ಮುಗಿದ ಅಧ್ಯಾಯಗಳು...

ಮುಗಿದ ಅಧ್ಯಾಯಗಳು...

_( ಬಾಳ ದಾರಿಯ ಹಿಂತಿರುಗಿ ನೋಡಿದರೆ....)_

 ಮಹಾಭಾರತದ ಒಂದು ಸನ್ನಿವೇಶ...ಒಮ್ಮೆ ಅರ್ಜುನ ಶ್ರೀ ಕೃಷ್ಣನನ್ನು ಕೇಳಿದ.. ಈ ಗೋಡೆಯ ಮೇಲೆ ಒಂದು ಸಂದೇಶ ಬರಿ, ಅದು ಹೇಗಿರಬೇಕೆಂದರೆ ಖುಷಿಯಲ್ಲಿದ್ದಾಗ ಓದಿದರೆ ದುಃಖವಾಗಬೇಕು, ದುಃಖದಲ್ಲಿದ್ದಾಗ ಓದಿದರೆ ಖುಷಿಯಾಗುವಂತಿರಬೇಕು ಎಂದ. ಆಗ ಶ್ರೀ ಕೃಷ್ಣ ಹೇಳುತ್ತಾನೆ" ಈ ಸಮಯ ಕಳೆದು ಹೋಗುತ್ತದೆ…" ಕೇವಲ ನಾಲ್ಕು ಪದಗಳಲ್ಲಿ ಸುಂದರವಾದ ಉತ್ತರ ನೀಡುತ್ತಾನೆ ಕೃಷ್ಣ.ದುಃಖದಲ್ಲಿರುವವರು ಈ ಸಮಯ ಬೇಗ ಕಳೆದುಹೋಗಲಿ ಎಂದು ಬಯಸಿದರೆ,ಸಂತೋಷದಲ್ಲಿದ್ದವರು 'ಸಂತೋಷ' ಇಷ್ಟು ಬೇಗ ಮುಗಿದು ಹೋಯಿತೇ ??ಎಂದು ಬೇಸರಪಡುತ್ತಾರೆ.ಅಂದರೇ ಹಿಂದೆ ಇದ್ದದ್ದು ಈಗ ನಮ್ಮ ಬಳಿ ಉಳಿದಿಲ್ಲ....ಅದು ವಯಸ್ಸು,ಸೌಂಧರ್ಯ,ವಸ್ತು,ವ್ಯಕ್ತಿ ಏನಾದರೂ ಸರಿಯೇ... ಅದಕ್ಕೆ ಕಾರಣ ಈ ಕಾಲ.. ಇಲ್ಲಿ  ಪ್ರತಿಯೊಬ್ಬರಲ್ಲೂ ಹೀಗೆ   ಜೀವನದಲ್ಲಿ ಒಮ್ಮೆ ನಮ್ಮಿಂದ ಘಟಿಸಿದ್ದು, ಅದು  ಈಗ ಆಗುತ್ತಿಲ್ಲ... ಅದು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು‌ ಎಲ್ಲರಿಗೂ ಅನಿಸುವುದು. ಒಂದು ದಿನ ನನ್ನಿಂದ ಕೈಗೊಡಿದ್ದು ಈಗ ಅದು ಕೈಗೂ ನಿಲುಕುತ್ತಿಲ್ಲ ಎಂದೂ,ಅದು ನನ್ನಿಂದೆಂದೂ ಆಗದೆಂದು,ಒಂದೊಮ್ಮೆ ಪ್ರಯತ್ನಿಸಿದರೆ  ಕೆಲವು ಕಿರಿಯರು ಈ 'ವಯಸ್ಸಲ್ಲಿ ನಿಮಗೆ ಇವೆಲ್ಲಾ  ಬೇಕಾ"??ಎಂದು ಗೇಲಿ ಮಾಡುವ ಸಂಕೋಚದಿಂದಲೋ ಅವರಿಂದ ಅದು ಸಾಧ್ಯವಾದರೂ,ಅದನ್ನು  ಮಾಡುವ ಪ್ರಯತ್ನದಿಂದಲೇ ಹಿಂದೆ ಸರಿಯುವರು... ಇಂಥಾ ಹತ್ತಾರು ಘಟನೆಗಳ ಜೀವನ ಸರಮಾಲೆಯ 'ಮುಗಿದ ಅಧ್ಯಾಯಗಳ' ಮೆಲುಕು ಹೀಗಿದೆ....

