ಮೊಟ್ಟೆಯೂ... ಸೃಷ್ಠಿಯೂ...

#ಮೊಟ್ಟೆಯೂ...#ಸೃಷ್ಠಿಯೂ....

ನನ್ನ ಹಾಸ್ಟೆಲ್ ದಿನಗಳಲ್ಲಿ  ಒಂದಷ್ಟು ದಿನ ಒಬ್ಬ  B ed  ಆದ ಬಾವಿ ಶಿಕ್ಷಕನೊಬ್ಬ ಹಾಸ್ಟೆಲ್ ಮಕ್ಕಳಿಗೆ ಗಣಿತ ಪಾಠವನ್ನು ಉಚಿತವಾಗಿ ಹೇಳಿಕೊಡಲು ಬರುತ್ತಿದ್ದ. ಹೇಳಿ ಕೇಳಿ  ನಮ್ಮ ಹಾಸ್ಟೆಲ್ ಹುಡುಗರು ಇಂಗ್ಲೀಷ್  ಹಾಗೂ ಗಣಿತದಲ್ಲಿ  ವಾಸ್ತವ ಲೆಕ್ಕಕ್ಕೆ ಬಹಳ ಬಹಳ ದೂರವೇ ಇದ್ದುದರಿಂದ  ಅವರ ಅಲ್ಪ ಸಹಾಯವೂ ಬೆಟ್ಟದಷ್ಟು ಸಹಾಯವಾಗಿತ್ತು. ನಮ್ಮ ಎಲ್ಲಾ ಹುಡುಗರು ಅಷ್ಟೊ ಇಷ್ಟೋ ಗಣಿತದ ಬಗ್ಗೆ ಇದ್ದ ಜ್ಞಾನದ ಆಧಾರದ ಮೇಲೆ  ಮಂದೆ ಸಾಗುತ್ತಿದ್ದೆವಾದರೂ  ಕೆಲವರಿಗೆ  ಸಂಕಲನ ವ್ಯವಕಲನ ದಶಕ  ಸಹಿತ  ಲೆಕ್ಕಗಳು ಕಷ್ಟ ಎನಿಸುತ್ತಿದ್ದವು.ಅದಕ್ಕಾಗಿ ನಮ್ಮ ಹಾಸ್ಟೆಲ್ ನಿಂದ ಕೆಲವೇ ದೂರದಲ್ಲಿ ಇದ್ದ ಗೆಜ್ಜಗದ ಪೊದೆಯಿಂದ ಗೆಜ್ಜಗದ ಬೀಜಗಳನ್ನು ಎಣಿಕೆ ಮಾಡಲು ತಂದು ಹಾಕಿದ್ದೆವು. ಅದರಲ್ಲಿ ಒಬ್ಬ ಹುಡುಗ ಇದ್ದ... ಅವನ ಹೆಸರು ತಿಪ್ಪೇಶ ಅಂತ. ನಮಗೆ ಆದರೆ ಅವನು ಗಾಬರಿ ಆದಾಗ, ಗೊಂದಕ್ಕೊಳಗಾದಾಗ ಅವನು ಕಣ್ಣುಗಳನ್ನು ಪಿಳಿ ಪಿಳಿ ಬಿಡುತ್ತಿದ್ದಿದರಿಂದ ಅವನನ್ನು 'ವಿಕ್ಕಿ-ಮಿಕ್ಕಿ' ಎಂಬ ಅನ್ವರ್ಥನಾಮದಿಂದಲೇ ಅವನನ್ನು ಗುರುತಿಸುತ್ತಿದ್ದೆವು. ಹೀಗೆ  ಗೆಜ್ಜಗದಿಂದ ಲೆಕ್ಕ ಮಾಡುತ್ತಾ ಮಾಡುತ್ತಾ ಕೊನೆಗೆ ಗೆಜ್ಜಗವನ್ನು ಬಿಟ್ಟು ಹಾಗೆ ಎಣಿಸಿಕೊಂಡು ಲೆಕ್ಕ ಮಾಡಿ ಹೇಳಬೇಕಾಗಿತ್ತು ಅಥವಾ  ಬರೆಯಬೇಕಾಗಿತ್ತು. ಪಾಪ ಈ ತಿಪ್ಪೇಶನಿಗೆ ಗೆಜ್ಜಗ ಇಲ್ಲದಿದ್ದರೆ ಎಣಿಸಲು ಬಾರದು.