ಆವಿಷ್ಕಾರದ ಆಳ -ಹರಿವು..
ಬಸ್ಸ್ಟ್ಯಾಂಡ್ನಲ್ಲಿ ನ ಇಬ್ಬರು ಪುರುಷರು ನಿಂತಿದ್ದರು ... ಇಬ್ಬರಿಗೂ ಪರಸ್ಪರ ಸಂಬಂಧವೇನೂ ಇಲ್ಲ.ಒಬ್ಬ 40 ವರ್ಷದ ವಿವಾಹಿತ ಮದ್ಯ ವಯಸ್ಕ. ಮತ್ತೊಬ್ಬ 25 ವರ್ಷದ ಅವಿವಾಹಿತ ತರುಣ ... ಇಬ್ಬರ ಮುಂದೆ ಒಂದು ಸುಂದರ ಹುಡುಗಿ ಮುಂಗುರುಳ ಸರಿಸುತ್ತಾ ಹಾದುಹೋದಳು. ಇಲ್ಲಿ ಪ್ರಸಂಗ ಒಂದೇ ಆದರೂ ಈ ಇಬ್ಬರ ಯೋಚನೆಗಳು ಬೇರೆ ಬೇರೆ ಯಾಗಿದ್ದ ವು. ಅವಿವಾಹಿತ ಭವಿಷ್ಯದ ಸುಂದರ ಕನಸು ಕಂಡರೆ ವಿವಾಹಿತನಿಗೆ ತನ್ನ 'ಭೂತ' ನೆನಪಾಯಿತು.ಒಂದು ಸೆಕೆಂಡ್....ಇಲ್ಲಿ 'ಭೂತ' ಅಂದರೆ ಅವನ ಮನೆಯಲ್ಲಿ ಇರುವುದು ಅಲ್ಲ ಮಾರ್ರೆ....! Past... Past ... ಕಳೆದು ಹೋದದ್ದು...ಅವನ ಮನೆಯಲ್ಲಿರುವರು ಭೂತ ಅಂತ ನೀವು ಅರ್ಥ ಮಾಡಿಕೊಂಡರೆ ಬಾರಿ ಯಡವಟ್ಟಾದೀತು.. ಮಾರ್ರೆ...
_ಸನ್ನಿವೇಶ -1_
ಕಳೆದ 20 ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಇದ್ದರು.. ಈಗಲೂ ಇದ್ದಾರೆ...ಅವರ ಹೆಸರು ಜೇಮ್ಸ್ ಅಲಿಯಾಸ್ ರಂಗಸ್ವಾಮಿ...ಅಂತ.ಆತ ಅಂದಿಗಾಗಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿ ಸುಮಾರು ಏಳೆಂಟು ವರ್ಷಗಳ ಕಾಲ ಆಗಿತ್ತು. ಈ ಮತಾಂತರ ಆದ ಕ್ರಿಶ್ಚಿಯನ್ನರು ಕಂಡ ಕಂಡವರಲ್ಲಿ ನೀವು ಚರ್ಚ್ ಗೆ ಬನ್ನಿ, ಕ್ರಿಶ್ಚಿಯನ್ ನ ಧರ್ಮವನ್ನು ಬೆಂಬಲಿಸಿ ಅಥವಾ ಮತಾಂತರ ಆಗಿ ಎಂದು ಹೇಳುವುದು ಸಾಮಾನ್ಯ..ಅಲ್ಲಲ್ಲಿ ಈಗಾಗಲೇ ಸಾಕಷ್ಟು ಜನರನ್ನು ಮತಾಂತರ ಮಾಡಿರುವುದು ನೀವು ನೋಡಿಯೇ ಇರುತ್ತೀರಿ ಅಥವಾ ಕೇಳಿಯೂ ಇರುತ್ತೀರಿ. ಅದರಂತೆ ಅವರು ನನಗೆ ಕ್ರಿಶ್ಚಿಯನ್ ಧರ್ಮದ ಬಗ್ಗೆ ಹೇಳುತ್ತಾ ಚರ್ಚ್ ಗೆ ಬರಲು ಹೇಳುತ್ತಿದ್ದರು... ಹತ್ತಾರು ಬಾರಿ ಹೇಳಿದಮೇಲೂ ಹೋಗದಿದ್ದರೂ ಯಾವುದೇ ಬೇಜಾರಿಲ್ಲದೆ ಮತ್ತೆ ಮತ್ತೆ ಆಗಾಗ ಹೇಳುತ್ತಿದ್ದರು ... ಅದಕ್ಕೆ ಪೂರಕವಾಗಿ ಲಾಜಿಕ್ ಇರುವವೂ, ಇಲ್ಲದವೂ ಯಾವ ಯಾವೋ ಹತ್ತಾರು ಕಥೆಗಳನ್ನು ಹೇಳುತ್ತಾ ಒಟ್ಟಾರೆ 'ಮತ ಬೋಧನೆ' ಕಾರ್ಯವನ್ನ ನಿರಂತರವಾಗಿ ಮಾಡುತ್ತಿದ್ದರು. ಅದರಂತೆ ಅವರು ಹೇಳಿದ ವಿಚಾರಗಳಲ್ಲಿ ಒಂದನ್ನು ಇಲ್ಲಿ ಹೇಳಲಿಕ್ಕೆ ಇಷ್ಟಪಡುತ್ತೇನೆ. ಅದೇನೆಂದರೆ ಈ ಜಗತ್ತಿನಲ್ಲಿ ಕ್ರಿಶ್ಚಿಯನ್ನರು ಮಾತ್ರ ವಿಜ್ಞಾನಿಗಳು ಇರುವುದು... ಅವರುಗಳ ಮಾತ್ರ ಸಂಶೋಧನೆ ನಡೆಸಿ ಅನೇಕ ಹೊಸ ಯಂತ್ರಗಳು, ವಸ್ತುಗಳನ್ನು ಆವಿಷ್ಕರಿಸಿದವರು. ಅವರನ್ನು ಬಿಟ್ಟರೆ ಹಿಂದೂ, ಮುಸ್ಲಿಂ,ಬೌದ್ಧ,ಜೈನ ಯಾವುದೇ ಧರ್ಮದವರು ಯಾವ ಸಂಶೋಧನೆಗಳನ್ನು ಮಾಡಿಲ್ಲ ಬೇಕಾದರೆ ವಿಜ್ಞಾನಿಗಳ ಪಟ್ಟಿಯನ್ನು ತೆಗೆದು ನೋಡಿ.ಕಾಕತಾಳಿಯ ಎಂಬಂತೆ ಅಂದು ನಮಗೆ ಲಭ್ಯ ಇದ್ದ ವಿಜ್ಞಾನಿಗಳ ಪಟ್ಟಿ ನೋಡಿದರೂ ಅವೆಲ್ಲಾ ಹೆಸರುಗಳು ಕ್ರಿಶ್ಚಿಯನ್ನರವೇನೋ ಎನ್ನಿಸುತ್ತಿತ್ತು....ಹಾಗೆ ಈ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಇರುವವರು ಕ್ರಿಶ್ಚಿಯನ್ನರು. 'ಜೀಸಸ್' ನಿಜವಾಗಿಯೂ ಇರುವುದರಿಂದ ಅಷ್ಟೊಂದು ಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು ಇರುವುದೆಂದೂ ನಮ್ಮ ದೇಶ ಮತ್ತು ಇತರ ದೇಶದ ಎಲ್ಲಾ ಕ್ರಿಶ್ಚಿಯನೇತರ ಜನಗಳು ಮುಂದೊಂದು ದಿನ ಮತಾಂತರ ಆಗಬೇಕು;ಆಗುವವರು. ಎನ್ನುವ ನಂಬಿಕೆ ಮತ್ತು ಧೋರಣೆ ಅವರದು...