_ಅಧ್ಯಾಯ-1_

 
ಶರತ್ಕಾಲ...ಹಗಲು ಕಡಿಮೆ ರಾತ್ರಿ ದೀರ್ಘಾವಧಿಯ ದಿನಗಳು...ಸಂಜೆ 5:30 ಅಷ್ಟೊತ್ತಿಗೆ  ಹಿರಿಯ ಜೀವಗಳೆರಡು  ಮನೆಯ ಮುಂದೆ  ಕಾಂಕ್ರೇಟ್ ಅಂಗಳದಲ್ಲಿ ಸಂಜೆಯ ಹೊಂಬಿಸಿಲಲ್ಲಿ ತಮ್ಮ ಸುಕ್ಕುಗಟ್ಟಿದ  ಚರ್ಮವೊಡ್ಡಿ ಕುಳಿತಿದ್ದರು.ಅವರ ಮುಂದೆ ಅವರ ಮೊಮ್ಮಕ್ಕಳು Kitchen set ಮುಂದಿಟ್ಟುಕೊಂಡು  ಆಡುತ್ತಿದ್ದಾರೆ... ಆ ಆಟದ ಸಾಮಾನುಗಳು ಅವು ನಕಲಿ ನಿಕೃಷ್ಟ ಅಡುಗೆ  ಆಟದ ವಸ್ತುಗಳಾಗಿದ್ದವು.ಅವುಗಳನ್ನು ನೋಡಿ ಆ ಗುಣಮಟ್ಟಕ್ಕೆ ಸ್ವಲ್ಪವೂ ಸಮಾಧಾನ ಇರಲಿಲಲ್ಲ...ಮೊಮ್ಮಗಳು ಅವಳ ಗ್ಯಾಸ್ ಸ್ಟೌ ಮೇಲೆ ದೋಸೆಯ ಹೆಂಚೊಂದನ್ನು ಇಟ್ಟಳು...ನೀರೇ ಹಿಟ್ಟು,ಎಣ್ಣೆ'ದೋಸೆ ಯ ಪಾತ್ರವಹಿಸಿತ್ತು...ಇತ್ತ ಅವರ ಆಟವನ್ನು ತದೇಕ ಚಿತ್ತದಿಂದ ನೋಡುತ್ತಾ ಇದ್ದ ಅಜ್ಜಿ ತಾತಂದಿರು 80-70 ವರ್ಷಗಳ ಹಿಂದೆ ಅವರಿಬ್ಬರೂ ಚಿಕ್ಕ ಹುಡುಗರಾಗಿದ್ದಾಗ ಆಡಿದ ಆಟಗಳ ನೆನೆದು ನಸುನಕ್ಕರು...  ಅಂದು ಆಟ ಆಡಲು ಅವರಿವರ ಗುಡಿಸಲು,ಗುಡಿಗಳು ದಾರಿಯುದ್ದಕ್ಕೂ ಆಡಿದ್ದು,ದನಕರುಗಳ ಕಾಯುತ್ತಾ ಬಿಡುವಾದಾಗ ಈಜಾಡುತ್ತಿದ್ದ ದಿನಗಳ ನೆನೆದು ನಾವು ಆಡುವಾಗಿನ ದಿನಗಳೇ ಬೇರೆ... ಈಗ ನೋಡು ಎಂಥಾ ಆಟದ ಸಾಮಾನು ಮಾರುಕಟ್ಟೆಯಲ್ಲಿ ಸಿಗುತ್ತಿವೆ ಎಂಬ ಅಜ್ಜಿಯ ಮಾತುಗಳಿಗೆ  ಅಜ್ಜ 'ಈಗ ಹಳ್ಳಗಳಲ್ಲಿ ಗುಬ್ಬಿ ಕುಡಿಯಲು ನೀರೇ ಇಲ್ಲ ಅವಾಗಿನ ತರಹ  ಈಜಾಡುವುದು ಎಲ್ಲಿ??'ಎಂದು ಮುಂದೇನಾಗುವುದೋ ?ಎಂಬ ಆತಂಕದಿಂದ ಕೈಯನ್ನು ತಿರುವುತ್ತಾ ಮುಳುಗುತ್ತಿರುವ ಸೂರ್ಯನ  ನೋಡುತ್ತಾ ಕುಳಿತರು...