ಅದಕ್ಕೆ  ಐದು ಐದು ಗೆಜ್ಜಗಗಳನ್ನು ಎಡಬಲದ ಚಡ್ಡಿಜೇಬಿನಲ್ಲಿ  ಹಾಕಿಕೊಂಡು ಅಂದು  ಒಳಗೇ ಲೆಕ್ಕ ಹಾಕುತ್ತಾ ಲೆಕ್ಕ ಮಾಡುತ್ತಿದ್ದನು. ಹೀಗೇ ಲೆಕ್ಕ ಮಾಡುವಾಗ  ಒಂದು ಜೇಬಿನಲ್ಲಿ ಇದ್ದ ಐದು ಗೆಜ್ಜಗಕ್ಕೆ ಮತ್ತೆರಡನ್ನು ಸೇರಿಸಿ 'ಏಳು'ಎಂದು ಹೇಳುತ್ತಿದ್ದ... ನಿನ್ನ ಮೊಟ್ಟೆ ಗೆಜ್ಜಗಗಳನ್ನು ಎಣಿಸಿಕೊ ಬೇಡ ತಿಪ್ಪ ಎಂದು ಹೇಳಿದ್ದರು.ಚಡ್ಡಿ ಜೇಬಲ್ಲಿ ಇದ್ದ 'ಐದಕ್ಕೆ'ಮತ್ತೆರಡು ಎಲ್ಲಿಂದ ತಂದು ಸೇರಿಸಿದನೋ ಅಂದು ನನಗೂ ಅರ್ಥ ಆಗಿರಲಿಲ್ಲ...ಆಮೇಲೆ ನನ್ನ  ಹೈ ಸ್ಕೂಲಿನ ದಿನಗಳಲ್ಲಿ ಅತೀ ಸಾಮಾಜೀಕರಣದ  ಅವಧಿಯಲ್ಲಿ ನನಗೆ ಅರ್ಥ ಆಗಿದ್ದು ಆ ಎರಡು EXTRA ಗೆಜ್ಜಗ ಎಲ್ಲಿಂದ ಎಣಿಸಿಕೊಂಡ ಎಂದು...!

 ಈ ಹಿಂದೆ ಹೋಳಿಹಬ್ಬದಲ್ಲಿ,ಯುಗಾದಿ ಇತರ ದಿನಗಳಲ್ಲಿ ನೆಂಟರು,ಅಥವಾ ಬೇರೆಯವರ ತಲೆಗೆ ಮೊಟ್ಟೆಯೊಡೆದು ಅವರು ಅನುಭವಿಸುವ ವಾಸನೆಯ ಯಾತನೆಗೆ ಕಿಕ್ ಪಡೆಯುತ್ತಿದ್ದ ದಿನಗಳಿದ್ದವು.ಎತ್ತಲಿಂದಲೋ ಹೇಗೋ  ಯಾಮಾರಿಸಿ ತಲೆಗೆ 'ಪಳ್' ಎಂದು ಮೊಟ್ಟೆಯೊಡೆದು,ಆ ಭೀಭತ್ಸದ ಚೀರಾಟದ ನಡುವೆಯೂ ಒಡೆದ ಮೊಟ್ಟೆಯನ್ನು white yolk ನ್ನು ಅಂಗೈಯಲ್ಲಿ ತಲೆಗೆ ಮುಖಕ್ಕೆ ರುಬ್ಬುತಿದ್ದರು... ಅವನು ಹೊಡೆದ ಸೇಡಿಗೆ ಸಾಧ್ಯವಾದರೆ ಆಗಲೇ,ಅವತ್ತೆ ಹೊಡೆಯಲು ಪ್ರಯತ್ನಿಸುತ್ತಿದ್ದರು. ಇಲ್ಲ ಈ ಮೊಟ್ಟೆಯ ಸೇಡು ಮುಂದಿನ ಅಂತಹ  ವಿಶೇಷ ದಿನಗಳಿಗೆ ಹೊಂಚು ಹಾಕಿಯೇ ದಿನ ಕಳೆಯುತ್ತಾ, ಕಳೆದ ಬಾರಿ ಅವನಿಂದ ಮೊಟ್ಟೆಯನ್ನು ಹೊಡೆಸಿಕೊಂಡು ಮೂರುದಿನ ಭೀಭತ್ಸ ವಾಸನೆಯನ್ನು ಸಹಿಸಿಕೊಂಡಿದ್ದ ಅಸಹನೆಯನ್ನು ಬಡ್ಡಿ ಸಮೇತ ತೀರಿಸಲು ಕೈಯಲ್ಲಿ, ಜೇಬಲ್ಲಿ ಮೊಟ್ಟೆ ಹಿಡಿದು ಓಡಾಡುತ್ತಿದ್ದ ದಿನಗಳು ಇದ್ದವು.ಆ ಮೊಟ್ಟೆಯೊಡೆಸಿಕೊಂಡವನ  ಕಿರಿ ಕಿರಿಯ ನೆನೆದು  ವರ್ಷವಿಡೀ ಕಿಲ ಕಿಲ ಎನ್ನುತ್ತಾ,ಸ್ನೇಹಿತರು ಸಿಕ್ಕ ಸಿಕ್ಕವರ ಬಳಿ  ಒದರುತ್ತ  ವಿಕೃತ ಆನಂದವನ್ನು ಅನಭವಿಸುತ್ತಿದ್ದರು.ಇದು ನಿನ್ನೆ ಮೊನ್ನೆ ಸಂಗತಿಯಾದರೆ ಇಂದಿನ ಲೇಟೆಸ್ಟ್ matter
ನಮ್ ಶಾಲೆಗಳಿಗೆ ಎಡ ಬಲ ಪಂಥೀಯರ  ಪರ ವಿರೋಧ ವಾದದ ನಡುವೆ ನಮ್ಮ  ಸರ್ಕಾರಿ ಶಾಲೆಗಳಿಗೆ ಎರಡುದಿನ  ಮೊಟ್ಟೆ ನೀಡುವ ನಿರ್ಧಾರ ಮಾಡಿದ್ದು ಕ್ರಾಂತಿ...ಈ ಎರಡು ಮೊಟ್ಟೆಯ ವಿತರಣೆಯ ನಡುವೆ  ಅಜೀಂ ಪ್ರೇಮ್ಜಿ ಅವರು ಪ್ರತಿ ಮಗುವಿಗೆ  ಹೆಚ್ಚುವರಿಯಾಗಿ ವಾರಕ್ಕೆ ನಾಲ್ಕು ಮೊಟ್ಟೆಗಳು ಸೇರಿ ಈಗ  ಆರು ದಿನವೂ ಮೊಟ್ಟೆಯು,ಭಾನುವಾರ ಚಿಕನ್ ಸೇರಿ 'ಚಿಕನ್ ಸಪ್ತಾಹ' ಆಗುತ್ತಿದೆ.ಈ ಮೊಟ್ಟೆಯು ಮಕ್ಕಳ ಜೀವನದ ಭಾಗವಾಗಿ,ಮೊಟ್ಟೆಯನ್ನು ನೀಡಿದ ದಿನ  ಮಕ್ಕಳು,ತರಗತಿ,ವರಾಂಡ,ಇಡೀ ಗ್ರೌಂಡ್,ಮೊಟ್ಟೆ ಬೇಯಿಸಿದ ಪಾತ್ರೆ ವಿತರಿಸಲು ಹಾಕಿದ ಬಕೆಟ್,ಬೆಸಿನ್ ಎಲ್ಲದೂ ನೀಚವಾಸನೆ.ಸಾಮಾನ್ಯವಾಗಿ ಯಾವುದೇ ಪದಾರ್ಥ/ವಸ್ತು ಅದು ಒಳಗೊಂಡಿರುವ ಅಂಶವೇ ಅದರ ವಾಸನೆ. ಮಲ್ಲಿಗೆ ಹೂ ಸುಮಧುರ ವಾಸನೆ ಸೂಸಿದರೆ ಮೊಟ್ಟೆ  ನೀಚ ವಾಸನೆ ಬರುತ್ತದೆ.

