ಹಿಡಿಂಬಾವನ ಮತ್ತು ರಾಕ್ಷಸನ ಹಲ್ಲು

*ಹಿಡಿಂಬಾವನ  ಮತ್ತು  ರಾಕ್ಷಸನ ಹಲ್ಲು..*


✍️ ನಾಗೇಂದ್ರ ಬಂಜಗೆರೆ 

 *ನಾನು ಪ್ರೌಢಶಾಲಾ ಶಿಕ್ಷಣ ಮುಗಿಸಿ ಕಾಲೇಜ್ ಶಿಕ್ಷಣಕ್ಕಾಗಿ  ನಮ್ಮ ಜಿಲ್ಲಾಕೇಂದ್ರ ಚಿತ್ರದುರ್ಗಕ್ಕೆ ಹೋದೆ.. ಅಲ್ಲಿ ಸೇರಿದ್ದು ಚಂದ್ರವಳ್ಳಿ ತಪ್ಪಲಿನಲ್ಲಿ ಇರುವ ಶ್ರೀ ಜಗದ್ಗುರು ಮುರುಘರಾಜೇಂದ್ರ ಕಲಾ ಕಾಲೇಜ್ಗೆ...  ಊಟಕ್ಕೂ ಅದೇ ಕಾಲೇಜಿನ ಹಾಸ್ಟೆಲ್ಗೂ ಸೇರಿದೆ...ದುರ್ಗಕ್ಕೆ  ನನಗೆ ಸಾಥ್ ಕೊಟ್ಟವರು ನನ್ನ ಸೋದರ ಸಂಬಂಧಿ  ನಾಗರಾಜ ಮತ್ತು ಬೀಗ ಶಿವರಾಮ.. ಶಿವರಾಮ ನಾನು ಒಂದೇ ಕಾಲೇಜು.. ಈ ನಾಗರಾಜ ಮಾತ್ರ ಸೈನ್ಸ್ ಕಾಲೇಜು... ರೂಮು ಮಾತ್ರ ಮೂವರದೂ ಒಂದೇ...ನಮ್ಮ ಕಾಲೇಜ್ ಕ್ಲಾಸ್ ಟೈಮಿಂಗ್್ಸ ಇದ್ದದ್ದು  ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ ಐದು ಗಂಟೆವರೆಗೆ ... ಬೆಳ್ಳಿಗ್ಗೆ ಹನ್ನೊಂದು ಘಂಟೆಗೆ ಊಟ ಮಾಡಿಕೊಂಡು ದೊಡ್ಡಪೇಟೆಯ ಉಯ್ಯಾಲೆ ಕಂಬದ ಸಮೀಪದಿಂದ ಸಿಹಿನೀರು ಹೊಂಡದ ಮೇಲೆ ಸುಮಾರು ಮೂರು ಕಿಮೀ ನಡೆದು ಹೋಗಬೇಕಿತ್ತು... ಒಳ್ಳೆ ನಿದ್ದೆ ಸಮಯ.ಕಾಲೇಜ್‌ನಲ್ಲಿ ಪಾಠ ಕೇಳುತ್ತಿದ್ದರೆ ಹತ್ತು ಹದಿನೈದು ನಿಮಿಷಕ್ಕೋಮ್ಮೆ ಎಲ್ಲೋ  ಕಿಲೋ ಮೀಟರ್ ದೂರದಲ್ಲಿ ಯಾರೋ ಮಾತಾಡುತ್ತಿದ್ದಾರೇನೋ ಎಂಬಂತೆ ಕೇಳುತಿತ್ತು. ಉಳಿದ ಸಮಯ ಕೇಳುತಿತ್ತು ಅಂತ ಭಾವಿಸಿದ್ರ?? ಖಂಡಿತಾ ಇಲ್ಲ..  ಲೆಕ್ಚರ್ ವಾಯ್ಸ್ ಏರಿಳಿತಕ್ಕೆ ನಿದ್ದೆ ಡಿಸ್ಟರ್ಬ್ ಆಗಿ ಎದ್ದಾಗ ಕಣ್ಣು ಬಿಡಲು ಆಗುತ್ತಿರಲಿಲ್ಲ.because  ಆಗ ನಾನು ಪುಲ್ ಸ್ಲೀಪಿಂಗ್ ಮೋಡ್....!!* ohoooo shhhhhh....

 ಈ ಕಥೆಯ ಆಡಿಯೋ ಬುಕ್ ಕೇಳಲು ಇಲ್ಲಿ ಕ್ಲಿಕ್ ಮಾಡಿ..
 https://drive.google.com/file/d/1T4Q_Z6-QLeIhLozpS13A3CCvk623FQ6x/view?usp=drivesdk


