ಕೊನೋಕಾರ್ಪಸ್...

*ಕೋನೋಕಾರ್ಪಸ್...*

ಅದು ತೊಂಭತ್ತರ ದಶಕ... ಚಳಿಗಾಲದ ಆರಂಭಕ್ಕೆ ಮಳೆಗಾಲದಲ್ಲಿ ಹಸಿರಾಗಿ ಸೊಂಪಾಗಿ ಬೆಳೆದಿದ್ದ ಹುಲ್ಲು ಬೀಜವಾಗಿ ಒಣಗುತ್ತಿದ್ದ ಕಾಲ.. ಆಗ ನಮ್ಮದು ಪ್ರತಿದಿನ ಒಂದು ಪುಟ್ಟಿ (ಹೆಡಿಗೆ) ಸಗಣಿ ತಂದು ತಿಪ್ಪೆಗೆ ಹಾಕುವುದು.ಇದೇ ದಿನಚರಿ ಆದುದರಿಂದ  ನಮ್ಮ ಮನೆಯ ಸುತ್ತಲೂ ಕಿಲೋಮೀಟರ್ ಗಟ್ಟಲೆ ಹುಡುಕಾಡಿ ಒಣಗಿದ ಪಿಜ್ಜಾ ತರಹದ ವಿವಿಧ ಅಗಲದ, ವಿವಿಧ ಗಾತ್ರದ ಸಗಣಿ ತೊಪ್ಪೆಗಳನ್ನು ನೀಟಾಗಿ ಜೋಡಿಸಿಕೊಂಡು ಬರುತ್ತಿದ್ದೆವು.ಅಲ್ಲಲ್ಲಿ ಎರಡು ಮೂರು ಕಡೆ ಸುರಿದುಕೊಂಡು ಒಂದು ಹೆಡಿಗೆ ಪೂರಾ ಭರ್ತಿ ಆಗಬಹುದಿದ್ದರೆ ಬೇರೆಬೇರೆ ಕಡೆ ಸುರಿದ ತೊಪ್ಪೆಗಳನ್ನು  ಒಂದುಕಡೆ ತಂದು ಪುಡಿಯಾದುದನೆಲ್ಲಾ ಹೆಡಿಗೆಯ ತಳಕ್ಕೆ ತುಂಬಿ ಅಗಲವಾದ ತೊ ಪ್ಪೆಗಳನ್ನೆಲ್ಲಾ ಹೂವಿನ ಧಳಗಳಂತೆ ಒಪ್ಪವಾಗಿ ಪೋಣಿಸಿ ಎತ್ತಿಕೊಂಡು ಬಂದು ತಿಪ್ಪೆಗೆ ಹಾಕುವ ಹೊತ್ತಿಗೆ ಮನೆಯಲ್ಲಿ ಸಿದ್ದವಾಗಿರುತಿದ್ದ ಬೆಳಗಿನ ಬಿಸಿ ಬಿಸಿ ಮುದ್ದೆ ಉಂಡು ಶಾಲೆಗೆ ಹೋಗಬೇಕಿತ್ತು.ಡಿಸೆಂಬರ್ ತಿಂಗಳಿನಿಂದ ಮುಂಗಾರು ಮಳೆ ಆಗಮನದವರೆಗೂ ನಾವು ದಿನಕ್ಕೆ ಒಂದು ಬಾರಿಯಾದರೂ ಸಗಣಿ ತರಲು ಹೋಗಲೇಬೇಕಿತ್ತು. ಪರಿಸ್ಥಿತಿ ಹೀಗೆ ಇದ್ದಾಗ ಡಿಸೆಂಬರ್ ತಿಂಗಳ ಮಾಗಿಯ ಚಳಿ ಗಡ ಗಡ ನಡುಗಿಸುವಂತಿತ್ತು.ಕಾಫಿ ಟೀ ಸ್ವೇಟರ್ ಮಂಕಿ ಟೋಪಿ   ಕಾಣದ ನಮ್ಮ ಸಣಕಾಲು ದೇಹವನ್ನು ತೀರಾ ಅಲ್ಲಾಡಿಸಿ ಬಿಡುತಿತ್ತು. ತಲೆಗೆ ಟವೆಲ್ ಸುತ್ತಿಕೊಂಡು ತಲೆಯ ಮೇಲೆ ಹೆಡಿಗೆ ಬೋರಲು ಹಾಕಿಕೊಂಡು ಕೈ ಕಟ್ಟಿಕೊಂಡೊ /ಜೇಬಲ್ಲಿ ಇಟ್ಟುಕೊಂಡು ಹೋಗುತ್ತಿದ್ದೆವು.ಆ  ಚಳಿಗೆ ಮಡಚಿದ ಬೆರಳುಗಳು ಹಾಗೆಯೇ ಮರಗಟ್ಟಿ ಹೋಗಿರುತ್ತಿದ್ದವು. ಒಂದು ವೇಳೆ ಹೆಡಿಗೆ ಹಿಡ್ಕೊಂಡಿದ್ರೆ  ಹಿಡಿದುಕೊಂಡ ರೀತಿಯಲ್ಲೇ ಕೈ ಬೆರಳುಗಳು ಸೆಟೆದು ಹೋಗಿರುತ್ತಿದ್ದವು!.