ಈ ಅಜ್ಜಿ ತಾತನ ಕಾಲದ ಗತ ಜೀವನ ಇಂದು ಅವರು ಅವರು ಅನುಭವಿಸಲು ಆಗದು.. ಬಾರದುಕೂಡ...ಯಾರೇ ಆಗಲಿ ಅವರು ಆ ಸಮಯದಲ್ಲಿ ಕಂಡಿದ್ದು ಅನುಭವಿಸಿದ್ದು ಮಾತ್ರ ಅವರಾದ್ದಾಗಿರತ್ತೆ... ಕಾಲ ಸರಿದ ಮೇಲೆ ಅದಕ್ಕೆ ಹಿಂತಿರುಗಿ ನಾವು ಮರಳಲು ಸಾಧ್ಯವಿಲ್ಲ..ಎಲ್ಲಾ ಮುಗಿದ ಅಧ್ಯಾಯಗಳು....

_ಅಧ್ಯಾಯ-2_

ಅದೇನೇ ಕೆಲಸ ಇದ್ದರೂ,  ಯಾವುದೇ ಊರಲ್ಲಿ ಇದ್ದರೂ ಪ್ರತಿ ವರ್ಷದ ಯುಗಾದಿಯ ದಿನ ನಾನು ಮನೆಗೆ ಹೋಗಿಯೇ ತೀರುತ್ತಿದ್ದೆ.ನನ್ನ ಹೈಸ್ಕೂಲಿನ ದಿನಗಳಿಂದಲೂ  ನಾನು ಮನೆಯಿಂದ ಹೊರಗೆ ಇದ್ದರೂ ಆ ದಿನ ಮಾತ್ರ ಮರೆಯದೇ ಮನೆಗೆ ಹೋಗಿ ಒಂದೆರಡು ದಿನ ಇದ್ದು ಬರುವುದು ಸಾಮಾನ್ಯವಾಗಿತ್ತು. ಬಹಶಃ ನಮ್ಮ ಮನೆಯ ಒಟ್ಟು ಸದಸ್ಯರು ಸೇರುತ್ತಿದ್ದ ದಿನವೆಂದರೇ ಅದು ಯುಗಾದಿಯ ದಿನವೇ ಆದುದರಿಂದ ಅದೊಂದು ದಿನ ನಾವೆಲ್ಲರೂ ಅಘೋಷಿತ ನಿಯಮವಾಗಿ ಯಾರು ಎಲ್ಲಿದ್ದರೂ ಬಂದು ಸೇರುವುದು ಕಡ್ಡಾಯವಾಗಿತ್ತು.ತಂದೆ ತಾಯಿ,ಆರು ಜನ ಮಕ್ಕಳು ಮತ್ತು ಮೊಮ್ಮಕ್ಕಳು ಹೀಗೆ ಎಲ್ಲರೂ ಬಂದು ಸೇರಿ ಇರುವ ಎಲ್ಲರ ಮದ್ಯೆ ಇಲ್ಲದಿರುವ ವಸ್ತುಗಳ ಬಗ್ಗೆ  ಯೋಚಿಸದೇ ಕಳೆಯುವ ಒಂದೆರಡು ದಿನಗಳು ಅತೀ ಅಮೂಲ್ಯವಾಗಿದ್ದವು.