*125 ವಿದ್ಯಾರ್ಥಿಗಳಿಗೆ ಒಂದೇ ಸೆಕ್ಷನ್.! ನಮ್ಮದು ಲಾಸ್ಟ್ ಸೆಕೆಂಡ್ ಬೆಂಚ್.  ಜನವರಿಯಿಂದ ಹಾಸ್ಟೆಲ್ ಮುದ್ದೆ ಉಂಡು  ರಂಗಯ್ಯನ ಬಾಗಿಲಿನಿಂದ ಬಿಸಿಲಲ್ಲಿ ನಡೆದುಕೊಂಡು ಹೋಗಿ   ಕ್ಲಾಸ್ ಲ್ಲಿ ಕೂತ್ರೆ ಯಾವಾಗ ನಿದ್ದೆ ಬರುತ್ತಿತ್ತೋ ನನಗೇ ಗೊತ್ತಿರಲಿಲ್ಲ .ಪಾಠ ಮಾಡಲು ಬಂದ ಆ ಲೆಕ್ಚರರ್ಸೊ ಮಲಗಿದವರನ್ನು ಎಬ್ಬಿಸಲು ಹೋಗುತ್ತಲೇ ಇರಲಿಲ್ಲ...! ಅವರ ಪಾಡಿಗೆ ಅವರು ಏನನ್ನೊ ಹೇಳಿ ಹೋಗುತ್ತಿದ್ದರು. ಎಚ್ಚರ ಇದ್ದು ಪಾಠ ಕೇಳಿದವರಿಗೆ ಏನಾದರೂ ಗೊತ್ತಾಗುತ್ತಿತೋ ಏನೊ.. ಆದರೆ ಮಲಗಿದ್ದ ನನಗಂತೂ ಖಂಡಿತವಾಗ್ಲೂ ಏನು ಅಂದ್ರೆ ಏನು ಗೊತ್ತಾಗಿರಲಿಲ್ಲ.ಅಲ್ಲಿ co-education ಇದ್ದುದರಿಂದ ಯಾವಾಗಲಾದರೂ ನಿದ್ರೆ ಮಾಡುವಾಗ ಯಾರಾದ್ರೂ  ಲೆಕ್ಚರಗಳು ಎಬ್ಬಿಸಿ ಮರ್ಯಾದೆ ತಗೆದ್ರೆ??    ಆ ಸಮಯದಲ್ಲಿ ಬರುತಿದ್ದ ನಿದ್ರೆಯ ಗಾಢತೆ ಅರಿತು ನಿದ್ದೆಮಾಡಲು ಕಾಲೇಜಿಗೆ ಬರುವುದು ಬೇಡ ಎಂದೆನಿಸಿ ನಿದ್ದೆ ಬರುವಂತಿದ್ದರೆ ಕಾಲೇಜು ಬರುವ ಮುನ್ನವೇ, ಸಿಹಿನೀರು ಹೊಂಡದ ಸೈಡ್ ಇಂದ ಹೋಗಿ ಒನಕೆ ಓಬವ್ವ ಕಿಂಡಿಯೊಳಗೆ ತೂರಿ  ಕೋಟೆಯೊಳಗಿನ ತಣ್ಣೀರು ದೋಣಿಯಲ್ಲಿ ನೀರು ಕುಡಿದು,  ಯಾವುದಾದರೂ ಬಂಡೆಯ ಕೆಳಗೆ ನಾಲ್ಕೈದು ಗಂಟೆಯ ವರೆಗೆ   ನಿದ್ದೆ ಮಾಡಿ,ಆರು ಘಂಟೆಗೆ ನೇರವಾಗಿ  ಹಾಸ್ಟೆಲ್ಗೆ ಊಟಕ್ಕೆ ಹಾಜರಾಗುತಿದ್ದೆ... ಶಿವರಾಮ ಮಾತ್ರ ಕಾಲೇಜ್ ಗೆ ಹೋಗಿರುತ್ತಿದ್ದ.  ಕೆಲವಾರು ದಿನ ಕಾಲೇಜ್ ಹೋಗಿ ಅತ್ತ ಕಡೆಯಿಂದ ಕೋಟೆ ಸುತ್ತಿ ಬರುವುದು ವ್ಯರ್ಥ ಎಂದು ಭಾವಿಸಿ ಕಾಲೇಜು ಕಡೆ ಹೋಗುವುದನ್ನೇ ಬಿಟ್ಟು,ನೇರವಾಗಿ   ಕೋಟೆಯ ಮುಖ್ಯ ದ್ವಾರದಲ್ಲೇ  ಕೋಟೆಯ ಒಳಗೆ ಹೋಗುತ್ತಿದ್ದೆ.ಕೋಟೆಯೊಳಗೆ  ಎಣ್ಣೆಕೊಳಕ್ಕೆ ಹೊಂದಿಕೊಂಡಂತೆ ಒಂದು ಬೃಹತ್ ಗುಂಡು. ಅದು ನನ್ನ ಕಾಯಂ ಸ್ಥಳ.  ಅದು ವಿಶಾಲವಾಗಿದ್ದು, ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಸದಾ ನೆರಳು ಬೀಳುತ್ತಿತ್ತು. ಹಾಗೇ  ಅದರ ಮೇಲೆ ಕುಳಿತುಕೊಂಡರೆ ಕೋಟೆಯ ಮುಖ್ಯ ದ್ವಾರದ ಸ್ಪಷ್ಟ ಚಿತ್ರಣ ಕಾಣುತ್ತಿತ್ತು.  ಆಕಡೆ ಒಂಟಿಕಲ್ಲು ಬಸವನವರೆಗೂ, ಈಕಡೆ ಮದ್ದು ಬೀಸುವ ಕಲ್ಲುಗಳವರೆಗೂ ಸಂಪೂರ್ಣವಾದ ಚಲನ-ವಲನಗಳನ್ನು ನೋಡಬಹುದಿತ್ತು. ಆದ್ದರಿಂದ ಬೃಹತ್ ಬಂಡೆ  ನನಗೆ ಅಚ್ಚುಮೆಚ್ಚಿನ ಸ್ಥಳವಾಗಿ  ಓದುವುದಿರಲಿ, ಮಲಗುವುದಿರಲಿ ಬಹುತೇಕ ಆ ಬಂಡೆಯೇ ನನ್ನದು ಅನ್ನುವ ಮಟ್ಟಿಗೆ  ನಾನು ಅದಕ್ಕೆ ಅಂಟಿಕೊಂಡಿದ್ದೆ. ಹಾಗೆ ಆ ಗುಂಡಿನಮೇಲೆ ಕೂತು ಮೂಡ್ ಇದ್ದಾಗ ಒಂದಷ್ಟು  ಓದುತ್ತಿದ್ದೆ. ಇಲ್ಲ ಅಂದ್ರೆ ಕಾಡು ಮನುಷ್ಯನಂತೆ  ಅಲ್ಲಿರುವ ಬಂಡೆಗಲ್ಲುಗಳನ್ನು ಹತ್ತಿ ಇಳಿಯುತ್ತಿದ್ದೆ.ಒಂದುದಿನ ಕೆಲವು ಬಂಡೆಗಲ್ಲುಗಳ  ಹತ್ತಿದರೆ, ಮರುದಿನ ಇತರೆ ಬಂಡೆಗಳ ಹತ್ತುತ್ತಿದ್ದೆ.ಹಾಗೆ ಮಾಡುತ್ತಿರುವಾಗ  ಒಂದುದಿನ ನಿರ್ಜನ ಪ್ರದೇಶ,ಸುತ್ತಾ-ಮುತ್ತಾ ದೊಡ್ಡ ದೊಡ್ಡ ಬಂಡೆಗಲ್ಲುಗಳ ಮದ್ಯದಲ್ಲಿ ಒಂದು ಹೊಸ ಲೆದರ್ Belt ಒಂದು ಬಿದ್ದಿತ್ತು.. ನೋಡಲೇನೋ ಹೊಚ್ಚಹೊಸದರಂತೆ ಕಾಣುತ್ತಿದೆ. ನನಗೋ ಬೆಲ್ಟ್ ಇಲ್ಲದೇ ಪ್ಯಾಂಟೇ ನಿಲ್ಲುತ್ತಿರಲಿಲ್ಲ.ತೆಗೆದುಕೊಂಡು ನಾನು ಬಳಸೊಣ ಎಂದೆನಿಸಿತ್ತು ಆದರೆ ಅದಕ್ಕೂ ಒಂದೆರಡು ದಿನಗಳ ಹಿಂದಷ್ಟೇ ಲಂಕೇಶ್ ಪತ್ರಿಕೆಯಲ್ಲಿ ಯಾವುದೋ ಕ್ರೈಂ ಸ್ಟೋರಿ ಓದುತ್ತಿರುವಾಗ ಹತ್ಯೆ ಆಗಿರುವ ವ್ಯಕ್ತಿಯ ವಸ್ತುಗಳನ್ನು ಆರೋಪಿಗಳು ಬಳಸಿದ್ದಕ್ಕಾಗಿ ಅವರು ಕೊಲೆ ಮಾಡಿರುವುದನ್ನು ಪತ್ತೆ ಹಚ್ಚಿದ್ದನ್ನು ನಾನು ಓದಿದ್ದು ನೆನಪಾಗಿ  ತೆಗೆದುಕೊಳ್ಳಲು ಬಗ್ಗಿದವ ಬೇಡ ಎಂದು ಮೇಲೆದ್ದಿದ್ದೆ.ಆದರೆ ಆ ಹೊಸ ಬೆಲ್ಟ್ ಒಂದೇ ಅಲ್ಲಿ ಹೇಗೆ ಬಂದು ಬೀಳಲು ಸಾಧ್ಯ???  ಕೆಲವು ಆಳವಾದ ಬಂಡೆಯ ಪ್ರಪಾತಗಳಿದ್ದದ್ದ್ರಿಂದ  there was happend something worng ..... ಬಟ್...ನಾನು ಒಬ್ಬನೇ ಇದ್ದದ್ದರಿಂದ  ಅಷ್ಟೊಂದು ಕೂಲಂಕಷವಾಗಿ ಅದರ ಬಗ್ಗೆ ಅಧ್ಯಯನ ಮಾಡಲು ಹೋಗ ಲಿಲ್ಲ.ಯಾಕೋ ಕಾಲೇಜ್ ಗೆ ಹೋಗುವುದು, ನಿದ್ದೆಯಲ್ಲಿ ಪಾಠ ಕೇಳುವುದು ವ್ಯರ್ಥ ಅನಿಸಿತು.ಅದಕ್ಕಿಂತ ಹತ್ತು ಕಲ್ಲು ಗುಂಡುಗಳನ್ನು ಹತ್ತಿ  ಈ  ಕೋಟೆಯ  ಮೇಲೆ ಇರುವುದೇ ಅತ್ಯಂತ ನೆಮ್ಮದಿ ಮತ್ತು ಸುಖ ಅನಿಸಿತ್ತು...ಇಷ್ಟ ಆದ್ರೆ ಓದೋದು, ನಿದ್ದೆ ಬಂದರೆ ಮಲಗೋದು,ಬೇಜಾರಾದ್ರೆ ಹಾಡು ಹೇಳುತ್ತಾ ಕೋಟೆಯ ನೋಡುವುದು. ಅದೂ ಬೇಜಾರಾದ್ರೆ ಎತ್ತರದ ಬಂಡೆ-ಗಲ್ಲು ಹತ್ತುವುದು.ವಾರಕ್ಕೆ ಒಂದೋ ಎರಡೋ ಜೇನುಗಳೂ ಕೂಡ ಸಿಗುತ್ತಿದ್ದವು. ನಮ್ಮ ಊರಿನ ಜೇನುತುಪ್ಪಕ್ಕಿಂತ ದುರ್ಗದ ಕೋಟೆಯ ಜೇನುತುಪ್ಪ ಅತಿ ಮಧುರ. ಸಿಹಿ ಜಾಸ್ತಿಯೇ ಇರುತಿತ್ತು. ಕಾರಣ ಕೋಟೆಯ ಮೇಲಿನ ಹೆಚ್ಚು ಪ್ರಕಾರದ ಹೂಗಳ ಮಕರಂದವು ಇದಕ್ಕೆ ಕಾರಣ. ಹೀಗೆ ಸಾಗುತ್ತಿದ್ದವು ನನ್ನ ಕಾಲೇಜು ದಿನಗಳು....*