_ಸನ್ನಿವೇಶ -2_
ಐದಾರು ವರ್ಷಗಳ ಹಿಂದೆ ನಮ್ಮ ರಾಜ್ಯದ ಬಾಬಾಬುಡನ್ ಗಿರಿ ಮುಳ್ಳಯ್ಯನಗಿರಿ ಮತ್ತು ಸಂಡೂರಿನ ಕೆಲವು ಅರಣ್ಯಗಳಲ್ಲಿ 'ನೀಲ ಕುರಂಜಿ' ಹೂಗಳು ಬಿಟ್ಟಿವೆ ಎಂದೂ, ಇದು ಹತ್ತು ವರ್ಷಕ್ಕೊಮ್ಮೆ ಬಿಡುವ ಹೂವು; ಇವುಗಳು ಕಾಣಿಸುವುದು ಕೇವಲ ಪಶ್ಚಿಮ ಘಟ್ಟದ ಶೋಲಾ ಕಾಡುಗಳಲ್ಲಿ. ಪ್ರಸಿದ್ಧ ನಿಸರ್ಗಧಾಮಗಳಾದ ಊಟಿ,ಕೊಡೆಕೆನಾಲ್ ಪ್ರದೇಶದಲ್ಲಿ ಎಂಬ ಮಾಹಿತಿ.ಈ ಗಾಳಿ ಸುದ್ದಿ ಜನರಿಂದ ಜನಕ್ಕೆ, ಊರಿಂದ ಊರಿಗೆ ಹರಡಿ ಎಲ್ಲರ ಕಿವಿಗೂ ಬಿದ್ದು ದಿನಪತ್ರಿಕೆಗಳಲ್ಲೂ,ಸುದ್ದಿ ಮಾಧ್ಯಮಗಳಲ್ಲೂ ಸುದ್ದಿಯಾಗಿ ಅಲ್ಲಲ್ಲಿ ಎಲ್ಲರಿಗೂ ಮಾಹಿತಿ ತಲುಪಿದ್ದು ಸುಳ್ಳಲ್ಲ. ಈ ಸುದ್ದಿಯನ್ನೇ ನಂಬಿದ ಪ್ರವಾಸಿಗರು ಸಾಗರೋಪಾದಿಯಲ್ಲಿ ಪ್ರವಾಸಿಗರು ಹೋಗಿ ಬಂದರು. ಹಾಗೆ ಹೋಗಿ ಬಂದ ಪ್ರವಾಸಿಗರರಲ್ಲಿ ನಾನು ಹೊರತಾಗಿಲ್ಲ. ಈ ನೀಲಕುರಂಜಿ ಹೂವನ್ನು ನೋಡಲೆಂದು ಸ್ವತಹ ನಾನು ಕುಟುಂಬ ಸಮೇತ ಖುದ್ದಾಗಿ ಬಾಬಾಬುಡನ್ ಗಿರಿ ಮುಳ್ಳಯ್ಯನಗಿರಿ ಹಾಗೂ ಸಂಡೂರಿನ ಕುಮಾರಸ್ವಾಮಿ ಗುಡ್ಡ, ರಾಮಘಡ ಬೆಟ್ಟದ ತುದಿಯನ್ನು ಮುಟ್ಟಿಬಂದಿರುವೆ. ಈ ದಿನಗಳಲ್ಲಿ ನಾನು ಕೊಡೈಕೆನಾಲ್ ನ್ನೂ ನೋಡಿ ಬಂದಿದ್ದೆ.! ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಪ್ರಕೃತಿಯ ರಮ್ಯ ಸೌಂದರ್ಯವನ್ನು ಹೇಳಲು ಪದಗಳು ಸಾಲವು. ಅಸಂಖ್ಯಾ ಜಾತಿಯ ಸಸ್ಯಗಳು ಹೂ ಬಿಟ್ಟು ಪ್ರಕೃತಿಯಲ್ಲಿ ಸುಂದರವಾಗಿ ಕಾಣುತ್ತಿದ್ದವು. ನೀಲ ಕುರಂಜಿ ನೋಡಲು ಹೋದವರು ಬೇಸರ ಏನು ಪಟ್ಟುಕೊಂಡಿಲ್ಲ. ಸಾಗರದಂತೆ ಕಾಣುವ ನೀಲ್ ಕುರಂಜಿ ಹೂವನ್ನು, ಹತ್ತಾರು ಜಾತಿಯ ಇತರೆ ಹೂಗಳನ್ನು, ಗಿಡ ಮರಗಳನ್ನು ನೋಡಿ ಬಂದಿದ್ದಾರೆ. ನಾನು ಯಾವುದೇ ಸ್ಥಳಕ್ಕೆ ಭೇಟಿ ಕೊಟ್ಟಾಗ ನೋಡುವುದನ್ನೆಲ್ಲಾ ನೋಡಿ ಆದ ಮೇಲೆ ಹಾಗೆ ಕುತೂಹಲಕ್ಕೆ ಅಲ್ಲಿನ ಸ್ಥಳಿಯ ಒಂದಿಬ್ಬರನ್ನು ಭೇಟಿಯಾಗಿ ಆ ವಿಷಯ ಅಥವಾ ಸ್ಥಳದ ಬಗ್ಗೆ ಮಾತನಾಡಿಸಿಕೊಂಡು ಬರುವುದು ಅಭ್ಯಾಸ. ಅದರಂತೆ ಸಂಡೂರಿಗೆ ನೀಲ ಕುರಂಜಿ ಹೂವನ್ನು ನೋಡಲು ಹೋದಾಗ ಸ್ಥಳೀಯ ರೈತ ಮಹಿಳೆಯನ್ನು ಕಂಡು ಈ ಹೂಗಳ ಬಗ್ಗೆ ವಿಚಾರಿಸಿದಾಗ ಅವರು ಹೇಳಿದ್ದು "ಅಯ್ಯೋ ಪ್ರತಿ ವರ್ಷ ಇವು ಬಿಡ್ತಾವೆ" ನಮ್ಮ ಹೊಲ ಗದ್ದೆ ಬದುಗಳಲ್ಲೆಲ್ಲಾ ಈ ಗಿಡಗಳು ಇರುತ್ತವೆ. ಇವುಗಳನ್ನು ನಾವು ಕಿತ್ತು ಕಿತ್ತು ಹಾಕ್ತೀವಿ... ಇವು ಸೀಮೆಯಾಗಿಲ್ಲದ ಹೂವು ಎನ್ನುವ ಹಾಗೆ ನೋಡಾಕೆ ಎಲ್ಲೆಲ್ಲಿಂದಲೋ ಜನ ಬರ್ತಾ ಇದಾರೆ..." ಎಂದರು. ಅವರು ಹೇಳಿದ ಮಾತಿಗೆ ನಾವು ಆ ಹೂವುಗಳ ಬಗ್ಗೆ ತಿಳಿದುಕೊಂಡು ಹೋಗಿದ್ದದ್ದು ಅವರಿಗೆ ಹೇಳಬೇಕೆನಿಸಲಿಲ್ಲ.