ಕಳೆದ ಹದಿನೆಂಟು ವರ್ಷಗಳಿಂದ ಅಪ್ಪ ಎಂಬ ಆಲದ ಮರ ಉರುಳಿ ಅಮ್ಮ ಒಬ್ಬರೇ ಇದ್ದರು. ನಾಲ್ಕು ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ಮನೆಗಳಿಗೆ ಹೋದರೂ ಅವರು ಕಟ್ಟಿದ,ಬೆಳೆಸಿದ ಮನೆಯಲ್ಲಿದ್ದರೇ ಮಾತ್ರ ನೆಮ್ಮದಿ...ಅವರು ಅಲ್ಲಿ ಚಟ್ನಿ ಮುಂದೆ ಉಂಡರೂ ಅದು ಅವರಿಗೆ ಮೃಷ್ಠಾನ್ನವೇ...ಮಕ್ಕಳ ಮನೆಗಳಲ್ಲಿ ಆಗಾಗ ಇದ್ದರೂ ಅವರ ಮನಸ್ಸು ಸದಾ ಅತ್ತಕಡೆಯೇ...ಈಗ ಅಮ್ಮನ ಮಡಿಲು ಇಲ್ಲದೇ ಒಂದೂ ವರೆ ವರ್ಷವಾಯಿತು.ಇತ್ತ ದಾಯಾದಿಗಳ ನಡುವೆ   ಮೊಳೆತ ಸಣ್ಣಪುಟ್ಟ ಅಸಮಾಧಾನ.  ಯಾಕೋ ಅತ್ತ ಕಡೆ ಹೋಗಲು  ಮನಸ್ಸಾಗಲಿಲ್ಲ..ಆ ಗತ ದಿನಗಳ ಯುಗಾದಿಯ  ನೆನೆದು ಕಣ್ಣು ತೇವವಾದವಷ್ಟೇ...ಪುನರಾಗಮಿಸುವರೇ ಅಮ್ಮ???ಮರುಕಳಿಸುವುದೇ  ಆ ಆನಂದ? ಇಂಥಾ ಪರಿಸ್ಥಿತಿ ಅದೆಷ್ಟು ಸಾವಿರ ಜನರ ಪಾಲಿಗೆ ಇಂದು ಬಂದೊಂದಗಿದೆಯೋ??? ಅದೆಷ್ಟು ಜನ ಎಂಥೆಂಥಾ ಸಂಬಂಧಗಳಿಂದ ದೂರ ಉಳಿಯುವಂತಾಗಿದೆಯೋ???ಮುಗೀತು... ಅಂತವರ ಪಾಲಿಗೆ ಆ ದಿನಗಳು,ಆನಂದದ ಕ್ಷಣಗಳು,ಎಲ್ಲವೂ ಮುಗಿದ ಅಧ್ಯಾಯವಲ್ಲವೇ???