*ಪ್ರತಿದಿನ ನಾನು ಬೆಳಿಗ್ಗೆ ಎಂಟಕ್ಕೆ ಹಾಸ್ಟೆಲ್ ನಲ್ಲಿ ತಿಂಡಿ ತಿಂದವನೇ ನೇರವಾಗಿ  ಮುಖ್ಯದ್ವಾರದಿಂದ ಕೋಟೆಯನ್ನು ಪ್ರವೇಶಿಸಿ ಮೂಡ್ ಇದ್ದಷ್ಟು ಸಮಯ ಓದುವುದು ನನ್ನ ಕಾಯಕ ಆಗಿತ್ತು. ನಂತರ ಹನ್ನೊಂದು ಗಂಟೆಗೆ ಇಳಿದು ಊಟವ ಮಾಡಿಕೊಂಡು ಪುನಃ ಅಲ್ಲಿಗೇ ಹಿಂತಿರುಗಿ ಹೋಗುತಿದ್ದೆ. ಹೀಗೆ ನನ್ನ ದಿನಚರಿ ನಿರಂತರವಾಗಿ ಸಾಗಿತ್ತು.ಇದನ್ನು ನಾನು ರೂಮ್ ಮಾಡಿದ ಕಾಂಪ್ಲೆಕ್ಸ್ ನಲ್ಲಿ  ನಮ್ಮ ಕಾಲೆಜಿನ ಒಬ್ಬ final year ಡಿಗ್ರಿಯ ತಿಮ್ಮಣ್ಣ  ಎಂಬುವವರು ಗಮನಿಸಿ, ಒಂದು ದಿನ ನೀನು ಕಾಲೇಜ್ಗೆ ಹೋಗುತಾ ಇಲ್ಲವಾ?? ಎಂದು ಕೇಳಿದ್ದ. ಅದಕ್ಕೆ ನಾನು ಇದ್ದ ವಿಷಯ ಹೇಳಿದ್ದೆ. ಆಗ ಆತ "ಹಾಗದರೆ ನಾನು ಕೋಟೆಗೆ ಬರುವೆ ಇಬ್ಬರೂ  ಜೊತೆಗೆ ಹೋಗಿ ಓದೋಣ "ಎಂದು ಹೇಳಿದ್ದ. ಅಂದಿನಿಂದ ನನಗೆ ಕೋಟೆಯೊಳಗೆ ಒಂಟಿಯಾಗಿದ್ದ ನನಗೆ  ಬೇಜಾರಿಲ್ಲದೇ ಕಾಲ ಕಳೆಯಲು ಹಿರಿಯ ಸ್ನೇಹಿತರೊಬ್ಬರು ಸಿಕ್ಕಂತಾಗಿ ಎರಡ್ಮೂರ ದಿನ ಹಾಗೆ ಎಂದಿನಂತೆ ಹೋಗುತ್ತಾ ಬರುತ್ತಾ ಇದ್ದೆವು.ಒಂದು ದಿನ ನಾನು  ಆ ಕೋಟೆಯ ಕೊನೆಯ ರಕ್ಷಣಾ ಗೋಡೆಯ ಭತೇರಿ ತೋರಿಸುತ್ತಾ ಅಣ್ಣಾ ಅದು ಕಟ್ಟಿದ್ದಾರಲ್ಲ??ಅದೆಲ್ಲಾ  ಸಂಪೂರ್ಣ ಸುತ್ತುವರೆದು ಅದರ ಹತ್ತಿರ ಹೋಗಿಯೇ ನೋಡಬೇಕೆಂಬ ನನ್ನ ಹೆಬ್ಬಯಕೆಯನ್ನು ನಾನು ತಿಮ್ಮಣ್ಣನ ಬಳಿ ಪ್ರಸ್ತಾಪಿಸಿದೆ.*
*ಅದಕ್ಕೆ ಸಮ್ಮತಿಸಿದ ತಿಮ್ಮಣ್ಣ ಹುಂ ಕಣಪ್ಪ ಎಲ್ಲದೂ ನೋಡ್ಬೇಕಿತ್ತು...ಇಂಟರೆಸ್ಟ್ ಇರುವವರೆಗೆ ಓದಿ ಆಮೇಲೆ ಹೋಗೋಣ ಎಂದು ಸಮ್ಮತಿಸಿದರು. ಅದಕ್ಕೆ ಸರಿ ಎಂದು ಒಂದೋ ಎರಡೂ ಪೇಜ್ ಇತಿಹಾಸ ಪುಸ್ತಕವನ್ನು ಓದಿ ಮುಖ್ಯ ಅಂಶಗಳನ್ನು ಬರೆದು ಹಾಕಿದೆ. ತಿಮ್ಮಣ್ಣ ನನಗಿಂತಲೂ ವಯಸ್ಸಿನಲ್ಲಿ ಹಿರಿಯ ವಯೋಸಹಜ ಕಾಲೇಜು ಜೀವನ,ಆಕರ್ಷಣೆ, ಹುಡುಗಿಯರ ಗೆಳೆತನ, ಲವ್ ಗಿವ್ ಅಂತೆಲ್ಲಾ  ಆಗಾಗ ಮಾತನಾಡುತ್ತಿದ್ದ. ನಾನು ಈ ವಿಷಯಗಳಿಂದ ಸ್ವಲ್ಪ ದೂರವೇ ಇದ್ದುದರಿಂದ ನಾನು ಈ ವಿಷಯದಲ್ಲಿ ನಿಮ್ಮಷ್ಟು ದೊಡ್ಡವನಾಗಿಲ್ಲಣ್ಣ.. ಎಂದು ಹೇಳುತ್ತಾ ಅವರ ವಯೋ ಚೇಷ್ಟೆಗಳ ಬಗ್ಗೆಯೇ ಕೆದಕಿ ಕೆದಕಿ ಮಾತಾಡ್ತಿರುತ್ತಿದ್ದೆ.ಕೋಟೆಯ ನೋಡಲು ಯುವ ಜೋಡಿ, ಪ್ರೇಮಿಗಳು ಬಂದರೆ ಅವರಬಗ್ಗೆ ಒಂದಷ್ಟು comments ಮಾಡುತಿದ್ದೆವು.ಅಂದು ಇದ್ದಕಿದ್ದ ಹಾಗೆ ಏಕನಾಥೇಶ್ವರಿ ದೇವಸ್ಥಾನದ ಹಿಂದೆ ಬುರುಜನಹಟ್ಟಿಗೆ ಹೊಂದಿಕೊಂಡ  ಕೋಟೆಯ ರಕ್ಷಣಾಗೋಡೆ ಸುತ್ತಾಲೂ ನೋಡುವ ಗುರಿ ಇಟ್ಟು ಸಾಗಿದೆವು.* *ಮದ್ಯಾಹ್ನ ಉರಿ ಬಿಸಿಲು... ಮೇಲ್ದುರ್ಗದ ಉಯ್ಯಾಲೆ ಕಂಬದ ಬಳಿಯ ಕ್ಯಾಂಟೀನ್ನಲ್ಲಿ ನೀರು ಕುಡಿದು ವಾಟರ್ ಬಾಟಲನಲ್ಲಿ ನೀರು ತುಂಬಿಸಿಕೊಂಡು ಮುಂದೆ ಸಾಗಿದೆವು.* *ಏಕನಾಥೇಶ್ವರಿ ದೇವಸ್ಥಾನದ ಹಿಂಬದಿಯಿಂದ  ಕಲ್ಲುಬಂಡೆಗಳನ್ನು ಹತ್ತಿ  ಬು ರುಜನಹಟ್ಟಿಗೆ ಹೊಂದಿಕೊಂಡ ರಕ್ಷಣಗೋಡೆಯ ಮುಟ್ಟಿ ಅಲ್ಲಿಂದ ನಗರದ ವಿಹಂಗಮ ನೋಟ ನೋಡಿ ಆಚೆ ಈಚೆ ಓಡಾಡಿದ ಮೇಲೆ  ಯಾವುದೋ ಒಂದು ಪೊದೆಯಲ್ಲಿ ಒಂದು ಸಣ್ಣಜೇನು  ಸಿಕ್ಕಿತ್ತು.ಅದನ್ನು ಮುರಿದು ತಿನ್ನಲು ಒಂದು ಎತ್ತರ ಬಂಡೆಯ ಕೆಳಗೆ ಕುಳಿತೆವು. ನಾವು ಕುಳಿತ ಬಂಡೆಯ ತುದಿಗೆ ಎರಡು ಹೆಜ್ಜೇನುಗಳು ಗೂಡು ಕಟ್ಟಿದ್ದವು. ಆ ಬಂಡೆಯ ಸುತ್ತ ಮುತ್ತಾ ಒಂಥರಾ ಪ್ರಾಚೀನ  ಅವಶೇಷ ವಾಸನೆ.ಅದೇಗೆ ಇತ್ತೆಂದರೆ ಇಲಿಯ ಮಲ ಮತ್ತು ಮೂತ್ರದ ಸಿಂಗ್ ವಾಸನೆ ಮೂಗಿಗೆ ರಾಚುತ್ತಿತ್ತು.  ಮದ್ಯಾಹ್ನ ಬಿಸಿಲಿಗೆ ಇಡೀ ಏರಿಯಾ ಬಿಕೋ ಎನ್ನುತ್ತಾ.. ಒಂಥರಾ ರಾವು ರಾವು ಅಂತ ಅನಿಸುತ್ತಿತ್ತು. ಹಾಗೆ  ಕೈಯಲ್ಲಿದ್ದ ಜೇನುತುಪ್ಪವ ನೆಕ್ಕುತ್ತಾ  ತಿಮ್ಮಣ್ಣ  "ಅಲ್ಲಪ್ಪಾ ಮದಕರಿನಾಯಕ ರಾಜ ಇದ್ದಾಗ ಹೈದರಾಲಿ ದಾಳಿ ಮಾಡಿದಾಗ ಇದ್ದಂತಹ ದುಡ್ಡು ಬಂಗಾರ ಎಲ್ಲವನ್ನೂ  ಗೋಪಾಲ ಸ್ವಾಮಿ ಹೊಂಡದಲ್ಲಿಯೂ,ಇಂತಹ ಬಂಡೆ ಸಂದುಗಳಲ್ಲಿ ಹಾಕಿದ್ದಾರಂತೆ" ಅಂದರು. ಹೂ ಅಣ್ಣ ಹಾಕಿರಬಹುದು..ಎಲ್ಲರೂ ಹಾಗೆ ಹೇಳ್ತಾರೆ. ಗೋಪಾಲಸ್ವಾಮಿ ಹೊಂಡದಲ್ಲಿ ಅಪಾರ ಪ್ರಮಾಣದಲ್ಲಿ ನಿಧಿಯನ್ನು ಹಾಕಿದ್ದಾರೆ ಅಂತ.. ಅವರು ಇತಿಹಾಸ ವಿದ್ಯಾರ್ಥಿ ಆಗಿದ್ದರಿಂದ ಸ್ವಲ್ಪ ಈ ತರ ಮಾಹಿತಿ  ಅವರಬಳಿ ಇರಬಹುದು.* *ಹಾಗೆ ಮಾತನಾಡುತಾ  ನಾವು ಕುಳಿತ ಸ್ಥಳಕ್ಕೆ ನಮ್ಮ ಎದುರಿಗೆ  ಐದಾರು ಬೃಹತ್ ಸಂಪಿಗೆ ಮರಗಳ ಹಿಂದೆ ಒಂದೇ ತೆರನಾಗಿ ಒಪ್ಪವಾಗಿ ಜೋಡಿಸಿಟ್ಟ ಕಲ್ಲುಗಳು ರಾಶಿ ಕಾಣುತಿತ್ತು. ಅದು  ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಹಿಂದಿನ ಸ್ಥಳ.ನಾಳೆ ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಹಿಂಬಾಗ ಆಡು ಮಲ್ಲೇಶ್ವರಕ್ಕೆ ಹೊಂದಿಕೊಂಡ  'ಹಿಡಿಂಬಾ ಬೆಟ್ಟ'  ಹತ್ತೋಣ. ಅದಕ್ಕೇ ಹೊಂದಿಕೊಂಡ ರಕ್ಷಣ ಗೋಡೆಯ ಹತ್ತಿ  ಅದರಾಚೆ ನೋಡೋಣ  ಎಂದು ನಿರ್ಧರಿಸಿ  ವಾಪಾಸಾದೆವು.*