ಹೂವು ಹತ್ತು ವರ್ಷಗಳಿಗೊಮ್ಮೆ ಬಿಡುತ್ತದೆಯಂತೆ ಇದು ನಮ್ಮ ಊಟಿ ಕೊಡೆಕೆನಾಲ್ನಲ್ಲಿ ಇರುವವು ಇಲ್ಲೂ ಕೂಡ ಇರುವುದು ನಮ್ಮ ಹೆಮ್ಮೆ ಎಂದು ನನಗೆ ಅನಿಸಿತು. ಅದೊಂದು ಪ್ರತಿವರ್ಷವೂ ನೋಡುವ ಸಾಮಾನ್ಯ ಪಾರ್ಥೇನಿಯಂ, ಕಮ್ಯುನಿಸ್ಟ್ ಗಿಡದಂತ ಗಿಡ. ಆ ಹೆಣ್ಣು ಮಗಳಿಗೆ ಅಥವಾ ಅಂತಹ ಲಕ್ಷ ಜನಗಳಿಗೆ ಆ ಹೂವು ವಿಶೇಷವೇ ಅಲ್ಲ... ಇಲ್ಲಿ ಪ್ರವಾಸಕ್ಕೆ ಬಂದವರು ಮಾತ್ರ ನಾವು 10 ವರ್ಷಕ್ಕೆ ಒಮ್ಮೆ ಅರಳುವ ಹೂವನ್ನು ನೋಡಿದವೆಂದು ಖುಷಿ ಪಟ್ಟರೆ ಇನ್ನು ಕೆಲವರು ಮುಂದಿನ 10 ವರ್ಷಕ್ಕೆ ನಾವು ಇರುತ್ತೇವೋ ಇಲ್ಲವೋ ಎಂದು ಆಯುಷ್ಯಾತಂಕವನ್ನೂ ಪಟ್ಟರು.
ಸನ್ನಿವೇಶ -1 ರಲ್ಲಿ ತಿಳಿಸಿದಂತೆ 'ವಿಜ್ಞಾನಿಗಳೆಲ್ಲರೂ ಕ್ರಿಶ್ಚಿಯನ್ ಧರ್ಮದವರು' ಎಂದು ಮತ ಪ್ರಚಾರ ಮಾಡುತ್ತಿರುವವರ ಗಮನಕ್ಕೆ ತರುವುದೇನೆಂದರೆ ಬಹುತೇಕ ವಿಜ್ಞಾನಿಗಳು 'ನಾಸ್ತಿ ಕವಾದ'ದ ತತ್ವ- ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟಂತಹವರು.ನಾಸ್ತಿಕರು ಧರ್ಮಕ್ಕೂ ;ದೇವರಿಗೂ; ದೆವ್ವಕ್ಕೂ ಭಯ ಪಡದೇ ಇರುವುದರಿಂದಲೂ, ಪ್ರಪಂಚದ ಯಾವುದೇ ಶಕ್ತಿಯ ಮೇಲೆ ಅವರಿಗೆ ಯಾವ ತೆರನಾದ ಭಯ ಇಲ್ಲದೇ ಇರುವುದು ಧಾರ್ಮಿಕ ಸರಹದ್ದುಗಳನ್ನು ದಾಟಿ ಮಾನವನ ಅನಿವಾರ್ಯತೆಗಳ ಪರಿಹಾರಕ್ಕೆ ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಂಡು ಅನೇಕ ಆವಿಷ್ಕಾರಗಳಿಗೆ ತಳಹದಿ ಆಯಿತು.ಹಾಗೇ ನೋಡಿದರೆ ವಿಶ್ವದಾದ್ಯಂತ ಕ್ರಿಶ್ಚಿಯನ್ನರ ಜನಸಂಖ್ಯೆ 31% ಗಿಂತ ಅಧಿಕ ಇದ್ದು ಯಹೂದಿಗಳ ಜನಸಂಖ್ಯೆ 0.2 ಇರುತ್ತದೆ. ಆದರೆ ಕ್ರಿಶ್ಚಿಯನ್ನರಿಗಿಂತ ಯಹೂದಿಗಳೇ ಹೆಚ್ಚು ನೋಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಇಲ್ಲಿ ಬರಹದ ಉದ್ದೇಶ ಯಾವ ಧರ್ಮದವರು ಹೆಚ್ಚು ಸಂಶೋಧನೆ ಮಾಡಿದ್ದಾರೆ ಅಥವಾ ಹೆಚ್ಚು ನೋಬೆಲ್ ಪ್ರಶಸ್ತಿ ಪಡೆದಿದ್ದಾರೆ ಎಂಬುದಲ್ಲ. ಬದಲಾಗಿ ವೈಜ್ಞಾನಿಕ ಆವಿಷ್ಕಾರಗಳ ಸುತ್ತಲೂ ಇರುವ, ವಾಸ್ತವ ಪ್ರಪಂಚಕ್ಕೆ ಅರಿವಿರುವ ಮತ್ತು ಅರಿವಿಲ್ಲದಿರುವ ವಿಷಯಗಳ ಬಗ್ಗೆ ಒಂದು ಅವಲೋಕನ.
ಮೇಲ್ಕಾಣಿಸಿದ ಸನ್ನಿವೇಶದಲ್ಲಿ ಹೇಳಿದ ವಿಜ್ಞಾನಿಗಳ ಹೆಸರುಗಳು ವಿದೇಶಿಯರು ಮತ್ತು ಭಾಗಶಃ ಕ್ರಿಶ್ಚಿಯನ್ ಹೆಸರುಗಳು ಇರಬಹುದು ಎಂದೇನಿಸುತ್ತದೆ.ಆದರೆ ಭಾರತೀಯರು ಸೇರಿದಂತೆ ಇತರ ದೇಶದ ಸಂಶೋಧಕರು ತಮ್ಮ ಸಂಶೋಧನೆ ಅಥವಾ ವಿಚಾರಗಳನ್ನು ಜಾಗತಿಕ ವೇದಿಕೆಯ ಪಟ್ಟಿಯಲ್ಲಿ ಸೇರಿಸಲಿಲ್ಲವೇನೋ....??? ಅಥವಾ ನಮ್ಮವರ ಸಾಧನೆಗಳನ್ನು ಮೆಚ್ಚಿ ಒಪ್ಪಿ ಅದನ್ನು ಮತ್ತೊಬ್ಬರಿಗೆ ತಿಳಿಸುವ ಮಟ್ಟಕ್ಕೆ ಹೋಗಲಿಲ್ಲವೇನೋ???ಇಲ್ಲವಾದರೆ ಜಾಗತಿಕ ಮಟ್ಟದಲ್ಲಿ ಧಾರ್ಮಿಕ ಕಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದ ರಾಷ್ಟ್ರಗಳು ನಾಯಕತ್ವವನ್ನು ವಹಿಸಿ ಈ ತೆರನಾದ ಸಾಧನೆ ಅಥವಾ ಸಂಶೋಧನೆಗಳು ಅವರವರ ರಾಷ್ಟ್ರಗಳಿಗೆ ಮಾತ್ರ ಸಲ್ಲಬೇಕಾದದ್ದು. ಆ ರಾಷ್ಟ್ರದವರ ಸಾಧನೆಗಳನ್ನು ಮಾತ್ರ ಬೆಂಬಲಿಸಿ ಪ್ರೋತ್ಸಾಹಿಸುವ ಪಟ್ಟಭದ್ರ ವ್ಯವಸ್ಥೆಯನ್ನು ಬಹಳ ಹಿಂದಿನಿಂದಲೇ ಅವರು ಯೋಚಿಸಿದ್ದರು ಮತ್ತು ಅದರಂತೆ ಅದನ್ನು ಜಾಗತಿಕ ಮಟ್ಟದಲ್ಲಿ ಅವುಗಳ ವ್ಯಾಪಕ ಪ್ರಚಾರ ಸಿಗುವಂತೆ ಯಶಸ್ವಿ ಕರ್ತರೂ ಕೂಡ ಆಗಿದ್ದಾರೆ. ವಿಶ್ವಸಂಸ್ಥೆಯಂತಹ ಜಾಗತಿಕ ಮಟ್ಟದ ಸಂಸ್ಥೆಗಳನ್ನು ಬಹಳ ಹಿಂದಿನಿಂದಲೇ ಸ್ಥಾಪಿಸಿ ಅದರ ಕಾಯಂ ಸದಸ್ಯ ರಾಷ್ಟ್ರಗಳ ಸಾಧನೆಗಳನ್ನು ಮಾತ್ರ ಪ್ರಚುರ ಪಡಿಸುವಲ್ಲಿ ಯಶ ಕಂಡರು. 'ನನ್ನ ಧರ್ಮ ನನ್ನ ದೇಶ' ಎಂಬ ಅಭಿಮಾನ ಯಾವ ನರಮನುಷ್ಯನಿಗಾದರೂ ಇರಬಹುದು. ಆ ನಿಟ್ಟಿನಲ್ಲೇ ಅವರು ಅಭಿಮಾನ ಪೂರ್ವಕವಾಗಿ ಕೆಲಸವನ್ನು ಕೂಡ ಮಾಡಿರಲು ಬಹುದು. ತಮ್ಮ ಅಭಿಮಾನವನ್ನು ತಾವು ಇಟ್ಟುಕೊಳ್ಳದೆ ಅದನ್ನ ಅಂತರ್ಜಾಲದ ಮೂಲಕ ಈಗಾಗಲೇ ಅವರು ವಿಶ್ವದಾದ್ಯಂತ ಅದನ್ನ ಹರಡಿಯೂ ಆಯ್ತು. ಅದಕ್ಕೆ ಈಗ ಯಾವ ಮಾಹಿತಿಯನ್ನ ನಾವು ಗೂಗಲ್ ಅಥವಾ ಅಂತರ್ಜಾಲದಲ್ಲಿ ಜಾಲಾಡಿದರೆ ಒಂದಷ್ಟು ಮಾಹಿತಿ ತೆರೆದುಕೊಳ್ಳುವುದು ಬಹುಶಃ ಈ ತೆರನಾದ ಕೆಲಸದಿಂದಲೇ... ಈಗ ಎರಡು ದಶಕಗಳ ಹಿಂದೆ ಇಂಟರ್ನೆಟ್ ಎಂದರೆ ಅದರಲ್ಲಿ ಬಹುತೇಕ ವಿದೇಶಗಳ ಮಾಹಿತಿ ಅಡಗಿರುತ್ತಿತ್ತು.ಆದರೆ ಇತ್ತೀಚಿನ ಕಳೆದ ಎರಡು ದಶಕಗಳಿಂದ ನಮ್ಮ ದೇಶದ ಅಥವಾ ಪ್ರಾದೇಶಿಕ ಸ್ಥಳೀಯ ಮಾಹಿತಿಗಳು ಅಂತರ್ಜಾಲದಲ್ಲಿ ಲಭ್ಯವಾಗುತ್ತಿದ್ದಾವೆ ಎಂಬುದು ಸಮಾಧಾನಕರ ಸಂಗತಿ.
ಇತ್ತೀಚಿಗೆ ನಾನು ದಿನಪತ್ರಿಕೆಗಳಲ್ಲಿ ಒಂದು ವಿಷಯವನ್ನು ಓದಿದೆ.ಅದು ನನಗೆ ವಿಶೇಷವಾಗಿತ್ತು.ಕಾರಣ ಏನೆಂದರೆ ನಮ್ಮ ರಾಜ್ಯದ ತಮಿಳುನಾಡಿನ ಗಡಿನಾಡು ಚಾಮರಾಜ ನಗರ ಜಿಲ್ಲೆಯ ಕಾಡುಗಳಲ್ಲಿ ಪರವಲಂಬಿ 'ಕಡಜ' ಕೀಟವೊಂದು ಯುವ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆಯಂತೆ .. ಈ ಮೊದಲು ನಮ್ಮ ಕೋಟ್ಯಂತರ ಹಿರಿಯರು ಬಾಲ್ಯದಿಂದಲೂ ಅವ್ರು ಪಟ್ಟಹಚ್ಚಿ ತಿಳಿಸಿದ ಹುಳುವನ್ನು ಸಾವಿರಾರು ಬಾರಿ ನೋಡಿದ್ದಾರೆ .ಆದರೆ ಈಗ ಅದು ಪತ್ತೆ ಮಾಡಲಾಗಿದೆ ಎಂದು ಸುದ್ದಿ ಪತ್ರಿಕೆಗೆ ಹಾಕಿದ ಸುದ್ದಿ ಓದಿ ನನಗೆ ವಿಶೇಷ ಅನಿಸಿ ಈ ಬರಹದ ಸೃಷ್ಠಿಗೆ ಕಾರಣವಾಯಿತು.ಆದರೆ ಇದು ಗಟ್ಟಿ ಸಂಶೋಧನೆ ಎಂದು ನನಗೆ ಅನಿಸುವುದಿಲ್ಲ. ಏಕೆಂದರೆ ನಮ್ಮ ಹಳ್ಳಿ ಜನರು ಬದುಕಿನಲ್ಲಿ ನಾವು ಪ್ರತಿದಿನ ಕಂಡು ನೋಡಿದಂತಹ, ಆಡಿದಂತಹ ಕೀಟ ಇಂದು ಆಧುನಿಕ ಸಂಶೋಧನೆ ಎಂದರೆ ನಂಬಲು ಮನಸ್ಸು ಒಪ್ಪುತ್ತಿಲ್ಲ. ಕೀಟ ಪ್ರಪಂಚದಲ್ಲಿ ಸಾವಿರ ಪ್ರಭೇದಗಳಿವೆ. ಅಷ್ಟು ಸಾವಿರ ಪ್ರಭೇದಗಳಿವೆ ಇಷ್ಟು ಸಾವಿರ ಪ್ರಭೇಧಗಳಿವೆ ಎಂದು ವಿಕಿಪೀಡಿಯಾ, ಗೂಗಲ್ ನಲ್ಲಿ ಮಾಹಿತಿಯನ್ನು ಕೊಡುವಾಗ ಈಗ ಮಾಡಿರುವ ಹೊಸ ಸಂಶೋಧನೆ ಎಂದು ತಿಳಿಸುವ ಪ್ರಭೇಧವನ್ನು ಬಿಟ್ಟು ಮಾಹಿತಿಯನ್ನು ಕೊಟ್ಟಿರುತ್ತಾರಾ?? ಅಥವಾ ಹೊಸ ಅನ್ವೇಷಣೆ ಆಗಿದ್ದು ಎಂದು ಅದನ್ನು ಆ ದಾಖಲೆಗೆ ಸೇರಿಸುತ್ತಾರ?? ಹಾಗಾದರೆ ಆದಿಮ ಜೀವಿಯಾಗಿ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದು ನೂರಾರು ವರ್ಷಗಳಿಂದ ಕಣ್ಣಾರೆ ಕಂಡು ಒಡನಾಟ ಇರುವವರು ಅದನ್ನು ಈಗ ಹೊಸದೆಂದು ತಿಳಿಯಬೇಕೆ?? ಅಥವಾ ಹೊಸ ಸಂಶೋಧನೆಯನ್ನೇ ಸುಳ್ಳು ಅಥವಾ ತಪ್ಪು ಎಂದು ತಿಳಿಯಬೇಕೆ??
