ರೂಟ್ ಮ್ಯಾಪ್...
ರೂಟ್ ಮ್ಯಾಪ್....
(~Route Map~ ROOT MAP)
ನನಗೆ ಆರೇಳು ವರ್ಷ ಇರಬೇಕು... ನಮ್ಮ ಮನೆಯು ಅಡವಿಯಲ್ಲಿ ಇದ್ದುದರಿಂದ ಅದೆಲ್ಲೆಂದಲೋ ಬಂದು ಸೇರಿದ್ದ ನಾನ ಗಾತ್ರದ ಕಪ್ಪೆಗಳು ನಮ್ಮ ಮನೆಯಲ್ಲಿ ಎಲ್ಲೆಂದರಲ್ಲೇ ಇರುತ್ತಿದ್ದವು. ಬೇಸಿಗೆಯಲ್ಲಿ ಮಾತ್ರ ತಣ್ಣೀರಿಗೆ ಇಡುತ್ತಿದ್ದ ಗುಡಾಣದ(ಮಡಿಕೆ ) ಮಗ್ಗುಲಲ್ಲಿ ಬಸವಳಿದಂತೆ ಹೊಟ್ಟೆಯೆಲ್ಲಾ ಮರಳಿಗೆ ತಾಗುವಂತೆ ಮಾಡಿ ವಟ ಪೆಟ್ಟಿಗೆಯನ್ನು ಅಲ್ಲಾಡಿಸುತ್ತಾ ಮಲಗಿರುತ್ತಿದ್ದವು.. ಆಗಾಗ ಚಳಿ ಕಾಯಿಸಲು ಒಲೆಯ ಸಮೀಪ ಹೋಗುತ್ತಿದ್ದ ನಾನು ಕೊಳ್ಳಿಯಿಂದ ಸುಟ್ಟಿದ್ದು ಇದೆ.ಆದರೆ ಅವು ಮಾತ್ರ ನಮ್ಮ ಮನೆಯ ಗುಡಾಣದ ತಾಣ ಬಿಟ್ಟು ಹೋಗುತ್ತಿರಲಿಲ್ಲ. ಬೆಳಗ್ಗೆ ಮತ್ತು ಸಂಜೆ ಕಾಲು ಕಾಲಿಗೆ ಸಿಕ್ಕುತ್ತಿದ್ದವು.ಇಂದು ಕಾಲಿಗೆ ಕಪ್ಪೆ ಸಿಗುವ ಹಾಗೆ ಮುಂದೊಂದು ದಿನ ಹಾವುಗಳು ಕಾಲಿಗೆ ಸಿಗುವುದು ಖಚಿತ ಎಂದು ಅನಿಸುತ್ತಿತ್ತು. ದಿನ ಬೆಳಗಾದರೆ ಮನೆಯ ದೊಡ್ಡವರೆಲ್ಲರೂ ಹೊಲಕ್ಕೆ, ಸಣ್ಣವರೆಲ್ಲರೂ ಶಾಲೆಗೆ ಹೋದಾಗ ಲೆಕ್ಕವಿಲ್ಲದಷ್ಟು ಬಾರಿ ನಾಗರ ಹಾವುಗಳು ಬಂದು ಕಪ್ಪೆಗಳನ್ನು ನುಗ್ಗಿ ಹೋಗಿವೆ... ಅದರಲ್ಲಿ ಕೆಲವು ಹಾವುಗಳು ನಮ್ಮ ಅಪ್ಪನ ಕೈಗೆ ಸಿಕ್ಕು ತಮ್ಮ ಅಂತ್ಯವನ್ನೂ ಕಂಡಿವೆ. ಹಾವುಗಳು ಕಪ್ಪೆಯನ್ನು ನೋಡಿಯೇ ಬರುತ್ತಿದ್ದವೋ... ಅಥವಾ ಆಹಾರ ಹುಡುಕಿಕೊಂಡು ಬರುತ್ತಿದ್ದಾಗ ಆಕಸ್ಮಿಕವಾಗಿ ಕಂಡವೋ ಏನೋ..?? ದಿನವೂ ಕಾಣುತ್ತಿದ್ದ ಒಂದೊ -ಎರಡೋ ಕಪ್ಪೆಗಳು ಕಾಣುತ್ತಿಲ್ಲವಾದರೆ ಯಾವಾಗಲೋ ಯಾವುದೋ ಒಂದು ಹಾವು ಬಂದು ಕಪ್ಪೆಗಳನ್ನು ನುಂಗಿ ಹೋಗಿದೆ ಎಂತಲೇ ಅದರ ಅರ್ಥ...! ಹಾವುಗಳು ಮಾತ್ರ ಕಪ್ಪೆಗಳ ನುಂಗಿ ಮನೆಯಲ್ಲಿದ್ದ ಕಪ್ಪೆಗಳ ಸಂಖ್ಯೆ ಕಡಿಮೆ ಆಗುತ್ತಿದ್ದವು. ಹಾವುಬಿಟ್ಟರೆ ಕಪ್ಪೆಯ ಭಕ್ಷಕ ಶತೃವೇ ಇರಲಿಲ್ಲ.ಯಕಶ್ಚಿತ್ ಕಪ್ಪೆಗಳ ಆಗಮನದಿಂದ ಹಾವು ಆಹ್ವಾನಿಸಿ, ಅದನ್ನು ಮಕ್ಕಳಿರುವ ಮನೆಯಲ್ಲಿ ಸೇರಿಸಿಕೊಂಡು ಇರುವಷ್ಟು ಧಾರಾಳತೆ ನಮ್ಮ ಮಾನವರಿಗೆ ಇರಲಿಲ್ಲವಾದ್ದರಿಂದ ಒಂದುದಿನ ಕೋಪಿಷ್ಟನಾಗಿ ಎಲ್ಲಾ ಕಪ್ಪೆ ಗಳನ್ನು ಒಂದು ಗೋಣಿಚೀಲದಲ್ಲಿ ಹಾಕಿಕೊಂಡು ಒಂದುವರೆ ಕಿಲೋಮೀಟರ್ ನಷ್ಟು ದೂರದ ಪಾಳುಬಾವಿಗೆ ಹಾಕಿ ಬಂದಿದ್ದೆ. ಒಂದೆರಡು ದಿನ ಕಪ್ಪೆಗಳಾವು ಕಾಣಲಿಲ್ಲವಾದರೂ ಎರಡ್ಮೂರನೇ ದಿನಕ್ಕೆ ನಾನು ಬಾವಿಗೆ ಎಸೆದು ಬಂದ ಅಷ್ಟೂ ಮಂಡೂಕಗಳೆಲ್ಲಾ ಮೇಲೆ ಹತ್ತಿ ಪುನಃ ನಮ್ಮ ಮನೆಯ ಘಟದ ಬುಡವನ್ನು ಸೇರಿದ್ದವು.!!ಬಹುಶಃ ಒಂದೆರಡು ಕಪ್ಪೆಗಳು ಮಾತ್ರ ಪುನಃ ಬಂದಿರಲಿಲ್ಲವೇನೋ..? ಇದೇ ತರಹ ನಮ್ಮ ಮನೆಯಲ್ಲಿ ಸಾಕಿದ್ದ ಬೆಕ್ಕು ಮರಿ ಹಾಕಿದಾಗ, ನಾಯಿಗಳು ಮರಿಹಾಕಿದಾಗ ಮರಿಗಳೆಲ್ಲಾ ಸಾಕುವರಾರೆಂದು ಒಂದೆರಡು ವಾರಗಳು ಆದ ನಂತರ ಅವುಗಳನ್ನು ನಮ್ಮ ಅಕ್ಕ-ಪಕ್ಕದ ಯಾವುದಾದರೂ ಊರೊಳಗೆ ಬಿಟ್ಟು ಬರುವುದೇ ದೊಡ್ಡ ಸಮಸ್ಯೆ... ಒಂದೇ ಪ್ರಯತ್ನಕ್ಕೆ ಈ ನಾಯಿ ,ಬೆಕ್ಕಿನ ಮರಿಗಳನ್ನು ಬಿಟ್ಟುಬಂದು ನೆಮ್ಮದಿಯಾಗಿದ್ದ ದಿನಗಳು ಇಲ್ಲವೇ ಇಲ್ಲ ಎನ್ನಿ.. ಅವುಗಳನ್ನು ಬಿಟ್ಟುಬಂದ ಕೆಲವೇ ನಿಮಿಷ,ಗಂಟೆ,ದಿನಗಳಲ್ಲಿ ಹೇಗೋ ನಮ್ಮ ಮನೆಗೆ ವಾಪಾಸು ಬಂದು ಬಿಡುತ್ತಿದ್ದವು.