*ತಿಮ್ಮಣ್ಣ  ಅಂದು ಸ್ವಲ್ಪ ಕಾಲೇಜಿಗೆ ಹೋಗಿ ಲೈಬ್ರರಿ ಬುಕ್ ಇಸ್ಕೊಂಡು ಬರುವೆ ಎಂದು  ಹೋಗಿದ್ದನು.ಕಾಲೇಜಿನಿಂದ ಅವರು ಬರುವ ಹೊತ್ತಿಗೆ ಸುಮಾರು ಹನ್ನೊಂದು ವರೆ ಆಗಿತ್ತು ..ಇಬ್ಬರೂ ಮೊದಲ ರೌಂಡಲ್ಲಿ  ಹಾಸ್ಟಲ್ ಊಟ ಮಾಡಿಕೊಂಡು ಬೆಟ್ಟ ಹತ್ತಿದೆವು. ಮೊದಲು  ನಮ್ಮ ಮಾಮೂಲಿ ಬಂಡೆಯ ಮೇಲೆ ಹತ್ತಿ ಕೂತು ಓದಲು ಶುರುಮಾಡಿದೆವು. ಹತ್ತು ಹದಿನೈದು ನಿಮಿಷ ಕಳೆದ ಮೇಲೆ  ತಿಮ್ಮಣ್ಣ "ನಾಗೇಂದ್ರ ಯಾಕೋ ಓದಾಕೆ ಇಂಟರೆಸ್ಟ್ ಬತ್ತಾ ಇಲ್ಲ.. ಬಾ ಬೆಟ್ಟ ಹತ್ತೋಣ" ಎಂದು ಎದ್ದನು. ನಾನು ಎದ್ದು ನಾವಿದ್ದ ಸ್ಥಳದಿಂದಲೇ ಸಂಪಿಗೆ ಸಿದ್ದೇಶ್ವರ ದೇವಸ್ಥಾನಕ್ಕೆ ಅಡ್ಡದಾರಿಯಲ್ಲಿ ಕಲ್ಲು ಬಂಡೆಗಳ ಹತ್ತಿ ಬಂದೆವು.ದಾರಿಯಲ್ಲಿ ಬಂದರೆ ಒಂದೂವರೆ ಎರಡು ಕಿ ಮೀ.. ಅಡ್ಡ ದಾರಿಯಲ್ಲಿ ಬಂದರೆ  ಮುನ್ನೂರು ನಾನ್ನೂರು ಮೀಟರ್  ಅಂತರದಲ್ಲಿ ಅಡ್ಡ ದಾರಿ ಕಂಡುಕೊಂಡಿದ್ದೆ. ಸಂಪಿಗೆ ಸಿದ್ದೇಶ್ವರ ದೇವಸ್ಥಾನಕ್ಕೆ ಪ್ರವಾಸಿಗರು ಕೊನೆ..ಪಾಳು ಬಿದ್ದ ಹಿಡಿಂಬೇಶ್ವರ ದೇವಸ್ಥಾನದ ಪಕ್ಕದಿಂದ ನಾವು ದೂರದ ಕಲ್ಲು ಬಂಡೆಗಳ ಬೆಟ್ಟ ಹತ್ತುತ್ತ  ರಕ್ಷಣಾ ಗೋಡೆಯ ಕಡೆ ಸಾಗಿದೆವು..ಭೀಮಸೇನ ಮತ್ತು ಹಿಡಿಂಬ ರಾಕ್ಷಸರು ಯುದ್ಧ ಮಾಡಿದಾಗ ಆ ಕಲ್ಲುಗಳನ್ನು ಎಸೆದಿದ್ದರಂತೆ.ಆ ಕಲ್ಲುಗಳ ಕೇಳಬೇಕೇ?? ಕಲಾಕಾರ ಹೊಂದಿಕೆ..ಅಕ್ಷರಶಃ ಚಿತ್ರಕಲ್ಲು ದುರ್ಗದ ಚಿತ್ರಣ ಇರುವುದು ಅಲ್ಲೇ.. ಹಾಗಾಗಿ ಎತ್ತರ ಎತ್ತರದ ಕಲ್ಲು ಬಂಡೆಗಳು ಚಿತ್ರ ವಿಚಿತ್ರ ವಾಗಿ ಬಿದ್ದಿರುವ ಕಲ್ಲುಗಳ ಆ ಚಿತ್ರಣ ಸ್ವಾದಿಸುತ್ತಾ  ಮುನ್ನಡೆದವು. ಅಲ್ಲಲ್ಲಿ ಬಂಡೆ ಕಲ್ಲುಗಳ ಸಂಧಿಯಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಬಿದ್ದಿದ್ದವು.ಅಲ್ಲೊಂದು ಇಲ್ಲೊಂದು ನವಿಲುಗರಿಯೂ ಬಿದ್ದಿದ್ದವು.ನವಿಲುಗರಿಗಳ ಹೆಕ್ಕುತ್ತಾ, ಕೈಯಲ್ಲಿ ಹಿಡಿದು ಹೋಗುತ್ತಿದ್ದೆವು... ನನ್ನ ಕೈಯಲ್ಲಿ ನಾಲ್ಕೈದು ಮುಳ್ಳುಹಂದಿಯ ಮುಳ್ಳುಗಳು ... ಎರಡು ಮೂರು ದೊಡ್ಡ ನವಿಲುಗರಿಗಳು ಎಡಗೈಯಲ್ಲಿ  ಹಿಡಿದುಕೊಂಡು ಬಲಗೈಯಲ್ಲಿ ಮಾತ್ರ ಒಂದು  ಗಟ್ಟಿಮುಟ್ಟಾದ ಕಿರುಬೆರಳ ಗಾತ್ರದ ಹಂದಿ ಮುಳ್ಳೋದನ್ನು ಹಿಡಿದುಕೊಂಡಿದ್ದೆ. ತಿಮ್ಮಣ್ಣ ಒಂದೆರಡು ನವಿಲುಗರಿ ಮತ್ತು ವಾಟರ್ ಬಾಟಲ್ ಹಿಡಿದು ಬರುತಿದ್ದ.*

