ರಾಗಿಯನ್ನು ಅಕ್ಕಿ ಮಧ್ಯಲ್ಲಿ ಹಾಕುವುದಿಲ್ಲ ಯಾಕೆ???

*ಹಿಟ್ಟಿನ ಗಿರಣಿಯಲ್ಲಿ ರಾಗಿಯನ್ನು ಮಧ್ಯ ಹಾಕುವುದಿಲ್ಲ ಯಾಕೆ??*

*ಮೊನ್ನೆ ನಾನು ರಾಗಿ ತೆಗೆದುಕೊಂಡು ನಮ್ಮ ಮನೆಯ ಸಮೀಪ ಇರುವ ಪ್ಲೋರ್ ಮಿಲ್ ಗೆ ಹೋಗಿದ್ದೆ..ಆ ಫ್ಲೋರ್ ಮಿಲ್ ನ ಹುಡ್ಗ ನನ್ನ ಡಬ್ಬ ನೋಡಿದ ಕೂಡಲೇ ರಾಗಿ  ಅಲ್ಲವಾ  ಸಾರ್...??ಲೇಟ್ ಆಗತ್ತೆ ಏಳು ಮುಕ್ಕಾಲು-ಎಂಟು ಗಂಟೆಯಂಗೆ ಬನ್ನಿ ಎಂದೇಳಿದ.. ಸರಿ ಎಂದು ಬಾಕ್ಸ್ ಇಟ್ಟು ಮನೆಗೆ ಬಂದು ಸರಿಯಾಗಿ ಏಳು ಮುಕ್ಕಾಲಿಗೆ ಹೋದೆ.. ಆ ಪ್ಲೋರ್ ಮಿಲ್ ಹುಡುಗ  ನನ್ನ ಡಬ್ಬದ ಕಡೆ ನೋಡದೆ ಇನ್ನೂ ಅಕ್ಕಿ ಗೋಧಿಗಳನ್ನೇ ರುಬ್ಬುತ್ತಿದ್ದ..*

*ಏನಪ್ಪ ಹಾಕಿಲ್ಲವಲ್ಲ ಇನ್ನು ...??*

*ಆಯ್ತು ಸಾ..ಇನ್ನೇರಡು ಇದ್ದಾವೆ..*

*ಒಂದೈದು ನಿಮಿಷ ಅಂದ...*

*ಕೈಗೆ ಮೊಬೈಲ್ ತೆಗೆದು ಬೈಕಿಗೆ ಆನಿಕೊಂಡು  ಒಂಟಿ ಕಾಲಲ್ಲಿ ಹಾಗೆ ನಿಂತೆ..*

*ಒಬ್ಬ ನಲವತ್ತು- ನಲವತ್ತೆರಡು ವಯಸ್ಸಿನ ಪುರುಷನೊಬ್ಬ  ಮೂರುದಿನದಿಂದ ಮನೆಯಾಕೆ ಹಿಟ್ಟು ಮಾಡಸ್ಕೊಂಡ್ ಬಾ ಅಂತ ಹೇಳಿ ಇವ ಹ್ಞು...ಹ್ಞು... ಅಂತ ಅನ್ಕೊಂಡ್  ಹಿಟ್ಟು ಮಾಡಿಸದೇ ಪೈನಲ್  ಆಗಿ  ನೀ ಏನ್ ಹಾಕಿಸ್ಕೊಂಡ್ ಬರುವೆಯಾ ಇಲ್ಲಾ ಉಪವಾಸ ಹಾಕ್ಲ ??ಎಂದು  ಮನೆಯಾಕೆ ಜೋರು ಮಾಡಿದ ಮೇಲೆ ಅವಸರವಸರವಾಗಿ ಬಕೇಟ್ ಹಿಡಿದು ಬಂದಂತಿತ್ತು. ಬಂದವನೇ ಬಕೇಟ್ ಕೆಳಗಿಟ್ಟು ಹಿಟ್ಟು ಮಾಡಿಸದೇ ಇರುವ ಎಲ್ಲಾ ಡಬ್ಬಗಳ  ಮುಚ್ಚಳಗನ್ನು  ತೆಗೆದು ಅದೇನು ಇದೇನು ಎಂದು ದಡ ದಡ ಚೆಕ್ ಮಾಡುತ್ತಾ ಇದ್ದ..*