_ಅಧ್ಯಾಯ -3_

ಅವಳು ಆ ಕುಟುಂಬದ ಒಬ್ಬಳೇ ಮಗಳು...ಮಗುವಾಗಿ,ಹುಡುಗಿಯಾಗಿ,ತರುಣಿಯಾಗಿ ಆಡುತ್ತಾ ನಲಿಯುತ್ತಾ ಬೆಳೆದವಳು ಈಗ ವಯಸ್ಸಿಗೆ ಬಂದು ಮದುವೆಯಾಗಿ ಗಂಡನ ಮನೆ ಸೇರಿದ್ದಾಳೆ.ತವರು ಮನೆಯಷ್ಟು ಸ್ವತಂತ್ರವಾಗಿ ಇರುವಷ್ಟು ಗಂಡನ ಮನೆಯಲ್ಲಿ ಇರಲಾಗುವುದಿಲ್ಲ.. ಇರಬಹದೇನೋ ಆದರೆ ಅತ್ತೆ ಮಾವ ,ಗಂಡನ ಸಹೋದರ ಸಹೋದರಿಯರ ನಡುವೆ ಎಷ್ಟೇ ಪ್ರೀಯಾಗಿ ಇದ್ದರೂ  ಅದು ಓಪನ್ ಪಂಜರವೇ... ಮನೆಯ ಪ್ರತಿ ಕೆಲಸವೂ ಅವಳೇ ಮಾಡಬೇಕು. ಯಾರೊಬ್ಬರೂ ಒಂದು ಕಡ್ಡಿಯನ್ನು ಮುಟ್ಟದೇ 'ಇದ್ದಾಳಲ್ಲಾ ಅವಳೂ... ಮಾಡಲೀ ಬಿಡಿ' ಎಂದು ಕೆಲಸ ಪ್ರಮಾಣವನ್ನೇ ಜಾಸ್ತಿ ಮಾಡಿಬಿಡುತ್ತಿದ್ದರು.ಅವಳಾಗಲೀ ಏನು ಮಾಡಿಯಾಳು?ಇಡೀ ಸಮಾಜ ಅವಳಿಗೆ ಹೇಳುವುದು ಒಂದೇ..."ಅಡ್ಜೆಸ್ಟ್ ಮಾಡ್ಕೊಂಡು ಹೋಗಬೇಕು..'ನಾವೆಲ್ಲಾ ಸೊಸೆಯರಾಗಿ ಬಂದಾಗ ಏನೇನು ಕಷ್ಟ ಅನುಭವಿಸೀವಿ ಗೊತ್ತಾ??? ಅವುಗಳ ಮದ್ಯೇ ನೀನ್ನದೇನು ಅಲ್ಲ..." ಇಡೀ ಸಮಾಜವೇ ಹೀಗೆ ಹೇಳುತ್ತಿರುವಾಗ ಇವಳಾದರೂ ಏನು ಮಾಡಿಯಾಳು...???ಈ ಹಿಂದೆ ಇದ್ದ ತವರಿನ ಸ್ವತಂತ್ರ ಜೀವನ ,ಶೈಲಿ ಇವುಗಳನ್ನು ಬಿಟ್ಟು ಮುಂದಿನ ಜೀವನ ನೋಡಬೇಕು...ಇವಳಿಗೂ ಇಲ್ಲಿ ಅನೇಕ ವಿಷಯಗಳು ಮುಗಿದ ಅಧ್ಯಾಯಗಳೇ...ಈ ತೆರನಾದ ಕೆಲವರ ಅಧ್ಯಾಯಗಳು ಘೋರ ಮತ್ತು ಭಯಾನಕ...ಅವು ವೈಯಕ್ತಿಕವಾಗಿಯೂ,ಕೌಟುಂಬಿಕ,ಆರ್ಥಿಕ, ಹೀಗೆ ನಾನ ತೆರನಾಗಿ ಬಂದು ಕೆಲವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾ,ಕುಗ್ಗಿಸುತ್ತಾ ಕೆಲವೊಮ್ಮೆ ಅವರ ಅದ್ಯಯನವನ್ನೂ ಕೊನೆಗೊಳಿಸುವ ಮಟ್ಟಕ್ಕೆ ಹೋಗಿರುವುದು ನೀವು ನೋಡಿಯೂ/ಕೇಳಿಯೂ ಇರುತ್ತೀರಿ.