*ತಿಮ್ಮಣ್ಣ...ನನಗೊಂದು ಡೌಟು...ಈ ಮುಳ್ಳಂದಿ ಮುಳ್ಳುಗಳನ್ನ ಮನೆಯಲ್ಲಿ ಇಟ್ಕೊಂಡ್ರೆ ಮನೇಲಿ ಜಗಳ ಆಗ್ತದಂತೆ  ಹೌದಾ??*

*ಏನೋ ಕಣಪ್ಪ ನನಗೆ ಗೊತ್ತಿಲ್ಲ ನಮ್ಮ ಕಡೆ ಮುಳ್ಳಂದಿ ಇಲ್ಲ.. ಕಾಡಂದಿ ಬೇಕಾದ್ರೆ ಅದವೆ ನೋಡು...ಎಂದನು.*

*ಹೌದು ತಿಮ್ಮಣ್ಣ...ಹೇಳ್ತಾರೆ ಮುಳ್ಳುಹಂದಿಯ ಮುಳ್ಳುಗಳು ಮನೆಯಲ್ಲಿ ಇದ್ದರೆ ಅದರಿಂದ ಕುಟುಂಬದಲ್ಲಿ ಕಲಹ ಆಗ್ತದೆ... ಗಂಡ-ಹೆಂಡಿರ ನಡುವೆ ಜಗಳ ಆಗ್ತದೆ ಅಂತೆಲ್ಲಾ  ಮಾತಾಡ್ತಾರೆ..ನನಗೂ ಇದರ ಸತ್ಯ ಸತ್ಯತೆಯ ಬಗ್ಗೆ ತಿಳಿದಿಲ್ಲ ಎಂದು ಹೇಳುತ್ತಾ ನಿರ್ಜನ ರಕ್ಕಸಗಲ್ಲುಗಳ ಮಧ್ಯೆ ನಮ್ಮ ದಾವಂತದ ಹೆಜ್ಜೆಗಳನ್ನು ಹಾಕುತ್ತಾ ಬರುತ್ತಿದ್ದೇವೆ..ಮಧ್ಯಾಹ್ನ ಒಂದುವರೆ ಎರಡು ಗಂಟೆಯ ಸಮಯ ಆಗಿರಬಹುದು ನಮ್ಮ ಕೈಯಲ್ಲಿ ವಾಚ್ ಅಂತೂ ಇರಲಿಲ್ಲ..ಅಲ್ಲಿದ್ದುದು ನಾವಿಬ್ಬರು ಮಾತ್ರ... ಆಗೊಮ್ಮೆ ಈಗೊಮ್ಮೆ ನವಿಲುಗಳು ಕೂಗುವ ಶಬ್ಧ ಬಿಟ್ಟರೆ ಯಾವ ನರಪಿಳ್ಳೆಯೂ ಇಲ್ಲದ ನೀರವ ಮೌನ.. ಹಠಾತ್ತನೆ ಏನಾದರೂ  ಅಪಾಯದ ಸಂದರ್ಭ ಎದುರಾದರೂ ಕಾಪಾಡುವವರೂ ದಿಕ್ಕಿಲ್ಲ.ತಿಮ್ಮಣ್ಣ ನಾನಿರುವ ದೈರ್ಯದ ಮೇಲೆ ಹೆಜ್ಜೆ ಹಾಕುತ್ತಿದ್ದಾನೆ. ಈ ತಾಣವು ಮೊದಲೇ ಹಿಡಂಬೇಶ್ವರ ರಾಕ್ಷಸರ ವಾಸಸ್ಥಳ ಆಗಿದ್ದರಿಂದ ನನಗೂ ಸ್ವಲ್ಪಮಟ್ಟಿಗೆ ಎದೆಯಲಿ ಡವ ಡವ. ಇಷ್ಟು ಗಾತ್ರದ ಕಲ್ಲುಗಳನ್ನು ಭೀಮ-ಹಿಡಿಂಬ  ಎತ್ತಿರಬಹುದೇ???   ಎತ್ತಿ ಎಸೆದಿರಬಹುದೇ?? ಹತ್ತಿಪ್ಪತ್ತು ಟನ್ ಇರುವ ಕಲ್ಲುಗಳನ್ನು ಎತ್ತಿರಬಹುದಾದರೆ ಅವರ physical mass ಎಸ್ಟಿರಬಹುದು??? ಈ ಕಲ್ಲುಗಳನ್ನು ಪರಸ್ಪರ ಎಸೆದಾಡಿಕೊಂಡಾಗ ಇಬ್ಬರಲ್ಲಿ ಒಬ್ಬರಿಗೂ ಈ ಕಲ್ಲುಗಳು ಬೀಳಲಿಲ್ಲವೇ?? ಒಂದು ವೇಳೆ ಬಿದ್ದರೂ ಅವರಿಗೆ ಏನೂ ಆಗಿರಲು ಸಾಧ್ಯವಿಲ್ಲ ಎಂದಾದರೆ ಅವರೆಂತ ಪಶುಗಳಾಗಿದ್ದರೋ ಏನೋ...ಎಂದೆಲ್ಲಾ  ಮಾತಾಡುತ್ತಾ ಕಲ್ಲು ಗುಂಡುಗಳನ್ನು ಹತ್ತುತ್ತಾ... ಇಳಿಯುತ್ತ ಮುಂದೆ ಸಾಗುತಿದ್ದೆವು.ನಾವು ಅಂದು ಏಳುಸುತ್ತಿನ ಮೊದಲ ಅಥವಾ ಕೊನೆಯ ರಕ್ಷಣಾಗೋಡೆ ಮುಟ್ಟಿಯೇ ಬರಬೇಕೆಂಬ ಮೊಂಡು ದೈರ್ಯ ಮಾಡಿಯೇ ಹೋಗುತಿದ್ದೇವೆ. ಒಂದಷ್ಟು ದೂರ ಸಾಗಿ ಬಂದಮೇಲೆ ಬೆಟ್ಟ ಹತ್ತುವ  ದಾರಿಯಲ್ಲಿ  ಸುಸ್ತಾಗಿ ಅಲ್ಲಿ ಒಂದು ಬಂಡೆಯ ಕೆಳಗೆ ವಿಶ್ರಾಂತಿ ಪಡೆಯಲು ಹೋದೆವು.ಗುಹೆಯಂತಹ ಕಲ್ಲು ಬಂಡೆಯ ಸಂದುಗಳು...ಬಂಡೆಯ ನೆರಳು  ಯಾವಾಗಲು ತಂಪು ಇರುವುದರಿಂದ ಅಲ್ಲೊಂದು ಬೃಹತ್ ಬಂಡೆಯ ಗವ್ವರದ ಬಳಿ ನಿಂತೆವು. ಗುಹೆಯು ಇನ್ನೂ ಒಳಗೆ ತೆರೆದುಕೊಂಡಿತ್ತು . ನಾವು ನಿಂತದ್ದು ಒಂದು ಗವ್ವರಾದ ಅಂಗಳದಲ್ಲಿ..ಇನ್ನೂ ಸ್ವಲ್ಪ ಒಳಗೆ ಹೋಗಿ ನೋಡೋಣ ಎಂದು ಹೋಗಲು ಪ್ರಯತ್ನಿಸುತ್ತಿರುವಾಗ ನಮಗೆ ಯಾವುದೋ ಪ್ರಾಣಿಯ ಒಣಗಿದ ಮಲ ಕಾಣಿಸಿತು.ನಾನು ಆ ಮಲ ಕಾಡು ಹಂದಿಯದು ಎಂದೆ ಅದಕ್ಕೆ ತಿಮ್ಮಣ್ಣ ಅಲ್ಲ ನಾಗೇಂದ್ರ ಅದು ಕರಡಿಯ ಮಲ ಎಂದನು..ನನಗೂ ಕರಡಿಯ ಮಲ ಇರಬಹುದು ಎನಿಸಿತು.'ಕರಡಿ' ಎಂಬ ಶಬ್ದ ಕೇಳಿದೊಡನೆ ಮೈ ರೋಮಗಳು ಸೆಟೆದು ನೆಟ್ಟಾಗಾದವು . ಈ ಹಿಂದೆ ನಾನು ಕೇಳಿದ ಕರಡಿಯ ಕಥೆಗಳೆಲ್ಲವೂ ಕೂಡ ಗಂಡಸರನ್ನು ಹೊತ್ತುಕೊಂಡು ಹೋಗಿ ತಮ್ಮ ಗುಹೆಯೊಳಗೆ ಇಟ್ಟು ಆಚೆ ಬರದಂತೆ ಗುಂಡು ದಬ್ಬಿ ಅವೇ ಊಟ ತಂದು ಕೊಡುತ್ತವೆ ಎಂದು ಕೇಳಿದ್ದೆ. ಆ ಕಥೆ ನಿಜವಾಗಿದ್ದರೆ, ನಾವೇನಾದರೂ ಇಂದು  ಯಾವುದಾದರು ಕರಡಿಯ ಕೈಗೆ ಸಿಕ್ಕು, ಆ ಕರಡಿ ಏನಾದರೂ ಈ ಬೃಹತ್ ಗುಂಡುಗಳನ್ನು ಗುಹೆಗೆ ಅಡ್ಡವಾಗಿ ದಬ್ಬಿದರೆ ನಾವು ಈ ಜನ್ಮಕ್ಕೆ ಈಚೆ ಬರಲ್ಲ ಎಂದು ನಡುಕ ಉಂಟಾಯಿತು. ತಿಮ್ಮಣ್ಣ ಕರಡಿಗಳು ಇದ್ದರೆ ಡೇಂಜರ್ ಕಣಪ್ಪ. ಹೆಂಗೆ ಪರುಚುತ್ತಾವೋ.. ಹೆಂಗೆ ಕಚ್ಚುತಾವೊ ಹೇಳಕ್ಕಾಗಲ್ಲ ಸ್ವಲ್ಪ ಹುಷಾರಾಗೇ ಇರಬೇಕು ... ಆ ಬಂಡೆಯ ಸುತ್ತಲೂ ಹಿಟ್ಟಿನಂತಹ ನುಸಿ ಮಣ್ಣು ಮತ್ತು ಇಲಿಯ ಮಲ ಮತ್ತು ಮೂತ್ರ ಮಿಶ್ರಣದ ವಾಸನೆ..ಇಲಿಗಳೋ, ಓತಿಖ್ಯಾತಗಳೋ ಅಥವಾ ಉಡಗಳೋ ಬಾಲ ಎಳೆದುಕೊಂಡು ಓಡಾಡಿರುವ ಹೆಜ್ಜೆ ಗುರುತುಗಳು.ಗುಂಡು ಕಲ್ಲುಗಳಮೇಲೆ ಬಣ್ಣ ಬಣ್ಣದ ಸಣ್ಣ ದೊಡ್ಡ ಓತೀಕ್ಯಾತಗಳು ನಮ್ಮನ್ನು ನೋಡಿ ಹಾಗೆ ಹಾಗೆ ಬಂಡೆಯ ಮರೆಗೆ ಸರಿದುಕೊಳ್ಳುತಿದ್ದವು.. ನಮಗೆ ಭಯ ಇದ್ದದ್ದು ಕರಡಿಯೋ ಕಾಡು ಹಂದಿಯೋ, ಚಿರತೆಯೋ ಇದ್ದು  ಅವು ಧಾಳಿ ನಡೆಸಿ ನಮಗೆನಾದರೂ ಹಾನಿ ಮಾಡಿದರೆ ಎಂದು . ಅಲ್ಲಿ ಕುಳಿತುಕೊಳ್ಳವುದು ಸೆಪ್ಟಿ ಅಲ್ಲ ಅಂತ ಭಾವಿಸಿ ಅಲ್ಲೇ ಯಾವುದೋ ಗಿಡದಲ್ಲಿ ರೆಂಬೆ  ಒಣಗಿ ಹೋಗಿತ್ತು. ಆ ರೆಂಬೆಯನ್ನು ಮುರಿದುಕೊಂಡು ಅದರ ತುದಿಯನ್ನು ಮುರಿದು ಒಂದು ಸಾಧಾರಣ ಎಮರ್ಜೆನ್ಸಿ ಕೋಲನ್ನಾಗಿ ಮಾಡಿಕೊಂಡೆ. ಅದನ್ನು ಹಿಡಿದು ಅಭದ್ರತೆಯ ನಡುವೆಯೂ ದೈರ್ಯದಿಂದ ನಮ್ಮ ಗಮ್ಯದ ಕಡೆ ಸಾಗಿದೆವು..*