*"ಜ್ವಾಳ ಗೋಧಿ ಯಾವಿಲ್ಲಲ್ಲೋ ತಮ್ಮ??   ಬರೀ ರಾಗಿವೇ items ಇದಾವೆ...."*

*"ಯಾ ಇಲ್ಲ..ಈ ಸಾರ್ ದು ಆದ ಮೇಲೆ ನಿಮ್ಮದು.." ನೀವ್ ಈಗ ಬಂದೀರಿ..*

*ಹೌದಾ??*

*ರಾಗಿ ಹಾಕ್ಬಿಡುತ್ತೀಯಾ??*

*ಹ್ಞು..*

 *"ಹೇ.... ನೋಡೋ ಹಂಗ ಮಾಡ್ಬೇಡ...ಮನ್ಯಾಗ ಹೆಣ್ಮಕ್ಕಳ ಕೈಯಾಗ ಬಯ್ಯಿಸಬೇಡೋ ತಮ್ಮಾssss.."*
*ಹಂಗ ಮಾಡಬೇಡೊ.. ಹಂಗ ಮಾಡಬೇಡ ಅಂತ ಹೇಳುತ್ತಲೇ ಇದ್ದ..*

*ಅಷ್ಟೊತ್ತಿಗೆ ಇನ್ನೊಂದು ಹೆಣ್ಮಗಳು ಖಾಲಿ ಕೈಯ್ಯಲಿ ಬಂದು ಅಕ್ಕಿ ತತ್ತೀನಿ ಹಿಟ್ಟು ಹಾಕ್ಕೊಡುತ್ತೀಯಾ?*
*ಸರ್ರನ ಬತ್ತೀನಿ.. ಬರೀ ರಾಗಿ ಇದ್ದಂಗಿದ್ದಾವೆ ಸ್ವಲ್ಪ ಅಕ್ಕಿನೂ ತತ್ತೀನಿ ಬಿಡು.. ಮತ್ತೆ ಬಾಗಲು ಹಾಕ್ಕೊಂಡು ಹೋಗಿಯಪ್ಪ...Ss.ಬತ್ತೀನಿ  ಎಂದು ಹಿಂದುರುಗಿ ಹೋದಳು..*

*ಆ ಲೇಟ್ ಆಗಿ ಬಂದ ಅಸಾಮಿ ನನ್ನ ನೋಡಿ "ಸಾರ್ ನಿಮ್ಮ ನಾಯಿ ಈಗ ಬಾರಿ ಆಗ್ಯೇತೆ ಸಾರ್.. ಬಾರಿ ಆ್ಯಕ್ಟಿವ್ ಆಗಿ ಹಂಗೆ ನೆಗಿತಾತ್ರಿ ಅಂದ."*

*ಆತನ  ಮನೆ-ಮನಸ್ಥಿತಿ ಅರ್ಥ ಅಯಿತು. ಅವರಿಂದ ಮತ್ಯಾಕೆ ಕೇಳಿಸಿಕೊಳ್ಳೊದು   ನಾಲ್ಕೈದು ಕೆಜಿಯಷ್ಟು ಅಕ್ಕಿ.. ಹಾಕಿ ಹಾಕಿ ಹಾಕ್ಕೊಳಿ ಅಂದೆ..*

*ಥ್ಯಾಂಕ್ಸ್ ರೀ ಸರ್ರ... ಎಂದು ಅಕ್ಕಿ  ಡಬ್ಬಿಯಲ್ಲಿ ಸುರುವಿ ಹಿಟ್ಟು ತುಂಬಲು ಬಕೆಟ್ ಕೆಳಗಿಟ್ಟು  ಅಕ್ಕಿ ಹಿಟ್ಟಾಗಿ ಬರುತ್ತಿದ್ದದ್ದನ್ನು ಕೈಯಲ್ಲಿ ಕಿವುಚಿ ಇಷ್ಟೇ ನುಣ್ಣಗ? ಇನ್ನೂ ನುಣ್ಣಗೆ ಬರಲಿ ನೋಡೋ ಒಮ್ಮೆ  ಹೆಣ್ಮಕ್ಕಳ ಕೈಯ್ಯಾಗ ಬಯ್ಯಸಬೇಡೊ...ಎಂದು ಹೇಳುತ್ತಲಿದ್ದ..*