_ಅಧ್ಯಾಯ -4_

 ಮಾನವ ಪ್ರೀತಿ ಪ್ರೇಮವ ಅರಸಿ ಹೋಗಿರುವುದು ಆದಿಯಿಂದಲೂ ಇರುವ ಜೀವಾಂಶ....ಇದು ಜೀವಕೋಶಗಳ ಮೂಲ. ಸಂತಸ,ಪ್ರೀತಿ,ನಗು,ಭಾವನಾತ್ಮಕ ಭದ್ರತೆ ಯಾರ ಬಳಿ ಸಿಗುತ್ತದೆಯೋ ಅವರ ಸನಿಹ ನಮ್ಮ ಮನಸು ಇರಲು ಸದಾ ಹಂಬಲಿಸುತ್ತದೆ.ಅದೇ ಪ್ರೀತಿಯಾಗಿ  ಪರಸ್ಪರ ಹೆಣ್ಣು ಗಂಡುಗಳ ಹಠ,ಹಂಬಲ ಇತಿಹಾಸದ ಹಾದಿಯುದ್ದಕ್ಕೂ ನಡೆದ ಸಂಗತಿಗಳು...ಹದಿ ಹರೆಯದವರು,ಸಾಮಾನ್ಯ ಜನರ ನಡುವೆಯೂ ಪ್ರೀತಿ ಇರುತ್ತದೆ....ಎಲ್ಲರ ಬದುಕಿನಲ್ಲಿ  ಪ್ರೇಮಾಯಣದ  ನೋವು-ನಲಿವು ಕಥೆ-ವ್ಯಥೆ  ಎಲ್ಲಾ ಕಾಲದಲ್ಲೂ ಸಂಭವಿಸಿವೆ. ಕಳೆದ ಎರಡು ದಶಕಗಳಲ್ಲಿ ಪ್ರೀತಿಯ ಪೋಷಕರು, ಆರಾಧಕರು ಹೆಚ್ಚಿದ್ದರಿಂದ ಜಾತಿ ಧರ್ಮ, ದೇಶದ ಗಡಿಗಳನ್ನು ಮೀರಿ ಪ್ರೀತಿಯ  ಪ್ರವಾಹ ಹರಿವ ಶಕ್ತಿ ಇರುವುದರಿಂದ ಬಹುತೇಕ ಎಲ್ಲರೂ ಒಂದಲ್ಲ ಒಂದು ದಿನಗಳಲ್ಲಿ ಪ್ರೀತಿಯಲ್ಲಿ ಸಿಲುಕಿ ಒದ್ದಾಡಿರುತ್ತಾರೆ./ಒದ್ದಾಡುತ್ತಿರುತ್ತಾರೆ...ಅದಕ್ಕಾಗಿ ದ್ವೇಷ, ಕ್ಲೇಶ,ಕಲಹ,ಕೂನಿಯೂ ನಡೆದಿವೆ. ಇನ್ನೂ ಕೆಲವರು ಪ್ರಸ್ತತ ಸಮಾಜದಲ್ಲಿ ಅಂತರಾಳದಲ್ಲಿರುವ ಪ್ರೀತಿಯ ಸಂಗತಿಯನ್ನು ನಿವೇದನೆ ಮಾಡದೇ, ಕೆಲವರು ಮಾಡಿದರೂ  ಯಶಸ್ಸಾಗದೇ ಅರೆ ಹುಚ್ಚರಂತೆ ವರ್ತಿಸುತ್ತಾರೆ. ಕೆಲವು-ಹಲವು ದಿನಗಳ ನಂತರ ಕುಟುಂಬದ ಒತ್ತಡ,ಒತ್ತಾಯ,ಗೌರವ,ಮರ್ಯಾದೆಯ ಹೆಸರಿನಲ್ಲಿ ಬೇರೆಯಾಗಿ ಬೇರೆಯವವರ ಜೊತೆಗೆ ಮದುವೆಗಳು ನಿಶ್ಚಯವಾಗಿ ಮದುವೆಯಾಗಿ ಹೋಗಿರುವರು ಲಕ್ಷ ಲಕ್ಷ... ಕಾಲ ಸರಿದ ಮೇಲೆ  ಭಗ್ನ ಪ್ರೇಮಿಗಳು ಸಿದ್ಧರಾಗಿ ವೈವಾಹಿಕ ಜೀವನಕ್ಕೆ ಕಾಲಿಡುವರು... 'ಪ್ರೀತಿ ಅಮರ'ಎಂದು ಹೇಳುತ್ತಾ  ಆಗಾಗ ಮುಗಿದ ಅಧ್ಯಾಯದ ಮೆಲುಕು ಹಾಕುತ್ತಾ  ಬಾಳಿನ ಹಾದಿಯಲ್ಲಿ ಮುಂದೆ ಸಾಗುತ್ತಿದ್ದಾರೆ...ಸಾಗಬೇಕು ಕೂಡ...