ಆ ಚಳಿಗೆ ತತ್ತರಿಸಿದ ನಾವು ಸೂರ್ಯನ ಬಿಸಿಲು ಬರುವವರೆಗೂ  ಎಲ್ಲಿಯಾದ್ರೂ ಬೆಂಕಿಯ ಹಾಕಿ ಬೆಂಕಿಯನ್ನು ಕಾಯಿಸುತ್ತಿದ್ದೆವು . ಆಮೇಲೆ ಸಗಣಿಯ ಹುಡುಕಲು ಹೋಗುತಿದ್ದೆವು . ನಮ್ಮ ಚಳಿಗೆ ಬೆಂಕಿ ಹಾಕಲು ಒಣಗಿದ ಸೌದೆ ಬೇಕಲ್ಲ?? ಒಂದೆರಡು ವಾರಗಳು ಅಲ್ಲಿ ಇಲ್ಲಿ ಇದ್ದ ಕಡ್ಡಿ ಪುಳ್ಳೆ ಎಲ್ಲವೂ ಖಾಲಿ ಆಗುತಿದ್ದವು .ಆಮೇಲೆ ನಾವು ತೆರಳಿದ್ದು ಸೌದೆ ಇರುವ ಕಡೆ... ನಮಗೇನು??ಬೆಂಕಿ ಹಚ್ಚಲು ಒಂದಷ್ಟು ಉರುವಲು ಬೇಕಿತ್ತು ಅಷ್ಟೇ . ಹೀಗೆ ಉರುವಲು ಸಗಣಿ ಹುಡುಕುತ್ತಾ  ನಮ್ಮ ಪಯಣ ಸಾಗಿದ್ದು ಮನ್ನೆಕೋಟೆ ಅಡವಿಗೆ ಹೊಂದಿಕೊಂಡ 'ನೀಲಗಿರಿ ತೋಪಿ'ನ ಕಡೆ.ಆ ಕಾಲಕ್ಕಾಗಲೇ ಆ ಗಿಡಗಳನ್ನು ನೆಟ್ಟು ಸುಮಾರು 20 ವರ್ಷಗಳು ಆಗಿದ್ದವು.
 ಕುರಿ ಮೇಕೆಗಳು ತಿನ್ನದ ನೀಲಗಿರಿಯ ಎಲೆಗಳು ರಾಶಿ ರಾಶಿ ಬಿದ್ದಿದ್ದವು. ಬಾಳೆದಿಂಡಿನ ಹೊಳಪಿನ ನೀಲಗಿರಿ ಕಾಂಡಗಳ ಮೇಲಿನ ಚಕ್ಕೆಗಳು ತೆಳ್ಳನೇ ಪೆಳಕೆಗಳಾಗಿ ಉದುರಿದ್ದು ಬೆಂಕಿ ಹಚ್ಚಲು ಬಹು ಸುಲಭವಾಗಿರುತ್ತಿ ದ್ದವು.ಸುತ್ತಲೂ ಗುಚ್ಚು ಗುಚ್ಚು ಬುಗುರಿಯ ಕಾಯಿಗಳು ಬಿದ್ದಿರುತ್ತಿದ್ದವು.  ಎಲೆಗಳು ಅಷ್ಟೇ.. ತರಗೆಲೆಯ ರಾಶಿ. ಕಾಲಿಟ್ಟರೆ ಕರಕರ ಮುರಿದು ಹೋಗುತ್ತಿದ್ದ,  ಎಷ್ಟು ಎಲೆಗಳಾಗಿದ್ದರೂ ಕ್ಷಣಾರ್ಧದಲ್ಲಿ ಸಳ ಸಳನೆ ಉರಿದು ಬೂದಿಯಾಗಿ ಬಿಡುತ್ತಿತ್ತು.ಉರಿಯುವಾಗ ಚಟ ಪಟ ಎಂದು ಶಬ್ದವೂ ಬರುತಿತ್ತು.ನೀಲಗಿರಿ ಎಲೆ, ಕಾಯಿ ಉರಿಸಿದಾಗ ಬರುವಂತಹ ಹೊಗೆಯ ವಾಸನೆ ವಿಶೇಷವಾದದ್ದು. ತಲೆನೋವಿನ ಎಣ್ಣೆ  (zandu balm )ಯನ್ನು ನೀಲಗಿರಿ ಎಲೆಯಿಂದ  ತಯಾರು ಮಾಡುತ್ತಾರೆಂದು ಯಾರೋ ಹಿರಿಯರು ಹೇಳಿದ್ದರು. ಸುಟ್ಟಾಗ ಬರುವ ನೀಲಗಿರಿ ಎಲೆಯ ವಾಸನೆಯಲ್ಲೂ ಒಂದು ರೀತಿಯ ಕಿಕ್ ಇರುತಿತ್ತು.