಿಗೆ ಎಚ್ಚರಿಕೆಯನ್ನು ನೀಡಿದಂತೆ ಜೋರಾದ ಚೀರಾಟ ಕೇಳಿಸಿತು.ಸೈಕಲ್ ಮೇಲಿದ್ದ ನಾನು ಯಾವುದೋ ಚಿರತೆಯೋ ಹುಲಿಯೊ ಹತ್ತಿರ ಎಲ್ಲೋ ಇದೆ ಅದಕ್ಕೆ ಈ ಚೀರಾಟ ಎಂದು ಭಾವಿಸಿ ನಿಧಾನವಾಗಿ ಮುಂದೆ ಹೋಗುತ್ತಿದ್ದೇನೆ. ನನ್ನ ಮುಂದೆ ಒಂದು ಕರ್ರನೆಯ ಕಾಳಿಂಗ ಸರ್ಪ ಒಂದು ಅಡ್ಡಬಂದಿತು. ಅದು ನನ್ನನ್ನೇ ನೋಡುತ್ತಿದೆ.ನಾನು ಅದನ್ನೇ ನೋಡುತ್ತಿದ್ದೇನೆ... ಅದಕ್ಕೆ ಏನ್ ಅನಿಸಿತೊ ಏನೊ ಕೆಲವು ಸೆಕೆಂಡುಗಳ ನಂತರ ಮುಂದೆ ಹೋಯಿತು. ಅದು ಮುಂದೆ ಹೋಗುತ್ತಿದ್ದಂತೆ ಸುತ್ತಲೂ ಸರ್ರ್... ಬುರ್ರ್... ಬುಸ್... ಎನ್ನುವ ಶಬ್ದ . ನೋಡಿದರೆ ಅಸಂಖ್ಯೆ ಯ ಹಾವುಗಳು ನನ್ನ ಸಮಾನಾಂತರವಾಗಿ ಕಾಡಿನಲ್ಲಿ ಬರುತ್ತಿವೆ. ಅಜ್ಜ ಹಾವು, ಅಜ್ಜಿ ಹಾವು, ಅಣ್ಣಾವು, ತಂಗಿಯಾವು ಕರಿಯಾವು,ಬಿಳಿಯಾವು, ದೊಡ್ಡಾವು, ಸಣ್ಣಾವು... ಹೀಗೆ ಹಾವಿನ ವಂಶವೇ ನನ್ನ ಎಡಬಲದಲ್ಲಿ ಬರುತ್ತಿದೆ.ದೊಡ್ಡ ಹಾವು ,ಹೆಬ್ಬಾವುಗಳು ದೇಹ ಭಾರ ಹೊತ್ತು ನಿಧಾನಕ್ಕೆ ಸಾಗುತ್ತಿದ್ದರೆ ಹರೆಯದ ಹಾವುಗಳು, ಕಿರಿಯ ಹಾವುಗಳು ದೊಡ್ಡ ದೊಡ್ಡ ಹಾವುಗಳ ಮೇಲೆ ಹತ್ತಿ ಹರಿದು ಬರುತ್ತಿವೆ. ಮರದ ಮೇಲೆ ನೋಡಿದರೆ ಹದ್ದು ಮತ್ತು ಇತರ ಪಕ್ಷಿಗಳು ಹಾರುತ್ತ ಹಿಂಬಾಲಿಸುತ್ತಿವೆ. ಯಾಕೋ ನನ್ನನ್ನೇ ಟಾರ್ಗೆಟ್ ಮಾಡಿದಂತೆ ಕಾಣಿಸುತ್ತಿದೆ ಆದರೆ ಏಕಾಏಕಿ ದಾಳಿ ಮಾಡಬಹುದು ಅವು ಹಿಂಬಾಲಿಸುತ್ತಿರುವುದು ನೋಡಿದರೆ ಯಾಕೋ ಸಂಶಯ. ಒಮ್ಮೆ ಟೆಸ್ಟ್ ಮಾಡಿ ನೋಡೋಣ ಎಂದು ನನ್ನ ಉಡನ್ ಸೈಕಲ್ ನಿಲ್ಲಿಸಿದೆ ಏನ್ ಆಶ್ಚರ್ಯ?? ಅವುಗಳೂ ಸ್ತಬ್ಧವಾಗಿ ನಿಂತು ಬಿಟ್ಟವು... ನಾನು ಒಂದು ಪೆಡಲ್ ಓತಿದರೆ ಅವು ಕೂಡ ಮುಂದೆ ಹೋಗಲು ತಲೆಯನ್ನ ಮೂಮೆಂಟ್ ಮಾಡುತ್ತಿವೆ. ಹಾಗಾದರೆ ಟಾರ್ಗೆಟ್ ನಾನೇ ಎಂದಾಗಾಯ್ತು. ಯಾಕೋ ನೂರಾರು ಹಾವುಗಳ ಮಧ್ಯೆ ನಾನು ಗೆಲ್ಲಲಾರೆ ಎಂದು ಸೈಕಲ್ ಇಳಿದು 30-40 ಹೆಜ್ಜೆ ಓಡಿದೆ. ಉಸಿರಾಟ ಜೋರಾಗಿ ಹಿಂದೆ ನೋಡಿದರೆ ನಾನು ಓಡಲು ಶುರು ಮಾಡಿದ ಸೆಕೆಂಡಿಗೆ ಅವುಗಳೂ ಕೂಡ ಸೈಕಲ್ ಅನ್ನು ಹತ್ತಿ ಸೀಟನ್ನು ಹಿಡಿಯಲು ಆ ದೊರೆಯುತ್ತೇವೆ ಹಿಡಿಯುವಂತೆ ಎಲ್ಲವೂ ಸೈಕಲ ಮೇಲೆ ಮುಗಿಬಿದ್ದಿವೆ. ನೋಡ ನೋಡುತ್ತಲೇ ಸೈಕಲ್ ಮೇಲೆ ಹಾವುಗಳ ರಾಶಿ ಆಯಿತು.ಹಾಗಾದರೆ ಈಗ ಮಿಕ ನಾನಲ್ಲ.. ಹಾವುಗಳಿಗೆ ಬೇಕಾಗಿರುವುದು ಸೈಕಲ್. ಇಡೀ ನಾಗ ಕುಲವೇ ಆ ಸೈಕಲ್ ಬೇಕು ಎಂದು ಅದರ ಹಿಂದೆ ಹಿಂಬಾಲಿಸಿದ ಹಿನ್ನೆಲೆ ಗೊತ್ತಾಗಲಿಲ್ಲ. ಆದರೆ ನಾನು ತುಳಿಯುವ ಮುನ್ನ ಆ ಸೈಕಲ್ ನ್ನು ಕೇಳುವವರು ಗತಿ ಇರಲಿಲ್ಲ. ಆಗ ಇಲ್ಲದ ಹಾವುಗಳು ನಾನು ಆ ಸೈಕಲ್ ಹತ್ತಿದ ಮೇಲೆ ಕಿರ್ರ್ ಎಂಬ ಶಬ್ದ ಮಾಡಿದ ಮೇಲೆ ಅವುಗಳಿಗೆಲ್ಲಾ ಗೊತ್ತಾಗಿದ್ದು ಅಂತ ಅನ್ಸುತ್ತೆ ಆದರೂ ನಾನು ದೊಡ್ಡ ಸಮಸ್ಯೆಯಿಂದ ಬಚಾವಾದೆ.ಅಂದು ಕೆಮ್ಮಣ್ಣುಗುಂಡಿ ಯಲ್ಲಿ ಕಂಡ ಜಿಗಣೆಗಳು ಇಂದು ಹಾವಾಗಿ ಬಂದಿವೆ ಎನಿಸಿತು. ಕುಮುದಾ ಮತ್ತು ಮಕ್ಕಳನ್ನು ಹಾವುಗಳು ಸುತ್ತುವರಿದಿದ್ದಾವೇನೊ?? ಕುಮುದಾಳಿಗೆ ಹಾವು ಕಂಡರೆ ಆಗುವುದಿಲ್ಲ. ಒಂದು ವೇಳೆ ಇಷ್ಟು ಹಾವುಗಳು ಅವಳನ್ನು ಸುತ್ತುವರೆದಿದ್ದೆ ಆದರೆ ಏನಾಗುವುದೋ ಗೊತ್ತೇ ಇಲ್ಲ ಎಂಬ ಆತಂಕ ದಿಂದ ಎದ್ದು ನೋಡಿದರೆ ಬೆಳಗ್ಗೆ 4:30 ಆಗಿತ್ತು. ಅವತ್ತೇ ನನ್ನೊಳಗಿನ ಕ್ರಿಯಾಶೀಲ ಬಳ್ಳಾರಿ ಕೋಟೆಯನ್ನ ಹತ್ತಿಸಿದ್ದು ಬಳ್ಳಾರಿ ಕೋಟೆಯ ಬಗ್ಗೆ ನೀವೆಲ್ಲಾ ಓದಿದ್ದೀರಿ ಅಲ್ವೇ??
✍️ _ನಾಗೇಂದ್ರ ಬಂಜಗೆರೆ._
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