ಪ್ರೀತಿ-ಪ್ರೇಮ ಪ್ರರಣಗಳು ಒಂದು ಕಡೆಯಾದರೆ ಅಪ್ರಾಪ್ತ ವಯಸ್ಸಿಗೆ ಗಂಡು ಹೆಣ್ಣುಗಳಿಗೆ ಮದುವೆ ಮಾಡಿ ಆಕಸ್ಮಿಕವಾಗಿ ಯಾರಾದರೂ ಒಬ್ಬರ  ಜೀವಹಾನಿ/ ಡಿವೋರ್ಸ್ ಆಗಿರುವ ನೂರಾರು ಉದಾಹರಣೆ ಕಾಣಬಹುದು.ಅದೇ ರೀತಿ ಯಾವ್ಯಾವೋ  ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಸಾವಿರ... ಅಮೂಲ್ಯವಾದದ್ದು ಏನನ್ನೋ ಕಳೆದುಕೊಂಡು ಜೀವನದಲ್ಲಿ ಆತ್ಮವಿಶ್ವಾಸ,ಬದುಕಿನ ಜಂಘಾಬಲವೇ ಕುಗ್ಗಿರುವವರು ಆಗಿರುವ ಕಹಿ ಘಟನೆಗಳು ನೆನದು  ನೆನೆದು ನೋವು ನರಕಯಾತನೆ ಪಡುವುದಕ್ಕಿಂತ  ಇನ್ನೂ ಸಾಧಿಸಲೇ ಬೇಕಾದದ್ದು ಬಹಳ ಇದೆ... ನಡೆದಿರುವುದು ಕಹಿ ನೆನಪು...ಅದು ಚಿಂತಿಸಿದರೆ ಬಾರದೆಂದು ಅನೇಕರು ಅತ್ಯುತ್ತಮವಾಗಿ ಬದುಕನ್ನು ಬಾಳಿ ತೋರಿಸಿದವರು ಬಹಳಷ್ಟು ಜನರು ಇದ್ದಾರೆ.ಅವೆಲ್ಲವೂ ಮುಗಿದ ಅಧ್ಯಾಯ ಎಂದೆಣಿಸಿಬೇಕು..ಬಾಳ ಹಾದಿಯ ಹಸನು ಮಾಡಿಕೊಂಡು ಜೀವನ ಮಾಡಬೇಕು...

ಎಲ್ಲರ ಸಮಯ ಹೇಗಿದ್ದರೂ ಕಳೆದು ಹೋಗುತ್ತಲೇ ಇದೆ.ಕೆಲವು ವೈಯಕ್ತಿಕ ಘಟನೆಗಳು  ಹಲವರಿಗೆ ಒಂದು ಕಾಲಘಟ್ಟ/ಅಧ್ಯಾಯ ಎನ್ನಬಹುದು. ಕಾಲ ನಿಯಮ ಯಾರಿಗೂ ತಪ್ಪಿದ್ದಲ್ಲ.‌ ಕಾಲಘಟ್ಟದ  ಎಲ್ಲರೂ ಅನೇಕ   ಅಧ್ಯಾಯಗಳನ್ನು ದಾಟಿ ಬಂದವರು, ಮತ್ತು ಬರುವವವರಾಗಿರುವುದರಿಂದ ಕಾಲದ ಹೊಡೆತಗಳಿಗೆ ಕೊಚ್ಚಿಕೊಂಡು ಹೋಗದೇ ಎದ್ದು ನಿಲ್ಲಬೇಕು.. ಬದುಕಿ ಬಾಳಬೇಕು... ಸಮಯವನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಂಡಿರಬೇಕು/ ಬಳಸಿಕೊಳ್ಳಬಹುದು ಎಂಬುದನ್ನು ಮಾನವನ ಬುದ್ದಿವಂತಿಕೆಗೆ ಬಿಟ್ಟದ್ದು.

ಬಾಳ ಪಯಣದ ದೋಣಿಯಲಿ ಪಯಣಿಗರು ನಾವು ... 
 ಓ ಮಾನವ ನೆನಪಿರಲಿ ಸಾಗಿ ಬಂದ ಯಾನ

ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೇನ ಬೇಡ...
ಜೊತೆಗಿದ್ದವರ ನೀ ಮರೆಯಲೂ ಬೇಡ.. ಸದಾ ನೆನಪಿರಲಿ ಸಕಲವೂ
ಇರುವ ಕಾಲದಿ ನೀನು  ...

 ಈಗ ಸಕಲವೂ ಇದೆಯೆಂಬ ಅಹಂ ಬೇಡ...  ಮರೆಯಬೇಡ ಬಾಳಿ ಬಂದ ಪಾಡು...

✍️  ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..