*ಹಾದಿಯಲ್ಲಿ ಎರಡು ದೊಡ್ಡ ಬಂಡೆಗಲ್ಲುಗಳು.. ಅವು ಆಳದ ಭೂಮಿಯಿಂದಲೇ ಹುಟ್ಟಿ ಬಂದಿವೆಯೇನೋ ಎಂಬಂತೆ ಬಂಡೆ ಗಲ್ಲುಗಳು ಲಂಬವಾಗಿ ಇದ್ದವು.ಮದ್ಯಕ್ಕೆ ಎರಡ್ಮೂರು ಅಡಿ ಅಗಲದ ಇಪ್ಪತ್ತು -ಮೂವತ್ತು  ಅಡಿ ಆಳದ  ಬಾವಿಯಂತಹ ಪ್ರಪಾತ.  ಸೂರ್ಯನ ಬಿಸಿಲು ನೆತ್ತಿಯಮೇಲೆ ಹೆಚ್ಚು ಪ್ರಖರವಾಗಿದ್ದರಿಂದ  ಆ ಬಂಡೆಯ ನಡುವಿನ ಪ್ರಪಾತದ ತಳ ಸ್ಪಷ್ಟವಾಗಿ ಕಾಣಿಸುತ್ತಿತ್ತು. ನಮಗೆ ಅದನ್ನು ದಾಟಿಯೇ ಮುಂದೆ ಹೋಗಬೇಕಿತ್ತು. ಇಲ್ಲ ಬಹಳ ದೂರ ಕ್ರಾಸ್ ಮಾಡಿ ಬರಬೇಕಿತ್ತು.ದಾರಿ ಇದೆಯೋ ಇಲ್ಲವೋ ಗೊತ್ತಿಲ್ಲ.ಪ್ರಯತ್ನ ಮಾಡಬೇಕಾಗಿತ್ತು. ಅದಕ್ಕೆ ನಾನು ಜಂಪ್ ಮಾಡಿ ಆಚೆ ಹೋದೆ.ಆಚೆ ಹೋಗಿ ಏನಿದೆ ಎಂದು ನೋಡಲು ಅದರಲ್ಲಿ ಯಾವುದೋ ಕಾಲದ ಅಸ್ತಿಗಳು ಕಂಡಂತೆ ಆಯಿತು ..ಮೊದಲಿಗೆ ಬಂದಗಳ್ಳಿಯ ಒಣಗಿದ ಕೊನೆಗಳು ಎಂದೇನಿಸಿತು. ಯಾಕೋ ಸಂಶಯ ಬಂದು ನೋಡಿದರೆ ಅವು ನಿಜವಾಗಲೂ ಮೂಳೆಗಳೇ..!ಒಂದೆರಡು ಅಲ್ಲ ಸುಮಾರು  ಮೂಳೆಗಳು.ತಲೆಬುರುಡೆ ಪಕ್ಕೆಲುಬು ಹಾಗೆ.. ಮಾನವನ ಮೂಳೆಗಳ ರಾಶಿ ಕಂಡವು. ತಿಮ್ಮಣ್ಣ ಮನುಷ್ಯನ ಎಲುಬುಗಳು ಇವೆಯೆಂದು ನಾನು ತಿಮ್ಮಣ್ಣನಿಗೆ ಹೇಳಿದೆ.  ಕರಡಿಯ ಮಲವನ್ನು ನೋಡಿ ಹೆದರಿದ್ದ ನಾವು  ಆ ಮಾನವರ ಮೂಳೆಗಳನ್ನು ನೋಡಿ ಅಕ್ಷರಶ: ಒಂದು ಕ್ಷಣ ನಡುಗಿ ಹೋದೆವು.   ನನಗೂ ಕೈ ಕಾಲು ನಡುಗುತ್ತಿವೆ.ಬಿಸಿಲಿಗೋ ಭಯಕ್ಕೋ ಬೆವರು ಇಳೀತಿದೆ.  ತಿಮ್ಮಣ್ಣ ಅಲ್ಲೊಂದು ಬಂಡೆಗೆ ಕೈ ಊರಿ  ಮುಂದೆ ಬಗ್ಗುತ್ತಾ ನಿಜ ಮೂಳೆಗಳೇನಪ್ಪಾ ಇವು?? ಎಂದು  ಬಗ್ಗಿನೋಡಿದ...* *ಅಬ್ಬಬ್ಬಾ...ಹೌದಲ್ಲಪ್ಪಾ?? ಮನುಷ್ಯರ ಮೂಳೆಗಳೇ...ತಿಮ್ಮಣ್ಣ ಒಮ್ಮೆಗೆ  ನಿಟ್ಟುಸಿರು ಬಿಟ್ಟು ತಣ್ಣಗೆ ಆಗಿಬಿಟ್ಟ.  ಅದೆಲ್ಲ ನೋಡಿದ ತಿಮ್ಮಣ್ಣನಿಗೆ ಆ ಸಂದು ಹಾರಲು ದೈರ್ಯ ಸಾಕಾಗುತ್ತಿಲ್ಲ!  ನಾನು ಮಾತ್ರ ಈಗ ಆಚೆಕಡೆ ಹೋಗಿ ಆಗಿದೆ. ಅಣ್ಣಾ ಆ ಕಡೆ ಸ್ವಲ್ಪ ಕಿರಿದಾಗಿದೆ ನೋಡು ಅಲ್ಲಿಂದ ಹಾರು ಎಂದೇಳಲು ಆಕಡೆ ಈ ಕಡೆ ಓಡಾಡಿ ಕೊನೆಗೂ  ಈಚೆಗೆ ಹಾರಿದ. ನಾನು ನೋಡಿದ ಬಹು ವಿಚಿತ್ರ ಮತ್ತು ನನಗೆ ಕಾಡಿದ್ದು ಆ ಎರಡು ದೊಡ್ಡ ಬಂಡೆಗಳ ಆಳದ ಬಾವಿಯಂತಹ ಪ್ರದೇಶದಲ್ಲಿ ಆ ಮೂಳೆಗಳು ಹೇಗೆ ಬಂದವು ಅನ್ನೋ ಪ್ರಶ್ನೆ?  ಇತ್ತೀಚೆಗೆ ಯಾರಾದರೂ ಕೊಲೆ ಮಾಡಿ ಎಸೆದಿರಬಹುದಾ??? ಅಥವಾ ಅವುಗಳು ರಾಜರಕಾಲದ್ದಾಗಿರಬಹುದಾ??ಅವರ ಜೊತೆಯಲ್ಲಿ ಕೋಟೆಯಲ್ಲಿ ಇದ್ದ ರಾಜಸ್ವನೂ ಹಾಕಿದ್ದಾರಾ ಎನ್ನುವ ಕುತೂಹಲ.. ಹಾಗೆ ಹೀಗೆ ಮಾತಾಡುತ್ತಾ ಧೈರ್ಯ ಮಾಡಿ ಆ ಪ್ರಪಾತಕ್ಕೆ ಇಳಿಯೋಣ ಎನಿಸಿತು.ಒಂದುವೇಳೆ ಇಳಿದರೂ ಮೇಲೆತ್ತಿ ಬರಲು ಸಾಧ್ಯನೇ ಇರಲಿಲ್ಲ. 90 ° ನೇರವಾಗಿ ಇಳಿಯಲಾಗಲಿ, tools ಇಲ್ಲದೆ ಹತ್ತಲಿಕ್ಕಗಲೀ ಕಷ್ಟ ಸಾಧ್ಯ ಇತ್ತು.ಅಲ್ಲಿಗೆ ಆ ಮೂಳೆಗಳು ಹೇಗೆ ಬಂದವು???ಅದೊಂದು ಯಕ್ಷ ಪ್ರಶ್ನೆಯಾಗಿ  ನನ್ನಲ್ಲಿ  ಇಂದಿಗೂ ಹಾಗೆ ಉಳಿದಿದೆ .ಅಂತೂ ಇಂತೂ ಅಂದು ನನ್ನ ಬಹುದಿನದ ಕನಸು ಆಡುಮಲ್ಲೇಶ್ವರಕ್ಕೆ ಹೊಂದಿಕೊಂಡ ಏಳುಸುತ್ತಿನ ರಕ್ಷಣಾ ಗೋಡೆ ತಲುಪಿದೆವು. ಮಲೆನಾಡು ಜೋಗಿ ಮಟ್ಟಿಯ ವಿಶಾಲ ಹಸಿರು ಕಾಡು ಮಂಜು ಮಸುಕಿದಂತೆ ಕಾಣುವ ಬೆಟ್ಟಗುಡ್ಡಗಳ ಸಾಲು ನೋಡಿ ಪುಳಕಗೊಂಡೆವು.ಇತ್ತ ಈಚೆ ತಿರುಗಿದರೆ ನಾವು ಸಾಗಿ ಬಂದ ಹಾದಿ,ಸುಂದರವಾಗಿ ಕಾಣುತ್ತಿದ್ದ ಉಕ್ಕಿನ*
*ಕೋಟೆಯ ಚಿತ್ರಣವನ್ನೂ ನೋಡಿ ಖುಷಿ ಪಟ್ಟೆವು. ನಮಗೆ ಹಿಮಾಲಯ ಹತ್ತಿದಷ್ಟೇ ಖುಷಿ. ಅಬ್ಬಾ.. ನಾವೆಂದೂ ನೋಡದೇ ಇರುವ ದುರ್ಗದ ಕೋಟೆ ನೋಡಿದೆವಲ್ಲಾ ಎಂಬ ಅತೀ ಹುನ್ಮಾದ! ಖುಷಿಯಿಂದ ಹಿಂದಿರುಗಲು  ನಮ್ಮ ತಲೆಯಲ್ಲಿ ಇದ್ದದ್ದು ಒಂದೇ ವಿಷಯ ಆ ಮೂಳೆ ಹೇಗೆ ಅಲ್ಲಿಗೆ ಬಂದವು ಅಂತ.... ಅದರ ಸಾಧ್ಯ ಸಾಧ್ಯತೆಗಳ ಮಾತನಾಡುತ್ತಾ ಅಲ್ಲಿಂದ ಪೂರ್ವ ಆಗ್ನೆಯಕ್ಕೆ ರಕ್ಷಣಾ ಗೋಡೆ ಹೊಂದಿಕೊಂಡೇ ಸಾಗಿದೆವು.ಹಾಗೆ ಇಳಿದು ಹೋದರೆ ಎರಡು ವಡ್ಡು ಸಿಗುವವು. ಅವುಗಳಲ್ಲಿ ಯಾವಾಗಲೂ ನೀರು ಕೂಡ ತುಂಬಿರುತ್ತಿತ್ತು. ಅಲ್ಲಿ ಹೋಗಿ ಈಜಾಡಿ ಹೋಗುವ ಎಂದು ಮಾತಾಡಿಕೊಂಡು ಇಳಿಯಲು ಹೆಜ್ಜೆ ಹಾಕಿದೆವು.ದುರ್ಗದ ದುರ್ಗಮ ಹಾದಿ ಅದು..ಅಂದುಕೊಂಡಷ್ಟು, ಹೇಳಿದಷ್ಟು  ಸುಲಭವಂತೂ ಇರಲಿಲ್ಲ. ದಾರಿ ಆಗಿದ್ದರೆ ದಡ ದಡನೆ ಹೋಗಿಬಿಡಬಹುದಿತ್ತು.ಆದರೆ ಇಲ್ಲಿ ಪ್ರತಿ ಹೆಜ್ಜೆಯನ್ನು ಅನ್ವೇಷಣೆ ಮಾಡಿ ಇಡಬೇಕಿತ್ತು.ಎಷ್ಟೋ ಹೆಜ್ಜೆಗಳು ದಾರಿ ಇದೆಯೆಂದು ಹೋಗಿ ಹತ್ತಲೂ ಆಗದೇ, ಇತ್ತ ಇಳಿಯಲೂ ಬಾರದೇ,ದಾಟಲೂ ಆಗದೇ ಬೇರೆದಿಕ್ಕಿನಿಂದ ಹೋಗಿದ್ದು ಇದೆ. ಹೇಗ್ ಹೇಗೋ ತುಂಬಾ ಕಷ್ಟ ಪಟ್ಟು ವಡ್ಡು ತಲುಪಿದೆವು. ಆ  ದಿನದ ಸಾಧನೆ ಮತ್ತು ಶ್ರಮಕ್ಕೆ ವಡ್ಡಿನ ನೀರಲ್ಲಿ ಈಜಾಡಿದೆವು. ಗುಡ್ಡ ಹತ್ತಿಯೇ ನಮ್ಮ ಮುದ್ದೆ ಶಕ್ತಿ ಯಾವಾಗಲೋ ಖಾಲಿ ಆಗಿತ್ತು. ಹೆಚ್ಚು ಸಮಯ ಈಜಾಡುವ ಶಕ್ತಿ, ತಾಳ್ಮೆ ನಮ್ಮಿಬ್ಬರಿಗೂ ಇರಲಿಲ್ಲ. ತುಂಬಾ ಹೊಟ್ಟೆ ಹಸಿವಾಗಿತ್ತು  ಹಾಗೆ ಹಾಸ್ಟೆಲ್ ಗೆ ಬಂದು ಊಟಕ್ಕೆ ಕಾದು ಕುಳಿತೆವು ..*