ಮತ್ತೆ ಅದೇ ಚೀಲದಲ್ಲಿ ಹಾಕಿಕೊಂಡು ಮೊದಲು ಮಾಡಿದ ತಪ್ಪುಗಳನ್ನು ಮಾಡದೇ ಏನೇನೋ ಕಸರತ್ತು ಮಾಡಿದರೂ ಹಲವು ಬಾರಿ ಮತ್ತೆ ಹಿಂತಿರುಗಿ ಬಂದು ಬಿಡುತ್ತಿದ್ದವು. ಆಗ ಅವು ಹಿಡಿಯಲು ಹೋದರೆ ಜಪ್ಪಯ್ಯ ಎಂದರೂ ಕೈಗೆ ಸಿಗುತ್ತಿರಲಿಲ್ಲ. ಕೊನೆಗೆ ಅವು ಹಾಲು ಕುಡಿಯುವಾಗ, ಊಟ ಮಾಡುವಾಗಲೂ ನಮ್ಮ ಕೈಗೆ ಸಿಗದೇ ನಮ್ಮ ಮನೆಯಲ್ಲೇ ಠಿಕಾಣಿ ಹೂಡಿದ ಸಾಕುಪ್ರಾಣಿಗೇನು ಕಡಿಮೆ ಇಲ್ಲ...
ಇತ್ತೀಚಿಗೆ ಚಿಕ್ಕೋಡಿಯಿಂದ ಯಜಮಾನನ ಜೊತೆಗೆ ಪಂಢ್ರಾಪುರಕ್ಕೆ ತೆರಳಿದ್ದ ವಯಸ್ಕ ನಾಯಿ ಪಂಡ್ರಾಪುರದಲ್ಲಿ ಯಜಮಾನ ಪಾಂಡುರಂಗ ವಿಠ್ಠಲನ ದರ್ಶನ ಮಾಡುವ ವೇಳೆ ತಪ್ಪಿಸಿಕೊಂಡಿತ್ತು. ಎಷ್ಟು ಹುಡುಕಿದರೂ ಸಿಗದ ನಾಯಿ ಕಳೆದೊಯಿತು ಎಂದು ನಿರ್ಧರಿಸಿ ವಾಪಸು ಬಂದಿದ್ದರು.ಆದರೆ ಎರಡು ದಿನಗಳ ನಂತರ ಸರಿ ಸುಮಾರು 225 ಕಿಮೀ ಕ್ರಮಿಸಿ ಮನೆಗೆ ಹಿಂತಿರುಗಿತ್ತು.! ಇಷ್ಟೆಲ್ಲಾ ಕಪ್ಪೆ ಬೆಕ್ಕು ನಾಯಿಯ ಕಥೆಗಳನ್ನು ಯಾಕೆ ಹೇಳಿದೆ ಎಂದರೇ ಅವುಗಳ ತಲೆಯಲ್ಲಿ ಮ್ಯಾಪ್ ನ ಚಿತ್ರಣ ಎಷ್ಟು ಬಲವಾಗಿ ಮೂಡಿದೆ ಎಂದು ತಿಳಿಸಲು... ಹೌದು ಈ LOCATION ಯುಗದಲ್ಲಿ ಹಗಲು ನೋಡಿದ್ದನ್ನು ರಾತ್ರಿ ನೋಡಿದಾಗ,ರಾತ್ರಿ ನೋಡಿದ್ದನ್ನು ಹಗಲು ನೋಡಿದಾಗ ಅದು ಬೇರೆ -ಇದು ಬೇರೆಯೇ ಎಂದು ಗೊಂದಲಕ್ಕೆ ಒಳಗಾಗುತ್ತೇವೆ. ಅಂತಹದ್ದರಲ್ಲಿ ತೃಣಮಾತ್ರ ಇರುವೆಗಳು ಹಗಲು ರಾತ್ರಿಯ ಪರಿವೆ ಇಲ್ಲದೇ ತಾವು ವಾಸವಿರುವ ಸ್ಥಳಕ್ಕೆ ಬೆಟ್ಟಗುಡ್ಡಗಳ ದಾಟಿಯಾದರೂ ತಲುಪುವವು...!