ಬಹಳ ವರ್ಷಗಳ ಹಿಂದೆ ' ತಟ್ಟೆ ಮುಂದೆ ಹೆಣ್ಣಿನ ಮುಂದೆ ಬಹಳ ಹೊತ್ತು ಇರಬಾರದು' ಎಂದು ಆಗಾಗ ಅವರಿವರು ಹಿರಿಯರು ಹಲವು ಬಾರಿ ಹೇಳುವುದು ಕೇಳಿದ್ದೆ. ಆದರೆ ಇದನ್ನು ಪ್ರಾಯೋಗಿಕವಾಗಿ ಅನ್ವಯಿಸಿಕೊಳ್ಳಲು ದಾಂಪತ್ಯ ಜೀವನಕ್ಕೇ ಕಾಲಿಡಬೇಕಾಯಿತು. ಮೇಲಿನ ನಾಣ್ಣುಡಿ ಈ ಮೊಟ್ಟೆಯಷ್ಟು ಅಸಹನೀಯವಾದುದಲ್ಲ ಎಂದು  ಕೊನೆಯವರೆಗೂ ಅನ್ನಿಸುವುದಿಲ್ಲ. ಆದರೂ ಕೊನೆಯದಾಗಿ ಅದೊಂದು ಅಸಹನೀಯ ಅಂತ ಅಗಾಗ್ಗೆ ಅನಿಸುತ್ತದೆ... ಎರಡೂ ಸಂದರ್ಭಗಳೂ ಇಲ್ಲಿ 'ಅಸಹನೀಯ' ಎನಿಸಿರುವುದು  ರಸ ವಿಜ್ಞಾನದ ಹಿನ್ನೆಲೆಯ ವೈಜ್ಞಾನಿಕ ಕಾರಣ ನೋಡಿದರೂ 'ಮೊಟ್ಟೆಯೇ' ಇದಕ್ಕೆ ಕಾರಣ..

 _*ಮೊಟ್ಟೆಯೊಳಗಿನ ಸಾರವೇ ಈ ಸೃಷ್ಠಿಯ ರಹಸ್ಯ :*_

ಈ ಸೃಷ್ಠಿ ಮತ್ತು ಜಗತ್ತಿನ ಸಕಲ ಜೀವ ರಾಶಿಗಳ  ಹುಟ್ಟು ಆಗುತ್ತಿರುವುದು ಈ ಮೊಟ್ಟೆಯಿಂದಲೇ...ಸರಸೃಪ,ಸಸ್ತನಿಗಳು,ಅಕಶೇರುಕಗಳು ಮೊಟ್ಟೆಯನ್ನು ಇಡುವುದರ ಮೂಲಕವೇ ಮಿಲಿಯಾಂತರ ವರ್ಷಗಳಿಂದ ಈ ಜೀವ ಜಗತ್ತಿನ  ಹುಟ್ಟು ಸಾವು ನಿರಂತರ ನಡೆಯುತ್ತಲೇ ಇದೆ.. ಪಕ್ಷಿಗಳ ಮೊಟ್ಟೆ ಸಾಮಾನ್ಯವಾಗಿ Oval shape ಇರುವಂತೆಯೇ ಬ್ರಹ್ಮಾಂಡವೂ ಒಂದು ಮೊಟ್ಟೆ ಎನಬಹುದು... ಈ ಸೌರ ಮಂಡಲದ ಪ್ರತಿ ಗ್ರಹ,ಕಾಯಗಳೂ ಗೋಲಾಕಾರ. ಆದರೆ ಅವುಗಳು ತಿರುಗುತ್ತಾ ತಿರುಗುತ್ತಾ ಅವು ದುಂಡನೆಯ ಆಕಾರವನ್ನು ಪಡೆದವು.ಭೂಮಿಯು ಅಂಡಾಕರವಾಗಿದೆ. ಈ ಅಂಡಾಕಾರದ ಬೃಹತ್ ಮೊಟ್ಟೆಯನ್ನು ಛೇದಿಸಿದಾಗ ನಮಗೆ ಸಿಗುವುದು ನೀರು,ನಾನಾ ಖನಿಜಗಳು, ಅಂತರಾಳದಲ್ಲಿ ಕರಗಿರುವ ಲೋಹಗಳ ಲಾವ...