ನಾವು ಈಗ ಹೊಸದೊಂದು ಪ್ರಭೇದದ ಸಂಶೋಧನೆ ಎಂದು ಹೇಳುವಾಗ ಆ ಸಾವಿರ ಪಟ್ಟಿಯಲ್ಲಿ ಇದು ಸೇರಿಲ್ಲವೇ?? ಲೆಕ್ಕ ಹಾಕಿ ಹೇಳುವಾಗ ಹೊಸದಾಗಿ ಕಂಡು ಹಿಡಿದ ಕೀಟ /ಜೀವಿಯನ್ನು ಕೈ ಬಿಟ್ಟಿದ್ದಾರಾ??
ನ್ಯೂಟನ್, ಅರ್ಕಿಮಿಡೀಸ್ ಗೇಲಿಲಿಯೋ, ಕೋಪರ್ನಿಕಾಸ್ ಎಡಿಸನ್ ಮುಂತಾದವರು ನಡೆಸಿದ ಮೇರು ಸಂಶೋಧನೆಗಳನ್ನು ನಿಜವಾದ ಆವಿಷ್ಕಾರ ಎನ್ನಬಹುದು...ಆದ್ರೆ ಆವಿಷ್ಕಾರಕ್ಕೆ ಅಧಿಕೃತ ಹಕ್ಕುಸ್ವಾಮ್ಯತೆಯ ಧಾಖಲೀಕರಣ ಜಾರಿಗೆ ಬಂದ ಮೇಲೆ ನಿಜವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ನಡೆದಿರಬಹುದು .ನಮ್ಮ ದೇಶದಲ್ಲಿ ಬದುಕಿಗಾಗಿ ಹೋರಾಟ ನಡೆಸಿದವರೇ ಹೆಚ್ಚು... ಹೋರಾಟ, ಜಂಜಾಟದ ಬದುಕಿನ ಮದ್ಯೆ ಬದುಕಿನ ಅನಿವಾರ್ಯತೆಗೆ ಕಂಡುಕೊಂಡ ಸಂಶೋಧನೆಗಳನ್ನು ಆ ದಿನಗಳಲ್ಲಿ ಜಾಗತಿಕ ಮಟ್ಟಕ್ಕೆ ಮುಟ್ಟಿಸುವವರಾದರೂ ಯಾರಿದ್ದರು ??ವಿಶ್ವ ಮಾನವನಾಗಿ ಜನಿಸಿದ ಮಗುವೂ ಶತಮಾನಗಳಿಂದ ಜಾತಿ ಧರ್ಮದಿಂದಲೇ ಗುರುತಿಸುವ ನಮ್ಮವರ ಹುಟ್ಟುಗುಣ ಇದಕ್ಕೆ ಕಾರಣ ಇರಬಹುದು.ಬಹು ಮುಖ್ಯವಾಗಿ ಬಹುತೇಕರು ಮಾಡಿದ ಆವಿಷ್ಕಾರವನ್ನು ಎಲ್ಲೂ ದಾಖಲೀಕರಣ ಮಾಡಲಿಲ್ಲ. ಈ ವಿಚಾರವಾಗಿ ಒಂದು ಸಾದೃಶ್ಯ ನೋಡುವುದಾದರೆ 'ಸರಿಗನ್ನಡಂ ಗೆಲ್ಗೆ' ಪುಸ್ತಕದ ಕೆಲವು ಸಾಲುಗಳು ಹೀಗಿವೆ...
"ಮಹಾಭಾರತದಲ್ಲಿ ಗಾಂಧಾರಿ ದುರ್ಯೋಧನನ ಮೈ ಮುಟ್ಟಿ ವಜ್ರಕಾಯ ಮಾಡಿದ ಕತೆ ಗೊತ್ತಲ್ವಾ? ತಾಯಿ ಮುಟ್ಟದೆ ಉಳಿದ ತೊಡೆಯ ಭಾಗ ಮಾತ್ರ ಹಾಗೇ ಬಲಹೀನವಾಗಿ ಉಳಿಯಿತು. ಕೊನೆಗೆ ಭೀಮ ಆ ತೊಡೆಯ ಭಾಗಕ್ಕೆ ಹೊಡೆದು ದುರ್ಯೋಧನನನ್ನು ಕೊಂದ. ಇದೇ ಥರದ ಕತೆ ಗ್ರೀಕ್ ಪುರಾಣದಲ್ಲೂ ಇದೆ ಎನ್ನುವುದು ಆಶ್ಚರ್ಯ. ಅಖಿಲಿಸ್ ಅಂತೊಬ್ಬ ಮಹಾವೀರ ಇದ್ದ. ಮಗುವಾಗಿದ್ದ ಅವನನ್ನು ಅವನ ಅಮ್ಮ ಪವಿತ್ರ ನೀರಿನಲ್ಲಿ ಅದ್ದಿದಳಂತೆ. ನೀರಲ್ಲಿ ನೆಂದ ಮಗುವಿನ ದೇಹವೆಲ್ಲಾ ವಜ್ರಕಾಯವಾಯಿತು. ಆದರೆ ತಾಯಿ ಹಿಡಿದುಕೊಂಡಿದ್ದ ಮಗುವಿನ ಹಿಮ್ಮಡಿ ಮಾತ್ರ ನೀರಲ್ಲಿ ಮುಳುಗಿರಲಿಲ್ಲ. ಹಾಗಾಗಿ ಅದೇ ಅಖಿಲಿಸನ ದೌರ್ಬಲ್ಯ ಆಯಿತು. ಯಾರೂ ಗೆಲ್ಲಲಾಗದ ಆ ವೀರನನ್ನು ಕಡೆಯಲ್ಲಿ ಯಾರೋ ಹಿಮ್ಮಡಿಗೆ ಬಾಣ ಹೊಡೆದು ಕೊಂದರಂತೆ. ಇವತ್ತು ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ದೌರ್ಬಲ್ಯದ ಬಗ್ಗೆ ಉಲ್ಲೇಖ ಬಂದಾಗ ಅದನ್ನು 'ಅಖಿಲಿಸ್ ಹೀಲ್' ಅಂತಾರೆ. ಆದರೆ ಅಖಿಲಿಸನ ಹಿಮ್ಮಡಿಗೆ ಬಂದ ಈ ಭಾಗ್ಯ, ನಮ್ಮ ದುರ್ಯೋಧನನ ತೊಡೆಗೆ ಬರಲಿಲ್ಲ!.