ಇರುವೆಗಳ ಪಾಲಿಗೆ ಎರಡ್ಮೂರು ಇಂಚಿನ ಎತ್ತರ ಬೆಟ್ಟವೇ ಸರಿ..ಇನ್ನೂ ಜೇನುನೊಣಗಳು, ಹದ್ದು ಬಾವಲಿಗಳು ಸರಿಸೃಪ ಸಸ್ತನಿಗಳು ಎಲ್ಲವೂ ತಮ್ಮ ಬದುಕಿನ ವ್ಯವಹಾರಕ್ಕೆ ಹೋಗಿ ಬರುವ ಹಾದಿಯನ್ನು ನೆನಪಿಟ್ಟುಕೊಂಡಿರುತ್ತಾವೆ.ಭಾರತದಿಂದ ಆಸ್ಟ್ರೇಲಿಯಾದ ವೈಮಾನಿಕ ಅಂತರ ಸುಮಾರು 8000 km.. 8-10 ಸಾವಿರ ಕಿಲೋಮೀಟರ್ ಗಳ ಪಯಣದ ಗಮ್ಯವನ್ನು ಅವು ನೆನಪಿಟ್ಟುಕೊಂಡು ಹಾರಿ ಬಂದು ತಮ್ಮ ಸಂತಾನ ಮಾಡಿ ಮಕ್ಕಳು- ಮರಿಗಳೊಂದಿಗೆ ಅವು ಪುನಃ ಅವುಗಳ ಮಾತೃಭೂಮಿಗೆ ಹಾರಿ ಹೋಗುತ್ತವೆ ಎಂದರೆ ಅದು ಸಾಮನ್ಯ ಸಂಗತಿ ಅಲ್ಲವೇ ಅಲ್ಲ... ಹಾಗೆಯೇ ಕಡಲಜೀವಿಗಳು ಸಂತಾನಕ್ಕಾಗಿ ಸಾವಿರಾರು ಕಿಲೋಮೀಟರ್ ಈಜಿ ಬಂದು ಪುನಃ ವಾಪಾಸು ಹೋಗುವ ಅಭ್ಯಾಸ ಈ ಭೂಮಿಯ ಉಗಮದ ಕಾಲದಿಂದಲೂ ಇದೆ. ಅದೆಷ್ಟೋ ಜೀವಿಗಳು ಯಾವನ್ನು ಎಲ್ಲಿ ಬಿಟ್ಟರೂ 360° ಯಲ್ಲಿ ಎಲ್ಲಿಂದಲಾದರೂ ತಮ್ಮ ಮೂಲ ಸ್ಥಳಕ್ಕೆ ಆಗಮಿಸುತ್ತಿದ್ದವು. ಇದು ತಲಾ ತಲಾಂತರದಿಂದಲೂ ಬೆಳೆದು ಬಂದ ಎಲ್ಲಾ ಜೀವಿಗಳ ನೈಸರ್ಗಿಕ ಜೀವನ ಆಗಿತ್ತು. ಭೂಮಿಯ ಮೇಲೆ ಜನಸಂಖ್ಯೆಯು ಹೆಚ್ಚಿದಂತೆಲ್ಲಾ ಜನಗಳ ಓಡಾಟ ಜಾಸ್ತಿ ಆಯಿತು. ಓಡಾಟ ಜಾಸ್ತಿಯಾದಂತೆಲ್ಲಾ ದಾರಿ,ರಸ್ತೆ,ರಹದಾರಿಯಾಗಿ ಕಾಲು ದಾರಿಯಿಂದ ಹೆದ್ದಾರಿಯವರೆಗೆ ಸಾಗಿ ಬಂದದ್ದು ನಿಮಗೆ ಗೊತ್ತೇ ಇದೆ.