ಅದರಲ್ಲಿರುವ ಶಕ್ತಿ ಅಗಾಧವಾದದ್ದು. ಹಾಗೇಯೇ ಈ ಭೂಮಿಯನ್ನೂ,ಮೊಟ್ಟೆಯನ್ನು ಹೋಲಿಸಿ ನೋಡಿದರೆ ಈ ಮೊಟ್ಟೆಯು ಯಾವುದೋ ಜೀವಿಯ ಸೃಷ್ಠಿ ಮತ್ತು ಇದರ ಆಯಸ್ಸು ಕಡಿಮೆ ಎನ್ನುವುದು ಬಿಟ್ಟರೆ ಭೂಮಿಯ ರಚನೆಗೂ ಈ ಮೊಟ್ಟೆಯ ರಚನೆಗೂ,ಒಳಗೊಂಡಿರುವ ಅಂಶಗಳೂ ಪರಸ್ಪರ ಹೋಲಿಕೆ ಇದೆ.ಹಾರುವಂತಹ ಪಕ್ಷಿಗಳು ಅಂಡಾಕಾರದ ಮೊಟ್ಟೆಗಳನ್ನು ಇಟ್ಟರೆ ಹಾರಲಾರದ  ಎಮು,ಆಸ್ಟ್ರಿಚ್ನಂತಹ  ಪಕ್ಷಿಗಳು ಗೋಲಾಕಾರವನ್ನು ಹೋಲುವ ಮೊಟ್ಟೆಗಳನ್ನು ಇಡುತ್ತವೆ.ಮನೆಯಲ್ಲಿರುವ ಹಲ್ಲಿಗಳು,ಗೂಬೆಗಳು ಹೆಚ್ಚುಕಡಿಮೆ ಗೋಲಾಕಾರವಾದ ಮೊಟ್ಟೆಗಳನ್ನೇ ಇಡುತ್ತವೆ.

  ಜೀವ ಜಗತ್ತು  ಅನಾದಿ ಕಾಲದಿಂದಲೂ  ಮೊಟ್ಟೆಗಳನ್ನು ಆಹಾರಕ್ಕಾಗಿ  ಬಳಸುತ್ತಿವೆ.ಕಾಗೆಗಳು, ಸಾಂಬಾರು ಕಾಗೆ,ಮಡಿವಾಳ ಹಕ್ಕಿಗಳು ಮತ್ತು ಹಾವುಗಳು ತಮ್ಮ ಮೂಲ ಆಹಾರಕ್ಕಾಗಿ ಬೇರೆ ಜೀವಿಗಳ ಮೊಟ್ಟೆಯನ್ನೇ ಅವಲಂಬಿಸಿವೆ. ಇದರಲ್ಲಿ ಮಾನವನೂ ಹೊರತಾಗಿಲ್ಲ.ಸಮತೋಲನ ಆಹಾರ, ಅಪೌಷ್ಟಿಕತೆಯ ವಿಷಯದಲ್ಲಿ ಸದ್ಯಕ್ಕೆ  ಎಲ್ಲರಿಗೂ ಕೈಗೆಟುಕಬಹುದಾದ, ಮೊಟ್ಟೆಗೆ ಸರಿಸಮಾನವಾದ ಪೌಷ್ಠಿಕಾಂಶವಾದ ಆಹಾರ ಇನ್ನೊಂದು ಇಲ್ಲ ಎಂಬುದು ಆಹಾರ ಮತ್ತು ಡಯಟಿಷ್ಟುಗಳ ವಾದ.. ಇದನ್ನು ಪುಷ್ಠೀಕರಿಸುವಂತೆ ಈಗಲೂ ಜಪಾನಿಗರು ಒಬ್ಬರು  ವರ್ಷಕ್ಕೆ ಸರಾಸರಿ 320 ಮೊಟ್ಟೆಗಳನ್ನು ತಿನ್ನುತ್ತಾರಂತೆ. ವಿಶ್ವ ಭೂಪಟದ ಅನೇಕ ದೇಶದ ಜನರು ಬೆಳಗಿನ ಉಪಹಾರ ಸೇರಿದಂತೆ ನಾನ ರೀತಿಯ ತಿನಿಸುಗಳನ್ನು ಮೊಟ್ಟೆಯನ್ನು ಬಳಸಿಕೊಂಡು ತಯಾರಿಸುತ್ತಿರುವ ಖಾದ್ಯಗಳಿಗೇನು ಕಡಿಮೆಯೇ ಇಲ್ಲ...