ಬೇರೆ ದೇಶದಲ್ಲಿ ಯಾರಾದ್ರೂ ಏನಾದ್ರೂ ಸಾಧನೆ ಮಾಡಿದರೆ ಮುಜುಗರ ಸಂಕೋಚ ಇಲ್ಲದೆ ಅದನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳುವರು...ದೇಶ ಅಥವಾ ಧರ್ಮದ ಬಗ್ಗೆ ಅಭಿಮಾನ ಇದ್ದರೂ ಅವರ ಧರ್ಮದ ಬಗ್ಗೆಯೇ ಅವರಿಗೆ ಸಂಕೀರ್ಣವಾದ ಬೇದ, ಬಿನ್ನಾಭಿಪ್ರಾಯಗಳು ಇಲ್ಲ... ನಮ್ಮ ದೇಶದ ಮಣ್ಣಿನಲ್ಲಿ ಹೆಸರುಗಳಲ್ಲಿ ಅವರ ಜಾತಿ ಧರ್ಮ ಗುರುತಿಸಿ ಅವರ ಸಾಧನೆಯನ್ನು ಪರರಿಗೂ ಪರಪಂಚಕ್ಕೆ ಹೇಳಬೇಕೋ,ಪ್ರಚಾರ ಮಾಡಬೇಕೋ ಎಂದು ನಿರ್ಧರಿಸುವರು...ಇದಕ್ಕೆ ಒಂದು ಪ್ರಚಾಲಿತ ಉದಾಹರಣೆ ನೀಡುವುದಾದರೆ ಬಹಳಷ್ಟು ಜನ ಇತರರ quote ಗಳನ್ನು ಕೆಳಗೆ ಇರುವ ಅವರ intials /ಹೆಸರು cut ಮಾಡಿ ಸ್ಟೇಟಸ್ ಇಡುವರು .... ಸಾಮಾನ್ಯರ ಹೇಳಿಕೆಗಳು ಜನರಿಗೆ ಪರಿಚಯ ಇರಲಾರದು ಬಿಡಿ... ಅಸಾಮಾನ್ಯ ಬುದ್ಧ ಬಸವ ಅಂಬೇಡ್ಕರ್ ರಂತಹವರ ಹೆಸರಿದ್ದರೂ ಅದರಿಂದಲೂ ಮುಜುಗರ ಮಾಡಿಕೊಳ್ಳುವರು ಜಾಗತಿಕವಾಗಿ ಹೆಸರು ಹೇಳಬಯಸುವರೇ??? ಅದಾಗದು ಇಲ್ಲಿ... ಆಗಬೇಕಾದ್ರು ಉತ್ತಮ ಜಾತಿ,ರಾಜಕೀಯ ಪಕ್ಷದ ಬೆಂಬಲ , ಹಣ ಕುತಂತ್ರ ಬೇಕು... ಇಲ್ಲ ಸ್ಥಳೀಯ ಮಟ್ಟದಲ್ಲೇ ಹೆಸರು* *ಮಾಡಲು ಸಾಧ್ಯವೇ ಇಲ್ಲ...ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವುದು ಕನಸು ಮಾತ್ರ...ಇಂತಹ ಜಟಿಲ ವ್ಯವಸ್ಥೆಯ ನಡುವೆಯೂ ಸಿ ವಿ ರಾಮನ್ ಅವರ 'ರಾಮನ್ ಎಫೆಕ್ಟ್ 'ಹೊಮಿ ಜಹಾಂಗೀರ್ ಬಾಬಾ ರವರ quantum theory, APJ ಕಲಾಂ ಅವರು ರಾಕೆಟ್ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಮೋಘ ವಾದದ್ದು ಮತ್ತು ಭಾರತೀಯರಿಗೆ ಇದು ಹೆಮ್ಮೆಯ ಕಿರೀಟವಾಗಿವೆ ...