ಬೆಂಕಿ ಕಾಯಿಸುತಿದ್ದ ಸ್ಥಳದಿಂದ  ಎದ್ದು ಬರುವವರೆಗೂ ಆ ಕಾಲಕ್ಕೆ ನಮಗಿದ್ದ ಅದರ ಬಗ್ಗೆ ಅರಿವು ಎಂದರೆ ಅದೊಂದು ಬಹು ಬೆಲೆಬಾಳುವ ಮರವೆಂದೂ,ಅದನ್ನ ಮಾರಿದರೆ ಸಾವಿರಾರು ರೂಪಾಯಿಗಳು ಬರುತ್ತದೆ ಎಂಬುದು ನಮಗೆ ಇದ್ದ ನಂಬಿಕೆ.ಹಾಗೆ  ನಾವು ಒಕ್ಕಲು ಬದುಕಿನ ಕುಂಟೆ ಕೂರಿಗೆಗಳ ಈಸುಗಳಿಗೆ,ಚಪ್ಪರ ಹಾಕಲು ಗಳಗಳಿಗೆ,ಇತರೆ ಬಳಕೆಗೆ  ತೆಳ್ಳಗಿನ ಸಪಾಳವಾದವುಗಳನ್ನು ಆಗಾಗ ಕದ್ದು ಕಡಿಯುತ್ತಿದ್ದಿದ್ದೂ ಉಂಟು. ನಂತರ ನೀಲಗಿರಿ ಮರಗಳು ನನಗೆ ಹೆಚ್ಚು ಕಂಡಿದ್ದು ಸಾವಿರಾರು ಹೆಕ್ಟರ್ ಗಳು ಬೆಳೆಸಿದ್ದ  ಈಗಿನ ಚಳ್ಳಕೆರೆಯ  DRDO ಇರುವಂತಹ 'ಕುದಾಪುರ ಕಾವಲ್'ನಲ್ಲಿ. ಆಮೇಲೆ ನನ್ನ ನೀಲಗಿರಿಯ ದರ್ಶನ ಆಗಿದ್ದು ಶಾಲಾ ಪ್ರವಾಸ ಹೋದಾಗ ಪಶ್ಚಿಮ ಘಟ್ಟಗಳ ಅರಣ್ಯಗಳಲ್ಲಿ. ನಾನು ಅದುವರೆಗೂ ನೋಡಿದ್ದ ನೀಲಗಿರಿ ಮರಗಳ ಪೈಕಿ ಸುಮಾರು 5-10 ಪಟ್ಟು ಹೆಚ್ಚು ಎತ್ತರವಾದ ಅದುವರೆಗೂ ನೋಡಿರದ  ಬೃಹತ್ ಮರಗಳನ್ನ ಪಶ್ಚಿಮ ಘಟ್ಟದ ಅರಣ್ಯಗಳಲ್ಲಿ ನಾನು ಕಂಡೆನು. ಆಗ ನನಗನಿಸಿದ್ದು   ಈ ಮರಗಳು ಸರ್ಕಾರದಿಂದಲೇ ಸಂರಕ್ಷಿಸಲ್ಪಟ್ಟಿದ್ದು ಈ ಮರಗಳಿಗೆ ಕಾನೂನಿನ ಒಪ್ಪಿಗೆ, ಅತ್ಯುತ್ತಮ ಮೌಲ್ಯ, ಹಾಗೂ ಇದರ ಸಾರ್ವತ್ರಿಕ ಬಳಕೆಯ ಬಗ್ಗೆ ನನಗೆ ನಂಬಿಕೆ ಮತ್ತು ವಿಶ್ವಾಸ ಬಂದಿತ್ತು . ಅಲ್ಲಿಯವರೆಗೆ ಲಕ್ಷಾಂತರ ಹೆಕ್ಟೇರ್ ಗಳಲ್ಲಿ ಬೆಳೆದಂತಹ ನೀಲಗಿರಿ ಮರಗಳು ಕೊಟ್ಯಾoತರ ಜನರ ಅಗತ್ಯತೆಗಳನ್ನ ವಿವಿಧ ರೀತಿಯಲ್ಲಿ ಪೂರೈಸಿದ್ದವು. ನೀಲಗಿರಿ ತೋಪುಗಳನ್ನಾಗಿ ಪರಿವರ್ತಿಸಿದ್ದ ಪಟ್ಟ ಇಡುವಳಿದಾರರಿಗೆ ಅದೆಷ್ಟು ಹಣ ಇದರಿಂದ ಬಂತೊ ಗೊತ್ತಿಲ್ಲ. ಆದರೆ ವ್ಯಾಪಕವಾಗಿ ವಾಣಿಜ್ಯ ಉದ್ದೇಶಕ್ಕೆ ಈ ಮರಗಳನ್ನು ನಾನಾ ರೀತಿಯಲ್ಲಿ ಬಳಕೆ ಮಾಡುತ್ತಿದ್ದು, ರಸ್ತೆಯಲ್ಲಿ ಲಾರಿ ಟ್ರಕ್, ಟ್ರಾಕ್ಟರ್ ಮೇಲೆ ಇವುಗಳ ಸಾಗಾಟ ನೋಡಿ ನನಗೆ ಅನ್ನಿಸಿತ್ತು. ಈಗಲೂ ನಾವು ಇಂತಹ ನೀಲಗಿರಿ ಮರಗಳನ್ನು,ತೋಪುಗಳನ್ನ ಮಲೆನಾಡು ಅರೇಮಲೆನಾಡು ಪ್ರದೇಶದಲ್ಲಿ ನಾವು ಕಾಣಬಹುದು.  ನೀಲಗಿರಿ ಮರಗಳ ಬಗ್ಗೆ ನನಗೆ ಇದ್ದ ಆಸಕ್ತಿಯಿಂದ ಆರು ಏಳನೇ ತರಗತಿಯಲ್ಲಿ  ಎಲ್ಲಿಂದಲೋ ಒಂದು ನೀಲಗಿರಿ ಸಸ್ಯವನ್ನು ತಂದು ನಮ್ಮ ಹೊಲದಲ್ಲಿ ಹಾಕಿದ್ದೆ. ಕೆಲವೇ ವರ್ಷಗಳಲ್ಲಿ ತುಂಬಾ ಚೆನ್ನಾಗಿ ಬೆಳೆದಿತ್ತು. ಆದರೆ ದುರಾದೃಷ್ಟದಂತೆ ಆ ನೀಲಗಿರಿ ಮರದ ಸುತ್ತಲೂ ಸಗಣಿ ಗೊಬ್ಬರದ ತಿಪ್ಪೆಯನ್ನು ಹಾಕಿದ್ದರಿಂದ ಗೊಬ್ಬರದ ಶಾಖಕ್ಕೆ ಆ ನೀಲಗಿರಿ ಮರ ಒಣಗಿ ಹೋಗಿತ್ತು. ಮತ್ತಷ್ಟು ಸಸಿಗಳನ್ನು ತಂದು ಹಾಕಬೇಕು ಎಂದು ಯೋಚಿಸಿ ಒಮ್ಮೆ ತಳುಕಿನ ನರ್ಸರಿ ಗೆ ಹೋಗಿದ್ದಾಗ ನನಗೆ ಗೊತ್ತಾಗಿದ್ದು ಅವುಗಳ ಸಸಿಗಳು ಈಗ ಲಭ್ಯವಿಲ್ಲ ಎಂದು!.ಆಗಲೇ ನೀಲಗಿರಿ ಮರಗಳು ಅಪಾಯಕಾರಿ ಎಂದೂ, ಅವುಗಳು ಇತರ ಸಸ್ಯ ಜೀವ ವ್ಯವಸ್ಥೆ ಗೆ ಧಕ್ಕೆ ತರುತ್ತವೆ, ಅವುಗಳನ್ನ ಬೆಳೆಸಬಾರದೆಂದು, ಅವುಗಳಿಂದ ಅಂತರ್ಜಲ ನಾಶವಾಗುವುದಂತೆ ಅಂತ...!! ಇದರ ಬಗ್ಗೆ ಸಸ್ಯ ತಜ್ಞರು ಮತ್ತು ಪರಿಸರ-ವಾದಿಗಳ ಸಂಶೋಧನಾ ಹೇಳಿಕೆಗಳು ಅದರ ಗಂಭೀರತೆಯನ್ನು ತಿಳಿಸಿಯಾಗಿದೆ. ಇದೆಲ್ಲಾದೂ ತಿಳಿದಮೇಲೆ ನೀಲಗಿರಿ ಮರಗಳನ್ನು ನೋಡಿ ಹೆಮ್ಮೆ ಪಡುತ್ತಿದ್ದ ನನಗೆ ಅತೀವ ನೋವು ಕಾಡಿತ್ತು. ಹಾಗಾದ್ರೆ ಇಂತಹ ಮರಗಳನ್ನ ಇದುವರೆಗೆ ವಿಶ್ವದಾದ್ಯಂತ ಬೆಳೆಸಿದ್ದಾದರೂ ಏಕೆ?? ಅದನ್ನ ಬೆಳೆಸಿ ಎಂದು ಸ್ವತಃ ಸರ್ಕಾರಗಳೇ ಒಪ್ಪಿಕೊಂಡು ಅರಣ್ಯ ಇಲಾಖೆಯಲ್ಲಿ ಸಸಿ ನೆಟ್ಟು ಪೋಷಿಸಿ ದೇಶದೇಲ್ಲೆಡೆ ಕಾಪಾಡಿದ್ದಾದರೂ ಏಕೆ ಎಂಬುದು ?? ಈಗ ಯಾರೋ ವಿಜ್ಞಾನಿಗಳು/ಸಂಶೋಧಕರು ಹೇಳುತ್ತಿದ್ದಾರೆ ಎಂದರೆ ಅವರ ಮಾತನ್ನು ಒಪ್ಪಿಕೊಳ್ಳೋಣ.