*ಆ ಹುಡುಗ ಸಾರ್ ಪುಲ್ ಇಟ್ಟಿನಿ.. ನೋಡ್ರಿ ಎಂದು ಆ ಲಿವರ್ ನ್ನು ತಳ್ಳಿದ.*

 *ಅಲ್ಲಿರುವರೆಗೆ ಸುಮ್ಮನಿದ್ದ ನಾನು  "ಅಕ್ಕಾರು ಕೈಯಾಗ ಬಯ್ತಾರ್ರೀ???"*

*ಸರ್ರ ಅದು ಬಾಯಾಗ್ರಿ ಬಯ್ಯೋದು.. ಆದ್ರ ಹೇಳಕ್ ಕತ್ತಿದಾಗ ಮಾತಿನ ಧಾಟಿ ಹಾಗೇರಿ ಬರೋದು...*

*ನಮ್ ಕಡೆ ಬಾಯಾಗ ಬಯ್ತಾರೆ... ನೀವ್ ಕೈಯ್ಯಾಗ ಬಯ್ತಾರೆ  ಅಂದ್ರಲ್ಲ ಅರ್ಥ ಆಗಲಿಲ್ಲ ಅದಕ್ಕೆ ಕೇಳಿದೆ  ಅಂದೆ..*

*ಆ ಅಸ್ಸಾಮಿ ಮುಂದುವರೆದು  ಸರ್ರ  ಆ ನಿಮ್ ನಾಯಿ ಲ್ಯಾಬ್ರೆಡರ್ ರ್ರೀ ??*

*ಅಲ್ಲ ರಿಟ್ರೈವರ್ ಅಂತ.*

*ಲ್ಯಾಬ್ರೇಡರ್ ಇದ್ದಂಗ ಐತೆಲ್ಲರೀ..??*

*ಇಲ್ಲ ಸಾರ್ ಇದು ಗೊಲ್ಡನ್ ರಿಟ್ರೈವರ್ ಅಂತ ..*

*ಊಟ ಏನೇನ್ ಹಾಕ್ತೀರಿ??*

*ನಾವ್ ಏನೇನ್ ತಿಂತೀವೋ ಅದೆಲ್ಲಾ ಅದೂ ತಿಂತಾದೆ..*

*ಅಷ್ಟು ಹೊತ್ತಿಗೆ ಅಕ್ಕಿ ಖಾಲಿಯಾಗುತ್ತಾ ಬಂದಿದ್ದು ಆ ಪ್ಲೋರ್ ಮಿಲ್  ಬಾಲಕ ಆ ಗ್ರೈನ್ Holder ನ್ನು ಟಕ ಟಕ ಕುಟ್ಟಿ ಶಬ್ದ ಮಾಡಿದನು.. ಅಕ್ಕಿ ತಗೊಂಡ್ ಬತ್ತೀನಿ ಅಂತ ಹೇಳಿ ಹೋದವಳು ಬಂದಾಳೇನೋ ಎಂದು ಆ ಹುಡ್ಗ ಎದುರು ನೋಡುತ್ತಿದ್ದ.. ಮೋಟರ್ ಆನ್ ನಲ್ಲಿಯೇ ಇಟ್ಟು ಅತ್ತಕಡೆ ಹೋಗಿ ಬಗ್ಗಿನೋಡಿಯೂ ಬಂದ...*

*ಆಯಮ್ಮ ಸಾರ್ರಾನೇ ಬತ್ತೀನಿ ಅಂದಳು ಸಾ... ಬರಲಿಲ್ಲ...*

*ನೆಕ್ಸ್ಟ್ ನಾನೇ ರಾಗಿ ಹಾಕಬೇಕು.. ಆ ಹುಡುಗ ಮಷಿನ್ ಆಪ್ ಮಾಡಿ ಹೊರಗೆ ಬಂದು ಆಯಮ್ಮನನ್ನು ಎದುರುನೋಡುತ್ತಿದ್ದ..*