*ಇದಾದ ಒಂದು ವಾರದ ನಂತರ ಹೀಗೆ ಕಾಲೇಜು ಬಿಟ್ಟು ಕೋಟೆಯತ್ತಲು ಹೋದಾಗ  ಕೋಟೆಯ ಏಕನಾಥೇಶ್ವರಿ ದೇವಾಸ್ಥಾನದ ಮುಂಭಾಗ ಅರವತ್ತು ಅರವತ್ತೈದು  ವರ್ಷದ ವ್ಯಕ್ತಿಯೋರ್ವ ಒಂದು ಅಡಿ ಎತ್ತರ ಉದ್ದ ಅಗಲದ ಏನೋ ಒಂದು ಬಿಳಿಯ ವಸ್ತು ಇಟ್ಟುಕೊಂಡಿದ್ದ. ಅದರ ಮಗ್ಗಲಿನಲ್ಲಿ ಒಂದು ಸಣ್ಣ ಮಚ್ಚು ಕೂಡ ಇತ್ತು.ನಾನು ಅದು ವಿಭೂತಿ ಎಂದು ಬಾವಿಸಿದೆ. ಆದರೂ ಅದು ವಿಭೂತಿ ಅಲ್ಲ ಎಂದೆನಿಸಿ ಅವರ ಬಳಿ ಹೋಗಿ*