ಆದರೆ ವ್ಯಾಪಕವಾದ ರಾಕ್ಷಸ ರೀತಿಯಾಗಿ ಬಳಕೆಯಾದ ನಂತರವಾದರೂ ಸತ್ಯ ತಿಳಿದಿದೆಯಲ್ಲ ಎಂದು ಸಮಾಧಾನಿಸಿಕೊಂಡರೆ  ಇಷ್ಟು ವರ್ಷಗಳ ಅದರಿಂದ ಆದ ಪರಿಣಾಮ??ಇತ್ತೀಚೆಗೆ ಇಂಥದ್ದೆ ಮತ್ತೊಂದು  ಗಿಡ ಮರ ಅಪಾಯಕಾರಿ ಎಂದು ಗುರುತಿಸಿ ದೇಶದಲ್ಲಿ ಎಲ್ಲಾ ಕಡೆ ಕಡಿಯುತ್ತಿದ್ದಾರೆ. ಅದರ ಹೆಸರೇ 'ಕೊನೂಕಾರ್ಪಸ್' ಅಂತ...ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾ ಮೂಲದ ಇದು ಭಾರತಕ್ಕೆ ಬಂದು 35 ವರ್ಷಗಳಿಗೂ ಅಧಿಕಾವಾಯಿತು. ಸದಾ ಗಾಢ ಹಸಿರಿನಿಂದ ಕೂಡಿರುವ ಇದು ಕಡಿಮೆ ಪ್ರಮಾಣದ ಇಂಗಾಲ ಹೀರುವಿಕೆ ಹೊಂದಿದೆ. ಚಳಿಗಾಲದಲ್ಲಿ ಇದರ ಪರಾಗ ಆಸ್ತಮ ಕೆಮ್ಮು ಇರುವವರಿಗೆ ಇದು ತೊಂದರೆಯನ್ನು ಮಾಡುತ್ತಿದೆ ಎಂಬ ಸಂಶಯ ಇರುವುದರಿಂದ ಸಾಮೂಹಿಕವಾಗಿ ಇದನ್ನು ನಾಶಗೊಳಿಸಲಾಗುತ್ತಿದೆ.ಎಲ್ಲಾ ಸಸ್ಯ ಗಳಂತೆ ಇದು ಆದಿಮವವೇ... ಆದರೆ ಇದು ಪರಿಸರದಲ್ಲಿ ತೋರುವ ಅರೋಗ್ಯ ತೊಂದರೆಗಳು ಮತ್ತು ಪರಿಸರ ವ್ಯವಸ್ಥೆಯಲ್ಲಿನ ಅಸಮತೋಲನದ ಕಾರಣದಿಂದ ಇದನ್ನು ನಿರ್ಬಂಧಿಸಲಾಗಿದೆ. ದೇಶದ ಅನೇಕ ರಾಜ್ಯಗಳು ಈಗಾಗಲೇ ನಿರ್ಬಂಧಿಸಿದ್ದು ಕರ್ನಾಟಕ ರಾಜ್ಯದಲ್ಲೂ ಕೂಡ ಇವುಗಳನ್ನ ಕತ್ತರಿಸಿ ಹಾಕಲು ಆದೇಶಿಸಲಾಗಿದೆ.ಸೃಷ್ಟಿಯಲ್ಲಿ  ಪ್ರತಿಯೊಂದು ಅನನ್ಯವಾಗಿದ್ದು ಮುಳ್ಳು-ಹೂವು, ಸಿಹಿ-ಕಹಿ,  ಹುಳಿ- ಒಗರು ಹೀಗೆ ನೈಸರ್ಗಿಕವಾಗಿ ಇದ್ದದ್ದೇ.. ಯಾವ ಅಂಶವು ಹೆಚ್ಚಿಲ್ಲ ಕಡಿಮೆಯೂ ಇಲ್ಲದ ಸಮತೋಲನ. ಆದರೆ ಬೇಗ ಬೆಳಿಯುವವು ಎಂಬ ಕಾರಣಕ್ಕೋ, ಅಂದ ಚೆಂದಕ್ಕೋ ಅತೀ ಮಾಡಿಕೊಂಡರೇ ಅದರ ಬೆಲೆ ನಾವು ತೆರಬೇಕಾಗುವುದು. ಬಹುಷಃ ಈ ಕೊನೊಕಾರ್ಪಸ್ ಮರ ಗಿಡಗಳ ವಿಷಯದಲ್ಲಿ ಆಗಿದ್ದು ಇದೆ ಎಂದನಿಸುತ್ತಿದೆ.ನೈಸರ್ಗಿಕವಾಗಿ ಇರುವಂತವುಗಳನ್ನು ನೈಸರ್ಗಿಕವಾಗಿ ಇರುವಂತೆಯೇ ಬಿಡಬೇಕಾಗಿತ್ತು. ಬಿಡಬೇಕು ಕೂಡ...