2008 ರಿಂದ ನಮ್ಮ ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಯಾದ Google ವಿಶ್ವದ ನಕ್ಷೆಯಲ್ಲಿನ ಸಂದಿ ಗೊಂದಿ,ಗಲ್ಲಿ ಗಲ್ಲಿ ಗಳನ್ನು ಅಂಗೈಯಲ್ಲಿ ತೋರಿಸುತ್ತಿದೆ. ಇದರಿಂದ ಇಂದಿನ ಜೀವನಕ್ಕೆ ಸರಳ ಎನಿಸಿತಾದರೂ ನಮ್ಮ ಮೆದುಳಿಗೆ ವಂಶವಾಹಿನಿಗಳ ಮೂಲಕ ಬಂದಿದ್ದ ಯಾವುದೇ ಸ್ಥಳದ ನಕ್ಷಾ ಸಾಮರ್ಥ್ಯ ಅಳಿಸುತ್ತಿದೆ.ಎಷ್ಟೋ ಬಾರಿ ಗೂಗಲ್ ಮ್ಯಾಪ್ ನ್ನು ನಂಬಿ ಹೋಗಿ ದಾರಿ ತಪ್ಪಿದವರು,ನೀರಿನಲ್ಲಿ ಮುಳುಗಿದವರು,ಎಷ್ಟು ತಿರುಗಿದರೂ ದಾರಿಯೇ ಸಿಗದ ಸಂದರ್ಭಗಳು ಹತ್ತಾರು ಇವೆ. ಅಂತಹವುಗಳು technical ಸಮಸ್ಯೆ ಎಂದು ಭಾವಿಸಿದರೂ google ತೆಗೆದು ಪಕ್ಕಕ್ಕಿರಿಸಿದರೆ ನಾವು ಯಾವುದಾದರೂ ಸ್ಥಳಕ್ಕೆ ಹೇಗೆ ಹೋಗಬೇಕು,ಹೇಗೆ ಬರಬೇಕು ಎಂದು ದಾರಿಯೇ ಗೊತ್ತಿಲ್ಲದ ಮಂಗಗಳಂತಾಗಿದೆ ನಮ್ಮಗಳ ಜೀವನ.
ನಮ್ಮ ಪೌರಾಣಿಕ ಇತಿಹಾಸದಲ್ಲಿ ದಕ್ಷಿಣ ಅಮೇರಿಕಾದ ಅತಳ ಸುತಲ ಮಹಾತಲ ಇತರ ಹೆಸರುಗಳ ಪ್ರಸ್ತಾಪ ನೋಡಬಹುದು. ಅಂದರೆ ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆಯೇ 15000 ಕಿಲೋ ಮೀಟರ್ ಅಂತರದ ನಮ್ಮ ದೇಶ ಇರುವ ಇನ್ನೊಂದು ಪಾಶ್ವದಲ್ಲಿರುವ ಸ್ಥಳಗಳ ಪರಿಚಯದ ಸಾಧ್ಯತೆ ಇತ್ತೆಂದರೇ ಇಂದು ಅದರ ನಿಖರವಾದ ದಾರಿಯೂ ಗೊತ್ತಾಗಿರಬೇಕಾಗಿತ್ತು. ಹೋಗಲಿ ಆ ಕಪ್ಪೆ ಬೆಕ್ಕು ನಾಯಿಗಳಿಗೆ ಇರಬೇಕಾದ accuracy ಆದರೂ ಇರಬೇಕಾಗಿತ್ತು.ಅದ್ಯಾಕೋ ರೂಟ್ ಮ್ಯಾಪ್ ನ ಬೇರನ್ನೇ (Roots) ಬಿಟ್ಟು ನಾವು ಮ್ಯಾಪ್ ನ್ನು ಅವಲಂಬಿಸುತ್ತಿರುವುದು ಮಾನವನ ಸಂಕುಚಿತ ಹಾದಿಗೆ ಹಿಡಿದ ಕೈಗನ್ನಡಿ ಎನ್ನಬಹುದು.
✍️ _ನಾಗೇಂದ್ರ ಬಂಜಗೆರೆ._
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