 *ಏನು ಯಜಮಾನ್ರೆ ಇದು??*

 *"ಇದು ಹಿಡಿಂಬಾ  ರಾಕ್ಷಸನ ದವಡೆಹಲ್ಲು"*

 ನನಗೆ ಎಲ್ಲಿಲ್ಲದ ಕುತುಹಲ.. 

*ಏ...ಇಲ್ಲಬಿಡ್ರಿ ಯಜಮಾನ್ರೆ ಇದು ರಾಕ್ಷಸನ ಹಲ್ಲು ಅಲ್ಲ..*

 *ಅದಕ್ಕವರು ಆವೇಶಗೊಂಡು "ಏ ತಮ್ಮ ದೇವರ ಸಾಕ್ಷಿ ಇದು ರಾಕ್ಷಸನ ಹಲ್ಲು ಕಣಪ್ಪ.ಬೇಕಾದರೆ ನೋಡು...ಎಂದು  ಎತ್ತಿ ನನ್ನ ಕೈಗೆ ಇಟ್ಟರು..ಎರಡು ಕೆಜಿ ಬಾರ ಇರಬಹುದು.  ಎತ್ತಿ ಹಿಂದೆ  ಮುಂದೆ ಮೇಲೆ ಕೆಳಗೆ ನೋಡುತ್ತಾ  ಹೌದು ಅದು ಹಲ್ಲು ಎನಿಸಿತು.  ನಮಗೆ ಹಾಲು ಹಲ್ಲು ಉದುರಿದಾಗ ಕೈಯಲ್ಲಿ ಹಿಡಿದು ವಾಸನೆಯ ನೋಡಿ ಹಾಗೆ ಹೀಗೆ ಮಾಡಿ ಸಗಣಿಯಲ್ಲಿ ಮುಚ್ಚಿ ಮನೆಯ ಮೇಲೆ ಎಸೆಯುತ್ತಿದ್ದೆವಲ್ಲ ?ಹಾಗೆ ಇದೆ.! ಅದ್ರೆ ಗಾತ್ರ ಮತ್ತು ಬಾರ ಬೇರೆ ಯಾಗಿತ್ತು..ನಾನು ಅದನ್ನು ಎತ್ತಿಕೊಂಡು ಸುತ್ತಲೂ ತಿರುಗಿಸಿ ನೋಡಿದ್ದೆ.ಅದು ಎಷ್ಟು ವರ್ಷದ್ದೊ ಗೊತ್ತಿಲ್ಲ.ತುಕ್ಕು ಹಿಡಿದ ಕಬ್ಬಿಣ ವಸ್ತುಗಳು ಕಬ್ಬಿಣದ ವಾಸನೆ ಬರುವಂತೆ ಹಳೆಯ ಚರ್ಮದ ವಸ್ತುಗಳು ಒಂಥರಾ ಗದಡು ವಾಸನೆ ಬರುವುದಲ್ಲಾ?? ಆಗಲೂ ಆ ಹಲ್ಲು  ಆ ತರ ಮಾಂಸ ಜನ್ಯ ವಾಸನೆಯ ಹೊಂದಿತ್ತು. ರಕ್ತ ಮಾಂಸದ ವಾಸನೆಯ ಸೊಗಡು ಇತ್ತು. ಕೆಲವೇ ದಿನಗಳ ಹಿಂದೆ ಹಿಡಿಂಬವನದಲ್ಲಿ ಓಡಾಡಿ ಭೀಮ ನಿಜವಾಗಲೂ ಕಲ್ಲುಗಳನ್ನ ಎತ್ತಿದ್ದಾರೆಯೇ ಎಂದು ಚರ್ಚೆ ನಡೆಸಿ ಕಲ್ಲು ಗುಂಡುಗಳನೆತ್ತಲು ಸಾಧ್ಯವೇ ಇಲ್ಲ ಇದು ಕೇವಲ ಕಾಲ್ಪನಿಕ... ರವೆಯಷ್ಟು ನೆಡೆದ ಕಥನವನ್ನು ಬೆಟ್ಟದಂತೆ ಬಣ್ಣಿಸಿದ್ದರ ಪರಿಣಾಮವೇ ಈ ಭೀಮ ಹಿಡಿಂಬ ಯುದ್ಧ ಎಂದು ನಾನು ಉಪಸಂಹಾರ ಕಂದುಕೊಂಡಿದ್ದೆ.ಅದರ ಮಧ್ಯೆ ಈ ಬೃಹತ್ ರಾಕ್ಷಸ ಹಲ್ಲು ಸಿಕ್ಕಿದ್ದು ನಮಗೆ ಭೀಮ ಮತ್ತು ಆ ರಾಕ್ಷಸ ನಿಜವಾಗಲೂ ಇದ್ರಾ?? ಇಲ್ಲವೋ ಎಂದು ನಂಬಬೇಕೊ ಬಿಡಬೇಕು  ಗೊತ್ತೇ ಆಗ್ಲಿಲ್ಲ.ಈ ಘಟನೆ ನೂರಕ್ಕೆ ನೂರು ಸತ್ಯ. ಈ ರಾಕ್ಷಸ ಹಲ್ಲನ್ನು  ಅವರಿಗೆ ಅವರ ಪೂರ್ವಜರು ಕೊಟ್ಟಿದ್ದರಂತೆ.ಆದರೆ ಅಂದು ನಾನು ಅವರು ಯಾರು ಏನು  ಅಂತ  ಕೇಳಲಿಲ್ಲ. ನೀವು ಎಲ್ಲಿಯವರು ಎಂಬ ಪ್ರಶ್ನೆಗೆ ಕೋಟೆಯ ಮುಂಭಾಗ ಇರುವ ಕಾಮನ ಬಾವಿ ಬಡಾವಣೆಯವರು ಅಂತ ಮಾತ್ರ ಹೇಳಿದ್ದರು.ಈಗ ಆ ರಾಕ್ಷಸ ಹಲ್ಲು ಯಾರ ಬಳಿ ಇದೆಯೋ ತಿಳಿಯದು . ಇದರ ಹಿನ್ನೆಲೆ ಗೊತ್ತಿಲ್ಲದೇ ಎಲ್ಲಿಯೋ ಎಸೆದಿರಬಹುದು . ಅಂದೇ ಸ್ವಲ್ಪ ಜಾಗ್ರತೆ ವಹಿಸಿದಿದ್ರೆ ಅದನ್ನು ವಸ್ತು ಸಂಗ್ರಹಾಲಯಕ್ಕೊ ಅಥವಾ ಅಧ್ಯಯನಕ್ಕೋ ಒಳಪಡಿಸಬಹುದಾಗಿತ್ತು..


ಬರಹ -ಧ್ವನಿ -ತಾಂತ್ರಿಕತೆ 
✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..