  ಜಾಗತಿಕವಾಗಿ ಪರಿಸರಕ್ಕೆ ಮಾರಕವಾದ  ಮರ ಗಿಡಗಳನ್ನು ಇಷ್ಟೊಂದು ಶತಮಾನಗಳ ಕಾಲ ಪೋಷಿಸಿ ಬೆಳಿಸಿದ್ದು ಯಾಕೆ?? ಅವು ಬೆಳೆಯಲು ಬಿಟ್ಟಿದಾದರೂ ಏಕೆ?? ನೂರಾರು ದೇಶಗಳು, ಸರ್ಕಾರಗಳು ಅವುಗಳನ್ನ ಬೆಳೆಸಲು ಕಾನೂನಾತ್ಮಕವಾಗಿ ಅನುಮತಿ ಕೊಟ್ಟಿದ್ದಾದರೂ ಏಕೆ ಎಂದು ತಿಳಿಯುತ್ತಿಲ್ಲ.ಇದಕ್ಕೆ ಸಂಬಂದಿಸಿದ ಗಂಭೀರ ವಿಷಯ ಏನೆಂದರೆ  ಆ ಗಿಡಗಳು  ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಉಪದ್ರವ ಕೊಡುವ ಸಸ್ಯಗಳು ಆಗಿದ್ದಲ್ಲಿ ಅವುಗಳ ಕಾರಣದಿಂದ ಜಾಗತಿಕವಾಗಿ ಬಾಧೆಗೊಳಪಟ್ಟವರು ಎಷ್ಟು ಜನ??? ಕೋನೋಕಾರ್ಪಸ್ ಗಿಡಗಳು ತಮ್ಮ ಪರಾಗವನ್ನು ಪರಿಸರದಲ್ಲಿ ಹರಡುವುದರಿಂದ ಮಾನವರು ಸೇರಿ ಇತರ ಜೀವಿಗಳಿಗೆ ತೊಂದರೆಯಾಗುತ್ತದೆ ಎಂದರೆ ಸುಮಾರು 35 ವರ್ಷಗಳಿಂದ ಕೋಟ್ಯಾಂತರ ಸಂಖ್ಯೆಯಲ್ಲಿ ಭಾರತದಲ್ಲಿರುವ ಈ ಸಸ್ಯಗಳಿಂದ  ಈಗಾಗಲೇ ಈ ಮರ ಗಿಡಗಳಿಂದ ರೋಗಗಳು ಉಲ್ಬಣಗೊಂಡು ಪ್ರಾಣತೆತ್ತವರು ಅದೆಷ್ಟು ಜನ?? ಬಂಧು-ಬಳಗವನ್ನು ಕಳೆದುಕೊಂಡು ಅನಾಥವಾಗಿರುವವರ ಕಥೆ ಏನು?? ಸಾಮಾಜಿಕ ಅರಣ್ಯಗಳಲ್ಲಿ  ಗಿಡಗಳನ್ನು ಬೆಳೆಸಲು ಮುಕ್ತ ಅವಕಾಶ ಕೊಡುವ ಮುನ್ನ ಅದರ ಬಗ್ಗೆ, ಆ ಸಸ್ಯದ ಗುಣ ಅವಗುಣಗಳ ಬಗ್ಗೆ  ಒಂದಷ್ಟು ಅಧ್ಯಯನ ಮಾಡಬೇಕಿತ್ತಲ್ಲವೇ?? ಭಾರತದಲ್ಲಿ ಕ್ಯಾಟ್ ಫಿಶ್ ಮಾರಾಟ  ಮತ್ತು ಸಾಕಾಣಿಕೆ ನಿಷೇಧಿಸಿದ್ದಾರೆ. ಕಾರಣ ಈ ಮೀನು ಇತರ ಮೀನುಗಳನ್ನು ಹಿಡಿದು ನುಂಗುವುದರಿಂದ ಜೈವಿಕ ವ್ಯವಸ್ಥೆಯಲ್ಲಿ ಇತರ ಜೀವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ  ಎಂಬ ಕಾರಣ. ಇದು ಪರಿಸರ ವ್ಯವಸ್ಥೆಯಲ್ಲಿ ಹೀಗೆ ಮುಂದುವರೆದರೆ ಅನೇಕ ಜೀವಿಗಳೇ ನಾಶ ಹೊಂದಬಹುದು ಎಂಬುದು ಬಹು ಮುಖ್ಯ ಕಾರಣ. ಹಾಗೆ ಭಾರತದಲ್ಲಿ pitbull ನಂತಹ ಇತರ ಜಾತಿಯ ನಾಯಿಗಳನ್ನು ಸಾಕುವುದು, ಮರಿ ಮಾಡಿಸುವುದು ರಫ್ತು, ಆಮದು ನಿಷೇಧಿಸಲಾಗಿದೆ. ಕಾರಣ  ಇವುಗಳ ಅಪಾಯಕಾರಿ ದಾಳಿ ಮಾಡಿ ಕಚ್ಚಿದರೆ ಮನುಷ್ಯನ ಸಾವಿಗೆ ಕಾರಣವಾಗುತ್ತದೆ.ಅಥವಾ ಕಚ್ಚಿದರೆ ಮನುಷ್ಯನಿಗೆ  ಯಾವೆಲ್ಲಾ ಪರಿಣಾಮ ಬೀರಬಹುದು ಎಂಬ ಆಧಾರದಲ್ಲಿ ಅವುಗಳನ್ನು ನಿಷೇಧಿಸಿದ್ದಾರೆ. ಕಾರಣ ಅವುಗಳಿಂದ ಇತರರ ಪ್ರಾಣಕ್ಕೆ ಬಂದು ಹೋಗಬಹುದಾದ ಅಪಾಯ. ಈ ತೆರನಾಗಿ ನಿಷೇಧಿಸುವುದಾದರೆ ಜಾಗತಿಕವಾಗಿ ಮೊದಲು ತಂಬಾಕು ಸಸ್ಯವನ್ನೇ ಹೇಳ ಹೆಸರಿಲ್ಲದಂತೆ ನಿರ್ನಾಮ ಮಾಡಬೇಕಿತ್ತು. ತಂಬಾಕು ಉತ್ಪನ್ನಗಳು ಇದುವರೆಗೂ ಅದೆಷ್ಟು ಲಕ್ಷ ಕೋಟಿ ಜನರ ಪ್ರಾಣ ತೆಗೆದಿಲ್ಲ?? ಇದರ ರಕ್ಕಸ ಪರಿಣಾಮಗಳಿಗೆ ಮಿತಿಯೇ ಇಲ್ಲ ಹೇಳುತ್ತಾ ಹೋದರೆ ಸರಪಳಿ ಹೀಗೆ ಮುಂದುವರಿಯುದಾದರೂ ಅಂತ್ಯ ಇರುವುದಿಲ್ಲ. ಈಗಲೂ ಕೂಡ ಅದೆಷ್ಟೋ ನಿಷೇಧಿತ ಔಷಧಗಳು ಕಾಳ ಸಂತೆಯಲ್ಲಿ ಮಾರಾಟ ಮಾಡ್ತಾ ಇದ್ದಾರೆ.