ಅಪವಾದಗಳೆಂಬಂತೆ ನೈಜೀರಿಯಾ, ಪಪುವಾ, ನ್ಯೂಗಿನಿಯಾ ಮತ್ತು ಜಮೈಕಾ  ದೇಶಗಳು ಮೊಟ್ಟೆ ಸಂಬಂಧಿತ ಆಹಾರಬಳಕೆಯಲ್ಲಿ ಕೆಲವು  ನಿಷೇಧಗಳನ್ನು ಹೊಂದಿವೆ. ಆ ದೇಶಗಳಲ್ಲಿ  ಗರ್ಭಿಣಿಯರಿಗೆ ಅಥವಾ ಮಕ್ಕಳಿಗೆ ಮೊಟ್ಟೆಗಳನ್ನು ನೀಡುವುದಿಲ್ಲ.ಏಕೆಂದರೆ ಹುಟ್ಟುವ ಮಗು ಕೋಳಿಯಂತೆ ವರ್ತಿಸುತ್ತವೆಯೆಂದೂ ಮತ್ತು  ಅರ್ಧ ಮೊಟ್ಟೆಯನ್ನು  ನೀಡಿದಾಗ ಅವರಿಗೆ ಅದು ಸಾಕಾಗದೇ  ಇನ್ನೂ ಬೇಕೆಂದೆನಿಸಿ  ಮಕ್ಕಳನ್ನು  ಮೊಟ್ಟೆ ಕಳ್ಳರನ್ನಾಗಿಸಿ ಕೊನೆಗೆ ಶಾಶ್ವತ ಕಳ್ಳರನ್ನಾಗಿ ಮಾಡುತ್ತದೆ ಎಂಬ ಮೂಢನಂಬಿಕೆ ಆ ದೇಶದಲ್ಲಿ ಈಗಲೂ ಆಚರಣೆಯಲ್ಲಿ ಇದೆ. ಅದಕ್ಕೇ ಇರಬೇಕು ನಮ್ಮ ದೇಶದಲ್ಲಿ ಕೆಲವು ಮೇಲ್ಜಾತಿಯವರು ಕದ್ದು ಮುಚ್ಚಿ ಮೂಲ ಮಾಂಸಹಾರಿಗಳಿಗಿಂತಲೂ ಚಂದ ಮೂಳೆ ಕಡಿಯುತ್ತಿರುವವರನ್ನು ನೋಡಿ  ಆ ದೇಶದವರು  ತಮ್ಮ ಮಕ್ಕಳಲ್ಲಿ ಕಳ್ಳ ಸಂಸ್ಕತಿಯನ್ನು ಬೆಳೆಯುವುದಕ್ಕೆ ಅವಕಾಶವೇ ಕೊಡಬಾರದೆಂಬ ನಂಬಿಕೆ  ಇರಬಹುದೇನೋ..

 ದಕ್ಷಿಣ ಏಷ್ಯಾದಲ್ಲಿ, ಜೈನರು ಮತ್ತು ಬ್ರಾಹ್ಮಣರು ಹಾಗೂ ಕೆಲ ಮೇಲ್ಜಾತಿ ಹಿಂದೂಗಳು ಮೊಟ್ಟೆ, ಮಾಂಸ ಮತ್ತು ಮೀನುಗಳನ್ನು ತಿನ್ನುವುದರಿಂದ  ದೂರವಿದ್ದು ಈಗಲೂ ಶಾಖಾಹಾರಿ ಜನಸಂಖ್ಯೆಯನ್ನು ನಾವು ಕಾಣಬಹುದಾಗಿದೆ.