*"ಏ ತಮ್ಮ ನನ್ ರಾಗಿ ಹಾಕಪ್ಪ.. ನಾನು ಏಳು ಗಂಟೆಯಲ್ಲಿ ಇಟ್ಟು ಹೋದಾನು ಇನ್ನೂ ಹಿಟ್ಟಾಗಿಲ್ಲ.. ಅಯಮ್ಮ extra ಅಕ್ಕಿ ತತ್ತಾಳಂತೆ ಹಾಕಿಸಿಕೊಂಡು ಹೋಗತ್ತಾಳೆ . ಹಾಕು ಹಾಕು ಅಂತ ಮಾತಾಡಿದ್ದಕ್ಕೆ ಪುನಃ ಮೋಟರ್ ಆನ್ ಮಾಡಿ ಹಾಕಿದ...*

*ಆ ಹೆಣ್ಮಗಳು ಒಂದು ಬಾಕ್ಸಲ್ಲಿ ಅಕ್ಕಿ ಮತ್ತೊಂದು ಕವರ್ ನಲ್ಲಿ ಮುನ್ನೂರು ನಾನ್ನೂರು ಗ್ರಾಮ್ ನಷ್ಟು ಅಕ್ಕಿ extra..ಹಿಡಿದು ತಂದಳು!!*

*ಆಗಲೇ ಹಾಕಿಬಿಟ್ಟಿಯಲ್ಲೋ ಅಕ್ಕಿ ತತ್ತೀನಿ ಅಂತ ಹೇಳಿ ಹೋದ್ರೂ..??*
*ಕಾದೇ ಅಕ್ಕೋ ನೀವ್ ಬರ್ಲಿಲ್ಲ ಈ ಸಾರ್ ಏಳು ಗಂಟೆಗೆ ಇಟ್ಟೋದೋರು ಎಷ್ಟೋತ್ತು ಅಂತ ಕಾಯಲಿ...??? ಹಾಕಿಬಿಟ್ಟೆ...*

*ನನ್ನ ರಾಗಿ ಆದ ಬಳಿಕ ಆ extra ಅಕ್ಕಿಯನ್ನು ಆ ಡಬ್ಬಿಯೊಳಗೆ ಸುರುವಿದಳು.*

*ಆ ಹುಡುಗ ಬೇರೊಂದು ಡಬ್ಬದಲ್ಲಿ ಹಿಟ್ಟು ಹಿಡಿಯಲು ಹೋದಾಗ  "ಆ ಹಿಟ್ಟು ಬೇಡ ಕೆಳಗೆ ಬಿಟ್ ಬಿಡು ಅಂದ್ಲು..!"..*

*ನನ್ನ ರಾಗಿಯ ಬೀಸಿದ್ದಕ್ಕೆ ದುಡ್ಡನ್ನು ಕೊಡುತ್ತಾ ರಾಗಿ ಹಿಟ್ಟು  ಅಕ್ಕಿ ಹಿಟ್ಟಿಗೆ ಸೇರಿದರೆ ಏನಾಗತ್ತಮ್ಮ???*

*ದೋಸೆ ಸರೀಗೆ ಕಾಣದಿಲ್ಲಣಾ...*

*ರಾಗಿ ಅಕ್ಕಿ ಎರಡೂ ತಿಂದಂಗೆ ಆಗತ್ತಾತೆ ತಿಂದ್ರಾಯಿತಮ್ಮ..*

*"ಕರ್ರ ಕರ್ರಗೆ ಸರಿ ಅನ್ಸಂಗಿಲ್ಲಣಾ ಅದು" ಅಂದ್ಲು..*

*ಈ ಮೊದಲು ಬಂದ ಅಸ್ಸಾಮಿ ಹೆಣ್ಮಕ್ಕಳ ಕೈಯ್ಯಾಗ ಬಯ್ಯಿಸಬೇಡೋ ತಮ್ಮ ಎಂದು ಹೇಳುತ್ತಿದ್ದ ತೀವ್ರತೆಯ ಪ್ರಮಾಣ ಅರ್ಥ ಅಯಿತು..*