ಇಲ್ಲಿ ನನಗೆ ಅಸಮಾಧಾನ ಇರುವುದು ಯಾವುದೇ ಸಸ್ಯ ಔಷಧ ಪ್ರಾಣಿಗಳು ವಿಶ್ವದಾದ್ಯಂತ ವ್ಯಾಪಿಸಲು ಎಲ್ಲಾ ರೀತಿಯ ಸಹಕಾರ ಮಾಡಿ ಅದು ಬೆಳೆದು ಹೆಮ್ಮರವಾದ ಮೇಲೆ ಈಗ ನಿಷೇಧದ ರಾಗ ಹಾಡುತ್ತಿರುವ ಬಗ್ಗೆ. ಇದಕ್ಕಾಗಿ ನೀರು ಹಣ ಮಾನವನ ಶ್ರಮ ಅಪಾರ ಸಂಪನ್ಮೂಲಗಳು ವೃತಾ ವ್ಯರ್ಥವಲ್ಲವೇ ?? ನಮ್ಮ ನ್ಯಾಯಾಂಗದ ಕಾನೂನಿನಲ್ಲಿ 'ಎಬಿಯಾಸ್ ಕಾರ್ಪಸ್' ಎಂಬ ಒಂದು ನಿಯಮವಿದೆ.ಅಂದರೇ 
ಯಾರನ್ನಾದರೂ ಕಾನೂನುಬಾಹಿರ ಬಂಧನವಾದರೆ,ವೈಯಕ್ತಿಕ ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆ ಮತ್ತು   ಬಂಧನದಿಂದ ಸ್ವಾತಂತ್ರ ಪಡೆಯಲು  ಭಾರತದಲ್ಲಿ ಯಾರದ್ದೇ ಬಂಧನ ಕಾನೂನುಬದ್ದವಾಗಿರದಿದ್ದಲ್ಲಿ ಅಥವಾ ನ್ಯಾಯಾಲಯದಿಂದ ಅಧಿಕೃತ ವಾಗಿರದ ಬಂಧನ ಆಗಿದ್ದರೆ ಹೆಬಿಯಾಸ್ ಕಾರ್ಪಸ್ ಮೂಲಕ  ವ್ಯಕ್ತಿಯನ್ನು ನ್ಯಾಯಾಲದ ಮುಂದೆ ಹಾಜರುಪಡಿಸುವುದಾಗಿದೆ.. ಒಂದು ವೇಳೆ ಬಂಧನ ಕಾನೂನುಬಾಹಿರ ವಾಗಿದ್ದರೆ ಬಂಧಿತವ್ಯಕ್ತಿ ಬಿಡುಗಡೆಗೆ ನ್ಯಾಯಾಲಯವು ಆದೇಶಿಸಿ ಬಂಧಿಸಿದ ವ್ಯವಸ್ಥೆಯ ವಿರುದ್ಧ ಶಿಸ್ತುಕ್ರಮ ಆಗುವುದು... ಇದಕ್ಕೆ ವಿರುದ್ಧವಾಗಿ ಕೋನ ಕಾರ್ಪಸ್ ಎಂಬ ಪದವನ್ನು ಅಥವಾ ಆ ಜಾತಿಯ ಮರಗಳನ್ನು ಸೇರಿಸಬಹುದು. ಕೋನ ಕಾರ್ಪಸ್ ವಿಷಯದಲ್ಲಿ  ಕಾನೂನಾತ್ಮಕವಾಗಿ ಬೆಳೆಯಲು ಬಳಸಲು ಹರಡಲು ಮುಕ್ತ ಅವಕಾಶ ನೀಡಿ ಈಗ ಅದನ್ನು ಕೊಲ್ಲುವುದು.! ಪ್ರತ್ಯಕ್ಷ ಸಂಗತಿ ಆದರೆ ಇದೇ ತೆರನಾದ ಪರಿಣಾಮ ಬೀರುವ ಸರ್ಕಾರಗಳ ಅಧೀನದಲ್ಲೇ ನಡೆಯುತ್ತಿರುವ ಅಥವಾ ನಡೆಯುತ್ತಿರುವ ನೂರಾರು ವಿಷಯಗಳು ಪರಿಸರ ಮತ್ತು ಜೀವ ಸಂಕುಲಕ್ಕೆ ಎಂದು ಸರಿಪಡಿಸಲಾಗದ ನಷ್ಟವನ್ನು ಉಂಟು ಮಾಡಿದ ವಿಷಯಗಳು ಸಾಕಷ್ಟು ಇವೆ. ಉದಾಹರಣೆಗೆ ಪ್ಲಾಸ್ಟಿಕ್ ಬಳಕೆ, ಮಧ್ಯಪಾನ, ಗುಟ್ಕಾ, ಇನ್ನೂ ಭ್ರಷ್ಟಾಚಾರ ಜನಪ್ರತಿನಿಧಿಗಳ ಅಧಿಕಾರಿಗಳ ನಿರ್ಲಕ್ಷ್ಯ ಮೋಸ ವಂಚನೆ ಹೀಗೆ ಅದೆಷ್ಟು ಜನರ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಿವಿಯೋ ಏನೋ.... ಈಗಲೂ ಬೀರುತ್ತಲೇ ಇವೆ... ಅಪ್ರಾಪ್ತ ಬಾಲಕರಿಗೂ ಇಂದು ಗಾಂಜಾ ಗುಟ್ಕಾ ಮದ್ಯಪಾನ ಇವೆಲ್ಲವುಗಳು ಎಗ್ಗಿಲ್ಲದೆ ಸಿಗುತ್ತಿವೆ.