ಸಾವಿರಾರು ವರ್ಷಗಳ ಹಿಂದೆ ಆಹಾರಕ್ಕಾಗಿ ಅಲೆಯುತ್ತಿದ್ದ ದಿನಗಳು... ಇಡೀ ಭೂ ಮಂಡಲವೇ  ಕಾನನದಿ ಹಾಸಿ,ಹಸಿರಾಗಿ,ನದಿ ತೊರೆಗಳು ಸದಾ ಹರಿಯುತ್ತಿದ್ದ ದಿನಗಳು‌..  ಅಪಾರ ವನ್ಯಜೀವಿಗಳ ಮದ್ಯೆ ಅಲ್ಪ ಪ್ರಮಾಣದ ಹೋಮೋ ಸೆಪಿಯನ್ ಜನಾಂಗ. ಆಹಾರ ಸಂಪದ್ಭರಿತವಾಗಿದ್ದ ಆ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳಿಂದ ಜೀವಜಗತ್ತಿಗೆ  ಕಂಟಕ ಬಂದೊದಗಿದಾಗ ಸಂತಾನಕ್ಕಾಗಿ ಇಟ್ಟಿದ್ದ ಈ ಮೊಟ್ಟೆಗಳಿಂದ ಹೊರಬಂದ ಮರಿಗಳು ಜೀವ ಜಗತ್ತನ್ನು ಯಥಾ ಸ್ಥಿತಿಯಲ್ಲಿ ಉಳಿಯುವಂತೆ ಮಾಡಿದ್ದು  ಈ ಮೊಟ್ಟೆಗಳೇ... ಇತ್ತಕಡೇ ಆಹಾರ ಇಲ್ಲದೇ ಇರುವಾಗ ಜೀವಿಗಳ ಹೊಟ್ಟೆ ತುಂಬಿಸಿದ್ದೂ ಈ ಮೊಟ್ಟೆಗಳ ಪಾಲು ಅಲ್ಲಗಳೆಯುವಂತಿಲ್ಲ..ಜೀರುಂಡೆಗಳಂತಹ ಸಾವಿರಾರು ಸಂಖ್ಯೆಯ ಜೀವಿಗಳು ವಾರ್ಷಿಕ ಸಂತಾನಕ್ಕಾಗಿ ಇರಿಸಿದ ಮೊಟ್ಟೆಗಳು ಪ್ರಾಕೃತಿಕ ವಿಕೋಪಗಳಾದಾಗ  ಹೇಗೋ ಉಳಿದುಕೊಂಡು ಮರಿಯಾಗುತ್ತಾವೆ.

ಮೊಟ್ಟೆಗೆ ಸಂಬಂಧಿಸಿದಂತೆ ಅನೇಕ ಗಾದೆ,ನಾಣ್ಣುಡಿ ಜನಪದದಲ್ಲೂ ಬಳಸುತ್ತೇವೆ. ಅತಿ ಹೆಚ್ಚು ಲಾಭಧಾಯಕ  ಕೆಲಸ ಅಥವಾ ವಸ್ತುಗಳಿಗೆ 'ಬಂಗಾರದ ಮೊಟ್ಟೆ ಇಡುವ ಕೋಳಿ' ಎಂತಲೂ ನಮ್ಮೊಂದಿಗೆ ಇರುವ ಸ್ನೇಹಿತರು,ಬಂದುಗಳು  ವಸ್ತಗಳನ್ನು ಉದ್ದೇಶಿಸಿ  ಹೇಳುವಾಗ 'ಎಲ್ಲಾ ಮೊಟ್ಟೆಗಳು ಒಳ್ಳೆಯವು ಆಗಿರುವುದಿಲ್ಲ... ಕೆಲವು ಕೆಟ್ಟ ಮೊಟ್ಟೆಗಳು ಇರುತ್ತಾವೆ 'ಎಂದೂ ಹೇಳುವುದುಂಟು...'ದಪ್ಪ ಮೊಟ್ಟೆ ಇಡಲು ಹೋಗಿ  *** ಹರಿದುಕೊಂಡಂಗಾಯಿತು' ಎಂತಲೂ ಯಾವುದೇ ಕೆಲಸ ಇಲ್ಲದೇ  ಸುಮ್ಮನೇ ಮನೆಯೊಳಗಿದ್ದರೆ "ಮನ್ಯಾಗೇನ್ ಮೊಟ್ಟೆ ಇಡುತ್ತಿದ್ದೀಯಾ??" ಎಂದು ಕೇಳುವುದನ್ನು ನೀವು ಕೇಳಿರಬಹುದು.ಬೆಂಕಿ ಇಲ್ಲದೇ ಹೊಗೆ ಯಾಡುವುದಿಲ್ಲ ಮೊಟ್ಟೆ ಇಲ್ಲದೇ ಆಮ್ಲೇಟ್ ಆಗುವುದಿಲ್ಲ ಎಂಬಂತಹ  ಹೊಸ ಗಾದೆ ನುಡಿಗಟ್ಟುಗಳು ಬಳಕೆಯಲ್ಲಿವೆ.