_ಸಂಶೋಧಕ ವಿಜ್ಞಾನಿ ಎನಿಸಿಕೊಳ್ಳುವುದು ಯಾವಾಗ???_
ವ್ಯಕ್ತಿಯ ತಲೆಯಲ್ಲಿ ಸೃಜನಶೀಲ ಆಲೋಚನೆ ಇದ್ದರೆ ಅದು ಅವನ ವಿಚಾರವಷ್ಟೇ ಆಗುವುದು. ಆದರೆ ಅದು ನಿತ್ಯ ಜೀವನದಲ್ಲಿ ಕ್ರಿಯಾತ್ಮಕವಾಗಿ ಕಾರ್ಯರೂಪಕ್ಕೆ ಬರಬೇಕಾದ್ರೇ ಜನಸಾಮಾನ್ಯರ ನಿತ್ಯ ಬಳಸಲ್ಪಡಬೇಕು. ಆ ವಿಶೇಷ ಸೃಜನಶೀಲ ಉತ್ಪನ್ನವೊಂದು ಮಾನವ ಕುಲಕ್ಕೆ ಸದುಪಯೋಗ ಆಗಬೇಕು. ಒಬ್ಬನ ಬೌದ್ಧಿಕ ಸಂಪತ್ತು ಇತರ ಯಾವರೇತಿಯಲ್ಲೂ ಬೇರೆಯವರು ತಮ್ಮ ಬೌದ್ಧಿಕ ಸಂಪತ್ತು ಎಂದು ಹೇಳಬಾರದು. ಅದರಿಂದ ಬರುವ ಪ್ರಖ್ಯಾತಿ ಸಂಶೋಧಕನೊಬ್ಬನಿಗೆ ಆತ್ಮತೃಪ್ತಿ ನೀಡುತ್ತದೆ.ಹಾಗೆಯೇ ಕೋಟ್ಯಾತರ ಮಾನವ ಕುಲಕ್ಕೆ ಸದುಪಯೋಗವಾಗುತ್ತದೆ.ಇಲ್ಲಿ ಸಂಶೋಧನೆ ನೆಡಿಸಿದವರು ವಿಜ್ಞಾನಿ ಎಂದೆನಿಸಿಕೊಳ್ಳುತ್ತಾರೆ. ತಯಾರಾದ ಉತ್ಪನ್ನದ ಹಕ್ಕುಗಳು ಮಾರುಕಟ್ಟೆಯ ಸಂಕೇತ ಇವೆಲ್ಲವೂ 20 ವರ್ಷಗಳ ಕಾಲ ಅವನ ಹಕ್ಕಿನಲ್ಲಿ ಉಳಿಯುತ್ತವೆ.ತದ ನಂತರ ಅದನ್ನು ಸಾರ್ವಜನಿವಾಗಿ ಯಾರು ಎಲ್ಲಿ ಬೇಕಾದರೂ ಬಳಸಬಹುದು. ಸಂಶೋಧಕನಿಗೆ ಯಾವುದೇ ಹಕ್ಕುಗಳು ಇರುವುದಿಲ್ಲ.1970 ರಲ್ಲಿ ವಿಜ್ಞಾನಿಯ ಸಂಶೋಧನೆಯ ಹಕ್ಕುಗಳನ್ನು ಕಾಪಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ PCT (Patent Co-operation Treaty )ರಚನೆ ಆದ ನಂತರ ಸಂಶೋಧಕನ ಬೌದ್ಧಿಕ ಆಸ್ತಿಯನ್ನು ರಕ್ಷಿಸಿ ಹೆಚ್ಚು ಭದ್ರತೆಯನ್ನು ಒದಗಿಸಿದೆ.ಇದರಿಂದ ಒಂದಷ್ಟು ಆರ್ಥಿಕವಾಗಿ ಲಾಭ ಗಳಿಸಲೂ ಕಾನೂನು ಬದ್ಧವಾಗಿ ಅವಕಾಶವನ್ನು ನೀಡಲಾಗಿದೆ.
ಸಾವಿರಾರು ವರ್ಷಗಳಿಂದ ನೂರಾರು ಸಂಶೋಧನೆಗಳು ಮಾನವ ಮಾಡಿರಬಹುದು.. ಒಬ್ಬ ರೈತ ತನ್ನ ಅನುಕೂಲಕ್ಕೆ ಯಂತ್ರವೊಂದನ್ನು ತಯಾರು ಮಾಡಿಕೊಂಡಿದ್ದಾರೆ ಎಂದು ಅಂದುಕೊಳ್ಳೋಣ. ಕೆಲವು ದಿನಗಳ ನಂತರ ಇನ್ನೊಬ್ಬ ಯಾವನೋ ಯುವಕನೊಬ್ಬ ಕಾನೂನು ಬದ್ಧವಾಗಿ ಆ ರೈತ ತಯಾರು ಮಾಡಿದ ಯಂತ್ರವನ್ನೇ ನನ್ನ ಸಂಶೋಧನೆ ಎಂದು ಪ್ರತಿಪಾದಿಸಿ ಹೇಳಬಹುದು.ಆಗ ಆ ಯುವಕನ ಸಂಶೋಧನೆಗೆ ಮಾನ್ಯತೆ ದೊರಕುವುದು.ಈ ಮೊದಲು ಆ ರೈತ ಯಂತ್ರವನ್ನು ನಿಜವಾಗಿಯೂ ತಯಾರು ಮಾಡಿದ್ದರೂ ಅವನು ಹತ್ತಾರು ವರ್ಷಗಳಿಂದಲೂ ಬಳಸುತ್ತಾ ಬಂದಿದ್ದರೂ ಉತ್ಪನ್ನವೊಂದು ಅಮಾನ್ಯವಾಗುತ್ತದೆ. ಅದು ಇಂದು ಬೇರೊಬ್ಬರ ಹೊಸ ಸಂಶೋಧನೆ ಎಂದರೇ ಅಚ್ಚರಿ ಪಡಬೇಕಾಗಿಲ್ಲ.ಒಂದು ವೇಳೆ ಅವರು PCT ಯಿಂದ ಅಂಗೀಕಾರ ಪಡೆದಿದ್ದರೆ ಅವರು ನ್ಯಾಯಕ್ಕಾಗಿ ಹೊರಾಡಬಹುದು. ಇಲ್ಲವೆಂದರೇ ತುಟಿಕ್ ಪಿಟಿಕ್ ಎನ್ನದೇ ಸುಮ್ಮನಿರಬೇಕು.ಇಲ್ಲವೆಂದರೆ PCT ಯಿಂದ ಅನುಮತಿ ಪಡೆದ ಅಧಿಕೃತ ವ್ಯಕ್ತಿಯೇ ಈ ಹಳೆಯ ಉತ್ಪಾದಕನ ವಿರುದ್ಧವಾಗಿ ಕಾನೂನು ಹೋರಾಟ ಮಾಡಬಹುದು .ಈಗ ಸದ್ಯ ಪ್ರಪಂಚದಾದ್ಯಂತ ನಡೆಯುತ್ತಿರುವುದೇ ಇದು.ನಿಜವಾದ ಸೃಜನಶೀಲತೆ ಒಂದು ಕಡೆಯಾದರೆ ಯಾರದೋ ಬೌದ್ಧಿಕ ಆಸ್ತಿಯನ್ನು ಇನ್ಯಾರೋ ಕದ್ದು ಅವರು PCT ಯಿಂದ ಅನುಮೊದಿಸಿಕೊಳ್ತಾರೆ.* *ನಿಮಗೆ ಅಚ್ಚರಿಯಾಗಬಹುದು.ಉಪ್ಪು,ಮೀನು,ಇದ್ದಿಲು, ರಾಗಿಯ ಮುದ್ದೆ,ಗಂಜಿ ಮತ್ತು ರಾಗಿಯ ಉತ್ಪನ್ನಗಳಿಗೆ ಪೆಟೆಂಟ್ ಪಡೆದಿದ್ದಾರೆ.! ಅನಾದಿಯಿಂದಲೂ ನೈಸರ್ಗಿಕ ವಾಗಿ ದೊರಕುವ ಸಾಗರ ಉತ್ಪನ್ನಗಳು ಗಳು,ಸಮಾರು 2000 ವರ್ಷಗಳಷ್ಟು ಹಳೆಯದಾದ ನಮ್ಮ ಭಾರತದ ಹರಪ್ಪನಾಗರಿಕತೆಯ ಕಾಲದಿಂದಲೂ ಬಳಕೆಯಲ್ಲಿರುವ ರಾಗಿಯನ್ನು ಕಂಡು ಹಿಡಿದ ಮೂಲ ಪುರುಷರೇ ಇಲ್ಲ.ಆದರೆ ಇಂತದೊಂದು ಧಾನ್ಯವನ್ನು ನೂರಾರು ತಲೆಮಾರು ಬಳಸಿದ ಮೇಲೂ ಈಗ ಈಕಾಳಿನ ಮೇಲೆ ಹಕ್ಕು ಸ್ವಾಮ್ಯ ಹೊಂದಿದೆ.ಈ ತೆರನಾಗಿದೆ ಸಂಶೋಧನಾ ಪ್ರಪಂಚ.