*ಹೌದು ಯಾಕೆ ಬಹುತೇಕ ರಾಗಿ ಹಾಕಿದ ಮೇಲೆ ಅಕ್ಕಿ ಹಿಟ್ಟನ್ನು ಹಾಕಲ್ಲ?? ನನ್ನ ಪ್ರಕಾರ ಅಕ್ಕಿ ಗೋಧಿಗಿಂತ ರಾಗಿ ಪುಷ್ಟಿಕರ.. ಬಣ್ಣ ಮಾತ್ರ ಕಪ್ಪು/ಕೆಂಪು. ಈ ಬಣ್ಣ ಅಕ್ಕಿಯ /ಗೋಧಿಯ ಹಿಟ್ಟಿನಲ್ಲೊ ಮಿಶ್ರಣವಾದಾಗ ಕಾಣುವ ಅಂದ ಕೆಟ್ಟಿರುತ್ತದೆ ಅಷ್ಟೇ. ಆದರೆ ಅದು ನಮ್ಮ ಹೆಣ್ಮಕ್ಕಳಿಗೆ ಅದು ಕಿರಿಕಿರಿಯ ಸಂಕೇತ..ಮಿಶ್ರಣ ವಾಗಿದ್ದಕ್ಕೆ ಹಿಟ್ಟು ಹಾಕಿಸಿಕೊಂಡು ಬಂದಂತಹ ಪುರುಷರನ್ನು ಹಿಟ್ಟು ಖಾಲಿ ಆಗುವ ವರೆಗೂ ಅಟ್ಟಾಡಿಸಿ ಕೈಯಲ್ಲೂ ಬಾಯಲ್ಲೂ ಹಿಯ್ಯಾಳಿಸುವುದು.ಇದು ಲೋಕ ಜನಜನಿತವಾಗಿರುವುದರಿಂದ ಆ ಮಿಲ್ ಓಡಿಸುವವನೂ ಈ ಜಾಡ್ಯಕ್ಕೆ ಅಂಟಿ ಹೋಗಿದ್ದಾನೆ.*

 *ರಾಗಿ ತಿಂದವ ನಿರೋಗಿ,ಯೋಗಿ ಬೋಗಿ ಅದೇನೆ ಆದರೂ ಇದೊಂದು  ದಲಿತ ಧಾನ್ಯ..ಈ ಸಮಾಜಕಂಟಿದ ಈ ಸ್ಪೃಶ್ಯ,ಅಸ್ಪೃಶ್ಯತೆಗೆ ಇರುವಷ್ಟೇ ವ್ಯತ್ಯಾಸ ಈ ರಾಗಿಗೆ ಇದೆ.ಈ ಅಕ್ಕಿ ಗೋಧಿಗಳು ಅಗತ್ಯ ಬಿದ್ದಾಗ ನಾವೆಲ್ಲಾ ಒಂದೇ ಎಂದು ಬೆರೆತುಹೋದಂತೆ ರಾಗಿಯನ್ನು ತಮ್ಮ ಜೊತೆಗೆ ಇದ್ದರೂ ಬೆರೆಸಿಕೊಳ್ಳದೆ, ಹೊಗಳಿ ಹೊಗಳಿ ತಲಾತಲಾಂತರದಿಂದ ಅಂತರ ಕಾಯ್ದುಕೊಂಡು  ನಮ್ಮ ಸಮಾಜ ಬಂದಿದೆ.ಅವನು ನಮ್ಮವನೆ ಎಂದರೂ ಅವನು ಬೇರೆಯಾಗಿಯೇ ಕಾಣುವ ನೋಟದಲ್ಲಿ ಇದನ್ನು ಕಾಣುತಿದ್ದಾನೆ.ಪ್ರಸ್ತುತ ರಾಜಕೀಯ ಮತ್ತು ಭಾರತೀಯ ಜಾತಿ ವ್ಯವಸ್ಥೆಯಲ್ಲಿ ಸಾರ ಸತ್ವ ಅಡಗಿದ್ದರೂ ಅವಶ್ಯಕತೆ ಇದ್ದಾಗ ಬಳಸಿಕೊಂಡರೂ, ಅವನು(ದಲಿತ) ಬೇರೆಯೇ ಎಂದು ನೋಡುವಂತೆ ರಾಗಿಯಪಾಡು...*

*ಈ ಸಮಾಜಕ್ಕಂಟಿದ ಜಾತಿಯ ನಂಟು, ರಾಗಿಗೆ ಅಂಟಿದ ಜಾಡ್ಯ ಯಾವಾಗ ಬಿಡುವುದೋ???*

✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..