ಆದಿಯಿಂದಲೂ ಈ ಮಾನವ ಇತರ ಜೀವಿಗಳನ್ನು  ತುಳಿಯುತ್ತಾ, ಬಡಿದು ಬಾಯಿಗೆ ಹಾಕುತ್ತಾ ಭೂಮಿಯ ಮೇಲೆ  ಸದ್ಯ ಅವನಿಗೆ ಜಾಗವೇ ಸಾಲುತ್ತಿಲ್ಲ... ಆದ್ದರಿಂದ ಅನ್ಯಗ್ರಹದಲ್ಲೂ ಮಾನವನ ನೆಲೆವೂರುವಿಕೆಗೆ ಲಭ್ಯವಿರುವ ಎಲ್ಲಾ ಸಾಧ್ಯತೆಗಳನ್ನು  ನಿರಂತರ ಶೋಧಿಸುತ್ತಿದ್ದಾನೆ. ಅಲ್ಲಿಯೇ ಗಿಡ ಮರಗಳನ್ನು ನೆಟ್ಟು ,ನೀರು ಗಾಳಿಯನ್ನು ಸೃಷ್ಠಿಸುವ ಭವಿಷ್ಯದ ಸಾಕಾರದಲ್ಲಿ ಮಾನವನಿದ್ದಾನೆ. ಸದ್ಯಕ್ಕೆ  ಇದೇ ಮನುಷ್ಯನ ಮಹತ್ವಾಕಾಂಕ್ಷೆಯ  ಭವಿಷ್ಯದ ಕನಸು...ಈ ಕನಸಿನ ಮೊಟ್ಟೆ ಒಡೆದರೆ ಮನುಷ್ಯನ ಓಟಕ್ಕೆ ತಡೆಯೇ ಇರುವುದಿಲ್ಲ.ಇತ್ತ ಇಡೀ ಭೂಮಿಯು ಪ್ರಾಕೃತಿಕ  ವಿನಾಶಕ್ಕೀಡಾದರೆ ಮತ್ತೊಂದು, ಮಗದೊಂದು ಗ್ರಹದಲ್ಲಿ ಮಾನವ ಸಾಮ್ರಾಜ್ಯವ ವಿಸ್ತರಿಸಬೇಕೆನ್ನುವ ಕನಸಿನ ಮೊಟ್ಟೆಯೊಡೆದು ನನಸುಗಳು ಮೊಟ್ಟೆಯಿಡುವ ಕಾಲ ಶೀಘ್ರವಾಗಿ ಬರಲಿ.

ಬರಹ ಮುಗಿಸುವ ಮುನ್ನಾ:

ನದಿ ಮೂಲ ಹೆಣ್ಣಿನ ಮೂಲ ಹುಡುಕಬಾರದಂತೆ ಎಂಬುದೊಂದು ನಾಣ್ಣುಡಿ.ಅವುಗಳನ್ನು ಹುಡುಕಿದರೆ ಗಲೀಜು ಅಂತ ಹೇಳ್ತಾರೆ...ಆದರೆ ನನ್ನ ಅನುಭವ ಇವೆಲ್ಲಾವುಗಳಿಗಿಂತ ಗಲೀಜು ಎನಿಸಿದ್ದು ಈ ಮೊಟ್ಟೆ ಮೂಲ. ಇದರ ಮೂಲ ಹುಡುಕಲೂಬಾರದು, ಕೇಳಲೂಬಾರದು, ಹೇಳಲೂಬಾರದು.!!!ಅಂದಹಾಗೆ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತದೆಯಂತೆ...ಅದು ಯಾವಾಗ ಇಡುತ್ತೋ ಗೊತ್ತಿಲ್ಲ...ಆದರೂ ಸೃಷ್ಠಿಗೆ ಸೃಷ್ಠಿ ಈ ಮೊಟ್ಟೆ...!!!

✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..