ಸನ್ನಿವೇಶ ಎರಡರಲ್ಲಿ ಹೇಳುವಂತೆ ಒಂದು ಗ್ರಾಮೀಣ ಮಹಿಳೆ "ಅಯ್ಯಾ ನೀಲಕುರಂಜಿ ಹೂವುಗಳು ಬದುವಿನ ಮೇಲೆಲ್ಲಾ ಬೆಳೆದಿರುತ್ತವೆ..ಅವೆಲ್ಲವೂ ಕಿತ್ತು ಕಿತ್ತು ಹಾಕ್ತಿವಿ " ಅಂತಾ ಹೇಳಿದಳಲ್ಲಾ?? ಅದು ಆ ಮಹಿಳೆಗೆ ವಿಶೇಷವಾಗಿ ಕಾಣಲಿಲ್ಲ..ಯಾಕಂದ್ರೆ ಹತ್ತಾರು ವರ್ಷಗಳಿಂದ ಅವಳು ಅವಳ ಹೊಲಗದ್ದೆಗಳಲ್ಲಿ ನೋಡುತ್ತಿದ್ದಳು.ಯಾರೋ ಒಬ್ಬನ ಪ್ರಚಾರ ಆ ಮಟ್ಟಕ್ಕೆ ಅದನ್ನು ತಲುಪಿಸಿದೆ. ಇಷ್ಟು ದಿನ ಇದ್ದದ್ದು ಅದನ್ನು ದಿನವೂ ನೋಡಿದ್ದಕ್ಕಿಂತ ಅಚ್ಚರಿ ಅನಿಸುವುದು. ಅದರ ವ್ಯಾಪಕ ಪ್ರಚಾರ ಕಂಡಾಗ ಇತರ ಜನಗಳಿಗೆ ಪರಿಚಿತವೂ ಆಗುವುದು.
ಇತ್ತೀಚಿಗೆ ಕೆಲವು ದಶಕಗಳಿಂದ ಸಾಕ್ಷರತೆಯ ಪ್ರಮಾಣ ಹೆಚ್ಚಾದಂತೆ ನಿರುದ್ಯೋಗದ ಪ್ರಮಾಣವು ಅಷ್ಟೇ ಹೆಚ್ಚಾಗಿದೆ ಎಂಬುದು ಳಿಯಲೇಬೇಕಾದ ಸತ್ಯ...* *ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಲೋ ಅಥವಾ ಸಾಕ್ಷರತೆಯನ್ನ ಹೆಚ್ಚು ಮಾಡಲೋ ಅಥವಾ ಶಿಕ್ಷಣ ವ್ಯವಸ್ಥೆಯ ದೋಷವೊ ತಿಳಿಯದು.ಮಹಾನ್ ಸಂಶೋಧನೆ ಮಾಡಲು ಏನೋ ಕೊರತೆಯೋ or ಮಹಾನ್ ಆವಿಷ್ಕಾರ ಮಾಡುವವು ಎಲ್ಲವೂ ಮಾಡಿ ಆಗಿದೆ... ಇನ್ನೂ ಯಾವೂ ಉಳಿದಿಲ್ಲವೇನೋ ಎಂಬಂತೆ ಸಣ್ಣ ಪುಟ್ಟ ಸಂಶೋಧನೆಗಳನ್ನೇ ಮಾಡುತ್ತಾ ಬರುತಿದ್ದಾರೆ.ಇಂದಿನ ಬದುಕಿನ ಪರಿಸ್ಥಿತಿಯೇ ಹಾಗಾಗಿದೆ. ಬದುಕಿನ ಪ್ರವಾಹದ ಎದುರು ಈಜಲಾಗದೇ,ಭ್ರಷ್ಟಾಚಾರ, ಜಾತೀಯತೆಯ ಪರೋಕ್ಷ ಪ್ರಭಾವಗಳ ಎದುರು ನಿಲ್ಲಲಾಗದೆ, ಇನ್ನಿತರ ರಾಜಕೀಯ ಧಾರ್ಮಿಕ ಕಾರಣಗಳ ಪ್ರಭಾವದಿಂದ ಬಹುತೇಕರು ಆತ್ಮ ವಿಶ್ವಾಸ ಕಳೆದು ಕೊಂಡಿದ್ದಾರೆ.ಅದಕ್ಕೇ ಉದ್ಯೋಗಕ್ಕಾಗಿ ವಿದ್ಯಾಭ್ಯಾಸ. ಉದ್ಯೋಗ ಹಿಡಿದು ಜೀವನ ಕಟ್ಟಿಕೊಳ್ಳುವುದೇ ನಮ್ಮವರ ಪ್ರಧಾನ ಗುರಿಗಳು.. ಒಂದೊಮ್ಮೆ ಕೆಲಸವೊಂದು ಹಿಡಿದುಬಿಟ್ಟರೆ ಸಂಸಾರ ಸಾಗರದಲ್ಲಿ ಮುಳುಗಿ ಹೋದ ಪರಿಣಾಮ ಯಾವ ಮೇರು ಸಂಶೋಧನೆಗಳು ಮಾಡಲಿಲ್ಲವೇನೋ ಎನಿಸುವುದು.
ಸಂಶೋಧನೆಗಳು ಮಾನವನ ಪ್ರಗತಿಯ ದಿಕ್ಕನ್ನು ನಿರ್ಧರಿಸುವುದರಿಂದ ಇದಕ್ಕಾಗಿ ಯುವಜನಕ್ಕಾಗಿ ಒಂದು ವ್ಯವಸ್ಥಿತ ಸಂಶೋಧನ ಸೆಕ್ಟರ್ ಮಾಡಿಕೊಂಡು ಉತ್ತಮ ಮಾರ್ಗದರ್ಶನದಲ್ಲಿ ಮುಂದುವರೆಯಬೇಕಿದೆ.ವಾಣಿಜ್ಯ ಉದ್ದೇಶಕ್ಕೆ ಅಥವಾ ಕಾರ್ಪೋರೇಟಿವ್ ಉದ್ದೇಶಕ್ಕೆ ಕೇವಲ ಹಣ ಮಾಡುವ ಸಲುವಾಗಿಯೇ ಸಂಶೋಧನೆಗಳು ಆಗದೇ ಮಾನವನ ಒಳಿತಿಗಾಗಲಿ. ಪ್ರಕೃತಿಗೆ ಇತರ ಜೀವ ಕುಲಕ್ಕೆ ತೊಂದರೆಯಾಗದ ಅನಂತ ಆವಿಷ್ಕಾರಗಳು ಸಾಕರಗೊಳ್ಳಲಿ.ಅಂತಹ ಬೌದ್ಧಿಕ ಮಾನವ ಸಂಪನ್ಮೂಲವನ್ನು ಕಾದುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೂ ಇದೆ .
✍️ _ನಾಗೇಂದ್ರ ಬಂಜಗೆರೆ._
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