 ಪ್ರಜ್ಞಾಪೂರ್ವಕ ಅಥವಾ ವಿವೇಚನಾ ನಡೆ :
 20ನೇ ಶತಮಾನದ ಮೊದಲಾರ್ಧದ ದಶಕಗಳಲ್ಲಿ ಎಲ್ಲರೂ ತೆಗೆದುಕೊಂಡು ನಿರ್ಧಾರಗಳು ಇಡೀ ಭೂಮಿಯನ್ನು ಅದೆಷ್ಟರ ಮಟ್ಟಿಗೆ ಹಾಳು ಮಾಡಬೇಕೂ ಮಾಡಿ ಮಾಡಿಯಾಯಿತು.ಸ್ವತಂತ್ರ ಪೂರ್ವ ಒಂದನೇ  ತರಗತಿಯ ಓದಿದವರ ಜ್ಞಾನ ಸಂಪತ್ತಿಗೂ ಸ್ವತಂತ್ರ ನಂತರದಲ್ಲಿ ಓದಿದ ಪದವಿ ವಿದ್ಯಾರ್ಥಿಗಳ ಜ್ಞಾನ ಸಂಪತ್ತಿಗೂ ಅಜಾಗಜಂತರ ವ್ಯತ್ಯಾಸ ಇದೆ.ಕಳೆದ   ಹಲವು ದಶಕಗಳಲ್ಲಿ ಆದ ರಾಜಕೀಯ ಪಕ್ಷಗಳ ಅಸ್ತಿತ್ವ ಮತ್ತು ಸುಧಾರಣೆಯ ನೆಪದಲ್ಲಿ ಪಠ್ಯಕ್ರಮದಲ್ಲಿ ಆದ ಬದಲಾವಣೆಗಳು ನಿರ್ಧಾರಗಳು ಸಾಕಷ್ಟು ಆಗಿವೆ. ಕೆಲವು ಯೋಜನೆಗಳು ವಿನಾಶಕಾರಿ ಸ್ವರೂಪ ಪಡೆಯುತ್ತಲಿವೆ ಎಂಬುದು ತೀರಾ ಕಳವಳಿಕಾರಿಯಾದ ಸಂಗತಿ. 
ಈಗಾಗಲೇ ಎಲ್ರಲ್ಲೂ ನೈತಿಕ ಮೌಲ್ಯಗಳು ಕುಸಿದು ಸಮಾಜ ಕಂಟಕ ಭಯೋತ್ಪಾದನೆ ಮತ್ತು ವಿದ್ವಾಂಸಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು,  ಬೆಂಬಲಿಸುತ್ತಿರುವುದು, ಬಡತನ ಅನಾರೋಗ್ಯ ಜೂಜು -ಕುಡಿತದಂತಹ  ದುಶ್ಚಟಗಳು ಇವೆಲ್ಲವೂ ಸಮಾಜಕ್ಕೆ ಅಪಾಯಕಾರಿ ಅಲ್ಲವೇ? ಇವೆಲ್ಲವುಗಳ ಸೃಷ್ಟಿಗೆ ಕಾರಣರಾಗಿರುವ ವ್ಯವಸ್ಥೆಗೆ ಏನೆನ್ನಬೇಕು??ನೀಲಗಿರಿ ಮರಗಳು, ಕೋನೋ ಕಾರ್ಪಸ್ ಮರಗಳು ಇವೆಲ್ಲವೂ ಕೂಡ ಬೆಳೆದ ಮೇಲೆ ಅಪಾಯಕಾರಿ ಎಂದು ಕಡಿದು ನಾಶ ಮಾಡಬಹುದು ಆದರೆ ಮಾನವ ಜನಾಂಗವೇ ಇವೆಲ್ಲವುಗಳಿಗಿಂತ ನೂರು ಪಟ್ಟು ಅಪಾಯಕಾರಿಯ ಹಂತ ತಲುಪಿದಾಗ ಏನು ಮಾಡುವುದು???ಇಡೀ ಮಾನವ ಜನಾಂಗವನ್ನು  ಈ ಸಸ್ಯಗಳಂತೆ  ನಾಶ ಮಾಡಲಾದೀತೆ??? ಸಾವಿರ ಬಾರಿ ಯೋಚಿಸಬೇಕಾಗಿದೆ.

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..